ಮಂಗಳೂರಿನಿಂದ
ಶಿರಸಿ ಮಾರ್ಗವಾಗಿ ಹೋಗುವ ಬಹುತೇಕ ಬಸ್ಸುಗಳು
ಸಾಮಾನ್ಯ ದರ್ಜೆಯವು. ವೋಲ್ವೋ, ಡಿಲಕ್ಸ್,
ಸ್ಲೀಪರ್ ಬಸ್ಸುಗಳಿಲ್ಲ. ದೂರದ ಬಾದಾಮಿ, ಬಾಗಲಕೋಟೆ,
ಸಂಕೇಶ್ವರ, ಐಹೊಳೆ.. ಗಳಿಂದ ಬರುವ
ಬಸ್ಸೆಲ್ಲವೂ ಶಿರಸಿ ಮಾರ್ಗವಾಗಿ ಬರುತ್ತವೆ.
ಮಂಗಳೂರಿನಿಂದ
ಯಲ್ಲಾಪುರಕ್ಕೆ ಸ್ಲೀಪರ್ ಬಸ್ ಆರಂಭವಾದ
ಸುದ್ದಿ ಓದಿದ್ದೆ. ಒಮ್ಮೆ ಪ್ರಯಾಣಿಸುವ ಸಂದರ್ಭ
ಬಂತು. ಮರುಪ್ರಯಾಣಕ್ಕಾಗಿ ಮುಂಗಡ ಟಿಕೇಟ್ ಕಾದಿರಿಸಲು
ಶಿರಸಿಯ ಬಸ್ ನಿಲ್ದಾಣದ ಕೌಂಟರಿನಲ್ಲಿ
ವಿಚಾರಿಸಿದೆ. ಅಲ್ಲಿನ ಸಿಬ್ಬಂದಿ 'ಅದು
ಆಸ್ಪತ್ರೆ ಬಸ್ ಅಲ್ವಾ' ಎಂದರು.
ಅರ್ಥವಾಗದೆ 'ಅಲ್ಲ' ಅಂದೆ.
ನನ್ನ ಗೊಂದಲವನ್ನು ನೋಡಿ, 'ಹೌದೂರೀ ಅದು
ಯಲ್ಲಾಪುರದಿಂದ ದೇರಳಕಟ್ಟೆಗೆ ಹೋಗುವ ಬಸ್' ಎಂದರು.
ಟಕೇಟ್ ಕಾದಿರಿಸಿದೆ. 'ಇದಕ್ಕೆ ಆಸ್ಪತ್ರೆ ಬಸ್'
ಎಂದು ಯಾಕೆ ಕರೆಯುತ್ತಾರೆ? ಕೆಟ್ಟ
ಕುತೂಹಲದಿಂದ ಗೊಂದಲಕ್ಕೀಡಾದೆ. ಮತ್ತೆ ತಿಳಿಯಿತು.
ಶಿರಸಿ ಸುತ್ತಮುತ್ತಲಿನ ತಾಲೂಕುಗಳಿಂದ ಸುಲಭ ಪ್ರಯಾಣದಲ್ಲಿ ಆಸ್ಪತ್ರೆ
ಸೇರುವ ಸಾರಿಗೆ ವ್ಯವಸ್ಥೆಗಳಿಲ್ಲ.
ಚಿಕಿತ್ಸೆಗಾಗಿ ಬರುವವರು, ಚಿಕಿತ್ಸೆ ಪಡೆದು ತೆರಳುವವರಿಗೆ ಅನುಕೂಲವಾಗಲು
ಸರಕಾರವು ಸ್ಲೀಪರ್ ಬಸ್ ಹೊರಡಿಸಿತ್ತು.
ಹಾಗೆಂತ ರೋಗಿಗಳು ಮಾತ್ರವಲ್ಲ, ಇತರರೂ
ಪ್ರಯಾಣಿಸಬಹುದು. ಪ್ರಜ್ಞಾವಂತರಾದ, ಬುದ್ಧಿವಂತರಾದ ನಾವು ಬಸ್ಸಿಗೆ 'ಆಸ್ಪತ್ರೆ
ಬಸ್' ಅಂತ ನಾಮಕರಣ ಮಾಡಿದ್ದೇವೆ.
ಅಂದು ಬಸ್ಸು ತುಂಬಿತ್ತು. ಚಿಕಿತ್ಸೆಗಾಗಿ
ಹೋಗುವ ಐದಾರು ಮಂದಿ ವಿಶ್ರಾಂತಿಯಲ್ಲಿದ್ದರು.
ಮಿಕ್ಕಂತೆ ಇತರ ಪ್ರಯಾಣಿಕರೇ ಅಧಿಕ.
ಆಸ್ಪತ್ರೆ ಬಸ್ಸೆಂದು ವಿನೋದಕ್ಕೆ ಹೆಸರಿಟ್ಟಿರಬಹುದು. ಪರಿಣಾಮ ಗಂಭೀರ ಅಲ್ವಾ.
ಸಂಬಂಧಪಟ್ಟ ಸಿಬ್ಬಂದಿ ಹೀಗೆನ್ನಬಾರದಿತ್ತು. ಅವರ ಮಾತುಗಳು ನನ್ನೊಳಗೆ
ತಪ್ಪು ಸಂದೇಶವನ್ನು ಕಟ್ಟಿಕೊಟ್ಟಿತ್ತು.
ಆ ಹೆಸರೇ ಬಸ್ಸಿಗೆ ಶಾಪ!
ನಿಧಾನಕ್ಕೆ ಪಸರಿಸಿ ಇತರ ಪ್ರಯಾಣಿಕರು
ದೂರ ಉಳಿಯುವ ಸಾಧ್ಯತೆ ನಿಚ್ಚಳ.
ಅದೊಂದು ಮನಸ್ಥಿತಿ. ಒಮ್ಮೆ ಕಪ್ಪುಚುಕ್ಕೆ ಅಂಟಿದರೆ
ಒರೆಸುವುದು ಕಷ್ಟ. ಯಾಕೆ ಹಾಗೆಂದರೋ
ಗೊತ್ತಿಲ್ಲ. ಸರಕಾರಿ ಮನಸ್ಸುಗಳ ಗುಣಗಳನ್ನು
ಮೆಲುಕು ಹಾಕುತ್ತಿದ್ದಾಗ ದೇಶದಲ್ಲೇ ಮನಕರಗುವಂತಹ 'ಕ್ಯಾನ್ಸರ್ ರೈಲು' ನೆನಪಿಗೆ ಬಂತು.
ಗೋಧಿಯ ಕಣಜ ಪಂಜಾಬ್. ಒಂದು
ಕಾಲಘಟ್ಟದಲ್ಲಿ ಹೊಲಕ್ಕೆ ನುಗ್ಗಿದ ಕೀಟನಾಶಕಗಳ
ಅವಿರತ ಸಿಂಪಡಣೆಗಳು ರೈತರ ಬದುಕನ್ನು ಕಸಿದಿವೆ.
ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ. ರೋಗಪೀಡಿತರು
ಅಗಣಿತ. ವಿವಿಧ ಬೆಳೆಗಳನ್ನು ಬೆಳೆಯುತ್ತಾರಾದರೂ
ಅವೆಲ್ಲವೂ ಕೀಟನಾಶಕಗಳ ಹೊರತಾಗಿಲ್ಲ. ಶಿಫಾರಸಿಗಿಂತ ಹೆಚ್ಚು ವಿಷಗಳ ಸಿಂಪಡಣೆ.
ಪರಿಣಾಮ, ಕ್ಯಾನ್ಸರ್ ರೋಗಿಗಳ ಹೆಚ್ಚಳ.
ಪಂಜಾಬಿನಲ್ಲಿ
ಬಡವರ ಚಿಕಿತ್ಸೆಗಾಗಿ ಆಸ್ಪತ್ರೆಗಳು ಕಡಿಮೆ. ಬಿಕಾನೇರ್ನಲ್ಲಿ ಆಚಾರ್ಯ
ತುಳಸಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಮತ್ತು ಸಂಶೋಧನಾ
ಕೇಂದ್ರವು ಚಿಕಿತ್ಸೆ ನೀಡುತ್ತಿದೆ. ಪಂಜಾಬಿನಿಂದ ಒಂದು ರಾತ್ರಿಗಿಂತಲೂ ಹೆಚ್ಚು
ಪ್ರಯಾಣ. ಬಡವರು ಪ್ರಯಾಣಕ್ಕಾಗಿ ಪ್ಯಾಸೆಂಜರ್
ರೈಲನ್ನೇ ನೆಚ್ಚಿಕೊಂಡಿದ್ದರು. ಇದರಲ್ಲಿ ಕ್ಯಾನ್ಸರ್ ಪೀಡಿತರು
ಚಿಕಿತ್ಸೆಗಾಗಿ ಹೋಗಿ, ಬರುತ್ತಿರುವುದರಿಂದ ಇದು
'ಕ್ಯಾನ್ಸರ್ ರೈಲು' ಆಯಿತು.
ಬ್ಲಾಗ್
ಬರಹವೊಂದರ ಮಾಹಿತಿ ಗಮನಿಸಿ. 1960 - ಹಸಿರು
ಕ್ರಾಂತಿಯ ದಶಕ. ದೇಶದ ಹಸಿವನ್ನು
ತಣಿಸಲು ಆಗಿನ ಸರಕಾರವು ಹೆಚ್ಚು
ಹೆಚ್ಚು ಆಹಾರ ಬೆಳೆಯಲು ಪ್ರೋತ್ಸಾಹಿಸಿತು.
ಅನಿಯಮಿತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು
ಸುರಿಯಲಾಯಿತು. ಈ ವಿಷವು ಪಂಜಾಬಿನ
ಅಂತರ್ಜಲಕ್ಕೆ ಸೇರಿದೆ. ನೀರು ಕುಡಿಯುವ
ಪ್ರತಿಯೊಬ್ಬನೂ ಸಂತ್ರಸ್ತನೇ ಆಗಿದ್ದಾನೆ. ಅದೆಷ್ಟೋ ಮಕ್ಕಳು ಹಲವಾರು
ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಬಿಕನೇರ್ಗೆ ಬರುತ್ತಿದ್ದಾರೆ.
ನಾನಿಲ್ಲಿ
ಕ್ಯಾನ್ಸರಿಗೆ ಕಾರಣವನ್ನು ಪೋಸ್ಟ್ಮಾರ್ಟಂ ಮಾಡಲು ಹೊರಟಿಲ್ಲ. ಬುದ್ಧಿವಂತ
ನಾಗರಿಕ ಒಂದು ಪ್ರಕರಣವನ್ನು ಹೇಗೆ
ಹಗುರವಾಗಿ ಕಂಡಿದ್ದಾನೆ ಎನ್ನುವುದಕ್ಕೆ ಉದಾಹರಣೆಗಳಿವು. ಮಾನವೀಯತೆಗಿಂತ ಹೊರತಾದ ಮನಸ್ಥಿತಿ. ಧನಿಕರ,
ರಾಜಕಾರಣಿಗಳ ಅಹಂಕಾರದ ಮುಖ. ಬಡತನದ
ಗೇಲಿ. ಇವರಿಗೆಲ್ಲಾ ಇಂತಹ ಸ್ಥಿತಿ ಬರುವುದು
ಬೇಡ. ಒಂದು ವೇಳೆ ಬಂದುಬಿಟ್ಟರೆ?
ಐಷರಾಮದ ಆಸ್ಪತ್ರೆಗಳಿವೆ. ದುಡ್ಡು ಚೆಲ್ಲಿದರೆ ಆಯಿತು.
ಚಿಕಿತ್ಸೆ ನೀಡುವ ವೈದ್ಯರಿದ್ದಾರೆ. ಕಾಂಚಾಣ
ಸದ್ದಿನ ವಿಮಾ ಕಂಪೆನಿಗಳಿವೆ. ಗುಣ
ಆಗುತ್ತೋ ಇಲ್ವೋ ಬೇರೆ ವಿಚಾರ.
ಬಡವರಿಗಾಗಿ
ಒಂದು ವ್ಯವಸ್ಥೆಯನ್ನು ಸರಕಾರ ಮಾಡಿದಾಗ ಅದನ್ನು
ಹಗುರವಾಗಿ ಕಾಣುವ ಬುದ್ಧಿವಂತ ಮನಸ್ಸುಗಳ
ಮನಸ್ಥಿತಿಯನ್ನು ಏನೆಂದು ಕರೆಯೋಣ? ರೈತರು,
ಶ್ರಮಜೀವಿಗಳು ದೇಶವಾಸಿಗಳ ಹೊಟ್ಟೆ ತುಂಬಿಸುತ್ತಾರೆ. ಸ್ವತಃ
ಆತ ತೊಂದರೆಗೊಳಗಾದಾಗ ಕನಿಷ್ಠ ಅನುಕಂಪವನ್ನು ಸೂಚಿಸಲು
ಮನಸ್ಸು ಯಾಕೆ ಸಿದ್ಧವಾಗುವುದಿಲ್ಲ? ಬಹುಶಃ
ಇಂತಹ ಹಗುರ ಮಾತುಗಳಿಗೆ ಕಡಿವಾಣ
ಹಾಕಲು ಈ ದೇಶದಲ್ಲಿ ಇನ್ಯಾವ
ವ್ಯವಸ್ಥೆ ರೂಪುಗೊಳ್ಳಬೇಕು? ಬಡತನ ಎನ್ನುವುದು ಸಾಮಾಜಿಕ
ಸ್ಥಿತಿ. ಅದು ಶಾಪ ಅಲ್ಲ!
- ನಾ. ಕಾರಂತ ಪೆರಾಜೆ / 30-9-2018
ಊರು ಸೂರು / ಸಾಂದರ್ಭಿಕ
ಚಿತ್ರ – ನೆಟ್ ಕೃಪೆ
0 comments:
Post a Comment