Sunday, November 18, 2018

ಭೂತಕಾಲವನ್ನು ಅಕ್ಷರಗಳಲ್ಲಿ ಕಟ್ಟಿಡುವ ಅಧ್ಯಾಪಕ



                "ಬರಹಗಾರರು ಐಡಿಯಾ ಫೈಲ್ ಇಟ್ಟುಕೊಳ್ಳಬೇಕು. ಇದರಲ್ಲಿ ಬರಹಗಳಿಗೆ ಒಳಸುರಿಯಾಗಬಹುದಾದ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳ ಕಟ್ಟಿಂಗ್ಗಳನ್ನು ಫೈಲ್ ಮಾಡುತ್ತಿರಬೇಕು. ಭವಿಷ್ಯದಲ್ಲಿ ಇದು ಲೇಖಕನಿಗೆ ಮಾಹಿತಿ ಒದಗಿಸುವ ಕಿಟ್." - ಕಾರ್ಯಾಗಾರಗಳಲ್ಲಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಹೇಳುತ್ತಿರುವ ಮಾತುಗಳಿವು.
                2018 ಸೆಪ್ಟೆಂಬರಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನವಾಗಿತ್ತು. ಪುಸ್ತಕಗಳ ಮಳಿಗೆಗಳ ಒಂದು ಪಾಶ್ರ್ವದಲ್ಲಿ ಜೋನ್ ವೇಗಸ್ ಅವರ ಮಳಿಗೆ. ಇವರು ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ. ಇವರ ಮಳಿಗೆ ಹೊರತು ಪಡಿಸಿ ಮಿಕ್ಕೆಲ್ಲಾ ಮಳಿಗೆಗಳಲ್ಲೂ ರಶ್! ಯಾಕೆಂದರೆ ಇವರಲ್ಲಿ ಖರೀದಿ ಉತ್ಪನ್ನಗಳಿರಲಿಲ್ಲ. ಮಾಹಿತಿಗಳನ್ನು ಆಪೋಶನ ಮಾಡಬಹುದಾದ ಸಿಹಿ ಸರಕುಗಳಿದ್ದುವು. ಅವುಗಳು ಬೆಲೆ ಕಟ್ಟಲಾಗದ ಸರಕುಗಳು!
                ದಿನಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟವಾದ ಅಪರೂಪದ ಘಟನೆಗಳ ಕಟ್ಟಿಂಗ್ಗಳನ್ನು ಅಂದವಾಗಿ ಬುಕ್ಬೈಂಡ್ ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಕೆಲವೊಂದನ್ನು ಎನ್ ಲಾರ್ಜ್  ಮಾಡಿಸಿ ತೂಗುಹಾಕಿದ್ದರು. ಸಮ್ಮೇಳನಕ್ಕೆ ಆಗಮಿಸಿದ ಬಹುತೇಕ ಅಕ್ಷರಪ್ರಿಯರಿಗೆ ಬುಕ್ಬೈಂಡಿನೊಳಗೆ ಅವಿತ ಅಕ್ಷರಗಳು ಕಾಣಲಿಲ್ಲ! ನೋಡುವ ಕುತೂಹಲವೂ ಇಲ್ಲವೆನ್ನಿ! ಮೇಲ್ನೋಟಕ್ಕೆ ಫಕ್ಕನೆ ಗೋಚರವಾಗದ ಇವರ ಶ್ರಮ ಸಣ್ಣದಲ್ಲ. 
                ಜೋನ್ ವೇಗಸ್ ಅಕ್ಷರ ಪ್ರಿಯರು. ಅನೇಕ ಸಾಹಿತ್ಯ ಕೃತಿಗಳ ಓದುಗ. ಇವರ ವೃತ್ತಿ ಗಳಿಕೆಯಲ್ಲಿ ಶೇ.20ರಷ್ಟು ಪತ್ರಿಕೆ, ಪುಸ್ತಕಗಳ ಖರೀದಿಗೆ ಮೀಸಲು. ಮಕ್ಕಳಲ್ಲಿ ಅಕ್ಷರ ಪ್ರೀತಿಯೊಂದಿಗೆ ಪುಸ್ತಕದ ಆಸಕ್ತಿಯನ್ನು ಮೂಡಿಸುತ್ತಿರುವ ಅಪರೂಪದ ಶಿಕ್ಷಕ. ಶಾಲೆಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುಸ್ತಕವೇ ಬಹುಮಾನ.
                ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯಿಲ್ಲ ಎಂದು ಆರೋಪಿಸುತ್ತೇವೆ. ಹೆತ್ತವರ ಮನದೊಳಗೆ ಪುಸ್ತಕಗಳು ಸ್ಥಾನ ಪಡೆದರೆ ಮಕ್ಕಳು ಅನುಸರಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ಪುಸ್ತಕದ ಒಲವು ತೋರಿದರೆ ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಎಂದು ತಮ್ಮ ಅನುಭವವನ್ನು ಹೇಳಲು ಖುಷಿ. ಪತ್ರಿಕೆಗಳನ್ನು ಓದುತ್ತಾ ಮುಖ್ಯವಾದ ಘಟನೆಗಳನ್ನು ಸಂಗ್ರಹಿಸಿದ್ದಾರೆ.
                ಕ್ರೀಡೆ, ಪ್ರಕೃತಿ, ಜೀವಿಗಳ ಲೋಕ, ಜೀವಜಾಲ, ಜೀವ ವೈವಿಧ್ಯ, ಪಕ್ಷಿ ಪ್ರಪಂಚ, ಭಾರತ ದರ್ಶನ, ಕಲಾಭಿವ್ಯಕ್ತಿ, ನೆನಪುಗಳು, ದಿನಬಳಕೆ ಸಾಧನಗಳು, ದುರ್ಘಟನೆಗಳು, ದುರಂತಗಳು.. ಹೀಗೆ ಸುಮಾರು ಮೂವತ್ತೈದು ವಿಷಯವಾರು ಮಾಹಿತಿಗಳು ಆಸಕ್ತಿದಾಯಕ. ಎಲ್ಲದಕ್ಕೂ ಪ್ರತ್ಯಪ್ರತ್ಯೇಕವಾದ ಪುಸ್ತಕಗಳ ಸಂಚಿ. ಕಳೆದ ವರುಷ ಕಡಬದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದೆ. ಬಹುತೇಕ ವಿದ್ಯಾರ್ಥಿಗಳ ಆಸಕ್ತರಾಗಿದ್ದರು. ಎನ್ನುವ ಸಂತಸ ಹಂಚಿಕೊಂಡರು.
                ಉದಾ: 1989, ಎಪ್ರಿಲ್ 29-30 - ಬಾಂಗ್ಲಾದ ಭೀಕರ ಚಂಡಮಾರುತ. ಮೂರು ಲಕ್ಷ ಮಂದಿ ಸಾವು. 1991 ಮೇ 21ರಂದು ರಾಜೀವ ಗಾಂಧಿ ನಿಧನ, 2001 ಜನವರಿ 26 ಗುಜರಾತಿನಲ್ಲಿ ಭೂಕಂಪ. 1995 ಜನವರಿ 17 - ಜಪಾನಿನಲ್ಲಿ ಭೂಕಂಪ. ಐದು ಸಾವಿರಕ್ಕೂ ಮಿಕ್ಕಿ ಸಾವು. ಮೂರು ಲಕ್ಷದ ತೊಂಭತ್ತು ಸಾವಿರ ಕೋಟಿ ರೂಪಾಯಿ ನಷ್ಟ... ವೇಗಸ್ ಅವರ ಇಂತಹ ಮಾಹಿತಿಗಳ ಸಂಗ್ರಹ ಕೈಂಕರ್ಯಕ್ಕೆ ವಿಂಶತಿಯ ಸಡಗರ.
                ವೇಗಸ್ ಮಾಸ್ಟ್ರು ಡಾ.ಶಿವರಾಮ ಕಾರಂತರ ಅಭಿಮಾನಿ. ಅವರ ಕೃತಿಗಳ ಓದುಗ. ಪತ್ರಿಕೆಗಳಲ್ಲಿ ಅವರ ಕುರಿತು ಪ್ರಕಟವಾದ ಲೇಖನ, ವಿಮರ್ಶೆ, ವರದಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಚಿತ್ರಗಳು ಮಕ್ಕಳನ್ನು ಸೆಳೆಯಬೇಕು. ಈಗ ಮೊಬೈಲ್ಗಳು ರಾಶಿರಾಶಿ ಚಿತ್ರಗಳನ್ನು ತೋರಿಸುತ್ತಿವೆ. ಇದರಿಂದಾಗಿ ಬೆರಗಿನ ಲೋಕವನ್ನು ನೋಡುವ ಮನಸ್ಥಿತಿ ದೂರವಾಗಿದೆ. ಯೂಟ್ಯೂಬ್ಗಳು ಮಕ್ಕಳಲ್ಲಿರುವ ಬೆರಗಿನ ನೋಟವನ್ನು ಕಸಿದಿದೆ ಎಂದು ವಿಷಾದಿಸುವ ಜೋನ್ ವೇಗಸ್, ನಾಣ್ಯ, ಅಂಚೆಚೀಟಿ ಸಂಗ್ರಹ ಹೇಗೆ ಹವ್ಯಾಸವೋ ಅದೇ ರೀತಿ ಪತ್ರಿಕೆಗಳ ಮಾಹಿತಿಗಳ ಸಂಗ್ರಹವೂ ಹವ್ಯಾಸವಾಗಿ ಬೆಳೆಯಬೇಕು, ಎನ್ನುತ್ತಾರೆ.
                ಅಧ್ಯಾಪಕರಿಗೆ ಮಕ್ಕಳೆಂದರೆ ಪ್ರೀತಿ. ಯಾರಿಗೆ 'ಮಕ್ಕಳ ಮೇಲೆ ಪ್ರೀತಿ' ಮನಸಾ ಹುಟ್ಟಿತೋ ಆಗ ಕಲಿಕೆಯು ವಿದ್ಯಾರ್ಥಿಗೂ, ಅಧ್ಯಾಪಕನಿಗೂ ಭಾರವಾಗುವುದಿಲ್ಲ! ಬೆರಗಿನ ಲೋಕದಲ್ಲಿ ಕಲಿಕೆಯನ್ನು ಕಟ್ಟಿಕೊಳ್ಳುವಂತಹ ವಾತಾವರಣ ಶಾಲೆಗಳಲ್ಲಿ ಸೃಷ್ಟಿಯಾಗಬೇಕು. ಇವುಗಳು ಪುಸ್ತಕ, ಪತ್ರಿಕೆಗಳ ಅಕ್ಷರಗಳಿಂದ ಸಾಧ್ಯ.
                ಜೋನ್ ವೇಗಸ್ ಅವರ ಕೈಂಕರ್ಯದಲ್ಲಿ ಹೊಸತೇನೂ ಇಲ್ಲದಿರಬಹುದು. ಆದರೆ ಭೂತಕಾಲವನ್ನು ಅಕ್ಷರರೂಪದಲ್ಲಿ ಕಟ್ಟಿಡುವ ಸದ್ದಿಲ್ಲದ ಕಾಯಕ. ಒಂದೊಂದು ಚಿತ್ರಕ್ಕೆ ಸಂದು ಹೋದ ಘಟನೆಗಳನ್ನು, ಅದರ ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ತಾಕತ್ತಿದೆ. ಅಧ್ಯಾಪಕ ಜೋನ್ ವೇಗಸ್ ಅವರಿಗೆ ಅಭಿನಂದನೆಗಳು.

 (ಸುದ್ದಿ ಬಿಡುಗಡೆ - 7-10-2018 - ಊರು ಸೂರು)

0 comments:

Post a Comment