Tuesday, September 12, 2017

ಒಂದೇ ಕ್ಲಿಕ್ಕಿನಲ್ಲಿ ನೆಲದ ಜ್ಞಾನ

ಉದಯವಾಣಿಯ 'ನೆಲದ ನಾಡಿ' ಅಂಕಣ / 23-6-2017

             ದ್ರಾಕ್ಷಿ ಬೆಳೆಯ ಪ್ರಾಥಮಿಕ ಮಾಹಿತಿ ಬೇಕಿತ್ತು. ನೀವು ಸಂಬಂಧಪಟ್ಟ ಕೃಷಿಕರನ್ನು ಹುಡುಕಾಡುತ್ತೀರಿ. ಸಂಪರ್ಕ ಸಾಧ್ಯವಾಗಿಲ್ಲ, ನಿರಾಶರಾಗುತ್ತೀರಿ. ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ಅದನ್ನು ತೆಗೆದಿಡುತ್ತಿದ್ದರೆ ಸಹಾಯವಾಗುತ್ತಿತ್ತು ಎಂದು ಕೈಕೈ ಹಿಸುಕುತ್ತೀರಿ. ಮಳೆಗಾಲ ಶುರುವಾಯಿತು, ಜಲಮರುಪೂರಣ ವಿಧಾನಗಳ  ಮಾಹಿತಿಗಾಗಿ ಹಳೆಯ ಪತ್ರಿಕೆಗಳನ್ನು ತಿರುವಿ ಹಾಕುತ್ತೀರಿ. ಸಕಾಲಕ್ಕೆ ಮಾಹಿತಿ ಸಿಗದೆ ಚಡಪಡಿಸುತ್ತೀರಿ. 'ಕೃಷಿ ಕನ್ನಡ ಡಾಟ್ ಕಾಮ್' (www.krishikannada.com ) ನಲ್ಲಿ ಈ ಗೊಂದಲಗಳಿಗೆ ಉತ್ತರಗಳಿವೆ. ಒಂದೆರಡು ಕ್ಲಿಕ್ಗಳಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಕಾಣಸಿಗುತ್ತವೆ.
              ಈ ಕೃಷಿಸ್ನೇಹಿ ಜಾಲತಾಣವು ಸಾಗರದ ಕೃಷಿ ಕುಟುಂಬದ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ಪತ್ನಿ ಸೌಖ್ಯ ಮೋಹನ್ ಅವರ ಪರಿಕಲ್ಪನೆ ಮತ್ತು ಕನಸು. ನೆಲದ ಜ್ಞಾನವನ್ನು ಒಂದು ಕ್ಲಿಕ್ಕಿನಲ್ಲಿ ತೋರಿಸುವ ಯತ್ನ. ಪತ್ರಿಕೆಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳ ಕಡತಗಳು ಏನಿಲ್ಲವೆಂದರೂ ಇಪ್ಪತ್ತೈದು ಸಾವಿರ ಮೀರಬಹುದು. ಅವೆಲ್ಲವೂ ನಿಕಟಭವಿಷ್ಯದಲ್ಲಿ ಜಾಲತಾಣವನ್ನು ಏರಲಿವೆ. ವಿಷಯ ವೈವಿಧ್ಯವನ್ನು ಹೊಂದಿಕೊಂದು ಈಗಾಗಲೇ ಸಾವಿರದೈನೂರಕ್ಕೂ ಮಿಕ್ಕಿ ಕಡತಗಳು ಏರಿವೆ.
              1995. ರಾಜಧಾನಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮೋಹನ್ ಪಿಎಚ್ಡಿ ಮಾಡುತ್ತಿದ್ದರು. ಭಾರತೀಯ ಕೃಷಿ ಪರಂಪರೆಯತ್ತ ಯೋಚಿಸುವ ವಿದ್ಯಾರ್ಥಿ ಒಕ್ಕೂಟ 'ಚಿಂತನ ಬಳಗ'ದ ಪರಿಚಯ. ರಾಸಾಯನಿಕ ಕೃಷಿಗೆ ಪರ್ಯಾಾಯವಾಗಿ ಪರಿಸ್ನೇಹಿ ಕೃಷಿ ವಿಧಾನ, ಭಾರತೀಯ ಕೃಷಿ ಪರಂಪರೆಯ ಬಗ್ಗೆ ಚರ್ಚೆ. ಕೃಷಿಕರ, ಕೃಷಿಕಪರ ಪತ್ರಿಕೆಗಳಲ್ಲಿನ ಕೃಷಿ ಮಾಹಿತಿಗಳ ಪರಿಚಯ. ಪಿಎಚ್ಡಿ ನಂತರ ಸಂಶೋಧನಾ ಕೇಂದ್ರವೊಂದರಲ್ಲಿ ಭಾರತೀಯ ಸಸ್ಯವೈವಿಧ್ಯ ಗಣಕೀಕರಣದ ಯೋಜನೆಯ ಸಮನ್ವಯಕಾರರಾಗಿ ನಿಯುಕ್ತಿ. ಕೃಷಿ ಮಾಹಿತಿಗಳನ್ನೂ ಗಣಕೀಕರಿಸಬೇಕೆನ್ನುವ ಕನಸಿಗೆ ಮನಸಾ ಬೀಜಾಂಕುರ.
               ಕೃಷಿಯೇ ಜೀವ ವೈವಿಧ್ಯ ನಾಶಕ್ಕೆ ಬಹುಪಾಲು ಕಾರಣ ಎನ್ನುವ ಅಪವಾದ ಕೃಷಿ ಕ್ಷೇತ್ರಕ್ಕಿದೆ. ನಿಜಕ್ಕೂ ಜೀವ ವೈವಿಧ್ಯವನ್ನು ಉಳಿಸುತ್ತಿರುವುದು ಕೃಷಿಕರು ಎನ್ನುವ ಸ್ಪಷ್ಟ ಅರಿವು ಮೋಹನ್ ತಲೆಯಲ್ಲಿತ್ತು. ಇದಕ್ಕೆ ಬೆಳಕೊಡ್ಡುವುದು ಅನಿವಾರ್ಯ ಅನ್ನುವ ಯೋಚನೆ ಬಂದದ್ದೇ ತಡ, ನೆರವಿಗೆ ಬಂದುದು ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯ ಸಂಚಿಕೆಗಳು. ಜೀವವೈವಿಧ್ಯಕ್ಕೆ ಪೂರಕವಾಗಿರುವ ಲೇಖನಗಳೆಲ್ಲಾ ಒಂದೇ ಕಡೆ ಲಭ್ಯವಾದರೆ ಕೃಷಿಕರಿಗೆ ಸಹಕಾರಿ. ಅದು ಕಂಪ್ಯೂನಲ್ಲಿದ್ದರೆ ಏನು ಪ್ರಯೋಜನ? ಎಲ್ಲರಿಗೂ ಸಿಗುವಂತಾಗಲು ಜಾಲತಾಣ ರೂಪಿಸಲು ನಿರ್ಧಾರ ಮಾಡಿದೆ. ಹೆಚ್ಚು ಬಂಡವಾಳ ಬೇಡುವ ಕೆಲಸ. ಮೊದಲಿಗೆ ಅದಿತಿ ಆರ್ಗಾನಿಕ್ ಸರ್ಟಿಫಿಕೇಶನ್ ಸಂಸ್ಥೆಯ ಡಾ. ನಾರಾಯಣ ಉಪಾಧ್ಯಾಯರು ಉತ್ತೇಜನ ನೀಡಿದರು. ಒಂದಷ್ಟು ಸ್ನೇಹಿತರು ಸ್ಪಂದಿಸಿದರು ಎಂದು ಜಾಲತಾಣ ಆರಂಭದ ದಿನಮಾನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
             2013ರಲ್ಲಿ ಕೃಷಿ ಕನ್ನಡ ಜಾಲತಾಣ ಲೋಕಾರ್ಪಣೆ. ಚಾಲು ಆಗಲು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ವೆಚ್ಚವಾಗಿತ್ತು. ಆತ್ಮೀಯರ ಸಹಕಾರ, ಜತೆಗೆ ತನ್ನ ಗಳಿಕೆಯನ್ನು ಸೇರಿಸಿದ್ದರು. ಲಾಭೋದ್ದೇಶವಲ್ಲದ ಕಾಯಕ. ಕೃಷಿ ಹಿನ್ನೆಲೆಯವರಾದ್ದರಿಂದ ಕೃಷಿ ಕ್ಷೇತ್ರಕ್ಕೆ ಸೇವಾ ಭಾವದಿಂದ ಈ ಕೆಲಸಕ್ಕೆ ಕೈಯಿಕ್ಕಿದ್ದಾರೆ. ಜಾಲತಾಣ ರೂಪೀಕರಣದ ಮೊದಲು ನಾಲ್ಕೈದು ವರುಷದ ಸಿದ್ಧತೆಯನ್ನು ಮಾಡಿದ್ದರು. ಕನ್ನಡದ ಎಲ್ಲಾ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾದ ಕೃಷಿ ಲೇಖನಗಳನ್ನು ಸಂಗ್ರಹಿಸುತ್ತಾ ಬಂದರು. ಅದನ್ನು ಸ್ಕಾನ್ ಮಾಡಿ ಪಿಡಿಎಫ್ ಕಡತಗಳನ್ನಗಿ ಮಾರ್ಪಡಿಸಿದರು. ಮೋಹನ್ ಕಂಪ್ಯೂನಲ್ಲಿದ್ದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿದ ಕಡತಗಳು ಜಾಲತಾಣ ಏರಲು ಕಾಯುತ್ತಿವೆ!
              ಅಡಿಕೆ ಪತ್ರಿಕೆ, ಸುಜಾತ, ಹಿತ್ತಲಗಿಡ, ಸಿರಿ ಸಮೃದ್ಧಿ, ಜಲಸಿರಿ, ಸಹಜ ಸಾಗುವಳಿ, ಶ್ರಮಜೀವಿ ಅಗ್ರಿಫಿಲ್ಮ್ಸ್ ಮತ್ತು ಎಲ್ಲಾ ದಿನಪತ್ರಿಕೆಗಳ ಸಂಪಾದಕರು ಜಾಲತಾಣದ ಉದ್ದೇಶವನ್ನು ಅರಿತು ಒಪ್ಪಿಗೆ ನೀಡಿದ್ದಾರೆ. ಸುಮನಸ್ಸಿಂದ ಸಹಕರಿಸಿದ್ದಾರೆ. ಆರ್ಥಿಕ ಲಾಭೋದ್ದೇಶ ಇಲ್ಲದ ಕಾರಣ ಬೆಂಬಲ ನೀಡಿದ್ದಾರೆ. ಎನ್ನುವ ಮೋಹನ್, ನಾಲ್ಕು ವರುಷಗಳಲ್ಲಿ ಸುಮಾರು ಆರು ಲಕ್ಷ ಮಂದಿ ಜಾಲತಾಣವನ್ನು ವೀಕ್ಷಿಸಿದ್ದಾರೆ, ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ.  ಕೃಷಿ ಕನ್ನಡ ಡಾಟ್ ಕಾಮ್ನಲ್ಲಿ ಹನ್ನೆರಡು ಘಟಕಗಳಿವೆ. ಮಾಹಿತಿ ಹುಡುಕಾಟ, ಪ್ರಶ್ನೋತ್ತರ, ಇ-ಮಾರುಕಟ್ಟೆ, ಚಿತ್ರಗಳ ಸಂಚಿ, ರೋಗ-ಕೀಟ ಪತ್ತೆ, ಕೃಷಿಕರ ಮತ್ತು ಕೃಷಿ ಪತ್ರಕರ್ತರ ವಿಳಾಸ, ಕೃಷಿ ವಿಜ್ಞಾನಿಗಳ ವಿಳಾಸ, ಉಪಯುಕ್ತ ವೆಬ್ಸೈಟ್ಗಳ ಕೊಂಡಿಗಳು, ಕೃಷಿ ಪುಸ್ತಕಗಳು.. ಹೀಗೆ. ಮಾಹಿತಿ ಘಟಕದಲ್ಲಿ ಕೃಷಿ ಲೇಖನವನ್ನು ಏರಿಸುವುದು, ಅದನ್ನು ವರ್ಗೀಕರಣ ಮಾಡುವುದು ಶ್ರಮ ಬೇಡುವ ಕೆಲಸ.
                ಪ್ರಶ್ನೋತ್ತರ ವಿಭಾಗ ಕುತೂಹಲಕರ. ವಿವಿಧ ನಮೂನೆಯ ಪ್ರಶ್ನೆಗಳನ್ನು ಅವಲೋಕಿಸಿದಾಗ ರೈತರ ಸಂಕಟ ಅರ್ಥವಾಗುತ್ತದೆ. ನಾನು ತಳಿ ವಿಭಾಗದಲ್ಲಿ ವಿಶೇಷಾಧ್ಯಯನ ಮಾಡಿದರೂ ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಗಳಿವೆ. ಅವಕ್ಕೆಲ್ಲಾ ಉತ್ತರ ಕೊಡಲೇ ಬೇಕಲ್ವಾ. ಇಂತಹ ಪ್ರಶ್ನೆಗಳನ್ನು ಬೇರೆ ತಜ್ಞರಿಗೆ ನೀಡಿ ಅವರಿಂದ ಉತ್ತರ ಪಡೆದು ಸಂಬಂಧಪಟ್ಟ ಕೃಷಿಕರಿಗೆ ಉತ್ತರ ರವಾನಿಸಬೇಕಾಗುತ್ತದೆ. ಉದಾ? ದ್ರಾಕ್ಷಿ ನಮಗೆ ಹೊಸತು. ಇದಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಕಷ್ಟಕರ. ಇಂತಹ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗೆ ಸಂಬಂಧಪಟ್ಟ ವಿಷಯ ತಜ್ಞರಲ್ಲಿ ಸಮಾಲೋಚಿಸಿ ಉತ್ತರ ಪಡೆಯುತ್ತೇನೆ. ಮುಖ್ಯವಾಗಿ ರೋಗ-ಕೀಟಗಳ ಕುರಿತು ಪ್ರಶ್ನೆಗಳೇ ಅಧಿಕ. "ನನ್ನ ಸ್ನೇಹ ವಲಯದಲ್ಲಿ ಕೃಷಿಕರಿದ್ದಾರೆ, ಸ್ನೇಹಿತರಿದ್ದಾರೆ, ತಜ್ಞರಿದ್ದಾರೆ. ಕೃಷಿ ತಜ್ಞರಿಂದಲೂ ಉತ್ತರ ಕಷ್ಟವಾದಾಗ ಅನುಭವಿ ಕೃಷಿಕರ ಸಹಕಾರ ಪಡೆಯುತ್ತೇನೆ. ವಿಜ್ಞಾನಿಗಳ ಜ್ಞಾನದೊಂದಿಗೆ ರೈತರ ಜ್ಞಾನವನ್ನು ಮಿಳಿತಗೊಳಿಸುವ ಚಿಕ್ಕ ಯತ್ನವಷ್ಟೇ." ಮೋಹನರ ಈ ಅಭಿಪ್ರಾಯದ ಒಳತೋಟಿಯನ್ನು ಗಮನಿಸಿದಾಗ ಮಾಹಿತಿ ಮತ್ತು ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ವ್ಯವಸ್ಥೆಗಳು ವಿಫಲವಾಗುತ್ತಿರುವ ಸುಳಿವು ಸಿಗುತ್ತಿದೆ.
               ಸಮಸ್ಯೆಗಳಿಗೆ ಪರಿಹಾರ ಕೋರಿದ ಸಾವಿರದಷ್ಟು ಕೃಷಿಕರಿಗೆ ಮಿಂಚಂಚೆಯಲ್ಲಿ ಉತ್ತರ ನೀಡಿದ್ದಾರೆ. ಅದಕ್ಕೆ ಪೂರಕವಾದ ಪ್ರಕಟಿತ ಲೇಖನಗಳ ಕಡತಗಳನ್ನೂ ಕಳಿಸುತ್ತಾರೆ. ಉದಾ: ಹೆಬ್ಬೇವು ಕೃಷಿ ಮಾಹಿತಿಯನ್ನು ಒಬ್ಬರು ಅಪೇಕ್ಷೆ ಪಟ್ಟಿದ್ದಾರೆ ಎನ್ನೋಣ. ಮೋಹನರ ಕಂಪ್ಯೂನಲ್ಲಿರುವ ಕಡತದಿಂದ ಹತ್ತಾರು ಹೆಬ್ಬೇವು ಲೇಖನಗಳನ್ನು ಕಳುಹಿಸಿಕೊಡುತ್ತಾರೆ. ಇಷ್ಟಕ್ಕೂ ಮಾಹಿತಿ ಸಾಲದು ಎಂದಾದರೆ ಕೃಷಿಕರೇ ಫೋನ್ ಮೂಲಕ, ವಾಟ್ಸಪ್ ಮೂಲಕ ಸಂಪರ್ಕಿಸುತ್ತಾರೆ. ಫೇಸ್ಬುಕ್ಕನ್ನು ಬಳಸುವವರಿದ್ದಾರೆ. ಈ ತಾಣಗಳ ಮೂಲಕ ಬಂದ ಪ್ರಶ್ನೆ, ಮಾಹಿತಿಗಳಿಗೆ ಸೌಖ್ಯ ಮೋಹನ್ ಉತ್ತರಿಸುತ್ತಾರೆ.
               ಜಾಲತಾಣದಲ್ಲಿರುವ ಮಾಹಿತಿಗಳು ಕನ್ನಾಡಿಗೆ ಯಾಕೆ ಸೀಮಿತ? "ಆಂಗ್ಲ ಭಾಷೆಯದನ್ನೂ ಸೇರಿಸಬಹುದಲ್ಲಾ? ಕನ್ನಡ  ನಾಡಿನ ರೈತರು ಅನ್ವೇಷಣೆ ಮಾಡಿದ ಜ್ಞಾನವನ್ನು ದಾಖಲಿಸುವ ಮತ್ತು ಕನ್ನಾಡಿನ ಕೃಷಿಕರಿಗೆ ಒದಗಿಸುವ ಉದ್ದೇಶ ನಮ್ಮದು. ಯಾವುದೇ ಅರ್ಥಿಕ ಗಳಿಕೆಯ ಉದ್ದೇಶವಿಲ್ಲ. ಜಾಹೀರಾತಿಗಾಗಿ ವಿಶೇಷ ಶ್ರಮ ಹಾಕಲು ಪುರುಸೊತ್ತಿಲ್ಲ. ಆಸಕ್ತರು ಮುಂದೆ ಬಂದರೆ ಪರಿಶೀಲಿಸಬಹುದೇನೋ. ಪ್ರತೀ ವರುಷ ಮೂವತ್ತು ಸಾವಿರ ರೂಪಾಯಿ ಜಾಲತಾಣ ನಿರ್ವಹಣೆಗೆ ಬೇಕಾಗುತ್ತದೆ," ಎನ್ನುತ್ತಾರೆ ಮೋಹನ್ ತಲಕಾಲುಕೊಪ್ಪ.
                 ಜಾಲತಾಣ ಇನ್ನೂ ಅಭಿವೃದ್ಧಿಯಾಗಬೇಕು. ವಿನ್ಯಾಸ ಸುಧಾರಿಸಬೇಕು. ಮಾಹಿತಿ ತುಂಬುತ್ತಾ ಇರಬೇಕು. ಅದು ಸದೃಢವಾಗಲು ಆರ್ಥಿಕ ಚೈತನ್ಯ ಬೇಕು. ತಾಣದಲ್ಲಿರುವ ಘಟಕಗಳ ಬಳಕೆಯನ್ನು ಹಗುರಗೊಳಿಸಬೇಕು. ಆಡಿಯೋ, ವೀಡಿಯೋ, ಯಂತ್ರೋಪಕರಣಗಳು, ಹೋಮ್ಸ್ಟೇ ಮಾಹಿತಿ.. ಇವನ್ನೆಲ್ಲಾ ಕಾಲ ಕಾಲಕ್ಕೆ ಒದಗಿಸಬೇಕು. ಮೋಹನ್ ಮತ್ತು ಸೌಖ್ಯರ ತಲೆತುಂಬಾ ಇರುವ ಯೋಜನೆಗಳಿವು. ಕೃಷಿ ಪತ್ರಕರ್ತರು ನಮ್ಮ ಯಾದಿಯನ್ನು ಜಾಲತಾಣಕ್ಕೆ ನೀಡಿದ್ದಾರೆ. ಕೃಷಿಕರು ಒದಗಿಸಿದ್ದಾರೆ. ಕೃಷಿ ವಿಜ್ಞಾನಿಗಳು ಅವರಾಗಿಯೇ ಮಾಹಿತಿ ಕೊಟ್ಟಿರುವುದು ಕಡಿಮೆ, ಎನ್ನುತ್ತಾರೆ ಮೋಹನ್.
               ಕೃಷಿ ಕನ್ನಡ ಡಾಟ್ ಕಾಮ್ - ಇದರ ಒಟ್ಟೂ ವ್ಯವಸ್ಥೆಯು ಕೃಷಿ ಸ್ನೇಹಿಯಾಗಿದೆ. ಕೃಷಿ ಹಿನ್ನೆಲೆಯ ಮೋಹನ್, ಕೃಷಿಕರಿಗಾಗಿ ಏನಾದರೂ ಮಾಡಬೇಕೆನ್ನುವ ತುಡಿತವು ಅವರನ್ನು ಜಾಲತಾಣದ ರೂಪೀಕರಣಕ್ಕೆ ಪ್ರೇರಣೆ ನೀಡಿತು. ಅಮೇರಿಕಾದ ನಾಗೇಂದ್ರ, ಶಿರಸಿ ಅರಣ್ಯ ಕಾಲೇಜಿನ ಡಾ.ವಾಸುದೇವ, ಶಿರಸಿಯ ಟಿ.ಎಸ್.ಎಸ್., ಎರಾ ಆರ್ಗಾನಿಕ್ ಇದರ ಜಯರಾಮ್, ಸಹಜ ಸಮೃದ್ಧದ ಕೃಷ್ಣ ಪ್ರಸಾದ್, ಶ್ರೀ ಪಡ್ರೆ.. ಮೊದಲಾದವರ ಉತ್ತೇಜನ ಸಿಗದಿದ್ದರೆ ಜಾಲತಾಣ ಶುರುವಾಗುತ್ತಲೇ ಇರಲಿಲ್ಲ, ಎಂದು ಮೋಹನ್ ವಿನೀತರಾಗುತ್ತಾರೆ.

0 comments:

Post a Comment