Saturday, November 17, 2018

ಕನ್ನಡವನ್ನು ಎಲ್ಲಿ ಕಟ್ಟಬೇಕಣ್ಣಾ...?


 ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದಾಗಲೆಲ್ಲಾ ಸ್ಥಾಪಿತವಾದ ಗೊಣಗಾಟ ಕೇಳುತ್ತಿದ್ದೆ, ಸಭಾಭವನದಲ್ಲಿ ಮಕ್ಕಳೇ ತುಂಬಿದರೆ ಕನ್ನಡ ಕಟ್ಟುವ ಬಗೆ ಹೇಗೆ?. ಹೀಗೆ ಹೇಳುತ್ತಿದ್ದವರೇ ಸಮ್ಮೇಳನಗಳಲ್ಲಿ ನಾಪತ್ತೆ! ಒಂದರ್ಧ ಗಂಟೆ ಕುಳಿತುಕೊಳ್ಳಲೂ ಅವರೊಳಗಿನ ಕನ್ನಡ ಮನಸ್ಸು ಅಡ್ಡಿಪಡಿಸುತ್ತಿದೆ!

ಕಳೆದ ವರುಷ ಕಡಬದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆಯಾಗಿದ್ದಾಗ ಐದಾರು ಗೊಣಗಾಟದ ಮನಸ್ಸುಗಳು ಹುಳಿಯಾದುವು! ಎಷ್ಟು ಕೊಟ್ರಿ ಎಂದು ಹಗುರವಾಗಿ ಮಾತನಾಡಿದರು ಕೂಡಾ. ಬದುಕಿನ ಯಾವುದೇ ಘಳಿಗೆಯಲ್ಲಿ ಮುಗುಳ್ನಗು ಬೀರದ ಆ ಮನಸ್ಸಿನ ಹಣೆಯ ನೆರಿಗೆಗಳನ್ನು ಲೆಕ್ಕಮಾಡಬಹುದಾಗಿತ್ತು!

ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು ನಡೆಯುವಾಗಲಂತೂ ಗೊಣಗಾಟದ ಮನಸ್ಸುಗಳು ಕೆರಳುತ್ತವೆ. ಪಕ್ಕದವರ ಏಕಾಗ್ರತೆಯನ್ನು ಪರೀಕ್ಷಿಸುತ್ತವೆ. ಸಂಘಟಕರ ಜಾತಕವನ್ನು ಜಾಲಾಡುತ್ತವೆ. ಜಾಲತಾಣಗಳಲ್ಲಿ ತನ್ನ ಕನ್ನಡ ಮನಸ್ಸನ್ನು ಹರಿಯಬಿಡುತ್ತವೆ. ನುಸುಳುವಿಕೆಗೆ ಜಾಗ ಸಿಗದೇ ಇದ್ದಾಗ ಜಾತಿ, ಮತ, ಅಂತಸ್ತುಗಳ ದಾಳಗಳನ್ನು ಹಾಕಿ ಖುಷಿ ಪಡುತ್ತವೆ.
ಕಳೆದ ವಾರ ಜರುಗಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಸಂಪನ್ನವಾಗುವ ಹೊತ್ತಿಗೆ ಒಂದಷ್ಟು ಹೊಣಗಾಟದ ಮನಸ್ಸುಗಳು ನಗೆಚೆಲ್ಲಿದುವು! ಕಳೆದ ವರುಷ ಹುಳಿ ತೋರಿದ ಆ ಮನಸ್ಸು ಪುಸ್ತಕ ಮಳಿಗೆಯಲ್ಲಿ ಸುತ್ತಾಡುತ್ತಿದ್ದಾಗ, ಪುಸ್ತಕ ತೆಕ್ಕೊಂಡ್ರಾ.. ಉತ್ತಮ ಪುಸ್ತಕಗಳಿವೆ ಎಂದೆ. ಯಾರಿಗೆ ಪುರುಸೊತ್ತುಂಟು ಎನ್ನುತ್ತಾ ನುಣುಚಿಕೊಂಡಿತು! 

ಹೆಚ್ಚಿನ ವೇದಿಕೆಗಳಲ್ಲಿ ಕನ್ನಡ ಚಳುವಳಿ, ಹಳೆಗನ್ನಡ, ಮಧ್ಯಕಾಲೀನ, ನವೋದಯ, ಎಡ-ಬಲ, ಬಂಡಾಯ.. ಮೊದಲಾದ ವಿಚಾರಗಳು ಉಗ್ರವಾಗಿ ಪ್ರತಿಪಾದಿತವಾಗುತ್ತವೆ. ಸಭಾಭವನ ನೋಡಿದರೆ ಅದೇ ಮಾಮೂಲಿ ಮುಖಗಳು! ಇಂತಹ ಪ್ರತಿಪಾದನೆಗಳಿಗೆ ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ಬಳಸಿಕೊಳ್ಳಬೇಕು. ಅಲ್ಲಿ ಬೇಕಾದರೆ ವಾದ, ವಿವಾದಗಳಾಗಲಿ. ಮಥನ ನಡೆಯಲಿ. ಸಮರ್ಥ ಹೂರಣ ಇದ್ದರೆ ನವನೀತ ಸಿಗಬಹುದು. ವರ್ತಮಾನದ ಕನ್ನಡ ಮನಸ್ಸುಗಳ ಸ್ಥಿತಿ, ಅವಸ್ಥೆಯನ್ನು ನೋಡಿದರೆ ನವನೀತ ಸಿಗಬಹುದೆನ್ನುವ ವಿಶ್ವಾಸವಂತೂ ನನಗಿಲ್ಲ. 

ವಿದ್ಯಾರ್ಥಿಗಳ ಉಪಸ್ಥಿತಿಯಿಂದ ಪುತ್ತೂರಿನ ಕನ್ನಡ ಸಾಹಿತ್ಯ ಸಮ್ಮೇಳನ ಯಶವಾಯಿತು. ಸುತ್ತಲಿನ ಶಾಲೆಗಳ ಆಯ್ದ ವಿದ್ಯಾರ್ಥಿ ಸಮೂಹ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಪುಸ್ತಕ ಮಳಿಗೆಗಳನ್ನು ಸುತ್ತಾಡಿದರು. ಕಲೆ, ಸಾಹಿತ್ಯ ಹಿನ್ನೆಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಉದ್ಘಾಟನಾ ದಿನದಂದು ವಿಠಲ ನಾಯಕರು ನಡೆಸಿಕೊಟ್ಟ ಗೀತ ಸಂಭ್ರಮದಲ್ಲಿ ವಿದ್ಯಾಥರ್ಿಗಳ ಖುಷಿ, ಆನಂದಗಳಿಗೆ ಖುಷಿಗಳೇ ಶರಣಾದುವು! ಒಂದು ದಿವಸ ಢಾಂಢೂಂ ಲೋಕದಿಂದ ಬದಿಗೆ ಸರಿದ ಎಳೆ ಮನಸ್ಸುಗಳಿಗೆ ಸಮ್ಮೇಳನದ ಹೂರಣಗಳ  ದರ್ಶನವಾಯಿತು.  

ಕನ್ನಡವನ್ನು ಎಲ್ಲಿ ಕಟ್ಟಬೇಕು? ಪ್ರಶ್ನೆಗೆ 'ವಿದ್ಯಾರ್ಥಿಗಳ ಮನದೊಳಗೆ' ಎನ್ನುವ ಉತ್ತರ ಕೊಡಬಹುದು. ಆಂಗ್ಲವನ್ನು 'ವ್ಯಾಮೋಹ' ಎನ್ನುತ್ತಾ ವರ್ತಮಾನದ ಮನಸ್ಸುಗಳನ್ನು ಆಕ್ಷೇಪಿಸುತ್ತೇವೆ. ಇಂದು ಆಂಗ್ಲ ಭಾಷೆಯ ಮಹತ್ತನ್ನು, ಸೊಗಸನ್ನು ಮಾದರಿಯಾಗಿ ತೋರಿಸುವ ಎಷ್ಟೋ ಉಪಾಧಿಗಳಿಲ್ವಾ. ವಿದ್ಯಾರ್ಥಿಗಳಿಗದು ಸುಲಭವಾಗಿ ಮನ ಹೊಕ್ಕುತ್ತದೆ. ಆದರೆ ಕನ್ನಡ ಭಾಷೆಯ ಸೊಗಸನ್ನು, ಸೊಬಗನ್ನು ತೋರಿಸುವ ಎಷ್ಟು ಮಾದರಿಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದೇವೆ? ಸವಿ ಉಣಿಸಿದ್ದೇವೆ?

ಸಾಹಿತ್ಯ ಸಮ್ಮೇಳನದ ಕಲಾಪಗಳು ವಿದ್ಯಾರ್ಥಿಗಳಿಗೆ ಕನ್ನಡ ಮನಸ್ಸಿನ ಮಾದರಿಗಳನ್ನು ಕಟ್ಟಿಕೊಡುತ್ತವೆ. ವಿಚಾರಗೋಷ್ಠಿಯು ವೈಚಾರಿಕ ಹರಹನ್ನು ತೋರಿಸುತ್ತದೆ. ಮತ್ತೊಂದೆಡೆ ಕವಿಗೋಷ್ಠಿಯ ಹೂರಣದ ಹೊನಲು.   ಮಾದರಿಗಳನ್ನು ತೋರಿಸಿದೆ. 'ವಿದ್ಯಾರ್ಥಿಗಳಿಗೆ ಆಸಕ್ತಿಯಿಲ್ಲ' ಎನ್ನುವ ಅಪವಾದ ಯಾಕೆ ಹೊರಿಸಬೇಕು? ವೇದಿಕೆಯಲ್ಲಿ ನಡೆಯುವ ವೈಚಾರಿಕ ವಿಚಾರಗಳು ಫಕ್ಕನೆ ಅರ್ಥವಾಗದೇ ಇರಬಹುದು. ಪದೇ ಪದೇ ಕಲಾಪಗಳು ಮರುಕಳಿಸಿದಾಗ ಸಹಜವಾಗಿ ಆಸಕ್ತಿಯ ಗರಿಗಳು ತೆರೆಯಲಾರಂಭಿಸುತ್ತವೆ. ಸಮ್ಮೇಳನ ಅಲ್ಲದೆ ಶಾಲೆ/ಕಲೇಜುಗಳಲ್ಲೂ ಈಚೆಗೆ ಕನ್ನಡ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶುಭ ಬೆಳವಣಿಗೆ. 

ಪುತ್ತೂರಿನ ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಪುಸ್ತಕವನ್ನು ಖರೀದಿಸುವ ಹಲವಾರು ವಿದ್ಯಾರ್ಥಿಗಳನ್ನು ಗಮನಿಸಿದ್ದೇನೆ. ಪುಸ್ತಕದ ಶೀರ್ಶಿಕೆಯನ್ನು ನೋಡಿ ನೋಟ್ಸ್ ಮಾಡಿಕೊಳ್ಳುವ, ಲೇಖಕರನ್ನು ದಾಖಲಿಸುವ ಹೊಸ ಸಂಗತಿಗಳು ಪುಸ್ತಕ ಪ್ರದರ್ಶನದಲ್ಲಿ ನಡೆದಿವೆ. ಈ ಸಮ್ಮೇಳನದಲ್ಲಿ ಹಲವು ರೀತಿಯ ಪುಸ್ತಕದ ಆಸಕ್ತಿಯ ಮನಸ್ಸುಗಳನ್ನು ನೋಡಿ ಬೆರಗಾದೆ, ಪುಸ್ತಕ ಮಳಿಗೆಯವರೊಬ್ಬರ ಅಭಿಪ್ರಾಯ. ಇವೆಲ್ಲಾ ಕನ್ನಡ ಕಟ್ಟುವ ತಾಣಗಳು. 

ಕನ್ನಾಡಿನಲ್ಲಿ ನಡೆಯುವ ಅನೇಕ ಸಾಹಿತ್ಯ ಸಮ್ಮೇಳನಗಳ ವರದಿಗಳಲ್ಲಿ ವಿಷಾದಗಳು ಮೇಳೈಸುತ್ತವೆ. ಇಸಂಗಳು ಆಡುತ್ತಿವೆ. ಇತಿಹಾಸವನ್ನು ತಿರುಚುವ, ಅದನ್ನು ಸಮರ್ಥಿಸುವ ಅನೇಕ ವಿದ್ಯಮಾನಗಳು ನಡೆಯುತ್ತಿವೆ. 'ನಾವು ಕನ್ನಡವನ್ನು ಕಟ್ಟುತ್ತೇವೆ, ಕಟ್ಟುತ್ತಿದ್ದೇವೆ, ಎಂದು ಬೊಬ್ಬಿಡುವವರು 'ನಮ್ಮ ನಡುವೆ ವಿದ್ಯಾರ್ಥಿಗಳಿದ್ದಾರೆ' ಎನ್ನುವುದನ್ನು ಮರೆತಿದ್ದಾರೆ. ವಿದ್ಯಾರ್ಥಿಗಳನ್ನು ಮರೆತ ಕನ್ನಡ ಕಟ್ಟುವ ಕಾಯಕ ಎಷ್ಟು ಫಲಕಾರಿಯಾದೀತು? 

ಸುದ್ದಿ ಬಿಡುಗಡೆ / ಊರು ಸೂರು / 24-9-2018
ಸಾಂದರ್ಭಿಕ ಚಿತ್ರ : ಕೃಷ್ಣ ಸ್ಟುಡಿಯೋ ಪುತ್ತೂರು
ಲೇಖನದ ಪೂರ್ತಿ ಓದಿಗೆ . www.hasirumatu.blogspot.in



0 comments:

Post a Comment