Wednesday, November 24, 2010

ಜಾಣ ಅಕ್ಷರ ಕುರುಡು

ಶುಭಕಾರ್ಯವೊಂದರಲ್ಲಿ ಭಾಗಿಯಾಗಲು ಕುಟುಂಬದೊಂದಿಗೆ ಕೇರಳದ ತ್ರಿಶೂರಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದೆ. ಏಳೆಂಟು ಗಂಟೆ ಪ್ರಯಾಣ. ಸಮಯ ಕೊಲ್ಲಲು (!) ಐದಾರು ದೈನಿಕಗಳಿದ್ದುವು. ರೈಲಿನಲ್ಲಿ ಪತ್ರಿಕೆ ಓದುತ್ತಾ ಇರುವಾಗ ಪಕ್ಕದಲ್ಲಿದ್ದ ಓರ್ವ ಹಿರಿಯರು ಆಗಾಗ್ಗೆ ಇಣುಕುತ್ತಿದ್ದರು. ತಿರುಗಿ ಮುಖವನ್ನು ನೋಡುವಾಗ ಗಂಭೀರರಾಗುತ್ತಿದ್ದರು. ಪತ್ರಿಕೆಯ ಮಧ್ಯದ ಪುಟವನ್ನು 'ತಮ್ಮ ಹಕ್ಕೆಂಬಂತೆ' ಇವರ್ಯಾಕೆ ಕಸಿಯಲಿಲ್ಲ - ಎಂಬ ಚೋದ್ಯ ಕಾಡುತ್ತಿತ್ತು.

ಹಳೆ ಪೇಪರ್ನಲ್ಲಿ ತಿಂಡಿ ಕಟ್ಟಿಕೊಂಡು ಬಂದಿದ್ದರು. ತಿಂಡಿ ತಿಂದಾದ ಬಳಿಕ ಆ ಪೇಪರನ್ನು ಎಸೆಯದೆ ಓದುತ್ತಿದ್ದರು! ಬಸ್ಸಿನಲ್ಲಿ, ರೈಲಲ್ಲಿ ಪತ್ರಿಕೆಗಳಿಗೆ ಸಾಕಷ್ಟು ಮಂದಿ 'ಹಕ್ಕುದಾರರು' ಹಕ್ಕು ಚಲಾಯಿಸಿದ್ದ ಅನುಭವವಿದ್ದುದರಿಂದ ಆ ವೃದ್ಧರ ಓದಿನ ತುಡಿತ ಢಾಳಾಗಿ ಕಂಡಿತು.

ಸರಿ, ತ್ರಿಶೂರು ಸನಿಹವಾಗುತ್ತಿದ್ದಂತೆ, ಗಂಟುಮೂಟೆಗಳನ್ನು ಪೇರಿಸುತ್ತಿದ್ದೆವು. ನಾವು ಇಳಿಯುವ ಸೂಚನೆ ಸಿಕ್ಕಿದ ಆ ವೃದ್ಧರು ಬಳಿಗೆ ಬಂದು, 'ನಿಮಗೆ ಪೇಪರ್ ಓದಿ ಆಯ್ತಲ್ಲಾ. ಅದನ್ನು ಕೊಡ್ತೀರಾ' ಎಂದು ಇಪ್ಪತ್ತು ರೂಪಾಯಿ ನೋಟನ್ನು ಹಿಡಿದಿದ್ದರು. ಅವರ ಬಗ್ಗೆ ತಪ್ಪಾಗಿ ಅರ್ಥ್ಯೆಸಿಕೊಂಡದ್ದಕ್ಕೆ ನಾಚಿಕೆಯಾಯಿತು. ಕೈಯಲ್ಲಿದ್ದ ಐದಾರು ಪತ್ರಿಕೆಗಳನ್ನು ಅವರ ಕೈಗಿತ್ತು, ಹಣವನ್ನು ನಿರಾಕರಿಸಿದೆ. ಅಗವರ ಮುಖ ಅರಳಿತ್ತು. ಅಷ್ಟೂ ಹೊತ್ತು ಓದಿನ ಹಸಿವೆಯನ್ನು ಅದುಮಿಟ್ಟು ಕೊಂಡ ಆವರ ಬಗ್ಗೆ ಗೌರವ ಮೂಡಿತು.

'ಮನೆಗೆ ಎರಡು ಪೇಪರ್ ಬರುತ್ತೆ. ಟ್ರೈನಿಗೆ ಬರುವ ಗಡಿಬಿಡಿಯಲ್ಲಿ ಓದಲಾಗಲಿಲ್ಲ. ಚೀಲಕ್ಕೆ ಹಾಕಲು ಮೊಮ್ಮಗಳಿಗೆ ಹೇಳಿದ್ದೆ. ಮರೆತಿರಬೇಕು. ಏನೋ, ಪೇಪರ್ ಓದದಿದ್ದರೆ ದಿನ ಪೂರ್ಣವಾಗುವುದಿಲ್ಲ' ಎನ್ನುತ್ತಾ ಬಾಯ್ತುಂಬಾ ನಕ್ಕರು. ಸುಮಾರು ಏಳೆಂಟು ಗಂಟೆ ಒಂದೇ ಬೋಗಿಯಲ್ಲಿದ್ದರೂ ಅವರು ನನ್ನ ಕೈಯಲ್ಲಿದ್ದ ಪೇಪರ್ ಕೇಳಿಲ್ಲ, ಕಸಿಯಲಿಲ್ಲ, ಹಕ್ಕು ಚಲಾಯಿಸಲಿಲ್ಲ.

ಈ ಘಟನೆ ಮೆಲುಕು ಹಾಕುತ್ತಾ ಇದ್ದಾಗ, ಪುತ್ತೂರಿನಿಂದ ರಾಜಧಾನಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದಾಗಿನ ಅನುಭವ ಹೇಳಲೇ ಬೇಕು. ಎಂದಿನಂತೆ ಐದಾರು ಪತ್ರಿಕೆ ಖರೀದಿಸಿ, ಓದುತ್ತಾ ಕುಳಿತಿದ್ದೆ. ಒಂದೈದು ನಿಮಿಷ ಆಗಿತ್ತಷ್ಟೇ, ಹತ್ತಿರದಲ್ಲಿ ಕುಳಿತಿದ್ದ ಮಹಾನುಭಾವ ಆಗಾಗ್ಗೆ ಪೇಪರ್ನಲ್ಲಿ ಇಣುಕುತ್ತಾ, ನನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಆತನ ಬಳಿಗೆ ಎಳೆಯುತ್ತಾ ಹಿಂಸೆ ನೀಡುತ್ತಿದ್ದ. ಅಸಹನೆಯನ್ನು ವ್ಯಕ್ತಪಡಿಸಿದ್ದರೂ ಮಗುಮ್ಮಾಗಿ ಹಲ್ಲು ಕಿರಿದಿದ್ದ!

ಕೊನೆಗೊಮ್ಮೆ 'ಸ್ವಲ್ಪ ಕೊಡಿ' ಎನ್ನುವ ಮೊದಲೇ ಮಧ್ಯದ ಪುಟವನ್ನು ಎಳೆಯಬೇಕೇ. ಸ್ವಲ್ಪ ಹೊತ್ತಾದ ಬಳಿಕ ಇನ್ನೊಬ್ಬನಿಗೂ ಈ ಚಾಳಿ ಅಂಟಿತು. ಒಂದು ಪತ್ರಿಕೆ ಕೈಜಾರಿತಲ್ಲಾ, ತೊಂದರೆಯಿಲ್ಲ. ಇನ್ನೊಂದಿದೆ - ಎನ್ನುತ್ತಾ ಕೈಗೆತ್ತಿಕೊಂಡೆ. ಅದಕ್ಕೂ ಅದೇ ಗತಿ. 'ಒಂದು ಪತ್ರಿಕೆ ಕೊಳ್ಳದಷ್ಟು ದಾರಿದ್ರ್ಯ ಯಾಕೆ ಬಂತಪ್ಪಾ' ಎನ್ನುತ್ತಾ ಇನ್ನೊಂದು ಪತ್ರಿಕೆಯ ಓದು ಆರಂಭಿಸುತ್ತಿದ್ದಂತೆ, ಅದಕ್ಕೂ ವಾರೀಸುದಾರರು ಬರಬೇಕೆ. ಅರ್ಧ ಗಂಟೆಯಲ್ಲಿ ಚೀಲದಲ್ಲಿದ್ದ ಎಲ್ಲಾವೂ ಪರರ ಪಾಲು.

'ಪತ್ರಿಕೆಯಲ್ವಾ. ಓದಿ ಹಿಂತಿರುಗಿಸುವುದಿಲ್ವಾ' ಅಂತ ಊಹಿಸಿದರೆ ತಪ್ಪು. ಅವೆಲ್ಲಾ ಮರಳಿ ಕೈಸೇರುವಾಗ, 'ಕಸದ ಬುಟ್ಟಿಯಿಂದ ತೆಗೆದ ಕಾಗದ'ಗಳಂತಿದ್ದುವು. ಅನ್ನದ ಅಗುಳು, ತಿಂಡಿಯ ಶೇಷ ಅಂಟಿಕೊಂಡಿದ್ದುವು. ಮಾನಸಿಕ ವಿಕಾರಗಳು ಪತ್ರಿಕೆಗಳಲ್ಲಿ ಪಡಿಯಚ್ಚು ಮೂಡಿದ್ದುವು. ಪುನಃ ಚೀಲಕ್ಕೆ ಸೇರಿಸುವ ಎಲ್ಲಾ ಅರ್ಹತೆಗಳನ್ನು ಕಳಕೊಂಡಿದ್ದುವು!

ತ್ರಿಶೂರು ಪ್ರಯಾಣದ ಆ ವೃದ್ಧರೂ ಮತ್ತು ರಾಜಧಾನಿ ಪ್ರಯಾಣದ 'ಪತ್ರಿಕಾ ವಾರಸುದಾರ'ರಿಬ್ಬರನ್ನು ಥಳಕು ಹಾಕಿದರೆ, ಆ ವೃದ್ಧರೇ ಮೇಲು. ಯಾಕೆಂದರೆ 'ಪೇಪರ್ ಕೊಡ್ತೀರಾ' ಅಂತ ಕೇಳುವ ಸೌಜನ್ಯ ಮತ್ತು ಪತ್ರಿಕೆಯ ಮೌಲ್ಯ ಕೊಡಲೂ ಸಿದ್ಧರಾದ ಮನಃಸ್ಥಿತಿ. ಯಾವ್ಯಾವುದಕ್ಕೋ ವೆಚ್ಚ ಮಾಡುತ್ತೇವೆ. ಪತ್ರಿಕೆಗಾಗುವಾಗ ನಮ್ಮಲ್ಲಿ 'ಜಿಪುಣತನ' ಧುತ್ತೆನ್ನುತ್ತದೆ.

ತ್ರಿಶೂರಿನಲ್ಲಿ ನಾವು ಉಳಕೊಂಡಿರುವ ಮನೆಯ ಸನಿಹ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಬೆಳಿಗ್ಗೆ ಸುಮಾರು 8-9 ಗಂಟೆಯ ಸಮಯ. ಏಳೆಂಟು ಮಂದಿ ಕಾರ್ಮಿಕರು ಪತ್ರಿಕೆಯನ್ನು ಓದುತ್ತಿದ್ದರು. ಕೆಲವರ ಕಂಕುಳಲ್ಲಿ ಪೇಪರ್ ಭದ್ರವಾಗಿತ್ತು. ಅಷ್ಟೂ ಮಂದಿ ಒಂದೆಡೆ ಕೆಲಸ ಮಾಡುವವರಾದ್ದರಿಂದ, ಎಲ್ಲರಿಗೂ ಒಂದೇ ಪೇಪರ್ ಸಾಕಿತ್ತಲ್ವಾ! ಖರೀದಿಸಿ ಓದುವ ಜಾಯಮಾನ ಅಲ್ಲಿ ಬದುಕಿಗಂಟಿದೆ. ಒಂದು ಪತ್ರಿಕೆಯನ್ನಾದರೂ ಕೊಂಡು ಓದದಿದ್ದರೆ ಬದುಕಿನ ಬಂಡಿ ಓಡುವುದೇ ಇಲ್ಲ!
ಕನ್ನಾಡಿನಲ್ಲಿ ತದ್ವಿರುದ್ಧ. ಪಕ್ಕದ ಮನೆಗೆ ಯಾವಾಗ ದೈನಿಕ, ಸಾಪ್ತಾಹಿಕ, ಮಾಸಿಕಗಳು ಬರುತ್ತದೆ ಅಂತ ಕಾದು ಕುಳಿತುಕೊಳ್ಳುವ 'ಓದುಪ್ರಿಯ'ರು ಸಾಕಷ್ಟು ಮಂದಿ ಸಿಗ್ತಾರೆ. ಓದಿದ ಬಳಿಕ ಸುರಕ್ಷಿತವಾಗಿ ಮರಳಿಸಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದ ನಡವಳಿಕೆ. ಹೋಟೇಲಿಗೆ ಹೋಗಿ ಐವತ್ತು, ನೂರರ ನೋಟು ಕಿಸೆ ಜಾರಿದಾಗ ಮುಖ ಅಗಲವಾಗುತ್ತದೆ. ಮೂರೋ, ನಾಲ್ಕೋ ರೂಪಾಯಿ ತೆತ್ತು ಒಂದು ಪತ್ರಿಕೆ ಖರೀದಿಸುವಾಗ ಮುಖ ಕಿವುಚುತ್ತದೆ.

ಈ ಮಧ್ಯೆ ಪತ್ರಿಕೆಯ ಓದನ್ನು ನಿಯಮಿತವಾಗಿ ಮಾಡಿಕೊಂಡ ಅಜ್ಞಾತ ವರ್ಗದವರಿಂದ ಕನ್ನಾಡಿನ ಪತ್ರಿಕೆ ಉಳಿದುಕೊಂಡಿದೆ. ಕೇರಳದಂತೆ ಇಲ್ಲೂ ಪತ್ರಿಕಾ ಓದು ಬದುಕಿನಂಗವಾದರೆ?

ಒಂದೆಡೆ ಕನ್ನಡದ ಕುರಿತು ಹೋರಾಟ. ಮತ್ತೊಂದೆಡೆ ಅಕ್ಷರ ಕುರುಡು. ಅದೂ ಜಾಣ ಕುರುಡು. ಟೆಲಿವಿಶನ್, ಅಂತರ್ಜಾಲಗಳು ಓದನ್ನು ಹಾಳು ಮಾಡಿದುವು - ಅಂತ ಢಾಳಾದ ಅಭಿಪ್ರಾಯಕ್ಕೆ ಬರುತ್ತೇವೆ. 'ಅವುಗಳು ನಮ್ಮನ್ನು ಹಾಳು ಮಾಡಿಲ್ಲ. ನಮಗೆ ಅಕ್ಷರ ಕಂಡಾಗ ಮಯಮಯವಾಗಿ ಕಾಣುವುದಕ್ಕೆ ಯಾರನ್ನು ದೂರಿ ಪ್ರಯೋಜನ' - ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡರ ಮಾತು ಹೆಚ್ಚು ಸೂಕ್ತವಾಗುತ್ತದೆ.

2 comments:

PARAANJAPE K.N. said...

ಇದೆ ರೀತಿಯ ಅನುಭವ ನನಗೂ ಆಗಿದೆ. ವೃತ್ತ ಪತ್ರಿಕೆಗಳ ಬಗ್ಗೆ , ಅದರಲ್ಲೂ ಅವರ ಭಾಷಾ ಪತ್ರಿಕೆಗಳ ಬಗ್ಗೆ ಕೇರಳದ ಜನರಿಗಿರುವ ಅಭಿಮಾನ, ನಮ್ಮಲ್ಲಿ ಇಲ್ಲ.

ವಾಣಿಶ್ರೀ ಭಟ್ said...

arthapoorna lekhana..

elligomme beti needi

www.vanishrihs.blogspot.com

Post a Comment