'ಶಿರಂಕಲ್ಲು ದೇವಕಿ ಅಮ್ಮನ ಅಡುಗೆ ಮನೆಯಲ್ಲಿ ವರುಷದ ಮುನ್ನೂರು ದಿವಸವೂ ಅವರು ಬೆಳೆದದ್ದೇ ತರಕಾರಿ. ಅಂಗಡಿಯಿಂದ ತರುವುದಿಲ್ಲ,' ಎಂಬ ಹೊಸ ಸುಳಿವನ್ನು ಮುಳಿಯದ ವಾಣಿ ಶರ್ಮ ನೀಡಿದರು. ಕುತೂಹಲ ಹೆಚ್ಚಾಯಿತು, ಆಸಕ್ತಿ ಕೆರಳಿತು. 'ಬನ್ನಿ, ಬಾಳೆದಿಂಡಿನ ಪಲ್ಯ, ನೀರು ಮಾವಿನ ಗೊಜ್ಜು, ಪಪ್ಪಾಯಿ-ಬಾಳೆ ಕುಂಡಿಗೆಯ ಸಮೋಸ ಮಾಡಿದ್ದೇವೆ' ಎನ್ನುತ್ತಾ ಅವರ ಮಗ ನಾರಾಯಣ ಭಟ್ಟರ ಆಹ್ವಾನ. ತೋಟದ ಉತ್ಪನ್ನಗಳ ಖಾದ್ಯಗಳನ್ನು ಸವಿಯುವ ಅವಕಾಶ.
ಟೊಮೆಟೊ ಸಾರು, ಕ್ಯಾಬೇಜ್ ಪಲ್ಯ, ಆಲೂಗೆಡ್ಡೆ ಸಾಂಬಾರು.. ಇವಿಷ್ಟು ಅಡುಗೆ ಮನೆಗೆ ಬಾರದೆ ಸ್ಟೌ ಉರಿಯದ ಮನೆಗಳು ಎಷ್ಟು ಬೇಕು?! ಇದಕ್ಕಿಂತ ಭಿನ್ನವಾದ ಲೋಕವನ್ನು ಶಿರಂಕಲ್ಲಿನಲ್ಲಿ ನೋಡಿದೆ, ಅನುಭವಿಸಿದೆ. 'ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸೇರುವ ಸಮಾರಂಭವಿದ್ದರೆ ಮಾತ್ರ ಮಾರುಕಟ್ಟೆಯಿಂದ ತರಕಾರಿ ತರುವುದು. ಹಾಗೆ ತರುವಾಗಲೂ ಗೆಡ್ಡೆ, ಸೌತೆ.. ಹೀಗೆ ಹೆಚ್ಚು ರಾಸಾಯನಿಕದಲ್ಲಿ ಮೀಯದ ತರಕಾರಿಯನ್ನು ತರುತ್ತೇವೆ' ಎಂದರು.
ತರಕಾರಿ ಕೃಷಿಕರೊಬ್ಬರಲ್ಲಿಗೆ ಭೇಟಿ ನೀಡಿದ್ದೆ. ತೊಂಡೆ ಕೃಷಿಯಲ್ಲಿ ಅನುಭವಿ. ಮಂಗಳೂರು ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೆ ತೊಂಡೆಕಾಯಿಯನ್ನು ನೀಡುವ ಕೃಷಿಕ. ಮಾತನಾಡುತ್ತಾ ತೊಂಡೆ ಚಪ್ಪರ ಸುತ್ತುತ್ತಾ ಇರುವಾಗ, ಮನೆಯ ಪಕ್ಕ ಸ್ವಲ್ಪ ಜಾಗದಲ್ಲಿ ತೊಂಡೆಯ ಬಳ್ಳಿಯನ್ನು ನೆಟ್ಟಿರುವುದನ್ನು ಕಂಡೆ. 'ಇದು ನಮ್ಮ ಮನೆಯ ಬಳಕೆಗೆ ಮಾತ್ರ' ಎಂದರು ನಗುತ್ತಾ.
ಪ್ರತ್ಯೇಕ ಆರೈಕೆಯ ಮನೆಯ ಬಳಕೆಯ ತೊಂಡೆಗೆ ಯಾವುದೇ ವಿಷ ಸಿಂಪಡಣೆ ಇಲ್ಲ. ಮಾರಾಟ ಮಾಡುವುದಕ್ಕೆ ಮಾತ್ರ ಕೀಟ ನಿಯಂತ್ರಣಕ್ಕಾಗಿ ಔಷಧದ ಹೆಸರಿನ ವಿಷ ಸಿಂಪಡಣೆ. 'ನಾವು ಮಾತ್ರ ಆರೋಗ್ಯದಿಂದಿರಬೇಕು, ಇತರರು ವಿಷ ತಿನ್ನಲಿ, ಬಿಡಲಿ' ಎಂಬ ಮನೋಸ್ಥಿತಿ. ಕಾಲಸ್ಥಿತಿಯೂ ಕೂಡಾ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ತರಕಾರಿಗಳ ಹಿಂದೆ ಅದೆಷ್ಟು ಕರಾಳ ವಿಷ ಕತೆಗಳು!
ತಾಜಾತನಕ್ಕೆ ಮಣೆ
ಶಿರಂಕಲ್ಲು (ದ.ಕ.ಜಿಲ್ಲೆಯ ಕನ್ಯಾನ ಸನಿಹ) ಮನೆಯ ಸದಸ್ಯರಿಗೆ ಮಾರುಕಟ್ಟೆ ತರಕಾರಿಗಳ 'ತಾಜಾತನ' ಗೊತ್ತು. ತಾವೇ ಬೆಳೆದ ತರಕಾರಿಯನ್ನು ತಿನ್ನುವುದು, ಉಣ್ಣುವುದು, ಬಳಕೆ ಮೀರಿದ್ದನ್ನು ಸ್ನೇಹಿತರಿಗೆ ಹಂಚುವುದು ಅವರಿಗೆ ಖುಷಿ. ಅಂಗಳ ತುಂಬಾ ಒಂದಲ್ಲ ಒಂದು ತರಕಾರಿಗಳು. 'ಬೆಳೆದರೆ ಸಾಲದಲ್ಲಾ, ತಿನ್ನಲೂ ಗೊತ್ತಿರಬೇಕು. ಬಹು ಮಂದಿ ತಾವು ಬೆಳೆದುದನ್ನು ತಿನ್ನುವುದಿಲ್ಲ. ಮಾರಾಟ ಮಾಡುತ್ತಾರೆ. ಮನೆ ಉಪಯೋಗಕ್ಕೆ ಪೇಟೆಯಿಂದಲೇ ತರುತ್ತಾರೆ. ಇದೊಂದು ಟ್ರೆಂಡ್, ಪ್ರತಿಷ್ಠೆ'!
ಹೌದಲ್ಲಾ.. ಕೃಷಿಕರೊಬ್ಬರ ತೋಟದಲ್ಲಿ ನಿಂತಿದ್ದೆ. ಬಾಳೆಕಾಯಿ ಕಟಾವ್ ಆಗುತ್ತಿತ್ತು. ಲಾರಿಗೆ ಪೇರಿಸುತ್ತಿದ್ದರು. 'ರೀ.. ನಾಡಿದ್ದೇ ಶನಿವಾರ ನಮ್ಮಲ್ಲಿ ಕಾರ್ಯಕ್ರಮವಲ್ವಾ. ಒಂದೆರಡು ಗೊನೆ ಇರಲಿ' ಮನೆಯೊಡತಿಯ ಬುಲಾವ್. 'ತೊಂದರೆಯಿಲ್ಲ ಬಿಡೇ.. ಸಫಲ್ಯರ ಗೂಡಂಗಡಿಯಿಂದ ಹಣ್ಣು ತಂದರೆ ಆಯಿತು, ಅದಕ್ಕೇನಂತೆ ಗಡಿಬಿಡಿ..' ಯಜಮಾನರ ಉತ್ತರ. ಇದು ಕೃಷಿ ಬದುಕಿನ ತಾಳ-ಮೇಳದ ಒಂದು ಎಳೆ!
'ಬಳಕೆಯ ಬಗ್ಗೆ ಜನರಿಗೆ ಗೊತ್ತಿಲ್ಲ. ಬಳಸಿ ತೋರಿಸಬೇಕು.,' ಮಾತಿನ ಮಧ್ಯೆ ದೇವಕಿ ಅಮ್ಮ ಹೇಳಿದಾಗ ಹನುಮಜೆ ಶ್ರೀಕೃಷ್ಣ ಭಟ್ಟರ ಮನೆಯ ಸಮಾರಂಭವೊಂದರಲ್ಲಿ ಬಡಿಸಿದ ಖಾದ್ಯಗಳು ನೆನಪಾಗಿ ಬಾಯಿರುಚಿ ಹೆಚ್ಚಿಸಿತು. ಅಂದು - ಹಲಸಿನ ಉಪ್ಪುಸೊಳೆ ಮತ್ತು ಬಾಳೆದಿಂಡಿನ ಪಲ್ಯ, ಹತ್ತಾರು ಚಿಗುರುಗಳ ತಂಬುಳಿ, ತೆಂಗಿನಕಾಯಿಯ ಸಾರು, ಮುಂಡಿಗೆಡ್ಡೆಯ ಕಾಯಿಹುಳಿ, ಕೆಸುವಿನ ದಂಟು ಮತ್ತು ಹಲಸಿನ ಬೇಳೆ ಸೇರಿಸಿದ ಪದಾರ್ಥ - ಹೀಗೆ ವಿವಿಧ ಪಾಕೇತನಗಳು. 'ಅಂಗಡಿ ಹತ್ತಿರವೇ ಇದೆ. ಬೇಕಾದ ಹಾಗೆ ತರಬಹುದಿತ್ತು. ನಮ್ಮದೇ ತಾಜಾ ಸಂಪನ್ಮೂಲಗಳನ್ನು ಬಳಸದಿದ್ದರೆ ಅವು ಹಾಳಾಗುವುದಿಲ್ವಾ. ಈ ಅಡುಗೆ ಬಹುತೇಕರಿಗೆ ಇಷ್ಟವಾಗಿದೆ. ಗೇಲಿ ಮಾಡಿದವರೂ ಇದ್ದಾರೆ' ಎನ್ನುತ್ತಾರೆ.
ಸಾವಯವದ ಒಲವು ಹೇಗೆ ಹೆಚ್ಚುತ್ತಿದೆಯೋ, ಜತೆ ಜತೆಗೆ ಖಾದ್ಯಗಳ ತಯಾರಿಯ ಅರಿವೂ ಕೂಡಾ ಆಗಬೇಕಾಗಿದೆ. ತರಕಾರಿಯೋ, ಬೇಳೆಯೋ ಸಾವಯವದಲ್ಲಿ ಸಿಕ್ಕಿತೆನ್ನಿ. ಉಣ್ಣುವ ಅನ್ನವೇ ಸಿಂಪಡಣೆಗಳಿಂದ ತೋಯ್ದರೆ? ಹೀಗೆಂದಾಗ 'ಕ್ರಿಮಿಕೀಟಗಳಿಂದ ರಕ್ಷಿಸಲು ರಾಸಾಯನಿಕ ಸಿಂಪಡಣೆ ಅನಿವಾರ್ಯವಲ್ವಾ' ಎಂಬ ಹತ್ತಾರು ಅಡ್ಡಪ್ರಶ್ನೆಗಳಿಗೆ ಅದರದ್ದೇ ಆದ ಪರಿಹಾರೋಪಾಯಗಳಿವೆ ಬಿಡಿ.
ಕಳೆದ ವರುಷ ಬೆಂಗಳೂರಿನ ಕೃಷಿಮೇಳದ ಸಾವಯವ ಅಕ್ಕಿಯ ಮಳಿಗೆಯೊಂದರಲ್ಲಿದ್ದೆ. ವಯೋವೃದ್ಧ ಮಹಿಳೆಯೊಬ್ಬರು 'ಏ ತಮ್ಮಾ.. ಸಾವಯವ ಅಕ್ಕಿ ಬೇಕಾಗಿತ್ತು. ಡಾಕ್ಟ್ರು ಹೇಳಿದ್ದಾರಪ್ಪಾ.. ಪಾಲಿಶ್ ಮಾಡದ ಅಕ್ಕಿ ಎಲ್ಲಿ ಸಿಗುತ್ತೋ'? ದೂರದ ನೆಲಮಂಗಲದಿಂದ ಅಕ್ಕಿಯನ್ನು ಹುಡುಕುತ್ತಾ ಜಿಕೆವಿಕೆ ಆವರಣಕ್ಕೆ ಬಂದಿದ್ದರು. ಅವರ ಮನೆಯ ಪಕ್ಕ ಅಂಗಡಿ ಇರಲಿಲ್ವೇನು? ಸೂಪರ್ ಬಜಾರ್ ಇಲ್ಲವೇನು? ಎಲ್ಲವೂ ಇದ್ದರೂ ಬದುಕಿಗಾಗಿ, ಆರೋಗ್ಯಕ್ಕಾಗಿ ಅಕ್ಕಿಗೂ ಹುಡುಕಾಟ, ಪರದಾಟ.
ಇರಲಿ, ಪುನಃ ಶಿರಂಕಲ್ಲು ಮನೆಗೆ ಬರೋಣ. ಉಣ್ಣುವ ಅನ್ನವನ್ನು ಇವರೇ ಬೆಳೆಯುತ್ತಾರೆ. ಪಾಲಿಶ್ ಮಾಡದ ಅಕ್ಕಿ! ಮನೆಯೊಳಗೆ ಪೇರಿಸಿಟ್ಟ ಭತ್ತದ ಮೂಟೆಯನ್ನು ತೋರಿಸುವುದು ನಾರಾಯಣ ಭಟ್ಟರಿಗೆ ಹೆಮ್ಮೆಯಾದರೂ, 'ನಾನು ಬೆಳೆದಿದ್ದೇನೆ. ನೀವೂ ಬೆಳೆಯಿರಿ. ಇತರರನ್ನು ಬೆಳೆಯಲು ಪ್ರೋತ್ಸಾಹಿಸಿ' ಎಂಬ ಸಂದೇಶವೂ ಇದೆ.
ಸಾತ್ವಿಕ ಆಹಾರದಿಂದ ಆರೋಗ್ಯ
ಆಹಾರವೇ ಔಷಧ. ಅದನ್ನು ಮನೆ ಆಹಾರದಲ್ಲಿ ಅನುಷ್ಠಾನ ಮಾಡಿದ ಇವರು, ಇತರರ ಆರೋಗ್ಯವೂ ಸುಧಾರಿಸಲಿ ಎಂಬ ದೃಷ್ಟಿಯಿಂದ ಖ್ಯಾತ ಮೂಲಿಕಾ ವೈದ್ಯ ಪಾಣಾಜೆಯ ವೆಂಕಟ್ರಾಮ ದೈತೋಟ, ಜಯಲಕ್ಷ್ಮೀ ವಿ. ದೈತೋಟ ಇವರಿಂದ 'ಸಾತ್ವಿಕ ಆಹಾರದಿಂದ ಆರೋಗ್ಯ' ಎಂಬ ಮಾಹಿತಿ ಕಾರ್ಯಾಗಾರವನ್ನು ಮನೆಯ ಜಗಲಿಯಲ್ಲಿ ನಾರಾಯಣ ಭಟ್ ಆಯೋಜನೆ ಮಾಡಿದ್ದರು. ಸುಮಾರು ಐವತ್ತಕ್ಕೂ ಮಿಕ್ಕಿ ಅಮ್ಮಂದಿರ ಉಪಸ್ಥಿತಿ. ಇಲ್ಲಿನ ಮಾಹಿತಿಗಳು ತಂತಮ್ಮ ಅಡುಗೆ ಮನೆಯಲ್ಲಿ ಸಾಕಾರವಾಗಬೇಕೆಂಬ ಕಾಳಜಿ.
ಅಂದಿನ ಅಡುಗೆಯ ಪಾಕೇತನಗಳನ್ನು ನೋಡಿ. ಎಳೆ ನರಿಕಬ್ಬು ಸೊಪ್ಪು ಮತ್ತು ಹಲಸಿನ ಬೇಳೆ ಸೇರಿಸಿ ಮಾಡಿದ ಪಲ್ಯ, ಕ್ರೋಟಾನ್ ಹರಿವೆಯ ಸಾಸಿವೆ, ಸೊರಳೆ ಸೊಪ್ಪಿನ ತಂಬುಳಿ, ನೀರ್ಪಂತಿ (ನೀರ್ಕಡ್ಡಿ) ಸೊಪ್ಪಿನ ಸಾರು, ದೊಡ್ಡಪತ್ರೆ ಮತ್ತು ಹೆಸರು ಕಾಳಿನ ಗಸಿ, ಪಡುವಲ-ಅಕ್ಕಿತರಿಯ ಪಾಯಸ, ಬಾಳೆದಿಂಡಿನ ಪೋಡಿ (ಬಜ್ಜಿ), ರಾಗಿ ಹಾಲುಬಾಯಿ (ಹಲ್ವದಂತೆ), ಬಾಳೆಹಣ್ಣಿನ ಹಲ್ವ, ನೀರ್ಗುಜ್ಜೆ ಹುಳಿ, ಶುಂಠಿ-ನಿಂಬೆ-ಬೆಲ್ಲದ ಪಾನಕ, ನಿಂಬೆಹುಳಿ-ಅರೆಮಾದಲ ಉಪ್ಪಿನಕಾಯಿ.
ಅರೆ.. ಹೆಸರು ಕೇಳದ ಸೊಪ್ಪುಗಳು! ನನ್ನ ಆಶ್ಚರ್ಯ ನೋಡಿ ವೆಂಕಟ್ರಾಮರೇ ಹೇಳಿದರು - ನರಿಕಬ್ಬು ಸೊಪ್ಪು ಜೀರ್ಣಕ್ರಿಯೆ ಮತ್ತು ಕರುಳು ಶುದ್ದೀಕರಣಕ್ಕೆ, ಕ್ರೋಟಾನ್ ರಕ್ತವರ್ಧಕ, ಸೊರಳೆ ಸೊಪ್ಪಿಗೆ ಸಮಗ್ರ ಅನ್ನನಾಳದ ಉರಿಯನ್ನು ಶಮನಿಸುವ ಗುಣ, ನೀರ್ಕಡ್ಡಿ ಜೀರ್ಣಕಾರಿ, ಯಕೃತ್-ಪ್ಲೀಹ ಸಂಬಂಧಿಗಳಿಗೆ ಸಾಂಬ್ರಾಣಿ..
ಇಷ್ಟೆಲ್ಲಾ ಔಷಧೀಯ ಗುಣಗಳ ಸೊಪ್ಪುಗಳನ್ನು ಮುಂದಿಟ್ಟುಕೊಂಡು ವಯೋವೃದ್ಧ ಶಂಕರ ಭಟ್ಟರು ಅಡುಗೆ ಮನೆಯಿಂದ ಉದ್ಗರಿಸಿದ್ದು ಹೀಗೆ - 'ನನ್ನ ಐವತ್ತಾರು ವರುಷದ ಅಡುಗೆ ಅನುಭವದಲ್ಲಿ ಇಂತಹ ಪದಾರ್ಥಗಳನ್ನು ಮಾಡಿಯೇ ಗೊತ್ತಿಲ್ಲ. ಇದೇ ಪ್ರಥಮ. ಹೊಸ ಅನುಭವ' ಎಂದರು.
ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಹೋಗಿ ಬಂದಾಗ ಮೆಚ್ಚುತ್ತೇವೆ, ಹೊಗಳುತ್ತೇವೆ. ನಮ್ಮ ಮನೆಯಲ್ಲಿ ಅಂತಹ ಖಾದ್ಯಗಳನ್ನು ಮಾಡುವ ಪ್ರಯತ್ನ ಬಿಡಿ, ನೆನಪಾಗುವುದೇ ಇಲ್ಲ. ಮನೆಯ ಹಿತ್ತಿಲಿನ ತರಕಾರಿಗಳು ಕೊಳೆತರೂ 'ಅವರಿಗೆ ಬೇರೆ ಕೆಲಸವಿಲ್ಲ' ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿ ಪೇಟೆಯತ್ತ ಮುಖಮಾಡುತ್ತೇವೆ. ಬರುವಾಗ ಪ್ಲಾಸ್ಟಿಕ್ ಚೀಲ ತುಂಬಾ ಕ್ಯಾಬೇಜ್, ಕ್ಯಾಲಿಫ್ಲವರ್.. ಇತ್ಯಾದಿ ಅಡುಗೆ ಮನೆ ಸೇರುತ್ತದೆ. ಖಾದ್ಯಗಳು ಬಟ್ಟಲಿಗೆ ಬಂದಾಗ 'ಸೂಪರ್' ಎಂದು ತೇಗುತ್ತೇವೆ.
'ಮುಂಬಯಿಯಲ್ಲಿ ಡಬ್ಬಾವಾಲಾಗಳ ವ್ಯಾಪಾರ ಕಡಿಮೆಯಾಗಿದೆ. ಸಿದ್ಧ ಆಹಾರಗಳತ್ತ ಜನರ ಒಲವು ಹೆಚ್ಚಾಗಿದೆ' ವಾರದ ಹಿಂದೆ ಓದಿದ ಸುದ್ದಿ. ಮನೆಆಹಾರ ಕಡಿಮೆಯಾಗಿದೆ ಅಂದರೆ ಕಾಯಿಲೆಗಳ ಆಹ್ವಾನಕ್ಕೆ ನಾಂದಿ ಎಂದರ್ಥ. ದಿನಕ್ಕೊಂದು ಕಾಯಿಲೆಗಳು ವಕ್ಕರಿಸಿಕೊಂಡು ಬರುತ್ತದೆ. ಆಹಾರದ ಬದಲಾವಣೆ ಕಾಲದ ಅನಿವಾರ್ಯತೆ. ಆಹಾರದಲ್ಲೇ ಔಷಧಿಯಿದೆ. ಪ್ರತ್ಯೇಕ ಗುಳಿಗೆ, ಟಾನಿಕ್ಗಳು ಬೇಕಾಗಿಲ್ಲ. ಆಹಾರವನ್ನು ಕಡೆಗಣಿಸಿದರೆ ಜೀವನಪೂರ್ತಿ ಗುಳಿಗೆ, ಟಾನಿಕ್ಗಳನ್ನು ಬಿಟ್ಟಿರಲು ಸಾಧ್ಯವೂ ಇಲ್ಲ' ಎಂದು ಎಚ್ಚರಿಸುತ್ತಾರೆ ವೆಂಕಟ್ರಾಮ.