ಹೆಚ್ಚು ನಿಗಾ ಬೇಡುವ ಬೀನ್ಸ್ ಕೃಷಿ
ಕಂಬಳಿ ಹುಳಗಳ ಬೇಟೆ
ಹೊಸದಿಗಂತದ ’ಮಾಂಬಳ’ ಅಂಕಣ / 30-8-2017
"ಕರಾವಳಿಯಲ್ಲಿ ಬೀನ್ಸ್ ಕೃಷಿ ವಿರಳ. ಇತರ ತರಕಾರಿಗಳಿಗಿಂತ ಸ್ವಲ್ಪ ಹೆಚ್ಚು ನಿಗಾ ಮತ್ತು ಆರೈಕೆಯಿದ್ದರೆ ವಾಣಿಜ್ಯ ಮಟ್ಟದಲ್ಲಿ ಅಲ್ಲದಿದ್ದರೂ ಮನೆಬಳಕೆಗಾಗಿ ಧಾರಾಳ ಬೆಳೆಯಬಹುದು," ಎನ್ನುವ ರಘುರಾಮ ಹಾಸನಡ್ಕರ ಸ್ವಾನುಭವದಲ್ಲಿ ದಶಕದ ತರಕಾರಿ ಕೃಷಿಯ ಅನುಭವ ಮಿಳಿತವಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕದವರು.
ಮುಖ್ಯ ಕೃಷಿ ಅಡಿಕೆ, ತೆಂಗು. ಮಳೆಗಾಲದಲ್ಲಿ ಅಂಗಳಪೂರ್ತಿ ತರಕಾರಿ. ಕೃಷಿಯ ಅನುಭವವನ್ನು ಹಂಚಿಕೊಳ್ಳಲು ರಘುರಾಮರಿಗೆ ಖುಷಿ. ಅವರು ಕಾರಿನಲ್ಲಿ ಮನೆ ಹೊರಟರೆ ಸಾಕು, ಡಿಕ್ಕಿಯಲ್ಲಿ ತಾಜಾ ತರಕಾರಿ ಪ್ಯಾಕೆಟ್ಗಳು ಮುಗುಮ್ಮಾಗಿ ಕುಳಿತಿರುತ್ತವೆ! ಆಪ್ತರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಹಂಚುವುದು ಸ್ವ-ಭಾವ. ಇವರ ತರಕಾರಿಯನ್ನೇ ಕಾಯುವ ಆಪ್ತೇಷ್ಟರಿದ್ದಾರೆ! ಎಲ್ಲಾ ವಿಧದ ತರಕಾರಿಗಳನ್ನು ಬೆಳೆಯುತ್ತಾರೆ. ಇವರ ಅಡುಗೆ ಮನೆಯಲ್ಲಿ ತಾಜಾ, ವಿಷರಹಿತ ಕಾಯಿಪಲ್ಲೆಯ ಖಾದ್ಯಗಳು ಸದಾ.
ತರಕಾರಿಯನ್ನು ಬೆಳೆಯುವುದು ದೊಡ್ಡದಲ್ಲ. ಒಂದೊಂದಕ್ಕೆ ಒಂದೊಂದು ಆರೈಕೆ ಬೇಕು. ಇದು ಕಲಿತು ಬರುವುದಲ್ಲ. 'ಮಾಡಿ-ಬೇಡಿ' ಅನುಭವ ಆಗಿಯೇ ಕೃಷಿಯ ಜಾಣ್ಮೆಗಳು ಕೈವಶವಾಗುತ್ತವೆ. ರಘುರಾಮರು ಪ್ರತೀವರುಷ ಮಾಡುತ್ತಾ, ಕಲಿಯುತ್ತಾ ಒಂದೊಂದರ ಡಾಟಾವನ್ನು ದಾಖಲಿಸಿದ್ದಾರೆ. ಕಳೆ ನಿಯಂತ್ರಣಕ್ಕಾಗಿ ಮಳೆಗಾಲದ ಆರಂಭದಲ್ಲಿ ಅಂಗಳಕ್ಕೆ ಒಣ ತೆಂಗಿನ ಗರಿಗಳನ್ನು ಹಾಸಿದ ಬಳಿಕ ತರಕಾರಿ ಕೃಷಿಗೆ ಶ್ರೀಕಾರ.
ಮುಳ್ಳುಸೌತೆ ಮತ್ತು ಪಡುವಲಕಾಯಿ(ಪಟ್ಲಕಾಯಿ)ಗೆ ಬಾಧಿಸುವ ಹಣ್ಣುಹುಳಗಳ ನಿಯಂತ್ರಣಕ್ಕೆ 'ಪ್ಲಾಸ್ಟಿಕ್ ಅಂಗಿ' ವಿಧಾನ ಯಶವಾಗಿದೆ. "ಮಿಡಿ ಕಚ್ಚುವ ಹಂತದಲ್ಲೇ ಮಿಡಿಗೆ ಪ್ಲಾಸ್ಟಿಕ್ ಕವರ್ (ತೊಟ್ಟೆ) ಹೊದಿಕೆ. ತರಕಾರಿಯ ಗಾತ್ರವನ್ನು ಹೊಂದಿಕೊಂಡು ಕವರಿನ ಆಯ್ಕೆ. ಪಡುವಲಕಾಯಿಗೆ ಉದ್ದನೆಯ ಗಾತ್ರದ ಪ್ಲಾಸ್ಟಿಕ್ ಬೇಕು. ಬಳಸಿದ ಪ್ಲಾಸ್ಟಿಕನ್ನು ಯಾ ಪ್ಲಾಸ್ಟಿಕ್ ಅಂಗಿಯನ್ನು ಮುಂದಿನ ವರುಷವೂ ಮರುಬಳಕೆ. ತರಕಾರಿ ಚಪ್ಪರದ ಮಧ್ಯೆ 'ಮೋಹಕ ಬಲೆ' ಯನ್ನು ತೂಗಿಸಿದ್ದೇನೆ. ತುಂಬಾ ಪ್ರಯೋಜನವಾಗಿದೆ. ಮುಳ್ಳುಸೌತೆಯ ಮಿಡಿಯ ಹೊರಮೈ ಮೆದು. ಇದನ್ನು ಹಣ್ಣುಹುಳವು ಎಳೆಯದರಲ್ಲೆ ಕಡಿದು ಬಿಡುತ್ತದೆ. ಕಾಯಿ ಬೆಳೆದಂತೆ ಹಾಡರ್್ ಆಗುತ್ತದೆ. ನಂತರ ಹುಳಗಳ ಬಾಧೆ ಕಡಿಮೆ." ಎನ್ನುತ್ತಾರೆ.
ಪಡುವಲಕಾಯಿ(ಪಟ್ಲಕಾಯಿ)ಗೂ ಅಂಗಿ ಪ್ರಯೋಗ. ಸುಮಾರು ಮೂರಡಿ ಬೆಳೆದ ಪಟ್ಲಕಾಯಿಗೆ ಎಳತರಲ್ಲಿ ರೋಗಬಾಧೆ. ಒಂದು ರೀತಿಯ ಕಂಬಳಿ ಹುಳದಂತಿರುವ ಹುಳ. ಇದು ಎಳೆಯ ಕಾಯನ್ನು ತೂತು ಮಾಡುತ್ತದೆ. ಈ ಹುಳವನ್ನು ದಿನಂಪ್ರತಿ ಹುಡುಕಿ ಹುಡುಕಿ ನಾಶ ಮಾಡುವುದೊಂದೇ ದಾರಿ. ರಘುರಾಮರ ತರಕಾರಿ ಕೃಷಿಯಲ್ಲಿ ಬೆಳಗ್ಗಿನ ಪಾಳಿಯು ಹುಳುಗಳ ಹುಡುಕಾಟಕ್ಕೆ ಮೀಸಲು ಮತ್ತು ಮೊದಲಾದ್ಯತೆ.
ಅಂಗಳದಂಚಿನಲ್ಲಿ ಬೀನ್ಸ್ ಕೃಷಿ. ಸುಡುಮಣ್ಣಿನ ಮಡಿ ಮಾಡಿ ಅದರಲ್ಲಿ ಬೀಜಪ್ರದಾನ. ವಾರಕ್ಕೊಮ್ಮೆ ಸೆಗಣಿ ನೀರಿನ ಉಣಿಕೆ. ಜತೆಗೆ ಹಟ್ಟಿಗೊಬ್ಬರ. ಬಳ್ಳಿ ಬೆಳೆದಂತೆ ಅಡರಿನ (ಮರಗಿಡಗಳ ಒಣ ರೆಂಬೆ) ಆಧಾರ. ಮಡಿ ಎತ್ತರವಾಗಿರಬೇಕು. ಬುಡದಲ್ಲಿ ನೀರು ನಿಂತರೆ ಗಿಡ ಕೊಳೆಯುವ ಸಾಧ್ಯತೆ ಹೆಚ್ಚು. ಹೂ ಬಿಡಲು ಶುರು ಮಾಡಿದಾಗ ಸುಡುಮಣ್ಣು ಅಥವಾ ಪೊಟೇಶ್ ಗೊಬ್ಬರಗಳ ಉಣಿಕೆ.
"ಈ ಗೊಬ್ಬರಗಳ ಬದಲಿಗೆ ನಾವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಸ್ಲರಿಗೆ ಬೂದಿಯನ್ನು ಮಿಶ್ರ ಮಾಡಿ. ಅದನ್ನು ತೆಳ್ಳಗೆ ಮಾಡಿ ಗಿಡಗಳಿಗೆ ಎರೆಯಿರಿ. ಮಳೆ ಬರುತ್ತಾ ಇದ್ದರೆ ಮಾತ್ರ ಈ ದ್ರಾವಣ ಉಣಿಸಿ. ಮಧ್ಯಾಹ್ನ ಬೇಡ. ಗಿಡವೇ ಸುಟ್ಟುಹೊಗುವ ಸಾಧ್ಯತೆಯಿದೆ. ಗಿಡದಲ್ಲಿ ಬೀನ್ಸ್ ಬೆಳೆಯುತ್ತಾ ಬಂದಂತೆ ಬುಡಕ್ಕೆ ಮಣ್ಣು ಪೆರಿಸಿ. ಗಿಡದ ಬೆಳವಣಿಗೆ ನೋಡಿಕೊಂಡು ಗೊಬ್ಬರ ಹಾಕಿ," ಎನ್ನುತ್ತಾರೆ.
ಸೌತೆ, ಕುಂಬಳ, ಸುವರ್ಣಗೆಡ್ಡೆ, ಬೆಂಡೆ... ಹೀಗೆ ವರುಷದ ಹತ್ತು ತಿಂಗಳು ತಮ್ಮದೇ ತರಕಾರಿ. "ಬೆಂಡೆಗೆ ಹಳದಿ ಎಲೆ ರೋಗ. ಕೆಲವರು ಮಣ್ಣಿನ ಕ್ಷಾರವೇ ಕಾರಣ. ಬಹುಶಃ ಮಣ್ಣಿನಿಂದ ಹಬ್ಬುವ ಯಾವುದೋ ರೋಗವಿರಬೇಕು. ನೆಲಮಟ್ಟದಲ್ಲಿ ಪ್ಲಾಸ್ಟಿಕ್ ಗೋಣಿ ಯಾ ಹಾಳೆಯನ್ನು ಹಾಸಿ ಅದರ ಮೇಲೆ ಮಣ್ಣು ಹಾಕಿ ಬೆಳೆಸಿದರೆ ಪ್ರಯೋಜನವಾಬಹುದೋ ಏನೋ," ಎನ್ನುವ ಚಿಂತನೆಯಲ್ಲಿದ್ದಾರೆ.
ಬೂದುಗುಂಬಳ, ಸಿಹಿಗುಂಬಳ(ಚೀನಿಕಾಯಿ)ಗಳಿಗೆ ಪ್ರತ್ಯೇಕ ತಾಕುಗಳು. ಮಳೆಯ ರಭಸಕ್ಕೆ ಹೂವಿನ ಪರಾಗ ತೊಳೆದುಹೋಗಿ ಕಾಯಿ ಕಚ್ಚುವುದಿಲ್ಲ. ಇದಕ್ಕಾಗಿ ಕೃತಕ ಪರಾಗಸ್ಪರ್ಶ. "ಬೆಳ್ಳಂಬೆಳಿಗ್ಗೆ ಅರಳಿದ ಹೂವಿಗೆ ಕೃತಕ ಪರಾಗಸ್ಪರ್ಶ ಮಾಡಿ ಪ್ಲಾಸ್ಟಿಕ್ ಅಂಗಿ ತೊಡಿಸುತ್ತೇನೆ. ಮಳೆಗೆ ಪರಾಗ ತೋಯ್ದು ಹೋಗದಂತೆ ಪರಿಹಾರ ಕಂಡುಕೊಂಡಿದ್ದೇನೆ," ಎಂಬ ಸೂಕ್ಷ್ಮಗಳನ್ನು ಹೇಳುತ್ತಾರೆ. ಕೃಷಿಯ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ಗುಟ್ಟು ಮಾಡಬಾರದು ಎನ್ನುವ ನಿಲುವು ಇವರದು.
ಅಲಸಂಡೆಗೆ ಶತ್ರು 'ಬಂಬುಚ್ಚಿ'. ಇದನ್ನು ಓಡಿಸಲು ಕೆಂಪಿರುವೆ(ಉರಿ)ಯನ್ನು ಛೂ ಬಿಡುತ್ತಾರೆ. ನಿಯಂತ್ರಣವಾಗಿದೆ. ತರಕಾರಿ ಮಧ್ಯೆ ಕಳೆ ಇದ್ದರೆ ಕೀಟ ಜಾಸ್ತಿ. ಹಾಗಾಗಿ ಕಳೆ ಕೀಳುವುದು ಮುಖ್ಯ. ಇದನ್ನೆಲ್ಲಾ ನೋಡುತ್ತಾ ಕಲಿಕೆ. ಇನ್ನೂ ಕಲಿಯುವುದು ಇದೆ, ಎನ್ನುತ್ತಾರೆ. ಗೊಬ್ಬರದ ಹುಳ ತಿನ್ನಲು ಬರುವ ಹಂದಿಗಳಿಗೆ ಮಡಿಯ ಸುತ್ತ ನೆಲದಿಂದ ಒಂದಡಿ ಎತ್ತರಕ್ಕೆ ತಂತಿಯನ್ನು ಬಿಗಿದಿದ್ದಾರೆ. ಕೋಳಿಗಳಿಗೆ ಗೇಟ್ಪಾಸ್ ನೀಡಲು ಎರಡಡಿ ಎತ್ತರಕ್ಕೆ ನೆರಳು ಬಲೆಯ ಆವರಣ. ತರಕಾರಿಯ ಮೊದಲ ಇಳುವರಿ ಬೀಜಕ್ಕೆ ಮೀಸಲು.
ವೃತ್ತಿ ಸಂಬಂಧವಾಗಿ ಕಡಲಾಚೆಯ ಕೆನಡಾದಲ್ಲಿದ್ದರು. ಅನಿವಾರ್ಯವಾಗಿ ತವರಿಗೆ ಮರಳಿದಾಗ ಬಾಲ್ಯದ ಮಣ್ಣಿನ ಸಹವಾಸಗಳು ಅನುಕೂಲವಾಯಿತು. ಜವ್ವನದಲ್ಲೆ ಕೃಷಿಯ ಜವಾಬ್ದಾರಿ ಹೆಗಲಿಗೆ ಬಂದಾಗ ತನ್ನ ಅಜ್ಜ ಲಕ್ಷ್ಮೀನಾರಾಯಣ ಪೈಲೂರರ ಜತೆಗಿದ್ದ ಬಾಲ್ಯಾನುಭವು ಪಠ್ಯವಾಗಿ ಕಣ್ಣ ಮುಂದಿತ್ತು. ಮಡದಿ ಜೋತ್ಸ್ನಾ ರಘುರಾಮರ ತರಕಾರಿ ಆಸಕ್ತಿಗೆ ಹೆಗಲೆಣೆ. ಮನೆಗೆ ಬಂದ ಅತಿಥಿಗಳು ಮರಳುವಾಗ ಅವರ ಕೈಯಲ್ಲಿ ತರಕಾರಿಯನ್ನೋ, ಬೀಜವನ್ನು ನೀಡಿದರೆ ಮಾತ್ರ ಈ ದಂಪತಿಗೆ ಖುಷಿ.
ಮಾರುಕಟ್ಟೆಯ ಭಾಷೆಯು ಬದುಕಿನಲ್ಲಿ ಆವರಿಸಿರುವ ಕಾಲಘಟ್ಟದಲ್ಲಿದ್ದೇವೆ. ಆದರೆ ರಘುರಾಮ ದಂಪತಿಯಲ್ಲಿ ಮಣ್ಣಿನ ಭಾಷೆಯು ಬದುಕಿನಲ್ಲಿ ಮಿಳಿತವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ತಾನು ಬೆಳೆದು ತಿನ್ನುವುದಲ್ಲದೆ, ಇತರರ ಹೊಟ್ಟೆಯೂ ತಂಪಾಗಿರಬೇಕು ಎನ್ನುವ ಮನಃಸ್ಥಿತಿ ಹೊಂದಿರುವುದು ಗ್ರಾಮೀಣ ಭಾರತದ ಕೃಷಿಕರಲ್ಲಿ ಮಾತ್ರ.