ಹೊಸದಿಗಂತದ - ಮಾಂಬಳ - ಅಂಕಣ / 9-9-2017
ಮನುಷ್ಯರಿಗೂ ಪ್ರಾಣಿಗಳಿಗೂ ಹೇಳಲಾಗದ, ವರ್ಣಿಸಲಾಗದ ಭಾವ ಸಂಬಂಧಗಳಿವೆ. ಬೆಕ್ಕು, ನಾಯಿ, ಪಶುಗಳು ಮೂಕವಾದರೂ ಮನುಷ್ಯನ ಭಾವವನ್ನು ಗ್ರಹಿಸಬಲ್ಲವು. ಮನವನ್ನು ಓದಬಲ್ಲವು. ಮನುಷ್ಯನಾದರೋ ಭಾವ-ಸಂಬಂಧಗಳಿಲ್ಲದೆ ವ್ಯವಹರಿಸುವ, ಕೆಲವೊಮ್ಮೆ ಪ್ರಾಣಿಗಳಷ್ಟೂ ಯೋಚನಾಶಕ್ತಿಯಿಂದ ವಿರಹಿತನಾಗುವ ಮನಃಸ್ಥಿತಿಗಳಿವೆ.
ಕೃಷಿಯಲ್ಲಿ ಪ್ರಾಣಿಗಳ ಬಳಕೆ ಪ್ರಾಚೀನ. ಗದ್ದೆ ಬೇಸಾಯಕ್ಕೆ ಎತ್ತುಗಳು, ಕೋಣಗಳನ್ನು ಬಳಸುವುದು ಹೊಸತೇನಲ್ಲ. ಬದಲಾದ ಕಾಲಘಟ್ಟದಲ್ಲಿ ಅವುಗಳ ದುಡಿಮೆಯ ಸ್ಥಾನಕ್ಕೆ ಯಂತ್ರಗಳು ಬಂದಿವೆ. ಭತ್ತದ ಕೃಷಿಗೆ ಹಿನ್ನಡೆಯಾದ ಬಳಿಕ ಅವೆಲ್ಲವೂ ಅಜ್ಞಾತವಾಗಿದೆ. ಇಲ್ನೊಡಿ, ಕೃಷಿಕರೊಬ್ಬರ ತೋಟದಲ್ಲಿ ಕತ್ತೆಗಳು ಪ್ರವೇಶ ಮಾಡಿವೆ. ತಿಂದುಂಡು 'ಕತ್ತೆಯ ಹಾಗೆ' ಅವುಗಳು ಬಿದ್ದುಕೊಳ್ಳುವುದಿಲ್ಲ! ಅವೀಗ ತೋಟದ ಹೊರೆಯಾಳುಗಳು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಪಡ್ನೂರಿನ ನಾಗೇಶ ಶರ್ಮರಲ್ಲಿಗೆ ಇಬ್ಬರು - ಬೋರ, ರಾಗಿಣಿ - ತೋಟದ ಕೆಲಸಕ್ಕೆ ಆಗಮಿಸಿದ್ದಾರೆ. ಅವರು ಹೊರೆ ಕೆಲಸವನ್ನು ಹಗುರ ಮಾಡುವ ಶ್ರಮಜೀವಿಗಳು. ಕರಾವಳಿಯ ವಾತಾವರಣಕ್ಕೆ ಈ ಶ್ರಮಜೀವಿಗಳು ಒಗ್ಗಿಕೊಳ್ಳುತ್ತಿದ್ದಾರೆ. ಒಡೆಯನ ಭಾಷೆಯನ್ನು ಕಲಿಯುತ್ತಿವೆ. ಕಳೆದ ಋತುವಿನಲ್ಲಿ ಮರದಿಂದ ಬಿದ್ದ ಅಡಿಕೆಯನ್ನು, ತೆಂಗಿನಕಾಯಿಯನ್ನು ಬೋರ, ರಾಗಿಣಿಯರೇ ಅಂಗಳಕ್ಕೆ ಹೊತ್ತು ತಂದುವು!
ಶರ್ಮರಿಗೆ ಬೇಲೂರಿನಲ್ಲಿ ಕೃಷಿ ಭೂಮಿಯಿದೆ. ಆಗಾಗ್ಗೆ ಅಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಹೀಗೆ ಹೋದಾಗಲೆಲ್ಲಾ ಕುರಿ ಮಂದೆಯನ್ನು, ಕತ್ತೆಯ ಸಮೂಹವನ್ನು ನೋಡಿದ್ದರು. ಮೈಸೂರಿನಲ್ಲಿ ಕತ್ತೆಯನ್ನು ಸಾಗಾಟಕ್ಕೆ, ಹೊರೆ ಕೆಲಸಗಳಿಗೆ ಬಳಸುವುದನ್ನು ಕೇಳಿದ್ದರು.
ಈಚೆಗೆ ಶಿವಮೊಗ್ಗದ ಸುರೇಶ್ ಅಯ್ಯರ್ ಕತ್ತೆ ಮೇಲೆ ಹೊರೆ ಕೆಲಸಗಳನ್ನು ನಿಭಾಯಿಸುವ ಸುದ್ದಿಗೆ ಶರ್ಮರ ಕಿವಿಯರಳಿತು. ಅವರು ತಮಿಳುನಾಡಿನ ಅಲೆಮಾರಿಗಳ ತಂಡ ಬಂದಿದ್ದಾಗ ಅವರಿಂದ ಕತ್ತೆಯನ್ನು ಖರೀದಿಸಿದ್ದರು. ತೋಟದ ಹೊರೆಯಾಳಾಗಿ ಸುರೇಶರಿಗೆ ಸಹಕರಿಸುತ್ತಿದೆ. ಮನೆಯ ಒಬ್ಬ ಸದಸ್ಯನಂತೆ ಬೆಳೆಯುತ್ತಿದೆ. ಶರ್ಮರಿಗೆ ತಾನೂ ಪ್ರಯೋಗ ಮಾಡೋಣ ಅನಿಸಿತು.
ಕತ್ತೆಯನ್ನು ಕೆಲಸಕ್ಕೆ ಬಳಸುವ ಯಾವುದೇ ಪೂರ್ವಾನುಭವ ಇಲ್ಲದ ಶರ್ಮರು ರಿಸ್ಕ್ ತೆಕ್ಕೊಂಡರು. ನಮ್ಮ ನೆಲದಲ್ಲಿ ಏನೂ ಕೆಲಸ ಮಾಡಿಲ್ಲ ಅಂತಿಟ್ಟುಕೊಳ್ಳೋಣ, ಎರಡು ಪ್ರಾಣಿಯನ್ನು ಸಾಕಿದಂತಾಯಿತು ಅಷ್ಟೇ. ಎಂದು ನಿರ್ಧಾರ ಮಾಡಿದರು. ತುಮಕೂರಿನಿಂದ ಗೊಬ್ಬರ ಸರಬರಾಜು ಮಾಡುವ ಮಧ್ಯವರ್ತಿಗಳಲ್ಲಿ ಮಾತುಕತೆ ನಡೆಸಿದರು. ಹದಿನೆಂಟುವರೆ ಸಾವಿರ ರೂಪಾಯಿಗೆ ತುಮಕೂರಿನಿಂದ ಪಡ್ನೂರಿಗೆ ಕತ್ತೆಗಳು ಬಂದು ವರುಷವಾಗುತ್ತಾ ಬಂತು.
ಕತ್ತೆಯು ಬಹಳ ಸೂಕ್ಷ್ಮ ಪ್ರಾಣಿ. ಅಷ್ಟೇ ಅಂಜುಬುರುಕ ಕೂಡಾ. ಅಂಗಳದಿಂದ ತೋಟಕ್ಕೆ ಹೋಗುವ ದಾರಿ ಪರಿಚಿತವಾದರೆ ಅದೇ ದಾರಿಯಲ್ಲಿ ಹೋಗುತ್ತವೆ, ಬರುತ್ತವೆ. ಕಳೆದ ಹತ್ತು ತಿಂಗಳಿನಿಂದ ಕತ್ತೆಯಿಂದಾಗಿ ತೊಂದರೆಯಾಗಿಲ್ಲ. ಅವುಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭಾಷೆಯನ್ನು ಕಲಿಸಬೇಕು. ಎನ್ನುತ್ತಾರೆ. ಈಗ ಹೇಗೂ ಮಳೆಗಾಲ. ಹೇಳುವಂತಹ ಕೆಲಸವಿಲ್ಲ. ಹಾಗಾಗಿ ಅವಕ್ಕೆ ಮಳೆಗಾಲದ ರಜೆ!
ಶರ್ಮರ ಮನೆಯ ಕೆಳಗೆ ಇಳಿಜಾರು ಪ್ರದೇಶ. ಮೇಲೆ ಏರು ಜಾಗ. ಇಲ್ಲೆಲ್ಲಾ ಅಡಿಕೆ ತೋಟವನ್ನು ಎಬ್ಬಿಸಿದ್ದಾರೆ. ತುಂಬಾ ಏರಿನ ಜಾಗವಾದ್ದರಿಂದ ಯಾಂತ್ರಿಕ ಗಾಡಿಗಳು ಸಾಗಾಟ ಕೆಲಸವನ್ನು ಸುಲಲಿತವಾಗಿ ಮಾಡುವ ಕುರಿತು ಗುಮಾನಿಯಿದೆ. ಅಲ್ಲದೆ ಈಗಾಗಲೇ ಪ್ರಯೋಗಿಸಿದ ಕೈಗಾಡಿಗಳು ಶರ್ಮರನ್ನು ಖುಷಿಪಡಿಸಲಿಲ್ಲ. ಬೇರೆ ಪಾರ್ಯಾಯ ದಾರಿಗಳತ್ತ ಯೋಚಿಸುತ್ತಿದ್ದರು. ಬರುವ ಸೀಸನ್ನಿನಲ್ಲಿ ಅಡಿಕೆ ಗೊನೆಗಳನ್ನೂ ಬೋರ, ರಾಗಿಣಿಯರು ಸಾಗಿಸಬೇಕು ಎನ್ನುವುದು ಆಶಯ.
ಬೇಸಿಗೆಯಲ್ಲಿ ಸಂಜೆ ಬಿಟ್ಟರೆ ರಾತ್ರಿಯಿಡೀ ತೋಟದಲ್ಲಿರುತ್ತವೆ. ಹೊಟ್ಟೆ ತುಂಬಾ ಹುಲ್ಲು ಮೇಯುತ್ತವೆ. ಬೆಳಿಗ್ಗೆ ಅವಾಗಿಯೇ ಕಟ್ಟುವ ಜಾಗದಲ್ಲಿ ಹಾಜರ್. ಅಕ್ಕಿ ತೊಳೆದ ನೀರು, ನೆಲಗಡಲೆ ಹಿಂಡಿ, ಹಾಳೆ, ಸೋಗೆ, ಪಪ್ಪಾಯಿ ಸೋಗೆ.. ಅವುಗಳ ಆಹಾರ. ನಾವದನ್ನು ಫ್ರೆಂಡ್ಸ್ ಆಗಿ ಟ್ರೀಟ್ ಮಾಡಿದರೆ ಹೇಳಿದಂತೆ ಕೇಳುತ್ತವೆ. ಎನ್ನುತ್ತಾರೆ. ಅದುವೇ ಭಾವ-ಭಾವ ಸಂಬಂಧ. ಪ್ರಾಣಿಗಳಿಗೂ ಭಾಷೆಯಿದೆ, ಸಂವಹನ ಕೌಶಲವಿದೆ. ಅದು ಅರ್ಥವಾದರೆ ಕಷ್ಟವಲ್ಲ. ಸ್ವಲ್ಪ ಸಮಯ ಬೇಕು.
ಶರ್ಮರು ತೋಟಕ್ಕೆ ಹೊರಟಾಗ ಕತ್ತೆಗಳೂ ಹಿಂಬಾಲಿಸುತ್ತವೆ. ಕೆಲವೊಮ್ಮೆ ತೋಟದಲ್ಲಿ ಮೇದುಕೊಂಡಿದರೆ ಶರ್ಮರು ಹೋದಾಗ ಹಿಂಬಾಲಿಸುತ್ತವೆ. ಪ್ಲಾಸ್ಟಿಕ್ ಗೋಣಿಯನ್ನು ಕತ್ತೆಯ ಬೆನ್ನಿಗೆ ಎರಡೂ ಕಡೆ ತೂಗುವಂತೆ ಬಿಗಿಯುತ್ತಾರೆ. ಬಿದ್ದ ಹಣ್ಣಡಿಕೆಯನ್ನು ಗೋಣಿಗೆ ಹಾಕುತ್ತಾರೆ.
ಹಣ್ಣಡಿಕೆಯು ಗೋಣಿಯಲ್ಲಿ ತುಂಬಿತು ಎಂದಾದರೆ ಮೈದಡಿವಿದರೆ ಆಯಿತು, ಎಕ್ಸಿಲೆಟರ್ ಕೊಟ್ಟಂತೆ! ನೇರವಾಗಿ ಅಂಗಳದತ್ತ ಮುಖಮಾಡುತ್ತವೆ. ಡೌನ್ಲೋಡ್ ಮಾಡಲು ಒಬ್ಬರು ಬೇಕಷ್ಟೇ. ಕತ್ತೆಯ ಬೆನ್ನಿಗೇರಿಸಿದ ಎರಡೂ ಬದಿಯ ಚೀಲಗಳಲ್ಲಿ ಸಮಭಾರ ಇರುವಂತೆ ನೋಡಿಕೊಳ್ಳಬೇಕು.
"ಈ ವರುಷ ಕತ್ತೆಗಳಿಗೂ ಇವರಿಗೂ ಅಪ್ರೆಂಟಿಸ್ಶಿಪ್ಪು. ನನಗೆ ಇದು ಆರಂಭ. ತಪ್ಪು ಮಾಡುತ್ತಾ ಕಲಿತುಕೊಳ್ಳುತ್ತೇನೆ. ಈಗಿನ ಅಲ್ಪ ಕಾಲದ ಕ್ಷಮತೆಯನ್ನು ಕಂಡಾಗ ಮುಂದೆ ಇದನ್ನು ಎಲ್ಲಾ ಹೊರೆ ಕೆಲಸಗಳಿಗೆ ಬಳಸಬಹುದು ಎನ್ನುವ ವಿಶ್ವಾಸ ಬಂದಿದೆ" ಎನ್ನುತ್ತಾರೆ.
ಮೇಯಲು ಬಿಟ್ಟರೆ ತರಕಾರಿ, ಬಾಳೆಗಳಿಗೆ ಬಾಯಿ ಹಾಕುವುದು ತೀರಾ ಕಡಿಮೆ. ಇಲ್ಲವೆಂದಲ್ಲ. ತರಕಾರಿಯ ಮಧ್ಯೆ ಇರುವ ಹುಲ್ಲನ್ನು ತಿನ್ನುತ್ತವೆ. ಇಂಟರ್ಲಾಕ್ ಎಡೆಯಲ್ಲಿ ಮೇಲೆದ್ದು ಬರುವ ಹುಲ್ಲು ತಿನ್ನಲು ಅವಕ್ಕೆ ಖುಷಿ. ಈಗೀಗ ಬಾಳೆ, ತರಕಾರಿ ಗಿಡಗಳ ರುಚಿ ಸಿಕ್ಕಿದೆ. ಜೋರು ಮಾಡಿದರೆ ತಿನ್ನುವುದು ಜಾಸ್ತಿ - ಎಂದು ದನಿಗೂಡಿಸಿದರು, ಅರುಂಧತಿ ಶರ್ಮ.
ಶರ್ಮರಿಗೆ ಇರುವುದು ಮೂರೆಕ್ರೆ ತೋಟ. ಬೋರ, ರಾಗಿಣಿಯರಿಗೆ ಇಡೀ ತೋಟ ಸುತ್ತಲು ಪರವಾನಿಗೆ ಇದೆ. ಅವುಗಳ ಮೂತ್ರ, ಹಿಕ್ಕೆ ತೋಟಕ್ಕೆ ಬೋನಸ್. ಇಬ್ಬರು ಮಹಿಳಾ ಆಳುಗಳಿದ್ದಾರೆ. ಅವರಿಗೆ ತೋಟದ ಕೆಲಸ ಕಡಿಮೆಯಾದಾಗ ಹುಲ್ಲು ತೆಗೆಯುವುದೇ ಕೆಲಸ. ಇದು ನಿರಂತರ ಪ್ರಕ್ರಿಯೆ. ಕಳೆದ ಮಳೆಗಾಲಕ್ಕಾಗುವಾಗ ಒಮ್ಮೆ ಪೂರ್ತಿ ಹುಲ್ಲು ತೆಗೆದು ಆಗಿತ್ತು. ನಂತರ ಹುಲ್ಲನ್ನು ಹೆರೆದಿಲ್ಲ. ಕಳೆದ ನವೆಂಬರ್ ಬಳಿಕ ಕತ್ತೆಗಳು ಹುಲ್ಲನ್ನು ಮೇಯಲು ಶುರು ಮಾಡಿದುವು.
ಮೇದು ಮೇದು ಸಪಾಯಿ ಮಾಡುತ್ತವೆ. ಹುಲ್ಲುಗಳ ಮಧ್ಯೆ ಬೆಳೆದ ಕಳೆ ಗಿಡಗಳನ್ನು ಕಟ್ ಮಾಡಬೇಕಷ್ಟೇ. ಹಾಗಾಗಿ ಮಾನವ ಶ್ರಮದ ಹುಲ್ಲು ಹೆರೆಯುವ ಶ್ರಮವನ್ನು ಕತ್ತೆಗಳು ಉಳಿಸಿಕೊಟ್ಟಿವೆ ಎನ್ನುವ ಖುಷಿ ಶರ್ಮರದು.
ಈ 'ಅಂತರ್ಸಾಗಾಟ' ಗಾಡಿಗಳಿಗೆ ಪೆಟ್ರೋಲ್ ಬೇಡ, ಸಾಲ ಬೇಡ, ಮಜೂರಿ ಬೇಡವೇ ಬೇಡ. ಹುಲ್ಲು ಮೇಯಲು ಬಿಡಿ, ಸಾಕು. ಮೇದು ಮೇದು ಇವು ವೀಡಿಂಗ್ ವೆಚ್ಚವನ್ನೂ ಉಳಿಸಿಕೊಡುತ್ತವೆ!
0 comments:
Post a Comment