Wednesday, June 8, 2011

'ಒಂದು ಸೊಳೆಯದ್ರೂ ತಟ್ಟೆಗೆ ಹಾಕ್ರಿ'


ಮೇ ಕೊನೆಗೆ ಚಿಕ್ಕಮಗಳೂರಿನಲ್ಲಿ ಸರಕಾರಿ ಕೃಪಾಪೋಶಿತ 'ಹಲಸು ಮೇಳ'. ಕುವೆಂಪು ರಂಗಮಂದಿರದಂತಹ ಸಾವಿರ ಆಸನಗಳುಳ್ಳ ಸಭಾಮಂದಿರ. ಮೇಳಕ್ಕೆ ಬಂದಿರೋ ಹಲಸು ಪ್ರಿಯರು ಅಬ್ಬಬ್ಬಾ ಅಂದರೂ ನೂರು ಮೀರದು. ಅದರಲ್ಲಿ ಅರ್ಧಕ್ಕರ್ಧ ಸರಕಾರಿ ವರಿಷ್ಠರು. ಹತ್ತಾರು ಸ್ಟಾಲ್ ತೆರೆದಿದ್ದರೂ ಭರ್ತಿಯಾದುದು ಐದೇ!

'ಎರಡು ತಿಂಗಳಿನಿಂದಲೇ ಮೇಳಕ್ಕೆ ಕೆಲಸ ಮಾಡಿದ್ವಿ. ಆದ್ರೂ ಜನ ಬಂದಿಲ್ವಲ್ಲಾ' ತೋಟಗಾರಿಕಾ ಇಲಾಖೆಯ ವರಿಷ್ಠರೊಬ್ಬರ ಪ್ರತಿಕ್ರಿಯೆ. 'ಹೌದಲ್ಲಾ, ಕೆಲಸ ಮಾಡಿದ್ರಿ, ಅದು ಕೃಷಿಕರಿಗೆ ತಲುಪಿದೆಯಾ. ನೀವು ಭೇಟಿಯಾಗಿದ್ರಾ' ಎಂದು ಕೇಳಿದರೆ, 'ಸಾಹೇಬ್ರು ಕರೀತಾರೆ' ಎನ್ನುತ್ತಾ ಅವರು ನಾಪತ್ತೆ!

ದೊಡ್ಡ ದೊಡ್ಡ ಪ್ಲೆಕ್ಸಿಗಳಿಗೆ ತೊಂದರೆಯಿರಲಿಲ್ಲ. ಉದ್ಘಾಟನೆ ಮಗಿಯುವಾಗ ಹೊಟ್ಟೆ ರಾಗ ಹಾಡುತ್ತಿತ್ತು. ತಟ್ಟೆ ಹಿಡಿದ್ರೆ ಬಿಸಿಬೇಳೆ ಬಾತ್, ಮೊಸರನ್ನ. 'ಏನ್ರಿ ಇದು, ಒಂದೇ ಒಂದು ಹಲಸು ರೆಸಿಪಿ ಇಲ್ವಲ್ಲಾ, ಸ್ಟಾಲಲ್ಲಿ ಹಲಸಿನ ಹಣ್ಣು ಇದೆಯಲ್ವಾ. ಒಂದೊಂದು ಸೊಳೆ ತಟ್ಟೆಗೆ ಹಾಕ್ರಿ,' ಛೇಡಿಸಿದರು ಬಾಳೆಹೊನ್ನೂರಿನ ವಿಠಲ ರಾವ್.

ಸಾಗರದ ಕೃಷಿಕ ನಾಗೇಂದ್ರ ಸಾಗರ್ ಅವರ ಪರಿಶ್ರಮದ 'ಹಲಸು-ನಿರ್ಲಕ್ಷಿತ ಕಲ್ಪವೃಕ್ಷ' ಪುಸ್ತಿಕೆ ಮೇಳದ ನೆನಪಿಗೆ ಸಾಕ್ಷಿ. ಹಲಸಿನ ವಿವಿಧ ವಿಚಾರಗಳ ಕುರಿತು ಪವರ್ಪಾಯಿಂಟ್ ಪ್ರಸ್ತುತಿ. ಅಷ್ಟು ಹೊತ್ತಿಗೆ ಸಭಾಭವನ ಭಣಭಣ. ಮಾರುದ್ದದ ಆಮಂತ್ರಣ ಪತ್ರಿಕೆಯಲ್ಲಿ ಅಚ್ಚಾದ ಗಣ್ಯರಲ್ಲಿ ಶೇ.90ರಷ್ಟು ಗೈರುಹಾಜರಿ. ಇದು ಸರಕಾರಿ ಕಾರ್ಯಕ್ರಮಗಳ ಆರ್ಥಶೂನ್ಯ ಶಿಷ್ಟಾಚಾರ. 'ಇವರೆಲ್ಲಾ ಬರುತ್ತಿದ್ದರೆ ಉದ್ಘಾಟನೆ ಮುಗಿಯುವಾಗಲೇ ಸಂಜೆಯಾಗುತ್ತಿತ್ತು'!

'ಭಾಗವಹಿಸಿದವರಿಗೆ ಐವತ್ತು ರೂಪಾಯಿ ಕೊಟ್ರೆ ಹಾಲ್ ಫುಲ್ ಆಗ್ತಿತ್ತು' ಹಿಂದಿನ ಸೀಟಿನಿಂದ ಒಬ್ಬರು ಗೊಣಗಿದರು. ಸರಕಾರಿ ಕಾರ್ಯಕ್ರಮವೆಂದರೆ ನಮ್ಮ ಜನಗಳು ಆರ್ಥ ಮಾಡುವ ರೀತಿನೇ ಬೇರೆ. ಬಹುತೇಕ ಕಾರ್ಯಕ್ರಮಗಳಲ್ಲಿ ಇಂತಹ ಮನೋಧರ್ಮ ಪ್ರಕಟವಾಗುತ್ತಿರುವುದನ್ನು ಕಂಡಿದ್ದೇನೆ.

ಸರಿ, ಮೇಳದ ಕಲಾಪಗಳು ಢಾಳಾದಷ್ಟು ಪ್ರದರ್ಶನ ಸೊರಗಲಿಲ್ಲ. ರಿಪ್ಪನ್ಪೇಟೆ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿಯವರು ಕಸಿಗಿಡದೊಂದಿಗೆ ಬೆಳ್ಳಂಬೆಳಿಗ್ಗೆ ಹಾಜರ್. ಇವರ ಐದು ವಿಧದ ಆರುನೂರು ಕಸಿ ಗಿಡಗಳು ಮೇಳದ ಆಕರ್ಷಣೆ. ಸಂಜೆಯ ಹೊತ್ತಿಗೆ ಎಲ್ಲವೂ ಖಾಲಿ.

ಅವರು ತಂದಿರುವ ಹಲಸು ತಳಿಗಳು: ಸರ್ವಋತು ಹಲಸು - 'ಶ್ರೀ ವಿಜಯ'. ದಪ್ಪನಾದ, ಸಿಹಿಯಾದ ಅರಶಿನ ಸೊಳೆ. ಚಿಪ್ಸ್, ಹಪ್ಪಳ, ತರಕಾರಿಯಾಗಿ ಬಳಕೆ. ನೆಟ್ಟು ಐದೇ ವರುಷದಲ್ಲಿ ಇಳುವರಿ. ಮಳೆಗಾಲದಲ್ಲಿ ರುಚಿ ಸಪ್ಪೆಯಾಗುತ್ತದೆ.

ಮಂಕಾಳೆ (ಕೆಂಪು) ಚಂದ್ರ ಹಲಸು : ಇದಕ್ಕೆ 2002ರಲ್ಲಿ ಕೆಳದಿಯಲ್ಲಿ ಜರುಗಿದ ಹಲಸು ಮೇಳದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿ. ದಪ್ಪ ಸೊಳೆ, ಹಳದಿ-ಕೆಂಪು-ಕೇಸರಿ ಮಿಶ್ರಿತ ಬಣ್ಣ. ಸಿಹಿ-ಹುಳಿ ರುಚಿಯ ಹಿತವಾದ ಸ್ವಾದ. ಆರು ವರುಷದಲ್ಲಿ ಇಳುವರಿ.

ರುದ್ರಾಕ್ಷಿ ಹಲಸು (ಕೆಂಪು) : ಒಂದು ಗೊಂಚಲಲ್ಲಿ ಸುಮಾರು ನೂರು ಕಾಯಿ ಬಿಡುತ್ತದೆ. ಗಟ್ಟಿ ಸೊಳೆ. ಹಪ್ಪಳ, ತರಕಾರಿಯಾಗಿ ಬಳಕೆ. ಇನ್ನೊಂದು ರುದ್ರಾಕ್ಷಿ (ಅರಶಿನ) : ಗೊಂಚಲು ಗೊಂಚಲಾಗಿ ಹಿಡಿಯುವುದು ಗುಣ. ಮಳೆಗಾಲದಲ್ಲಿ ಹಣ್ಣಿನ ರುಚಿ ಸಪ್ಪೆ.

ಮೇಣ ರಹಿತ ಹಲಸು : ಒಂದೊಂದು ಹಲಸು ಇಪ್ಪತ್ತು ಕಿಲೋ ತೂಗುತ್ತದೆ. ಬಿಳಿ ವರ್ಣದ ಗಟ್ಟಿ ಸೊಳೆ. ಅತೀ ಮಳೆಯಲ್ಲೂ ರುಚಿ ಕಳೆದುಕೊಳ್ಳುವುದಿಲ್ಲ. ಹಿತವಾದ ಸಿಹಿ-ಹುಳಿ ರುಚಿ. ಹೆಚ್ಚು ಸೇವಿಸಿದರೂ ಹೊಟ್ಟೆ ಕೆಡುವುದಿಲ್ಲ.

ಜವಳಿಯವರು ಹಲಸಿನ ಗಿಡಗಳ ಜತೆ, ಆಯಾಯ ತಳಿಯ ಹಲಸಿನ ಹಣ್ಣನ್ನೂ ತಂದಿದ್ದರು. ಗಿಡ ಖರೀದಿಗೆ ಸೊಳೆ ಫ್ರೀ! 'ರುಚಿ ತೋರಿಸಿದಾಗ ಜನರಿಗೆ ನಂಬುಗೆ ಬರುತ್ತದೆ' ಎನ್ನುತ್ತಾರೆ. ಇನ್ನೊಂದು ಮಳಿಗೆಯಲ್ಲಿ ಬೆಂಡೆಕರೆಯ ಬಿ.ಎನ್.ಶರತ್ ತಮ್ಮ 'ರಾಮಚಂದ್ರ ಹಲಸು' ಗಿಡಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಸಖರಾಯಪಟ್ಟಣದ 'ಪರಿವರ್ತನ್' ಸಂಸ್ಥೆಯ ಅಧ್ಯಕ್ಷ ಶಿವಣ್ಣ, ಹಲಸಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಒಣಸೊಳೆ, ಹಣ್ಣಿನ ನಿರ್ಜಲೀಕೃತ ಸೊಳೆ, ಬೇಯಿಸಿ ಒಣಗಿಸಿದ ಗುಜ್ಜೆ, ಹಪ್ಪಳ, ಹಲಸಿನ ಪೌಡರ್, ಸಿರಪ್, ಉಪ್ಪಿನಕಾಯಿ, ಕ್ಯಾಂಡಿ..ಗಳು ಹಲಸು ಪ್ರಿಯರನ್ನು ಸೆಳೆದಿತ್ತು. ಕೇರಳದ ಉದ್ದಿಮೆಯೊಂದರಿಂದ ಕಲಿತು ಬಂದ ಈ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮಾಡುವ ನಿರೀಕ್ಷೆ. 'ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳಾಗಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಶಿಕ್ಷಣ ನೀಡಿ, ಈ ವ್ಯವಸ್ಥೆಗೆ ಬಳಸಿಕೊಳ್ಳಬೇಕು. ಇಲ್ಲಿನ ಉತ್ಪನ್ನ ಇಲ್ಲೇ ಮಾರುಕಟ್ಟೆಯಾಗಬೇಕು. ಆಗಲೇ ಯಶಸ್ವಿ' ಎಂಬುದು ಶಿವಣ್ಣ ಅಭಿಮತ.

ಸಖರಾಯಪಟ್ಟಣ ಹಲಸಿನೂರು. ಒಂದೊಂದು ಹಿತ್ತಿಲಲ್ಲಿ ಒಂದೊಂದು ರುಚಿಯ ಹಲಸು. ನಮ್ಮ ಮಲೆನಾಡಿನ ಅಪ್ಪೆಮಿಡಿಯ ಹಾಗೆ. ಮೇಳದಲ್ಲಿ ಪ್ರದರ್ಶನಕ್ಕೆಂದು ಹದಿನೈದು ತಳಿಗಳ ಹಲಸು ತರಲಾಗಿತ್ತು. ಆಸಕ್ತರಿಗೆ ಒಂದೊಂದು ಸೊಳೆ ತಿನ್ನಲಡ್ಡಿಯಿರಲಿಲ್ಲ. ಬಾಯಿ ಚಪಲ ಹೆಚ್ಚಾದರೆ ಹಣ್ಣನ್ನೇ ಖರೀದಿಸಲು ಅವಕಾಶವಿತ್ತು.

ಜಿಲ್ಲೆಯ ವಿವಿಧ ಭಾಗಗಳ ಹಲಸಿನ ಸಂಗ್ರಹ ಇಲಾಖೆಯ ಮಳಿಗೆಯಲ್ಲಿತ್ತು. ಬಾಳೆಹೊನ್ನೂರಿನ ವಿಠಲರಾಯರ ಸಂಗ್ರಹವೇ ಸಿಂಹಪಾಲು. ವೆಲ್ಲಾಲ್ ಕೆವಿಕೆ ತಳಿ, ಮೇಣರಹಿತ, ರಸಭರಿತ, ಇಬ್ಬೀಡ್.. ತಳಿಗಳನ್ನು ವಿಠಲ ರಾಯರು ಮೇಳಕ್ಕಾಗಿಯೇ ತಂದಿದ್ದರು. ತಿರುವನಂತಪುರಂ ಹಲಸಿಗೆ ವಿಶೇಷ ಮನ್ನಣೆ.

ದೊಡ್ಡ ವ್ಯವಸ್ಥೆ ಅಂದ ಮೇಲೆ ಎಡವಟ್ಟು ಸಾಮಾನ್ಯ. ತೋಟಗಾರಿಕಾ ಉಪ ನಿರ್ದೇಶಕ ಶಕೀಲ್ ಅಹಮದ್ ಇವರ ಉತ್ಸಾಹದಿಂದ ಹಲಸು ಮೇಳ ಸಂಪನ್ನವಾಗಿತ್ತು. ಇವರೊಂದಿಗೆ ಶಿವಮೊಗ್ಗದ ಲಕ್ಷ್ಮೀನಾರಾಯಣ ಹೆಗಡೆ, ನಾಗೇಂದ್ರ ಸಾಗರ್ ಸಾಥ್ ನೀಡಿದ್ದರು. ಬಹಳ ವ್ಯವಸ್ಥಿತವಾಗಿ ಯೋಚನೆ, ಯೋಚನೆ ರೂಪುಗೊಂಡಿತ್ತು. ಹೀಗಿದ್ದೂ ಮೇಳದಲ್ಲಿ ಹಲಸು ಪ್ರಿಯರ ಸಂಖ್ಯೆ ಕಡಿಮೆಯಾಗಲು ಕಾರಣವೇನು?

ಗ್ರಾಸ್ರೂಟ್ ವರೆಗೂ ಕೆಲಸದ ಜಾಲ ವಿಸ್ತರಿಸದಿರುವುದೇ ಕಾರಣ. ಕೇವಲ ಆದೇಶ, ಸುತ್ತೋಲೆಗಳಿಂದ ಕೆಲಸವಾಗದು. ಜನರ ಮಧ್ಯೆ ಹೋಗಿ ಮನಸ್ಸನ್ನು ತೆರೆದಾಗಲೇ, ಸರಕಾರಿ ಕಾರ್ಯಕ್ರಮಗಳಿಗೂ ಜನಸ್ಪಂದನ ದೊರೆಯುತ್ತದೆ.

'ಅಧಿಕಾರಿಗಳಲ್ಲಿ ಉತ್ಸಾಹ ಪುಟಿಯುತ್ತಿದ್ದರೂ, ಕೆಳಗಿನವರಲ್ಲಿ ಉತ್ಸಾಹ ಬೇಕಲ್ವಾ ಸಾರ್' - ಜವಳಿಯವರು ನನ್ನ ಸಂಶಯಕ್ಕೆ ಮಂಗಳ ಹಾಡಿದರು.

0 comments:

Post a Comment