2009 ರಲ್ಲಿ ಮೇಳಗಳಿಗೆ ಸುಗ್ಗಿ! ಯಂತ್ರದಿಂದ ತೊಡಗಿ ನಾಟೀ ಬದನೆ ತನಕ!
'ಐವತ್ತರಷ್ಟು ನಾಟೀ ಬದನೆ ತಳಿಗಳ ಪ್ರದರ್ಶನ, ಜತೆಗೆ ಆರು ಕಾಡು ಬದನೆಗಳು. ಬದನೆಯ ಚಟ್ನಿಪುಡಿ, ಒಣಗಿಸಿದ ಬಾಳುಕ, ಒಣಗಿಸಿದ ಬದನೆ ಪಲ್ಯ, ಮೊಳಕೆ ಹುರುಳಿ-ಬದನೆ ಸಾರು, ಬೋಂಡ, ಹುಳಿ, ಮಸಾಲೆ ಬೋಂಡ, ಎಣ್ಣೆಗಾಯಿ. ಹೀಗೆ ಖಾದ್ಯದಲ್ಲಿ ಬದನೆಯದ್ದೇ ಕಾರುಬಾರು. ಕೆಲವು ಹೊಟ್ಟೆಗಿಳಿದರೆ, ಮತ್ತೆ ಕೆಲವು ಪ್ರದರ್ಶನಕ್ಕೆ ಸೀಮಿತ. ಮಾತುಕತೆಗಳು ನಾಟಿ-ಬಿಟಿ ಸುತ್ತ' ಮೈಸೂರಿನ ಇಂದ್ರಪ್ರಸ್ಥದ ಎ.ಪಿ.ಚಂದ್ರಶೇಖರ್ ಬದನೆ ಮೇಳವನ್ನು ಬಿಡಿಸಿದರು.
ಒಂದೆಡೆ ಬಿಟಿ ಬದನೆಯ ಗುಲ್ಲು. ಈ ಮಧ್ಯೆ ನಾಟಿ ತಳಿಗಳ ಹುಡುಕಾಟ. 'ಮೇಳಕ್ಕೆ ಬರುವಾಗ ನಿಮ್ಮೂರಿನ ಬದನೆ ತನ್ರಿ' ಎಂದು ಸಹಜ ಸಮೃದ್ಧದ ಕೃಷ್ಣಪ್ರಸಾದ್ ಬುಲಾವ್. ಮೈಸೂರಿನ ರಂಗಾಯಣದಲ್ಲಿ ಜರುಗಿದ ಮೇಳದಲ್ಲಿ ಭಾಗವಹಿಸಿದವರು ಐನೂರಕ್ಕೂ ಹೆಚ್ಚು. 'ಜನ ಏನೋ ಬಂದರು. ಇವರಲ್ಲಿ ಶೇ. 70 ರಷ್ಟು ಮಂದಿಗೆ ಬಿಟಿ ಗೊತ್ತೇ ಇಲ್ಲ' ಎಪಿ ಮಾತಿನ ಮಧ್ಯೆ ಸೇರಿಸಿದರು. ಹೌದು, ಜಾಗತಿಕವಾಗಿ ನಡೆಯುವ ಸದ್ದಿಲ್ಲದ ಹುನ್ನಾರಗಳು ತಳಮಟ್ಟಕ್ಕೆ ಬರುವಾಗ ಬದುಕು ತಲ್ಲಣವಾಗುತ್ತದೆ.
ಬಿಟಿಯ ಲೋಕವೇ ಬೇರೆ! ನಮ್ಮ ಕೃಷಿ, ಕೃಷ್ಯುತ್ಪನ್ನಗಳ ಸುತ್ತಮುತ್ತ ನಡೆದ 'ಮೇಳ'ಗಳು ಆಯಾ ಕಾಲದಲ್ಲಿ ಒಂದಷ್ಟು ಅರಿವನ್ನು, ಜಾಗೃತಿಯನ್ನು ಮೂಡಿಸಿವೆ. ಇತ್ತ ಕೇರಳದ ಆಲೆಪ್ಪಿಯ ಮಾರಾರಿಕುಳಂನಲ್ಲಿ ಎಂಟು ದಿವಸಗಳ ಬದನೆ ಮೇಳ ನಡೆದಿರುವುದು ಬಹುಶಃ ಮೇಳಗಳಲ್ಲೇ ದೊಡ್ಡಣ್ಣ!
ವರುಷಾರಂಭಕ್ಕೆ ರಾಜಧಾನಿಯಲ್ಲಿ ರಾಷ್ಟ್ರೀಯ 'ಕಿತ್ತಳೆ ಮೇಳ' ಜರುಗಿತು. ರಾಜಸ್ಥಾನ್, ಪಂಜಾಬ್, ಅಸ್ಸಾಂ, ಕೊಡಗು.. ಹೀಗೆ ಇಪ್ಪತ್ತೈದಕ್ಕೂ ಮಿಕ್ಕಿದ ಕಿತ್ತಳೆ ತಳಿಗಳ ಪ್ರದರ್ಶನ. 'ನಾಗಪುರ ಕಿತ್ತಳೆಯನ್ನು ಸ್ಥಳದಲ್ಲೇ ಜ್ಯೂಸ್ ಮಾಡಿ ಕೊಡುವ ವ್ಯವಸ್ಥೆಯಿತ್ತು. ಅದರ ರುಚಿಯ ಮುಂದೆ ನಮ್ಮ ಕೊಡಗಿನ ಕಿತ್ತಳೆಯದ್ದೇ ಮೇಲುಗೈ' - ಮೇಳದಲ್ಲಿ ಭಾಗವಹಿಸಿದ ಪತ್ರಕರ್ತ ಮಿತ್ರ ಸುಚೇತನ ಹೇಳಿದರು. ರಾಜಸ್ಥಾನದಿಂದ ಬಂದ ಕಿನೋ ಎಲ್ಲದರಕ್ಕಿಂತಲೂ ಹಿರಿದು! ಎಲ್ಲಾ ಮಳಿಗೆಯಲ್ಲೂ ರುಚಿ ನೋಡಲು ಕಿತ್ತಳೆಯ ಎಸಳನ್ನು ಕೊಡುತ್ತಿದ್ದರಂತೆ.
ಕಳೆದ ವರುಷ ಹದಿಮೂರು 'ಹಲಸು ಮೇಳ'ಗಳು ನಡೆದುವು. 2007ರಲ್ಲಿ ವಯನಾಡಿನ 'ಉರವು ಸಂಸ್ಥೆ' ಮೊದಲಿಗೆ ಹಲಸು ಮೇಳ ಮಾಡಿತ್ತು. ಬಳಿಕ - ಶಿರಸಿಯ ಕದಂಬ ಮತ್ತು ತಿಪಟೂರಿನ ಬೈಫ್ ನಡೆಸಿದರೆ ನಂತರದ ದಿವಸಗಳಲ್ಲಿ ಶಿರಸಿ, ತೀರ್ಥಹಳ್ಳಿ, ನಿಟ್ಟೂರು, ಬೆಂಗಳೂರು, ರಾಜಧಾನಿಯ ಸಿಂಪ್ಲಿ ಆರ್ಗಾನಿಕ್, ಮೂಡಿಗೆರೆ; ಕೇರಳದ ವಯನಾಡ್, ಪತ್ತನಾಂತಿಟ್ಟ, ತ್ರಿಚೂರು, ವೆಂಗೇರಿ, ಕಾಂಜಿರಪುಳ, ಎಡನಾಡು ಮತ್ತು ಮಂಗಳೂರುಗಳಲ್ಲಿ ಹಲಸಿನ ಪರಿಮಳ.
ಒಂದೆಡೆ ಹಲಸೆಂದರೆ 'ಇಸ್ಸಿ' ಎಂದು ಮೂಗು ಮುರಿಯುವ ವರ್ಗ, ಮತ್ತೊಂದೆಡೆ ತೊಟ್ಟನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಧಿಸುವ ಹಲಸು ಪ್ರಿಯರು! ಹಪ್ಪಳ, ಚಿಪ್ಸ್ಗೆ ಸೀಮಿತವಾಗದೆ, ಮೌಲ್ಯವರ್ಧನೆಯೊಂದಿಗೆ ತನ್ನ ಮಾನವರ್ಧನೆಯನ್ನೂ ಹಲಸು ಮಾಡಿಕೊಂಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಮೇದಿನಿಂದ ಬೆಂಗಳೂರಿನ ತೂಬುಗೆರೆಯಲ್ಲಿ ಹಲಸು ಬೆಳೆಗಾರರ ಸಂಘವೇ ಅಸ್ತಿತ್ವಕ್ಕೆ ಬಂದಿದೆ. ಮಂಗಳೂರಿನ 'ಐಡಿಯಲ್' ಸಂಸ್ಥೆಯು ಹಲಸಿನ ಐಸ್ಕ್ರೀಂ, ಸ್ಕ್ವಾಷನ್ನು ಜನಪ್ರಿಯಗೊಳಿಸಿದೆ.
ಮೇಳದ ರುಚಿಯುಂಡ ಮನೆಗಳಲ್ಲಿ ಅತ್ತೆಯಿಂದ ಕೇಳಿಯೋ, ಅಮ್ಮನಿಂದ ಆಲಿಸಿಯೋ ಹಲಸಿನ ಹೊಸ ಹೊಸ 'ರೆಸಿಪಿ'ಗಳು ತಯಾರಾಗಿವೆ. ಜರುಗಿದ ಮೇಳಗಳ ವರಿಷ್ಠರ ಮಧ್ಯೆ ಪರಸ್ಪರ ಕೊಂಡಿ ಏರ್ಪಡುವ ಮೊದಲ ಹೆಜ್ಜೆಗೆ ಚಾಲನೆ ಬಂದಿದೆ.
ವರುಷಗಳ ಹಿಂದೆ ಶಿರಸಿಯ ಕಳವೆಯಲ್ಲಿ 'ಅನ್ನ-ಆಹಾರ-ಔಷಧ' ಎಂಬ ಎರಡು ದಿವಸಗಳ ಅಪರೂಪದ ಮೇಳ ನಡೆದಿತ್ತು. ಎಲ್ಲಾ ಮೇಳಗಳಂತೆ ಗೌಜಿ-ಗದ್ದಲವಿರಲಿಲ್ಲ. ಸೀಮೀತ ಪ್ರೇಕ್ಷಕರು. ಸುಮಾರು ನೂರು ಮನೆಗಳ ಅಡುಗೆ ಮನೆಗಳಂದು ಬಂದ್! ಮಲೆನಾಡಿಯಲ್ಲಿ ರೂಢಿಯಲ್ಲಿದ್ದು, ಮರೆತುಹೋದ ಅನೇಕ ತಂಬುಳಿ, ಕಷಾಯಗಳನ್ನು ಮನೆಯೊಡತಿಯರು ದಾಖಲಿಸಿಕೊಂಡರು. ಇದು ಅಡುಗೆ ಮನೆಗೂ ನುಗ್ಗಿದುವು! 'ಐವತ್ತಕ್ಕೂ ಮಿಕ್ಕಿ ತಂಬುಳಿಗಳು, ಕಷಾಯಗಳಂದು ದಾಖಲೆಯಾದುವು' ಎನ್ನುತ್ತಾರೆ ಮೇಳದ ರೂವಾರಿ ಶಿವಾನಂದ ಕಳವೆ.
ಈ ಮೇಳದಲ್ಲಿ ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟರು ಎಚ್ಚ್ಚರಿಸಿದ್ದು ಹೀಗೆ - 'ನಮ್ಮ ಹೊಟ್ಟೆ ತ್ಯಾಜ್ಯ ತುಂಬುವ ಚೀಲವಲ್ಲ. ಟಿವಿ ನೋಡುತ್ತಾ, ರಾಜಕೀಯ ಹರಟುತ್ತಾ, ಏನೇನನ್ನೋ ಆಲೋಚಿಸುತ್ತಾ ಉಂಡರೆ ರುಚಿ ಹೇಗೆ ಗೊತ್ತಾಗುತ್ತೆ ಅಲ್ವಾ. 'ಹೊಟ್ಟೆಯೆನ್ನುವುದು ತ್ಯಾಜ್ಯ ತುಂಬಿಸಿಡುವ ಗುಡಾಣವಲ್ಲ.'
ನಮ್ಮ ಮಧ್ಯೆ ನಡೆಯುವ ಸಮಾರಂಭಗಳ ಊಟ ಹೇಗಿರುತ್ತೇ? ಅದು 'ಹೊಟ್ಟೆ ತುಂಬಿಸುವುದು'. ಕುಳಿತೋ, ನಿಂತೋ.....ಹೊಟ್ಟೆಚೀಲಕ್ಕೆ ಹೋಗುತ್ತಾ... ಇರುತ್ತದೆ. ಮಧ್ಯೆ ಏನೋನೋ ಆಲಾಪಗಳು, ಕೋಪಗಳು, ಸಮಸ್ಯೆಗಳ ಧಿಮಿಕಿಟ. 'ಹೀಗೆಲ್ಲಾ ಇದ್ದರೆ ರೋಗವಲ್ಲದೆ ಮತ್ತೇನು ಬರಲು ಸಾಧ್ಯ. ಭಾರತದಲ್ಲಿ ಈಗಿರುವ ಸಮಸ್ಯೆಯ ಮೂಲವೇ ಇದು. ಹಾಗಾಗಿ ನಾಲಗೆಯ ಮಾತು ಕೇಳಿ ಹೊಟ್ಟೆ ತುಂಬಿಸುವ ಬದಲು, ಹೊಟ್ಟೆಯ ಮಾತು ಕೇಳಿ ಊಟ ಮಾಡಬೇಕು
ತಿಪಟೂರಿನ ಬಿಳಿಗೆರೆಯಲ್ಲಿ ನಡೆದ 'ಎಳನೀರು ಮೇಳ'ವು ಎಳನೀರಿನ ಕುರಿತಾದ ಭಾವನೆಗಳನ್ನು ಪೋಸ್ಟ್ಮಾರ್ಟಂ ಮಾಡಿತು. ತೆಂಗಿನಕಾಯಿಗೆ ಎಷ್ಟು ಅವಕಾಶಗಳಿವೆಯೋ, ಅದಕ್ಕಿಂತ ಹೆಚ್ಚೆ ಎನ್ನಬಹುದಾದಷ್ಟು ಎಳನೀರು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗಿದೆ. ಪರಿಣಾಮ, ನಲವತ್ತು ಮಂದಿಯ ಕೂಡು ವ್ಯವಸ್ಥೆಯಿಂದ 'ಸೌಹಾರ್ದ ಸಹಕಾರಿ ಸಂಘ'ದ ಮೂಲಕ ಎಳನೀರು ಮಾರಾಟ. ದಿನಕ್ಕೆ ನೂರಕ್ಕೂ ಮಿಕ್ಕಿ ಎಳನೀರು ಮಾರಾಟ. 'ಎಳನೀರು ಮಾರುವುದೇ ದರಿದ್ರ ಸ್ಥಿತಿ ಎಂದಿದ್ದ ಜಾಗದಲ್ಲಿ ದಿನಕ್ಕೆ ನೂರು ಎಳನೀರು ಮಾರಾಟವಾಗುತ್ತೆ ಅಂದರೆ ಅದು ಮೇಳದ ಫಲಶೃತಿ.'
ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.
ಮೊನ್ನೆ ಮೊನ್ನೆ ಕಾಫಿಯ ನಾಡು ಮೂಡಿಗೆರೆ ಸನಿಹದ ದೇವವೃಂದದಲ್ಲಿ ಹಳ್ಳಿಹಬ್ಬ ನಡೆಯಿತು. ಬದುಕಿನಿಂದ ಮರೆಯಾದ, ಮರೆಯಾಗುತ್ತಿರುವ ಅರುವತ್ತು ಹಳ್ಳಿ ರುಚಿಗಳನ್ನು ಹಿರಿಯ ಅನುಭವಿಗಳಿಂದ ಮಾಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಮಧ್ಯಹ್ನ ಭೋಜನದ ಹೊತ್ತಿಗೆ ಅವೆಲ್ಲಾ ಹೊಟ್ಟೆ ಸೇರಿದ್ದುವು. ಒಂದೆಡೆ ಪ್ಯಾಕೆಟ್ ಸಂಸ್ಕೃತಿ ಬೆಳೆಯುತ್ತಿರುವಂತೆ, ಮತ್ತೊಂದೆಡೆ ಇಂತಹ ಹಳ್ಳಿರುಚಿಯನ್ನು ಹುಡುಕುವ ವರ್ಗ ಬೆಳೆಯುತ್ತಿದೆ!
ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ' ಜರುಗಿತ್ತು. ಈ ವರೆಗೆ ಕೃಷಿಕ ಮಟ್ಟದಲ್ಲಿ ಆವಿಷ್ಕಾರವಾದ ಯಂತ್ರಗಳು ಒಂದೇ ಸೂರಿನಡಿ ಬಂದಿದ್ದವು. ಮೇಳ ಪೂರ್ತಿ ಭಾಗವಹಿಸಿದ ಕೃಷಿಕರ ಅಭಿಪ್ರಾಯ - 'ನೋಡಿ, ಇನ್ನು ಐದಾರು ತಿಂಗಳಲ್ಲಿ ಕನಿಷ್ಠ ನೂರು ಯಂತ್ರಗಳಾದರೂ ಕೃಷಿಕರಂಗಳದಲ್ಲಿ ಸದ್ದುಮಾಡುತ್ತವೆ'.
ಭತ್ತ ಉತ್ಸವ, ಬೀಜ ಮೇಳಗಳು ಪ್ರತೀ ವರುಷ ನಡೆಯುತ್ತಿವೆ. ಇದರಿಂದಾಗಿ ಭತ್ತದ ತಳಿಗಳ ಸಂರಕ್ಷಕರ ಪರಸ್ಪರ ಪರಿಚಯ, ಬೀಜ ವಿನಿಮಯಗಳು ಸದ್ದಿಲ್ಲದೆ ನಡೆಯುತ್ತಿವೆ. ಹಿಂದೆ ಸಾಗರದಲ್ಲಿ 'ಮಿಡಿ ಮಾವು' ಮೇಳ ನಡೆದಿತ್ತು. ಸಾಕಷ್ಟು ಮಂದಿಗೆ `ತಾವೂ ಗಿಡ ನೆಡಬೇಕು' ಎಂಬ ಭಾವನೆ ಶುರುವಾಗಿತ್ತು. `ನಾವು ಕಸಿ ಮಾಡಲು ಕಲೀತಿವಿ. ಕಲಿಸುವವರು ಯಾರ್ಯಾರಿದ್ದಾರೆ' ಎಂಬ ಹುಡುಕಾಟ. ಉಪ್ಪಿನಕಾಯಿಗೆ ಬೇಡಿಕೆ. ರಸರುಚಿಗಳ ಬಗ್ಗೆ ಮಹಿಳೆಯರೊಳಗೆ ಮಾತುಕತೆ-ಚರ್ಚೆ. ಉತ್ಸವದ ಗೋಷ್ಠಿಯಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳ ಬೆನ್ನು ಹತ್ತಿ ಮಾಹಿತಿ ಸಂಗ್ರಹ..... ಮೇಳದ ಕಣ್ಣಿಗೆ ಕಾಣದ ಫಲಶ್ರುತಿಗಳಿವು.
ಅಡಿಕೆ ಸಂಶೋಧನೆ ಮತ್ತು ಅಭಿವ್ರದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಡಿಕೆ ಮೇಳ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಮಟ್ಟದಲ್ಲಿ ಕೃಷಿ ಉತ್ಸವವನ್ನು ನಡೆಸುತ್ತಿದೆ. ಸ್ಪಷ್ಟ ಉದ್ದೇಶವಿಟ್ಟು ಸಂಘಟಿತವಾದಂತಹ ಮೇಳಗಳು ಗೆದ್ದಿವೆ.
ಮಾವು, ಹಲಸು, ಎಳನೀರು, ಬದನೆ, ಕಿತ್ತಳೆಯಂತೆ ಉಳಿದ ಕೃಷಿ ಉತ್ಪನ್ನಗಳಿಗೂ ಆ ಭಾಗ್ಯ ಬರಲಿ. ಮುಂದಿನ ಮೇಳ ಯಾವುದೋ?