ಜೀನಸಿಯ ಪಟ್ಟಿಯೊಂದಿಗೆ ಬಟ್ಟೆಯ ಚೀಲವನ್ನೂ ಒಯ್ದು ಜೀನಸಿ ತಂದ ಬಾಲ್ಯದ ದಿನಗಳಿನ್ನೂ ಹಸಿರಾಗಿವೆ. ಚೀಲತುಂಬಿದಾಗ 'ಏನೋ ವಿಶೇಷ. ಏನುಂಟು' ಎಂದು ಪ್ರಶ್ನಿಸುವ ಹಿರಿಯರು ಬಹುಶಃ ಕಾಲಗರ್ಭ ಸೇರಿರಬೇಕು.
ವಾರದ ಸಂತೆಯಿಂದ ತರಕಾರಿ ತರುವುದೇ ಸಂಭ್ರಮ. ಟೋಮ್ಯಾಟೋಗೆ ಒಂದು ಚೀಲ, ಇತರ ತರಕಾರಿಗೆ ಮತ್ತೊಂದು, ಜೀನಸಿಗೆ ಇನ್ನೊಂದು...ಹೀಗೆ ಹಲವು ಚೀಲ ಹಿಡಿದು ಹೊರಟರೆ ವಾರದ ಸಂತೆಗೆನ್ನುವುದು ಖಚಿತ. ಎಲ್ಲಾ ತುಂಬಿಸಿ ಹೊರಡುವಾಗ ಗಜಗರ್ಭ. ದೇವಸ್ಥಾನಕ್ಕೆ ಬಲಿವಾಡು ಮನೆಯಿಂದಲೇ ತರಬೇಕು - ಎನ್ನುವುದು ಅಲಿಖಿತ ಸಂಪ್ರದಾಯ. ಅದಕ್ಕೋಸ್ಕರ ಪ್ರತ್ಯೇಕವಾದ ಚೀಲ.
ಈ 'ಚೀಲ' ಎಲ್ಲಿ ಮಾಯವಾಗಿದೆ? ಪ್ಲಾಸ್ಟಿಕ್ ಚೀಲ (ತೊಟ್ಟೆ)ಗಳು ಆ ಸ್ಥಾನವನ್ನು ತುಂಬಿವೆ. ಈಗ ಅಂಗಡಿ, ಸಂತೆಗೆ ಕೈಬೀಸಿ ಹೋದರೆ ಸಾಕು. ಪ್ಲಾಸ್ಟಿಕ್ ಚೀಲದೊಳಗೆ ತರಕಾರಿ, ಜೀನಸು ತರಬಹುದು. ದೇವರ ಪ್ರಸಾದಕ್ಕೂ ಪ್ಲಾಸ್ಟಿಕ್. ಕುಂಕುಮವೋ, ಗಂಧವೋ ಅಂಗೈಗೆ ಅಂಟುತ್ತದಲ್ಲಾ! ಅದಕ್ಕೂ 'ಚಿಕ್ಕ ಪ್ಲಾಸ್ಟಿಕ್ ತೊಟ್ಟೆ'! ಸಮಾರಂಭಗಳಲ್ಲಿ ಚಹಾ, ಶರಬತ್ತುಗಳಿಗೆ ಪ್ಲಾಸ್ಟಿಕ್ ಲೋಟ. ಈಗಂತೂ ಊಟಕ್ಕೆ ಸೀಲ್ ಮಾಡಿದ ನೀರಿನ ಪ್ಲಾಸ್ಟಿಕ್ ಬಾಟಲ್/ಗ್ಲಾಸುಗಳು ಬಂದಿವೆ!
ಇತ್ತೀಚೆಗೆ ಅಂಗಡಿಯೊಂದರಲ್ಲಿ ಒಂದು ಕಿಲೋ ಸಕ್ಕರೆಯನ್ನು ಖರೀದಿಸಿದ ಓರ್ವ ವ್ಯಕ್ತಿ ಪ್ಲಾಸ್ಟಿಕ್ ಚೀಲಕ್ಕಾಗಿ 'ಗಲಾಟೆ' ಮಾಡುತ್ತಿದ್ದ. ಹೆಗಲಲ್ಲಿ ಚೀಲವಿದ್ದರೂ, ಸಕ್ಕರೆಯನ್ನು ತೂಗಿಸಿ ಒಯ್ಯಲು ಪ್ಲಾಸ್ಟಿಕ್ ತೊಟ್ಟೆಗಾಗಿ ಗಲಾಟೆ. ಕೊನೆಗೆ ಅಂಗಡಿಯಾತ ನೀಡಿದನೆನ್ನಿ. 'ತೊಟ್ಟೆ ಇಲ್ಲದೆ ಯಾವ ವಸ್ತುವೂ ಮನೆ ಸೇರದು' ಎಂಬ ವ್ಯವಸ್ಥೆಯನ್ನು ಸ್ವ-ರೂಢಿಸಿಕೊಂಡಿದ್ದೇವೆ.
ಬದುಕಿನ ಎಲ್ಲಾ ವ್ಯವಸ್ಥೆಗಳಲ್ಲೂ ಪ್ಲಾಸ್ಟಿಕ್ ಆವರಿಸಿದೆ. ಮಣ್ಣಲ್ಲಿ ಕರಗದ, ಬೆಂಕಿಯಲ್ಲಿ ಬೇಯದ ಇದು ಪರಿಸರಕ್ಕೆ ಮಾರಕ. ಎಲ್ಲಾ ವಿಚಾರಗಳು ಗೊತ್ತಿದ್ದೂ, ಪ್ಲಾಸ್ಟಿಕ್ ದೂರವಿಡಲು ಸಾಧ್ಯವೇ ಇಲ್ಲದಂತಹ ಸ್ಥಿತಿ.
ಮನಸ್ಸಿದ್ದರೆ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಬಹುದು - ಎಂಬುದನ್ನು ಪುತ್ತೂರು ಕೆದಂಬಾಡಿ ಕೋರಂಗಮನೆಯ ಸಂತೋಷ್ ಕುಮಾರ್ ತೋರಿಸಿಕೊಟ್ಟಿದ್ದಾರೆ. ತಮ್ಮಲ್ಲಿಗೆ ತರುವ ಎಲ್ಲಾ ಪ್ಲಾಸ್ಟಿಕ್ ಚೀಲ(ತೊಟ್ಟೆ)ಗಳನ್ನು ಶೇಖರಿಸಿಡುತ್ತಾರೆ. ಒಂದೆರಡು ಕಿಲೋವಾದ ನಂತರ ಊರಿನ ಅಂಗಡಿಗೆ ಪುನಃ ಬಳಸಲು ನೀಡುತ್ತಾರೆ. ಇದರಿಂದಾಗಿ ಒಂದು ಚೀಲ ಎರಡ್ಮೂರು ಸಾರಿ ಬಳಸಿದಂತಾಗುತ್ತದೆ.
'ನನ್ನಲ್ಲಿ ಯಾವಾಗಲೂ ನಾಲ್ಕೈದು ಬಳಸಿದ ಚೀಲಗಳು ಇದ್ದೇ ಇರುತ್ತದೆ' ಎನ್ನುತ್ತಾರೆ ಸಂತೋಷ್. ಮನೆಗೆ ತಂದ ಚೀಲಗಳನ್ನು ಅವರಮ್ಮ ಜಯಂತಿ ಸಂಗ್ರಹಿಸಿಡುತ್ತಾರೆ. 'ಅವನಿಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿದ್ದಿದ್ದರೆ ಸಹಿಸುವುದಿಲ್ಲ' ಎನ್ನುತ್ತಾ ಸಂಗ್ರಹಿಸಿದ ಪ್ಲಾಸ್ಟಿಕ್ ಖಜಾನೆಯನ್ನು ತೋರಿಸುತ್ತಾರೆ.
ಉಪಯೋಗವಿಲ್ಲದ ಚೀಲಗಳು ಮನೆಯ ಪಕ್ಕದ ಹೊಂಡ ಸೇರುತ್ತವೆ. ತುಂಬಿದಾಗ ಅವಕ್ಕೆ ಮೋಕ್ಷ! ಕಳೆದೆರಡು ವರುಷಗಳಿಂದ ಪ್ಲಾಸ್ಟಿಕಿನ ಮಿತ ಬಳಕೆಗೆ ಸಂತೋಷ್ ಒಗ್ಗಿಹೋಗಿದ್ದಾರೆ. ಕೆಲವರು ಗೇಲಿ ಮಾಡಿದ್ದೂ ಇದೆಯಂತೆ!
'ಪ್ರತೀ ಸಲ ಸಾಮಾನು ತರುವಾಗಲೂ ಹೊಸ ಹೊಸ ಚೀಲಗಳು ಮನೆ ಸೇರುತ್ತವೆ. ಮರುಬಳಸಿ ನಮಗೆ ಅಭ್ಯಾಸವಾಗಿದೆ' ಎನ್ನುತ್ತಾರೆ ಮನೆಯ ಯಜಮಾನ ರಾಜೀವ ರೈಯವರು.ಇಲ್ಲಿ ಅಭಿನಂದನೆ ಹೇಳಬೇಕಾದುದು - ಚೀಲವನ್ನು ಮರುಬಳಸುವ ಅಂಗಡಿಯವರಿಗೆ! ಸಂತೋಷರ ಆಲೋಚನೆಗೆ ಅವರ ಸಹಮತ. ಇವರ ಈ ಕೆಲಸದಲ್ಲಿ ಏನೂ ಕಾಣದಿರಬಹುದು. ಆದರೆ ಒಂದು ಸಂದೇಶವಿದೆ - ಮನಸ್ಸಿದ್ದರೆ, ಪ್ಲಾಸ್ಟಿಕ್ ಕುರಿತ ಅರಿವಿದ್ದರೆ, ಪರಿಸರದ ಬಗ್ಗೆ ಕಾಳಜಿಯಿದ್ದರೆ ಸಂತೋಷರ ದಾರಿ ತುಳಿಯಬಹುದು.
.
Home › Unlabelled › 'ಚೀಲ' ಎಲ್ಲಿ?
3 comments:
ಸರ್,
ನಮಸ್ತೆ. ನನ್ನ ಹೆಸರು ವಿನಾಯಕ ಕೋಡ್ಸರ. ನಿಮ್ಮ ಬ್ಲಾಗ್ ಚೆನ್ನಾಗಿದೆ. ನೀವು ಯಕ್ಷಗಾನ ಕಲಾವಿದರು ಅಂತಾ ಭಾವಿಸಿದ್ದೇನೆ. ನನಗೆ ಯಕ್ಷಗಾನದ ತಾಳಗಳ ಇತಿಹಾಸ ತಿಳಿಸುವ ಯಾವುದಾದರೂ ಪುಸ್ತಕವಿದ್ದರೆ ಬೇಕಾಗಿತ್ತು. ತಮ್ಮಲ್ಲಿ ಅಂತಹ ಯಾವುದಾದರು ಕೃತಿ ಇದೆಯಾ? ಇದ್ದರೆ ದಯವಿಟ್ಟು ತಿಳಿಸಿ.
ಮಾನ್ಯರೇ,
ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳಿವೆ. ನಿಮ್ಮ ಆಸಕ್ತಿ ಯಾವುದು? ಲಭ್ಯವಿರುವ ಪುಸ್ತಕಗಳೆಲ್ಲಾ ಬಿಡಿಬಿಡಿ ವಿಚಾರಗಳು. ಒಬ್ಬೊಬ್ಬ ಅನುಭವಿ ಕಲಾವಿದರ ಅನುಭವದಂತೆ ಕೆಲವು ಕಡೆ ಇತಿಹಾಸ ದಾಖಲಾದಂತೆ ಕಂಡು ಬರುತ್ತದೆ. ಡಾ.ಪ್ರಭಾಕರ ಜೋಶಿ, ಡಾ.ರಾಘವ ನಂಬಿಯಾರ್, ಡಾ.ಕಾರಂತರು..ಹೀಗೆ ಅನೇಕರು ಬೇರೆ ಬೇರೆ ಸಂದರ್ಭದಲ್ಲಿ ಇತಿಹಾಸ ದಾಖಲಿಸಿದ್ದಾರೆ. ಪರಿಶೀಲಿಸಿ.
ವಂದನೆಗಳು.
ಕಾರಂತ
ಮಾನ್ಯರೇ,
ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳಿವೆ. ನಿಮ್ಮ ಆಸಕ್ತಿ ಯಾವುದು? ಲಭ್ಯವಿರುವ ಪುಸ್ತಕಗಳೆಲ್ಲಾ ಬಿಡಿಬಿಡಿ ವಿಚಾರಗಳು. ಒಬ್ಬೊಬ್ಬ ಅನುಭವಿ ಕಲಾವಿದರ ಅನುಭವದಂತೆ ಕೆಲವು ಕಡೆ ಇತಿಹಾಸ ದಾಖಲಾದಂತೆ ಕಂಡು ಬರುತ್ತದೆ. ಡಾ.ಪ್ರಭಾಕರ ಜೋಶಿ, ಡಾ.ರಾಘವ ನಂಬಿಯಾರ್, ಡಾ.ಕಾರಂತರು..ಹೀಗೆ ಅನೇಕರು ಬೇರೆ ಬೇರೆ ಸಂದರ್ಭದಲ್ಲಿ ಇತಿಹಾಸ ದಾಖಲಿಸಿದ್ದಾರೆ. ಪರಿಶೀಲಿಸಿ.
ವಂದನೆಗಳು.
ಕಾರಂತ
Post a Comment