Sunday, September 30, 2012

'ಶಂಕರ್ ಸಾರಡ್ಕ'ರೀಗ ಮುಖ್ಯ ಗುರು

                 1990. ಅಡಿಕೆ ಪತ್ರಿಕೆಗೆ ಎಂಟ್ರಿ ನೀಡಿದ ಸಮಯ. ಪತ್ರಿಕೋದ್ಯಮದ ಸುಳಿವಿಲ್ಲದ ಬದುಕು. ಜನತಾವಾಣಿ ಅಂಕಣಕ್ಕೆ ಚಿಕ್ಕ ಬರೆಹಗಳನ್ನು ಬರೆಯುವುದು, ಪ್ರಕಟಣಾ ನಂತರ ಸ್ನೇಹಿತರಿಗೆ ತೋರಿಸುವುದು, ಕಟ್ಟಿಂಗ್ ತೆಗೆದಿಡುವುದು.. ಇಂತಹ ಹವ್ಯಾಸಗಳು ಹೆಜ್ಜೆಯೂರುತ್ತಿದ್ದುವಷ್ಟೇ.

                  ಆ ಹೊತ್ತಲ್ಲಿ ಅಡಿಕೆ ಪತ್ರಿಕೆಯ ವತಿಯಿಂದ ಕೊಪ್ಪದಲ್ಲಿ ಕೃಷಿ ಪತ್ರಿಕೋದ್ಯಮ ಶಿಬಿರ. ನಾನೂ ಭಾಗಿ. ಈಶ್ವರ ದೈತೋಟ, ಶ್ರೀ ಪಡ್ರೆ, ಶಂಪಾ ದೈತೋಟ, ಶಂಕರ್ ಸಾರಡ್ಕ, ಡಾ.ಶಿವರಾಂ ಪೈಲೂರು.. ಹೀಗೆ ದಿಗ್ಗಜರ 'ಗುರು'ದಂಡು. ಫೋಟೋಗ್ರಫಿ ಸೆಶನಿಗೆ ಸಾರಡ್ಕರ ಸಾರಥ್ಯ. ಕ್ಯಾಮರಾ ಹಿಡಿಯುವಲ್ಲಿಂದ ಫೋಟೋ ಡೆವಲಪ್ ಮಾಡುವಲ್ಲಿಯ ತನಕದ ವಿವಿಧ ಹಂತದ ನಿರೂಪಣೆ. ಫೋಟೋಗ್ರಫಿಯಲ್ಲಿ 'ಹೀಗೂ ಉಂಟೇ' ಎನ್ನುವ ಅರಿವಾಗಿತ್ತು. ಅಷ್ಟರಲ್ಲಿ ನನ್ನೊಳಗೆ ಸಾರಡ್ಕರು ಆವರಿಸಿದ್ದರು.

                  ಮುಂದಿನ ದಿನಗಳಲ್ಲಿ ಅಡಿಕೆ ಪತ್ರಿಕೆಯು 'ಫಾರ್ಮರ್ ಫಸ್ಟ್ ಟ್ರಸ್ಟ್' ಒಡೆತನಕ್ಕೆ ಬಂದಾಗ ಸಾರಡ್ಕರು ಟ್ರಸ್ಟಿನ ಕಾರ್ಯದರ್ಶಿಯಾದರು. ಅಲ್ಲಿಂದ ನಮ್ಮ ಒಡನಾಟ ಹತ್ತಿರವಾಯಿತು. ಮಾತಿಗೆ ಸಿಕ್ಕಾಗಲೆಲ್ಲಾ ಪತ್ರಿಕೋದ್ಯಮ, ಲೇಖನ, ಪತ್ರಿಕಾ ಕಚೇರಿಗಳ ಸುತ್ತ ಮಾತುಕತೆ. 'ಯಾವ ಲೇಖನ ಬರೆದ್ರಿ' ಎನ್ನುತ್ತಾ ಮಾತಿಗೆಳೆಯುತ್ತಿದ್ದರು.

                  ಕಚೇರಿ ಕೆಲಸಗಳ ಕುರಿತು ಸಾರಡ್ಕರ ಮೆಚ್ಚುಗೆಯನ್ನು ನಾನು ಉಲ್ಲೇಖಿಸಲೇ ಬೇಕು. ಕಚೇರಿಯ ಕೆಲಸ ಕಾರ್ಯಗಳ ಸ್ಪಷ್ಟ ಅರಿವಿದ್ದ ಅವರಿಗೆ ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹೊರೆ ಎಂಬುದು ಗೊತ್ತಿತ್ತು. ಎಷ್ಟೋ ಸಲ ಬೆನ್ನುತಟ್ಟಿದ್ದರು. ನನ್ನ ಲೇಖನಗಳು ಪ್ರಕಟಗೊಂಡಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. 'ಹಾಗಲ್ಲ, ಹೀಗೆ' ಎಂದು ತಿದ್ದಿದುಂಟು. ವೈಯಕ್ತಿಕ ಬೆಳವಣಿಗೆಗೆ ಪ್ರಾಂಜಲ ಮನಸ್ಸಿನಿಂದ ಹಾರೈಸಿದ ಗುರು ಸಮಾನ ಶಂಕರ ಸಾರಡ್ಕರು ತಮ್ಮ ವೃತ್ತಿಯಲ್ಲಿ ದೊಡ್ಡ ಹೆಜ್ಜೆಯಿರಿಸಿ ಈಗ 'ಮುಖ್ಯ ಗುರು'ವಿನ ಪಟ್ಟ ಅಲಂಕರಿಸಿರುವುದು ಹೆಮ್ಮೆಯ ವಿಚಾರ.

                 ಕಾಸರಗೋಡು ಜಿಲ್ಲೆ ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಇಪ್ಪತ್ತೆಂಟು ವರುಷ ಗಣಿತ ಮತ್ತು ಆಂಗ್ಲ ಭಾಷಾ ಅಧ್ಯಾಪಕರಾಗಿ ಸೇವೆ. ಇದರಲ್ಲಿ ಹತ್ತು ವರುಷ ಕಂಪ್ಯೂಟರ್ ಕೋರ್ಡಿನೇಟರ್ ಮತ್ತು ಶಿಕ್ಷಕರಾಗಿ ಹತ್ತು ವರುಷ. ಎರಡು ವರುಷ ಡೆಪ್ಯುಟಿ ಮುಖ್ಯೋಪಾಧ್ಯಾಯರು. ಈಗ ಮುಖ್ಯಗುರುವಾಗಿ ಭಡ್ತಿ. ಶಾಲೆಯಲ್ಲಿ ಒಂದು ಸಾವಿರ ಏಳುನೂರು ವಿದ್ಯಾರ್ಥಿಗಳು. ಅರುವತ್ತೈದು ಮಂದಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು. ಕನ್ನಡ, ಮಲೆಯಾಳ ಮತ್ತು ಆಂಗ್ಲ ಭಾಷಾ ಮಾಧ್ಯಮವನ್ನು ಹೊಂದಿದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಿದು.

                ಕೇಂದ್ರ ಸರಕಾರದ ನವದೆಹಲಿಯ ಸಿಸಿಆರ್ಟಿಯಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಶಾಲೆಯಲ್ಲಿ ನಡೆಸಿದ ವಿಶೇಷ ಪಠ್ಯೇತರ ಚಟುವಟಿಕೆಗಳಿಗಾಗಿ 1991ರಲ್ಲಿ ಸಿಸಿಆರ್ಟಿ ರಾಷ್ಟ್ರ ಮಟ್ಟದ ಪ್ರಶಸ್ತಿ. ಸಿಸಿಆರ್ಟಿ ಗುರುತಿಸಿ ಮಾನ್ಯತೆ ನೀಡಿದ ಕೇರಳ ರಾಜ್ಯದ ಏಕೈಕ ತರಬೇತುದಾರ. ಕೇರಳ ಜೇಸೀಸ್ ತರಬೇತುದಾರರೂ ಆಗಿದ್ದರು.
  
                 ಸಾರಡ್ಕರು ಉತ್ತಮ ಲೇಖಕ, ಪತ್ರಕರ್ತ ಛಾಯಾಗ್ರಾಹಕ, ಕೃಷಿಕ, ಪ್ರಾಣಿಕ್ ಹೀಲಿಂಗ್ ಮತ್ತು ರೇಖಿ ತಜ್ಞರು, ವಾಗ್ಮಿ, ಯಕ್ಷಗಾನ ಅರ್ಥಧಾರಿ. ನೂರಾರು ಲೇಖನಗಳು ಕನ್ನಡ, ಆಂಗ್ಲ ಮತ್ತು ಮಲಯಾಳಂ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಸಾಮಾಜಿಕ ಕಾಳಜಿಯಿಂದ ಬರೆದ ಸಮಸ್ಯೆಗಳ ಚಿತ್ರಣ ಸಮಸ್ಯೆಗಳನ್ನು ಬಗೆಹರಿಸಿ ಫಲ ನೀಡಿದ ಉದಾಹರಣೆ ಸಾಕಷ್ಟಿವೆ. ಇವರ ಫೋಟೋಗಳು ಪ್ರಶಸ್ತಿ ಮತ್ತು ಪ್ರದರ್ಶನಗಳನ್ನು ಕಂಡಿವೆ.

Wednesday, September 26, 2012

'ನಿರ್ವಿಷ ತರಕಾರಿ'ಯ ಸುತ್ತ...


           ತೊಂಡೆಕಾಯಿ ಕೃಷಿ ಮಾಡುವ ರೈತರಲ್ಲಿಗೆ ಭೇಟಿ ನೀಡಿದ್ದೆ. ಹುಲುಸಾದ ಗಿಡಗಳು. ಬರೋಬ್ಬರಿ ಫಸಲು. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ. ಆಶಾದಾಯಕ ದರ.
          'ಸಾರ್, ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಣೆ ಆಗಾಗ್ಗೆ ಬೇಕಾಗುತ್ತೆ. ಅದಿಲ್ಲದೆ ಬೆಳೆಯಲು ಅಸಾಧ್ಯವಾಗಿದೆ. ಇವೆಲ್ಲಾ ಮಾರುಕಟ್ಟೆ ದೃಷ್ಟಿಯಿಂದ ಬೆಳೆಯುವಂತಾದ್ದು. ಮನೆ ಬಳಕೆಗಾಗಿ ರಾಸಾಯನಿಕ ಬಳಸದೆ ಬೆಳೆಯುತ್ತಿದ್ದೇವೆ,' ಎಂದರು.
          ಮನೆಬಳಕೆಗೆ ನಿರ್ವಿಷ ತರಕಾರಿ. ಮಾರುಕಟ್ಟೆಗಾಗಿ ಬೆಳೆಯುವುದಕ್ಕೆ ವಿಷ ಸ್ನಾನ. ಇದಕ್ಕೆ 'ಅನಿವಾರ್ಯ'ದ ಸಮರ್ಥನೆ. ಮಾರುಕಟ್ಟೆಯಿಂದ ಒಯ್ಯುವವರು ಮನುಷ್ಯರು ತಾನೆ? ತಾನು ಬದುಕಬೇಕು, ಉಳಿದವರು ಏನಾದರೆ ಏನಂತೆ!
          ಬಹುತೇಕ ಹೊಲಗಳಲ್ಲಿ ಇಂತಹ ದ್ವಂದ್ವಗಳು ನಿರಂತರ. ವರುಷದ ಹಿಂದೆ ರಾಜಧಾನಿಯ ಸನಿಹ ಟೊಮೆಟೋ ಹೊಲಕ್ಕೆ ಹೋದಾಗಲೂ ಇಂತಹುದೇ ಅನುಭವ. ಮಾರುಕಟ್ಟೆಗಾಗಿ ಬೆಳೆದ ತರಕಾರಿಯನ್ನು ತಾನ್ಯಾಕೆ ತಿನ್ನುತ್ತಿಲ್ಲ? ತನ್ನ ಮನೆಯವರು ಯಾಕೆ ಬಳಸುತ್ತಿಲ್ಲ? ಬಂಧುಗಳಿಗೆ ಯಾಕೆ ನೀಡುತ್ತಿಲ್ಲ. ಅವನಿಗೆ ಗೊತ್ತಿದೆ, ಈ ತರಕಾರಿಗಳು ವಿಷದಲ್ಲಿ ಮಿಂದಿವೆ!
          ಪುತ್ತೂರು ಮಾರುಕಟ್ಟೆಗೊಮ್ಮೆ ಎಳೆಯ ಮುಳ್ಳುಸೌತೆ ಬಂದಿತ್ತು. ದುಬಾರಿ ದರ. ಬಾಯಿ ರುಚಿ ಅಧಿಕವಾಗಿ ಖರೀದಿಸಿದೆ. ಮಿತಿಗಿಂತ ಹೆಚ್ಚೇ ಹೊಟ್ಟೆ ಸೇರಿತ್ತು. ಒಂದರ್ಧ ಗಂಟೆ ಕಳೆದಿರಬಹುದಷ್ಟೇ. ನಾಲಗೆಯೆಲ್ಲಾ ದಪ್ಪ ದಪ್ಪ! ರಸಗ್ರಂಥಿಗಳು ಮುಷ್ಕರ ಹೂಡಿದ್ದುವು! ಸರಿಹೋಗಲು ಮೂರ್ನಾಲ್ಕು ದಿವಸಗಳು ಬೇಕಾಯಿತು. ಇನ್ನೊಮ್ಮೆ ಎಳೆ ಜೋಳ ತಿಂದಾಗಲೂ ಇಂತಹುದೇ ಅನುಭವ. ವೈದ್ಯರನ್ನು ಸಂಪರ್ಕಿಸಿ ವಿವರ ತಿಳಿಸಿದಾಗ 'ಇವೆಲ್ಲವೂ ಸಿಂಪಡಣೆಗಳ ಕಾರುಬಾರು' ಎಂದು ನಕ್ಕರು.
          ಹಲವು ಸಿಂಪಡಣೆಗಳಿಂದ ತೋಯ್ದ ತರಕಾರಿಗಳನ್ನು ಗೊತ್ತಿದ್ದೂ ಖರೀದಿಸುತ್ತೇವೆ. ಗೊತ್ತಿಲ್ಲದೆಯೂ ಹೊಟ್ಟೆ ಸೇರುತ್ತದೆ. ವಿಷ ಸಿಂಪಡಣೆಯ ಗಾಢತೆಯ ಅರಿವು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾಗುವಾಗ ಹೊತ್ತು ಮೀರಿರುತ್ತದೆ! 'ಕೀಟನಾಶಕ ಸಿಂಪಡಿಸದೆ ತರಕಾರಿ ಬೆಳೆಯುವುದಾದರೂ ಹೇಗೆ?', 'ರಾಸಾಯನಿಕ ಗೊಬ್ಬರ ಉಣಿಸದೆ ಗಿಡ ಬದುಕುವುದಾದರೂ ಹೇಗೆ' ಎಂಬ ಪ್ರಶ್ನೆಗಳು ಬಹುತೇಕ 'ವೈಭವ' ಪಡೆಯುವುದು ಹೆಚ್ಚು. 'ಇದಕ್ಕೆ ಬದಲಿ ಮಾರ್ಗವೇ ಇಲ್ಲ' ಎಂದು ಗೊಬ್ಬರ, ವಿಷವನ್ನು ಪೂರೈಸುವ ಅಂಗಡಿಗಳೂ ಉಪದೇಶಿಸುತ್ತವೆ.
          ಕೃಷಿಕನಿಗೆ ಪರ್ಯಾಯ ದಾರಿ ಕಾಣದು. ಹೆಚ್ಚು ಇಳುವರಿ ಬಂದರೆ ಅಧಿಕ ಲಾಭ. ಲಾಭ ಬಾರದಿದ್ದರೆ ಕುಟುಂಬದ ನಿರ್ವಹಣೆ ತ್ರಾಸ. ವಿಷ ಕಂಪೆನಿಗಳು ಹೇಳಿದಂತೆ, ಅದನ್ನು ಮಾರುವ ಕಂಪೆನಿಗಳ ನಿರೂಪದಂತೆ ಕೃಷಿ ಮಾಡುತ್ತಾನೆ, ಬೇಕೋ ಬೇಡ್ವೋ ಸಿಂಪಡಣೆ ಮಾಡುತ್ತಾ ಇರುತ್ತಾನೆ. ಆರೋಗ್ಯದ ಕುರಿತು ಮಾತನಾಡಿದರೆ ಇವರ್ಯಾರಲ್ಲೂ ಉತ್ತರವಿರುವುದಿಲ್ಲ.
            ವಿಷದಲ್ಲಿ ಮಿಂದ ತರಕಾರಿಗಳು ನಗರ ಪ್ರವೇಶಿಸುತ್ತವೆ. ಅಡುಗೆ ಮನೆ ಹೊಕ್ಕುತ್ತವೆ. ವಿವಿಧ ರೂಪದಲ್ಲಿ ಉದರಕ್ಕಿಳಿಯುತ್ತವೆ. ಒಂದು ದಿವಸವಾದರೆ ಓಕೆ, ನಿರಂತರ ಈ ಪ್ರಕ್ರಿಯೆ ನಡೆಯುತ್ತಾ ಇದ್ದರೆ? 'ತರಕಾರಿಗೆ ಸಿಂಪಡಣೆ ಮಾಡಿದ್ದರಿಂದ ಏನೂ ತೊಂದ್ರೆಯಿಲ್ಲ. ಆರೋಗ್ಯಕ್ಕೂ ಹಾನಿಯಿಲ್ಲ' ಎನ್ನುವ ಕಂಪೆನಿ ಪ್ರಣೀತ ಮಾತುಗಳು ವಿವಿಧ ರೂಪಗಳಲ್ಲಿ ಬಿತ್ತರವಾಗುತ್ತಲೇ ಇರುತ್ತವೆ.
             'ತರಕಾರಿ ಕೃಷಿ ಮಾಡಲು ಸಿಂಪಡಣೆ ಅನಿವಾರ್ಯ' ಎಂದು ವೇದಿಕೆಯಲ್ಲಿ ಉಚ್ಛಸ್ವರದಲ್ಲಿ ಹೇಳುವ ನಾವು ಎಂದಾದರೂ ವಿಷ ರಹಿತವಾಗಿ ತರಕಾರಿ ಬೆಳೆಯಲು ಪ್ರಯತ್ನಿಸಿದ್ದೇವೆಯಾ? ವಿಷ ರಹಿತವಾಗಿ ಬೆಳೆದ ರೈತನ ತೋಟವನ್ನು ಸಂದರ್ಶನ ಮಾಡಿದುದಿದೆಯೋ? ಕೀಟನಾಶಕಕ್ಕೆ ಪರ್ಯಾಯವಾಗಿ ಏನು ಸಿಂಪಡಿಸಿರಬಹುದು ಎಂಬ ಪ್ರಶ್ನೆಗಳು ಮನದೊಳಗೆ ಎಂದಾದರೂ ಮೂಡಿವೆಯೇ? ಇಲ್ಲವೇ ಇಲ್ಲ. ಬರೇ ಹೇಳಿಕೆಗಳು ಮಾನಸಿಕವಾದ ಸ್ಥಿತಿಗಳನ್ನು ಅಲ್ಲಾಡಿಸಬಹುದಷ್ಟೇ.
                 ಸಿಂಪಡಣೆಯ ಹೊರತಾಗಿ ಪರ್ಯಾಯ ದಾರಿಗಳನ್ನು ತಾವೇ ರೂಪಿಸಿಕೊಂಡು 'ನಿರ್ವಿಷ ತರಕಾರಿ'ಯನ್ನು ಬೆಳೆಯುವ ಕೃಷಿಕರು ಸಾಕಷ್ಟು ಮಂದಿ ಇದ್ದಾರೆ. ಅವರೆಂದೂ ಸದ್ದು ಮಾಡುವುದಿಲ್ಲ. ಮನೆ ಮಟ್ಟಕ್ಕೆ ಮಾತ್ರವಲ್ಲದೆ, ಮಾರುಕಟ್ಟೆ ಮಾಡುವಲ್ಲೂ ಯಶಸ್ವಿಯಾದವರಿದ್ದಾರೆ. ಇಂತಹ ಸಮಾನ ಆಸಕ್ತಿಯ ತರಕಾರಿ ಕೃಷಿಕರನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಬಂಟ್ವಾಳ (ದ.ಕ.) ತಾಲೂಕಿನ ಉಬರು ಕೇಪು 'ಹಲಸು ಸ್ನೇಹಿ ಕೂಟ' ಹೆಜ್ಜೆಯಿಟ್ಟಿದೆ. ಮಾರುಕಟ್ಟೆಯನ್ನು ಅವಲಂಬಿಸದೆ ವರುಷ ಪೂರ್ತಿ ತಾವೆ ತರಕಾರಿ ಬೆಳೆಯುವ ರೈತರಿಗೆ ಆದ್ಯತೆ ನೀಡಿದೆ. ಒಬ್ಬ ಕೃಷಿಕನ 'ಕೆಣಿ' (ಉಪಾಯ) ಇನ್ನೊಬ್ಬನಿಗೆ ಜ್ಞಾನವಾಗುತ್ತದೆ. ಇಂತಹ ಹಲವು ಜ್ಞಾನವನ್ನು ರೈತರಿಗೆ ಹಂಚುವ ಕೆಲಸವನ್ನು ಹಲಸು ಸ್ನೇಹಿ ಕೂಟ ಮಾಡುತ್ತಿದೆ.
              ಅಕ್ಟೋಬರ್ 6ರಂದು ಬಂಟ್ವಾಳ ತಾಲೂಕಿನ ಪುಣಚ ಮಲ್ಯ ಶಂಕರನಾರಾಯಣ ಭಟ್ಟರ ಮನೆಯಂಗಳದಲ್ಲಿ 'ವರುಷ ಪೂರ್ತಿ ತರಕಾರಿ' ಮಾತುಕತೆ ಕಾರ್ಯಕ್ರಮ ನಡೆಯಲಿದೆ. ವ್ಯವಸ್ಥೆಯ ದೃಷ್ಟಿಯಿಂದ ಆಸಕ್ತರು ಫೋನಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
 (9448953700, 94802 00832) 

ಆರೈಕೆ ಬೇಡದ 'ಕೆಸು'




           ವಾರದ ಹಿಂದೆ ಜಪಾನ್ ಮೂಲದ ಆಂಗ್ಲ ವಾಹಿನಿಯೊಂದರಲ್ಲಿ ಅಡುಗೆಯ ಸಮಯ. ಕನ್ನಾಡಿನ ವಾಹಿನಿಗಳ ಅಡುಗೆ ಕಾರ್ಯಕ್ರಮದಂತೆ ಢಾಳುಢಾಳಲ್ಲ. ಅತಿ ಮಾತಿಗಿಂತ ಕೃತಿಗೆ, ವಿಚಾರಕ್ಕೆ ಒತ್ತು. ಒಂದೊಂದು ತರಕಾರಿಯ ಖಾದ್ಯಗಳಿಗೆ ಪ್ರತ್ಯಪತ್ಯೇಕವಾದ 'ಮಿನಿ  ಹೋಟೆಲು'ಗಳು ಪ್ರಿಯವಾಯಿತು.
          ಕೆಸುವಿನ ಖಾದ್ಯಗಳು ಮಾತ್ರ ಲಭ್ಯವಾಗುವ ಹೋಟೆಲಿನ ಖಾದ್ಯವೊಂದರ ಪ್ರಸಾರ. ಒಬ್ಬರು ನಿರ್ವಾಹಕಿ. ಮತ್ತೊಬ್ಬರು ಅಡುಗೆ ಸ್ಪೆಷಲಿಸ್ಟ್. ಕೆಸುವಿನ ಕೃಷಿಯಿಂದ ತೊಡಗಿ ಮೌಲ್ಯವರ್ಧನೆಯ ವಿವಿಧ ಮಜಲುಗಳ ವಿಚಾರಗಳು ಮಾತುಕತೆಯಲ್ಲಿ ಸಂಪನ್ನವಾಗಿತ್ತು.
             ಅಂದು ಕೆಸುವಿನದ್ದೇ ವಿಶೇಷ ಖಾದ್ಯ. ಆರಂಭಕ್ಕೆ ಕೆಸುವಿನ ಪೂರ್ತಿ ಗಿಡದ ಪ್ರದರ್ಶನ. ಗೆಡ್ಡೆ ಬೇರ್ಪಡಿಸಿ ಮಾರಾಟ. ಪ್ರತ್ಯೇಕ ಅಕರ್ಷಕ ಪ್ಯಾಕಿಂಗ್. ಉದ್ದನೆಯ ದಂಟನ್ನು ಎರಡು ತುಂಡು ಮಾಡಿದ್ದರು. ಮೇಲಿನ ಸಿಪ್ಪೆಯನ್ನು ದಾರದಂತೆ ಎಬ್ಬಿಸಿದರು. ಮಲ್ಲಿಗೆ ನೇಯ್ದಂತೆ ದಾರದಿಂದ ಹತ್ತು ದಂಟುಗಳನ್ನು ಹೆಣೆದು ನೇಯ್ಗೆ! ಇಂತಹ ಹತ್ತಾರು ಸೆಟ್ಗಳನ್ನು ತೂಗು ಹಾಕಿದ್ದರು. ತುಂಬಾ ಅಕರ್ಷಕ. ಉತ್ತಮ ನೋಟ. ಜನರನ್ನು ಸೆಳೆಯುವ ಜಾಣ್ಮೆ.
               ಕೆಸುವಿನ ದಂಟುಗಳನ್ನು ಒಂದಿಂಚಿನಷ್ಟು ಚಿಕ್ಕದಾಗಿ ತುಂಡು ಮಾಡಿದ್ದರು. ಬಾಣಲೆಯಲ್ಲಿ ಇದನ್ನು ಫ್ರೈ ಮಾಡಿ ತಿನ್ನಲು ನೀಡುತ್ತಿದ್ದರು. ಇದರಂತೆಯೇ ಇನ್ನೊಂದು ಖಾದ್ಯ - ಕೆಸುವಿನ ಸಾಸ್. ಇದರಲ್ಲಿ ಬ್ರೆಡ್ಡನ್ನು ಮುಳುಗಿಸಿ ತಿನ್ನುವುದು ಅಲ್ಲಿನವರಿಗೆ ಇಷ್ಟ. ಪ್ರತಿ ದಿವಸ ಕೆಸುವಿನದ್ದೇ ಬೇರೆ ಬೇರೆ ಅಡುಗೆಗಳು.
              ಬದನೆಯದ್ದೇ ಆದ ಹೋಟೆಲ್ ಮತ್ತೊಂದು. ಹೋಟೆಲಿನ ಎದುರು ಬದನೆ ಕಾಯಿಯ ಗಿಡಗಳನ್ನು ನಾಟಿ ಮಾಡಿದ್ದರು. ಅವೆಲ್ಲಾ ಇಳುವರಿ ನೀಡಲು ಸಜ್ಜಾಗಿದ್ದುವು. ಚಿಕ್ಕ ಗಾತ್ರದ ಬದನೆಯ ಕಾಯಿಗಳನ್ನು ತೂಗು ಹಾಕಿದ್ದರು. ಜನರನ್ನು ಸೆಳೆಯಲು ಮಾಡುವ ತಂತ್ರದ ಹಿಂದೆ ತರಕಾರಿಯನ್ನು ಬಳಸುವ ಪರೋಕ್ಷ ಸಂದೇಶವಿಲ್ವಾ.
ಕೆಸು - ಹೆಚ್ಚು ಆರೈಕೆ ಬೇಡದ ಕೃಷಿ. ಮಳೆ ಆರಂಭವಾಗುವಾಗ ಬೀಜ ಪ್ರದಾನ ಮಾಡಿದರೆ ದಶಂಬರಕ್ಕೆ ಗೆಡ್ಡೆ ರೆಡಿ. ಈ ಮಧ್ಯೆ ಅದರ ಎಲೆ, ದಂಟುಗಳು ಅಡುಗೆ ಮನೆ ಹೊಕ್ಕುತ್ತವೆ. 
             ಕೆಸುವಿನ ಪತ್ರೊಡೆ ಕರಾವಳಿಯಲ್ಲಿ ಮನೆಮಾತು. ಆಟಿ ತಿಂಗಳ ಪಾರಂಪರಿಕ ತಿಂಡಿ. ಹಳ್ಳಿ ಪ್ರದೇಶದಲ್ಲಿ ಈಗಲೂ ಪತ್ರೊಡೆಯ ಕಾರುಬಾರು ಯಥೇಷ್ಟ. ನಿತ್ಯ ಬಳಕೆಯಲ್ಲದೆ, ನೆಂಟರು ಬಂದಾಗ, ಚಿಕ್ಕ ಸಮಾರಂಭಗಳಿದ್ದರೆ ಪತ್ರೊಡೆಯ ಒಂದು ಐಟಂ ಖಾಯಂ.
              ನಗರದಲ್ಲಿ ಈಚೀಚೆಗೆ 'ಆಟಿ ಹಬ್ಬ' ಆಚರಿಸುತ್ತಿದ್ದಾರೆ. ಈ ಹಬ್ಬದಲ್ಲಿ ಪ್ರಧಾನಾಂಗ - ಪತ್ರೊಡೆ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ಬೆಳೆದ ಮಗುವಿಗೆ ಪತ್ರೊಡೆಯನ್ನು ಹಬ್ಬದಲ್ಲಾದರೂ ತೋರಿಸುವ ಯೋಗ! ಕೆಲವು ಹೋಟೆಲುಗಳಲ್ಲಿ ಪತ್ರೊಡೆ ಲಭ್ಯ.
              ನಮ್ಮ ಸಮಾರಂಭಗಳ ಅಡುಗೆ ಮೆನುವಿನಲ್ಲಿ ಕೆಸುವಿನ ಬಳಕೆ ಅಷ್ಟಕ್ಕಷ್ಟೆ. ಕೆಸುವನ್ನು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವ ಪರಿಪಾಠ ಕಡಿಮೆ. ಏನಿದ್ದರೂ ಮನೆಮಟ್ಟದ ಬಳಕೆಗಾಗಿ  ಮಾತ್ರ ಬೆಳೆಸುತ್ತಾರೆ. 
ಕೆಸುವಿನ ದಂಟಿನ ಪಲ್ಯ, ಬೋಳುಹುಳಿ, ಸಾಂಬಾರು, ಕಾಯಿಹುಳಿಗಳ ಸವಿ ಒಮ್ಮೆ ಸಿಕ್ಕರೆ ಸಾಕು, ಮತ್ತೆಂದೂ ತಪ್ಪಿಸಿಕೊಳ್ಳುವಂತಿಲ್ಲ! ಕೆಸುವಿನ ದಂಟಿನ ಪದಾರ್ಥದ ಜತೆ ಹಲಸಿನ ಬೀಜ ಅಥವಾ ಅಂಬಟೆ ಒಳ್ಳೆಯ ಕಾಂಬಿನೇಶನ್.  ಸಾರಸ್ವತ ಬ್ರಾಹ್ಮಣರ ಊಟದ ಬಟ್ಟಲಿನಲ್ಲಿ ಕೆಸುವಿಗೆ ಪತ್ಯೇಕ ಸ್ಥಾನ. ಮಾರುಕಟ್ಟೆಯಲ್ಲಿ ಅವರೇ ದೊಡ್ಡ ಗ್ರಾಹಕರು. ಗಣೇಶ ಚತುರ್ಥಿಯ ಹಬ್ಬದಂದು ಕೆಸುವಿಲ್ಲದೆ ಆಚರಣೆಯಿಲ್ಲ.
              ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ನವಾನ್ನ' (ಹೊಸ ಅಕ್ಕಿ ಊಟ, ಪುದ್ವಾರ್) ಆಚರಣೆ ಪಾರಂಪರಿಕ. ನವಾನ್ನವೆಂದರೆ ಭತ್ತದ ಹೊಸ ತೆನೆಯನ್ನು ಮನೆಯೊಳಗೆ ಸ್ವಾಗತಿಸುವುದು. ಆಚರಣೆಯಲ್ಲಿ ಹಲವು ವೈವಿಧ್ಯಗಳು. ಈ ದಿವಸ ಹರಿವೆ ಮತ್ತು ಕರಿ ಕೆಸುವಿನ (ಕೆಲವೆಡೆ ಬಿಳಿ ಕೆಸು) ಖಾದ್ಯಕ್ಕೆ ಮೊದಲ ಮಣೆ.
             ಮಡಿಕೇರಿಯ ಕೃಷಿಕ ಇಂಜಿನಿಯರ್ ಕೊಡಗಿನಲ್ಲಿ ಮೂವತ್ತಕ್ಕೂ ಮಿಕ್ಕಿ ಕೆಸುವಿನ ವೆರೈಟಿಗಳನ್ನು ಗುರುತು ಹಾಕಿಕೊಂಡಿದ್ದಾರೆ. ಕರಾವಳಿಯಲ್ಲಿ ಸಾಕಷ್ಟು ತಳಿಗಳಿವೆ. ಆದರೆ ಬಳಕೆಗೆ ಕೆಲವೇ ತಳಿಗಳು. ಬಿಳಿ ಕೆಸು, ಚಳ್ಳಿ ಕೆಸು, ಮುಂಡಿ ಕೆಸು, ಕರಿ ಮುಂಡಿ.. ಹೀಗೆ.
             ಕೆಸುವಿನಲ್ಲಿ ಕೆಲವದಕ್ಕೆ ತುರಿಸುವ ಗುಣ. ಬಹುತೇಕರು ಎಲ್ಲಾ ಕೆಸುವಿಗೂ ತುರಿಕೆಯ ಗುಣವನ್ನು ಆರೋಪಿಸುವುದುಂಟು. ಇದರಿಂದಾಗಿ ಬಳಕೆಗೆ ಹಿಂದೇಟು ಹಾಕುವವರು ಅಧಿಕ. 'ತುರಿಸುವ ಕೆಸುವಿನ ದಂಟನ್ನು ಹುಣಸೆ ಹುಳಿಯ ನೀರಿನಲ್ಲಿ ನೆನೆಸಿ, ಬಳಿಕ ಬಿಸಿಲಿನಲ್ಲಿ ಒಣಗಿಸಿದರೆ ತುರಿಕೆ ಮಾಯ' ಎನ್ನುತ್ತಾರೆ ವಿಟ್ಲ ಕೊಡಂಗಾಯಿಯ ಗೃಹಿಣಿ ಮೀನಾಕ್ಷಿ ಮಯ್ಯ.

Monday, September 17, 2012

ಮುನ್ನೂರು ತಳಿಗಳ ಭತ್ತದ ತಿಜೋರಿ!

              ಬದುಕಿಗೆ ಪೂರಕವಾದ ಭತ್ತದ ಕೃಷಿಸಂಸ್ಕೃತಿ ಸನಾತನವಾದುದು. ಮಳೆಹೊಯ್ಯುವ ಪೂರ್ವದಲ್ಲಿ ತೆರೆದುಕೊಳ್ಳುವ ಕೃಷಿ ಕೆಲಸಗಳ ಬೀಸು ಪ್ರಕ್ರಿಯೆಯ ಹಿಂದೆ 'ಅನ್ನದ ಬಟ್ಟಲು' ತುಂಬುವ ಲಕ್ಷ್ಯವಿದೆ. ಗದ್ದೆಗಿಳಿದರೆ ಸಾಕು; ಕೃಷಿ ಪಠ್ಯದ ಒಂದೊಂದೇ ಅಧ್ಯಾಯದ ಹಾಳೆಗಳು ಬಿಡಿಸಿಕೊಳ್ಳುತ್ತವೆ, ಅಲಿಖಿತವಾದ ಜ್ಞಾನ ವಿನಿಮಯವಾಗುತ್ತದೆ. ಕೆಲಸ ಮಾಡುತ್ತಾ ಕಲಿಸುವ, ಕಲಿಯುವ, ಅನುಭವ ಸಂಪತ್ತನ್ನು ವೃದ್ಧಿಸಿಕೊಳ್ಳುವ ಈ ಉಪಾಧಿಗಳು ಬದುಕಿನ ಸಿಲೆಬಸ್.
                'ತಳಿ ಅಭಿವೃದ್ಧಿ' - ಎರಡು ಪದಪುಂಜಗಳನ್ನು ಗ್ರಹಿಸಿಕೊಳ್ಳಿ. ನಮ್ಮ ಚಿತ್ತ ಪ್ರಯೋಗ ಶಾಲೆಯತ್ತ ನುಗ್ಗುತ್ತದೆ. ಸರಕಾರಿ ವ್ಯವಸ್ಥೆಗಳೊಳಗೆ ಸುತ್ತುತ್ತವೆ. ವಿಜ್ಞಾನಿಗಳು ನೆನಪಿಗೆ ಬರುತ್ತಾರೆ. ಆದರೆ ನೂರಾರು ವರುಷಗಳಿಂದ ತಳಿಗಳನ್ನು ಆಯ್ಕೆಮಾಡಿ ಅಭಿವೃದ್ಧಿ ಪಡಿಸುತ್ತಿರುವ 'ರೈತ ವಿಜ್ಞಾನಿ'ಗಳು ಎಲ್ಲಿ ನೆನಪಾಗುತ್ತಾರೆ? ಅವರದು 'ಅನ್ನದ ಬಟ್ಟಲು' ತುಂಬಿಸುವ ಸಾಧನೆ. ಅವರೆಂದೂ ಸುದ್ದಿ ಮಾಡುವುದಿಲ್ಲ, ಸಾಧನೆ ಸದ್ದಾಗುವುದಿಲ್ಲ. ಇವರಿಗೆ ಉನ್ನತ ಶೈಕ್ಷಣಿಕ ಪದವಿ ಇಲ್ಲದಿರಬಹುದು, ಇವರ ಮಣ್ಣು ಮುಟ್ಟಿ ಕಲಿತ ಅನುಭವ ಮತ್ತು ಬೆಳೆದು ಬಾಳುವ ಬದುಕಿನ ಶಿಸ್ತುಗಳು ಇದೆಯಲ್ಲಾ, ಅದು ಪದವಿಗಿಂತಲೂ ಉನ್ನತ.
               ರಾಜಧಾನಿಯಲ್ಲಿ ಜರುಗಿದ 'ಆಹಾರ ಮೇಳ'ವೊಂದರಲ್ಲಿ ಭಾಗವಹಿಸಿದ್ದೆ. ಶ್ರೀಕಂಠ, ಕೃಷ್ಣಪ್ರಸಾದ್, ಆನಂದ.. ಹೀಗೆ ಗ್ರಾಮೀಣ ಪತ್ರಕರ್ತ ಸ್ನೇಹಿತರೆಲ್ಲಾ ಜತೆಯಾದೆವು. ಸಮಾನಾಸಕ್ತರು ಸೇರಿದಾಗ ಕೇಳಬೇಕೇ? ಹತ್ತು ಹಲವು ಸುದ್ದಿಗಳು. ಸಂದ ಘಟನೆಗಳ ನೆನವರಿಕೆ. 'ಐದು ಎಕ್ರೆಯಲ್ಲಿ ಮುನ್ನೂರು ತಳಿ ಭತ್ತವನ್ನು ಬೆಳೆದು ಅರ್ಧ ಒರಿಸ್ಸಾವನ್ನೇ ತೆರೆದಿಟ್ಟಿದ್ದಾರೆ, ನಟವರ ಸಾರಂಗಿ,' ಎಂದು ಕೃಷ್ಣಪ್ರಸಾದರಿಂದ ಹೊಸ ಸುಳಿವು. ಸಾರಂಗಿಯವರ ಭತ್ತದ ಕೃಷಿಯನ್ನು ನೋಡಲು ಒರಿಸ್ಸಾಗೆ ಹೋಗಿದ್ದರು. 'ಅವರೊಬ್ಬ ರೈತ ವಿಜ್ಞಾನಿ. ಅವರ ಕೃಷಿ ಬದುಕನ್ನು ನೋಡಲೇ ಬೇಕು. ಅದರಲ್ಲಿ ಅಪಾರವಾದ ಜ್ಞಾನವಿದೆ. ಒಂದು ವಿವಿ ಮಾಡಬಹುದಾದ ಕೆಲಸವನ್ನು ಅವರೊಬ್ಬರೇ ಮಾಡುತ್ತಿದ್ದಾರೆ' ಎನ್ನುತ್ತಾ ಮಾತಿಗಿಳಿದರು.
               ನಟವರ ಸಾರಂಗಿ - ಒರಿಸ್ಸಾದ ಕುದರ್ ಜಿಲ್ಲೆಯ ನರಿಷೋ ಗ್ರಾಮದ ಕೃಷಿಕ. ಸರಕಾರಿ ಲೆಕ್ಕಾಚಾರದಂತೆ ಒರಿಸ್ಸಾದಲ್ಲಿ ನಲವತ್ತು ಲಕ್ಷ ಹೆಕ್ಟೇರ್ನಲ್ಲಿ ಭತ್ತದ ಕೃಷಿಯಿದೆ. ಅದರಲ್ಲಿ ಹನ್ನೊಂದು ಲಕ್ಷ ಹೆಕ್ಟೇರ್ನಲ್ಲಿ ದೇಸೀ ಭತ್ತದ ತಳಿಗಳು.  ಎಪ್ಪತ್ತರ ದಶಕದಲ್ಲಿ ಇಪ್ಪತ್ತೂ ಸಾವಿರಕ್ಕೂ ಮಿಕ್ಕಿದ ತಳಿಗಳನ್ನು ಭತ್ತದ ವಿಜ್ಞಾನಿಯೊಬ್ಬರು ಗುರುತಿಸಿ ದಾಖಲಿಸಿದ್ದಾರಂತೆ.
               ಪುರಿ ದೇವಾಲಯದ ಜಗನ್ನಾಥ ಸ್ವಾಮಿಗೂ ಭತ್ತದ ಕೃಷಿಗೂ ಬಹಳ ಹತ್ತಿರ. ಇವನಿಗೆ ದೇಸೀ ಭತ್ತದ ತಳಿಯ ಅಕ್ಕಿಯ ನೈವೇದ್ಯವೆಂದರೆ ಪ್ರಿಯ. ಪ್ರತಿದಿನ ಹೊಸದಾಗಿ ಕೊಯ್ಲು ಮಾಡಿದ ಭತ್ತದ ಅಕ್ಕಿಯಿಂದ ನೈವೇದ್ಯ ತಯಾರಿ. ಭಕ್ತರಿಗೆ ಮಣ್ಣಿನ ಕುಡಿಕೆಯಲ್ಲಿ ಪ್ರಸಾದ ವಿತರಣೆ. ನಟವರ್ ಸಾರಂಗಿಯವರಿಗೆ ದೇವಾಲಯದ ಸಂಪರ್ಕದಿಂದಾಗಿ ನೂರಕ್ಕೂ ಮಿಕ್ಕಿ ಭತ್ತದ ತಳಿಗಳು ಪ್ರಾಪ್ತವಾದುವು. 
                ಇವರಿಗೆ 1997ರಿಂದ ಭತ್ತದ ನಂಟು. ಮೊದಲು ಐದಾರು ತಳಿಗಳನ್ನು ಬಿತ್ತಿದರು. ಆರೈಕೆ ಮಾಡಿದರು. ಕಾಳುಗಳನ್ನು ಜತನದಿಂದ ಕಾಪಿಟ್ಟು ಮುಂದಿನ ವರುಷ ಬಿತ್ತನೆ. ಈ ತಳಿಗಳ ಬೀಜಗಳು ಕೈಸೇರಿದಾಗ ಮತ್ತೆ ಮೂವತ್ತು ತಳಿಗಳ ಸ್ನೇಹ. ಹೀಗೆ ಅಭಿವೃದ್ಧಿಯಾಗುತ್ತಾ ಬಂದ ಇವರ ಭತ್ತದ ಬೀಜದ ತಿಜೋರಿಯಲ್ಲಿ  ಹತ್ತೇ ವರುಷದಲ್ಲಿ ನೂರಕ್ಕೂ ಮಿಕ್ಕಿ ತಳಿಗಳು ಸೇರಿದುವು. 2008ರಲ್ಲಿ ಮೂರು ಶತಕ ಮೀರಿತು. ದಶಕಕ್ಕೂ ಮೀರಿದ ತಪಸ್ಸಿನ ಫಲವಿದು.
                   ಸ್ಥಳೀಯ ತಳಿಗಳನ್ನು ಪತ್ತೆ ಮಾಡಿ, ಸ್ವತಃ ಬೆಳೆದು, ಅಭಿವೃದ್ಧಿ ಮಾಡುವುದು ಸಾರಂಗಿಯವರಿಗೆ ಬದುಕು. ಹೈಬ್ರಿಡ್ ಬೀಜಗಳ ಧಾಂಗುಡಿಯಲ್ಲಿ ಮರೆಯಾಗುತ್ತಿರುವ ದೇಸೀ ತಳಿಗಳಿಗೆ ಮರುಹುಟ್ಟು ನೀಡುವ ಇವರ ಕೆಲಸವು ಓರ್ವ ವಿಜ್ಞಾನಿಯ ಕೆಲಸಕ್ಕೆ ಸರಿಸಮ. ಅದರಲ್ಲಿ ಮರೆತ ಜ್ಞಾನವನ್ನು, ಕಳೆದುಕೊಂಡ ಬೀಜವನ್ನು ಹೊಲಕ್ಕೆ ತರುವ ಉಪಕ್ರಮವಿದೆಯಲ್ಲಾ, ಅದು ಒಂದು ಸಂಸ್ಕೃತಿಗೆ ಹಿಡಿದ ಮಸುಕನ್ನು ಒರೆಸುವ ಕೆಲಸ.
                ಬೇಸಿಗೆ ಶುರುವಾದಾಗ ನಟವರ ಸಾರಂಗಿಯವರು ಬ್ಯುಸಿಯಾಗುತ್ತಾರೆ. ಬೀಜ ಅಭಿಯಾನ ಶುರುವಾಗಿ ಬಿಡುತ್ತದೆ. ಹಳ್ಳಿಗಳನ್ನು ಸುತ್ತುತ್ತಾರೆ. ರೈತರನ್ನು ಸಂಪರ್ಕಿಸುತ್ತಾರೆ. ರೈತ ಸಂಘಟನೆಗಳನ್ನು ಭೇಟಿ ಮಾಡುತ್ತಾರೆ. ಉದ್ದೇಶವನ್ನು ಮುಂದಿಡುತ್ತಾರೆ. ಬೀಜಗಳನ್ನು ಸಂಗ್ರಹಿಸುತ್ತಾರೆ. ಇವರ ಆಸಕ್ತಿಯನ್ನರಿತ ಕೃಷಿಕರು ತಮ್ಮಲ್ಲಿರುವ ಭತ್ತದ ತಳಿಗಳನ್ನು ನೀಡುತ್ತಾರೆ.  ಹೀಗಾಗಿ ನಟವರ್ ಅವರ ಸಂಗ್ರಹದಲ್ಲಿ ಒರಿಸ್ಸಾದವೇ ಆದ ಇನ್ನೂರೈವತ್ತು ತಳಿಗಳಿವೆ.            
              'ಮುನ್ನೂರು ತಳಿ ಅಂದಾಗ ನೂರೆಕ್ರೆ ವಿಸ್ತಾರದ ಗದ್ದೆಗಳು ಬೇಕಾಗಬಹುದೇನೋ,' ಎಂಬ ಸಂಶಯ ಮುಂದಿಟ್ಟಾಗ, ಕೃಷ್ಣ ಪ್ರಸಾದ್, 'ಛೇ.. ಅಷ್ಟೆಲ್ಲಾ ಇಲ್ಲ. ಐದೆಕ್ರೆಯಲ್ಲಿ ಇಷ್ಟೂ ತಳಿಗಳನ್ನು ಅಭಿವೃದ್ಧಿ ಪಡಿಸಲೆಂದೇ ಬೆಳೆಯುತ್ತಿದ್ದಾರೆ. ಅವರ ಶ್ರಮಕ್ಕೆ ಅವರ ಹೊಲಗಳೇ ಸಾಕ್ಷಿ,' ಎಂದರು.
                 ಹುಡುಕಿ ತಂದ ಬೀಜಗಳ ದಾಖಲಾತಿಗೆ ಮೊದಲಾದ್ಯತೆ. ಬೀಜದ ಲಭ್ಯತೆಗನುಸಾರ ಗದ್ದೆಗಳ ಗಾತ್ರ ನಿರ್ಧಾರ. ಮಡಿ ಮಾಡಿ, ಮೊಳಕೆ ಬರಿಸಿ, ನೆಡುವಲ್ಲಿಯ ತನಕ ಬೀಜಗಳು ಮಿಶ್ರವಾಗದಂತೆ ಎಚ್ಚರ ವಹಿಸುತ್ತಾರೆ. ಸಾವಯವ ಕೃಷಿ ಕ್ರಮದಲ್ಲಿ ಬೇಸಾಯ. ಹಟ್ಟಿ ಗೊಬ್ಬರ ಹೊರತು ಮಿಕ್ಕ ಯಾವುದೇ ಗೊಬ್ಬರಗಳು ಹೊಲಕ್ಕೆ ಬರುವುದಿಲ್ಲ. ರೋಗ ಅಧಿಕವಾದರೆ ಗೋಮೂತ್ರ ಮತ್ತು ಕಹಿಸೊಪ್ಪುಗಳ ದ್ರಾವಣವನ್ನು ಬೇಕಾದಾಗ ಸಿಂಪಡಿಸುತ್ತಾರೆ.
                'ದೇಸೀ ತಳಿಗಳು ಹೆಚ್ಚು ಇಳುವರಿ ಕೊಡುವುದಿಲ್ಲ, ಹೌದಾ?' ಎಂಬ ಪ್ರಶ್ನೆಗೆ ನಟವರ್ ಉತ್ತರಿಸುವುದು ಹೀಗೆ - ನೂರು ವರ್ಷದ ಹಿಂದೆ ತಮಿಳುನಾಡಿನಲ್ಲಿ ಒಂದು ಎಕರೆಗೆ ಅರುವತ್ತು ಕ್ವಿಂಟಾಲ್ಗೂ ಅಧಿಕ ಇಳುವರಿ ಕೊಡುವ ತಳಿಗಳಿದ್ದುವು ಎಂದು ಅಲ್ಲಿನ ಗಜೆಟಿಯರ್ ಹೇಳುತ್ತದೆ. ಅಷ್ಟು ದೂರ ಯಾಕೆ, ನನ್ನ ಸಂಗ್ರಹದಲ್ಲಿರುವ ಐವತ್ತಕ್ಕೂ ಮಿಕ್ಕಿದ ತಳಿಗಳಲ್ಲಿ ಹದಿನೈದರಿಂದ ಇಪ್ಪತ್ತೈದು ಕ್ವಿಂಟಾಲ್ ಭತ್ತ ಈಗಲೂ ಸಿಗುವುದಿಲ್ವಾ.. ಹೇಳುವಂತಹ ಯಾವುದೇ ಆರೈಕೆ ಬೇಡದ ಬೇಸಾಯ...
               ಒಮ್ಮೆ ಒಂದು ತಳಿ ಇವರ ಹೊಲ ಹೊಕ್ಕರೆ ಸಾಕು, ಮತ್ತೆಂದೂ ತಪ್ಪಿಸಿಕೊಳ್ಳಲಾರವು. ನಾಶವಾಗಲಾರವು. ಕಾಪಿಡುವಲ್ಲಿ ಕಾಳಜಿ, ಶಿಸ್ತು. ಸದೃಢವಾಗಿ ತೆನೆ ಬಂದಾಗ ಮೊದಲು ಗುಣಮಟ್ಟದ ತೆನೆಗಳ ಆಯ್ಕೆ. ಅವುಗಳನ್ನು ಪ್ರತ್ಯೇಕವಾಗಿ ಕೊಯ್ದು, ಕಾಳುಗಳನ್ನು ಆಯ್ದು, ಬಿಸಿಲಿನಲ್ಲಿ ಪ್ರತ್ಯಪ್ರತ್ಯೇಕವಾಗಿ ಒಣಗಿಸುತ್ತಾರೆ. ಒಂದು ಕಾಳುಗಳು ಕೂಡಾ ಆಚೀಚೆ ಮಿಶ್ರವಾಗದಂತೆ ಕಣ್ಗಾವಲು. ಬೀಜದ ಅಯ್ಕೆಯ ಮಾನದಂಡ ಹೀಗಿದೆ - ಒಂದೇ ಮಟ್ಟದಲ್ಲಿ ಬೆಳೆದ ಪೈರುಗಳಾಗಿರಬೇಕು, ಏಕಕಾಲಕ್ಕೆ ಬಲಿತ ತೆನೆಗಳಾಗಿರಬೇಕು, ರೋಗಕೀಟಗಳಿಂದ ಮುಕ್ತವಾಗಿದ್ದು, ಸಸಿಯ ಮಧ್ಯಭಾಗದ ಪೈರಿನಿಂದ ಬಂದ ತೆನೆಗಳನ್ನು ಆಯ್ಕೆ ಮಾಡುತ್ತಾರೆ.
                  ಇಷ್ಟಕ್ಕೆ ಮುಗಿಯಲಿಲ್ಲ; ತಳಿಯ ಎತ್ತರ, ಎಲೆಗಳ ಅಗಲ, ಉದ್ದ, ಪೈರುಗಳ ಸಂಖ್ಯೆ, ಕಾಳಿನ ತೂಕ, ಅವಧಿ, ಇಳುವರಿ.. ಹೀಗೆ ದಾಖಲಾತಿ. ಬೀಜವನ್ನು ಪಡೆದ ಮೂಲ, ಪಡೆದ ದಿನಾಂಕ, ಗುಣಮಟ್ಟ, ಸಂರಕ್ಷಣಾ ಕ್ರಮ, ರೋಗ ಬಾಧೆಯ ವಿವರಗಳ ಡಾಟಾಗಳ ಸಮಗ್ರ ದಾಖಲಾತಿ. ಈ ಎಲ್ಲಾ ವಿವರಗಳನ್ನೊಳಗೊಂಡ 'ಭತ್ತದ ಬೀಜದ ಆಲ್ಬಂ' ರೂಪಿಸುತ್ತಾರೆ. ಒಂದು ಆಲ್ಬಂನಲ್ಲಿ ನೂರು ತಳಿಯ ಬೀಜದ ಮಾದರಿ ಮತ್ತು ಸಮಗ್ರ ಮಾಹಿತಿಗಳಿವೆ. ಈ ಆಲ್ಬಮಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಪೂರೈಕೆ ಕಷ್ಟ. 
                  ಪ್ರತಿ ವರ್ಷ ಬಿತ್ತನೆಯು ಮುನ್ನ ಎರಡು ಸಲ ಬೀಜ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಇದರಿಂದಾಗಿ ಬೀಜಗಳ ಮಾರಾಟ ಮತ್ತು ರೈತರ ಪರಿಚಯ. ಹೊಸ ರೈತರ ಪರಿಚಯವಾದರೆ ಬೀಜದ ಹುಡುಕಾಟ ಕೆಲಸಕ್ಕೆ ಸಲೀಸು. ಮುನ್ನೂರಕ್ಕೂ ಮಿಕ್ಕಿ ಭತ್ತದ ಬೀಜಗಳನ್ನು ಸಂರಕ್ಷಣೆ ಮಾಡಿದ ಕೃಷಿಕ ನಟವರ್ ಸಾರಂಗಿಯವರದು ಒಂಟಿ ಸಾಹಸ. ಎಲ್ಲಾ ಮಾಧ್ಯಮಗಳು ಧನಾತ್ಮಕವಾಗಿ ಸ್ಪಂದಿಸಿವೆ. ಸನಿಹದ ಕೃಷಿ ಸಂಶೋಧನಾ ಕೇಂದ್ರದ ವರಿಷ್ಠರಿಗೆ ಮಾತ್ರ ಸಾರಂಗಿಯವರ ಒಂಟಿ ಸಾಹಸದ ಕತೆ ಇನ್ನೂ ತಲುಪಿಲ್ಲ!
                 ರೈತರು ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿಲ್ಲ, ದುರಾಸೆಗೆ ಬಲಿಯಾಗಿ ಕಳಪೆ ಬೀಜ ಕೊಡುವುದಿಲ್ಲ, ಅಧಿಕ ಬೆಲೆಗೆ ಬಿತ್ತನೆ ಬೀಜ ಮಾರಾಟ ಮಾಡುತ್ತಿಲ್ಲ - ಈ ಪ್ರಾಮಾಣಿಕ ಕಾಳಜಿಯೇ ಬಹುಶಃ ರೈತ ವಿಜ್ಞಾನಿಗಳ ನಿರ್ಲಕ್ಷ್ಯಕ್ಕೆ ಕಾರಣವಿರಬಹುದೇನೋ! ಲಕ್ಷ್ಯ ಕೊಡಿ, ಕೊಡದಿರಿ - ಅವರ ಪಾಡಿಗೆ ಅವರಿರುತ್ತಾರೆ.

ಚಿತ್ರ, ಮಾಹಿತಿ : ಕೃಷ್ಣಪ್ರಸಾದ್ ಜಿ, ಬೆಂಗಳೂರು

ಕೃಷ್ಣ ಬಂದ, ನೋಡಲಾಗಲಿಲ್ಲ..!


           ಅಷ್ಟಮಿ ಮುಗಿದು ಕೃಷ್ಣನಿಗೆ ವಿದಾಯ ಹೇಳಿದೆವು! ನಮ್ಮ ಬದುಕೇ ಹಾಗೆ. ಎಲ್ಲದರಲ್ಲೂ ವಿದಾಯ. ನಿತ್ಯ ವಿದಾಯದ ಬದುಕು. ವಿದಾಯದ ಬಳಿಕ ಸ್ವಾಗತ. ಕೃಷ್ಣನ ಬದುಕಿನಲ್ಲಿ ವಿದಾಯ ಮತ್ತು ಸ್ವಾಗತ ಎರಡಕ್ಕೂ ಸಮಭಾವ, ಸಮಚಿತ್ತ. ಹಾಗಾಗಿ ಆತ ಜಗದ್ವಾಪಿ. ಅವನಿಗೆ ಗೊತ್ತಿತ್ತು - ಯಾವ ಮುಖದಿಂದ ವಿದಾಯ ಉಸುರಿದ್ದೇವೆಯೋ, ಅದೇ ಮುಖ ಸ್ವಾಗತಕ್ಕೂ ಸಜ್ಜಾಗಬೇಕು. ಇದು ಅಷ್ಟಮಿಯ ದಿವಸದ ಕೃಷ್ಣನ ಸಂದೇಶ.
          ಬದುಕಿನ ಕಳೆಯನ್ನು ಕಳೆದು, ಧರ್ಮವನ್ನು ಕೈಗೆತ್ತಿಕೊಂಡ. ಮಾನಸಿಕ ವಿಕಾರಕ್ಕೆ ವಿದಾಯ ಹೇಳಿದ.  ಹೊಸದಾದ ಬೌದ್ಧಿಕ ವಿಚಾರಗಳನ್ನು ಸ್ವಾಗತ ಮಾಡುತ್ತಾ ಬದುಕಿದ. ಬದುಕಿನ ಈ ದಾರಿ ಇದೆಯಲ್ಲಾ, ನಿಜಕ್ಕೂ ವಿಶ್ವಕೋಶ. ನಮ್ಮ ಬದುಕೇ ಅರ್ಥವಾಗಿಲ್ಲ, ಅರ್ಥವಾಗುತ್ತಿಲ್ಲ. ಅರ್ಥಮಾಡಿಕೊಳ್ಳು ಪುರುಸೊತ್ತು ಇಲ್ಲವೇ ಇಲ್ಲ. ಹೀಗಿರುತ್ತಾ ಕೃಷ್ಣನ ಬದುಕು ಹೇಗೆ ಅರ್ಥವಾಗುತ್ತದೆ? ನಮ್ಮೊಳಗೆ ಕೃಷ್ಣನನ್ನು ಕಾಣಬೇಕೆನ್ನುವುದೇ ಅಷ್ಟಮಿಯ ಸಂದೇಶ.
          ಬಾಲ್ಯದಲ್ಲಿ ಮೊಸರು ಕದ್ದ, ಮೆದ್ದ, ಮೆತ್ತಿಕೊಂಡ, ಮೆತ್ತಿಸಿಕೊಂಡ. ಇತರರ ಮುಖಕ್ಕೂ ಮೆತ್ತಿದ. ಬದುಕಿನಲ್ಲಿ ಹಾಲು, ಮೊಸರಿಗೆ ಆದ್ಯತೆಯನ್ನು ನೀಡಿದ. ಪೌಷ್ಠಿಕವಾದ ಆಹಾರ ಸೇವಿಸಬೇಕೆನ್ನುವ ವಿಚಾರವನ್ನು ಹೇಳಿದ. ಗೋಪಾಲಕರು, ಗೋಪಿಕೆಯರು ಅನುಸರಿಸಿದರು.
             ನಾವಾದರೋ.. ಹಾಲು ನೀಡುವ ದನವನ್ನು ಕೈಯಾರೆ ಪರಾಧೀನಗೊಳಿಸಿದೆವು. ಪ್ಯಾಕೆಟ್ ಹಾಲು, ಮೊಸರನ್ನು ಅಪ್ಪ್ಪಿಕೊಂಡೆವು. ನಾವು ತಿಂದೆವು. ಆದರೆ ಮೆತ್ತಿಸಿಕೊಂಡಿಲ್ಲ. ಇತರರಿಗೆ ವಿಚಾರದ ಕೊಳೆಯನ್ನು ಮೆತ್ತಿದೆವು! ಮೆತ್ತುತ್ತಾ ಬಂದೆವು! ಪೌಷ್ಠಿಕ ಆಹಾರ ಎನ್ನುತ್ತಾ ವಿಷವನ್ನು ನಿತ್ಯ ಸೇವಿಸುವುದು ಬೌದ್ಧಿಕ ಸಿರಿವಂತರಾದ ನಮಗೆ ಖುಷಿಯೋ ಖುಷಿ.
            ಕೃಷ್ಣ ವನಿತೆಯರನ್ನು ಪ್ರೀತಿಸಿದ. ಮನಸ್ಸಿನಲ್ಲಿ ಸ್ಥಾನ ಕೊಟ್ಟ. ಮನಸಾ ಪೀಡಿಸಿದ. ವಸ್ತ್ರವನ್ನು ಅಪಹರಿಸಿ ಪರಿಹಾಸ್ಯ ಮಾಡಿದ. ಆಪತ್ತಿನಲ್ಲಿ ವಸ್ತ್ರವನ್ನೂ ನೀಡಿ ಮಾನ ಕಾಪಾಡಿದ. ಪ್ರಾಣಕ್ಕೆ ಆಸರೆಯಾದ. ಆದರೆ ಎಂದೂ ಕಾಮದ ಕಣ್ಣಿಂದ ಕಂಡಿಲ್ಲ. ಕೃಷ್ಣನ ಬಾಲ್ಯದ ತುಂಟತನವನ್ನು ಬೇಕಾದಂತೆ ತಿರುಚಿ ವ್ಯಾಖ್ಯಾನ ಮಾಡಿದೆವು.  'ಆತ ವನಿತಾಪ್ರಿಯ' ಎನ್ನುತ್ತಾ ನಮ್ಮ ಮನದ ಕೊಳೆಯನ್ನು ಆತನ ಮುಖಕ್ಕೆ ಮೆತ್ತುವುದಕ್ಕೆ ಮುಂದಾದೆವು. ಕಾಮದ ಸುಳಿಯೊಳಗೆ ಸಿಲುಕಿ ಬದುಕಿನಿಂದ ಜಾರಿದೆವು. ಮತ್ತೊಮ್ಮೆ ಮೇಲೆದ್ದು ಬಾರದಂತೆ..! ಕೃಷ್ಣನಿಗೆ ಅಂಟಿಸಿಕೊಳ್ಳಲೂ ಗೊತ್ತಿತ್ತು, ಅದರಿಂದ ಬಿಡಿಸಿಕೊಳ್ಳಲೂ ಗೊತ್ತಿತ್ತು, ಇದೇ ಬದುಕಿನ ಸುಭಗತನ.
              ನರಕಾಸುರನನ್ನು ಕೊಂದು ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರ ಬಂಧಮುಕ್ತ ಮಾಡಿದ. ಮಾನ-ಪ್ರಾಣವನ್ನು ಕಾಪಾಡಿದ. ತನ್ನೂರಿಗೆ ಕರೆತಂದ. ಎಲ್ಲರ ಮನದಲ್ಲೂ ನೆಲೆಯಾದ, ಸೆರೆಯಾದ. ಎಲ್ಲೆಲ್ಲಿ, ಏನೇನೋ ಆಗಬಹುದಾದ ಸ್ತ್ರೀಯರ ಬದುಕಿಗೆ ಆಸರೆಯಾದ. ಅವರ ಮಾನವೀಯ ಗುಣವನ್ನು ನಾವು ದುರ್ಗುಣಗಳ ಪಟ್ಟಿಗೆ ಸೇರಿಸಿದೆವು. ಅಂದರೆ ನಮ್ಮ ದುರ್ಗುಣಗಳ ಪ್ರತಿಫಲನ ಎಂದರ್ಥ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ತಾನೆ!
               ಗೋವುಗಳ, ಗೋಪಾಲಕರ ನೆಚ್ಚಿನ ಸ್ನೇಹಿತ ಕೃಷ್ಣ. ಗೋ ಮಂದೆಯ ಬದುಕು ಪ್ರಿಯ. ಕೊಳಲ ದನಿಗೆ ತಲೆಯಾಡಿಸದ, ಕುಣಿಯದ ಪಶುಗಳಿರಲಿಲ್ಲ. ಬಾಯಿ ತೆರೆದಾಗ ಹಾಲುಣಿಸುವ ಎಷ್ಟು ದನಗಳಿದ್ದುವು? ಬದುಕಿಗೆ ಅತೀ ಅಗತ್ಯವಾದ ಹಾಲು, ಮೊಸರು, ಬೆಣ್ಣೆಗಳ ತಯಾರಿಯಲ್ಲಿ ಸ್ವಾವಲಂಬನೆಯನ್ನು ಪ್ರಪಂಚಕ್ಕೆ ತೋರಿಸಿದ. 'ಇದ್ದ ದನವನ್ನು ಮಾರೋಣ. ಹಾಲು ಪಕ್ಕದ ಮನೆಯಿಂದ ತರೋಣ' ಎನ್ನುತ್ತಾ ನಮ್ಮ ಹಟ್ಟಿಯನ್ನು ಖಾಲಿ ಮಾಡಿ, ಗೋಡೌನ್ ಮಾಡಿದ ಸಾರ್ಥಕತೆ ನಮ್ಮದು! ನಂತರ ಪಶ್ಚಾತ್ತಾಪ ಪಟ್ಟೆವು. ಬದುಕಿನಲ್ಲಿ ಪಶು ಸಂಸಾರಕ್ಕೆ ಶೂನ್ಯ ಜಾಗ. ಅದನ್ನು ಉಳಿಸಿ, ಬೆಳೆಸುವುದು ಬಹುಶಃ ಇನ್ನು ಕಾನೂನು ಮಾತ್ರವೋ ಏನೋ?
              ಕೃಷ್ಣ ಗುರುಕುಲಕ್ಕೆ ಅಣ್ಣನೊಂದಿಗೆ ತೆರಳಿದ. ಅರುವತ್ತ ನಾಲ್ಕು ವಿದ್ಯೆಯನ್ನು ಶೀಘ್ರ ಕಲಿತ. ಮರಣಿಸಿದ ಗುರುಪುತ್ರನನ್ನು 'ಗುರುಕಾಣಿಕೆ'ಯಾಗಿ ನೀಡಿ ಜಗತ್ತಿಗೆ ಮಾದರಿಯಾದ. ಕೃಷ್ಣನ ಗುರುಭಕ್ತಿ ಕಣ್ಣ ಮುಂದಿರುವಾಗ, ಕನಿಷ್ಠ 'ಶಿಕ್ಷಕ ದಿನಾಚರಣೆ'ಯಂದಾದರೂ ಗುರುವಿಗೆ ನಮಸ್ಕರಿಸಿದ ಉದಾಹರಣೆ ಇದೆಯೇ? ಇದ್ದರೆ ಗ್ರೇಟ್! ಗುರು ಅಂದರೆ ಹಿರಿದು. ಹಿರಿದುದರ ಮುಂದೆ ಕಿರಿದು ಶರಣಾಗಲೇ ಬೇಕು. ಅದು ಶಿಕ್ಷಣದ ಅಂತಿಮ ಫಲಿತ. ನಮ್ಮ ಶಿಕ್ಷಣ ವ್ಯವಸ್ಥೆಗಳು ತಲೆಬಾಗಲು ಕಲಿಸುತ್ತವೆಯೇ? ತಲೆಬಾಗುವುದು ಅಂದರೆ ದಾಸ್ಯವೆಂದಲ್ಲ. ಅದು ಸಂಸ್ಕಾರ. ಶಿಕ್ಷಣ ಅದಕ್ಕೆ ಉಪಾಧಿ.
                ತನ್ನೂರನ್ನು ಹಾಳುಗೈಯಲು ಬಂದ ಕಪಟ ರಾಕ್ಷಸರನ್ನೆಲ್ಲಾ ತುಳಿದ, ತರಿದ. ವಿಷದ ಹಾಲನ್ನು ನೀಡಲು ಬಂದ ಪೂತನಿಗೆ ಬುದ್ಧಿ ಕಲಿಸಿದ. ಬದುಕಿದ ಹಳ್ಳಿಯನ್ನು ಸಂರಕ್ಷಿಸಿದ. ಗೋಮಂದೆಯನ್ನು ಉಳಿಸಿದ. ಧರ್ಮವನ್ನು ಉಳಿಸಲು ಮಾವ ಕಂಸನನ್ನೇ ಕೊಲ್ಲಬೇಕಾಯಿತು. ನಮ್ಮೊಳಗಿನ ವಿಷವನ್ನು ಕಕ್ಕಿಸಲು ವರುಷ ವರುಷವೂ ಕೃಷ್ಣ ಬರುತ್ತಿದ್ದಾನೆ. 'ನಮ್ಮೊಳಗೆ ವಿಷವಿದೆ' ಅಂತ ನಮಗೆ ಗೊತ್ತಿಲ್ಲ, ಕೃಷ್ಣನಿಗೆ ಗೊತ್ತಿದೆ. ಆತನಿಗೆ ನಾವು ಹೃದಯ ಕೊಡದಿದ್ದರೆ ಆತ ಕಕ್ಕಿಸುವುದಾದರೂ ಹೇಗೆ, ಪಾಪ?
               ಪಾಂಡವರ ಪ್ರತಿನಿಧಿಯಾಗಿ ಸಂಧಾನಕ್ಕೆ ತೆರಳಿದ. ಸಂಗ್ರಾಮ ನಿರ್ಣಯಿಸಿ ಬಂದ. ಮಹಾಭಾರತವೇ ನಡೆದು ಹೋಯಿತು. ಧರ್ಮ ಜಯಿಸಿತು. ಧರ್ಮರಾಯ ಹಸ್ತಿನೆಯಲ್ಲಿ ಪಟ್ಟಾಭಿಷಿಕ್ತನಾದ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ ಎಂದು ತೋರಿಸಿಕೊಟ್ಟ.
               ಕೃಷ್ಣನ ವ್ಯಕ್ತಿತ್ವವನ್ನು ಓದುತ್ತೇವೆ. ಪಾರಾಯಣ ಮಾಡುತ್ತೇವೆ. ಅರ್ಚಿಸುತ್ತೇವೆ. ಎಂದಾದರೂ ಆತನ ಬದುಕಿನೊಂದಿಗೆ ನಮ್ಮ ಬದುಕನ್ನು ಅನುಸಂಧಾನ ಮಾಡಿ ನೋಡಿದ್ದುಂಟೋ? ಆತನಂತೆ ಬದುಕಲು ಸಾಧ್ಯವಿಲ್ಲ. ಆ ಬದುಕು ಅವನಿಗೇ ಮೀಸಲು. ಅದರ ಪೇಟೆಂಟ್ ಅವನಿಗೆ ಮಾತ್ರ. ಇನ್ನೊಬ್ಬ ಅದನ್ನು ಅನುಕರಿಸಿದರೆ ಕಾನೂನು ಬಾಹಿರ!
ಆದರೆ ಅನುಸರಿಸಬಹುದಲ್ಲಾ..! ಸಮಾಜದ ಒಳಿತಾಗಿ 'ಮಾಡಿ ತೋರಿಸಿದ' ಎಷ್ಟು ಉದಾಹರಣೆಗಳು ಬೇಕು? ಅವೆಲ್ಲವನ್ನೂ ಬುದ್ಧಿವಂತರಾದ ನಾವು ಢಾಳಾಗಿ ಕಾಣುತ್ತಾ, ನಮ್ಮ ಬದುಕನ್ನೂ ಢಾಳು ಮಾಡುತ್ತಿದ್ದೇವೆ. ಕೃಷ್ಣ ಬಂದ, ನೋಡಲಾಗಲಿಲ್ಲ. ವರುಷವೂ ಬರುತ್ತಿದ್ದಾನೆ, ನೋಡಲು ಸಿಗುತ್ತಿಲ್ಲ. 
              ಆತನ ಜನ್ಮ ದಿನ ಬಂದಾಗ ರಶೀದಿ ಮುದ್ರಿಸುತ್ತೇವೆ. ಮೋಜು ಮಾಡುತ್ತೇವೆ. ಸಂತೋಷ ಪಡುತ್ತೇವೆ. ಪೂಜೆ ಪುರಸ್ಕಾರಗಳಿದ್ದರೆ ಟಿವಿ ಮುಂದೆ ಠಿಕಾಣಿ ಹೂಡಿ ಉಂಡೆ, ಚಕ್ಕುಲಿ ಮೆಲ್ಲುತ್ತೇವೆ! ಬಳಿಕ ಕೃಷ್ಣನನ್ನು ಬೀಳ್ಕೊಡುತ್ತೇವೆ. ಅಲ್ಲಿಗೆ ಕೃಷ್ಣಾಷ್ಟಮಿ ಗೋವಿಂದ!
              ತಕ್ಷಣ ಗಜಾನನ ಸಿದ್ಧನಾಗುತ್ತಾನೆ. ಆತನ ಸ್ವಾಗತಕ್ಕೆ ಕೃಷ್ಣನಿಗಿಂತ ವೈಭವದಲ್ಲಿ ಸಜ್ಜಾಗುತ್ತೇವೆ. ಗಾತ್ರದಲ್ಲಿ ಚಂದಾ ರಶೀದಿ ಪುಸ್ತಕ ದೊಡ್ಡದಾಗುತ್ತದೆ! ಮನಸ್ಸು ಮೊದಲಿನಂತೆ ಮುದುಡಿರುತ್ತದೆ.

ಬದುಕಿದ್ದಾಗ ಎಷ್ಟು ಹೊಗಳಿದ್ದೇವೆ..?

           ಹದಿಮೂರು ವರುಷದ ಹಿಂದೆ ದೈವಾಧೀನರಾದ ಯಕ್ಷಗಾನ ಭಾಗವತರೊಬ್ಬರ ಸಂಸ್ಮರಣಾ ಸಮಾರಂಭದಲ್ಲಿ (೧೫-೯-೨೦೧೨) ಭಾಗವಹಿಸಿದ್ದೆ. ಹಳ್ಳಿಯ ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ. ದೇವರ ದರ್ಶನಕ್ಕೆ ಆಗಮಿಸಿದ ಭಕ್ತ ಸಭೆ. ಜತೆಗೆ ಕಲಾಭಿಮಾನಿಗಳೂ, ಭಾಗವತರ ಅಭಿಮಾನಿಗಳು ಕೂಡ.
          ಅಚ್ಚುಕಟ್ಟಿನ ಶಿಸ್ತಿನ ವ್ಯವಸ್ಥೆ. ಯಾರನ್ನು ನೆನಪು ಮಾಡಿಕೊಳ್ಳಬೇಕೋ ಅವರ ಸಾಧನೆ, ಕೊಡುಗೆಗಳ ಸುತ್ತ ಸುತ್ತಿದ ನೆನಪುಗಳು ಒಟ್ಟಂದಕ್ಕೆ ಪೂರಕವಾಯಿತು. ಸಮಾಜದ ಮಧ್ಯೆ ಬಾಳಿದ ಕಲಾವಿದನನ್ನು ಆ ಸಮಾಜವೇ ಪ್ರತೀವರುಷ ನೆನಪಿಸುವುದೆಂದರೆ, ಮರಣಿಸಿದ ವ್ಯಕ್ತಿಯ ವೈಯಕ್ತಿಕ ಛಾಪಿನ ಆಳವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
             ಕಾರ್ಯಕ್ರಮ ಮುಗಿಸಿ ಮರಳಲು ವ್ಯಾನಿನಲ್ಲಿ ಕುಳಿತಿದ್ದೆ. ಎಲ್ಲರೂ ಸಮಾರಂಭದ ಕುರಿತು ತಮ್ಮ ವಿವೇಚನೆಗೆ ತೋರಿದಂತೆ ಮಾತನಾಡುತ್ತಿದ್ದರು. ಮರಣಿಸಿದ ಭಾಗವತರನ್ನು ನೆನಪಿಸಿಕೊಳ್ಳುತ್ತಿದ್ದರು. ಅವರ ಭಾಗವತಿಕೆಯಲ್ಲಿ ಜರುಗಿದ ಪ್ರದರ್ಶನವನ್ನು ಮೆಲುಕು ಹಾಕುತ್ತಿದ್ದರು. ವೇದಿಕೆಯಲ್ಲಿನ ಅತಿಥಿಗಳ ಮಾತಿನ ಒಂದೆರಡು ವಾಕ್ಯಗಳನ್ನು ನೆನಪಿಟ್ಟುಕೊಂಡು ಪರಸ್ಪರ ಹಂಚಿಕೊಳ್ಳುತ್ತಿದ್ದರು.
             ಇವರ ಮಧ್ಯೆ ಕುಳಿತಿದ್ದ ವಯೋವೃದ್ಧೆಯೋರ್ವರು, 'ಭಾಗವತರನ್ನು ಎಲ್ಲರೂ ಹೊಗಳಿದರು. ಹೊಗಳಬೇಕಾದ್ದೇ. ಅಷ್ಟು ಅರ್ಹತೆ ಅವರಲ್ಲುಂಟು. ಅವರು ನಮ್ಮ ಊರಿಗೆ ಗೌರವ ತಂದಿದ್ದಾರೆ. ಮಾನವನ್ನು ನೀಡಿದ್ದಾರೆ. ಆದರೆ ಅವರು ಬದುಕಿರುವಾಗ ಎಷ್ಟು ಮಂದಿ ಹೊಗಳಿದ್ದೇವೆ' ಎಂದು ಚಾಟಿ ಬೀಸಿದರು. ಹೊಸ ಹೊಳಹನ್ನು ನೀಡಿದ ಆ ಹಿರಿಯ ಮಾತೆಗೆ ಮನಸಾ ವಂದಿಸಿದೆ.
              ಹೌದಲ್ಲಾ, ವ್ಯಕ್ತಿ ಬದುಕಿದ್ದಾಗ ಅವರ ಕಲಾವಂತಿಕೆಯ ಪ್ರಖರಕ್ಕೆ ಮುಖಕೊಡಲಾಗದ ಅಸಹಾಯಕತೆಯಲ್ಲಿ ಆತನ ಕುರಿತು ಯಥೇಷ್ಟವಾಗಿ ಕರುಬುತ್ತೇವೆ. ಅವರ ಪ್ರತಿಭೆಯನ್ನು ತನ್ನ ವಿಕಾರ ಚಿತ್ತದ ಪಾತ್ರೆಯಲ್ಲಿಟ್ಟು ಅಳತೆ ಮಾಡುತ್ತೇವೆ. ರಂಗದಲ್ಲಿ ಹಾಡುವಾಗ, ಕುಣಿಯುವಾಗ, ಅರ್ಥ ಹೇಳುವಾಗ ಖುಷಿಪಡುತ್ತೇವೆ. ನಾವೊಬ್ಬರೇ ಖುಷಿ ಪಟ್ಟರೆ ಸಾಲದು. ಖುಷಿ ಪಡಿಸಿದ ಆ ಕಲಾವಿದನೂ ಖುಷಿಯಾಗಬೇಡ್ವೇ. ಇದಕ್ಕಾಗಿ 'ಒಂದು ಒಳ್ಳೆಯ ಮಾತನ್ನು' ಹೇಳಿದರೆ ಆತನಿಗೆ ಎಷ್ಟೊಂದು ಸಂತೋಷವಾಗಿರುತ್ತಿತ್ತು?
            ಸಂಮಾನ ಮಾಡುವಾಗ ಹೊಗಳುತ್ತೇವೆ. ಹೊಗಳಿಕೆಯ ಮಹಾಪೂರದಲ್ಲಿ ಅಟ್ಟಕ್ಕೇರಿಸುತ್ತೇವೆ. ಪುರಸ್ಕಾರ ನೀಡುವಾಗ ಗುಣವರ್ಣನೆ ಮಾಡುತ್ತೇವೆ. ಪ್ರಶಸ್ತಿ ಕೊಡುವಾಗ ಗುಣಕ್ಕೆ ಇನ್ನಷ್ಟು ಮಸಾಲೆ ಸೇರಿಸಿ ಎತ್ತರಕ್ಕೇರಿಸುತ್ತೇವೆ. ಯಾವ ವ್ಯಕ್ತಿಯನ್ನು ರಂಗದಲ್ಲಿ ಇಂದ್ರ-ಚಂದ್ರನೆಂದು ಹೊಗಳಿದನೋ, ಆತ ವೇದಿಕೆ ಇಳಿದ ಬಳಿಕದ ಸ್ಥಿತಿ ನೋಡಬೇಕು? ಎಲ್ಲವೂ ಗಂಟಲ ಮೇಲಿನ ಮಾತು.
          ಬದುಕಿರುವಾಗ ಒಳ್ಳೆಯ ಮಾತಿನ ಸೊಲ್ಲಿಲ್ಲ. ಬೆನ್ನು ತಟ್ಟುವ ಕ್ರಿಯೆಯಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಕಾಲೆಳೆಯುತ್ತಾ ಜಾತಿ-ಅಂತಸ್ತುಗಳ ಭೂತವನ್ನು ಹೊಕ್ಕಿಸಿ, ತಾನು ಮರೆಯಲ್ಲಿ ನಿಂತು ಸಂತೋಷ ಪಡುತಾರೆ. ದೂರದ ಊರಿನಲ್ಲಿ ಗೌರವ ಪ್ರಾಪ್ತಿಯಾದಾಗ ಹೊಸ ಬಣ್ಣ ಕೊಟ್ಟು ವಿಷಬೀಜವನ್ನು ಬಿತ್ತಿ ಬಿಡುತ್ತಾರೆ. ಆತ ಹಾಕಿದ ವಿಷ ವರ್ತುಲದಲ್ಲಿ 'ತಾನೇ ಸುತ್ತಿಕೊಳ್ಳುತ್ತೇನೆ' ಎಂಬ ವಿವೇಚನೆ ಇದ್ದರೂ ಹಗುರ ಮಾತುಗಳಿಂದ ಕ್ಷಣಕ್ಕೆ ಬೀಗುತ್ತೇವೆ.
            ವ್ಯಾನಿನಲ್ಲಿ ಕೇಳಿಸಿಕೊಂಡ ಆ ಮಾತೆಯ ಮಾತುಗಳನ್ನು ನೆನಪಿಸಿಕೊಂಡಾಗ ಜರುಗಿದ ಹಲವಾರು ಕೀರ್ತಿಶೇಷರ 'ಸಂಸ್ಮರಣಾ ಸಮಾರಂಭ'ಗಳ ನೆನಪು ಪದರ ಬಿಚ್ಚಿತು. ಇಲ್ಲದ ಗುಣಕ್ಕೆ ಬಣ್ಣ ಹಚ್ಚಿ ವೈಭವೀಕರಿಸುವ ಪರಿ. ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೋ, ಅದಕ್ಕಿಂತ ಹೊರತಾದ ವಿಚಾರಗಳ ಸುತ್ತಾಟ. 'ಇವರಿಗೆ ನಿಜವಾಗಿಯೂ ಪ್ರಶಸ್ತಿ ಬರಬೇಕಿತ್ತು' ಎನ್ನುವ ಒಣ ಕರೆಗಳು. 'ಇವರನ್ನು ಸಮಾಜ ಮಾನಿಸಲಿಲ್ಲ' ಎಂಬ ಅಪವಾದಗಳು. 'ಇನ್ನಾದರೂ ಸರಕಾರ ಇತ್ತ ಗಮನ ನೀಡಲಿ' ಎಂಬ 'ಘೋರ' ಕರೆ! ಮಾತನಾಡುವವನಿಗೂ ಗೊತ್ತಿದೆ, 'ತಾನು ಯಾರನ್ನು ನೆನಪಿಸುತ್ತಿದ್ದೇನೋ, ಆ ವ್ಯಕ್ತಿ ಪ್ರಸ್ತುತ ಬದುಕಿಲ್ಲ'!
               ಬದುಕಿದ್ದಾಗ.. ? ಒಳ್ಳೆಯ ಮಾತು ಬಿಡಿ, ಔಪಚಾರಿಕವಾದ ಮಾತನ್ನು ಆಡಿದ್ದಿದೆಯೇ? ಆತನ ಕಷ್ಟಗಳಿಗೆ ನೆರವಾಗುವುದು ಬೇಡ, ಮಾತಿನ ಸ್ಪಂದನವಾದರೂ ನೀಡಿದ್ದಿದೆಯೇ? ವೇದಿಕೆಗಳಲ್ಲಿ 'ಉತ್ತಮ ಕಲಾವಿದ' ಎಂದು ಹಾಡುವ ನಾವು, ನಮ್ಮ ಉತ್ತಮಿಕೆಯನ್ನು ಎಷ್ಟು ತೋರಿದ್ದೇವೆ? ಆ ಕಲಾವಿದನ ಅಭಿವ್ಯಕ್ತಿಯನ್ನೋ,  ಹಾಡನ್ನು ಎಷ್ಟು ನೋಡಿದ್ದೇವೆ, ಆಲಿಸಿದ್ದೇವೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತವಲ್ಲಾ.
                  ಡಾ. ಶೇಣಿಯವರು ದೈವಾಧೀನರಾದಾಗ ಕರಾವಳಿಯುದ್ದಕ್ಕೂ ಸಂಸ್ಮರಣೆಗಳು ನಡೆದುವು. 'ಅವರು ಎಂತಹ ವಾಚ್ ಕಟ್ಟುತ್ತಿದ್ದರು? ಯಾವ ವಿಧದ ಸೆಂಟ್ ಹಾಕಿಕೊಳ್ಳುತ್ತಿದ್ದರು? ಅವರ ವೀಳ್ಯ ತಟ್ಟೆಯ ಗುಣಾಗಾನ. ಅವರು ಧರಿಸುತ್ತಿದ್ದ ಉಡುಪು, ಕೈಯ ಉಂಗುರ..' ಹೀಗೆ ಶೇ. 90ರಷ್ಟು ವಿಚಾರಗಳು ವೈಭವ ಪಡೆದಿದ್ದುವು. ಅವರ ಕಲಾಗಾರಿಕೆ, ಮಾತಿನ ಲೋಕ, ಪಾತ್ರಗಳ ಮರುಸೃಷ್ಟಿ, ಖಳ ಪಾತ್ರಗಳ ಚಿತ್ರಣ.. ಇವೆಲ್ಲವೂ ಅಲ್ಲೋ ಇಲ್ಲೋ ನುಸುಳುತ್ತಿದ್ದುವು. ಹಾಗೆಂತೆ ಕೆಲವೆಡೆ ಉತ್ತಮವಾಗಿಯೂ ಸಂಸ್ಮರಣೆ ನಡೆದುದನ್ನು ಮರೆಯುವಂತಿಲ್ಲ.
                ಸಂಸ್ಮರಣಾ ಕಾರ್ಯಕ್ರಮಗಳು ಹೀಗೇಕಾಗುತ್ತಿವೆ? 'ತಮಗೊಂದು ಕಾರ್ಯಕ್ರಮ ಆಯಿತಲ್ಲಾ' ಎನ್ನುವ ಹಿನ್ನೆಲೆಯ ಆಯೋಜನೆ. ಯಾರನ್ನು ಸ್ಮರಿಸುತ್ತೇವೆಯೋ ಅವರ ಕುರಿತು ಒಂದಕ್ಷರ ಗೊತ್ತಿಲ್ಲದ 'ಸಂಪನ್ಮೂಲ ವ್ಯಕ್ತಿ'(!)ಯಲ್ಲಿ ಸಂಪನ್ಮೂಲದ ಕೊರತೆ. ಇವರನ್ನು ವೇದಿಕೆಯಲ್ಲಿ ಕೂರಿಸಿ ಮಾತು ಹೊರಡಿಸುವ ಸಾಹಸ. 'ಯಾಕಾಗಿ ಸ್ಮರಣೆಯನ್ನು ಮಾಡುತ್ತೇವೆ. ನಮಗೂ ಮರಣಿಸಿದ ವ್ಯಕ್ತಿಗೂ ವೈಯಕ್ತಿಕವಾದ, ಸಾಮಾಜಿಕವಾದ ಸಂಪರ್ಕಗಳಿವೆಯೋ'? 
               ಕಲಾವಿದ ಬದುಕಿದ್ದಾಗ, ಆತನ ಅಭಿವ್ಯಕ್ತಿಯನ್ನು ಒಮ್ಮೆಯೂ ನೋಡದ-ಕೇಳದ ಮಂದಿ ಬಳಿಕ ಮಾಡುವ ಸಂಸ್ಮರಣೆ ಇದೆಯಲ್ಲಾ, ಅದು ಅರ್ಥಶೂನ್ಯ. 'ಈ ಸಮಾರಂಭ ಮರಣಿಸಿದ ವ್ಯಕ್ತಿಗೆ ನೀಡುವ ಗೌರವ' ಎನ್ನುತ್ತಾ ವಂದನಾರ್ಪಣೆ ಮಾಡುತ್ತೇವೆ. ನಿಜ ಜೀವನದಲ್ಲಿ ಗೌರವ ನೀಡದ ನಾವು, ಮರಣಿಸಿದ ಬಳಿಕ ಗೌರವ ನೀಡುತ್ತೇವೆ!
               ಕಲಾವಿದ ಸಮಾಜದ ಕಣ್ಣು. ಅದನ್ನು ಕಾಪಾಡಬೇಕಾದುದು ಸಮಾಜ. ಪ್ರಸ್ತುತ ಕಾಲಮಾನದಲ್ಲಿ ಇವೆಲ್ಲವೂ ಆರ್ಥ ಕಳೆದುಕೊಳ್ಳುತ್ತಿದೆ. ಅದರ ಮೇಲೆ ಅನರ್ಥವನ್ನು ಹೇರುತ್ತೇವೆ. ಗೌರವ, ಮಾನ, ಸಂಮಾನಗಳೆಲ್ಲಾ ಶುಷ್ಕವಾಗುತ್ತಿವೆ. ಹೀಗಿರುತ್ತಾ 'ಬದುಕಿರುವಾಗ ಎಷ್ಟು ಹೊಗಳಿದ್ದೇವೆ' ಎಂಬ ಆ ಮಾತೆಯ ಮಾತಿನಲ್ಲಿ ಎಷ್ಟೊಂದು ಸತ್ಯವಿದೆಯಲ್ವಾ.

ಬದುಕಿನ ಹಳಿಯಲ್ಲಿ ಹೆದ್ದಾರಿಯ ಸವಾರಿ

            ಶೀರ್ಷಿಕೆ ಓದುವಾಗಲೇ 'ಈತ ಅಭಿವೃದ್ಧಿಯ ವಿರೋಧಿ' ಎಂಬ ಹಣೆಪಟ್ಟಿ ಸುಲಭವಾಗಿ ನೀವು ಕಟ್ಟಿಬಿಡ್ತೀರಿ. ಬರೆಹ ಪೂರ್ತಿ ಓದಿದ ಬಳಿಕ ನಿರ್ಧಾರಕ್ಕೆ ಬನ್ನಿ. ಬದುಕಿನ ವೇಗವೀಗ ದುಪ್ಪಟ್ಟು. ಎಲ್ಲವೂ ತಕ್ಷಣ ಆಗಬೇಕೆನ್ನುವ ಧಾವಂತ. ವಾಹಿನಿಗಳ ಬ್ರೇಕಿಂಗ್ ನ್ಯೂಸಿನ ಹಾಗೆ.
          ಓರ್ವ ವ್ಯಕ್ತಿಯನ್ನು ಗ್ರಹಿಸಿಕೊಂಡರೆ ಸಾಕು, 'ಓ, ಅವನಾ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ' ಎಂಬ ತಕ್ಷಣದ ತೀರ್ಮಾನ. ಕಲಾವಿದನ ಅಭಿವ್ಯಕ್ತಿಯನ್ನು ಒಂದಿಬ್ಬರು ಹೊಗಳಿದರೆನ್ನಿ, ಇಂತಹುದಕ್ಕೆ ಪ್ರತಿಕ್ರಿಯೆ ಹೇಳಲೆಂದೇ ರೂಪುಪಡೆದಿರುವ ವ್ಯಕ್ತಿ ಏನಂತಾನೆ?  'ಛೇ.. ನೀವು ಆ ವ್ಯಕ್ತಿಯನ್ನು ಹೊಗಳುವುದಾ.. ಅವನ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ..' ಎಂದು ತೀರ್ಪು ಪ್ರಕಟಿಸಿಬಿಡುತ್ತಾರೆ. ಒಬ್ಬನಿಗೆ 'ಸರಿದಾರಿ'ಯಲ್ಲೇ ಪ್ರಶಸ್ತಿ ಬಂತೆನ್ನಿ, 'ಅವನಿಗಾ ಮಾರಾಯ್ರೆ.. ಎಷ್ಟು ಕೊಟ್ಟಿದ್ದಾನೋ ಏನೋ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ..', ಎಂದು ನಾಲ್ಕು ಮಂದಿಯ ಮಧ್ಯೆ ಸುಭಗರಾಗುವವರು ಎಷ್ಟು ಮಂದಿ ಬೇಕು? ಈ 'ಎಲ್ಲವೂ ಗೊತ್ತಿದೆ' ಅಂತಾರಲ್ಲಾ, ನಿಜವಾಗಿಯೂ 'ಅವರಿಗೆ ಏನೂ ಗೊತ್ತಿರುವುದಿಲ್ಲ' ಅಂತ ನಮಗೆ ಗೊತ್ತಿರುವುದಿಲ್ಲ!
          ಋಣಾತ್ಮಕ ಪ್ರಿಯರಾದ ಇಂತಹವರ ಮಧ್ಯೆ ಜೀವಿಸುತ್ತಾ ಕೆಲವೊಮ್ಮೆ ನಾವು ಅವರಂತೆಯೇ ಆಗದಿರುವುದೇ ಬದುಕಿನ ಜಾಣ್ಮೆ. ಹಾಗಾಗಿ ತಕ್ಷಣದ ನಿರ್ಧಾರದ ಬದಲು, ವಿಷಯದ ಆéಳಕ್ಕೆ ಹೋಗಿ ಮತಿಯನ್ನು ಮಸೆದರೆ ಮಾತ್ರ ಬೌದ್ಧಿಕವಾದ ಅಭಿವೃದ್ಧಿ. ಈ ಹಿನ್ನೆಲೆಯಿಂದ ನೋಡಿದರೆ ಶೀರ್ಷಿಕೆ ಅಪ್ರಿಯವಾಗಲಾರದು.
          ದೇಶಾದ್ಯಂತ 'ಅಭಿವೃದ್ಧಿಯ ಅಲೆ' ಏಳುತ್ತಿದೆ! ಹಗರಣಗಳ ಅಭಿವೃದ್ಧಿ ಒಂದೆಡೆ, ಹೆದ್ದಾರಿಗಳ ಅಭಿವೃದ್ಧಿ ಮತ್ತೊಂದೆಡೆ. ಈಗಿನ ವಾಹನ ದಟ್ಟಣೆಗದು ಅನಿವಾರ್ಯ. ಹೆಜ್ಜೆಗೊಂದು ಮಣ್ಣುಮಾಂದಿ (ಜೆಸಿಬಿ) ಯಂತ್ರಗಳ ಸದ್ದು; ಜಲ್ಲಿ, ತಾರು, ಕಾಂಕ್ರಿಟ್.. ಹೀಗೆ ಹಲವು ಕೆಲಸಗಳಿಗೆ ಯಂತ್ರಗಳ ಬಳಕೆ. ಇವೆಲ್ಲಾ ಇಲ್ಲದಿರುತ್ತಿದ್ದರೆ ಅಭಿವೃದ್ಧಿಗೆ ವಾಯುವೇಗ ಬರುತ್ತಿರಲಿಲ್ಲ ಎಂಬುದು ಸತ್ಯ.
          ಹಿಂದಿನ ವಾರ ರಾಜಧಾನಿಗೆ ಸ್ನೇಹಿತ ಶ್ರೀರಾಮ ಪಾತಾಳರ ಆಲ್ಟೋ ಕಾರಲ್ಲಿ ಪ್ರಯಾಣಿಸುತ್ತಿದ್ದೆ. ಹಾಸನದಿಂದ ಒಂದಷ್ಟು ಕಿಲೋಮೀಟರ್ ಕ್ರಮಿಸಿದ ಬಳಿಕ ಸುಂಕ ಸಹಿತ ಚತುಷ್ಪಥ ರಸ್ತೆಯ ಪ್ರಯಾಣಾನುಭವ. ಶ್ರೀರಾಮ ಹೇಳುತ್ತಾರೆ, 'ಎಕ್ಸಿಲೇಟರ್ ಒತ್ತಿದಷ್ಟೂ ವೇಗವಾಗುವ ವಾಹನದ ವೇಗಸುಖ ಇದೆಯಲ್ಲಾ, ಅದನ್ನು ಹೇಗೆ ಹೇಳಲಿ ಮಾರಾಯ್ರೆ..'!  ಕಾರಿನೊಳಗೆ ಕುಳಿತವರಿಗೆ ಕುಲುಕಾಟವಿಲ್ಲ, ವೇಗದ ಅನುಭವವಿಲ್ಲ. ಕಿಲೋಮೀಟರ್ ತೋರಿಸುವ ಉಪಕರಣ ಮಾತ್ರ ಕ್ಷಿಪ್ರವಾಗಿ ತನ್ನ ಅಂಕಿಗಳನ್ನು ಬದಲಿಸುತ್ತಾ ಹೋಗುತ್ತದಷ್ಟೇ. ಸುಮಾರು ನೂರು ಕಿಲೋಮೀಟರ್ ದೂರ ಪ್ರಯಾಸವಿಲ್ಲದ ಪ್ರಯಾಣ.
          ಒಂಭತ್ತು ವರುಷದ ಹಿಂದೆ ಇದೇ ದಾರಿಯಲ್ಲಿ ಕಾರಿನಲ್ಲೊಮ್ಮೆ ಪ್ರಯಾಣಿಸಿದ್ದೆ. ದಾರಿಯುದ್ದಕ್ಕೂ ಹಲವು ಪಟ್ಟಣಗಳು. ಸುತ್ತಮುತ್ತ ಕೃಷಿ ಕಾರ್ಯಗಳು. ಹೂ, ಹಲಸು, ಹಣ್ಣುಗಳನ್ನು ಮಾರುತ್ತಿದ್ದ ಮಕ್ಕಳು. ಬೀಡಾ ಬೀಡಿ ಗೂಡಂಗಡಿಗಳು. ಚಿಕ್ಕ ಚಹದಂಗಡಿಗಳು. ತರಕಾರಿ ಮಾರುಕಟ್ಟೆಗಳು. ಶೆಡ್ನೊಳಗೆ ನಿತ್ಯ ಬ್ಯುಸಿಯಾಗಿರುತ್ತಿದ್ದ ಫಿಟ್ಟರ್ಗಳು, ರಸ್ತೆಗಂಟಿಕೊಂಡೇ ಹಳ್ಳಿಗಳಿಗೆ ಸಂಪರ್ಕ ನೀಡುವ ಕಚ್ಚಾ ರಸ್ತೆಗಳು.. ಹೀಗೆ ಬದುಕನ್ನು ರೂಪಿಸುವ ಹಲವು ಉಪಾಧಿಗಳನ್ನು ನೋಡಿದ ದೃಶ್ಯಗಳು ಮಾಸಿಲ್ಲ.
          ಮೊನ್ನಿನ ಪ್ರಯಾಣದಲ್ಲಿ ಮಾತ್ರ ಇವೆಲ್ಲಾ ಮಾಯ! ಚಿಕ್ಕಪುಟ್ಟ ಪಟ್ಟಣಗಳನ್ನು ಸೀಳಿ ಹೊಗುವ ಹೆದ್ದಾರಿಗಳು ಕೃಷಿ ಭೂಮಿಗಳನ್ನು ತೆಕ್ಕೆಗೆ ಸೇರಿಸಿಕೊಂಡಿವೆ. ರಸ್ತೆ ಬದಿ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿ ನಾಲ್ಕು ಕಾಸು ಸಂಪಾದಿಸಿಕೊಂಡಿದ್ದ ಎಷ್ಟೋ ಮಂದಿ ಬಹುಶಃ ಉದ್ಯೋಗವನ್ನೇ ಬದಲಿಸಿಕೊಂಡಿರಬೇಕು. ತನ್ನ ಅಂಗಳದಲ್ಲಿ ಬೆಳೆದ ತರಕಾರಿಯನ್ನು ರಸ್ತೆಯಂಚಿನಲ್ಲಿಟ್ಟು ಮಾರುತ್ತಿದ್ದ ಅಮ್ಮಂದಿರು ಎಲ್ಲಿಗೆ ಹೋದರೋ? ನೆಲಮಟ್ಟದಿಂದ ಹತ್ತಿಪ್ಪತ್ತು ಅಡಿ ಎತ್ತರಕ್ಕೆ ಏರಿಸಿಕೊಂಡ ರಸ್ತೆಗಳು ಪಟ್ಟಣವನ್ನು ಸೀಳಿದ್ದು ಮಾತ್ರವಲ್ಲ, ಬದುಕನ್ನು ಸೀಳಿರುವುದು ಹೊರ ಪ್ರಪಂಚಕ್ಕೆ ಸುದ್ದಿಯಾಗದು.
          ಒಮ್ಮೆ ಹೆದ್ದಾರಿ ಪ್ರವೇಶಿಸಿದರೆ ಆಯಿತು, ಹೊರ ಪ್ರಪಂಚ ಶೂನ್ಯವಾಗುತ್ತದೆ. ಐದಾರು ಕಿಲೋಮೀಟರಿಗೆ ಅಲ್ಲಲ್ಲಿ ಹಳ್ಳಿಯನ್ನು ಸಂಪರ್ಕಿಸಲು ಕಿರು ವ್ಯವಸ್ಥೆಯಿದೆ. ಒಂದೆರಡು ಫರ್ಲಾಂಗ್ ದೂರವನ್ನು ಮೂರ್ನಾಲ್ಕು ಕಿಲೋಮೀಟರ್ ಸುತ್ತುವಂತೆ ಮಾಡಿ, ಬದುಕನ್ನೇ ಸುರುಳಿಸಿದ ಕತೆಯು ಅಭಿವೃದ್ಧಿಯ ವೇಗದ ಸದ್ದಿಗೆ ಕೇಳಿಸದು.  'ಹೆದ್ದಾರಿ ಇರೋದು ಮನುಷ್ಯರಿಗೆ ನಡೆದಾಡಲು ಅಲ್ಲ, ಅದು ವಾಹನಗಳಿಗೆ..,' ಪುಟ್ಟಕ್ಕನ ಹೈವೇ ಸಿನಿಮಾದಲ್ಲಿ ಬರುವ ಮಾತು ನೆನಪಾಯಿತು.
          ರಸ್ತೆಯಿಂದ ಕೆಳಮಟ್ಟದಲ್ಲಿರುವ ಶಾಲೆಯ ಮಕ್ಕಳು ರಸ್ತೆಯಲ್ಲಿ ಭರ್ರನೆ ಸಾಗುವ ವಾಹನವನ್ನು ನೋಡಿ ಆನಂದಿಸುವ ಹಲವಾರು ಶಾಲೆಗಳನ್ನು ಗಮನಿಸಿದೆ. ಬಹುಶಃ ಆ ಮಕ್ಕಳನ್ನು ಒಯ್ಯುವ ವಾಹನಗಳು ಹತ್ತಾರು ಕಿಲೋಮೀಟರ್ ಸುತ್ತುಬಳಸಿ ಹೆದ್ದಾರಿ ಪ್ರವೇಶಿಸಬೇಕಷ್ಟೇ.
          ಬದುಕಿನಿಂದ, ಜನರಿಂದ, ಪಟ್ಟಣದಿಂದ ದೂರವಾಗಿ ಸಾಗುವ ಹೆದ್ದಾರಿಯ ಕೆಲಸಗಳು ಭರದಿಂದ ನಡೆಯುತ್ತಿದೆ. 'ಸಾರ್, ಎಲ್ಲಾ ಕೆಲಸಗಳು ಪೂರ್ತಿಯಾದರೆ ಪುತ್ತೂರಿನಿಂದ ಬೆಂಗಳೂರು ತಲುಪಲು ಐದು ಗಂಟೆಯೂ ಬೇಡ,' ಶ್ರೀರಾಮ ಪಾತಾಳರು ವಿನೋದಕ್ಕಾಡಿದರು. ಈ ಮಾತಿನ ಹಿಂದೆ ಅವಿತ 'ಜೀವಭಯ' ಕಾರನ್ನು ಸುತ್ತಿ ಮಿಂಚಿ ಮರೆಯಾಯಿತು!
          ಹಳ್ಳಿಯ ಸೌಂದರ್ಯ, ಬದುಕು, ವೈವಿಧ್ಯದ ಜನಜೀವನಗಳು 'ಅನಿವಾರ್ಯ'ವಾಗಿ ಹೆದ್ದಾರಿಯ 'ಅಭಿವೃದ್ಧಿ'ಗೆ ತಮ್ಮನ್ನು ಸಮರ್ಪಿಸಿಕೊಂಡಿವೆ. ಇವನ್ನು ಮತ್ತೆಂದೂ ನೋಡಲು ಸಾಧ್ಯವಿಲ್ಲ. ಪುನಃ ಸ್ಥಾಪಿಸುತ್ತೇವೆ ಎಂದರೂ ಸಾಧ್ಯವಾಗದ ಮಾತು. ಒಮ್ಮೆ ವಿಚಲಿತವಾದ ಬದುಕು ಹಳಿಗೆ ಬಾರದು. ಹಳ್ಳಿಗಳಲ್ಲಿ ಹೊಟ್ಟೆಪಾಡಿಗಾಗಿ ಅಂಗಡಿಯನ್ನೋ, ಹೋಟೆಲನ್ನೋ ನಡೆಸುತ್ತಿದ್ದವ ಬೇರೆ ಉದ್ಯೋಗಕ್ಕಾಗಿ ನಗರವನ್ನು ಅವಲಂಬಿಸಬೇಕು. ಆತ ನಗರಕ್ಕೆ ಹೋಗಲು ಹೆದ್ದಾರಿ ಕೈಬೀಸಿ ಕರೆಯುತ್ತಿದೆ.
          ವರುಷಗಳು ಉರುಳುತ್ತಿವೆ. ಅಳಿದುಳಿದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ತ್ರಾಸವಾದಾಗ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಪುಡಿಗಾಸಿಗೆ ಭೂಮಿಯನ್ನು ಮಾರಿ ಹಳ್ಳಿಗರು ನಗರ ಸೇರುತ್ತಾರೆ. ಕೆಲವರು ಸೇರಿದ್ದಾರೆ. ನಗರದ ಬದುಕು ಹೈರಾಣವಾದಾಗ ಪುನಃ ಹಳ್ಳಿಗೆ ಬರೋಣವೋ, ಹಳ್ಳಿಯಲ್ಲಿ ಜಾಗವಿಲ್ಲ! ತಾನಿದ್ದ ಭೂಮಿ ಇನ್ನೊಬ್ಬರ ವಶವಾಗಿದೆ. ತನ್ನಲ್ಲಿದ್ದ ಹಣದಲ್ಲಿ ಜಾಗ ಖರೀದಿಸಬಯಸಿದರೆ, ದರ ಮಾತ್ರ ಕೋಟಿಗಳ ಲೆಕ್ಕದಲ್ಲಿ ಹರಿದಾಡುತ್ತಿರುತ್ತದೆ. ಇತ್ತ ನಗರವೂ ಸಲ್ಲ, ಅತ್ತ ಹಳ್ಳಿಯೂ ಸಲ್ಲ. ಬದುಕು ಹೈರಾಣ. ಆಗ ಒತ್ತಡ, ಸಕ್ಕರೆ ಕಾಯಿಲೆ, ವಿವಿಧ ಅಸೌಖ್ಯಗಳು ಅಟ್ಟಿಸಿಕೊಂಡು ಬರುತ್ತವೆ. ದುಡಿದ ಹಣದ ಮುಕ್ಕಾಲು ಪಾಲು ಮೆಡಿಕಲ್ ಶಾಪಿಗೋ, ಆಸ್ಪತ್ರೆಗೋ ವ್ಯಯವಾಗುತ್ತದೆ.
             ಬದುಕನ್ನು ಆಪೋಶನಗೈದ 'ಈ ಅಭಿವೃದ್ಧಿಯು ವೇಗದ ಬದುಕು ಅನಿವಾರ್ಯ'! ಎಂದು ಒಪ್ಪಿಕೊಳ್ಳೋಣ.  ರಸ್ತೆಯನ್ನಾದರೂ ಪುನಃ ನಿರ್ಮಿಸಬಹುದು. ಕೋಟಿಯಲ್ಲ, ಮಿಲಿಯ ರೂಪಾಯಿ ವ್ಯಯಿಸಿ ಹೆದ್ದಾರಿಯನ್ನು ಇನ್ನೊಮ್ಮೆ ರೂಪಿಸಬಹುದು. ಆದರೆ ಕಳೆದುಹೋದ ಬದುಕನ್ನು ಪಡೆಯುವುದಾದರೂ ಹೇಗೆ? ಸಂದು ಹೋದ ಸಂಸ್ಕೃತಿಯನ್ನು ಮರಳಿ ರೂಪಿಸುವುದಾದರೂ ಹೇಗೆ? ಈ ಚಿಂತನೆ ಶುರುವಾಗುವಾಗ ಅಷ್ಟಪಥದ ಯೋಜನಾ ಆದೇಶಕ್ಕೆ ದೊರೆಗಳ ಸಹಿಯಾಗಿರುತ್ತದೆ. ಇದೇ ಮಣ್ಣುಮಾಂದಿ ಯಂತ್ರವು ಈಗಿರುವ ಚತುಷ್ಪಥವನ್ನು ಪುಡಿಗೈಯಲು ಸಜ್ಜಾಗಿರುತ್ತದೆ!