Tuesday, August 31, 2010

ಮಂಡನೆಗೆ ಸಿದ್ಧವಾಗಿದೆ, ಬೀಜ ಮಸೂದೆ

ಬಿಟಿ ಬದನೆ ಗುಮ್ಮ ಬದಿಗೇನೋ ಸರಿಯಿತು ಇತ್ತ ಬೀಜ ಗುಮ್ಮ 'ತಾನು ರೈತಪರ' ಎನ್ನುತ್ತಾ ಅಂಗೈಗೆ ತುಪ್ಪ ಸವರಿ ಕೃಷಿಕರ ಮನೆ ನುಗ್ಗಲು ಹೊಂಚು ಹಾಕುತ್ತಿದೆ!

ತನ್ನದೇ ವಿಧಾನದಲ್ಲಿ ಕೃಷಿಕನು ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ಕರಾವಳಿಯಲ್ಲಿ ಭತ್ತವನ್ನು ಮುಡಿಯ ರೂಪದಲ್ಲಿ ಕಾಪಿಟ್ಟರೆ; ಇತರ ಕಡೆಗಳಲ್ಲಿ ಬೀಜಗಳನ್ನು ಮಣ್ಣಿನೊಳಗೆ, ಪಾತ್ರೆಗಳೊಳಗೆ ಸಂರಕ್ಷಣೆ ಮಾಡುತ್ತಿರುವುದನ್ನು ಕಾಣುತ್ತೇವೆ. ಮುಂದಿನ ವರುಷ ಯಾರ ಮುಂದೆಯೂ ಕೈಯೊಡ್ಡದೆ ತಮ್ಮದೇ ಹೊಲದ ಬೀಜವನ್ನು ಬಿತ್ತುವುದು ಪಾರಂಪರಿಕ ವಿಧಾನ. ತಾನು ಬಳಸಿ ಮಿಕ್ಕುಳಿದುದನ್ನು ಇತರರಿಗೆ ಹಂಚುತ್ತಿರುವುದು ಸೌಹಾರ್ದ ಬಾಳ್ವೆಗೊಂದು ನಿದರ್ಶನ.

'ರೈತ ಬೀಜಕ್ಕಾಗಿ ಕಂಪೆನಿಗಳ ಮುಂದೆ ಕೈಯೊಡ್ಡಬೇಕು. ತಾನು ಸಂಗ್ರಹಿಸಿಟ್ಟುಕೊಂಡರೆ ಶಿಕ್ಷಾರ್ಹ ಅಪರಾಧ. ಹಂಚಿದರೆ ಅದು ಮಾರಾಟ ಅಂತ ಪರಿಗಣಿತವಾಗುತ್ತದೆ. ಅದಕ್ಕೆ ಸರಕಾರದ ಪ್ರತ್ಯೇಕ ಪರವಾನಿಗೆ ಬೇಕು. ನಿಮ್ಮ ಹೊಲದಲ್ಲಿ ಬೆಳೆದ ಪೈರಿನಲ್ಲಿ ಬೀಜ ತೆಗೆದಿಟ್ಟರೆ ಅದು ಸರಕಾರದ ಸೊತ್ತು!' - ಇಂತಹ ಕಂಪೆನಿ ಪ್ರಣೀತ' ಬೀಜ ಕಾಯದೆಯೊಂದು ಸಂಸತ್ತಿನಲ್ಲಿ ಮಂಡನೆಯಾಗಲು ಸಿದ್ಧವಾಗಿತ್ತು. ಆರು ವರುಷಗಳ ಹಿಂದೆಯೇ ಮಸೂದೆ ಸಿದ್ಧವಾದರೂ, ಈಗ ಹೊಸ ಅವತಾರದೊಂದಿಗೆ ಮಂಜೂರು ಮಾಡಲು ತುದಿಗಾಲಲ್ಲಿದೆ. ಆದರೆ 2004ರಲ್ಲಿ ನಿರೂಪಿತವಾಗಿದ್ದ ರೈತಮಾರಕ ವಿಚಾರಗಳನ್ನು ಈ ಸಲ ಕೈಬಿಟ್ಟಿರುವುದು ಸಮಾಧಾನಕರ.

ವಾಣಿಜ್ಯವಾಗಿ ಬೀಜ ಮಾರಾಟಗಾರರ ಮೂಲಕ ಮಾರಾಟವಾಗುವ ಕಂಪೆನಿ ಬೀಜಗಳ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ಭಾರತೀಯ ರೈತರನ್ನು ನಕಲಿ ಹಾಗೂ ಕಳಪೆ ಗುಣಮಟ್ಟದ ಬೀಜಗಳಿಂದ ರಕ್ಷಿಸುವುದು ತಿದ್ದುಪಡಿ ಮಸೂದೆಯ ಆಶಯ.
ಮಸೂದೆಯ ವ್ಯಾಪ್ತಿ ತೀರಾ ಕಿರಿದು ಮತ್ತು ಸೀಮಿತ. ಇದರಲ್ಲಿ ಬೀಜಗಳ ಬೆಲೆಯ ಕುರಿತಾದ ನಿಯಂತ್ರಣಕ್ಕೆ ಕಾನೂನಿಲ್ಲ. ಬೀಜಗಳ ಬೆಲೆಗಳು ರೈತರಿಗೆ ಎಟಕುವಂತಿರಬೇಕು. ಕೃಷಿ ಉತ್ಪನ್ನದ ಬೆಲೆಗಳನ್ನು ಸರ್ಕಾರವೇ ಭರಿಸುತ್ತದೆ. ಆದರೆ ಬೀಜದ ಬೆಲೆಗಳನ್ನು ಸರ್ಕಾರ ಪರಿಗಣಿಸುವುದಿಲ್ಲ. ಆಗ ಬೀಜ ಕಂಪೆನಿಗಳು ಮನಸ್ಸಿಗೆ ಬಂದಂತೆ ಬೆಲೆ ನಿಗದಿ ಮಾಡುವ ಅವಕಾಶ ಹೇರಳವಾಗಿದೆ.


ಉದಾ: ಟೊಮೆಟೋ ಬೀಜದ ಬೆಲೆ ಕಿಲೋಗೆ 475 ರೂಪಾಯಿಯಿಂದ 76,000 ರೂಪಾಯಿ ತನಕ ಇದ್ದರೆ, ದೊಣ್ಣೆಮೆಣಸಿನ ಬೆಲೆ ಕಿಲೋಗೆ 3670-65200 ರೂಪಾಯಿ! ಈ ರೀತಿಯ ಕಂಪೆನಿ ನಿರ್ಣಾಯಕ ಬೆಲೆಗಳನ್ನು ಕೃಷಿಕನಿಗೆ ತಾಳಿಕೊಳ್ಳಲು ಅಸಾಧ್ಯ. ಒಂದು ವೇಳೆ ಅಲ್ಲೋ ಇಲ್ಲೋ ತಾಳಿಕೊಂಡರೂ ಕಂಪೆನಿಯ ದಾಸಾನುದಾಸರಾಗಬೇಕಾದ ಸ್ಥಿತಿ!

'ರೈತರ ಹಿತಾಸಕ್ತಿಗಳನ್ನು ಬಲಿಕೊಟ್ಟು ಖಾಸಗಿ ಬೀಜ ಕಂಪೆನಿಗಳು ಹಾಗೂ ಕಾರ್ಪೋರೇಷನ್ಗಳ ಹಿತಾಸಕ್ತಿಗಳನ್ನು ನಿಯಂತ್ರಣ ಇಲ್ಲದೇ ರೈತರ ಸುಲಿಗೆ ಮಾಡುವ ಸಾಧ್ಯತೆಯಿದೆ. ಕೃಷಿಯ ಉತ್ಪಾದನಾ ವೆಚ್ಚ ಏರಿಕೆ ರೈತರಿಗೆ ಹೊರಲಾರದ ಹೊರೆಯಾಗಬಹುದು. ಈಗಲೇ ಈ ವಿಚಾರದಲ್ಲಿ ರೈತ ಹೈರಾಣನಾಗಿದ್ದಾನೆ' ಎನ್ನುತ್ತಾರೆ ಸಹಜ ಸಮೃದ್ಧದ ಜಿ.ಕೃಷ್ಣಪ್ರಸಾದ್.
ಬೀಜಗಳ ಬೆಲೆ ಮತ್ತು ಸಂಭಾವನೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರಕಾರದ ಅಧಿಕಾರವನ್ನು ಪ್ರಶ್ನಿಸಿ ಖಾಸಗಿ ಬೀಜ ಕಂಪೆನಿಗಳು ಆಂದ್ರಪ್ರದೇಶ ಸರಕಾರವನ್ನು ಉಚ್ಛನ್ಯಾಯಾಲಯದ ಮೆಟ್ಟಿಲೇರಿಸಿದೆ. ಈ ಹಿನ್ನೆಲೆಯಲ್ಲಿ ರೂಪಿತವಾಗುವ ಬೀಜ ಸಮಿತಿಯ ಅಧಿಕಾರವು ಬೀಜಗಳ ಬೆಲೆ ಮತ್ತು ಬೆಲೆ ನಿಯಂತ್ರಣದ ಅಧಿಕಾರವನ್ನು ಒಳಗೊಳ್ಳಬೇಕು.


ಮಸೂದೆಯಲ್ಲಿ ಜುಲ್ಮಾನೆಗಳು ತೀರಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಸರಕಾರಕ್ಕೆ ನಕಲಿ ಹಾಗೂ ಕಳಪೆ ಬೀಜಗಳ ಹಾವಳಿಯನ್ನು ತಡೆಗಟ್ಟುವುದು ಅಸಾಧ್ಯ. ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ತಿದ್ದುಪಡಿ ಆಗಬೇಕಾದ ಅಗತ್ಯವಿದೆ.
ರಾಷ್ಟ್ರೀಯ ಬೀಜಗಳ ರಿಜಿಸ್ಟರ್ನಲ್ಲಿ ಬೀಜಗಳು ನೋಂದಾವಣೆ ಪಡೆದರೂ ಸಹಾ, ಅವುಗಳಲ್ಲಿ ಯಾವ ನೋಂದಾಯಿತ ಬೀಜಗಳನ್ನು ರಾಜ್ಯದಲ್ಲಿ ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಹಾಗೂ ಅವಕ್ಕೆ ಲೈಸನ್ಸ್ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರಬೇಕು.


ಬೀಜಗಳ ನೋಂದಾವಣೆಗೆ ಸಲ್ಲಿಸಲಾಗುವ ಅರ್ಜಿಯು- ಸಾಧ್ಯವಾದಷ್ಟು ವಿವರವಾಗಿ - ನೋಂದಾವಣೆ ಬಯಸುವ ಬೀಜವನ್ನು ಯಾವ ತಳಿಯ ಬೀಜದಿಂದ ಸೃಷ್ಟಿಸಲಾಗಿದೆಯೋ ಅಂತಹ ಬೀಜದ ವಂಶಾವಳಿಯ ಸಂಪೂರ್ಣ ವಿವರಗಳನ್ನು ಒಳಗೊಂಡಿರುವಂತೆ, ಬೀಜ ನೋಂದಾವಣೆ ಸಮಿತಿಯು ಖಾತ್ರಿ ಮಾಡಿಕೊಳ್ಳಬೇಕು. ಈ ಮೂಲಕ ಸಾಮಾನ್ಯ ತಳಿಗಳನ್ನು ಹಾಗೂ ಕದ್ದ ಬೀಜಗಳನ್ನು ಯಾರೂ ನೋಂದಾವಣೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಿಕೊಳ್ಳಬೇಕು.
ಆಮದು ಮಾಡಲಾಗುವ ಎಲ್ಲಾ ಬೀಜಗಳು ಕಡ್ಡಾಯವಾಗಿ ಬೀಜ ತಪಾಸಣೆ ವಿಧಿಗಳಿಗೆ ಒಳಪಡಬೇಕು. ದೇಶದ ಭೂಸ್ಥಿತಿಗೆ ಅನುಗುಣವಾಗಿ ಅವುಗಳ ಒಗ್ಗುವಿಕೆ ನಿರ್ಧಾರಕ್ಕಾಗಿ, ವಿವಿಧ ಪ್ರದೇಶಗಳಲ್ಲಿ ಬೆಳೆದು ನೋಡುವ ವ್ಯವಸ್ಥೆಯಾಗಬೇಕು. ವಿದೇಶೀ ಬೀಜ ಪ್ರಮಾಣೀಕರಣ ಸಂಸ್ಥೆಗಳು ನೀಡುವ ಸ್ವಯಂ ತಪಾಸಣೆ ಹಾಗೂ ಪ್ರಮಾಣ ಪತ್ರಗಳು ಭಾರತದಲ್ಲಿ ಮಾನ್ಯವಾಗಬಾರದು.

ಪಿಡುಗು ಅಪಾಯದ ತಪಾಸಣೆ ಹಾಗೂ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಬಗ್ಗೆ ಪರೀಕ್ಷೆಗಳನ್ನು ನಡೆಸಿದ ನಂತರವೇ ಬೀಜಗಳ ಆಮದಿಗೆ ಅನುಮತಿ ನೀಡಬೇಕು. ಯಾವುದೇ ಪಿಡುಗು ಬಾಧೆಯ ಹರಡುವಿಕೆಗೆ ಹಾಗೂ ಅದರ ನಿವಾರಣೆಗೆ ಬೀಜ ರಫ್ತುದಾರರನ್ನು ಹೊಣೆಗಾರರನ್ನಾಗಿಸುವಂತಹ ಹೊಣೆಗಾರಿಕೆ ವಿಧಿಯನ್ನು ಮಸೂದೆಯಲ್ಲಿ ಸೇರಿಸುವ ಅಗತ್ಯವಿದೆ.
ಭಾರತೀಯ ಕಿಸಾನ್ ಸಂಘ, ಸಹಜಸಮೃದ್ಧ, ಸ್ವದೇಶಿ ಜಾಗರಣ ಮಂಚ್.. ಮೊದಲಾದ ರೈತಪರ ಸಂಸ್ಥೆಗಳು ಪ್ರಸ್ತಾಪಿತ ಬೀಜ ಕಾಯದೆಯ ತಿದ್ದುಪಡಿಗೆ ಕೇಂದ್ರವನ್ನು ಆಗ್ರಹಿಸಿದೆ.


'ಭಾರತದ ರೈತರನ್ನು, ಕೃಷಿಯನ್ನು ಹಾಗೂ ಆಹಾರದ ಭದ್ರತೆಯನ್ನು ಕಾಪಾಡಲು ಬೀಜಮಸೂದೆಯು ಬಹಳ ಮುಖ್ಯ. ಒಂದು ದುರ್ಬಲ ಮಸೂದೆಯನ್ನು ರಚಿಸಿ, ಕಂಪೆನಿಗಳನ್ನು ಯಾವುದೆ ನಿಯಂತ್ರಣವಿಲ್ಲದೇ ಮುಕ್ತವಾಗಿ ಬಿಡುವುದರಿಂದ, ರೈತರ ಸರ್ವನಾಶ ಖಚಿತ. ರೈತರನ್ನು ಉಳಿಸಲು ಮೇಲಿನೆಲ್ಲಾ ಅಂಶಗಳ ತಿದ್ದುಪಡಿ ಆಗಲೇಬೇಕು' - ಕೃಷ್ಣಪ್ರಸಾದ್ ಸ್ಪಷ್ಟವಾಗಿ ಹೇಳುತ್ತಾರೆ.
(ಚಿತ್ರ, ಮಾಹಿತಿ :ಜಿ. ಕೃಷ್ಣಪ್ರಸಾದ್)

1 comments:

ಸೀತಾರಾಮ. ಕೆ. / SITARAM.K said...

ಇದರ ಬಗ್ಗೆ ರೈತರಿಗೆ ಮಾಹಿತಿ ನೀಡಿ ಆಂದೋಲನವೆರ್ಪಡಿಸಬೇಕು.

Post a Comment