Sunday, January 26, 2014

ಕೃಷಿ ಬದುಕನ್ನು ಮೊಗೆದುಂಡ ಕೃಷಿಕ



           ಈ ದೇಶದಲ್ಲಿ ಲಾಟರಿ ಹೊಡೆದವನು ಅದೃಷ್ಟವಂತ. ಸ್ಮಗ್ಲರ್, ಲೂಟಿ, ಮೋಸಮಾಡಿ ಹಣ ನುಂಗುವ ಕೆಲಸ ಮಾಡುವವನು ಬುದ್ಧಿವಂತ. ಬೆವರು ಸುರಿಸಿ ದುಡಿಯುವವನು ಯಾತಕ್ಕೂ ಬಾರದ ನಿಕೃಷ್ಟನಾಗಿದ್ದಾನೆ, ಡಾ. ಡಿ.ಆರ್. ಪ್ರಫುಲ್ಲಚಂದ್ರರು (80) ಕೃಷಿ, ಕೃಷಿಕ, ಗ್ರಾಮ ಭಾರತವನ್ನು ನೋಡುವ ಆಡಳಿತ ವ್ಯವಸ್ಥೆಯನ್ನು ಕಟುವಾಗಿ ವಿಮರ್ಶಿಸುತ್ತಾರೆ.  ಭಾಷಣ, ವಿಚಾರಗೋಷ್ಠಿ ಹಾಗೂ ತಮ್ಮ ಕೃಷಿ ಕ್ಷೇತ್ರ ವೀಕ್ಷಣೆಗೆ ಬರುವ ಎಲ್ಲರಲ್ಲಿಯೂ ಹೇಳದೆ ಮರೆಯುವುದಿಲ್ಲ.
ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯಲ್ಲಿದೆ, ಡಾ.ದೇವಂಗಿ (ಡಿ.ಆರ್.) ಫ್ರಫುಲ್ಲಚಂದ್ರರ ಕೃಷಿ ಕ್ಷೇತ್ರ.  ಕೃಷಿ ಕೆಲಸಗಳನ್ನು ಹಗುರ ಮಾಡುವ ಆವಿಷ್ಕಾರಗಳು, ಯಂತ್ರಗಳು, ಜಾಣ್ಮೆ ಪ್ರಯೋಗ, ಮಣ್ಣು-ನೀರಿನ  ಸಂರಕ್ಷಣೆ.. ಹೀಗೆ ಹಲವು ಸ್ವ-ವಿಧಾನಗಳನ್ನು ಅಳವಡಿಸಿ ಯಶ ಕಂಡ ಕೃಷಿಕ. 'ಇತರರಿಗೆ ತೊಂದರೆ ಕೊಡದೆ, ತಾನು ಹೇಗೆ ಸ್ವತಂತ್ರವಾಗಿ ಬದುಕಬಹುದು' ಎನ್ನುವ ಯೋಜನೆ, ಯೋಚನೆಗಳು ಯಶದ ಅಡಿಗಟ್ಟು. ಇವರ ಕೃಷಿ ವಿಧಾನಗಳು 'ಪ್ರಫುಲ್ಲಚಂದ್ರ ಮಾದರಿ' ಎಂದು ರೈತರಿಂದ ಸ್ವೀಕೃತಿ ಪಡೆದಿದೆ.
               2013, ದಶಂಬರ 11ರಂದು ಪ್ರಫುಲ್ಲಚಂದ್ರರು (Dr.D.R.Prafullachandra)  ದೂರವಾದರು. ಅವರ ಅಂತಿಮ ದರ್ಶನಕ್ಕೆ ಬಂದವರು ನೂರಾರು. ಇವರೆಲ್ಲಾ ಅರ್ಥಿಕವಾಗಿ ಸಿರಿವಂತರೆಂಬ ಕಾರಣಕ್ಕಾಗಿ ಬಂದಿಲ್ಲ. ಕೃಷಿಯಲ್ಲಿ 'ಮಾಡಿ-ಬೇಡಿ'ಗಳನ್ನು, ಮಾದರಿಗಳನ್ನು ಹೇಳಿಕೊಟ್ಟ ಕೃಷಿಕರೆಂಬ ಅಭಿಮಾನದಿಂದ ಕೃಷಿ ಋಷಿಯ ಕೊನೆ ದರ್ಶನಕ್ಕಾಗಿ ಆಗಮಿಸಿದ್ದರು.
'ಯಾವುದೇ ಆಡಳಿತ ವ್ಯವಸ್ಥೆಯು ಕೃಷಿಕರನ್ನು ಉದ್ಧಾರ ಮಾಡಲಾರದು. ಯೋಜನೆ ಮಾಡಿದರೆ ನಮ್ಮಿಂದಲೇ ಸಾಧ್ಯ. ಹೊಟ್ಟೆನೋವು ಬಂದವನು ಮಾತ್ರೆ ನುಂಗುವಂತೆ ಸಮಸ್ಯೆಯ ಸುಳಿಗೆ ಸಿಕ್ಕ ನಾವು ಚಿಂತಿಸುತ್ತಾ ಕುಳಿತರೆ ಪರಿಹಾರ ಸಿಗದು. ನಮ್ಮ ಅಭಿವೃದ್ಧಿಗೆ ನಾವೇ ರೂವಾರಿಗಳು,' ಪ್ರಫುಲ್ಲರ ಕೃಷಿ ಸುಭಗತೆಯ ಸೂತ್ರಗಳು. ಬೆವರ ಶ್ರಮಕ್ಕೆ ತಕ್ಕ ಪ್ರತಿಫಲ ಭೂತಾಯಿ ನೀಡುತ್ತಾಳೆ ಎನ್ನುವ ನಂಬುಗೆ ಹುಸಿಯಾಗಿಲ್ಲ. ಹಾಗಾಗಿ ನೋಡಿ, ಬೆಳೆ ನಷ್ಟ ಬಂದಾಗ ಅವರೆಂದೂ 'ನನಗೆ ಪರಿಹಾರ ಕೊಡಿ' ಎಂದು ಯಾರಿಗೂ ಅರ್ಜಿ ಸಲ್ಲಿಸಿಲ್ಲ, ಪ್ರತಿಭಟನೆ ಮಾಡಿಲ್ಲ!
                 'ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ' ಎಂದು ರೈತರಿಗೆ ಕಿವಿಮಾತು ಹೇಳುತ್ತಿದ್ದರು. ತೆಂಗಿನ ಕೃಷಿಯಲ್ಲಿ ಒಮ್ಮೆ ಎಡವಿದ್ದರು. ಪ್ರಫುಲ್ಲರು ದೇವಾಲಯದ ದರ್ಶನಕ್ಕೆ ಹೋಗಿದ್ದರು. ಭಕ್ತನೊಬ್ಬ ಹರಕೆ ತೀರಿಸಲು ಸಣ್ಣ ಗಾತ್ರದ ತೆಂಗಿನಕಾಯಿಗಳನ್ನು ಒಡೆಯುತ್ತಿದ್ದ. ಕಾಯಿಯ ಗಾತ್ರಕ್ಕೆ ಮರುಳಾದರು. ಬೆಳೆಯಬೇಕೆಂದ ಆಸೆ ಚಿಗುರಿತು. ಹುಡುಕಾಟ ಆರಂಭ. ಸಸಿಗಳ ಸಂಪಾದನೆ. ಸರಿ, ಸಸಿ ಬೆಳೆಯಿತು, ಕಾಯಿ ಬಿಟ್ಟಿತು. ಸಣ್ಣ ಕಾಯಿ ಅಲ್ವಾ, ಯಾರಿಗೆ ಬೇಕು? ಅಂಗಡಿಯಾತ ಬೇಡವೆಂದ. ತಾನೇ ಮಾರೋಣವೋ, ದರ ನಿಶ್ಚಯಿಸಲು ಆಗದಷ್ಟೂ ಸಣ್ಣ ಕಾಯಿಗಳು!  ದೇವಾಲಯದಲ್ಲಿ ಒಡೆಯೋಣವೋ, ಹರಕೆ ಹೇಳಿಕೊಂಡಿಲ್ಲ! ತಾನೇ ನೆಟ್ಟು ಬೆಳೆಸಿದುದನ್ನು ಕಡಿಯಲಾಗದ ಕರುಳಬಳ್ಳಿಯ ಸಂಬಂಧ.
                ಪ್ರಫುಲ್ಲರಿಗೆ 1959ರಿಂದ ಕೃಷಿಯ ಹೊಣೆ. ಆರಂಭದಲ್ಲಿ ಅನುಭವದ ಕೊರತೆಯಿಂದ ಸೋಲು. ಆತ್ಮಾವಲೋಕನ. 'ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಿದಾಗ ಕಲ್ಲು ವಿಗ್ರಹವಾಗುತ್ತದೆ. ನನ್ನ ಒಂದೊಂದೇ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಕಣ್ಣುಬಿಟ್ಟು ಕಲಿತೆ' ಎಂದು ವಿನೀತರಾಗಿ ಹೇಳುತ್ತಾ, 'ಲ್ಯಾಬ್ ಟು ಲ್ಯಾಂಡ್' ಪದ್ದತಿ ನಮ್ಮಲ್ಲಿದೆ. ಪ್ರತಿ ರೈತನಿಗೂ ತನ್ನ ಹೊಲ ಸಂಶೋಧನಾ ಕೇಂದ್ರವಾಗಬೇಕು. ದುಡಿಮೆ ಮಂತ್ರವಾಗಬೇಕು. ಅದಕ್ಕಾಗಿ ಮನಸ್ಸಿನ ಟ್ಯೂನ್ ಅಗತ್ಯ. ಸಣ್ಣ ಹಿಡುವಳಿದಾರನೆಂಬ ಕೀಳರಿಮೆ ಬೇಡ. ಮಾನವ ಶಕ್ತಿಗೆ ಸಣ್ಣ ಸಣ್ಣ ತಂತ್ರಗಳನ್ನು ಯಂತ್ರಶಕ್ತಿಯಾಗಿಸುವ ಸಾಮಥ್ರ್ಯವಿದೆ - ಎನ್ನುವ ದೇವಂಗಿಯವರ ಮಾತುಗಳಲ್ಲಿ ಅಪ್ಪಟ ಬದುಕಿನ ಅನುಭವ ಸುಳಿಯುತ್ತಿರುತ್ತಿತ್ತು.
                  ಇವರ ಸಾಧನೆಗೆ ಕನ್ನಡಿ ಹಿಡಿಯುವ ಉತ್ತಮ ಕೆಲಸವನ್ನು 2006ರಲ್ಲಿ ಶಿವಮೊಗ್ಗದ ಭಗವಾನ್ (ಎಸ್.ದತ್ತಾತ್ರಿ) ಮಾಡಿದ್ದಾರೆ. ಅನುಭವಗಳಿಗೆ ಮಾತಿನ ರೂಪ ನೀಡಿದ ಭಗವಾನ್ ಹೇಳುತ್ತಾರೆ, 'ಯಾವುದೇ ಕೃಷಿಯಲ್ಲಿ ತೊಡಗಿದರೂ ದಾಖಲೆಗಳ ನಿರ್ಮಾಣ ಇವರ ಗುಣ'. ಹಾಗಾಗಿ ಜಿಲ್ಲೆಯಿಂದ ರಾಷ್ಟ್ರ ಮಟ್ಟದ ತನಕ ಪುರಸ್ಕಾರಗಳ ಮಾಲೆ. ಕರ್ನಾಟಕ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ.
                    ಭಗವಾನ್ ಅವರ 'ಡಾ.ಡಿ.ಆರ್.ಪ್ರಫುಲ್ಲಚಂದ್ರ ಸಮಗ್ರ ಸಾಧನೆ' ಪುಸ್ತಕದಿಂದ ಆಧರಿಸಿದ ಕೆಲವೊಂದು ಎಕ್ಸ್ಕ್ಲೂಸಿವ್ ಪಂಚಿಂಗ್! ಇವರ 'ಶಿಪ್ಟಿಂಗ್ ಪಾಯಿಖಾನೆ' ಮಾದರಿ ಕುತೂಹಲಕರ - ಇವರ ಫಾರಂನ ಕೆಲಸಗಾರರಿಗೆ ಸುಲಭವಾಗಿ ಸಾಗಿಸಬಲ್ಲ ಶೌಚಾಲಯ. ಅಡಿಕೆ ದಬ್ಬೆ ಅಥವಾ ಬಿದಿರು ಮುಖ್ಯ ಕಚ್ಚಾವಸ್ತು. ಆರಡಿ ಉದ್ದದ ನಾಲ್ಕು, ನಾಲ್ಕಡಿ ಅಗಲದ ಎಂಟು ದಬ್ಬೆ. ಮನುಷ್ಯ ನಿಂತರೂ, ಕುಳಿತರೂ ಗೊತ್ತಾಗದಷ್ಟು ಚೌಕಾಕಾರದ ರಚನೆ. ಅತ್ತಿತ್ತ ಒಯ್ಯಬಹುದಾದಷ್ಟು ಹಗುರ. ನಾಲ್ಕು ಬದಿಗೂ ಗೋಣಿ ಅಥವಾ ಪ್ಲಾಸ್ಟಿಕ್ ಹಾಸು. ಮಾನಮುಚ್ಚಲು ಧಾರಾಳ!
                   ತೆಂಗು, ಸಪೋಟ, ಮಾವಿನ ಗಿಡಗಳ ಬಳಿ ಚಿಕ್ಕ ಹೊಂಡ ತೆಗೆದರಾಯಿತು. ದಬ್ಬೆಯ ರಚನೆಯನ್ನು ಹೊಂಡದ ಮೇಲೆ ಇಟ್ಟುಕೊಂಡು ಬಹಿರ್ದೇಶ. ಬಳಿಕ ಹೊಂಡ ಮುಚ್ಚಿದರಾಯಿತು. ಪ್ರತಿದಿನ ಮನುಷ್ಯನಿಂದ ಸರಾಸರಿ ಹೊರಬರುವ ಒಂದುವರೆ ಕಿಲೋ ಘನ ಹಾಗೂ ದ್ರವರೂಪದ ಇದು ದೇಶದ ವಾತಾವರಣ ಹಾಗೂ ಸೂರ್ಯನ ಶಾಖದಿಂದ ಬಹುಬೇಗ ಉತ್ತಮ ಗೊಬ್ಬರವಾಗುತ್ತದೆ. ಒಬ್ಬ ಮನುಷ್ಯ ವರುಷಕ್ಕೆ 550 ಕಿಲೋ ಇಂತಹ ಗೊಬ್ಬರ ತಯಾರು ಮಾಡುತ್ತಾನೆ. ಯಾವುದೇ ಖಚರ್ಿಲ್ಲದೆ ಮುಫತ್ತಾಗಿ ಸಿಗುವ ಗೊಬ್ಬರವು ಕೃಷಿಗೆ ಒದಗುತ್ತದೆ,' ಪಕ್ಕಾ ಲೆಕ್ಕ.
                ಭೇಟಿ ನೀಡಿದ ರೈತರಿಗೆಲ್ಲ ನೀರಿನ ಪ್ರತ್ಯಕ್ಷ ಪಾಠ. ಒಂದೊಂದು ಹನಿಯೂ ಅಮೂಲ್ಯ. ನಿತ್ಯ ಬಳಕೆಯ ನೀರು, ಗಂಜಲ, ಸ್ಲರಿ, ಮನುಷ್ಯರ ತ್ಯಾಜ್ಯ ಒಂದೆಡೆ ಸಂಗ್ರಹ. ಎಲ್ಲವೂ ಮಿಶ್ರ ಆದಾಗ ಸಿಗುವ ದ್ರವರೂಪದ ಗೊಬ್ಬರ ಒಂದೆರಡು ಎಕ್ರೆಗೆ ಸಾಕು. 'ನೀವು ನಿಮ್ಮ ಜಮೀನಿನಲ್ಲಿಯೇ ವಾಸ ಮಾಡಬೇಕು. ಆಗ ಶ್ರಮ, ಸಮಯ, ತ್ಯಾಜ್ಯ ಎಲ್ಲವೂ ಸದುಪಯೋಗ' ಎನ್ನುತ್ತಿದ್ದರು. ಮಳೆನೀರಿನ ಕೊಯ್ಲಿಗೆ ಆದ್ಯತೆ.
              ಕಬ್ಬಿನ ಕೂಳೆ ಬೆಳೆಯು ಪ್ರಫುಲ್ಲರನ್ನು ವಿದೇಶಕ್ಕೆ ಹಾರಿಸಿತು! 1966ರಲ್ಲಿ ಹತ್ತು ಗುಂಟೆಯಲ್ಲಿ ಹತ್ತು ಟನ್ ಕೂಳೆ ಕಬ್ಬು! ಕಬ್ಬಿಗೆ ಟಾನಿಕ್ ರೂಪದಲ್ಲಿ ರಸಗೊಬ್ಬರ ಉಣಿಕೆ. ತುಂಬಾ ಸುಲಭದ ಕೃಷಿ ವಿಧಾನ. ಗೇಲಿ ಮಾಡಿದವರೂ ಇದ್ದಾರೆ! 1982ರಲ್ಲಿ ಹದಿನಾಲ್ಕನೇ ಬಾರಿ ಕೂಳೆ ಕಬ್ಬು ಕೃಷಿ ಮಾಡಿದಾಗ ಮೆಕ್ಸಿಕೋದಲ್ಲಿ ಜರುಗಿದ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ಆಹ್ವಾನ. ಕೂಳೆ ಕಬ್ಬಿನ ಸಾಧನೆಯ ಪ್ರಸ್ತುತಿ. 'ಪ್ರಪಂಚದಲ್ಲೇ ರವದೆ (ಕಬ್ಬಿನ ಗರಿ) ಸುಡದೆ ಕೂಳೆ ಕಬ್ಬು ಬೆಳೆಯುವವರಲ್ಲೇ ಸರ್ವ ಪ್ರಥಮ'ನೆಂಬ ಪುರಸ್ಕಾರ.
              ಅಡಿಕೆ ಸಿಪ್ಪೆಯನ್ನು ಸುಡುವುದೆಂದರೆ ಪ್ರಫುಲ್ಲರಿಗೆ ಅಸಮಾಧಾನ. ಇದರಲ್ಲಿ ಉತ್ತಮ ಪೋಷಕಾಂಶವಿದೆ. ಸಿಪ್ಪೆಯನ್ನು ಒಂದು ವರ್ಷ ಹಾಗೆ ಬಿಟ್ಟು ನಂತರ ತೆಂಗು, ಅಡಿಕೆ ಮರದ ಬುಡಕ್ಕೆ ಹರಡಿದರೆ ನಿಧಾನಕ್ಕೆ ಗೊಬ್ಬರವಾಗುತ್ತವೆ. ಜಿಗುಟು ಮಣ್ಣಿನ ಭೂಮಿಯಲ್ಲಿ ನಾರಿನಂಶ ಹೆಚ್ಚಾಗುತ್ತದೆ. ಇದೊಂದು ಸಹಜ ಹೊದಿಕೆ. ಬೇಸಿಗೆಯಲ್ಲಿ ಕಡಿಮೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಇದಕ್ಕಿದೆ.
               ತೆಂಗಿನ ನುಸಿರೋಗದ ತಡೆ, ಇಲಿ-ಅಳಿಲು ನಿಯಂತ್ರಣ, ಅಡಿಕೆ ಮೂಟೆ ಸಾಗಿಸುವ ಸಾಧನ, ಅಡಿಕೆ ಉದುರು ಮಾಡುವ ಯಂತ್ರ, ಅಡಿಕೆ ಡ್ರೈಯರ್, ಅಡಿಕೆ ಬಾಯ್ಲರ್, ಕಬ್ಬು ಹೊರಲು ಕತ್ತೆಯ ಬಳಕೆ, ಭತ್ತ ತೂರುವ ಯಂತ್ರ, ಟ್ರಾಕ್ಟರಿನಿಂದ ವಿವಿಧ ಆವಿಷ್ಕಾರಗಳು. ಅಲ್ಲದೆ ತಳ್ಳು ಏಣಿ, ಹೂಳೆತ್ತುವ ಸಾಧನ, ಸ್ಕ್ರಾಪರ್, ಡಂಪರ್, ಲೆವಲರ್, ಪೈಪ್ಲೈನರ್, ಸ್ಲರಿ ಬ್ಲೀಡಿಂಗ್.. ಮುಂತಾದ ಶ್ರಮ ಹಗುರ ಮಾಡುವ, ಕೃಷಿ ಉಪಯೋಗಿ ಸಾಧನಗಳ ಸಂಶೋಧಕರು. ಮಗ ಸವ್ಯಸಾಚಿ, ಇಕ್ಷುಧನ್ವ ಪ್ರಫುಲ್ಲರ ಕೃಷಿ ಕೆಲಸಗಳಿಗೆಲ್ಲಾ ಸಾಥ್.
               ಕೃಷಿಯೊಂದಿಗೆ ಅಪಾರ ಸಾಮಾಜಿಕ ಸಂಪರ್ಕ. ವಿಶ್ವವಿದ್ಯಾಲಯಗಳಲ್ಲಿ ಜವಾಬ್ದಾರಿ. ಸಂಶೋಧನಾ ಕೇಂದ್ರಗಳಲ್ಲಿ ವಿವಿಧ ಹೊಣೆ. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಕ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿ ನಿಂತ ಕೃಷಿಕ. ಪದವಿಗಳ ಹಂಗಿಲ್ಲದೆ ಅನುಭವ, ಬುದ್ಧಿಯೇ ಬಂಡವಾಳ. ಕೃಷಿಯಲ್ಲಿ ಅವರೊಬ್ಬ ವ್ಯಕ್ತಿಯಲ್ಲ, ವ್ಯಕ್ತಿತ್ವವನ್ನು ಮೀರಿದ ಮೇರು.
ಪ್ರಪುಲ್ಲಚಂದ್ರರು ಕುವೆಂಪು ಅವರ ಪತ್ನಿಯ ಸಹೋದರ. 'ಕೃಷಿ-ಋಷಿ' ಎಂದು ಕುವೆಂಪು ಅವರಿಂದ ಮಾನಿಸಿಕೊಂಡ ಪ್ರಫುಲ್ಲಚಂದ್ರರ ಸಾಧನೆಗಳೆಲ್ಲವೂ ಇನ್ನು ನೆನಪು ಮಾತ್ರ.

1 comments:

ಮೋಹನ್ ತಲಕಾಲುಕೊಪ್ಪ said...

Really inspiring !!!

Post a Comment