Saturday, November 6, 2010

ರಾಚಿ ಬರುವ 'ಕಂಗ್ರಾಟ್ಸ್'ಗಳು!

ಸುಳ್ಯ ಸನಿಹದ ಕಲ್ಲುಗುಂಡಿಯಲ್ಲಿ ನಿನ್ನೆ (ನ.6) ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ನೇತೃತ್ವದಲ್ಲಿ 'ವಿಂಶತಿ ಯಕ್ಷೊತ್ಸವ' ಜರುಗಿತು. ಯಕ್ಷಗಾನ ಕಲಾವಿದರಿಗೆ, ವಿದ್ವಾಂಸರಿಗೆ, ವೈದಿಕರಿಗೆ ಪ್ರಶಸ್ತಿ ಪ್ರದಾನ. ಸಂಮಾನ, ಗೌರವಾರ್ಪಣೆ. ವೇದಿಕೆಯಲ್ಲಿ ಪೂಜನೀಯ ಯತಿಗಳ ದಿವ್ಯ ಸಾನ್ನಿಧ್ಯ. ಗಣ್ಯರ ಉಪಸ್ಥಿತಿ. ಇದಕ್ಕೆ ಸಾಕ್ಷಿಯಾದ 'ಕಿಕ್ಕಿರಿದ' ಸಭಾಸದರು.ಬಹಳ ಅರ್ಥಪೂರ್ಣವಾಗಿ, ಅಷ್ಟೇ ಗೌರವಯುತವಾಗಿ ನಡೆದ ಸಮಾರಂಭ.

ಪ್ರಶಸ್ತಿ ಪುರಸ್ಕೃತರಿಗೆ ಪ್ರತ್ಯಪ್ರತ್ಯೇಕವಾದ ಆದರಾತಿಥ್ಯ. ಗೌರವ ಸಮರ್ಪಣೆ. ಶಾಲು, ಹಾರದಿಂದ ತೊಡಗಿ, 'ತುಂಬು ಧನ'ದೊಂದಿಗೆ ಪ್ರಶಸ್ತಿ. ಕಲಾವಿದರಲ್ಲಿ ಸಾರ್ಥಕ ಭಾವ. ವೈದಿಕರಲ್ಲಿ ಕೃತಾರ್ಥ ಭಾವ. ವಿದ್ವಾಂಸರಿಗೆ ಧನ್ಯತಾಭಾವ. ಸಾವಿರಗಟ್ಟಲೆ ಅಭಿಮಾನಿಗಳ ಮುಂದೆ ಪ್ರಶಸ್ತಿ ಸ್ವೀಕರಿಸಿದಾಗಿನ ಕ್ಷಣವನ್ನು ಡಾ.ಎಂ.ಪ್ರಭಾಕರ ಜೋಷಿಯವರು ಕಟ್ಟಿಕೊಟ್ಟದ್ದು ಹೀಗೆ - ಇದೊಂದು ಯಕ್ಷಗಾನಕ್ಕೆ ಹಬ್ಬ. ಈ ಕ್ಷಣವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಕ್ಕೆ ನಿಲುಕುವಂತಹುದು. ನಿಜಾರ್ಥದ ಪುರಸ್ಕಾರಗಳಿವು'.ಯಕ್ಷಗಾನ ಕಂಡ 'ಮಹೋನ್ನತ' ಸಮಾರಂಭ.

ಇಲ್ಲಿ ಕಲಾವಿದರ ಬಗ್ಗೆ ಆದರವಿದೆ, ಪ್ರೀತಿಯಿದೆ. ಕಲೆಯ ಬಗ್ಗೆ ಆರಾಧನೆಯಿದೆ. ಸಂಘಟಕರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಲಾಪಗಳು ನಡೆಯುತ್ತಲೇ ಸಾಗುತ್ತವೆ. ಈ ಯಕ್ಷಗಾನೋತ್ಸವದಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸುತ್ತಾರೆ. ಸಂಘಟಕರ ಸದ್ದುದ್ದೇಶಕ್ಕೆ 'ಮಾನ' ತಂದುಕೊಟ್ಟವರು ಕಲಾಭಿಮಾನಿಗಳು. ಬೆಳಿಗ್ಗೆ ಹತ್ತಕ್ಕೆ ಏನಿಲ್ಲವೆಂದರೂ ಐದು ಸಾವಿರ ಮೀರಿದ ಪ್ರೇಕ್ಷಕರು ವಿಂಶತಿ ಯಕ್ಷೊತ್ಸವಕ್ಕೆ ಸಾಕ್ಷಿಯಾದರು.

ವೇದಿಕೆಯ ನೇಪತ್ಯದಲ್ಲಿ ಯಕ್ಷಗಾನ ವೇಷಗಳ ಭಾವಚಿತ್ರಗಳ ಪ್ರದರ್ಶನ, ಭಾಗವಹಿಸಿದ ಎಲ್ಲರಿಗೂ ಅನ್ನ ದಾಸೋಹ, ಆಸನ ವ್ಯವಸ್ಥೆ.. ಹೀಗೆ ಒಂದೊಂದು ವಿಭಾಗದಲ್ಲಿ ಅಚ್ಚುಕಟ್ಟು. ಇದೊಂದು ಕಲೋತ್ಸವ. ಸಂಘಟಕರ ಸಾಹಸಕ್ಕೆ ಅಭಿನಂದನೆ. ಮುಂದೆಯೂ ಯಕ್ಷಗಾನಕ್ಕೆ ಇಂತಹ ಮಹೋತ್ಸವ ಭಾಗ್ಯ ಸಿಗಲಿ.

ಸ್ವಲ್ಪ ವಿಷಯಾಂತರ ಮಾಡೋಣ. ಕಳೆದ ವಾರ ಮೂಡಿಗೆರೆ ಸನಿಹದ ದೇವವೃಂದ ಎಂಬ 'ಮೊಬೈಲ್ ನೆಟ್ವರ್ಕ್' ಸಿಕ್ಕದ ಹಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಕನ್ನಾಡಿನ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ನಗರದ ಮಧ್ಯದಲ್ಲಿ ನಿಂತು ಹಳ್ಳಿಯ ಕುರಿತು ಮಾತನಾಡುವ, ವಿಶ್ಲೇಷಿಸುವ ಈ ದಿನಗಳಲ್ಲಿ; ಹಳ್ಳಿಯಲ್ಲೇ ಒಂದು ವಾರ ನಿಂತು ಹಳ್ಳಿಗಳ ಬಗ್ಗೆ ಬರೆಯಲು ಲೇಖನಿ ಕೊಟ್ಟವರು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ.

ಈ ಮಧ್ಯೆ ಮರವನ್ನು ಏರಿಯೋ, ಗುಡ್ಡವನ್ನು ಹತ್ತಿಯೋ ನೆಟ್ವರ್ಕ್ ಸಾಹಸ ಮಾಡಿ ಮನೆಯನ್ನು ಸಂಪರ್ಕಿಸುತ್ತಿದ್ದೆ. ಕೊನೆಯ ಎರಡು ದಿನಗಳಲ್ಲಿ ಅದಕ್ಕೂ ಕುತ್ತು! ಸರಿ, ಕಾರ್ಯಾಗಾರ ಮುಗಿಸಿ ಇನ್ನೇನು ನೆಟ್ವರ್ಕ್ ವ್ಯಾಪ್ತಿಯೊಳಗೆ ಬಂದದ್ದೇ ತಡ, ಅಭಿನಂದನೆಗಳ ಎಸ್.ಎಂ.ಎಸ್.ಗಳು! ಆಶ್ಚರ್ಯವಾಯಿತು. ಆಮೇಲೆ ತಿಳಿಯಿತು, ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿವು 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗದಲ್ಲಿ ನನಗೆ ಪ್ರಶಸ್ತಿ ಘೋಷಿಸಿತ್ತು. ಅನಿರೀಕ್ಷಿತವಾಗಿ ಬಂದ ಪುರಸ್ಕಾರಕ್ಕೆ ಆಶ್ಚರ್ಯವೂ, ಸಂತೋಷವೂ ಆಯಿತು.

ಇತ್ತ ಕನ್ನಾಡಿನ ಘನ ಸರಕಾರವು ರಾಜ್ಯೋತ್ಸವ ಪ್ರಶಸಿಯ ಅಂತಿಮ ಎರಡು ಪಟ್ಟಿಯನ್ನು ಸಿದ್ಧಪಡಿಸುವ ಹೊತ್ತಿಗೆ ರಾಡಿಯಲ್ಲಿ ಮಿಂದೆದ್ದಿತ್ತು! ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ 'ಪ್ರಶಸ್ತಿ ಮಾರಾಟ, ಇದಕ್ಕಾಗಿ ಹುಟ್ಟಿಕೊಂಡ ಮಧ್ಯವರ್ತಿ'ಗಳ ಕರಾಮತ್ತುಗಳ ಬಗ್ಗೆ ಅವಿರತ ಸ್ಟೋರಿಗಳು ಬಿತ್ತರವಾಗುತ್ತಲೇ ಇದ್ದುವು. ಓರ್ವ ಪ್ರಶಸ್ತಿ ಪಡೆಯಲು ಅರ್ಹತೆಯೊಂದಿದ್ದರೆ ಸಾಲದು, ವಶೀಲಿಯೂ ಬೇಕಾಗುತ್ತದೆ ಎಂಬುದನ್ನು ಹಣೆಗೆ ಅಂಟಿಸಿಕೊಳ್ಳುವಷ್ಟು ಬೀದಿರಂಪವಾಗಿತ್ತು.

ಜಿಲ್ಲಾ ಪುರಸ್ಕಾರವು ಬಂದಾಗ ಎಸ್.ಎಂ.ಎಸ್.ಗಳು, ಕೈಕುಲುಕಾಟ, ಪತ್ರ ಮೂಲಕ.. ಹೀಗೆ ವಿವಿಧ ಸ್ತರದಲ್ಲಿ 'ಕಂಗ್ರಾಟ್ಸ್'ಗಳು ವಿನಿಮಯವಾಗುವುದು ಸಹಜ. ಇದರಲ್ಲಿ ಬಹುಪಾಲು 'ರಸಭಾವ ರಹಿತ' ಶುಷ್ಕ ಕಂಗ್ರಾಟ್ಸ್ಗಳೇ ಹೆಚ್ಚು! ಈ ವಿಚಾರವು ವಿನಿಮಯ ಮಾಡಿಕೊಳ್ಳುವವನಿಗೂ ಗೊತ್ತು, ಪಡೆಯುವವನಿಗೂ ಗೊತ್ತಿರುವುದು ಇದರ ಗಮ್ಮತ್ತು!

ನಿನ್ನೆ ಕಲ್ಲುಗುಂಡಿಯ ಯಕ್ಷೊತ್ಸವಕ್ಕೆ ಹೋಗಿದ್ದಾಗಲೂ ಈ 'ಕಂಗ್ರಾಟ್'ಗಳು ರಾಚಿಕೊಂಡು ಬಂದುವು. 'ಖುಷಿಯಾಯಿತು ಮಾರಾಯ್ರೆ. ನೀವು ಇದಕ್ಕೆ ಯಾರನ್ನು ಹಿಡಿದಿರಿ' ಒಬ್ಬರ ಪ್ರಶ್ನೆ. 'ಬಹುಶಃ ನೀವು ವಿ.ಎಸ್.ಆಚಾರ್ಯರರ ಇನ್ಫ್ಲೆನ್ಸ್ ಮಾಡಿದಿರಾ?', 'ನೀವು ಎಷ್ಟು ಕೊಟ್ರಿ?', 'ಮಾರಾಯ್ರೆ, ನಾನು ಎಷ್ಟು ವರ್ಷದಿಂದ ಟ್ರೈ ಮಾಡ್ತೇನೆ ಗೊತ್ತಿತ್ತಾ'.. ಹೀಗೆ ವಿವಿಧ 'ರಸ'ಪ್ರಶ್ನೆಗಳು! ಒಬ್ಬ ಕಲಾವಿದರಂತೂ ಹುಳಿ ಮುಖದಲ್ಲಿ ಬಲವಂತದ ನಗೆಯನ್ನು ಅರಳಿಸುತ್ತಾ, 'ಓ.. ಕಂಗ್ರಾಟ್ಸ್.. ನಿಮಗೆ ಆಗಾಗ ಬರ್ತಾ ಇರ್ತದಲ್ಲಾ. ತೊಂದರೆಯಿಲ್ಲ ಮಾರಾಯ್ರೆ. ನೀವು ಆದೀತು'! ಅನ್ನಬೇಕೆ. ಅವರ ಮನಸ್ಸಿನ ಕೊಳಕಿಗೆ ನನ್ನ ಪುರಸ್ಕಾರ ಬಲಿಯಾಗಿಬಿಟ್ಟಿತು! ತಿಂಗಳ ಹಿಂದೆ ಲೇಖನವೊಂದಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು. ಬಹುಶಃ ಅದನ್ನು ಉಲ್ಲೇಖಿಸಿ ಈ ಕಲಾವಿದ ಮಹಾಶಯರು ಹೇಳಿರಬೇಕು.

ನಾಡಿನ ರಾಜಕೀಯಗಳು ಸೃಷ್ಟಿಸಿದ 'ಕೊಳಕು ಸಾಮಾಜಿಕ ವ್ಯವಸ್ಥೆ'ಯಿಂದಾಗಿ ಪ್ರಶಸ್ತಿಗಳೂ ಮೌಲ್ಯ ಕಳಿದುಕೊಳ್ಳುತ್ತಿವೆ. ಜನರು ಸಂಶಯದಿಂದ ನೋಡುತ್ತಿದ್ದಾರೆ. ಯಾವುದೇ ವಶೀಲಿ ಇಲ್ಲದೆಯೂ ನಿರಾಯಾಸವಾಗಿ ಪುರಸ್ಕಾರವನ್ನು ಸ್ವೀಕರಿಸೋಣವೆಂದರೆ ಇಂತಹ 'ಸಂಶಯ' ಭೂತ. ಯಾವಾಗ ಸಾಮಾಜಿಕವಾಗಿ ಪ್ರಶಸ್ತಿಗಳ ಬಗ್ಗೆ ಜನರ ಭಾವನೆ ಹೀಗಿರುತ್ತೋ, ಆಗ ಕೊಡಲ್ಪಡುವ ಎಲ್ಲಾ ಸರಕಾರಿ ಪ್ರಶಸ್ತಿಗಳ ಹಿಂದೆ 'ಗುಮಾನಿ ಬೀಜ' ಇದ್ದೇ ಇರುತ್ತದೆ.

ಈ ಹಿನ್ನೆಲೆಯಲ್ಲಿ ಲೇಖನಾರಂಭದಲ್ಲಿ ಉಲ್ಲೇಖಿಸಿದ ಸಂಪಾಜೆಯ ಯಕ್ಷೊತ್ಸವದ ಪುರಸ್ಕಾರ ಇದೆಯಲ್ಲಾ, ಅದು ನಿಜಕ್ಕೂ ರಾಜ್ಯವಲ್ಲ, ರಾಷ್ಟ್ರ ಪುರಸ್ಕಾರಕ್ಕಿಂತಲೂ ಹಿರಿದು.

0 comments:

Post a Comment