Sunday, September 3, 2017

ಜಲಸಂರಕ್ಷಣೆಯ ಒಂದು ಮಾದರಿ - ಸೂರಿನ ನೀರಿನ ಬಳಕೆ


ಹೊಸದಿಗಂತದ 'ಮಾಂಬಳ' ಅಂಕಣ / 28-6-2017

               ಬೇಸಿಗೆಯಲ್ಲಿ ನೀರಿನ ಮಾತುಕತೆಗಳು ವೇಗ ಪಡೆಯುತ್ತವೆ. ಮಳೆಕೊಯ್ಲು, ಜಲಮರುಪೂರಣ, ಇಂಗುಗುಂಡಿಗಳು.. ಹೀಗೆ ಹೆಚ್ಚು ಒಲವನ್ನು ಪಡೆಯುತ್ತವೆ. ಕೆಲವು ಭಾಷಣಗಳಿಗೆ ಸೀಮಿತವಾದರೆ, ಇನ್ನೂ ಕೆಲವು ಪತ್ರಿಕಾ ವರದಿಗಳಿಗೆ ಸೀಮಿತ. ನಮ್ಮ ವನಮಹೋತ್ಸವಗಳಂತೆ! ಈ ಮಧ್ಯೆ ನೀರಿನ ಕೊರತೆಯ ಸ್ಪಷ್ಟ ಅರಿವಿದ್ದ ಮಂದಿ ಜಲಸಂರಕ್ಷಣೆಯ ಕಾಯಕಕ್ಕೆ ಮುಂದಾಗಿರುವುದು ಸಂತೋಷ. ಸಿನಿಮಾ ನಟರು ತಮ್ಮ ಗಳಿಕೆಯ ಪಾಲನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದಾರೆ. ಖಾಸಗಿಯಾಗಿ ಸದ್ದು ಮಾಡದೆ ನೀರಿನ ಅರಿವು ಮೂಡಿಸುವ ಕೆಲಸಗಳಾಗುತ್ತಿವೆ. ಸಂಘಟಿತ ಗುಂಪುಗಳಲ್ಲಿ ಪರಿಣಾಕಾರಿಯಾದ ಜಲಸಂರಕ್ಷಣೆಯ ಅರಿವು ಮತ್ತು ಅದರ ಅನುಷ್ಠಾನಗಳಾಗುತ್ತವೆ.
               ವೈಯಕ್ತಿಕ ನೆಲೆಯಲ್ಲಿ ಜಲಸಂರಕ್ಷಣೆಯ ಕಾಯಕವನ್ನು ಸದ್ದಿಲ್ಲದೆ ಮಾಡುವವರಿದ್ದಾರೆ. ಅಂತಹವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಡಾ.ಚಂದ್ರಶೇಖರ್ ಅವರ ಮಳೆಕೊಯ್ಲು ಘಟಕದಿಂದ ಅವರ ಕೊಳವೆ ಬಾವಿಗೆ ಕೆಲವು ತಿಂಗಳುಗಳ ರಜೆ! ನೀವು ಮನೆಗೆ ಹೋದರೆ ಸಾಕು, ಕುಡಿಯಲು ರುಚಿಯಾದ ಮಳೆನೀರು ಕೊಡುತ್ತಾರೆ. ಅವರಾಗಿ ಹೇಳದಿದ್ದರೆ ಮಳೆನೀರೆಂದು ನಿಮಗೆ ಗೊತ್ತೇ ಆಗದು. ಆರು ವರುಷಗಳಿಂದ ಇವರು ಕುಡಿಯಲು, ಅಡುಗೆಗೆ ಮತ್ತು ಪಾತ್ರೆ ತೊಳೆಯಲು ಸಂಗ್ರಹಿತ ಮಳೆನೀರನ್ನು ಬಳಸುತ್ತಿದ್ದಾರೆ.
               ಮನೆಯ ಚಾವಣಿಯ ಒಂದು ಪಾಶ್ರ್ವ - ಏಳುನೂರ ಐವತ್ತು ಚದರ ಅಡಿ - ಮಳೆಕೊಯ್ಲಿಗೆ ಮೀಸಲು. ಇಪ್ಪತ್ತಾರು ಸಾವಿರ ಲೀಟರಿನ ಫೆರೋಸಿಮೆಂಟ್ ಟಾಂಕಿಯು ಮಣ್ಣಿನೊಳಗೆ ಅವಿತಿದೆ. ಅದರ ಮುಚ್ಚಳ ನೆಲಮಟ್ಟದಲ್ಲಿದೆ. ಪಕ್ಕದಲ್ಲಿ ಒಂದು ಚಿಕ್ಕ ಸೋಸು ಟಾಂಕಿಯಿದೆ. ದೊಡ್ಡ ಜಲ್ಲಿ, ಇದ್ದಿಲು ಮತ್ತು ಮರಳು; ಪ್ರತಿ ಪದರದ ನಡುವೆ ಜಾಳಿಗೆ ಇರಿಸಿದ್ದಾರೆ. ಚಾವಣಿಯಿಂದ ಸೋಸು ಟ್ಯಾಂಕಿಗೆ ಪೈಪ್ ಸಂಪರ್ಕ. ನೀರು ಸೋಸಿ ಶುದ್ಧವಾಗಿ ಮುಖ್ಯ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ. ಮೊದಲ ಆರೇಳು ದಿನದ ಮಳೆಯನ್ನು ಟಾಂಕಿಗೆ ಸೇರಿಸುವುದಿಲ್ಲ.
              ಜೂನ್ ಮೊದಲ ವಾರ ಸರಿಯಾಗಿ ಮಳೆ ಬಂದರೆ ಹತ್ತರಿಂದ ಹದಿನೈದು ದಿವಸದಲ್ಲೇ ಟಾಂಕಿಯಲ್ಲಿ ನೀರು ತುಂಬುತ್ತದೆ. ನಂತರದ್ದು ಓವರ್ಫ್ಲೋ ಆಗಿ ಹೊರ ಹೋಗುತ್ತದೆ. "ನಾವು ತೆರೆದ ಬಾವಿ ತೋಡಿಲ್ಲ. ಒಂದು ಕೊಳವೆ ಬಾವಿ ಇದೆ. ಕುಡಿಯಲು, ಅಡುಗೆಗೆ, ಪಾತ್ರೆ ತೊಳೆಯಲು ಮಳೆಗಾಲದಲ್ಲೂ ಮಳೆನೀರೇ ಬಳಸುತ್ತೇವೆ. ಅಕ್ಟೋಬರ್ ತನಕ ಮಳೆ ಹೋಗುತ್ತಾ ಬರುತ್ತಾ ಇರುತ್ತದೆ. ಟಾಂಕಿ ಖಾಲಿ ಆಗುವುದಿಲ್ಲ. ತುಂಬುತ್ತಾ ಇರುತ್ತದೆ ಎನ್ನುತ್ತಾರೆ." ಟಾಂಕಿಯನ್ನು ಎರಡು ವರುಷಕ್ಕೊಮ್ಮೆ ಶುಚಿ ಮಾಡುತ್ತಾರೆ.
             "ಕೊಳವೆಬಾವಿಯ ನೀರಿಗಿಂತ ಮಳೆಯ ನೀರು ರುಚಿ. ಮನೆಯವರೆಲ್ಲರೂ ಕುಡಿಯುತ್ತೇವೆ. ಅತಿಥಿಗಳಿಗೂ ಕುಡಿಸುತ್ತೇವೆ! ಬೋರಿನ ನೀರು ಗಡಸು ಮತ್ತು ಲವಣಯುಕ್ತ. ಮಳೆನೀರನ್ನು ಪಾತ್ರೆಯಲ್ಲಿ ಹಾಕಿದಾಗ ತಳದಲ್ಲಿ ಲವಣ ಪದರ ಉಳಿಯುವುದಿಲ್ಲ. ಐದು ದಿನವಾದರೂ ಕುಡಿಯುಲು ಯೋಗ್ಯವಾಗಿರುತ್ತದೆ. ಬೋರ್ ನೀರನ್ನು ಪಾತ್ರೆಯಲ್ಲಿಟ್ಟರೆ ಅರ್ಧ ಗಂಟೆಯಲ್ಲೇ ತಳದಲ್ಲಿ ಬಿಳಿ ಪದರ ಉಂಟಾಗುತ್ತದೆ ಎನ್ನುತ್ತಾರೆ" ಮನೆಯೊಡತಿ ಸವಿತಾ.
                ಇವರ ಕೊಳವೆ ಬಾವಿಯು ಕಾಲು ಶತಮಾನದಷ್ಟು ಹಳೆಯದು. ಸ್ನಾನ, ಶೌಚ, ಬಟ್ಟೆ ತೊಳೆಯಲು, ಉದ್ಯಾನಕ್ಕೆ ಇದರದೇ ನೀರು. ಚಾವಣಿಯ ಮತ್ತೊಂದು ಪಾಶ್ರ್ವದ ನೀರನ್ನು ಈ ಕೊಳವೆ ಬಾವಿಗೆ ತುಂಬುತ್ತಾರೆ. ನೂರು ಲೀಟರಿನ ಡ್ರಮ್ಮಿನಲ್ಲಿ ಸೋಸಿದ ನೀರನ್ನು ಕೊಳವೆ ಬಾವಿಗೆ ಇಳಿಸುತ್ತಾರೆ. "ಹದಿನೈದು ವರುಷಗಳಿಂದ ಕೊಳವೆಬಾವಿ ಮರುಪೂರಣ ಮಾಡುತ್ತಾ ಇದ್ದೇನೆ. ನೂರೈವತ್ತು ಅಡಿಯ ಬಾವಿಯ ತಳದಿಂದ ಇಪ್ಪತೈದು ಅಡಿ ಮೇಲೆ ಪಂಪ್ ಇದೆ. ಇಷ್ಟು ವರುಷವಾದರೂ ಪಂಪ್ ಕೆಳಗಿಳಿಸಬೇಕಾಗಿಲ್ಲ. ಜಲಮಟ್ಟ ಒಂದೇ ರೀತಿ ಇದೆ" ಎನ್ನುತ್ತಾರೆ ಡಾಕ್ಟರ್.
            "ಕಳೆದ ವರುಷ ಮಳೆಗಾಲದಲ್ಲಿ ಮೂರು ತಿಂಗಳು ಕೊಳವೆ ಬಾವಿಗೆ ರಜೆ ಕೊಟ್ಟಿದ್ದಾರೆ! ಪಂಪ್ ಚಾಲೂ ಮಾಡಿಲ್ಲ. ಮಳೆಗಾಲದಲ್ಲಿ ಹೇಗೂ ಮಳೆಕೊಯ್ಲು ಟಾಂಕಿ ತುಂಬಿ ನೀರು ಹೊರಹರಿಯುತ್ತದಲ್ಲಾ. ಸೂರಿನ ಮೇಲಿರುವ ಇನ್ನೊಂದು ಟಾಂಕಿಗೆ ಪಂಪ್ ಮಾಡಿ ಅದರಿಂದ ಇತರ ಮನೆಬಳಕೆಗಳಿಗೆ ಬಳಸಿ ನೋಡಿದೆವು. ಇದರಿಂದಾಗಿ ಮಳೆಗಾಲದಲ್ಲಿ ಬೋರ್ವೆಲ್ ಅಥವಾ ಪಂಪ್ ಕೈಕೊಟ್ಟರೆ ಮಳೆನೀರಿನಿಂದಲೇ ನಿಭಾಯಿಸಬಹುದು ಎನ್ನುವ ಧೈರ್ಯ ಬಂದಿದೆ" ಎನ್ನುತ್ತಾರೆ. ಡಾ.ಚಂದ್ರಶೇಖರರಿಗೆ ಮಳೆಕೊಯ್ಲಿನ ಪ್ರೇರಣೆ ಸಿಕ್ಕಿದ್ದು ಅನಂತಾಡಿಯ ಕೃಷಿಕ ಗೋವಿಂದ ಭಟ್ಟರಿಂದ.
             ಮಳೆಗಾಲದ ಅಬ್ಬರ ಕಡಿಮೆಯಾದ ಕಾಲಮಾನದಲ್ಲಿ ಬಿದ್ದ ಮಳೆ ನೀರನ್ನು ಹಿಡಿದಿಡುವುದು ಕಾಲದ ಅನಿವಾರ್ಯ. ಡಾ.ಚಂದ್ರಶೇಖರ್ ಅವರ ದೂರದೃಷ್ಟಿಯು ಅವರನ್ನು ನೀರಿನ ವಿಚಾರದಲ್ಲಿ ಗೆಲ್ಲಿಸಿದೆ. ಇಂತಹ ಮಾದರಿಗಳು ಕನ್ನಾಡಿನಾದ್ಯಂತ ಹಬ್ಬಬೇಕು. ಕಷ್ಟವೇನಿಲ್ಲ, ಮನಸ್ಸು ಬೇಕಷ್ಟೇ. ವೈಯಕ್ತಿಕ ನೆಲೆಯಲ್ಲಿ ಜಲ ಸಂರಕ್ಷಣೆಯನ್ನು ಮಾಡಿದವರು ಯಾವಾಗಲೂ ನೀರಿನ ಬರಕ್ಕೆ ಹೆದರುವುದಿಲ್ಲ.
            ಉತ್ತರ ಕರ್ನಾಟಕದಲ್ಲಿ ಮಣ್ಣು ಮತ್ತು ನೀರಿನ ಅರಿವು ಮೂಡಿಸಿಕೊಂಡ ಕೃಷಿಕರು ಬರನಿರೋಧಕ ಜಾಣ್ಮೆಯನ್ನು ಬಳಸಿಕೊಂಡಿದ್ದಾರೆ. ತಮ್ಮ ಹೊಲವನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ಸಾಗಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ವರುಷಪೂರ್ತಿ ಬಳಕೆ ಮಾಡುವ ಜಲಸಾಕ್ಷರರಿದ್ದಾರೆ. ತಿಪಟೂರಿನ ಬೈಫ್ ಸಂಸ್ಥೆಯಲ್ಲಿ ಮಳೆನೀರ ಕೊಯ್ಲಿನ ದೊಡ್ಡ ಮಾದರಿಯಿದೆ. ಧಾರವಾಡ ಸನಿಹ ಸ್ವಾಮೀಜಿಯೊಬ್ಬರು ಮಳೆನೀರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ನೀರಿನ ಅರಿವನ್ನು ಬಿತ್ತರಿಸುತ್ತಿದ್ದಾರೆ.
             ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲರು ಮನೆಯಂಗಳದ ಬಾವಿಗೆ ಜಲಮರುಪೂರಣ ಮಾಡುತ್ತಿದ್ದಾರೆ. ಸುತ್ತೆಲ್ಲಾ ನೀರು ಪಾತಾಳಕ್ಕಿಳಿದ ಅನುಭವವಾದರೂ ಇವರ ಬಾವಿಯಲ್ಲಿ ಮೇ ಕೊನೆಗೂ ಕುಡಿನೀರಿಗೆ ತತ್ವಾರವಾಗಿಲ್ಲ. ತಮ್ಮ ಜಮೀನಿನಲ್ಲಿ ಇಂಗುಗುಂಡಿಗಳನ್ನು ಮಾಡುವ ಮೂಲಕ ಹನಿ ಮಳೆನೀರೂ ಇಂಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸರಕಾರದ ನೆರವು, ಸಬ್ಸಿಡಿ, ಪ್ರೋತ್ಸಾಹಗಳನ್ನು ಕಾದು ಕುಳಿತರೆ ಬಾಗೀರಥಿ ಪಾತಾಳಕ್ಕೆ ಜಿಗಿಯುವುದಂತೂ ಖಂಡಿತ. ಆಡಳಿತಕ್ಕೆ ಇದ್ಯಾವುದೂ ಬೇಕಾಗಿಲ್ಲ. ಪಾತಾಳಕ್ಕೂ ಕನ್ನ ಹಾಕುವ ಯೋಜನೆಗೆ ಸಹಿ ಹಾಕಲು ಲೇಖನಿ ಕಾಯುತ್ತಿರುತ್ತದೆ. ಅವರಿಗೆ ಪಾತಾಳವಾದರೇನು? ಸ್ವರ್ಗವಾದರೇನು? ಪೈಲುಗಳಲ್ಲಿ ನಮೂದಾಗಿರುವ ಸಂಖ್ಯೆಗಳು ನಗದಾದರೆ ಸಾಕು!
ಹಾಗಾಗಿ ನಮ್ಮ ಭೂಮಿ, ಸೂರಿನ ಮೇಲೆ ಬಿದ್ದ ನೀರನ್ನು ಹಿಡಿದಿಡುವುದು ಭವಿಷ್ಯದ ನೀರಿನ ಬರಕ್ಕೆ ನಾವೇ ಮಾಡಿಕೊಳ್ಳಬಹುದಾದ ಸರಳ ವಿಧಾನ.

0 comments:

Post a Comment