




'ಎರಡು ದಿವಸದ ಹಲಸು ಮೇಳದ ಸಂದರ್ಭದಲ್ಲಿ ರೈತರಿಂದ ಇಪ್ಪತ್ತು ಟನ್ ಹಲಸಿನ ಹಣ್ಣು ಸಂಗ್ರವಾಗಿ ಮಾರಿಹೋಗಿದೆ' ಎಂದು ಹಿಮ್ಮಾಹಿತಿ ನೀಡುತ್ತಾರೆ ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್. ಜೂನ್ 11, 12ರಂದು ಶಿರಸಿಯಲ್ಲಿ ಕದಂಬವು ಹಲಸು ಮೇಳವನ್ನು ಆಯೋಜಿಸಿತ್ತು.
ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಮೇಳಕ್ಕೆ ಶುಭ ಚಾಲನೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇವರ ಅಧ್ಯಕ್ಷತೆ. ಬೆಂಗಳೂರು ಕೃಷಿ ವಿವಿಯ ಡಾ.ನಾರಾಯಣ ಗೌಡರಿಂದ ಪ್ರದರ್ಶನ ಉದ್ಘಾಟನೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ ಹಲಸಿನ ಮೌಲ್ಯವರ್ಧನೆ, ರಾಷ್ಟ್ರ-ಅಂತಾರಾಷ್ಟ್ರಿಯ ಹಲಸು ಸುದ್ದಿಗಳ ಕುರಿತಾದ ಪವರ್ಪಾಯಿಂಟ್ ಪ್ರಸ್ತುತಿ.
ಮುನ್ನೂರಕ್ಕೂ ಹೆಚ್ಚು ಹಲಸಿನ ಪಾಕಗಳ ಪ್ರವೀಣೆ ಸಾಗರದ ಗೀತಕ್ಕ, ಹಲಸುಪ್ರಿಯ ಬಾಳೆಹೊನ್ನೂರಿನ ವಿಠಲ ರಾವ್, ದೇವರುಗದ್ದೆ ಸುಬ್ರಹ್ಮಣ್ಯ ಮತ್ತು ಹಲಸು ಆಂದೋಳನದ ಶ್ರೀ ಪಡ್ರೆಯವರಿಗೆ ಸಂಮಾನ.
ಸಂಮಾನ ಅಂದಾಗ ಸಹಜವಾಗಿ ಶಾಲು, ಹಾರ, ಫಲ ಸಮರ್ಪಣೆ ಇದ್ದೇ ಇದೆ ತಾನೆ. 'ಏನ್ರಿ, ತಟ್ಟೆಯಲ್ಲಿ ಹಲಸು ಇಲ್ಲವೇ ಇಲ್ಲವಲ್ಲ' ವಿಠಲ ರಾಯರು ನವಿರಾಗಿ ಚುಚ್ಚಿದರು! ಮತ್ತೆ ಸೇರಿತು, ಸಂಮಾನ ತಟ್ಟೆಗೆ ಹಲಸಿನ ಹಣ್ಣಿನ ಪ್ಯಾಕೆಟ್.
ಸಭೆಯಲ್ಲಿ ಪ್ರೇಕ್ಷಕರಾಗಿ ಕುಳಿತಿದ್ದ ಹಿರಿಯಜ್ಜಿ ಒಬ್ಬರು ಹಲಸಿನ ಹಣ್ಣಿನ (ಹಹ) ಪೇಡಾ ತಯಾರಿಸಿ ಮೇಳಕ್ಕೆ ತಂದಿದ್ದರು. ಸಭಾ ಕಲಾಪ ನಡೆಯುತ್ತಿದ್ದಾಗ ಅದನ್ನು ವೇದಿಕೆಯಲ್ಲಿ ತಂದಿಟ್ಟು ಗಮನ ಸೆಳೆದರು. ವೇದಿಕೆಯಲ್ಲಿದ್ದವರ ಬಾಯಿ ಸಿಹಿ. 'ಹಣ್ಣು ಕೊಟ್ರೆ ಇನ್ನಷ್ಟು ಮಾಡ್ತೀರಾ' ಕಾಗೇರಿಯವರಿಂದ ಪ್ರತಿಕ್ರಿಯೆ. 'ಧಾರಾಳ' ಎನ್ನುವಾಗ ಅಜ್ಜಿಯ ಮುಖ ಅರಳಿತು.
ಹಹದ ಪಾಕಶಾಲೆಯಲ್ಲಿ ಎರಡು ದಿನವೂ ಹಲಸಿನದ್ದೇ ಖಾದ್ಯ. ಬಿಡುವಿಲ್ಲದ ತಯಾರಿ. ಹಲಸಿನ ಐಸ್ಕ್ರೀಂ; ಹಪ್ಪಳ, ಸೆಂಡಿಗೆ, ಚಿಪ್ಸ್ಗಳ ಮಳಿಗೆಗಳು, ಗಜಾನನ ಹೆಗಡೆಯವರ ಹಲಸಿನ ಹಪ್ಪಳದ ಅಚ್ಚು ಮಾರಾಟದ ಮಳಿಗೆ. 'ಎರಡು ದಿವಸದಲ್ಲಿ ನಾಲ್ಕುನೂರು ಅಚ್ಚು ಮಾರಾಟವಾಯಿತು' ಎನ್ನುತ್ತಾರೆ. ಹಲಸಿನ ಮರದಿಂದ ತಯಾರಿಸಿದ ದಾರಂದ (ಬಾಗಿಲಿನ ಚೌಕಟ್ಟು), ಪೀಠೋಪಕರಣಗಳ ಪ್ರದರ್ಶನ ಮೇಳಕ್ಕೆ ಈ ವರುಷ ಹೊಸ ಸೇರ್ಪಡೆ.
ಸೋಮನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 'ಹಲಸಿನ ತಳಿ ಸಂಗ್ರಹ' ಆರಂಭವಾಗಿದೆ. ಕದಂಬದ ನೇತೃತ್ವ. 'ಇದರಿಂದಾಗಿ ನಮಗೆ ಗೊತ್ತಿಲ್ಲದೆ ಎಷ್ಟೋ ತಳಿಗಳ ಪತ್ತೆಯಾಗಬಹುದು. ಉತ್ತರ ಕನ್ನಡದ ತಳಿ ಸಂಗ್ರಹದ ಈ ಬ್ಯಾಂಕ್ ರೂಪೀಕರಣ ಒಳ್ಳೆಯ ಪ್ರಯತ್ನ' ಎನ್ನುತ್ತಾರೆ ಪತ್ರಕರ್ತ ಬಾಲಚಂದ್ರ ಹೆಗಡೆ ಸಾಯಿಮನೆ.
ಪ್ರತಿ ವರುಷ ಮೇಳಗಳು ನಡೆಯುತ್ತವೆ. ಕಸಿ ಗಿಡಗಳತ್ತ ಜನರ ಒಲವು ಹೆಚ್ಚಾಗುತ್ತಿದೆ. ನಮ್ಮ ಮಧ್ಯೆ ಇರುವ ಕಸಿತಜ್ಞರ ಮೂಲಕ ಒಂದಷ್ಟು ಮಂದಿಗೆ ಕಸಿ ಕಟ್ಟುವ ತರಬೇತಿ ನೀಡಿ ಇನ್ನಷ್ಟು ಕಸಿಗಾರರನ್ನು ರಂಗಕ್ಕಿಳೀಸುವ ತುರ್ತು ಇದೆ. ಈ ನಿಟ್ಟಿನಲ್ಲಿ ಕದಂಬ, ನ್ಯಾಶನಲ್ ಹಾರ್ಟಿಕಲ್ಚರ್ ಮಿಶನ್ಗಳು ಯೋಚಿಸಬಹುದೇನೋ?
(ಚಿತ್ರ: ಮಾಹಿತಿ : ಶ್ರೀ ಪಡ್ರೆ)
1 comments:
ಕಸಿ ಗಿಡದೊಂದಿಗೆ, ಹಣ್ಣಿನ ಗುಣ ನೋಡಲು ಮಾದರಿ ಇದ್ದಿದ್ದರೆ ಚೆನ್ನಾಗಿತ್ತು.. ರುಚಿಯಲ್ಲದಿದ್ದರೂ ಸೊಳೆಯ ಗಾತ್ರ, ಬಣ್ಣ, ಸಾಂದ್ರತೆಯ ಅರಿವಾಗುತ್ತಿತ್ತು. ನಾನು ಕೆಲವು ಗಿಡ ಕೊಂಡೆನಾದರೂ ಅದರ ರುಚಿ ನೊಡಲು ೫ ವರ್ಷ ಕಾಯಬೇಕು.. ತಳಿ ಹೆಚ್ಚಿನ ಗಿಡಗಳು ದ.ಕ.ದಿಂದ ಬಂದವು ಎಂಬುದು ಇನ್ನೊಂದು un-official ಮಾತು...
ಹಲಸಿನ ಕಾದ್ಯಗಳ ಪರಿಚಯ ಚೆನ್ನಾಗಿತ್ತು.
Post a Comment