Wednesday, November 10, 2010

ಸಿಲಿಕಾನ್ ಸಿಟಿ ನಡುವೆ ಬೆಳೆದುಣ್ಣುವ ಹಸಿರು ಉದ್ಯಮಿ



ಪದ್ಮನಾಭ ಕೃಷಿಕ. ಮೂಲತಃ ಸುಳ್ಯದವರು. ಕಾವ್ಯನಾಮ ಪದ್ಮಾ ಕೋಲ್ಚಾರ್. ಬೆಂಗಳೂರಿನ ಹುಳಿಮಾವಿನಲ್ಲಿ ಕೈತುಂಬಾ ಗಳಿಸಿ ಕೊಡುವ ಉದ್ಯಮ. ಇಷ್ಟಿದ್ದೂ ತನ್ನ ಊಟದ ಬಟ್ಟಲಿನ ಅನ್ನವನ್ನು ತಾನೇ ಬೆಳೆಯಬೇಕೆನ್ನುವ ತುಡಿತ.

ಬೆಂಗಳೂರಿನ ಸಿ.ಕೆ.ಪಾಳ್ಯದಲ್ಲಿ ಪದ್ಮನಾಭರ ಸುಪರ್ದಿಯ ಸುಮಾರು ಒಂದೆಕರೆ ಗದ್ದೆಯಿದೆ. ವರುಷಕ್ಕೆ ಮೂರು ಬೆಳೆ. ಏನಿಲ್ಲವೆಂದರೂ ಐವತ್ತು ಕ್ವಿಂಟಾಲ್ ಹತ್ತಿರ ಇಳುವರಿ. ಕಳೆದ ಒಂಭತ್ತು ವರುಷದಿಂದ ಅಂಗಡಿಯಿಂದ ಊಟಕ್ಕಾಗಿ ಅಕ್ಕಿ ತಂದದ್ದಿಲ್ಲ! ತನಗೆ ಬಳಸಿ ಮಿಕ್ಕಿದ್ದನ್ನು ಸ್ನೇಹಿತರಿಗೆ ಹಂಚುತ್ತಾರೆ. ಪೂರ್ತಿ
ರಾಸಾಯನಿಕ ರಹಿತವಾಗಿ ಬೆಳೆದ ಭತ್ತವಾದ್ದರಿಂದ ಕೇಳಿ ಪಡೆದ ಚಿಕ್ಕ ಗ್ರಾಹಕ ವಲಯವಿದೆ.

ಸಿ.ಕೆ.ಪಾಳ್ಯದ ಭತ್ತದ ಹೊಲದ ಸುತ್ತಮುತ್ತಲಿನ ಕೆಲವೇ ರೈತರು ಭತ್ತದ ಬೇಸಾಯ ಮಾಡುತ್ತಾರೆ. ಹತ್ತಿರದಲ್ಲಿ ವಿಶಾಲ ಕೆರೆಯಿದೆ. ಬೇಸಾಯಕ್ಕಿದು ಜಲನಿಧಿ. ಹೊಲ ನೋಡಿಕೊಳ್ಳಲು ಒಂದು ಕೃಷಿ ಕುಟುಂಬವಿದೆ. ಗೊಬ್ಬರ, ಬೀಜ ನೀಡಿದರೆ ಆಯಿತು. ಮಿಕ್ಕದ್ದೆಲ್ಲಾ ಅವರೇ ನೋಡಿಕೊಳ್ಳುತ್ತಾರೆ. ಇಳುವರಿಯಲ್ಲಿ ಅವರಿಗರ್ಧ, ಇವರಿಗರ್ಧ. ವಾರಕ್ಕೆ ಎರಡೋ, ಮೂರೋ ಸಲ ಹೊಲಕ್ಕೆ ಭೇಟಿ ನೀಡುತ್ತಾರೆ. ಸಮಯವಿದ್ದರೆ ಪ್ರತಿದಿನವೂ!

'ಇಲ್ಲಿ ಸುತ್ತ ಮುತ್ತ ಸಾಕಷ್ಟು ಹಡಿಲು ಭೂಮಿ ಇದೆ. ಕೃಷಿ ಮಾಡುವಷ್ಟು ಫಲವತ್ತದೆ ಇದೆ. ಕೃಷಿ ಮಾಡಲು ಮನಸ್ಸು ಬೇಕಲ್ವಾ' ಎನ್ನುತ್ತಾರೆ. ಭತ್ತದ ಮೂರು ಬೆಳೆಯಲ್ಲಿ ಒಂದು ಬೆಳೆಯನ್ನು ದ್ವಿದಳ ಧಾನ್ಯಕ್ಕೆ ಪರಿವರ್ತಿಸುವ ಯೋಚನೆಯಲ್ಲಿದ್ದಾರೆ.
ಕಾರ್ಪೋರೇಶನ್ ತ್ಯಾಜ್ಯ ತಂದು ಕಾಂಪೋಸ್ಟ್ ಮಾಡಿ ಟೊಮೆಟೋ, ಬಾಳೆ ಬೆಳೆದಿದ್ದರು. 'ನಗರದ ತ್ಯಾಜ್ಯ ಕಾಂಪೋಸ್ಟ್ ಮಾಡಿ ರೈತರಿಗೆ ನೀಡಿ. ಅವರು ತಾಜಾ ತರಕಾರಿ ಬೆಳೆದು ಕೊಡೋದಿಲ್ವೇ. ನಮ್ಮ ಸರಕಾರಿ ಯಂತ್ರಕ್ಕೆ ಇದೆಲ್ಲಾ ಹೇಗೆ ತಿಳೀಬೇಕು' ವಿಷಾದಿಸುತ್ತಾರೆ ಪದ್ಮನಾಭ.

ರಾಜಧಾನಿಯಲ್ಲಿದ್ದು ದೂರದ ಸುಳ್ಯದ ತನ್ನ ಇಪ್ಪತ್ತನಾಲ್ಕು ಎಕರೆ ಕೃಷಿ ಭೂಮಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಹುಳಿಮಾವಿನ ಜನನಿಬಿಡ ಪ್ರದೇಶದಲ್ಲಿ ಇವರದು ಹಸಿರು ಮನೆ. ಮನೆ ಸುತ್ತ ಗಿಡ ಬಳ್ಳಿಗಳು. ಔಷಧೀಯ ಸಸ್ಯಗಳು. ನೂರಕ್ಕೂ ಮಿಕ್ಕಿ ಗುಬ್ಬಚ್ಚಿ ಸಂಸಾರ. ತನ್ನ ವಾಸದ ಮನೆಯ ಕೆಳ ಅಂತಸ್ತನ್ನು ಗುಬ್ಬಚ್ಚಿಗಳಿಗೆ ಮೀಸಲಿಟ್ಟಿದ್ದಾರೆ.
ಉತ್ತಮ ಕೃಷಿ ಲೈಬ್ರರಿಯಿದೆ. ಮಾಹಿತಿಯನ್ನು ರೈತರಿಗೆ ಹಂಚುವುದೆಂದರೆ ಪದ್ಮನಾಭರಿಗೆ ಪ್ರೀತಿ. ಅವರ ಕೈಯಲ್ಲಿರುವ ಬ್ಯಾಗ್ ಮಾಹಿತಿಯ ಕಣಜ. ಹೊಸ ಹೊಸ ಕೃಷಿ ಮಾಹಿತಿ ಸಿಕ್ಕರೆ ಸಾಕು, ಜೆರಾಕ್ಸ್ ಮಾಡಿಟ್ಟುಕೊಂಡು ಹಂಚಿಬಿಡುತ್ತಾರೆ. ರಾಜಧಾನಿಯಲ್ಲಿ ಜರುಗುವ ಎಲ್ಲಾ ಕೃಷಿ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
'ನೋಡ್ರಿ, ನನ್ನ ಮನೆಯ ಗುಬ್ಬಚ್ಚಿಗಳಿಗೂ ನನ್ನ ಹೊಲದ ಅಕ್ಕಿಯೇ ಆಗಬೇಕು. ಅವಕ್ಕೆ ಜಾಗ ಫ್ರಿ, ಫುಡ್ ಫ್ರಿ, ವಾಸಿಸಲು ಬಾಡಿಗೆಯಿಲ್ಲ' ಎನ್ನಲು ಅವರಿಗೆ ಖುಷಿ. ರಾಸಾಯನಿಕ ಸಂಪರ್ಕದಿಂದ ದೂರ. ಪ್ರವಾಸ ಹೋದಾಗ, ನೆಂಟರ ಮನೆಗೆ ಹೋದಾಗ ಹೊಸ ಗಿಡಗಳನ್ನು ತಂದು ಮನೆಯಾವರಣದಲ್ಲಿ ನೆಟ್ಟಲ್ಲಿಗೆ ಸಮಾಧಾನ-ಖುಷಿ. ಗಂಡನ ಆಸಕ್ತಿಗೆ ಪತ್ನಿ ವೀಣಾ ಸ್ಪಂದನ.

ಇವರ ಕೃಷಿ ಮತ್ತು ಕೃಷಿ ತುಡಿತದಲ್ಲಿ ನೋಡುವಂತಹದು, ಕೇಳುವಂತಹುದು ಏನಿಲ್ಲದಿರಬಹುದು. ಆದರೆ ತಾನು ಬೆಳೆದು ಉಣ್ಣುವ ಪರಿಕಲ್ಪನೆ. ಪರಿಸ್ನೇಹಿ ಜೀವನ. ಇಂದು ಭತ್ತದ ಗದ್ದೆಗಳಿರುವಲ್ಲಿ ಅಪಾರ್ಟ್ ಮೆಂಟ್ಗಳು ಎದ್ದಿವೆ, ಒತ್ತುವರಿ ಆಗಿದೆ, ಮಾರ್ಗ ಅಗಲೀಕರಣ ನಡೆಯತ್ತಿದೆ. ಊಟದ ಬಟ್ಟಲು ಬರಿದಾಗುವ ದಿವಸಗಳಲ್ಲಿ ಪದ್ಮನಾಭರು ನಗರದ ಮಧ್ಯೆ ಇದ್ದುಕೊಂಡು ಭತ್ತದ ಬೇಸಾಯ ಮಾಡುತ್ತಿರುವುದು ನಿಜಕ್ಕೂ ಬೆನ್ನು ತಟ್ಟಬೇಕಾದ ವಿಚಾರ.

(ಪದ್ಮನಾಭ : 080-26581454)

1 comments:

ಮನಮುಕ್ತಾ said...

ಪದ್ಮನಾಭರ ಕೃಷಿ ಬಗೆಗಿನ ಆಸಕ್ತಿ ಓದಿ ತು೦ಬಾ ಸ೦ತೋಷವೆನಿಸಿತು.ನಿಜಕ್ಕೂ ಅವರ ಕೆಲಸ ಬೆನ್ನು ತಟ್ಟುವ೦ತಹುದೇ ಆಗಿದೆ.ಸು೦ದರ ಫೋತೊಗಳೊಡನೆ ಉತ್ತಮ ಲೇಖನ..
ವ೦ದನೆಗಳು.

Post a Comment