Monday, March 18, 2013

ರೋಗಮುಕ್ತ "ಮುಸುಕಿನ ಬದನೆ"



                  ಮಡಿಕೇರಿಯ ಕೃಷಿಕ, ಇಂಜಿನಿಯರ್ ಶಿವಕುಮಾರ್ ಮನೆಯಲ್ಲಿ ಮಧ್ಯಾಹ್ನದೂಟ. ಅವರಮ್ಮ ಶಶಿಕಲಾ ಬದನೆಯ ಸಾಂಬಾರು ಬಡಿಸುತ್ತಾ ಕೊನೆಗೆ ರುಚಿ ಹೇಳುವಂತೆ ತಾಕೀತು ಮಾಡಿದರು. ಹೋಳು ತಿನ್ನುತ್ತಿದ್ದಂತೆ ಬದನೆಯ ಒಳಮಾಸಿನ ರಚನೆಯಲ್ಲಿ ವ್ಯತ್ಯಾಸವಿರುವುದು ಅನುಭವಕ್ಕೆ ಬಂತು. ಉಳಿದ ಬದನೆಗಿಂತ ರುಚಿಯಲ್ಲಿ ವ್ಯತ್ಯಾಸವಿಲ್ಲ, ಆದರೆ ಗಂಟಲಲ್ಲಿಳಿಯುವಾಗ ಸಣ್ಣಗೆ ಚೊಗರಿನ ಅನುಭವ. ಇದು ಮುಸುಕಿನ ಬದನೆ.

                  ಕೊಡಗರಹಳ್ಳಿಯ ಸ್ನೇಹಿತ ರಾಜೇಶ್ ಮುಸುಕಿನ ಬದನೆ ಬೆಳೆಯುತ್ತಿದ್ದು, ಅವರು ಬೀಜ ನೀಡಿದ್ದರು. ಶಿವಕುಮಾರ್ ಗಾಳಿಬೀಡಿನ ತನ್ನ ತೋಟದಲ್ಲಿ ಬೆಳೆದರು. ತೋಟದ ಕೆಲಸವನ್ನು ನಿರ್ವಹಿಸುವ ನಾರಾಯಣರಿಂದ ಆರೈಕೆ. ಗಿಡಗಳು ಚೆನ್ನಾಗಿ ಬೆಳೆದವು. ಕಾಯಿ ಬಿಡಲು ಆರು ತಿಂಗಳು ಬೇಕಾಯಿತು. ಐದು ಗಿಡಗಳಿದ್ದರೆ ವಾರಕ್ಕೆ ಮೂರು ದಿವಸ ಇದರದ್ದೇ ಸಾಂಬಾರ್, ಪಲ್ಯ ಮಾಡಬಹುದು ಎನ್ನುವ ಶಿಫಾರಸು.
                                                                                                 
                  ಆರಂಭದಲ್ಲಿ ಗೊಬ್ಬರ, ನೀರು ಕೊಟ್ಟು ಗಿಡ ಬೆಳೆಸಿದರೆ ಮತ್ತೆ ತೊಂದ್ರೆಯಿಲ್ಲ. ಆಮೇಲೆ ನೀರು ಆಗಾಗ್ಗೆ ಕೊಟ್ರೂ ಸಾಕಾಗುತ್ತದೆ, ಎಂಬ ಅನುಭವ ಶಿವಕುಮಾರ್ ಅವರದು. ಬೀಜಗಳಿಗೆ ಯಾವುದೇ ಉಪಚಾರ ಬೇಕಾಗಿಲ್ಲ. ಮೊಳಕೆ ಬಂದು ಐದರಿಂದ ಆರು ತಿಂಗಳಲ್ಲಿ ಕಾಯಿ ಬಿಡಲು ಶುರು. ಎರಡರಿಂದ ಮೂರು ವರುಷದ ವರೆಗೂ ನಿರಂತರ ಕಾಯಿ ಬಿಡುವ ಸಾಮಥ್ರ್ಯ.

              ಕಾಯಿಯ ಅರ್ಧ ಭಾಗವನ್ನು ಆವರಿಸುವ ಮುಸುಕು (ಕವಚ) ಇರುವುದರಿಂದಲೋ ಏನೋ ಇದಕ್ಕೆ ಮುಸುಕಿನ ಬದನೆ ಎಂದು ಹೆಸರು ಬಂದಿರಬಹುದು. ದೊಡ್ಡ ಹೈಬ್ರೀಡ್ ಟೊಮೆಟೋ ಗಾತ್ರ. ಮೊಟ್ಟೆ ಹಣ್ಣಿನ ಗಾತ್ರಕ್ಕೂ ಹೋಲಿಸಬಹುದು. ಇದರ ಎಲೆಗಳು ಥೇಟ್ ದತ್ತೂರದ ಎಲೆಯ ಹಾಗೆ. ಗಿಡದ ಗಂಟು ಗಂಟಿನಲ್ಲಿ ಚಿಗುರು. ಮುಳ್ಳುಗಳಿಲ್ಲ. ಒಂದಡಿ ಎತ್ತರಕ್ಕೆ ಬೆಳೆಯುತ್ತದೆ. ಬದನೆ ಬಲಿತು ಮಾಗುವಾಗ ಅರಶಿನ ಬಣ್ಣವಾಗಿ, ಕೊನೆಗೆ ಕಪ್ಪಾಗುತ್ತದೆ.

                "ಇದಕ್ಕೆ ರೋಗವಿಲ್ಲ ಸಾರ್, ಯಾವುದೇ ರೋಗ ಅಟ್ಯಾಕ್ ಆಗಿಲ್ಲ. ಮುಸುಕಿನ ಬದನೆ ಜತೆಗೆ ಊರಿನ ಬದನೆಯನ್ನೂ ನೆಟ್ಟಿದ್ವಿ. ಅದು ರೋಗದಿಂದಾಗಿ ಕಾಯಿ ಕೊಡಲೇ ಇಲ್ಲ." ನಾರಾಯಣ ಬೇಸರ. ಕೆಲವೊಂದು ಬದನೆ ತಳಿಗಳಲ್ಲಿ ಕಾಯಿಕೊರಕ ಹುಳದ ಬಾಧೆಯಿಂದಾಗಿ ಕಾಯಿ ಸಿಕ್ಕರೂ ಉಪಯೋಗಕ್ಕಿಲ್ಲ. ಮುಸುಕಿನ ಬದನೆಗೆ ಕಾಯಿಕೊರಕ ಬಾಧೆ ಇಲ್ಲ. ಬಹುಶಃ ಇದು ಈ ಭಾಗಕ್ಕೆ ಹೊಸದಲ್ವಾ. ಒಂದೆರಡು ವರುಷದಲ್ಲಿ ಹುಳಕ್ಕೆ ರುಚಿ ಸಿಕ್ಕಿ ಇದಕ್ಕೂ ಬಾರದು ಎನ್ನುವಂತಿಲ್ಲ,' ಶಿವಕುಮಾರ್ ಗುಮಾನಿ.

                   ಖಾದ್ಯ ಮಾಡುವಾಗ ಹೋಳುಗಳನ್ನು ಹುಳಿ ಮಜ್ಜಿಗೆಯಲ್ಲಿ ಸ್ವಲ್ಪ ಹೊತ್ತು ನೆನಸಿದರೆ ಚೊಗರು (ಕನೆರು) ಬಿಟ್ಟುಕೊಡುತ್ತದೆ. ಪದಾರ್ಥ ಮಾಡುವಾಗ ಬೆಲ್ಲ ಸೇರಿಸಿಕೊಂಡರೆ ಚೊಗರು ನಾಪತ್ತೆ. ಖಾದ್ಯಕ್ಕೆ ಎಳೆಯ ಕಾಯಿ ಓಕೆ. ಸಾಂಬಾರು, ಕಾಯಿಹುಳಿ, ಪಲ್ಯಕ್ಕೆ ಹೊಂದುತ್ತದೆ.

                   ಕಡಿಮೆ ನೀರು ಬೇಡುವ ತಳಿ. ಹೆಚ್ಚು ಆರೈಕೆ ಬೇಡ. ಹಿತ್ತಿಲಿನಲ್ಲಿ ಒಂದೆರಡು ಗಿಡವಿದ್ದರೆ ಸದಾ ಕಾಯಿ ಬಿಡುತ್ತಿರುತ್ತದೆ. "ಕೊಡಗಿನ ಭಾಗದಲ್ಲಿ ತರಕಾರಿಯನ್ನು ಆಯ್ಕೆ ಮಾಡಲು ಬಹುತೇಕರಿಗೆ ಗೊತ್ತಿಲ್ಲ. ಮಾಮೂಲಿ ಬೀನ್ಸ್, ಟೊಮೆಟೋ, ಹೂಕೋಸು, ಆಲೂಗೆಡ್ಡೆ.. ಇತ್ಯಾದಿ. ಹೊಸದನ್ನು ಹುಡುಕುವ ಮನಸ್ಸು ಬೇಕು," ಎನ್ನುವ ಶಿವಕುಮಾರ್, ಮುಸುಕಿನ ಬದನೆಗೆ ಕುದನೆಯನ್ನು ಕಸಿ ಮಾಡುವ ಯೋಚನೆಯಲ್ಲಿದ್ದಾರೆ.

                 ಈಚೆಗೆ ಮಡಿಕೇರಿ ಸಂತೆಗೆ ಬಂದ ಉದ್ದ ಗಾತ್ರದ ಟೊಮೆಟೋ ಇವರ ಕಣ್ಣಿಗೆ ಬಿತ್ತು. ಅದನ್ನು ಕ್ಲಿಕ್ಕಿಸಿ ಮಿಂಚಂಚೆಯಲ್ಲಿ ಆಸಕ್ತರಿಗೆ ರವಾನಿಸಿದರು. ಕರಿಂಗಾಣದ ಡಾ. ಕೆ.ಎಸ್.ಕಾಮತರು ಇದು ’ಇಟೆಲಿ ಟೊಮೆಟೋ’ ಎಂದು ಪತ್ತೆ ಮಾಡಿದರು. ಮುಂದಿನ ತಳಿ ಅಭಿವೃದ್ಧಿಗೆ ಇಟೆಲಿ ಟೊಮೆಟಾದ ಡಾಟಾ ಶಿವಕುಮಾರರ ಕಂಪ್ಯೂ ಸೇರಿತು.

                 ವೃತ್ತಿ ಸಂಬಂಧಿ ವಿಚಾರವಾಗಿ ಓಡಾಡುತ್ತಾ ಇರುವ ಶಿವಕುಮಾರರ ಜೋಳಿಗೆಯಲ್ಲಿ ಕ್ಯಾಮರಾ ತಪ್ಪುವುದೇ ಇಲ್ಲ. ತನಗೆ ಹೊಸತು ಕಂಡರೆ ಸಾಕು, ಕ್ಲಿಕ್ಕಿಸಿ ಕಂಪ್ಯೂ ಸೇರಿಸಿ ಅದರ ಹಿಂದೆ ಬೀಳುತ್ತಾರೆ. ಡಾಟಾ ಸಂಗ್ರಹಿಸುತ್ತಾರೆ. ಅವರ ಈ ವಿಶೇಷ ಹವ್ಯಾಸದಿಂದಾಗಿಯೇ ಅವರ ಗಾಳಿಬೀಡು ಮತ್ತು ಪೆರಿಯಪಟ್ಟಣ ತೋಟಗಳಲ್ಲಿ ವಿವಿಧ ಹಣ್ಣು, ತರಕಾರಿ, ಸಸ್ಯಗಳ ಸಂಗ್ರಹಗಳಿವೆ. (94480 05614)

Thursday, March 14, 2013

ಬಜಕೂಡ್ಲು ಗೋಶಾಲೆಗೆ `ಬ್ರೀಡ್ ಸೇವಿಯರ್ ಪ್ರಶಸ್ತಿ’

             ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆಗಾಗಿ ಪೆರ್ಲ ಬಜಕೂಡ್ಲಿನ 'ಅಮೃತಧಾರಾ' ಗೋಶಾಲಗೆ `ಬ್ರೀಡ್ ಸೇವಿಯರ್' ಪ್ರಶಸ್ತಿ ಪ್ರಾಪ್ತವಾಗಿದೆ.. ಮಾರ್ಚ್ 8 ರಂದು ಹರಿಯಾಣದ ಕರ್ನಾಲಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆದಿತ್ತು.

              ಒಂದೆರಡು ಲೀಟರು ಹಾಲು ನೀಡಿ, ಜನರಿಂದ ಉಪೇಕ್ಷಿಸಲ್ಪಡುತ್ತಿದ್ದ ಕಾಸರಗೋಡು ತಳಿಯ ಗೋವುಗಳನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಹಿರಿಮೆ ಪೆರ್ಲದ ಬಜಕೂಡ್ಲಿನ `ಅಮೃತಧಾರಾ' ಗೋಶಾಲೆಗೆ ಸಲ್ಲುತ್ತದೆ. ಈ ತಳಿಯ ಅತ್ಯುತ್ತಮ ಹಸು ಮತ್ತು ಹೋರಿಗಳನ್ನು ಹುಡುಕಿ ತಳಿ ಅಭಿವೃದ್ಧಿ ಪಡಿಸಿದ ಪರಿಣಾಮವಾಗಿ ಈಗ ಈ ತಳಿಯ ಹಸುಗಳು ನಾಲ್ಕರಿಂದ ಐದು ಲೀಟರ್ ತನಕ ಹಾಲು ನೀಡಲಾರಂಭಿಸಿವೆ. ಏಳು ವಿವಿಧ ಬಣ್ಣಗಳಲ್ಲಿರುವ ಕಾಸರಗೋಡು ತಳಿಯ ಹಸುಗಳನ್ನು ಹುಡುಕಿ ಈ ಗೋಶಾಲೆಯಲ್ಲಿ ಸಾಕಲಾಗುತ್ತಿದೆ. ಈ ಗೋವುಗಳೆಲ್ಲವನ್ನೂ ಶೂನ್ಯ ಬಂಡವಾಳದ ಸಾಕಣಿಕೆ ಮತ್ತು ಕೃಷಿಗೆ ಯೋಗ್ಯವಾಗುವಂತೆ ಮಾಡಲಾಗಿದೆ. ಕೇರಳದಾದ್ಯಂತ 240 ಮನೆಗಳನ್ನು ಗುರುತಿಸಿ 642 ಕಾಸರಗೋಡು ತಳಿಯ ಗೋವುಗಳನ್ನು ಯೋಜನೆಯು ವಿತರಿಸಿದೆ.

                ಭಾರತೀಯ ಜೀವವೈವಿಧ್ಯ ಇಲಾಖೆ ಮತ್ತು `ಸೇವಾ' ಸಂಸ್ಥೆಯ ಸಹಯೋಗದಲ್ಲಿ `ನ್ಯಾಷನಲ್ ಬ್ಯೂರೋ ಓಫ್ ಎನಿಮಲ್ ಜೆನೆಟಿಕ್ ರಿಸೋರ್ಸಸ್ ((NBAGR) ಸಂಸ್ಥೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ NBAGR ನಿರ್ದೇಶಕ ಡಾ|ಬಿ.ಕೆ.ಜೋಷಿ `ಬ್ರೀಡ್ ಸೇವಿಯರ್ ಅವಾರ್ಡ್ - 2012'ನ್ನು ವಿತರಿಸಿದರು.

                 ಕಾಸರಗೋಡ್ ಬ್ರೀಡ್ ಕನ್ಸರ್ವೇಶನ್ ಚಾರಿಟೇಬಲ್ ಟ್ರಸ್ಟ್ ಇದರ `ಅಮೃತಧಾರಾ' ಗೋಶಾಲೆಯ ಅಧ್ಯಕ್ಷ ಜಗದೀಶ.ಬಿ.ಜಿ ಮತ್ತು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ `ಕಾಮದುಘಾ' ಯೋಜನೆಯ ಗೋ ಬ್ಯಾಂಕಿನ ಕೇರಳ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳಯ ಪ್ರಶಸ್ತಿಯನ್ನು ಸ್ವೀಕರಿಸಿದರು.

Friday, March 8, 2013

ಸಾಧನೆಯ ಜತೆಗೆ ಸರಸವಾಡಿದ ಕೃಷಿಕ ವಿಜ್ಞಾನಿ


               "ಕೃಷಿಯು ಕೈಗಾರಿಕೆಯಾಗಬಾರದು. ಜೀವನ ವಿಧಾನವಾಗಬೇಕು. ಕೈಗಾರಿಕೆಯಾದರೆ ಕೃಷಿ ನಾಶವಾಗುತ್ತದೆ," ಎಂದು ಅಡ್ಡೂರು ಶಿವಶಂಕರ ರಾಯರು (91) ನಾಲ್ಕು ದಶಕದ ಹಿಂದೆಯೇ ಎಚ್ಚರಿಸಿದುದು ಈಗ ಸತ್ಯವಾಗುತ್ತಿದೆ! ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ 'ಮಾಡಿ-ಬೇಡಿ'ಗಳನ್ನು ಹೇಳಿದ ಕೃಷಿಕ ವಿಜ್ಞಾನಿ.

                ಅಡ್ಡೂರು ಸ್ವಾತಂತ್ರ್ಯ ಹೋರಾಟಗಾರ. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಆದ್ಯ ಸಂಘಟಕ. ಬಾಲ್ಯದಲ್ಲೇ ಬಡತನ ಕಷ್ಟದ ಸ್ವಾನುಭವಿ. ಗ್ರಾಮೀಣ ಭಾರತದ ಬದುಕಿನತ್ತ ಕಳಕಳಿ. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಗಳು ತನ್ನ ಯೋಚನೆಗಳನ್ನು ಸ್ಪರ್ಶಿಸುತ್ತಿದ್ದುದರಿಂದ ಪಕ್ಷವನ್ನು ಒಪ್ಪಿಕೊಂಡು ಅದರ ಬೆಳವಣಿಗೆಯ ಅಡಿಗಲ್ಲಾದರು.

                 ಕನ್ನಾಡಿನಾದ್ಯಂತ ಬಡವರ ದನಿಯಾದರು. ಕಾರ್ಮಿಕ ಹೋರಾಟದ ನಾಯಕರಾದರು. ಸೆರೆಮನೆ ಸೇರಿದರು. ಪಕ್ಷ ನಿಷೇಧವಾದಾಗ ಭೂಗತರಾಗಿ ಹಳ್ಳಿ, ಕೇರಿಗಳಲ್ಲಿ ವಾಸ. ಅನ್ನ ನೀರಿಲ್ಲದ ದುಡಿತ. ಪಕ್ಷ ಹೋಳಾದಾಗ ಮರುಗಿದರು. ಯಾರ ಪರವೂ ನಿಲ್ಲದೆ ಹೊರಗೆ ಬಂದರು.

                 ಕೃಷಿ ಮತ್ತು ಕೃಷಿಕನನ್ನು ದೇಶದ ಆಡಳಿತ ವ್ಯವಸ್ಥೆಗಳು 'ಯೂಸ್ ಅಂಡ್ ಥ್ರೋ' ಮಾಡುತ್ತಾ ಬದುಕಿನೊಂದಿಗೆ ಆಟವಾಡುತ್ತಿವೆ. ಅದಕ್ಕಾಗಿ ಕೃಷಿಕನೇ ರೂಪಿಸುವ ನೀತಿ ಬೇಕು, ಎಂಬ ಯೋಜನೆ ಮನದಲ್ಲಿತ್ತು. ಪಕ್ಷದಿಂದ ದೂರ ನಿಂತ ಬಳಿಕ ಯೋಜನೆಯನ್ನು ಗಟ್ಟಿ ಮಾಡಲು ಅಡ್ಡೂರಿನ ಸ್ವಂತ ಭೂಮಿಯಲ್ಲಿ ಕೃಷಿಗಿಳಿದರು.

                  ಕೃಷಿ ಸಂಸ್ಕೃತಿಯನ್ನು ಹುಟ್ಟು ಹಾಕುವಂತಹ, ರಕ್ಷಿಸುವಂತಹ ಹೋರಾಟಗಳು ಹಳ್ಳಿಗಳಲ್ಲಾಗಬೇಕು. ಬೇಡಿಕೆಗಳೇ ಮುಖ್ಯವಾಗಿರುವ ಹೋರಾಟಗಳಿಂದ ಮನಸ್ಸುಗಳು ಒಂದಾಗಲಾರವು, ಇವರ ನಿಲುವುಗಳು, ಮುಂದೆ ಕೃಷಿ ಕೆಲಸಗಳಲ್ಲಿ ಕಾಣುತ್ತಿತ್ತು. ಎಲ್ಲಾ ಕೆಲಸಗಳಲ್ಲೂ ಕೃಷಿ ಸಮುದಾಯದ ಹಿತಾಸಕ್ತಿ.

                    1960ನೇ ಇಸವಿ. ಪೊಳಲಿ ಸನಿಹದ ಅಡ್ಡೂರಿನಲ್ಲಿ ಪಾಲಿಗೆ ಸಿಕ್ಕಿದುದು ಆರೆಕ್ರೆ 'ಮುಳೀಪಡ್ಪು' ಭೂಮಿ. ಫಲವತ್ತಲ್ಲದ ಜಂಬಿಟ್ಟಿಗೆ ಮಣ್ಣು. ಅಡಿಕೆ ಕೃಷಿಯ ಹೊರತಾಗಿ ಮಿಶ್ರ ಕೃಷಿಯತ್ತ ನೀಲನಕ್ಷೆ. ಮೊದಲಿಗೆ ಗಂಗಬೊಂಡಂ, ಜಾವಾ, ಫಿಲಿಫೈನ್ಸ್, ಅಂಡಮಾನ್ ಜಾಯಿಂಟ್, ಮಲೇಶಿಯಾ.. ಹೀಗೆ ವಿವಿಧ ತೆಂಗು ತಳಿಗಳ ಅಭಿವೃದ್ಧಿ. ಜತೆಗೆ ಕಾಳಪ್ಪಾಡಿ, ಬೆನೆಟ್ ಆಲ್ಫಾನ್ಸೋ, ಬಾದಾಮಿ, ಪೈರಿ.. ಉತ್ತಮ ತಳಿಯ ಮಾವಿನ ಗಿಡಗಳ ನಾಟಿ. ತೆಂಗಿನ ಮಧ್ಯೆ ಗೇರು, ಚಿಕ್ಕು, ದೀವಿಹಲಸು, ಲವಂಗ ಗಿಡಗಳು. ತೋಟದ ಒಂದು ಬದಿಯಲ್ಲಿ ಬಿದಿರು ಸಂಸಾರ.

                  ಕೃಷಿ ಇಲಾಖೆಗಳ ಸಲಹೆಯಂತೆ ಭತ್ತದಲ್ಲಿ ಜಪಾನ್ ಕೃಷಿ ಪದ್ಧತಿ ಅಳವಡಿಕೆ. ರಾಸಾಯನಿಕ ಗೊಬ್ಬರ, ಸಿಂಪಡಣೆಗಳ ಪ್ರಯೋಗ. ಒಂದು ವರ್ಷ ಇಳುವರಿ ಹೆಚ್ಚು ಬಂದರೂ, ನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದುವು. ಇದು ರಾಸಾಯನಿಕದ ಮಹಿಮೆ ಎಂದು ಬಾಯಿತುಂಬಾ ನಕ್ಕ ದಿವಸಗಳು ನೆನಪಾಗುತ್ತವೆ.

                'ನಿಮ್ಮ ಮಣ್ಣು ಚೆನ್ನಾಗಿದೆ. (ಫಲವತ್ತಾಗಿಲ್ಲ ಎಂಬುದು ಅಡ್ಡೂರರಿಗೆ ಗೊತ್ತಿತ್ತು) ನೆಲಗಡಲೆ ಬೆಳೆದು ಲಾಭ ಪಡೆಯಿರಿ, ಅಧಿಕಾರಿಗಳಿಂದ ಮನವೊಲಿಕೆ. ನೆಲಗಡಲೆ ಕೃಷಿಗೆ ಶ್ರೀಕಾರ. ಕಟಾವ್ ಹಂತಕ್ಕೆ ಬಂದಾಗ ಎಲ್ಲಿದ್ದವೋ ಏನೋ ಇರುವೆಗಳ ಧಾಳಿ. 'ಒಂದು ಸೇರು ಕಡಲೆ ಸಿಕ್ಕಿಲ್ಲ ಮಾರಾಯ್ರೆ,' ಎಂದಿದ್ದರು. ನೆಲಗಡಲೆ ಕೃಷಿಯ ಫೈಲ್ ಮುಚ್ಚಿದಾಗ, ಜೋಳ ಬೆಳೆಯುವತ್ತ ಆಸಕ್ತರಾಗಿ ಉತ್ತಮ ತಳಿಯ ಜೋಳ ಬೆಳೆದರು. ಆಳೆತ್ತರದ ಸಸಿಗಳು. ಕಾಳುಕಟ್ಟುವ ಹೊತ್ತಿಗೆ ಗಿಳಿಗಳ ಸೈನ್ಯ ಆಕ್ರಮಣ. ಕೈಗೆ ಬಂದ್ರೂ ಬಾಯಿಗೆ ಬರಲಿಲ್ಲ.

                 ಹಿತೈಷಿಯೊಬ್ಬರ ಸಲಹೆಯಂತೆ 'ಸೀ-ಐಲ್ಯಾಂಡ್' ಹತ್ತಿಯ ಕೃಷಿ ಮಾಡಿದರು. ಖರ್ಚು-ವೆಚ್ಚದ ಲೆಕ್ಕ ಸರಿಸಮವಾಗಿತ್ತು. ಆಗ ಸರಕಾರ ಹತ್ತಿ ಪ್ಯಾಕೇಜನ್ನು ರದ್ದು ಮಾಡಿತ್ತು. ಹಲವಾರು ಸಿಂಪಡಣೆಯನ್ನು ಬೇಡುತ್ತಿದ್ದ ಹತ್ತಿಯ ಸಹವಾಸ ಹಿತವಾಗದೆ ವಿದಾಯ. ಬಳಿಕ ಕಬ್ಬು, ರಾಗಿಗಳ ಸರದಿ.
 
                     ಅಡ್ಡೂರು ಚಿತ್ತ ಕಾಡು ಮರಗಳ ಕೃಷಿಯತ್ತ ಹೊರಳಿತು. ಮಾಹಿತಿಗಾಗಿ ಇಲಾಖೆಗಳ ಭೇಟಿ. ಆಪ್ತರ ಸಂಪರ್ಕ. ಮರ ಬೆಳೆದರೂ ಅದನ್ನು ಕಡಿಯಲು ಸರಕಾರದ ಕಿರಿಕಿರಿ ತಪ್ಪಿದ್ದಲ್ಲ. ಕಡಿಯದ ಮರದಿಂದ ನನಗೆ ಏನು ಪ್ರಯೋಜನ? ಮೊಳಕೆಯಲ್ಲೇ ಮರ ಕೃಷಿಯ ಆಸೆ ಕಮರಿತು ಮ್ಯಾಂಜಿಯಂ, ಸಾಗುವಾನಿ.. ಮೊದಲಾದ ಮರಗಳು ಹದಿನೈದು ವರುಷಗಳಲ್ಲಿ ಒಳ್ಳೆಯ ಆದಾಯ ಬರುತ್ತದೆ ಎಂಬ ಪ್ರಚಾರವಿದೆಯಲ್ಲಾ ಅದೆಲ್ಲಾ ಸುಳ್ಳು. ಕೃಷಿಕರನ್ನು ದಾರಿ ತಪ್ಪಿಸುವ ಪ್ರಚಾರ, ಅಡ್ಡೂರರ ಖಡಕ್ ಮಾತಿನಲ್ಲಿ ಸಂದೇಶವಿಲ್ವಾ.

                     ತನ್ನೂರಿನ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಶಿಕ ಉತ್ಸವ ಎಪ್ರಿಲಿನಲ್ಲಿ ನಡೆಯುತ್ತಿದೆ. ಜಾತ್ರೆಯ ದಿವಸಕ್ಕೆ ಇಳುವರಿ ಬರುವಂತೆ ಕೃಷಿಕರು ಕಲ್ಲಂಗಡಿ ಬೆಳೆಯುತ್ತಾರೆ. ಇದರ ಮೂಲ ತಳಿಯ ರುಚಿ ಸಪ್ಪೆ. ಬಾಯಾರಿಕೆ ನೀಗುತ್ತಿತ್ತಷ್ಟೇ. ಸಪ್ಪೆ ಕಲ್ಲಂಗಡಿಯ ಬದಲಿಗೆ ಸಿಹಿಯದನ್ನು ಬೆಳೆದರೆ ಹೇಗೆ?

                     ಬೀಜ ಮಾರಾಟಗಾರರ ಸಂಪರ್ಕ. ಫರೂಕ್ಕಾಬಾದಿ, ಫೈಜಾಬಾದಿ, ಶುಗರ್ಬೇಬಿ, ಅಶಾಯಿ ಯಮಾಟೋ, ಮಧು ತಳಿಗಳ ಬೀಜಗಳು ಸಿಕ್ಕಿತು. ಪರೀಕ್ಷಾರ್ಥವಾಗಿ ಬೆಳೆದರು. ಇದರಲ್ಲಿ ಅಶಾಯಿ ಯಮಾಟೋ ಮತ್ತು ಮಧು ತಳಿಗಳ ಕಲ್ಲಂಗಡಿಯಿಂದ ಬಾಯಿ ಸಿಹಿಯಾಯಿತು. ಜನರು ಮುಗಿಬಿದ್ದು ತಿಂದರು. ಕಾಸು ಮಾತ್ರ ಕೈಗೆ ಬರಲಿಲ್ಲ.

                       ಮುಂದಿನ ವರುಷ ಕಂಪೆನಿಯಿಂದಲೇ ಬೀಜ ತರಿಸಿ ಕೃಷಿ ಮಾಡಬೇಕಾಗಿತ್ತು. ಬೀಜದ ದರವೂ ದುಬಾರಿ. ಕೃಷಿಕರು ಉಮೇದು ತೋರಲಿಲ್ಲ. ಹೈಬ್ರಿಡ್ ಬೀಜವನ್ನು ತನ್ನಲ್ಲೇ ತಯಾರಿ ಮಾಡಲು ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡು ಕಲ್ಲಂಗಡಿ ಬೆಳೆದರು. ಅದೇನೂ ಹೇಳುವಂತಹ ಖುಷಿ ಕೊಡಲಿಲ್ಲ.

                    ಅಡ್ಡೂರರ ಜತೆ ಅವರ 'ಕೃಷ್ಣಾ ಫಾರ್ಮ್’ ನಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಹೇಳಿದ ನೆನಪು, ರಾಸಾಯನಿಕ ಗೊಬ್ಬರ, ವಿಷ ಸಿಂಪಡಣೆಯನ್ನು ಸರಕಾರವು ಕೃಷಿಕರ ಕೈಗೆ ಕೊಟ್ಟಿತು. ಒಂದಷ್ಟು ಸಮಯದ ಬಳಿಕ ಸಾವಯವ ಕೃಷಿ ಮಾಡಿ ಉತ್ಪತ್ತಿ ಚೆನ್ನಾಗಿ ಬರುತ್ತದೆ. ಯಾರನ್ನು ನಂಬಲಿ ಮಾರಾಯ್ರೆ. ಸೊಪ್ಪಿನ ಗುಡ್ಡಗಳೇ ಇಲ್ಲದ ಮೇಲೆ ಹೇಗೆ ಸಾವಯವ ಕೃಷಿ ಮಾಡಲಿ.

                       ಐವತ್ತರ ದಶಕದಲ್ಲಿ ಮದ್ರಾಸು ಪ್ರಾಂತ್ಯದ ಕೃಷಿ ನಿರ್ದೇಶಕರೊಬ್ಬರು ಭಾರತದ ರೈತನಿಗೆ ಗ್ಲಿರಿಸೀಡಿಯಾ ದೊಡ್ಡ ಕೊಡುಗೆ ಎಂದಿದ್ದರು. ಗ್ರಾಮಸೇವಕರು, ಇಲಾಖೆ ಅಧಿಕಾರಿಗಳು ನೆಡಲು ಒತ್ತಾಯ ಮಾಡಿದ್ದರು. ಗದ್ದೆಯ, ತೋಟದ ಬದುಗಳಲ್ಲಿ ಗ್ಲಿರಿಸೀಡಿಯಾ ನೆಟ್ಟಾಗ ಗೇಲಿ ಮಾಡಿದವರು ಹೆಚ್ಚು. ಈಗದು ವ್ಯಾಪಕವಾಗಿದೆ.

                    ಅಡ್ಡೂರು ಶಿವಶಂಕರ ರಾಯರಿಗೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವಿತ್ತು. ಸೆಮಿನಾರು, ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಭಾಷಣಗಳನ್ನು ಕೇಳಿ ಬರುವವರಲ್ಲ, ವಿಚಾರದ ಸತ್ಯಾಸತ್ಯತೆಗಳನ್ನು ಪೋಸ್ಟ್ಮಾಟಂ ಮಾಡುತ್ತಿದ್ದರು. ಸಭೆಗಳಲ್ಲಿ ಪ್ರಶ್ನೆ ಕೇಳಲು ಎದ್ದುನಿಂತಾಗ ಬೆವರದ ಅಧಿಕಾರಿಗಳು ಕಡಿಮೆ! ವಿವಿಧ ಪ್ರಯೋಗಗಳನ್ನು ತನ್ನ ಭೂಮಿಯಲ್ಲಿ ಮಾಡುತ್ತಿದ್ದುದರಿಂದ ಅದನ್ನು ನೋಡಲು ಕೃಷಿಕರು, ಇಲಾಖೆಯವರು ಕ್ಷೇತ್ರ ಭೇಟಿ ಮಾಡುತ್ತಿದ್ದರು.
 
                     ಅಡ್ಡೂರು ಅವರಿಗೆ ಪುಸ್ತಕವು ಎರಡನೇ ಸಂಗಾತಿ. ಮೂರು ಸಾವಿರಕ್ಕೂ ಮಿಕ್ಕಿದ ಪುಸ್ತಕ ಸಂಗ್ರಹ. ಶೋಕಿಗಾಗಿ ಅಲ್ಲ, ಓದಿ ಮನನಿಸಿದ್ದಾರೆ. ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ತಂದೆಯವರ ಪುಸ್ತಕ ಓದಿನ ಹವ್ಯಾಸದಿಂದಾಗಿ ನಮಗೂ ಪುಸ್ತಕ ಓದುವ ಹುಚ್ಚು ಬಂದುಬಿಟ್ಟಿದೆ," ಎನ್ನುತ್ತಾರೆ ಚಿರಂಜೀವಿ ಅಡ್ಡೂರು ಕೃಷ್ಣ ರಾವ್. ಯಾವುದೇ ಸಮಾರಂಭಕ್ಕೆ ಹೋದಾಗಲೂ ನೋಟ್ಸ್ ಮಾಡಿಟ್ಟುಕೊಳ್ಳುವುದು ರಾಯರ ಅಭ್ಯಾಸ. ಎಲ್ಲಾ ನೋಟ್ಸ್ಗಳನ್ನು ಮುಂದಿಟ್ಟುಕೊಂಡು ಬರೆಯಲು ಶುರು ಮಾಡಿದರೆ ಬಹುಶಃ ಅದೇ ದಕ್ಷಿಣ ಕನ್ನಡದ ಕೃಷಿಯ ಇತಿಹಾಸವಾಗಬಹುದೇನೋ?

                     ಕೃಷಿ ಪ್ರವಾಸ, ಸಂಘಟನೆಗಳ ರೂಪೀಕರಣದಲ್ಲಿ ಅನುಭವ ವಿಸ್ತಾರ ಪಡೆದ ಅಡ್ಡೂರರು, "ಕೃಷಿಕನಾದವನಿಗೆ ಹೆಂಡತಿ, ಮಕ್ಕಳು ಮನೆಯಲ್ಲಿದ್ದುಕೊಂಡು, ಕೃಷಿಯ ಸಹಾಯ ಮಾಡಿಕೊಂಡಿದ್ದರೇನೇ ಸಂತೃಪ್ತಿ, ಸಮಾಧಾನ, ಖುಷಿ. ಆ ಭಾಗ್ಯ ನನಗಿರಲಿಲ್ಲ," ಎನ್ನುವಾಗ ಅವರ ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಕಂಡಿದ್ದೆ. ಇಡೀ ಬದುಕನ್ನು ಒಂದೇ ವಾಕ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

                 ಬದುಕಿನ ಪಥದಲ್ಲಿ ಸಿಗುವ ಜ್ಞಾನವನ್ನೆಲ್ಲಾ ಆಪೋಶನ ಮಾಡುವ ಅವ್ಯಕ್ತ ಶಕ್ತಿಯನ್ನು ಹೊಂದಿದ್ದ ಅಡ್ಡೂರು ಶಿವಶಂಕರ ರಾಯರು ಫೆ.19, 2013ರಂದು ವಿಧಿವಶರಾದರು. ಅರಸಿ ಬಂದ ಅವಕಾಶಗಳನ್ನೆಲ್ಲಾ ನಿರಾಕರಿಸಿ ಸಾಧನೆಯ ಜತೆಗೆ ಸರಸವಾಡಿದ್ದಾರೆ. ಸಾಮಾನ್ಯರ ಮಧ್ಯೆ ಸದ್ದಿಲ್ಲದೆ ಅಸಾಮಾನ್ಯರಾಗಿ ಬೆಳೆದರು. ಆದರ್ಶಗಳು ಮರೀಚಿಕೆಯಾಗುವ ಈ ದಿನಮಾನದಲ್ಲಿ ಅಡ್ಡೂರರು 'ಬದುಕಿ ಬಾಳಿದ ಮಾದರಿ ಬದುಕಿನ' ಚಿತ್ರವನ್ನು ಬಿಟ್ಟುಹೋಗಿದ್ದಾರೆ.

Saturday, March 2, 2013

ಹಲಸು ಚಿತ್ರಕ್ಕೆ ಪುರಸ್ಕಾರ



               'ಕಿಸಾನ್ ಫಾರಮ್ ಪ್ರೈ ಲಿ." ಇವರ ಜಾಲತಾಣ ನಡೆಸಿದ 'ಕೊಯ್ಲು' (ಹಾರ್ವೆಸ್ಟ್ ) ಛಾಯಾಚಿತ್ರ ಸ್ಪರ್ಧೆ'ಯಲ್ಲಿ ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಸಂಪಾದಕ 'ಶ್ರೀ' ಪಡ್ರೆಯವರ ಲಾರಿಗೆ ಹಲಸಿನಕಾಯಿ ಲೋಡ್ ಮಾಡುತ್ತಿರುವ ಛಾಯಾಚಿತ್ರ ದ್ವಿತೀಯ ಪುರಸ್ಕಾರವನ್ನು ಪಡೆದಿದೆ.

              ಪುರಸ್ಕಾರ ಮೊತ್ತ ಮೂರು ಸಾವಿರ ರೂಪಾಯಿ. ಸ್ಪರ್ಧೆ ಆಯ್ಕೆಗೆ ನೂರ ಅರುವತ್ತನಾಲ್ಕು ಛಾಯಾಚಿತ್ರಗಳು ಬಂದಿದ್ದುವು. ಪ್ರಥಮ ಪುರಸ್ಕಾರ ಅನುಪಮ ಪೌಲ್ ಪಡೆದರೆ, ತೃತೀಯ ಪುರಸ್ಕಾರ ಗಳಿಸಿದವರು ಸೊನಾಲಿ ಬಿಸಿ.

              ಉತ್ತರ ಭಾರತದಲ್ಲಿ ತರಕಾರಿಯಾಗಿ ಬಳಕೆ ಮಾಡಲು ಕೇರಳದಿಂದ ಪ್ರತಿವರ್ಷ ಅರ್ಧ ಲಕ್ಷ ಟನ್ ಎಳೆ ಹಲಸು ಸರಬರಾಜಾಗುತ್ತದೆ. ಎರ್ನಾಕುಲಂ ಬಳಿಯ ಪೆರುಂಬಾವೂರು ಇದರ ಸರಬರಾಜು ಕೇಂದ್ರ. ಪುರಸ್ಕಾರ ಗಳಿಸಿರುವುದು ಗುಜ್ಜೆಯನ್ನು ಲೋಡ್ ಮಾಡುತ್ತಿರುವಾಗ ತೆಗೆದ ಶ್ರೀ ಪಡ್ರೆ ಅವರ ಮೇಲಿನ ಛಾಯಾಚಿತ್ರ.

Friday, March 1, 2013

ಬದುಕಿನ ಕೈತಾಂಗು ಈ ಕೃಷಿಮೇಳ


            ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯವು ವರುಷಕ್ಕೊಮ್ಮೆ ಅದ್ದೂರಿ ಕೃಷಿಮೇಳವನ್ನು ಆಯೋಜಿಸುತ್ತದೆ. ಐನೂರಕ್ಕೂ ಮಿಕ್ಕಿದ ಮಳಿಗೆಗಳು, ಸಮಸ್ಯೆಯತ್ತ ನೋಟ ಬೀರುವ ಗೋಷ್ಠಿಗಳು, ಸಾಧಕರಿಗೆ ಪ್ರಶಸ್ತಿಗಳು, ದೂರದೂರಿನ ಕೃಷಿಕರ ಭಾಗಿ, ನಾಡಿನ ದೊರೆಗಳ ಅಣಿಮುತ್ತುಗಳು.. ಹೀಗೆ ಮೂರ್ನಾಲ್ಕು ದಿವಸಗಳಲ್ಲಿ ಕೃಷಿಯದ್ದೇ ವಾತಾವರಣ. ಕೃಷಿ ಖುಷಿಯ ಮಾತುಕತೆ. ರಾಜ್ಯ ಮಟ್ಟದಲ್ಲಿ ನಡೆಯುವ ಯಶಸ್ವೀ ಕೃಷಿಮೇಳ.

                ನಮ್ಮ ನಡುವೆ ಧುತ್ತೆಂದು ರೂಪುಗೊಳ್ಳುವ ಸರಕಾರಿ ಪ್ರಣೀತ ಕೃಷಿ ಉತ್ಸವಗಳ ಗೋಷ್ಠಿಯಲ್ಲೊಮ್ಮೆ ಇಣುಕಿ. ಪ್ರೇಕ್ಷಕರಿಗಿಂತ (ಕೃಷಿಕರು) ಹೆಚ್ಚು ಮಂದಿ ವೇದಿಕೆಯಲ್ಲಿರುತ್ತಾರೆ. 'ಅವರೆ.. ಇವರೇ..' ಎನ್ನುತ್ತಾ ಶುರುವಾಗುವ ಕೊರೆತಗಳು ಕೃಷಿಕನನ್ನು ಟಚ್ ಮಾಡುವುದಿಲ್ಲ! 'ನಾವು ಜಾಹೀರಾತು ನೀಡಿದ್ದೀವಿ. ಇಲಾಖೆಗಳಿಗೆ ಆಮಂತ್ರಣ ಕೊಟ್ಟಿದ್ದೀವಿ, ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದೀವಿ..' ಹೀಗೆ ಕೃಷಿಕ ಅನುಪಸ್ಥಿತಿಗೆ ಸಬೂಬು ಹೇಳುವ ಮಾಮೂಲಿ ಸರಕಾರಿ ಖಯಾಲಿ ಉತ್ತರಗಳು.

                ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವರುಷಕ್ಕೊಮ್ಮೆ ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ನಡೆಸುತ್ತಿದೆ. ಸರಕಾರಿ ಕೃಷಿ ಉತ್ಸವಗಳ ವರಿಷ್ಠರು ಈ ಮೇಳದಲ್ಲಿ ಮನಃಪೂರ್ವಕ ಭಾಗವಹಿಸಬೇಕು. ಇಲ್ಲಿನ ಕಾರ್ಯಹೂರಣವನ್ನು ದಾಖಲಿಸಿ, ತಮ್ಮ ಮೇಳದಲ್ಲಿ ಮಾಮೂಲಿ 'ಶಿಷ್ಟಾಚಾರ'ವನ್ನು ಸಡಿಲಗೊಳಿಸಿ ಅನುಷ್ಠಾನಕ್ಕೆ ಪ್ರಯತ್ನಿಸಿದಾಗ ಉತ್ಸವಗಳ ಸ್ವರೂಪವೇ ಬದಲಾಗಿ ಬಿಡಬಹುದು. ರೈತ 'ಶೋಪೀಸ್' ಆಗುವುದರ ಬದಲು, ಆತನ ಮಾತಿಗೆ ಕಿವಿಯಾದಾಗ ಭಾವನೆಗಳು ಅನುಭವ ಕಥನ ಹೇಳುತ್ತವೆ.

                ಸರಕಾರಿ ಕಾರ್ಯಕ್ರಮದ ಇನ್ನೊಂದು ಮಗ್ಗುಲು ನೋಡೋಣ. ಕೃಷಿಕರ ಏಳ್ಗೆಗಾಗಿ ತರಬೇತಿ, ವಿಚಾರ ಸಂಕಿರಣಗಳು ಇಲಾಖೆಗಳ, ಸಂಶೋಧನಾ ಕೇಂದ್ರಗಳ ಪ್ಲೆಕ್ಸಿಯಡಿ ನಡೆಯುತ್ತವೆ. ಕೃಷಿಕರಿಗೆ ಅರ್ಥವಾಗದ, ಅಪ್ಡೇಟ್ ಆಗದ (!) ಪವರ್ಪಾಯಿಂಟ್ ಪ್ರಸ್ತುತಿ. ಆಂಗ್ಲ ಭಾಷೆಯಲ್ಲೇ ಮಾತನಾಡುವ ಹಿರಿತನ, ಹಿರಿಯ ವರಿಷ್ಠರಿಂದ ಬೋಧನೆ. ಉದ್ಘಾಟನೆ ಮುಗಿಯುವಾಗ ಭೋಜನ ಶಾಲೆಯಲ್ಲಿ ಅನ್ನದ ಬಟ್ಟಲು ಸದ್ದು ಮಾಡುತ್ತವೆ. ಮಿಕ್ಕುಳಿದ ಹೊತ್ತಲ್ಲಿ 'ಕೃಷಿಕ ಉದ್ಧಾರ'ದ ಕಲಾಪಗಳು. ಈ ವ್ಯವಸ್ಥೆಗಳು ಗೊತ್ತಿರುವ ಬಹಳಷ್ಟು ಕೃಷಿಕರು ದೂರವುಳಿಯುತ್ತಾರೆ.

                ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಮೇಳವನ್ನು ತೂಗಿ ನೋಡಿದರೆ ಕೃಷಿಕನಿಗಿಲ್ಲಿ ಮೊದಲ ಮಣೆ. ಆತನ ಮಾತಿಗೆ ಮನ್ನಣೆ. ಸುಖ ದುಃಖಗಳ ವಿನಿಮಯ. ಕೃಷಿಯ ಸೋಲಿನ ಕಥನ. ಗೆಲುವಿನ ದಾರಿ. ಮೂರು ದಿವಸಗಳ ಮೇಳದಲ್ಲಿ ಹಳ್ಳಿ ಸೊಗಡಿನ ವಾತಾವರಣ ರೂಪೀಕರಣ. ಕೃಷಿಕ ಇಲ್ಲಿ ಭಾಗವಹಿಸುವುದಲ್ಲ, ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವಿಕೆ.

                ಕೃಷಿ ಯಶೋಗಾಥೆಗಳಿಗೆ ಮೇಳದಲ್ಲಿ ಆದ್ಯತೆ. ಗೋಷ್ಠಿಗಳಲ್ಲಿ ಸಮಕಾಲೀನ ಸಮಸ್ಯೆ, ಸ್ಥಿತಿಗಳ ಪ್ರಸ್ತುತಿ. ವೇದಿಕೆಯಲ್ಲಿ ಕೃಷಿಕರೊಂದಿಗೆ ವಿಜ್ಞಾನಿಗಳಿರುತ್ತಾರೆ, ಅಧಿಕಾರಿಗಳಿರುತ್ತಾರೆ, ಅನುಭವಿಗಳಿರುತ್ತಾರೆ. ಬರೇ ಕೊರೆತವಾಗದೆ ಅನುಭವದ ರಸಪಾಕಗಳು ಪ್ರೇಕ್ಷಕರೊಂದಿಗೆ ಅನುಸಂಧಾನ ಮಾಡುತ್ತವೆ. ಕೃಷಿಯಲ್ಲಿ ಹೊಸ ಹೆಜ್ಜೆಯಿರಿಸಿದ ಕೃಷಿಕನಿಗೆ ಹುರುಪು. ಖುಷಿಯಿಂದ ಕೃಷಿಯಲ್ಲಿರಲು ಅನುವು ಮಾಡಿ ಕೊಡುವಷ್ಟು ಗೋಷ್ಠಿಗಳು ಸಂಪನ್ನವಾಗುವುದು ಮೇಳದ ಹೈಲೈಟ್ಸ್.

                ಗೋಷ್ಠಿಯಿಂದಾಗಿಯೇ ಖುಷಿ, ಸಮಸ್ಯೆ ಪರಿಹಾರ ಸಾಧ್ಯವೇ? ಪ್ರಶ್ನೆ ಸಹಜ. ಪ್ರಕೃತ ಕಾಲಘಟ್ಟದ ಕೃಷಿಕ್ಷೇತ್ರವನ್ನು ಗಮನಿಸಿ. ಸಮಸ್ಯೆಗಳಿವೆ ನಿಜ. ಬಹುತೇಕ ಸಮಸ್ಯೆಗೆ ಪರಿಹಾರವು ಕೈಗೆಟಕುವ ಅಂತರದಲ್ಲಿವೆ. ಕಾಲದ ಬದಲಾವಣೆಯಿಂದಾಗಿ ಇನ್ನೊಂದಿಷ್ಟು ನೆನೆಗುದಿಯಲ್ಲಿವೆ. ಸಮಸ್ಯೆಯನ್ನೇ ವೈಭವೀಕರಿಸುತ್ತಾ, ಅದಕ್ಕೆ ಪರಿಹಾರ, ಪರ್ಯಾಯ ದಾರಿಯನ್ನು ಹುಡುಕದೇ ಇರುವವರಿಗೆ ಗೋಷ್ಠಿಗಳು ನೀರಸವಾದರೆ ಆಶ್ಚರ್ಯವಿಲ್ಲ.

                 ಕೃಷಿಯ ಸಂಕಟದ ಸಮಯದಲ್ಲಿ ತಮ್ಮ ಮಿತಿಯಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಂಡ ಎಷ್ಟೊಂದು ಕೃಷಿಕರು ಇಲ್ಲ. ಇಂತಹವರ ಅನುಭವ ವಿನಿಮಯ ಗೊಣಗಾಟವನ್ನು ಸ್ವಲ್ಪ ಮಟ್ಟಿಗೆ ಹಗುರಗೊಳಿಸುವಲ್ಲಿ ಸಹಕಾರಿ. ಕೃಷಿಯಲ್ಲಿ ಸೋತವರು, ತಾನೆಲ್ಲಿ ಸೋತಿದ್ದೇನೆ ಎನ್ನುವ ಅನುಭವ ಇದೆಯಲ್ಲಾ, ಅದು ಇನ್ನೊಬ್ಬರಿಗೆ ಕೈತಾಂಗು.

                 ಇಂತಹ ಕೈತಾಂಗಿನ ಕೆಲಸವನ್ನು ಮಾಡುತ್ತಿದೆ, ಗ್ರಾಮಾಭಿವೃದ್ಧಿ ಯೋಜನೆ. ಅದರ ಮುಖವಾಣಿಯಾಗಿ ಕೃಷಿ ಮೇಳ ದೂರದೂರಿನ ಕೃಷಿಕರನ್ನು ಮೇಳದ ಮೂಲಕ ಒಗ್ಗೂಡಿಸುತ್ತಿದೆ. ಯಶೋಗಾಥೆಗಳನ್ನು ಮುಂದಿಡುತ್ತಿದೆ. ಸಾಧಕ ರೈತರನ್ನು ಗೌರವಿಸುತ್ತಿದೆ. ಮೇಳ ನಡೆಯುವ ಊರಿನ ಮರೆಯುವ, ಮರೆತುಹೋದ ವಿಚಾರಗಳಿಗೆ ಪ್ರಾತ್ಯಕ್ಷಿಕೆಯ ರೂಪ ಕೊಟ್ಟು, ಬದುಕನ್ನು ಇನ್ನೊಮ್ಮೆ ಓದಲು ನೆನಪಿಸುತ್ತದೆ.

                  ಕಮ್ಮಾರಿಕೆ, ಭತ್ತ ಕುಟ್ಟುವುದು, ಕುಂಬಾರಿಕೆ, ಮುಡಿ ಕಟ್ಟುವುದು, ಮುಟ್ಟಾಳೆ ತಯಾರಿ, ಬಿದಿರು-ಕಾಡುಬಳ್ಳಿಗಳ ಮೂಲಕ ಬುಟ್ಟಿಗಳನ್ನು ಹೆಣೆಯುವುದು, ನೇಗಿಲು, ನೊಗ.. ಹಳ್ಳಿಯ ಈ ಕೌಶಲಗಳು ಮರೆಯಾಗುತ್ತಿದ್ದು ಕಾಲದ ಕಥನಗಳಾಗಿವೆ. ಅವನ್ನೆಲ್ಲಾ ಪ್ರಾತ್ಯಕ್ಷಿಕೆಯಲ್ಲಿ ಮತ್ತೆ ನೋಡುವ ಅವಕಾಶ! 'ಓ.. ಇದೆಲ್ಲಾ ನಮ್ಮ ಕಾಲದಲ್ಲಿ ಅನ್ನ ನೀಡುವ ಉಪಾಧಿಗಳಾಗಿದ್ದುವು' ಎನ್ನುವ ಹಿರಿಯರು, 'ಹೀಗೂ ಇದೆಯಾ, ಅವೆಲ್ಲಾ ಎಲ್ಲಿ ಹೋದುವು' ಎನ್ನುವ ಕಾನ್ವೆಂಟ್ ಹುಡುಗನ ಪ್ರಶ್ನೆಗೆ ಪೆಚ್ಚಾಗುವ ಅಮ್ಮಾಪ್ಪ. ಪ್ರಾತ್ಯಕ್ಷಿಕೆಯಲ್ಲಾದರೂ ಉಳಿದುಕೊಂಡಿವೆಯಲ್ಲಾ.. ಅದೇ ಸಮಾಧಾನ.

                    ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಸಂಕಟದ ದಿವಸವನ್ನು ಗ್ರಹಿಸಿಕೊಂಡೇ ತನ್ನ ಕಾರ್ಯವನ್ನು ಕನ್ನಾಡಿನಾದ್ಯಂತ ವಿಸ್ತರಿಸುತ್ತಿದೆ. ಹಳ್ಳಿಗಳಿಗೆ ನುಗ್ಗಿದೆ. ಮನೆಯನ್ನು ಪ್ರವೇಶಿಸಿದೆ. ಸಂಸ್ಕಾರದ ಪಾಠ ಮಾಡಿದೆ. ಬದುಕಿನ ಸುಭಗತೆಯನ್ನು ಹೇಳಿದೆ. ಉಡುವ ಉಡುಪಿನಿಂದ, ಅನ್ನದ ಬಟ್ಟಲಿನ ತನಕದ ಶುಚಿ-ರುಚಿಯತ್ತ ಗಮನ ಹರಿಸಿದೆ. ಹಾಗಾಗಿಯೇ ಹಳ್ಳಿ ಮನೆಗೊಮ್ಮೆ ಹೋದರೆ ಸಾಕು; ನಗುಮುಖದ ಸ್ವಾಗತ, ಬಾಯಾರಿಕೆ, ಉಭಯಕುಶಲೋಪರಿ.. ಇಷ್ಟು ಸಂಸ್ಕಾರ ಸಿಕ್ಕ ಮಹಿಳೆಯರು ಮೇಳದಲ್ಲಿ ವ್ಯವಸ್ಥಿತವಾಗಿ ಭಾಗವಹಿಸುವುದನ್ನು ಕಾಣಬಹುದು.

                    ನಡೆಯುವ ಗೋಷ್ಠಿಗಳಲ್ಲಿ ಶಿಸ್ತುಬದ್ಧ ನಡವಳಿಕೆ. ಕಲಾಪಗಳು ಎಷ್ಟು ಅರ್ಥವಾಗಿವೆ, ಅರ್ಥವಾಗುತ್ತವೆ ಎಂಬುದು ಬೇರೆ ಮಾತು. ಆದರೆ ಭಾಗವಹಿಸಿದವರಲ್ಲಿ ಬೆರಳೆಣಿಕೆಯ ಮಂದಿಗಾದರೂ ಹೊಕ್ಕ ವಿಚಾರಗಳು ದೊಡ್ಡ ಬದಲಾವಣೆ ತರಬಲ್ಲುದು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಳದಲ್ಲಿ ಇಂತಹ ಅರಿವನ್ನು ಬಿಂಬಿಸುವ ಕೆಲಸಗಳು ನಿರಂತರ.
ಮದ್ಯಪಾನ ಚಟದಿಂದ ದೂರಮಾಡುವ ಶಿಬಿರಗಳು ಯೋಜನೆಯ ಯಶಸ್ವೀ ಕಾರ್ಯಹೂರಣ. ಒಡೆದುಹೋದ ಕುಟುಂಬಗಳು ಒಂದಾಗುವ ಸ್ಥಿತಿ, ದಂಪತಿ ಸಮಸ್ಯೆ, ಕುಟುಂಬದ ಸಮಸ್ಯೆಗಳಿಗೆ ಪ್ರತ್ಯಪ್ರತ್ಯೇಕ ಗಮನ. ಕೃಷಿ ಮೇಳದ ಎರಡನೇ ದಿನದೊಂದು ಗೋಷ್ಠಿಯಲ್ಲಂತೂ ಸಾಮಾಜಿಕ ಸಮಸ್ಯೆಗಳ ನಿವಾರಣಾ ಯಶೋಗಾಥೆಗಳ ಪ್ರಸ್ತುತಿ. ಗಂಡನ ಕುಡಿತವನ್ನು ಬಿಡಿಸಿ, ಸಂತೋಷದಿಂದಿರುವ ಹೆಂಡತಿ ವೇದಿಕೆಯಲ್ಲಿ ತನ್ನ ಯಶವನ್ನು ಹೇಳುತ್ತಾ ಹೋದಂತೆ ಭಾವಗಳು ಮಾತನಾಡುತ್ತವೆ. ಬುದ್ಧಿ ಚುರುಕಾಗುತ್ತವೆ. ಆ ಮಾತಿನ ಸಂದೇಶಗಳು ಇನ್ನೊಂದು ಕುಟುಂಬಕ್ಕೆ ಹಿತವಚನವಾಗುತ್ತವೆ.

                  ಕೃಷಿ ಅಂದರೆ ಹೊಲದಲ್ಲಿ ದುಡಿಯುವ ಪ್ರಕ್ರಿಯೆ ಮಾತ್ರವಲ್ಲ. ಅದರಲ್ಲಿ ಕೃಷಿಕನ ಕುಟುಂಬವಿದೆ, ನೆರೆಕರೆಯಿದೆ, ಪರಿಸರವಿದೆ, ನೋವು ನಲಿವಿದೆ, ಸಮಸ್ಯೆಯಿದೆ. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ಕೃಷಿ ಮೇಳ ನಡೆಯುತ್ತದೆ. ಕೃಷಿ, ಕೃಷಿಕನಿಗೆ ಇದ್ದಷ್ಟೇ ಮಹತ್ವ ಕೃಷಿ ಕುಟುಂಬಕ್ಕೂ ಕೊಟ್ಟಿರುವುದು ಮೇಳದ ಧನಾಂಶ. ಮೂರು ದಿವಸ ನಡೆಯುವ ಮೇಳದಲ್ಲಿ ಯೋಜನೆಯ ರೂವಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಕಲಾಪಗಳಲ್ಲಿ ಉಪಸ್ಥಿತರಿರುತ್ತಾರೆ. ಈ ಸಲದ ಕೃಷಿ ಮೇಳವು ಕುಮಟಾದಲ್ಲಿ (ಫೆಬ್ರವರಿ 21 ರಿಂದ 23ರ ತನಕ) ನಡೆದಿತ್ತು. ಇದು ಮೂವತ್ತಮೂರನೇ ಮೇಳ.

                  ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿ ಹಿರಿದಾಗುತ್ತಿದೆ. ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸುತ್ತಿದೆ. ಕ್ಷೇತ್ರ ಹಿರಿದಾಗುತ್ತಿದ್ದಂತೆ ಯಶೋಗಾಥೆಗಳನ್ನು ವರುಷದ ಕೃಷಿ ಮೇಳದಲ್ಲಿ ಬಿಂಬಿಸಲು ತ್ರಾಸ. ಅದಕ್ಕಾಗಿ ವಲಯ, ಗ್ರಾಮ, ತಾಲೂಕು ಮಟ್ಟದ ಕೃಷಿ ಮೇಳಗಳನ್ನು ಆಯೋಜಿಸುತ್ತಿದೆ. ಸ್ಥಳಿಯ ಕೃಷಿ, ಸಮಸ್ಯೆ, ಮೌಲ್ಯವರ್ಧನೆ, ಮಾರುಕಟ್ಟೆ ವ್ಯವಸ್ಥೆಯತ್ತ ಯೋಜಿಸಲು, ಯೋಚಿಸಲು ತಾಲೂಕಿನೊಳಗೆ ನಡೆಯುವ ಮೇಳಗಳು ಸಹಕಾರಿ.

                  'ಇದರಿಂದಾಗಿ ಪಕ್ಕದ ಮನೆಯವನ, ನೆರೆಯ ಗ್ರಾಮದವನ ಕೃಷಿ ವ್ಯವಸ್ಥೆಗಳು, ಯಶೋಗಾಥೆಗಳನ್ನು ತಿಳಿಯಲು ಸಹಾಯವಾಗುತ್ತದೆ' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ನಡೆಯುವ ಮೇಳಕ್ಕೆ ಪೂತರ್ಿಯಾಗಿ ಸ್ಥಳಿಯ ಸಂಪನ್ಮೂಲಗಳ ಬಳಕೆ. ಚಪ್ಪರದಿಂದ ತೊಡಗಿ ಊಟದ ವರಗೆ ಕೃಷಿಕರ ಸ್ವಯಂ ಸೇವೆ. ಮಳಿಗೆಗಳತ್ತ ವಿಶೇಷ ಗಮನ. ಯೋಜನೆಯ ಹಿರಿತನದಲ್ಲಿ ಕೃಷಿಕರೇ ಕೃಷಿಕರಿಗಾಗಿ ಕೃಷಿಕರಿಗೋಸ್ಕರ ನಡೆಸುವ ಕೃಷಿ ಮೇಳ.

                    ಗ್ರಾಮಾಭಿವೃದ್ಧಿ ಯೋಜನೆಯ ಮೇಳಗಳಲ್ಲಿ ಕೃಷಿ, ಕೃಷಿಕರನ್ನು ಗೌರವದಿಂದ ಕಾಣಲಾಗುತ್ತದೆ. ಹಾಗಾಗಿ ವಿವಿಧ ಇಲಾಖೆಗಳು, ಸರಕಾರಿ ಅಧಿಕಾರಿಗಳೂ 'ಪ್ರೀತಿಯಿಂದ' ಭಾಗವಹಿಸುತ್ತಾರೆ. ಯಾಕೆ ಹೇಳಿ? ಕೃಷಿಕರು ಧಾರಾಳ ಸೇರುತ್ತಾರೆ, ತಂತಮ್ಮ ಇಲಾಖೆಯ ಯೋಜನೆಗಳನ್ನು ಈ ಮೂಲಕವಾದರೂ ತಲುಪಿಸೋಣ. ರಾಜಕೀಯ ನೇತಾರರೂ ಕೃಷಿ ಮೇಳಗಳಲ್ಲಿ ಭಾಗವಹಿಸುತ್ತಾರೆ. ಅವರ ಮನದಿಂಗಿತ ಅರ್ಥಮಾಡಿಕೊಳ್ಳಲು ಕಷ್ಟವೇನಿಲ್ಲ!