ಹೊಸದಿಗಂತದ - ಮಾಂಬಳ - ಅಂಕಣ / 12-7-2017
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶಪಾಲ ಡಾ.ಕೆ.ಎಸ್.ಮೋಹನ್ ನಾರಾಯಣ ನೀರಿನ ಪಾಠಕ್ಕೆ ಸಿದ್ಧರಾಗುತ್ತಿದ್ದಾರೆ! ಈ ವರುಷದ ಕೊನೆಗೆ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಮತ್ತೆ ಏನಿದ್ದರೂ ನೀರಿನದ್ದೇ ಪಾಠ. ಅವರ ಪತ್ನಿ ಪೂರ್ಣಿಮಾ. ಮನೆಯ ನೀರಾವರಿ ಸಚಿವೆ.
ಉಜಿರೆ ಸನಿಹದ ಶಿವಾಜಿ ನಗರದಲ್ಲಿ ವಾಸವಿರುವ ಇವರಿಗೆ ಕುಡಿಯುವ ನೀರು ಮತ್ತು ಮನೆವಾರ್ತೆಗೆ ಬಾವಿಯ ನೀರೇ ಆಧಾರ. ಹನ್ನೆರಡು ವರುಷದಿಂದ ಚಾವಣಿಯ ಮೇಲೆ ಬಿದ್ದ ಮಳೆನೀರನ್ನು ಬಾವಿಗೆ ಮರುಪೂರಣ ಮಾಡುತ್ತಿದ್ದಾರೆ. ಈ ವರುಷದ ಮೇ-ಜೂನ್ ತಿಂಗಳಲ್ಲೂ ಬಾವಿಯ ನೀರು ಮೋಹನರ ಕೈ ಬಿಡಲಿಲ್ಲ.
ಚಾವಣಿಯ ನಾಲ್ಕನೇ ಮೂರು ಭಾಗದಲ್ಲಿ ಬಿದ್ದ ಮಳೆಯ ನೀರನ್ನು ಬಾವಿಗಿಳಿಸಲು ಪೈಪ್ ಜಾಲಗಳನ್ನು ಜೋಡಿಸಿದ್ದಾರೆ. ಬಾವಿಯ ಮೇಲೆ ತರಗಲೆ ಬೀಳದಂತೆ ಸಹಜವಾಗಿ ಜಾಲರಿ ಹಾಕಿರುತ್ತಾರೆ. ಅದರ ಮೇಲೆ ನೆರಳು ಬಲೆಯ ಹಾಸು. ಚಾವಣಿಯಿಂದ ಇಳಿದು ಬಂದ ಮಳೆಯ ನೀರು ಜಾಲರಿ, ನೆರಳುಬಲೆಯಲ್ಲಿ ಸೋಸಿಕೊಂಡೆ ಬಾವಿಗಿಳಿಯುತ್ತದೆ. ಮೊದಲ ಒಂದೆರಡು ಮಳೆಯ ನೀರನ್ನು ಬಾವಿಗಿಳಿಸುವುದಿಲ್ಲ. ಅದನ್ನು ಹೊರಗೆ ಕಳಿಸಲು ಗೇಟ್ವಾಲ್ವ್ ವ್ಯವಸ್ಥೆ.
ಚಾವಣಿಗೆ ನಾಲ್ಕಿಂದು ವ್ಯಾಸದ ಪಿವಿಸಿ ಪೈಪನ್ನು ಜೋಡಿಸಿದ್ದಾರೆ. ಎಲ್ಲಾ ಕಡೆ ಎರಡಿಂಚು ಪೈಪನ್ನು ಶಿಫಾರಸು ಮಾಡುತ್ತಾರೆ. ಇವರು ಉದ್ದೇಶ ಪೂರ್ವಕವಾಗಿಯೇ ನಾಲ್ಕಿಂಚು ಪೈಪನ್ನು ಅಳವಡಿಸಿದ್ದಾರೆ. ಒಂದು - ಕಸ, ಕಡ್ಡಿಗಳಿಂದ ಬ್ಲಾಕ್ ಆಗುವುದನ್ನು ತಪ್ಪಿಸಬಹುದು. ಇನ್ನೊಂದು ಮಳೆ ನಿಂತ ಕೂಡಲೇ ಚಾವಣಿಯ ನೀರೆಲ್ಲಾ ಬಾವಿಗೆ ಹರಿಯುತ್ತದೆ.
ಈ ವರುಷ ಚಾವಣಿಯ ಇನ್ನೊಂದು ಪಾಶ್ರ್ವಕ್ಕೂ ಪೈಪ್ ಅಳವಡಿಸಿದ್ದಾರೆ. 'ಚಾವಣಿಯ ಎಲ್ಲಾ ಮಳೆ ನೀರು ಬಾವಿ ಸೇರುತ್ತದೆ.' ಪೂರ್ಣಿಮಾ ಖುಷ್. ಬಾವಿಗೆ ಜಲಮರುಪೂರಣ ಮಾಡಿದ್ದರ ಪರಿಣಾಮವಾಗಿ ಸುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿದುದನ್ನು ಗಮನಿಸಿದ್ದಾರೆ. ಇವರಲ್ಲಿ ಎರಡು ಅಡಿ ಏರಿದರೆ, ಕೆಳಗಿನ ಮನೆಯವರ ಬಾವಿಯಲ್ಲಿ ಒಂದು ಅಡಿ ಏರುತ್ತದೆ ಎನ್ನುವ ಹಿಮ್ಮಾಹಿತಿ ಸಿಕ್ಕಿದೆ.
ಮನೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಶಿಬೆಟ್ಟಿನ ಅಂಬೇಡ್ಕರ್ ನಗರದಲ್ಲಿ ಮೋಹನರಿಗೆ ಜಾಗವಿದೆ. 1.60 ಎಕ್ರೆಯ ಒಂದು ಪ್ಲಾಟ್. ತೀರಾ ಇಳಿಜಾರು. ಸುಮಾರಾಗಿ ತಿರುಗಿದ 'V'' ಯಂತಿದೆ. ಇನ್ನೊಂದು ಮತ್ತೊಂದು ಪಕ್ಕದಲ್ಲೇ ಎರಡು ಎಕ್ರೆ. ಒಂದು ಬದಿಗೆ ಇಳಿಜಾರು. ರಬ್ಬರ್ ಗಿಡ ಹಾಕಿದ್ದಾರೆ. ಎಲ್ಲವೂ ಟ್ಯಾಪಿಂಗಿಗೆ ಬಂದಿವೆ. ಸಹಾಯಕರ ಅಲಭ್ಯದಿಂದಾಗಿ ಈಗ ಟ್ಯಾಪಿಂಗ್ ಮಾಡುತ್ತಿಲ್ಲ. ಒಟ್ಟು 3.60 ಎಕ್ರೆ. ಮಾರ್ಗಕ್ಕೆ ತಾಗಿಕೊಂಡಿರುವ ಜಾಗದಲ್ಲಿ ಮನೆಯಿದೆ. ಹಿಂದಿನ ವರುಷ ಹೊಸತಾಗಿ ಕೊಳವೆ ಬಾವಿ ಕೊರೆದಿದ್ದಾರೆ.
ತನ್ನ ಮತ್ತು ಪತ್ನಿಯ ಉಳಿತಾಯದ ಹಣವನ್ನು ವಿನಿಯೋಗಿಸಿ 1988ರಲ್ಲಿ ಜಾಗ ಖರೀದಿಸಿದ್ದರು. ಸುತ್ತೆಲ್ಲಾ ದಟ್ಟ ಕಾಡು. ನೀರಿನ ವ್ಯವಸ್ಥೆಯಿಲ್ಲದ ಪ್ರದೇಶ. 'ಇಲ್ಲಿ ಯಾಕೆ ಜಾಗ ಖರೀದಿ ಮಾಡಿದ್ರಿ' ಎಂದು ಅನ್ನುವವರೇ ಅಧಿಕವಾಗಿದ್ದರು. ತೀರಾ ಇಳಿಜಾರಾಗಿರುವ ಜಾಗದಲ್ಲಿ ಬಿದ್ದ, ಹರಿದು ಬಂದ ನೀರೆಲ್ಲವೂ ಇಂಗುವಂತೆ ಮಾಡಿದ್ದಾರೆ.
ಒಂದು ಬದಿ ರಸ್ತೆ ಹಾದುಹೋಗುತ್ತದೆ. ರಸ್ತೆಯ ಪಕ್ಕದ ಕಣಿಯಲ್ಲಿ ಹರಿಯುವ ನೀರನ್ನು ತನ್ನ ಜಾಗಕ್ಕೆ ತಿರುಗಿಸಲು ಇವರಿಗೆ ಬೇಸರವಿಲ್ಲ. ಅಲ್ಲಲ್ಲಿ ಇಂಗುಗುಂಡಿಗಳು, ಒಂದೆರಡು ಚಿಕ್ಕ ಕೊಳಗಳಂತಹ ರಚನೆಯಿದೆ. ಮೇಲ್ಭಾಗದ ಒಂದು ಪಾಶ್ರ್ವದಲ್ಲಿ ಕಟ್ಟದಂತಹ ರಚನೆ ಮಾಡಿದ್ದು, ನೀರು ವೇಗವಾಗಿ ಹರಿದು ಬರುವುದನ್ನು ತಡೆಯುತ್ತದೆ. ಮಳೆ ಬಂದಾಗ ಕಟ್ಟದಲ್ಲಿ ನೀರು ಏರಿ ನಿಲ್ಲುತ್ತದೆ.
ಇಪ್ಪತ್ತೈದು ಅಡಿ ಆಳದ ಬಾವಿಯೊಂದಿದೆ. ಅದರ ಕೆಳಭಾಗದಲ್ಲಿ ಬಂಡೆ ಇರುವ ಕಾರಣ ಮಾರ್ಚ್ ತಿಂಗಳಿಗೆ ನೀರು ಖಾಲಿ. ಮಳೆಗಾಲದಲ್ಲಿ ಈ ಬಾವಿಗೆ ನೀರು ಮರುಪೂರಣ ಆಗುತ್ತಾ ಇರುತ್ತದೆ. ರಬ್ಬರ್ ಗಿಡಗಳ ಪಕ್ಕ ಸ್ವಲ್ಪ ಹೆಚ್ಚೇ ಆಳವಾಗಿ ಸಮತಟ್ಟು ರಚಿಸಿದ್ದಾರೆ. "ಇದೂ ಕೂಡಾ ನೀರಿಂಗುವ ಜಲಗುಂಡಿ. ಇಷ್ಟೆಲ್ಲಾ ಇಂಗಿದ ನೀರು ಕೆಳಭಾಗದ ಜನರಿಗೆ ಪ್ರಯೋಜನವಾಗುವುದಂತೂ ಖಂಡಿತ. ಮೊದಲು ನೀರಿನ ಆಭಾವದ ಪ್ರದೇಶವಾಗಿದ್ದು, ಈಗ ಬಾವಿಗಳಲ್ಲಿ ನೀರಿದೆ ಎಂದು ಜನರಾಡುತ್ತಾರೆ," ಎನ್ನುತ್ತಾರೆ ಮೋಹನ್
ಈ ಎರಡೆಕರೆ ಜಾಗದಲ್ಲಿ ಏನಿಲ್ಲವೆಂದರೂ ರಬ್ಬರಿನ ಸಮತಟ್ಟು ಹೊಂಡವಲ್ಲದೆ ನೂರ ಇಪ್ಪತ್ತಕ್ಕೂ ಮಿಕ್ಕಿ ಇಂಗುಗುಂಡಿಗಳಿವೆ. ಈಚೆಗೆ ಜೆಸಿಬಿ ಯಂತ್ರದ ಮೂಲಕ ಹೊಂಡಗಳನ್ನು ಸ್ವಲ್ಪ ಆಳ-ಅಗಲ ಮಾಡಿದ್ದಾರೆ. ಜಾಗದ ಮೇಲಿಂದ ಮಳೆ ನೀರು ಹರಿಯುತ್ತಾ, ಹೊಂಡಗಳು ತುಂಬುತ್ತಾ ಬರುವ ಅಂದವನ್ನು ನೋಡಿ ಅನುಭವಿಸಬೇಕು. ಎಲ್ಲವೂ ಕೆರೆಯಂತೆ ಭಾಸವಾಗುತ್ತದೆ..
ಇವರ ಜಾಗದ ಕೆಳಭಾಗದಲ್ಲಿ ಸುಮಾರು ಹದಿನೈದಕ್ಕೂ ಮಿಕ್ಕಿ ಕುಟುಂಬಗಳಿವೆ. ಮಾರ್ಚ್ ಕೊನೆಗೆ ಅವರ ಬಾವಿಗಳೆಲ್ಲಾ ಆರುತ್ತಿದ್ದುವು. ಈಚೆಗೆ ಮೇ ತನಕ ಕುಡಿಯಲು ತೊಂದರೆಯಿಲ್ಲ ಎಂದು ಹಿಮ್ಮಾಹಿತಿ ಕೊಡುತ್ತಾರಂತೆ. ಇವರು ಜಾಗವನ್ನು ಖರೀದಿಸಿದ ಬಳಿಕ ಅನೇಕರು ತೋಟ ಎಬ್ಬಿಸಲು ಕೊಳವೆ ಬಾವಿ ಕೊರೆಸಿದ್ದರಂತೆ. ಅವೆಲ್ಲವೂ ವಿಫಲವಾಗಿ ಜಾಗವನ್ನೇ ಮಾರಿ ಹೋದ್ರು ಎಂದು ನೆನಪು ಮಾಡಿಕೊಳ್ಳುತ್ತಾರೆ. ಈಗ ಇಲ್ಲಿ ಶಿಕ್ಷಣ ಸಂಸ್ಥೆಯೊಂದು ಬೆಳೆಯುತ್ತಿದೆ.
ಮೋಹನರು ಹೊಸದಾಗಿ ಕೊಳವೆ ಬಾವಿ ಕೊರೆಯುವಾಗ ನೀರು ಸಿಕ್ಕುತ್ತೋ ಇಲ್ವೋ ಎನ್ನುವ ಆತಂಕ ಇತ್ತು. ಸುಮಾರು ಆರುನೂರ ಮೂವತ್ತೈದು ಅಡಿ ಆಳ. ಈ ಮಳೆಗಾಲದಲ್ಲಿ ಮಳೆನೀರನ್ನು ಮರುಪೂರಣ ಮಾಡುವ ಅಡಿಗಟ್ಟು ಮಾಡಿಕೊಂಡಿದ್ದಾರೆ. ತನ್ನನ್ನ ಜಾಗದಲ್ಲಿ ಬಿದ್ದ ಮಳೆಯ ಒಂದು ಹನಿ ನೀರು ಹೊರಗೆ ಹೋಗಬಾರದು, ಎಲ್ಲವೂ ಇಂಗಬೇಕು ಎನ್ನುವ ಜಲಜಿಪುಣತೆ ಈ ದಂಪತಿಯದ್ದು.
ಎರಡೂ ಜಾಗದಲ್ಲಿ ಇಷ್ಟೊಂದು ಮಳೆ ನೀರು ಇಂಗುವ ವ್ಯವಸ್ಥೆಯನ್ನು ಮೂರು ದಶಕದ ಹಿಂದಿನಿಂದಲೇ ಮಾಡುತ್ತಿದ್ದಾರೆ. ಇವರ ಜಾಗದಲ್ಲಿ ಸುಡು ಬಿಸಿಲಲ್ಲೂ ಹಸಿರು ದಟ್ಟವಾಗಿದೆ. ವಾತಾವರಣ ತಂಪಿದೆ. ಸುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿದೆ. 'ನೀರೆನ್ನುವುದು ಅಮೃತಕ್ಕೆ ಸಮಾನ' ಎಂದು ನಂಬಿರುವ ಡಾ.ಮೋಹನ ನಾರಾಯಣ ಮತ್ತು ಪೂರ್ಣಿಮಾ ನೀರಿನ ಅರಿವನ್ನು ಬಿತ್ತುತ್ತಿದ್ದಾರೆ.
ಬದುಕಿಗೆ ಬೇಕಾದಷ್ಟು ಸಂಪನ್ಮೂಲಗಳಿದ್ದರೂ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಹೊಂದಿರುವುದು ಶ್ಲಾಘ್ಯ. ಮಳೆ ಬಂದಾಗ ನೀರನ್ನು ಮರೆಯುವುದು ಜಾಣತನವಲ್ಲ, ಭೂಮಿಗೆ ನೀರುಣಿಸಿದರೆ ಮಾತ್ರ ಮೇಲೆತ್ತಲು ನಮಗೆ ಅಧಿಕಾರ ಎನ್ನುವ ನೀರಿನ ಸರಳ ಸೂತ್ರವನ್ನು ಅನುಷ್ಠಾನ ಮಾಡಿದ್ದಾರೆ. ಮಳೆ ಬಂದಾಗ ನೀರಿಂಗಿಸುವ ಎಲ್ಲಾ ಮಾತುಕತೆಗಳನ್ನು ಮರೆಯುವ ಮಂದಿಯತ್ತ ವಿಷಾದಿಸುತ್ತಾರೆ ಡಾ.ಮೋಹನ್.
0 comments:
Post a Comment