








ಕೇರಳದ ತಿರುವನಂತಪುರದ 'ಕನಕಕುನ್ನು ಅರಮನೆ'ಯಲ್ಲಿ ಜೂನ್ ನಾಲ್ಕರಿಂದ ಆರರ ತನಕ ಪ್ರಥಮ ರಾಷ್ಟ್ರೀಯ ಹಲಸು ಮೇಳ. ಐವತ್ತಕ್ಕೂ ಮಿಕ್ಕಿ ಮಳಿಗೆಗಳು. ಅದರಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳದ್ದು ಸಿಂಹಪಾಲು. ಖಾದ್ಯಗಳ 'ಲೈವ್ ತಯಾರಿ' ವಿಶೇಷ.
ಕನಕಕುನ್ನು ಅರಮನೆಯ ಸಭಾಭವನದಲ್ಲಿ ಮೇಳದ ಕಲಾಪಗಳು. ಆವರಣದಲ್ಲಿ ಮಳಿಗೆಗಳು. ಹಲಸಿನ ಕಸಿ ಗಿಡಗಳತ್ತ ಒಲವು. ನಗರ ಮಂದಿ ಹಲಸನ್ನೇ ಖರೀದಿಸುತ್ತಿದ್ದರು. ಕಲಾಪಗಳಿಗೆ ನೋಂದಣಿ ಮಾಡಿಸಿಕೊಂಡ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ. ಮಳಿಗೆಗಳಿಗೆ ಮುಕ್ತ ಎಂಟ್ರಿ. ಹಾಗಾಗಿ ಮೂರು ದಿವಸವೂ ಮಳಿಗೆ ರಶ್.
ಹವಾಯ್ಯ ಕೆನ್ಲವ್ ಮೂರೂ ದಿವಸವೂ ಮೇಳದಲ್ಲಿದ್ದರು. ಅಡುಗೆ ಸ್ಪರ್ಧೆ, ಅಡುಗೆ ತರಬೇತಿಗಳಿದ್ದುವು. ಅಡಿಕೆ ಪತ್ರಿಕೆ ಆಯೋಜಿಸಿದ ಹಲಸಿನ ಕುರಿತಾದ ಚಿತ್ರಪ್ರದರ್ಶನ ಮಳಿಗೆ ಪ್ರವೇಶದಲ್ಲಿತ್ತು. ಇಲಾಖೆಗಳು ತಮ್ಮ ಮಳಿಗೆಯನ್ನು ಆಕರ್ಷಕವಾಗಿ ಜೋಡಿಸುವತ್ತ ಕಾಳಜಿ ವಹಿಸಿದ್ದುವು. ಮೇಳಕ್ಕೆ ಹಲಸಿನ ಮೂಡ್ ಬರುವಂತೆ ಹಲಸಿನ ಕಾಯಿಂದ, ಎಲೆಯಿಂದ, ಮರದ ಗೆಲ್ಲುಗಳಿಂದ ಅಲಂಕಾರ ಮಾಡಿದ್ದರು. ಕೆಲವು ಮಳಿಗೆಯಲ್ಲಿ ರುಚಿ ತೋರಿಸಿ ಮಾರಾಟ ಮಾಡುವ ತಂತ್ರಗಳಿದ್ದುವು.
ಮೂರೂ ದಿವಸವೂ ಪತ್ರಿಕೆಗಳಲ್ಲಿ ಹಲಸಿನದ್ದೇ ಸುದ್ದಿ. ವಾಹಿನಿಗಳಲ್ಲೂ ಸೈ. ಕಾಳಜಿಯುಳ್ಳ, ಜವಾಬ್ದಾರಿಯುಳ್ಳ ಹಲವು ಪತ್ರಕರ್ತರು ಮೇಳಪೂರ್ತಿ ತಿರುಗಾಡುತ್ತಾ ತಮಗೆ ಬೇಕಾದ ವಿಷಯವನ್ನು ದಾಖಲಿಸುತ್ತಿದ್ದರು. ನಮ್ಮ ಕರ್ನಾಟಕದಲ್ಲಾದರೆ? ಒಂದು ಕಾಲಂ ನ್ಯೂಸ್! ಒಂದು ಫೋಟೋ!
'ಶಾಂತಿಗ್ರಾಮ' ಎಂಬ ಸರಕಾರೇತರ ಸಂಸ್ಥೆಯು ಸಹಯೋಗಕಾರರೊಂದಿಗೆ ಮೇಳವನ್ನು ಆಯೋಜಿಸಿತ್ತು.
0 comments:
Post a Comment