Monday, November 1, 2010

ಯಾಕೆ ಆ ದಿವಸಗಳು ನೆನಪಾಗುತ್ತವೆ?

ಯಾಕೋ, ಶಾಲೆಯ ವಿಚಾರ ಬಂದಾಗಲೆಲ್ಲಾ ಪ್ರಾಥಮಿಕ ಶಾಲಾ ದಿನಗಳು, ಅಲ್ಲಿನ ವಾತಾವರಣ, ಅಧ್ಯಾಪಕರ ಆದರ್ಶ-ಒಡನಾಟಗಳು ನೆನಪಾಗುತ್ತವೆ. ಆಗಿನ ಶೈಕ್ಷಣಿಕ ವಾತಾವರಣವನ್ನು ಹಿಂದಿಕ್ಕುವ 'ಪರಿಕರ'ಗಳು ಪ್ರಸ್ತುತ ದಿನಗಳಿಂದ ದೂರವಾದುದೇ ಆ ದಿನಗಳು ಮತ್ತೆ ಮತ್ತೆ ನೆನಪಾಗಲು ಕಾರಣವಿರಬಹುದು.

ದೂರದ ಆಸ್ಟ್ರೇಲಿಯಾದಲ್ಲಿರುವ 'ಬೆಂಚಿಮೇಟ್' ಸುಬ್ಬಣ್ಣ (ಸುಬ್ರಹ್ಮಣ್ಯ ಭಟ್) ಆಗಾಗ್ಗೆ ಮಿಂಚಂಚೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಫೋನಿಸಿವುದೂ ಇದೆ. ಆ ರೀತಿ 'ನಿರಾಕಾರ'ವಾಗಿ ಭೇಟಿಯಾದಾಗಲೆಲ್ಲಾ ಸಂದು ಹೋದ ದಿನಗಳನ್ನು ನೆನಪಿಸುವುದು ಖಯಾಲಿ! ಕಳೆದ ದಿವಸಗಳು 'ಸವಿ' ಎಂಬ ಕಾರಣಕ್ಕಾಗಿ ಅಲ್ಲ, ಅಂತಹ ದಿನಗಳ ವಾತಾವರಣಗಳು ನಮ್ಮ ಸಮೀಪವೇ ಬರುತ್ತಿಲ್ಲವಲ್ಲಾ. ಇದನ್ನು ಫಕ್ಕನೆ 'ಕಾಲ'ದ ಮೇಲೆ ಆರೋಪಿಸಿಬಿಡುತ್ತೇವೆ. 'ಕಾಲ ಬದಲಾಯಿತು, ಆಗಿನ ಕಾಲವಲ್ವಾ' ಹೀಗೆ.. ಸುಬ್ಬಣ್ಣ ಪ್ರಾಥಮಿಕ ಶಾಲೆಯಲ್ಲಿ ನವರಾತ್ರಿ ಸಮಯದಲ್ಲಿ ನಡೆಯುತ್ತಿದ್ದ 'ಶಾರದಾ ಪೂಜೆ'ಯನ್ನು ಜ್ಞಾಪಿಸಿದ.

ಪೂಜೆಯ ಎರಡು ದಿವಸಕ್ಕಿಂತ ಮುಂಚೆ ಮಕ್ಕಳಿಗೆಲ್ಲಾ ಸಂಭ್ರಮ. ಎಲ್ಲಾ ಹೆತ್ತವರಿಗೂ ಪ್ರತ್ಯೇಕ ಕರೆಯೋಲೆ. ಅದು ಮುದ್ರಿತ ಕರೆಯೋಲೆಯಲ್ಲ. ಅಧ್ಯಾಪಕರು ಕರೆಯೋಲೆಯ ಮಾದರಿಯನ್ನು ಬೋರ್ಡಿನಲ್ಲಿ ಬರೆಯುತ್ತಾರೆ. ಅದನ್ನು ವಿದ್ಯಾರ್ಥಿಗಳು ನಕಲು ಮಾಡಿದರಾಯಿತು. ಅಧ್ಯಾಪಕರ ಸಹಿಯೊಂದಿಗೆ ಎಲ್ಲಾ ಹೆತ್ತವರಿಗೆ ಮಕ್ಕಳ ಮೂಲಕವೇ ರವಾನೆ.

ನಾಲ್ಕು ತರಗತಿಗಳ ಚಿಕ್ಕ ಸೂರಿನ ಶಾಲೆಯದು. ಅದರೊಳಗಿದ್ದ ದೊಡ್ಡ ವಸ್ತುವೆಂದರೆ ಪುಸ್ತಕವನ್ನು ಒಡಲೊಳಗೆ ತುಂಬಿಕೊಂಡ ಚಿಕ್ಕ ಕಪಾಟು. ಬೆಂಚು, ಕುರ್ಚಿ, ಮೇಜು, ಕರಿ ಹಲಗೆ.. ಒಳಗಿದ್ದ ಎಲ್ಲಾ ವಸ್ತುವನ್ನು ಹೊರಗಿಟ್ಟು, ಸ್ವಚ್ಛವಾಗಿ ನೀರಿನಿಂದ ತೊಳೆದು, ಒಣಬಟ್ಟೆಯಲ್ಲಿ ಒರೆಸುವಲ್ಲಿಗೆ ಒಂದು ದಿನ ಮುಗಿದಿರುತ್ತದೆ.

ಮರುದಿನ ಮೊದಲೇ ಕೊಡುಗೆಯ ಸಹಕಾರವನ್ನು ನೀಡಿದ ಮಹನೀಯರ ಮನೆಗಳಿಂದ ಬಾಳೆ ಕಂದು, ಅಲಂಕಾರಿಕ ವಸ್ತುಗಳು, ಪಂಚಕಜ್ಜಾಯ ತಯಾರಿಸಲು ದೊಡ್ಡ ಪಾತ್ರೆ, ಪಾನೀಯಕ್ಕಾಗಿ ಇನ್ನೊಂದು ಪಾತ್ರೆ, ಬಾಳೆ ಎಲೆ.. ಹೀಗೆ ಒಂದೊಂದು ವಸ್ತುಗಳನ್ನು ತರಲು ಐದಾರು ವಿದ್ಯಾರ್ಥಿಗಳ ದಂಡು. ಹಿಂದಿನ ದಿವಸವೇ ಮುಖ್ಯಗುರುಗಳ ಹಿರಿತನದಲ್ಲಿ ಮಂಟಪ ತಯಾರಿ. ಮರುದಿವಸಕ್ಕೆ ಬಾಡದ, ಒಣಗದ ಹೂಗಳನ್ನು ಕಾಡಿನಿಂದ, ಸುತ್ತಲಿನ ಮನೆಗಳಿಂದ ಆಯಲು ಒಂದು ಗುಂಪು. ತಳಿರು ತೋರಣಕ್ಕಾಗಿ ಮಾವಿನ ಎಲೆಗಳನ್ನು ಅರಸುವುದು ಇನ್ನೊಂದು ಗುಂಪು. ಅದನ್ನು ಹಗ್ಗಕ್ಕೆ ನೇಯ್ದು ತೋರಣ ತಯಾರಿಸುವುದು ಇನ್ನೊಂದಿಷ್ಟು ಮಂದಿ. ಹೀಗೆ ಎಲ್ಲರ ಶ್ರಮಗಳೂ ಸೇರಿ ಶಾರದಾ ಪೂಜೆಗಾಗಿ ಶಾಲೆ ಸಿಂಗಾರಗೊಳ್ಳುತ್ತಿತ್ತು.

'ನಾಳೆ ಎಲ್ಲರೂ ಸ್ನಾನ ಮುಗಿಸಿ ಶುಭ್ರ ವಸ್ತ್ರ ಧರಿಸಿ ಬನ್ನಿ' ಹೊರಡುವಾಗ ಮುಖ್ಯಗುರುಗಳ ಆಜ್ಞೆ. ಆರತಿ ತಟ್ಟೆಗೆ ಹಾಕಲು ಹಿರಿಯರನ್ನು ಕಾಡಿ ಬೇಡಿ ಹತ್ತು ಪೈಸೆಯೋ, ನಾಲ್ಕಾಣೆಯನ್ನೋ ಪಡೆದು ಕಿಸೆಯೊಳಗೆ ಹಾಕಿ, ಶಾಲೆ ಮೆಟ್ಟಿಲು ಏರುತ್ತಿರುವಾಗ ಏನೋ ಬಿಗುಮಾನ! ಮನೆಯಲ್ಲಿರುವ ಹೂವು, ತುಳಸಿ, ತೆಂಗಿನಕಾಯಿ, ಬಾಳೆಹಣ್ಣು.. ಮೊದಲಾವುಗಳನ್ನು ಪಾಲಕರು ಮಕ್ಕಳ ಕೈಯಲ್ಲಿ ಕಳುಹಿಸುತ್ತಿದ್ದರು. ನಿಗದಿತ ಸಮಯಕ್ಕೆ ಪೂಜೆ ಆರಂಭ. ಸ್ಥಳೀಯ ದೇವಳದ ಅರ್ಚಕರು ಪೂಜೆ ನಿರ್ವಹಿಸುತ್ತಿದ್ದರು.

ಸೊಂಟತ್ರಾಣವಿದ್ದ ವಿದ್ಯಾರ್ಥಿಗಳಿಗೆ ತೆಂಗಿನಕಾಯಿಯನ್ನು ಒಡೆದು, ತುರಿಯುವ ಕೆಲಸ. ಇನ್ನು ಕೆಲಸವರಿಗೆ ಕಬ್ಬು, ಕೊಬ್ಬರಿಯನ್ನು ಚಿಕ್ಕಚಿಕ್ಕ ಚೂರುಗಳನ್ನಾಗಿಸುವ ಕಾಯಕ. ತೀರಾ 'ಜಡಧಾರಿ'ಗಳಿಗೆ ತುಳಸಿ, ಹೂಗಳನ್ನು ವಿಂಗಡಿಸುವ ಕೆಲಸ. ಪಂಚಕಜ್ಜಾಯ ಪ್ರಸಾದ ತಯಾರಿಸುವಾಗ ಊರಿನ ಹಿರಿಯರ ಕಣ್ಗಾವಲು ಇತ್ತು! ಹಿರಿಯರು, ಹೆತ್ತವರು, ವಿದ್ಯಾರ್ಥಿಗಳಿಂದ ಭಜನೆ. ಮಧ್ಯಾಹ್ನ ಹೊತ್ತಿಗೆ ಮಂಗಳಾರತಿ. ಗೋವಿಂದ ನಾಮಸ್ಮರಣೆ. ಕಿಸೆಯಲ್ಲಿ ಬಚ್ಚಿಟ್ಟಿದ್ದ ನಾಲ್ಕಾಣೆ ಠಣ್ಣೆಂದು ಆರತಿ ತಟ್ಟೆಗೆ ಬಿದ್ದಾಗ ಆಗುವ ಖುಷಿ. (ಮತ್ತೆ ಸ್ನೇಹಿತರೊಂದಿಗೆ ಹೇಳಿಕೊಳ್ಳಬೇಕಲ್ಲಾ!)

ಬಳಿಕ ಪ್ರಸಾದ, ಪಾನೀಯ ವಿತರಣೆ. ಕೆಲವೊಮ್ಮೆ ಊರಿನ ಗಣ್ಯರು ಲಡ್ಡು ಮುಂತಾದ ಸಿಹಿತಿಂಡಿಯನ್ನು ತರುವುದಿದೆ. ಈ ಸಂದರ್ಭದಲ್ಲಿ ಮುಖ್ಯಗುರುಗಳಿಂದ ಶಾರದಾ ಪೂಜೆ, ಶಿಕ್ಷಣ, ನವರಾತ್ರಿಗಳ ಕುರಿತು ಚಿಕ್ಕ ಉಪನ್ಯಾಸ. ಅಪರಾಹ್ನ ಮನೆಗಳಿಂದ ತಂದ ಎಲ್ಲಾ ವಸ್ತುಗಳನ್ನು ಮರಳಿಸುವ ಕೆಲಸ. ಸಂಜೆಯ ಹೊತ್ತಿಗೆ ಬೆಂಚು, ಕುರ್ಚಿಗಳು ಮೊದಲಿನ ಜಾಗಕ್ಕೆ ಸೇರುತ್ತಿದ್ದವು. ಶಾರದಾ ಪೂಜೆಯ ಮರುದಿವಸದಿಂದ ಶಾಲೆಗೆ ಒಂದು ತಿಂಗಳು ಮಧ್ಯಾವಧಿ ರಜೆ. ಪೂಜೆಗಾಗಿ ಆದ ವೆಚ್ಚವನ್ನು ಊರವರೇ ಭರಿಸುತ್ತಿದ್ದರು. ಖರ್ಚುಗಳನ್ನು ಸರಿದೂಗಿಸುವುದಕ್ಕಾಗಿ ಮಕ್ಕಳಿಂದ ಐವತ್ತು ಪೈಸೆ ತರುವಂತೆ ಮುಖ್ಯ ಗುರುಗಳಿಂದ ಬುಲಾವ್.

ಎಲ್ಲಿಯೂ ಗೊಣಗಾಟವಿಲ್ಲ. ಮಡಿ-ಮೈಲಿಗೆಯಿಲ್ಲ. ಜಾತಿಯ ಸೋಂಕಿಲ್ಲ. ಮತೀಯ ಸ್ಪರ್ಶವಿಲ್ಲ. ನನಗೆ ಈಗಲೂ ನೆನಪಿದೆ - ಸ್ವಂತ ಅಂಗಡಿಯನ್ನು ಹೊಂದಿದ್ದ ಇಬ್ರಾಹಿಂ ಎಂಬವರು ಶಾರದಾ ಪೂಜೆಗಾಗಿ ತನ್ನ ಪಾಲಿನ ದೇಣಿಗೆಯಾದ ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ನೀಡುತ್ತಿದ್ದರು. ಸುಮಾರು ಮೂವತೈದು ವರುಷಗಳ ಹಿಂದಿನ ದಿನಗಳ ಸ್ಮರಣೆಯಿದು.

ಇದನ್ನೇ ಈಗಿನ 'ಬದಲಾದ', 'ಅಭಿವೃದ್ಧಿ' ಎಂದು ಹೇಳಲಾಗುವ ದಿನಮಾನಕ್ಕೆ ಹೋಲಿಸೋಣ. ಶಾರದಾ ಪೂಜೆ ಎಂದಾಕ್ಷಣ ಅಲ್ಲೊಂದು 'ಮತೀಯ' ಸೊಲ್ಲು, ಮಕ್ಕಳಿಂದಲೇ ಕೆಲಸ ಅಂದಾಗ ಅದಕ್ಕೆ 'ಬಾಲ ಶೋಷಣೆ' ಯೆಂಬ ಹಣೆಪಟ್ಟಿ ಬಂದುಬಿಡುತ್ತದೆ. ನಾನೋದುತ್ತಿದ್ದ ಶಾಲೆಯಲ್ಲಿ ಎಲ್ಲಾ ಜಾತಿಯ, ಮತದ ವಿದ್ಯಾರ್ಥಿಗಳೂ ಇದ್ದರು. ಯಾವ ದಿವಸವೂ 'ನೀನು ಇಂತಹ ಜಾತಿ' ಎಂದು ಹೇಳಿಕೊಂಡದ್ದಿಲ್ಲ. ಹೇಳಿಸಿಕೊಂಡದ್ದಿಲ್ಲ.

ಈಗ ಇಂತಹ ಪೂಜೆ ಸರಕಾರಿ ಶಾಲೆಯಲ್ಲಿ ಮಾಡಿದರೆ 'ಜಾತಿಪಟ್ಟ'. ಅದಕ್ಕಾಗಿ ಧರಣಿ, ಪ್ರತಿಭಟನೆ. ಮಕ್ಕಳಲ್ಲಿ 'ಕೂಡಿ ಬಾಳುವ' ಸಂದೇಶವನ್ನು ಹೊತ್ತ ಇಂತಹ ಧಾರ್ಮಿಕ ಕಾರ್ಯಕ್ರಮಗಳು 'ವಿದ್ಯಾವಂತರ ನಾಡಿನಲ್ಲಿ' ಯಾಕೆ ಮಸುಕಾಗುತ್ತಿವೆ. ಬಹುಶಃ ಇದು ಅಭಿವೃದ್ಧಿಯ ಸಂಕೇತ!

ಅಲ್ಲ, ಬೌದ್ಧಿಕ ದಿವಾಳಿ.

1 comments:

Pandit Sri Subrahmanya Bhat said...

ನಾರಾಯಣ ಬಾರಿ ಒಳ್ಳೆಯ ಬರಹ. ನಾನು ತುಂಬಾ ತಡವಾಗಿ ಓದಿದೆ ಇದು ಶಾರದ ಪೂಜೆಗಿಂತಲೂ ಮುಖ್ಯವಾಗಿ ನಾಮ್ಮೀಗಿನ ರಾಜಕೀಯ ಜಾತಿ ವ್ಯವಸ್ತೆಯ(ಅವಸ್ತೆ) ಬಗ್ಗೆ ಚೆನ್ನಾಗಿ ಮೂಡಿ ಬಂದಿದೆ .

Post a Comment