ಜೂನ್ 26, 27ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಹಲಸಿನ ಹಬ್ಬ. ಹಿರಿಯ ಕೃಷಿಕ ಡಾ.ಎಲ್.ಸಿ.ಸೋನ್ಸ್ ಅವರಿಂದ ಉದ್ಘಾಟನೆ. ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ. ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ. ಡಿ.ಹರ್ಷೇಂದ್ರ ಕುಮಾರ್, ಡಾ.ಎಲ್.ಎಚ್.ಮಂಜುನಾಥ್, ಹೆಚ್. ಗೋಪಾಲ ಭಂಡಾರಿ, ಎಸ್.ಡಿ.ಸಂಪತ್ ಸಾಮ್ರಾಜ್ಯ ಉಪಸ್ಥಿತಿ.
'ಹಲಸಿನ ಮರಗಳು ನಾಟಾಕ್ಕಾಗಿ ನಾಶವಾಗುತ್ತಿವೆ. ದೇವಸ್ಥಾನ, ಮನೆ, ಮಂದಿರಗಳ ರಚನೆಗಳಿಗೆ ಹಲಸಿನ ಮರಗಳನ್ನೇ ಹೆಚ್ಚು ಬಳಸಲಾಗುತ್ತದೆ. ಹೀಗೆ ಕಡಿದ ಮರದ ಬದಲಿಗೆ ಹೊಸತಾಗಿ ನೆಡುವ ಪರಿಪಾಠ ಬಂದಿಲ್ಲ. ಕಳೆದ ಮೂರು ವರುಷಗಳಿಂದ ಎರಡು ಸಾವಿರಕ್ಕೂ ಮಿಕ್ಕಿ ಹಲಸಿನ ಗಿಡಗಳನ್ನು ಧರ್ಮಸ್ಥಳ ಸುತ್ತಮುತ್ತ ನೆಟ್ಟಿದ್ದೇವೆ. ಯೋಜನೆಯ ಮೂಲಕ ಲಕ್ಷಾಂತರ ಗಿಡಗಳನ್ನು ಹಂಚುವ ಕೆಲಸ ನಿಕಟ ಭವಿಷ್ಯದಲ್ಲಿ ರೂಪಿಸುತ್ತೇವೆ,' ಹೀಗಂದವರು ಡಾ.ಹೆಗ್ಗಡೆಯವರು.
ಹಲಸು ಆಂದೋಳನದ ಶ್ರೀ ಪಡ್ರೆ, ಅರಭಾವಿಯ ಡಾ.ಜಗದೀಶ್, ಕಸಿ ತಜ್ಞ ಗುರುರಾಜ್ ಬಾಳ್ತಿಲ್ಲಾಯ, ತೂಬುಗೆರೆ ಹಲಸು ಬೆಳೆಗಾರರ ಸಂಘದ ರವಿಕುಮಾರ್ ಇವರಿಂದ ಹಲಸಿನ ವಿವಿಧ ಆಯಾಮಗಳ ಕುರಿತು ವಿಚಾರ. ಬೆಂಗಳೂರು ಜಿಕೆವಿಕೆಯ ಶ್ರೀಮತಿ ಉಷಾ ರವೀಂದ್ರ, ಶಿರಸಿಯ ಶ್ರೀಮತಿ ಮಮತಾ ವಿನಾಯಕ ಭಟ್ ಇವರಿಂದ ಮೌಲ್ಯವರ್ಧನಾ ಪ್ರಾತ್ಯಕ್ಷಿಕೆ.
ಸಖರಾಯಪಟ್ಟಣ, ತೂಬುಗೆರೆ, ತರೀಕೆರೆಗಳ ಹಲಸಿನೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ತಳಿಗಳ ಹಲಸಿನ ಪ್ರದರ್ಶನ. ರುಚಿಯಷ್ಟೇ ಹೆಸರುಗಳಲ್ಲಿಯೂ ವೈವಿಧ್ಯ! ಜೇನುತುಪ್ಪ ಹಲಸು, ಕೆಂಪು ಹಲಸು, ಏಕಾದಶಿ ಹಲಸು, ಕರಡಿ ಹಲಸು, ಕೋತಿ ಹಲಸು..ಹೀಗೆ. ಪ್ರಸಿದ್ಧ 'ಕಾಚಹಳ್ಳಿ' ಹಲಸಿನ ಯಜಮಾನ ಕಾಚಹಳ್ಳಿ ನರಸಿಂಹಯ್ಯನವರಿಗೆ ತಮ್ಮ ಹಲಸಿನ ಕುರಿತು ಮಾತನಾಡಲು ಕುತೂಹಲ, ಹೆಮ್ಮೆ.
ಹಲಸಿನ ಹಣ್ಣಿನ ಹಪ್ಪಳ, ಬೀಜದ ಹೋಳಿಗೆ, ಎಳೆ ಗುಜ್ಜೆಯ ಉಪ್ಪಿನಕಾಯಿ, ಹಣ್ಣಿನ ಇಡ್ಲಿ, ದೋಸೆ, ಗಟ್ಟಿ, ಮುಳುಕ, ಹಲಸಿನ ಮಂಚೂರಿ ಸ್ಟಾಲ್ಗಳಲ್ಲಿ ರಶ್. ರಿಪ್ಪನ್ಪೇಟೆಯ ಜವಳಿಯವರ ಕಸಿ ಗಿಡಗಳ ಮಳಿಗೆಯಲ್ಲೂ ಒಂದಷ್ಟು ಆಸಕ್ತರು.
ತೂಬುಗೆರೆ ರವಿಕುಮಾರ್ ತಮ್ಮ ಮಳಿಗೆಯಲ್ಲಿ ಬ್ಯುಸಿ. ಹಲಸನ್ನು ಕೊಯ್ದು, ಸೊಳೆ ತೆಗೆದು, ಪ್ಲಾಸ್ಟಿಕ್ ಪ್ಯಾಕೆಟ್ ಮಾಡುವುದರಲ್ಲೇ ತಲ್ಲೀನ. ಮಾತಿಗೆಳೆದರೂ ಮಾತನಾಡದಷ್ಟು ಕೈಕೆಲಸ. ಒಂದು ಸೊಳೆಗೆ ಮೂರು ರೂಪಾಯಿ. 'ನಮ್ಮೂರಿಗಿಂತ ಇದು ಚೆನ್ನಾಗಿದೆ' ಎನ್ನುತ್ತಾ ಸೊಳೆಗಳನ್ನು ಖರೀದಿಸಿ ತಿನ್ನುವ ಹಲಸು ಪ್ರಿಯರು ಗಮನ ಸೆಳೆಯುತ್ತಿದ್ದರು. 'ಇಲ್ಲಿ ಫ್ರೀ ಬಿಡಿ, ಮನೆ ಬಾಗಿಲಿಗೆ ಒಯ್ದು ಕೊಟ್ಟರೂ ಹಲಸಿನ ಹಣ್ಣು ಬೇಡ. ಅಲ್ನೋಡಿ. ಮೂರು ರೂಪಾಯಿ ಕೊಟ್ಟು ಸೊಳೆ ತಿನ್ತಾರೆ,' ಎಂದು ಮುಳಿಯ ವೆಂಕಟಕೃಷ್ಣ ಶರ್ಮರಿಂದ ಛೇಡನೆ.
ಬಾಳೆ ಎಲೆಯನ್ನು ಬಾಡಿಸಿ 8-10 ಹಣ್ಣನ್ನು ಪ್ಯಾಕ್ ಮಾಡಿದ್ದರು. ಚಹಾದೊಂದಿಗೆ ಹಣ್ಣಿನ ಪ್ಯಾಕೆಟ್. ಇನ್ನೊಂದೆಡೆ ಸೊಳೆಯನ್ನು ವಿತರಿಸುವಾಗ ಕೈಗೆ ಪ್ಲಾಸ್ಟಿಕ್ ತೊಟ್ಟೆಯ 'ಗ್ಲೌಸ್' ತೊಟ್ಟಿರುವುದು ಉತ್ತಮ ಬೆಳವಣಿಗೆ. ಮಧ್ಯಾಹ್ನದೂಟದಲ್ಲೂ ಹಲಸಿನ ಒಂದೆರಡು ಐಟಂ ಇತ್ತು. 'ಹಲಸು ಮೇಳ ಅಂದಾಗ ಅನ್ನ, ಮಜ್ಜಿಗೆ ಇವೆರಡು ಹೊರತುಪಡಿಸಿ ಮಿಕ್ಕಿದ್ದೆಲ್ಲಾ ಹಲಸಿನದ್ದೇ ಖಾದ್ಯಗಳು ಆಗಬೇಕಿತ್ತು,' ಎಂದು ಕಾಸರಗೋಡಿನ ಕೃಷಿಕ ಕೇಶವ ಭಟ್ಟರ ಅಭಿಪ್ರಾಯ.