ಪೆರಾಜೆಯಲ್ಲಿ ಪೇಪರ್ ವಿತರಿಸುವ ಕೆ.ಸಿ.ಸೀತಾರಾಮ ಅಪ್ಪಟ ಅಕ್ಷರಪ್ರಿಯ. ಆತ ಸೋಮವಾರ ಯಾವಾಗಲೂ ಬ್ಯುಸಿ. ಸರಿಯಾಗಿ ಎಂಟಕ್ಕೆ ಬರುವ ತೊಡಿಕಾನ ಬಸ್. ಅದರೊಳಗಿಂದ ರೊಂಯ್ಯನೆ ತೂರಿ-ಹಾರಿ ಬರುವ ಸುದ್ದಿಯ ಬಂಡ್ಲು. ಸೀತಾರಾಮ ಅದನ್ನು ಬಿಡಿಸುವಷ್ಟು ಪುರುಸೊತ್ತಿಲ್ಲ, ಮುತ್ತಿಕೊಳ್ಳುವ ಸುದ್ದಿ ಪ್ರಿಯರು. 'ನಮ್ಮೂರಿನ ಸುದ್ದಿ ಬಂದಿದೆ ಮಾರಾಯ..', 'ನೋಡಿಲ್ಲಿ, ನನ್ನ ಕವನ ಹಾಕಿದ್ದಾರೆ', 'ವಾಯ್..ನಿನ್ನ ಹೆಸರು ಬಂದುಬಿಟ್ಟಿದೆ'.. ಹೀಗೆ ಒಬ್ಬೊಬ್ಬರದು ವಿಭಿನ್ನ ಪ್ರತಿಕ್ರಿಯೆ. ಎಲ್ಲರನ್ನೂ ಸಂಭಾಳಿಸಿ, ಹಣ ತೆಕ್ಕೊಂಡು ಕಳುಹಿಸುವ ಹೊತ್ತಿಗೆ ಸೀತಾರಾಮರ ಮುಖದಲ್ಲಿ ಬೆವರು. ಇದು ಸುಮಾರು ಒಂದೂವರೆ ದಶಕದ ಹಿಂದಿನ ಸ್ಥಿತಿ.
ಮುಖ್ಯವಾಹಿನಿ ಪತ್ರಿಕೆಗಳು ಬರುವಾಗ ಲೇಟ್ ಆದರೆ ಸಹಿಸಿಕೊಳ್ಳುತ್ತಾರೆ. ಸುದ್ದಿ ಎಲ್ಲಾದರೂ ತಡವಾದರೆ ಗೊಣಗುವ ಅದೆಷ್ಟು ಮಂದಿ! ಅಕ್ಷರ ಅಕ್ಷರವನ್ನು ಒದುವ ಪರಿ. 'ಹಾಗಾಗಬೇಕಿತ್ತು, ಹೀಗಾಗಬಾರದಿತ್ತು' ಎಂಬ ವಿಮರ್ಶೆ. ಪತ್ರಿಕೆಯಲ್ಲಿ ಹೆಸರು ಪ್ರಕಟವಾದಂದು ನಾಚಿ ಮುದ್ದೆಯಾಗುವ, 'ಸುದ್ದಿ ಓದಿದ್ರಾ' ಅಂತ ಮಾತಿಗೆಳೆಯುವ, 'ನಾನು ಬೇಡ ಅಂತ ಹೇಳಿದೆ, ಹಾಕ್ಬಿಟ್ರು' ಅಂತ ಒಣಜಂಭ ಪ್ರದರ್ಶಿಸುವ ಹಲವು ಮುಖಗಳು ಮಿಂಚಿ ಮರೆಯಾಗುತ್ತವೆ.
ಇದು ಸುದ್ದಿ ಪತ್ರಿಕೆಗೆ ಸಿಕ್ಕ ಜನ-ದನಿ. ಸುಳ್ಯದಲ್ಲಿ 'ಸುದ್ದಿ ಬಿಡುಗಡೆ' ಪತ್ರಿಕೆಯು ಸಾಪ್ತಾಹಿಕವಾಗಿ ಪ್ರಕಟವಾಗುತ್ತದೆ. ಸುದ್ದಿ, ಕವನ, ಲೇಖನ ಕಳುಹಿಸಿಕೊಟ್ಟಲ್ಲಿಗೆ ಆರಂಭವಾಗುವ ತುಡಿತಕ್ಕೆ ಮುಂದಿನ ವಾರದ ಪತ್ರಿಕೆ ಕೈಗೆ ಬಂದಾಗ ನಿಲುಗಡೆ! ಕಳುಹಿಸಿದ ಸುದ್ದಿ ಪ್ರಕಟವಾಗದೇ ಇದ್ದಾಗ ತಳಮಳ. ಏನನ್ನೋ ಕಳಕೊಂಡ ಅನುಭವ. ಪತ್ರಿಕಾ ಕಚೇರಿಗೆ ದೂರವಾಣಿ, ಸಂಪಾದಕರಲ್ಲಿ ಅಂಜುತ್ತಲೇ ಮಾತನಾಡಿದ ಬಳಿಕವೇ ವಿಶ್ರಾಂತಿ.
'ನಮ್ಮೂರಲ್ಲಿ ಜರುಗಿದ ಕಾರ್ಯಕ್ರಮಗಳ ವರದಿ ಮೊದಲು ಸುದ್ದಿಯಲ್ಲಿ ಬರ್ಬೇಕು' ಎಂಬ ಹಪಹಪಿಕೆಯು ಎಲ್ಲಾ ಗ್ರಾಮಗಳ ಸುದ್ದಿಪ್ರಿಯರಲ್ಲಿತ್ತು. ಪತ್ರಿಕೆಯ ಸಂಪಾದಕರೂ ಅಷ್ಟೇ, 'ಇದು ಸಣ್ಣ ಸುದ್ದಿ, ದೊಡ್ಡ ಸುದ್ದಿ' ಅಂತ ಭೇದ ಮಾಡದೆ ಎಲ್ಲವನ್ನು ಸಮದರ್ಶಿತ್ವದಿಂದ ಕಂಡದ್ದರಿಂದಲೇ ಅವರಿಗಿಂದು ಗ್ರಾಮೀಣ ಪ್ರದೇಶದ ತಳವನ್ನು ಸ್ಪರ್ಶಿಸಲು, 'ಗ್ರಾಮೀಣ ಭಾರತ'ವನ್ನು ಕಾಣಲು ಸಾಧ್ಯವಾಯಿತು.
'ಸುದ್ದಿಗೆ ಬರೆಯೋದು ಅಂದ್ರೆ ಅದೊಂದು ಹೆಮ್ಮೆ' ಅನ್ನುತ್ತಿದ್ದ ದಿನಗಳು ನನ್ನ ಶಾಲಾ ಸಮಯದಲ್ಲಿದ್ದುವು. ಪೆರಾಜೆಯಲ್ಲಿ ಜರುಗಿದ ಚಿಕ್ಕಪುಟ್ಟ ಕಾರ್ಯಕ್ರಮಗಳ ವರದಿ ಕಳುಹಿಸಿ, ಅದು ಪ್ರಕಟವಾದಾಗ ಐದಾರು ಪ್ರತಿಗಳನ್ನು ಖರೀದಿಸಿ, ಪ್ರಕಟಿತ ವರದಿಗೆ ಮಾರ್ಕ್ ಮಾಡಿ ಸ್ನೇಹಿತರಲ್ಲಿ 'ಹೇಳಿಕೊಳ್ಳುವುದು, ಹಂಚುವುದು' ಎಂದರೆ ಖುಷಿ. ಅದನ್ನು ಜೋಪಾನವಾಗಿಟ್ಟುಕೊಂಡು, ಅದರೊಳಗೆ ಆಗಾಗ್ಗೆ 'ಇಣುಕುವುದು' ಮತ್ತೂ ಸಂತೋಷ.
ಇಂದು ನಮ್ಮೆಲ್ಲಾ ವ್ಯವಸ್ಥೆಗಳನ್ನು ಒಮ್ಮೆ ನಿಂತು ನೋಡಿ. ಎಲ್ಲವೂ ನಗರ ಕೇಂದ್ರಿತವಾದ ವ್ಯವಸ್ಥೆ. ಅಭಿವೃದ್ಧಿಯ ಧಾವಂತದಲ್ಲಿ ಗ್ರಾಮೀಣ ಪ್ರದೇಶವನ್ನು ನಾಡಿನ ದೊರೆಗಳು ಪೂರ್ತಿ ಮರೆತಿದ್ದಾರೆ. ನಗರದ ಹೃದಯವಿರುವುದು ಹಳ್ಳಿಗಳಲ್ಲಿ ತಾನೆ. ಹಳ್ಳಿಗಳನ್ನೇ ಮರೆತರೆ?
ಸುದ್ದಿಯ ಸಂಪಾದಕರಿಗೆ ಆ ಎಚ್ಚರ ಇದೆ. ಅವರಿಗೆ ಹಳ್ಳಿಯೇ ಲಕ್ಷ್ಯ. ಊರಿನ ಸತ್ಯನಾರಾಯಣ ಪೂಜೆ, ಜಾತ್ರೆ, ಭೂತದ ಕೋಲ, ಕೋಳಿಅಂಕ, ಸೊಸೈಟಿಯ ಮಹಾಸಭೆ, ಶಾಲಾ ವಾರ್ಶಿಕೋತ್ಸವ.. ಇವೆಲ್ಲಾ ಎಲ್ಲಿ ಸುದ್ದಿಯಾಗುತ್ತಿತ್ತು? 'ಅದೂ ಸುದ್ದಿಯಾಗಲು ಯೋಗ್ಯ' ಎಂಬುದನ್ನು ಪತ್ರಿಕೆ ತೋರಿಸಿಕೊಟ್ಟಿದೆ. ಹಳ್ಳಿಯ ಮೂಲಭೂತ ಸಮಸ್ಯೆಗಳನ್ನು ಪ್ರಕಟಿಸಿ ಇಲಾಖಾ ವರಿಷ್ಠರ ಗಮನ ಸೆಳೆದಿದೆ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದೆ.
ಬೆಳಕು ಕಾಣದೆ ಮುದುಡಿದ್ದ ಎಷ್ಟೋ ವಿಚಾರಗಳಿಗೆ ಬೆಳಕು ಒಡ್ಡಿದೆ. ಊರಿನ ಭೂತಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ .ಗಳ ಪರಿಚಯವನ್ನು ಪ್ರಕಟಿಸಿದೆ. ಪ್ರತಿಭಾವಂತರನ್ನು ಬೆನ್ನುತಟ್ಟಿದೆ. ಸಮಸಾಮಯಿಕ ವಿಚಾರಗಳಿಗೆ ಸಂವಾದವನ್ನು ನಡೆಸಿದೆ.
ಕೆಲವೊಂದು ಸಲ ನಮ್ಮ ರಾಜಕಾರಣದ ಹೊಲಸು ಹಳ್ಳಿಯನ್ನು ಅಶುಚಿ ಮಾಡುವುದಿದೆ. ಅಂತಹ ಸಂದರ್ಭಗಳಲ್ಲಿ ಪತ್ರಿಕೆಗೆ ಸವಾಲೂ ಆದದ್ದಿದೆ. ಇದನ್ನು ಜಾಣ್ಮೆಯಿಂದ ನಿಭಾಯಿಸಿದ ಕೀರ್ತಿ ಸಂಪಾದಕರದು.
ಎಷ್ಟೋ ಪ್ರತಿಭೆಗಳಿಗೆ ಸುದ್ದಿಯೊಂದು ಮಾಧ್ಯಮ. ಕವನ, ಕಥೆಗಳನ್ನು ಪ್ರಕಟಿಸಿ ಬೆನ್ನುತಟ್ಟಿದೆ. ನನಗೆ ಮೊದಲು ಲೇಖನಿ ಕೊಟ್ಟುದು ಸುದ್ದಿ! 'ಇಂತಹ ಲೇಖನ ಬರೆಯಿರಿ. ನಾಡಿದ್ದೇ ಬೇಕು' ಒತ್ತಾಯಪೂರ್ವಕವಾದ ಕರೆ ಬಂದಾಗ ಉಬ್ಬಿ ಉದ್ದಾದ ದಿನಗಳು ಈಗ ನೆನಪು! ಬರೆಯುವ ತುಡಿತವಿದ್ದ ದಿನಗಳಲ್ಲಿ ಸುದ್ದಿಯು ಲೇಖನವನ್ನೋ, ವರದಿಯನ್ನೋ ಪ್ರಕಟಿಸದಿರುತ್ತಿದ್ದರೆ, ಕಸದ ಬುಟ್ಟಿಗೆ ಸೇರಿಸುತ್ತಿದ್ದರೆ ಬಹುಶಃ ಅಕ್ಷರ ಕುರುಡು ಬರುತ್ತಿತ್ತೇನೋ!
ಪತ್ರಿಕೆಯ ಸಂಪಾದಕರು - ಡಾ. ಯು.ಪಿ.ಶಿವಾನಂದ. ಮಾಹಿತಿಗಳ ಹಸಿವಿದ್ದ ಅಪರೂಪದ ಡೈನಮಿಕ್ ಸಂಪಾದಕರು. ಮಾಹಿತಿ ಕಲೆ ಹಾಕುವ, ಗ್ರಾಮೀಣ ಭಾರತವನ್ನು ತಲುಪುವ, ಅವರಿಗೆ ಪ್ರಯೋಜನಕಾರಿಯದಂತಹ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಅವರ 'ಮೂಡ್' (MOOD) ಎಂದೂ ಕೆಡುವುದಿಲ್ಲ.
ಸುದ್ದಿ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ - ಗ್ರಾಮೀಣ ಭಾರತದ ಕುರಿತಾದ ಡಾ.ಶಿವಾನಂದರ ದೂರದೃಷ್ಟಿ ಮತ್ತು ಉತ್ತಮ ಸಾರ್ವಜನಿಕ ಸಂಪರ್ಕವುಳ್ಳ ಅವರ ಸಹಕಾರಿಗಳು, ಸಿಬ್ಬಂದಿಗಳು. ಸುದ್ದಿ ಪತ್ರಿಕೆಯಿಂದ ಯಾವುದೇ ವಿಚಾರಕ್ಕೆ ದೂರವಾಣಿ ಬಂದರೆ ತಕ್ಷಣ 'ಓಕೆ' ಅನ್ನುವ ಮನಸ್ಸು ಬರುವುದು
ಈ ಕಾರಣದಿಂದ.
ಸುದ್ದಿಯು ಸುಳ್ಯ, ಬೆಳ್ತಂಗಡಿಯಲ್ಲಿ ಸಾಪ್ತಾಹಿಕವಾಗಿ ಪ್ರಕಟವಾದರೆ, ಪುತ್ತೂರಿನಲ್ಲದು ದೈನಿಕ. ಇಪ್ಪತ್ತೈದು ವರುಷಗಳ ಹಿಂದೆ ಹಚ್ಚಿದ ಹಣತೆಗೀಗ ಬೆಳ್ಳಿಯ ಮೆರುಗು. ಸುಳ್ಯದಲ್ಲಿ ನವೆಂಬರ್ 27, 28ರಂದು ಬೆಳ್ಳಿ ಸಂಭ್ರಮ. 'ಇದು ಸುದ್ದಿಯ ಸಂಭ್ರಮವಲ್ಲ. ಓದುಗರ ಸಂಭ್ರಮ. ಹಳ್ಳಿ ಸಂಭ್ರಮ' ಎಂದು ವಿನೀತವಾಗಿ ಹೇಳುತ್ತಾರೆ ಸಂಪಾದಕ ಡಾ.ಯು.ಪಿ.ಶಿವಾನಂದ.