







ಕಾಸರಗೋಡು ಜಿಲ್ಲೆಯ ಮೀಯಪದವು ಚೌಟರ ಚಾವಡಿಯಲ್ಲೊಂದು (ಜೂನ್ ೧೨, ೨೦೧೧) 'ಹಲಸಿನ ಹಬ್ಬ'. ಸುತ್ತಲಿನ ಊರುಗಳ ಸುಮಾರು ನಲವತ್ತು ವಿವಿಧ ಹಲಸುಗಳು ಒಡಲನ್ನು ಸೀಳಿಸಿಕೊಂಡು ಸೊಳೆಯಿಂದ ಕಳಚಿಕೊಂಡಿದ್ದುವು. ತೀರ್ಪುಗಾರರ ಆಯ್ಕೆಗಾಗಿ ಕಾಯುತ್ತಿದ್ದುವು. ಒಂದಷ್ಟು ಮಂದಿ ಹಲಸು ಪ್ರಿಯರು ವೀಕ್ಷಕರು.
ರುಚಿ, ಬಣ್ಣ, ನೋಟ, ಫಿಲ್ಲಿಂಗ್, ಗಾತ್ರ ಮೊದಲಾದ ಮಾನದಂಡ ಅನುಸರಿಸಿ ಮೊದಲ ಐದು ಬಹುಮಾನಗಳು. ಐವರು ತೀರ್ಪುಗಾರರು. 'ಈಗ ಮೌಲ್ಯಮಾಪನಕ್ಕೆ ಸುರು. ಎಲ್ಲಾ ಹಲಸು ಪ್ರಿಯರು ಚಾವಡಿಯ ಹೊರಭಾಗದ ಆಸನದಲ್ಲಿ ಆಸೀನರಾಗಬೇಕು,' ಹಬ್ಬದ ರೂವಾರಿ ಡಾ.ಡಿ.ಸಿ.ಚಾಟರಿಂದ ಸಾತ್ವಿಕ ಆದೇಶ. ಎಲ್ಲರೂ ಆಸೀನರಾಗುತ್ತಿದ್ದಂತೆ ಹಲಸಿನ ಹಣ್ಣಿನ ಗಟ್ಟಿ ಮತ್ತು ಪಾಯಸ ಸಮಾರಾಧನೆ. ಜತೆ ಜತೆಗೆ ಒಳಗಿದ್ದ ಹಣ್ಣುಗಳ ಜಾತಕ ಪರಿಶೀಲನೆಯೂ ನಡೆಯುತ್ತಿತ್ತು.
ದೇರಂಬಳ ತ್ಯಾಂಪಣ್ಣ ಶೆಟ್ಟಿಯವರ ಹಲಸಿನ ಹಣ್ಣಿಗೆ ಪ್ರಥಮ ಸ್ಥಾನ. ಉಂಬಳಿಕೋಡಿ ಪದ್ಮನಾಭ ರೈ, ಕಣಕ್ಕೂರು ತಿರುಮಲೇಶ್ವರ ಭಟ್, ಬೊಳುವಾಯಿ ಬಿ.ಟಿ.ಭಂಡಾರಿ ಮತ್ತು ಬೊಳುವಾಯಿ ಲಕ್ಷ್ಮೀನಾರಾಯಣ ಇವರ ಹಲಸುಗಳಿಗೆ ನಂತರದ ಸ್ಥಾನ. ಎಲ್ಲಾ ವಿಜೇತರಿಗೆ ನಗದು ಬಹುಮಾನ.
ಇದರಲ್ಲೇನು ವಿಶೇಷ? ಸ್ಥಳೀಯ ಮಟ್ಟದ ಉತ್ತಮ ಹಲಸಿನ ಆಯ್ಕೆಗಾಗಿ ಈ ಸ್ಪರ್ಧೆ. 'ಸ್ಪರ್ಧೆಗೆ ಬಂದಿರುವುದು ಕೇವಲ ನಲವತ್ತು. ಆದರೆ ಬಾರದಿರುವುದು ಎಷ್ಟೋ ಇದೆ. ನಮ್ಮೂರಿನ ಉತ್ತಮ ಹಲಸಿನಸ ಮರವನ್ನು ಆಯ್ಕೆ ಮಾಡಿ, ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಉದ್ದೇಶ. ಇದರಿಂದಾಗಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ,' ಹಬ್ಬದ ಆಶಯವನ್ನು ಚೌಟರು ಹೇಳುತ್ತಾರೆ. ಇದು ರೈತ ಮಟ್ಟದ 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆ.
ಸ್ಥಳೀಯವಾಗಿ ಆಹಾರ ಭದ್ರತೆ ನೀಡಬಲ್ಲ ಹಲಸು ನಿಧಾನವಾಗಿ ಮನದ ಕದ ತಟ್ಟುತ್ತಿದೆ. 'ಒಂದಾದರೂ ಗಿಡ ಇರಲಿ' ಎಂಬ ಪ್ರಕ್ರಿಯೆ ಮತ್ತು ಪ್ರಜ್ಞೆ ಬರಲಾರಂಭಿಸಿದೆ. ಕಸಿ ಗಿಡಗಳ ಅರಸುವಿಕೆ ಶುರುವಾಗಿದೆ. ಕಸಿ ತಜ್ಞರ ಹುಡುಕಾಟ ತೀವ್ರವಾಗಿದೆ. ಹಲಸಿನ ಮಾತುಕತೆಗಳಿಂದ ರೈತರೊಳಗೆ ಪರಸ್ಪರ ಕೊಂಡಿ ನಿರ್ಮಾಣವಾಗುತ್ತಿದೆ. ಇವೆಲ್ಲದರ ಫಲಶ್ರುತಿಯ ಒಂದೆಳೆ ಮೀಯಪದವಿನ ಹಬ್ಬ.
ಈಚೆಗೆ ತಿರುವನಂತಪುರದಲ್ಲಿ ರಾಷ್ಟ್ರೀಯ ಹಲಸು ಮೇಳ ಜರುಗಿತ್ತು. ಆಹಾರ ಸುರಕ್ಷೆಯಲ್ಲಿ ಹಲಸಿನ ಪಾತ್ರದ ಕುರಿತು ಮೂರು ದಿವಸ ಚರ್ಚೆ ನಡೆದಿತ್ತು. 'ಇಂತಹ ಚರ್ಚೆಯನ್ನು ನಮ್ಮೂರಲ್ಲೂ ಆರಂಭಿಸಬೇಕು' ಎಂಬ ಚೌಟರ ಮನದ ತುಡಿತದ ಮೂರ್ತ ರೂಪ ಹಲಸು ಹಬ್ಬ. ತಮ್ಮಂದಿರಾದ ಪ್ರಭಾಕರ ಚೌಟ, ಮನೋಹರ ಚೌಟರ ಹೆಗಲೆಣೆ. ಸ್ಥಳೀಯ ಸಂಸ್ಥೆಗಳ ಸಹಯೋಗ.
ಬಿದ್ದು ಹಾಳಾಗಿ ಹೋಗುತ್ತಿರುವ ಹಲಸಿನ ಮೌನಕ್ಕೆ ನೂರಕ್ಕೂ ಮಿಕ್ಕಿ ಹಲಸು ಪ್ರಿಯರು ಮಾತಾಗಲು ಪ್ರಯತ್ನಿಸಿದರು. ಈ ಋತುವಿನಲ್ಲಿ ಎರಡೂವರೆ ಟನ್ನಿಗಿಂತಲೂ ಅಧಿಕ ಹಲಸಿನ ಸೊಳೆಯನ್ನು ಮಾರಾಟ ಮಾಡಿದ ಅಡ್ಕತ್ತಿಮಾರ್ ಸುಬ್ರಹ್ಮಣ್ಯ ಭಟ್ಟರ ಹಲಸು ಗಾಥೆಗೆ ಕಿವಿಯಾದವರೇ ಅಧಿಕ. ಹಬ್ಬಕ್ಕೆಂದೇ ತೊಟ್ಟೆತ್ತೋಡಿ ಪ್ರೇಮಾ. ಕೆ. ಭಟ್ಟರು ಹಲಸಿನ ರೆಚ್ಚೆಯ 'ಜೆಲ್ಲಿ' ತಯಾರಿಸಿ ತಂದಿದ್ದರು. ಸಭೆಯ ಆರಂಭಕ್ಕೆ ಮೊದಲೇ ಜೆಲ್ಲಿಯ ತಟ್ಟೆ ಖಾಲಿ.
ಜೆಲ್ಲಿಯ ಸವಿಗೆ ಮಾರುಹೋದವರು ರೆಸಿಪಿಯನ್ನು ಕಾಗದಕ್ಕಿಳಿಸುತ್ತಿದ್ದರು. 'ಹಲಸಿನಿಂದ ನಲವತ್ತು ವೆರೈಟಿ ಖಾದ್ಯವನ್ನು ಮಾಡುತ್ತೇನೆ' ಎನ್ನುವಾಗ ಪ್ರೇಮಾ ಅವರಿಗೆ ಖುಷಿ. ಈಚೆಗೆ ಹವಾಯ್ಯ ಕೆನ್ ಲವ್ ಕನ್ನಾಡಿಗೆ ಬಂದಿದ್ದರು. ಅವರು ತಂದಿದ್ದ ಹಲಸಿನ ಹಣ್ಣಿನ ಒಣಸೊಳೆ ಮತ್ತು ಅದರ ರುಚಿಗೆ ಕೃಷಿಕ ಕೃಷ್ಣರಾಜ್ ಗಿಳಿಯಾಲ್ ಮಾರುಹೋಗಿದ್ದರು. ಸ್ವತಃ ತಾವೇ ಒಣಸೊಳೆಯನ್ನು ತಯಾರಿಸಿ ಮೀಯಪದವಿಗೆ ತಂದಿದ್ದು, ರುಚಿ ತೋರಿಸಿದರು.
ಎಪ್ರಿಲ್ ಮಧ್ಯಭಾಗದಲ್ಲಿ ಅಳಿಕೆ ಸನಿಹದ ವೆಂಕಟಕೃಷ್ಣ ಶರ್ಮರು ತಮ್ಮ ಮನೆಯಂಗಳದಲ್ಲಿ ಈ ರೀತಿಯ ತಳಿ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ನಡೆಸಿದ್ದರು. ಅಲ್ಲೂ ಮೂರ್ನಾಲ್ಕು ಉತ್ತಮ ಗಿಡಗಳನ್ನು ಪತ್ತೆ ಮಾಡಿ ಕಸಿ ಕಟ್ಟುವ ಪ್ರಯತ್ನ. ಈಗಾಗಲೇ ಶರ್ಮರು ಒಂದೆಕ್ರೆಯಲ್ಲಿ ಹಲಸಿನ ತೋಟಕ್ಕೆ ನಾಂದಿ ಹಾಡಿದ್ದಾರೆ. ಇನ್ನೂ ಮೂರೆಕ್ರೆಯ ಯೋಚನೆ-ಯೋಜನೆ ಸಿದ್ಧವಾಗುತ್ತಿದೆ.
'ನೋಡಿ, ಒಂದೆರಡು ವರುಷದಲ್ಲಿ ನನ್ನ ತೋಟದಲ್ಲೂ ಹಲಸಿನ ಹಲಸಿನ ತಳಿ ಬ್ಯಾಂಕ್ ಆಗುತ್ತದೆ' ಎನ್ನುತ್ತಾರೆ ಚೌಟರು. ಅಡ್ಯನಡ್ಕದ ವಾರಣಾಶಿ ಕೃಷ್ಣಮೂರ್ತಿಯವರು ಕೂಡಾ ಹಲಸಿನ ತೋಟ ಎಬ್ಬಿಸುವ ಉತ್ಸಾಹದಲ್ಲಿದ್ದಾರೆ.
ಬಿಡಿಬಿಡಿಯಾಗಿದ್ದ ಹಲಸು ಪ್ರಿಯರನ್ನು ಹಬ್ಬ ಒಂದೇ ಸೂರಿನಡಿ ತಂದಿದೆ. ದೂರವಾಣಿ, ಮೊಬೈಲ್, ಮಿಂಚಂಚೆಗಳು ವಿನಿಮಯವಾಗಿದೆ. ನಿರ್ಲಕ್ಷಿತ ಹಣ್ಣಿಗೆ ಪುನಶ್ಚೇತನ ಕೊಡುವ 'ಹಲಸಿನ ಹುಚ್ಚಿರುವ' ಕೃಷಿಕರು ಒಂದಾಗುತ್ತಿದ್ದಾರೆ. ಸ್ಥಳೀಯ ಆಹಾರ ಭದ್ರತೆಯನ್ನು ಒದಗಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ ಹಲಸಿನ ಕುರಿತಾದ ನಮ್ಮ 'ಮೈಂಡ್ಸೆಟ್' ಬದಲಾಗಬೇಕು.
ಈಗಾಗಲೇ ಮೂವತ್ತಕ್ಕೂ ಮಿಕ್ಕಿ ಹಲಸಿನ ಮೇಳಗಳು ಕೇರಳ ಮತ್ತು ಕರ್ನಾಟಕಗಳಲ್ಲಾಗಿದೆ. ಕೃಷಿ ವಿವಿಯ ಕದ ತಟ್ಟಿದೆ. ಬೆಂಗಳೂರಿನ ಸನಿಹದ ತೂಬುಗೆರೆಯಲ್ಲಿ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಗಿದೆ. ಇತ್ತ ಇಡುಕ್ಕಿಯಲ್ಲೂ 'ಜಾಕ್ಕೋ' ಸಂಸ್ಥೆ ರೂಪು ಪಡೆಯುವುದರಲ್ಲಿದೆ.
0 comments:
Post a Comment