ಇಪ್ಪತ್ತು ವರುಷದ ಬಳಿಕ ಬಾಲ್ಯ ಸ್ನೇಹಿತನ ದರ್ಶನವಾಯಿತು. ಮನೆಗೆ ಬರುವಂತೆ ಒತ್ತಾಯ. ನಾಲ್ಕೈದು ಕಂತುಗಳಲ್ಲಿ ತಪ್ಪಿಸಿಕೊಂಡೆ. ಕಂತು ಮುಗಿಯಬೇಕಲ್ವಾ! ಮೊದಲೇ ತಿಳಿಸಿ ಹೋದೆ. ಇಪ್ಪತ್ತು ವರುಷದ ಮಾತುಕತೆಯ ಮಹಾಸ್ಪೋಟ! ಪಾಪ, ಆತನ ಮನೆಮಂದಿಗೆ ನಾನು ಅಪರಿಚಿತ! ಅವರ ಸ್ಥಿತಿ ಹೇಗಾಗಬೇಡ. ಸಾವರಿಸಲು ಕೆಲವು ತಾಸು ಬೇಕಾಯಿತು.
ಇರಲಿ. ಮನೆಗೆ ಕಾಲಿಟ್ಟ ತಕ್ಷಣ ಕಾಫಿ, ತಿಂಡಿ ಸಮಾರಾಧನೆ. ಉಭಯಕುಶಲೋಪರಿ. ಮಧ್ಯೆ ಮಧ್ಯೆ 'ಪಾನಿಯ', ಕುರುಕುರು ತಿಂಡಿ, ಹಣ್ಣುಗಳು. ಮಧ್ಯಾಹ್ನ 'ಭಯಂಕರ' ಭೋಜನ! ಎರಡು ಬಗೆ ಪಾಯಸ, ಜತೆಗೆ ಇನ್ನಷ್ಟು ಸಿಹಿ. ಉಂಡು ಎದ್ದಾಗ ನನ್ನೊಳಗೆ 'ಬಕಾಸುರ' ಮಿಂಚಿ ಮರೆಯಾದ!
ಕೈತೊಳೆದು ಬರುತ್ತಿದ್ದಂತೆ ಟ್ರೇಯಲ್ಲಿ ರಸಬಾಳೆಹಣ್ಣಿನ ನಾಲ್ಕೈದು ಪಾಡ. 'ಇದು ನಮ್ಮ ತೋಟದ್ದೇ. ತಿನ್ನು ಮಾರಾಯ' ಎನ್ನುತ್ತಾ ತಿನ್ನಲು ಶುರುಮಾಡಿದ. ಒತ್ತಾಯವೋ ಒತ್ತಾಯ. ಅಂತೂ ಹೊಟ್ಟೆ ಸೇರಿತು. ಸಂಜೆ ಕಾಫಿ-ಎಣ್ಣೆತಿಂಡಿ. ಹೊರಡುವಾಗ ತಂಪುಪೆಟ್ಟಿಗೆಯಿಂದ ಇನ್ನೇನೋ? ಸುಧಾರಿಸಲು ಎರಡು ದಿವಸ ಬೇಕಾಯಿತು! ಒತ್ತಾಯಿಸಿ ತಿನ್ನಿಸುವ ನನ್ನ ಪಾಲಿಗೆ ಇದು 'ರಾಕ್ಷಸಾತಿಥ್ಯ'.
ಒಮ್ಮೆ ಹೋಟೇಲಿನಲ್ಲಿ ಹೀಗಾಯಿತು. ಪರಿಚಿತರ ದಾಕ್ಷಿಣ್ಯಕ್ಕೆ ಗಂಟುಬಿದ್ದಿದ್ದೆ. ಮಸಾಲೆದೋಸೆ, ರೊಟ್ಟಿ, ಗೋಬೀಮಂಚೂರಿ, ಮೊಸರನ್ನ, ಡ್ರೈರ್ರೈಸ್, ಜ್ಯೂಸ್, ಗಡ್ಬಡ್. ಭರ್ಜರಿ! ಬಿಲ್ಲು ಸಾವಿರ!
ಅಲ್ಲ, ನಮ್ಮ ಹೊಟ್ಟೆಯೊಳಗೆ ಇಷ್ಟು ಜಾಗ ಇದೆಯಾ? ಇದೇನು ಹೊಟ್ಟೆಯೋ, ಅಲ್ಲ ಮುನಿಸಿಪಾಲಿಟಿ ಡಬ್ಬಿಯೋ?ಮೂಲಿಕಾತಜ್ಞ ವೆಂಕಟ್ರಾಮ ದೈತೋಟರು ಆಗಾಗ್ಗೆ ಎಚ್ಚರಿಸುತ್ತಾರೆ - 'ನಮ್ಮಹೊಟ್ಟೆ ತ್ಯಾಜ್ಯ ತುಂಬುವ ಚೀಲವಲ್ಲ.' ಹೆಚ್ಚಿನೆಡೆ ವಿಪರೀತ ಆತಿಥ್ಯದಿಂದ ಹೊಟ್ಟೆ ತ್ಯಾಜ್ಯ ತುಂಬುವ ಚೀಲವಾಗುತ್ತದೆ! ಆಹಾರದ ನಿಯಂತ್ರಣ ನಮ್ಮ ಕೈಲಿದ್ದರೆ ಓಕೆ. ನಾಲಗೆಯ ಹಿಡಿತದಲ್ಲಿದ್ದರೆ?
ನಮ್ಮೂರಿನ ಪ್ರತಿಷ್ಠಿತ ಮನೆಯಲ್ಲಿ ಅನಂತ ಚತುರ್ದಶಿ, ನವರಾತ್ರಿ ಪ್ರತೀವರುಷ ಆಚರಿಸಲ್ಪಡುತ್ತಿತ್ತು. ನಳನನ್ನು ನಾಚಿಸುವ ಸೂಪಜ್ಞರ ಅದ್ಭುತ ಕೈರುಚಿ! ಅವರಲ್ಲಿ ಒಬ್ಬರು 'ನಾಲ್ಕು ಕಾವಂಗ ಪಾಯಸ ಕುಡಿದ, ಮೂವತ್ತು ಹೋಳಿಗೆ, ಅರುವತ್ತು ಮೈಸೂರು ಬಾಳೆಹಣ್ಣು ತಿಂದ ಸಾಧಕ'! ನೋಡಲು ಸಣಕಲು ದೇಹ. ಇದು ಉತ್ಪ್ರೇಕ್ಷೆಯಲ್ಲ.
ಕುಳಿತು ಏಳುವುದರೊಳಗೆ ನಲವತ್ತು ಇಡ್ಲಿ ತಿಂದವರನ್ನು ತೀರಾ ಹತ್ತಿರದಿಂದ ಬಲ್ಲೆ. ಸಮಾರಂಭವೊಂದರಲ್ಲಿ ಈ ಪರಂಪರೆಗೆ ಸೇರಿದ ಒಬ್ಬರು ಭೋಜನಕ್ಕೆ ಕುಳಿತಿದ್ದರು. ಪಾಯಸದ ಸರತಿ ಬಂತು. 'ಮಾನವ ಸಹಜ'ವಾಗಿ ಎರಡ್ಮೂರು ಸೌಟು ಹಾಕಿಸಿಕೊಂಡು, 'ಇನ್ನು ಸಾಕು' ಅಂದರು. ಬಡಿಸುವವರು ಗೇಲಿ ಮಾಡಲೋಸುಗ ಇನ್ನೂ 'ಎರಡು ಸೌಟು ಬಡಿಸ್ಲಾ' ಎಂದರು. 'ಬೇಕಾದಷ್ಟು ಬಡಿಸಲು ಸಾಧ್ಯವಾ? ಹಾಗಿದ್ದರೆ ಬಡಿಸಿ' ಎಂದರು. ಇವರು ಬಡಿಸಿದ್ದೇ ಬಡಿಸಿದ್ದು. ಅವರು ಉಂಡದ್ದೇ ಉಂಡದ್ದು. ಪಾಯಸದ ಪಾತ್ರೆ ಖಾಲಿ. ಯಜಮಾನ ಬಂದು, 'ಸ್ವಾಮಿ, ಸುಧಾರಿಸಬೇಕು. ಏನೋ ಎಡವಟ್ಟು ಆಯಿತು. ಕ್ಷಮಿಸಿ. ಉಳಿದವರಿಗೆ ಪಾಯಸ ಇಲ್ಲ' ಎಂದು ವಿನಂತಿಸಿದ ಬಳಿಕ 'ಪಾಯಸ ಆಪೋಶನ' ನಿಲ್ಲಿಸಿದ್ದರು.
ಬಾಲ್ಯದ ಬೆರಗು ಕಣ್ಣುಗಳಿಂದ ನೋಡಿದ ನೆನಪಿನ್ನೂ ಮಾಸಿಲ್ಲ. ಇದೆಲ್ಲವನ್ನೂ ಕಂಡಾಗ, ಕೇಳಿದಾಗ ಯಕ್ಷಗಾನದ 'ಬಾರಣೆ' ನೆನಪಾಗುತ್ತದೆ! ಒಂದು ರೀತಿಯ ರಾಕ್ಷಸ ಪರಂಪರೆ! ಇವೆಲ್ಲವೂ ಆತಿಥ್ಯದ ಮುಖಗಳು.
ಉತ್ತರ ಕನ್ನಡ ಜಿಲ್ಲೆಗೊಮ್ಮೆ ಹೋಗಬೇಕು. ನಿಜವಾದ ಆತಿಥ್ಯ ಗೋಚರವಾಗುತ್ತದೆ. ಅತಿಥಿಗಳು ಬಂದಾಗ ಮನೆಮಂದಿ ಎಲ್ಲವರೂ 'ಬಂದ್ರಾ, ಆರಾಮವಾ' ಅಂತ ವಿಚಾರಿಸಿ, ನೀರು-ಬೆಲ್ಲ ಇಡುತ್ತಾರೆ. ಊಟದಲ್ಲೂ ಅಷ್ಟೇ. ರಾಕ್ಷಸಾತಿಥ್ಯ ಇಲ್ಲ! ಮಾವು, ಹಲಸುಗಳ ಋತುವಿನಲ್ಲಿ ಸಿಗುವ ಹಣ್ಣುಗಳಿಂದ ವಿವಿಧ ಖಾದ್ಯಗಳು. ಮನೆಯ ಸದಸ್ಯನಂತೆ ಮಾತನಾಡಿಸುವ ಪರಿ. ಮಲೆನಾಡಿನ ಸಾಂಪ್ರದಾಯಿಕ ತಿಂಡಿ-ತೀರ್ಥದ ಪರಂಪರೆ ಇನ್ನೂ ಮಾಸಿಲ್ಲ. ನಿಜಕ್ಕೂ ಅನನ್ಯ.
ಅದನ್ನೇ ನಮ್ಮೂರಿಗೆ ಹೋಲಿಸಿ. ಪೇಟೆಯಲ್ಲಿ ಕರೆಗಂಟೆ ಒತ್ತಿ. ಕಿಟಕಿಯಲ್ಲಿ 'ಅಗೋಚರ ಮುಖ' ಕಾಣಿಸಿಕೊಂಡು, 'ಯಾರು ಬೇಕಿತ್ತು' - ಮುಖಕ್ಕೆ ಹೊಡೆದವರಂತೆ ಪ್ರಶ್ನೆ. ಗೋತ್ರ, ಪ್ರವರ ಹೇಳಿದ ಮೇಲೆ ಬಾಗಿಲು ತೆರೆದುಕೊಳ್ಳುತ್ತದೆ. ಕಳ್ಳಕಾಕರ ಭೀತಿಯೂ ಒಂದು ಕಾರಣ. ಅದಕ್ಕಿಂತ ಮುಂಚಿತವಾಗಿ 'ಅತಿಥಿ' ಎಂಬುದು ಪದಕೋಶದಿಂದಲೇ ಡಿಲೀಟ್ ಆಗಿರುವುದು ಮತ್ತೊಂದು.
ಕೆಲವೆಡೆ 'ನಾಯಿಗಳಿವೆ, ಎಚ್ಚರಿಕೆ' ಗೇಟಿನಲ್ಲೇ ಫಲಕ ತೂಗಿರುತ್ತದೆ. ಮತ್ತೆ ಒಳಗೆ ಹೋಗುವ ಪ್ರಮೇಯವೇ ಇಲ್ಲವಲ್ಲ. ಕಾಫಿ, ಚಹ ದೂರದ ಮಾತು. ಅಪರೂಪಕ್ಕೊಮ್ಮೆ ಈ ಭಾಗ್ಯ ಸಿಗುವುದುಂಟು. 'ಮಾತಿಗೂ ಬರಗಾಲ'ದ ಸಮಯದಲ್ಲಿ ಆತಿಥ್ಯಕ್ಕೆ ಎಲ್ಲಿ ಜಾಗ? ಆತಿಥ್ಯವು ಮನೆತನ-ಸಂಸ್ಕಾರದಿಂದ ಬರುವಂತಹ ಬಳುವಳಿ. ಬರೇ ತೋರಿಕೆಯಿಂದ ಪ್ರಯೋಜನವಿಲ್ಲ. ಅದು ಮನಸ್ಸಿನಿಂದ ಬರಬೇಕು. ಆಗಲೇ ಅದಕ್ಕೆ ಮೌಲ್ಯ. ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿದೆ.
ಕೆಲವು ಸಮಾರಂಭಗಳ ಭೋಜನವೂ 'ರಾಕ್ಷಸಾತಿಥ್ಯ'ಕ್ಕೆ ಮಾದರಿ! ಐಟಂಗಳ ಸರಮಾಲೆ. ಉಂಡು ಎದ್ದಾಗ ಎಲ್ಲರ ಎಲೆಯಲ್ಲೂ ಉಂಡುಬಿಟ್ಟ 'ತ್ಯಾಜ್ಯದ ಗುಡ್ಡ'! ಊಟದಲ್ಲೂ ಪ್ರತಿಷ್ಠೆ.
ಬದುಕು ಬದಲಾಗುತ್ತಿದ್ದಾಗ ನಮ್ಮ ಪಾರಂಪರಿಕ ಆಚಾರಗಳನ್ನು 'ಅರ್ಥಶೂನ್ಯ' ಎನ್ನುತ್ತಾ ತಳ್ಳುತ್ತೇವೆ. ನಮ್ಮಲ್ಲೊಂದು ಮನಸ್ಸಿದ್ದರೆ, ಅದನ್ನೇ ಕೇಳೋಣ - ಆಗ ಅದು ಹೇಳುತ್ತದೆ 'ಆಚಾರಗಳಿಗೆ ಆರ್ಥವಿದೆ. ಅದನ್ನು ಆಚರಿಸುವ ನಿನ್ನ ಬದುಕೇ ಅರ್ಥಶೂನ್ಯ'!ತುತ್ತಿಗೂ ತತ್ವಾರದ ಎಷ್ಟು ಕುಟುಂಬಗಳು ನಮ್ಮಲ್ಲಿಲ್ಲ. ಹಲಸಿನ ಕಾಯನ್ನು ಬೇಯಿಸಿ ಬದುಕು ಸವೆಸಿದ ಗ್ರಾಮೀಣ ಮಂದಿ ಯಾವುದೇ ಕಾಯಿಲೆ ಇಲ್ಲದೆ ಗಟ್ಟಿಮುಟ್ಟಾಗಿದ್ದಾರೆ. ಒಂದು ಹೊತ್ತು ಉಂಡು ದಿನಕಳೆವ ಕಾಯಕಷ್ಟದವರು ಇಲ್ವಾ. 'ರಾಕ್ಷಸಾತಿಥ್ಯ'ದ ಒಂದು ದಿವಸದ ಐಟಂ ಇದೆಯಲ್ಲಾ, ಅದು ಒಬ್ಬನಿಗೆ 'ಒಂದು ವಾರಕ್ಕೆ' ಸಾಕು! ಇಂತಹ ಮಾದರಿಗಳು ನಮ್ಮ ನಡುವೆ ಎಷ್ಟಿಲ್ಲ?
Home › Unlabelled › ರಾಕ್ಷಸಾತಿಥ್ಯ!
0 comments:
Post a Comment