”ಈ ವರುಷ ಅನ್ಯಾನ್ಯ ಮೇಳಗಳ ಮಳಿಗೆಗಳಲ್ಲಿ ಒಂದು ಕ್ವಿಂಟಾಲ್ ಕಾನಕಲ್ಲಟೆ ಮಾರಿಹೋಗಿದೆ.” ಎನ್ನುವ ಖುಷಿಯನ್ನು ಹಂಚಿಕೊಂಡರು ರವಿಶಂಕರ್ ಸುಣ್ಣಂಗುಳಿ. ಇವರು ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕರು. ಹಲಸು ಪ್ರಿಯರು.
ಏನಿದು ಕಾನಕಲ್ಲಟೆ? ಇದೊಂದು ಕಾಡು ತರಕಾರಿ. ಸಸ್ಯಶಾಸ್ತ್ರೀಯ ಹೆಸರು Cayratia
mollissima. ಕಾನುಕಲ್ಲಟೆ, ಕಾನುಕಲ್ಲಂಟೆ, ಕಲ್ಲಾಟೆ.. ಮೊದಲಾದ ಹೆಸರುಗಳಿವೆ. ಕಾಡಿನಿಂದಲೇ ಆಯ್ದು ತಂದು ಖಾದ್ಯಗಳನ್ನು ಮಾಡುವುದು ಪಾರಂಪರಿಕ.
ಇದು ಗುಡ್ಡದಲ್ಲಿ ಹುಲುಸಾಗಿ ಬೆಳೆಯುವ ಬಳ್ಳಿ ಜಾತಿಯ ತರಕಾರಿ. ಆರೈಕೆ ಮಾಡಿ ಬೆಳೆಸುವವರು ವಿರಳ. “ನಾನು ಕಾನಕಲ್ಲಟೆಯ ಕೃಷಿ ಮಾಡಿದೆ”ಎಂದರೆ ಖಂಡಿತವಾಗಿ ‘ತಲೆ ಕೆಟ್ಟಿದೆ ಎಂದಾರು! ಎನ್ನುತ್ತಾ ಕಣ್ಣುಮಿಟುಕಿಸಿದರು ರವಿಶಂಕರ್. ಇವರು ಪ್ರತ್ಯೇಕವಾಗಿ ನಿಗಾ ವಹಿಸಿ, ಆರೈಕೆ ಮಾಡಿ ಇತರ ತರಕಾರಿಗಳಂತೆ ಬೆಳೆಸಿದ್ದಾರೆ.
‘ತೊಂಡೆಕಯಿ, ಪಡುವಲ ತರಕಾರಿಯ ಕೃಷಿಯಂತೆ ಇದು ಯಾಕಾಗದು?” ರವಿಶಂಕರ್ ಯೋಚನೆ. ಗುಡ್ಡದಲ್ಲಿ ಸುಲಭವಾಗಿ ಸಿಕ್ಕಿದ ಆರೇಳು ಬಳ್ಳಿಗಳನ್ನು ತುಂದು, ಚಿಕ್ಕ ತುಂಡು ಮಾಡಿ ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟು ಸಲಹಿದರು. ಆರೈಕೆ ಮಾಡಿದರು. ಏರುಮಡಿಯಲ್ಲಿ ನಾಟಿ. ಕೋಳಿಗೊಬ್ಬರ, ಎರೆಗೊಬ್ಬರ, ಸುಡುಮಣ್ಣು ಉಣಿಸಿದರು.
ಬಳ್ಳಿಗಳು ಹಬ್ಬಲು ಚಪ್ಪರ ವ್ಯವಸ್ಥೆ. ಬಳ್ಳಿ ಬೆಳವಣಿಗೆಯಾಗುತ್ತಾ ಹೋದಂತೆ ಹೂ ಬಿಡುತ್ತಿರುತ್ತದೆ. ಈ ವರುಷ ಮೇ ತಿಂಗಳಲ್ಲಿ ಗೊಂಚಲು ಕಾಯಿಗಳು. ಜೂನ್ ಮೊದಲ ವಾರದಿಂದಲೇ ಕೊಯಿಲು. “ಕಾಡಿನಲ್ಲಿ ಮರಕ್ಕೆ ಹಬ್ಬುವ ಕಾರಣ ಕಾನಕಲ್ಲಟೆಗೆ ಬೆಳವಣಿಗೆ ತೀರಾ ಕಡಿಮೆ. ಚಪ್ಪರದಲ್ಲಿ ಕ್ಷಿಪ್ರವಾಗಿ ಹರಡಿ ಹೂ ಬಿಡುತ್ತವೆ.” ಎನ್ನುತ್ತಾರೆ.
ರವಿಶಂಕರ್ ಇತರ ಕೃಷಿಗಳ ಮಧ್ಯೆ ಸಮಯ ಹೊಂದಿಸಿಕೊಂಡು ನಿಗಾ ವಹಿಸುತ್ತಾರಷ್ಟೇ. ಆರು ಬಳ್ಳಿಗಳು ಏನಿಲ್ಲವೆಂದರೂ ಇನ್ನೂರೈವತ್ತು ಮುನ್ನೂರು ಚದರ ಅಡಿಯಲ್ಲಿ ಹರಡಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಕೊಂಕಣಸ್ಥರು, ಕರ್ಹಾಡರಿಗೆ ಪ್ರಿಯ. ಕಿಲೋಗೆ ಎಂಭತ್ತು ರೂಪಾಯಿಯಂತೆ ಮಾರಿದ್ದಾರೆ. ಕೆಲವೊಂದು ಅಂಗಡಿಗಳಿಗೆ ಮಾರಾಟಕ್ಕಾಗಿ ಪ್ರಾಯೋಗಿಕವಾಗಿ ನೀಡಿದ್ದಾರೆ.
“ಇದು ನನಗೆ ಹೊಸ ಕೃಷಿ. ಪೂರ್ತಿ ಮರ್ಮ ಗೊತ್ತಾಗಿಲ್ಲ. ಮಾರುಕಟ್ಟೆಯೂ ಅಷ್ಟೇ. ಮಂಗಳೂರಿನಂತಹ ನಗರದಲ್ಲಿ ಯತ್ನಿಸಬೇಕು,” ಎನ್ನುತ್ತಾರೆ. ಪಾರಂಪರಿಕ ಆಹಾರಗಳ ಅರಿವಿದ್ದರಿಗೆ ಕಾನಕಲ್ಲಟೆ ಗೊತ್ತು. ಹೊಸ ತಲೆಮಾರಿಗೆ ಅಷ್ಟೊಂದು ಪರಿಚಯವಿಲ್ಲ. ಅಂಗಡಿಯವರಿಗೂ ಕಾನಕಲ್ಲಟೆಯ ಪರಿಚಯ ಅಷ್ಟಕ್ಕಷ್ಟೇ. ಹಾಗಾಗಿ ಸುಲಭದಲ್ಲಿ ಮಾರುವುದು ಶ್ರಮದಾಯಕ.
ಕಾನಕಲ್ಲಟೆಯ ಮೆಣಸುಕಾಯಿ, ಮಜ್ಜಿಗೆಹುಳಿ, ಸಾಂಬಾರು, ಹಲಸಿನ ಬೀಜ ಸೇರಿಸಿದ ಪಲ್ಯ ಮತ್ತು ಹಣ್ಣಿನ ಸಾಸಿವೆ ರುಚಿ. ಕಾನಕಲ್ಲಟೆಯನ್ನು ಒಂದು ಹಬೆಯಲ್ಲಿ ಬೇಯಿಸಿ ಪೂರ್ಣವಾಗಿ ಬೀಜವನ್ನು ಬೇರ್ಪಡಿಸುವುದು ಮುಖ್ಯ. ಬಳಸುವವರು ಏತಡ್ಕದ ಡಾ.ಮೋಹನ್ ಕುಮಾರ್ ವೈ.ಎಸ್. ಅವರ ಎಚ್ಚರವನ್ನು ಗಮನಿಸಬೇಕು - “ಕಾನಕಲ್ಲಟೆಯ ಬೀಜವು ತುಂಬಾ ಅಪಾಯಕಾರಿ. ಅಲರ್ಜಿ ಉಳ್ಳವರಲ್ಲಿ ಗಂಭೀರ ಪರಿಣಾಮವಾದೀತು. ಗಂಟಲು ಕೆರೆತ ಆರಂಭವಾಗಿ ಉಸಿರು ಕಟ್ಟುವ ಹಂತಕ್ಕೂ ಹೋಗಬಹುದು. ಇದು ನನ್ನ ಸ್ವಂತ ಅನುಭವ. ಆದುದರಿಂದ ಬೇಯಿಸುವಾಗ ಒಂದೇ ಒಂದು ಬೀಜ ಉಳಿಯಕೂಡದು.”
ಕೆಲವರು ಅಲ್ಲಿಲ್ಲಿ ಮನೆ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಮಂಗಳೂರಿನ ಸಾವಯವ ಸಂತೆಗೆ ಕೆಲವೊಮ್ಮೆ ಬರುವುದಿದೆ. ರುಚಿ ತಿಳಿದವರು ಖಾಯಂ ಗ್ರಾಹಕರಾಗಿದ್ದಾರೆ. (ರವಿಶಂಕರ್ : 09446676029)
0 comments:
Post a Comment