ಯಾಕೋ.. ಶಾಲಾ ದಿನಗಳಿಂದಲೇ ಪುಸ್ತಕದ ಗೀಳು. ಇದಕ್ಕೆ
ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದ ಚಿಕ್ಕ ಗ್ರಂಥಾಲಯ. ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದ ಪುಸ್ತಕದ
ಓದು. ಕೃಷ್ಣಪ್ಪ ಮಾಸ್ತರರ ಒತ್ತಾಸೆ. ಓದದೆ ಕಲಿಯುವುದೇನನ್ನು ಎಂದು ಓದದ ಸಹಪಾಠಿಗಳಿಗೆ ಬೆತ್ತದ ರುಚಿ
ತೋರಿಸಿದ ಆ ದಿನಗಳು ಮರೆಯುವುದಿಲ್ಲ.
ಹೈಸ್ಕೂಲ್ ಓದುತ್ತಿದ್ದಾಗ
ಚಂದಮಾಮ, ಬಾಲಮಿತ್ರ, ಚುಟುಕ.. ಮೊದಲಾದ ನಿಯತಕಾಲಿಕಗಳತ್ತ ಆಸಕ್ತಿ ಹೆಚ್ಚಾಯಿತು. ಒಂದೇ 'ಧಮ್ಮಿನಲ್ಲಿ'
ಎಲ್ಲಾ ಪುಟಗಳನ್ನು ಓದುವ ತವಕ, ಚಪಲ. ಕೆಲವೊಮ್ಮೆ ಪತ್ರಿಕೆಗಳಲ್ಲಿ 'ಉಚಿತ ಪುಸ್ತಕಗಳಿಗೆ ಬರೆಯಿರಿ'
ಎನ್ನುವ ಜಾಹೀರಾತುಗಳು ಆಸಕ್ತಿದಾಯಕವಾಗಿರುತ್ತಿತ್ತು. ಹೀಗೆ ಪಡೆದ ಪುಸ್ತಕಗಳು ಕೈ ಸೇರಿದಾಗ ನಿರಾಶೆ!
ಸುಳ್ಯ ಸನಿಹದ ಪೆರಾಜೆಯು ಒಂದು ಕಾಲಘಟ್ಟದಲ್ಲಿ
ತ್ರಿಶಂಕು ಗ್ರಾಮ! ಆಚೆ ಕೊಡಗಿಗೂ ಬೇಡ, ಇತ್ತ ದಕ್ಷಿಣ ಕನ್ನಡವೂ ಸ್ವೀಕರಿಸದ ಹಳ್ಳಿ. ಕೊಡಗಿನ ಭೂಪಟದಲ್ಲಿ
ಚಿಕ್ಕ ಬಾಲ! ವಿದ್ಯುತ್ ಶುಲ್ಕ ಪಾವತಿಸಲೂ ದೂರದ ಮಡಿಕೇರಿಗೆ ಹೋಗಬೇಕಾಗಿತ್ತು. ಈಗ ಗ್ರಾಮ ಬೆಳೆದಿದೆ.
ಶೈಕ್ಷಣಿಕವಾಗಿ ಮುಂದಿದೆ. ಸೌಕರ್ಯಗಳೆಲ್ಲಾ ಬಂದಿವೆ.
ಅಂಚೆ ಕಚೇರಿಯ ಪಕ್ಕ
ಅಂಚೆ ಮಾಸ್ತರರ ಅಂಗಡಿಯಿತ್ತು. ಅವರು ಯಕ್ಷಗಾನ ಪ್ರಿಯರು. ವೈಯಕ್ತಿಕವಾಗಿ ಹಿತರು. ಅಂಗಡಿಯು ಊರಿನ
ಆಗುಹೋಗುಗಳ ಕೇಂದ್ರ! ಅಲ್ಲಿಗೆ ಯಾರೆಲ್ಲಾ ಬರುತ್ತಾರೆ ಎಂದು ಅಂಚೆಯಣ್ಣನಿಗೆ ಗೊತ್ತು. ಅವರು ಪೆಟ್ಟಿಗೆಯೊಂದರಲ್ಲಿ
ಅಂಚೆಯನ್ನು ಹಾಕಿಡುತ್ತಿದ್ದರು. ಸಂಬಂಧಪಟ್ಟವರು ಒಯ್ಯುತ್ತಿದ್ದರು.
ತಂದೆಯ ಆಪ್ತರೊಬ್ಬರು
ಚಂದಮಾಮದ ಚಂದಾದಾರರು. ತಿಂಗಳಿಗೊಮ್ಮೆ ಅವರ ಮನೆಗೆ ಹೋಗಿ ಓದುತ್ತಿದ್ದೆ. ಪತ್ರಿಕೆ ಖರೀದಿಸಲು ಆರ್ಥಿಕ
ಶಕ್ತಿಯಿಲ್ಲದ ಕಾಲ. ಅಂದು ಅಂಚೆಯಲ್ಲಿ ಬಂದ ಚಂದಮಾಮ ಪುಸ್ತಕವನ್ನು ಬಿಡಿಸಿ ಕುಳಿತು ಓದುತ್ತಿದ್ದೆ.
ಇನ್ನೊಬ್ಬರ ಹೆಸರಿಗೆ ಬಂದ ಅಂಚೆಯನ್ನು ಒಡೆಯುವುದು ತಪ್ಪೆಂದು ಗೊತ್ತಿತ್ತು. ಆದರೆ ಓದುವ ಚಟ ಹಾಗೆ
ಮಾಡಿಸಿತ್ತು.
ಸ್ವಲ್ಪ ಹೊತ್ತಾಗಿರಬಹುಷ್ಟೇ.
ತನಗೆ ಬಂದ ಅಂಚೆಯನ್ನು ಒಯ್ಯಲು ಆ ಅಪ್ತರು ಬಂದರು. ತಕ್ಷಣ ಪುಸ್ತಕವನ್ನು ನೀಡಿದೆ. ಅಲ್ಲಿದ್ದ ಪ್ರತಿಷ್ಠಿತ
ವ್ಯಕ್ತಿಯೋರ್ವ, ಹಣ ಕೊಟ್ಟು ಪುಸ್ತಕ ಪರ್ಚೇಸ್ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ಓದುವ ದೊಡ್ಡಸ್ತಿಕೆ
ಯಾಕೆ? ನಾಚಿಕೆಯಾಗುವುದಿಲ್ವಾ. ಅನ್ನಬೇಕೇ? ತಲೆ ತಗ್ಗಿಸಿ ಮರಳಿದೆ.
ಚುಚ್ಚು ಮಾತುಗಳು
ಚುಚ್ಚಿತು. ಬಹುಕಾಲ ಚುಚ್ಚುತ್ತಿದ್ದುವು. ತುತ್ತಿಗೂ ತತ್ವಾರವಿದ್ದರೂ 'ಯೋಗ್ಯತೆ'ಯ ಕುರಿತು ತುಂಬಾ
ಹಗುರವಾಗಿ ಮಾತನಾಡಿದ್ದರಿಂದ ನೋವು ಅನುಭವಿಸಿದ್ದೆ. ಬಳಿಕ ಐದಾರು ತಿಂಗಳು ಓದುವಿಕೆಗೆ ಸ್ವ-ಘೋಷಿತ
ರಜೆ! ಆ ಆಪ್ತರಿಗೆ ಯಾಕೋ ಸಂಶಯ ಬಂದು ಅಷ್ಟೂ ತಿಂಗಳ ಪುಸ್ತಕವನ್ನು ತಂದು ಕೊಟ್ಟರು.
ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ
ಪೆರಾಜೆಯಿಂದ ಸುಳ್ಯಕ್ಕೆ ಐದಾರು ಕಿಲೋಮೀಟರ್ ನಿತ್ಯ ಬಸ್ ಪ್ರಯಾಣ. ಬಹುಶಃ ಎರಡೋ ಮೂರು ರೂಪಾಯಿ ಟಿಕೇಟ್.
ಹಳೆಯ ಚಂದಮಾಮದ ಸಂಚಿಕೆಗಳು ಅಣಕಿಸುತ್ತಿದ್ದುವು.
ಓದದೆ ಚಡಪಡಿಕೆ. ಮನೆಯಲ್ಲಿ ಹಣ ಕೊಡುವ ಸ್ಥಿತಿಯಿದ್ದಿರಲಿಲ್ಲ. ವಾರದ ಕೊನೆಗೆ ಸುಳ್ಯದಿಂದ
ಪೆರಾಜೆಗೆ ಕಾಲ್ನಡಿಗೆ ಜಾಥಾ! ಬಸ್ಸಿನ ಹಣವನ್ನು ಉಳಿಸುತ್ತಿದ್ದೆ. ಅದರಲ್ಲಿ ಚಂದಮಾಮ ಖರೀದಿಸಿ ಓದಲು
ಶುರು ಮಾಡಿದೆ.
ಮೊದಲು ಹಣ ನೀಡಿ
ಖರೀದಿಸಿದ ಚಂದಮಾಮದ ಪುಟಗಳಲ್ಲಿ ಕೀಳಾಗಿ, ಹಗುರವಾಗಿ ಮಾತನಾಡಿದರ ಮುಖವೇ ಕಾಣುತ್ತಿತ್ತು. ಮತ್ತೆಂದೂ
ಪುಕ್ಕಟೆಯಾಗಿ ಪತ್ರಿಕೆಯನ್ನೋ, ನಿಯತಕಾಲಿಕೆಯನ್ನು ಓದಿಲ್ಲ. ಕೊಂಡು ಓದುವ 'ಯೋಗ್ಯತೆ' ಬಂತು! ನಂತರದ
ದಿವಸಗಳಲ್ಲಿ ಒಂದೆರಡು ದಿನಪತ್ರಿಕೆಗಳು ಸಾಥ್ ಆದುವು.
ಹೀಗೆ ರೂಢನೆಯಾದ
'ಕೊಂಡು ಓದುವ' ಹುಚ್ಚು ಅಧರ್ಾಯುಷ್ಯ ದಾಟಿದರೂ ನಿಂತಿಲ್ಲ! ಅವರ ಚುಚ್ಚು ಮಾತುಗಳು ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತೇನೋ
ಹೌದು. ಆದರೆ ಬದುಕಿನಲ್ಲಿ 'ಮಮರ್ಾಘಾತ' ಮಾಡುವಂತಹ ವ್ಯಕ್ತಿಗಳು 'ಹಿತರ' ಸೋಗಿನಲ್ಲಿ ಈಗಲೂ ಇದ್ದಾರೆ.
ನಿತ್ಯ ಗೆಜಲುತ್ತಾ ಇರುವುದು ಇಂತಹವರ ಸ್ವಭಾವ. ಅವರು ಕೊಡುವ, ಕೊಟ್ಟ ನೋವು ಫಕ್ಕರೆ ಆರುವುದಿಲ್ಲ.
ಹೀಗೆ ಶುರುವಾದ ಪುಸ್ತಕದ ಹುಚ್ಚು ನಿಜಾರ್ಥದ ಹುಚ್ಚಾಗಿ
ಪರಿಣಾಮಿಸಿತು. ಚಿಕ್ಕ ಪುಸ್ತಕ ಭಂಡಾರದ ಹುಟ್ಟಿಗೂ ಕಾರಣವಾಯಿತು. (ಲೇಖನದ ಜತೆಗಿರುವ ಚಂದಮಾಮ ಮುಖಚಿತ್ರ 1954 ನವೆಂಬರ ತಿಂಗಳ ಸಂಚಿಕೆಯದ್ದು. ಜಾಲತಾಣ ಕೃಪೆ)
ಸುದ್ದಿ ಬಿಡುಗಡೆ
/ ಊರುಸೂರು 7 / 21-10-2018