ಓರ್ವ ವ್ಯಕ್ತಿಯನ್ನು ಗ್ರಹಿಸಿಕೊಂಡರೆ ಸಾಕು, 'ಓ, ಅವನಾ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ' ಎಂಬ ತಕ್ಷಣದ ತೀರ್ಮಾನ. ಕಲಾವಿದನ ಅಭಿವ್ಯಕ್ತಿಯನ್ನು ಒಂದಿಬ್ಬರು ಹೊಗಳಿದರೆನ್ನಿ, ಇಂತಹುದಕ್ಕೆ ಪ್ರತಿಕ್ರಿಯೆ ಹೇಳಲೆಂದೇ ರೂಪುಪಡೆದಿರುವ ವ್ಯಕ್ತಿ ಏನಂತಾನೆ? 'ಛೇ.. ನೀವು ಆ ವ್ಯಕ್ತಿಯನ್ನು ಹೊಗಳುವುದಾ.. ಅವನ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ..' ಎಂದು ತೀರ್ಪು ಪ್ರಕಟಿಸಿಬಿಡುತ್ತಾರೆ. ಒಬ್ಬನಿಗೆ 'ಸರಿದಾರಿ'ಯಲ್ಲೇ ಪ್ರಶಸ್ತಿ ಬಂತೆನ್ನಿ, 'ಅವನಿಗಾ ಮಾರಾಯ್ರೆ.. ಎಷ್ಟು ಕೊಟ್ಟಿದ್ದಾನೋ ಏನೋ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ..', ಎಂದು ನಾಲ್ಕು ಮಂದಿಯ ಮಧ್ಯೆ ಸುಭಗರಾಗುವವರು ಎಷ್ಟು ಮಂದಿ ಬೇಕು? ಈ 'ಎಲ್ಲವೂ ಗೊತ್ತಿದೆ' ಅಂತಾರಲ್ಲಾ, ನಿಜವಾಗಿಯೂ 'ಅವರಿಗೆ ಏನೂ ಗೊತ್ತಿರುವುದಿಲ್ಲ' ಅಂತ ನಮಗೆ ಗೊತ್ತಿರುವುದಿಲ್ಲ!
ಋಣಾತ್ಮಕ ಪ್ರಿಯರಾದ ಇಂತಹವರ ಮಧ್ಯೆ ಜೀವಿಸುತ್ತಾ ಕೆಲವೊಮ್ಮೆ ನಾವು ಅವರಂತೆಯೇ ಆಗದಿರುವುದೇ ಬದುಕಿನ ಜಾಣ್ಮೆ. ಹಾಗಾಗಿ ತಕ್ಷಣದ ನಿರ್ಧಾರದ ಬದಲು, ವಿಷಯದ ಆéಳಕ್ಕೆ ಹೋಗಿ ಮತಿಯನ್ನು ಮಸೆದರೆ ಮಾತ್ರ ಬೌದ್ಧಿಕವಾದ ಅಭಿವೃದ್ಧಿ. ಈ ಹಿನ್ನೆಲೆಯಿಂದ ನೋಡಿದರೆ ಶೀರ್ಷಿಕೆ ಅಪ್ರಿಯವಾಗಲಾರದು.
ದೇಶಾದ್ಯಂತ 'ಅಭಿವೃದ್ಧಿಯ ಅಲೆ' ಏಳುತ್ತಿದೆ! ಹಗರಣಗಳ ಅಭಿವೃದ್ಧಿ ಒಂದೆಡೆ, ಹೆದ್ದಾರಿಗಳ ಅಭಿವೃದ್ಧಿ ಮತ್ತೊಂದೆಡೆ. ಈಗಿನ ವಾಹನ ದಟ್ಟಣೆಗದು ಅನಿವಾರ್ಯ. ಹೆಜ್ಜೆಗೊಂದು ಮಣ್ಣುಮಾಂದಿ (ಜೆಸಿಬಿ) ಯಂತ್ರಗಳ ಸದ್ದು; ಜಲ್ಲಿ, ತಾರು, ಕಾಂಕ್ರಿಟ್.. ಹೀಗೆ ಹಲವು ಕೆಲಸಗಳಿಗೆ ಯಂತ್ರಗಳ ಬಳಕೆ. ಇವೆಲ್ಲಾ ಇಲ್ಲದಿರುತ್ತಿದ್ದರೆ ಅಭಿವೃದ್ಧಿಗೆ ವಾಯುವೇಗ ಬರುತ್ತಿರಲಿಲ್ಲ ಎಂಬುದು ಸತ್ಯ.
ಹಿಂದಿನ ವಾರ ರಾಜಧಾನಿಗೆ ಸ್ನೇಹಿತ ಶ್ರೀರಾಮ ಪಾತಾಳರ ಆಲ್ಟೋ ಕಾರಲ್ಲಿ ಪ್ರಯಾಣಿಸುತ್ತಿದ್ದೆ. ಹಾಸನದಿಂದ ಒಂದಷ್ಟು ಕಿಲೋಮೀಟರ್ ಕ್ರಮಿಸಿದ ಬಳಿಕ ಸುಂಕ ಸಹಿತ ಚತುಷ್ಪಥ ರಸ್ತೆಯ ಪ್ರಯಾಣಾನುಭವ. ಶ್ರೀರಾಮ ಹೇಳುತ್ತಾರೆ, 'ಎಕ್ಸಿಲೇಟರ್ ಒತ್ತಿದಷ್ಟೂ ವೇಗವಾಗುವ ವಾಹನದ ವೇಗಸುಖ ಇದೆಯಲ್ಲಾ, ಅದನ್ನು ಹೇಗೆ ಹೇಳಲಿ ಮಾರಾಯ್ರೆ..'! ಕಾರಿನೊಳಗೆ ಕುಳಿತವರಿಗೆ ಕುಲುಕಾಟವಿಲ್ಲ, ವೇಗದ ಅನುಭವವಿಲ್ಲ. ಕಿಲೋಮೀಟರ್ ತೋರಿಸುವ ಉಪಕರಣ ಮಾತ್ರ ಕ್ಷಿಪ್ರವಾಗಿ ತನ್ನ ಅಂಕಿಗಳನ್ನು ಬದಲಿಸುತ್ತಾ ಹೋಗುತ್ತದಷ್ಟೇ. ಸುಮಾರು ನೂರು ಕಿಲೋಮೀಟರ್ ದೂರ ಪ್ರಯಾಸವಿಲ್ಲದ ಪ್ರಯಾಣ.
ಒಂಭತ್ತು ವರುಷದ ಹಿಂದೆ ಇದೇ ದಾರಿಯಲ್ಲಿ ಕಾರಿನಲ್ಲೊಮ್ಮೆ ಪ್ರಯಾಣಿಸಿದ್ದೆ. ದಾರಿಯುದ್ದಕ್ಕೂ ಹಲವು ಪಟ್ಟಣಗಳು. ಸುತ್ತಮುತ್ತ ಕೃಷಿ ಕಾರ್ಯಗಳು. ಹೂ, ಹಲಸು, ಹಣ್ಣುಗಳನ್ನು ಮಾರುತ್ತಿದ್ದ ಮಕ್ಕಳು. ಬೀಡಾ ಬೀಡಿ ಗೂಡಂಗಡಿಗಳು. ಚಿಕ್ಕ ಚಹದಂಗಡಿಗಳು. ತರಕಾರಿ ಮಾರುಕಟ್ಟೆಗಳು. ಶೆಡ್ನೊಳಗೆ ನಿತ್ಯ ಬ್ಯುಸಿಯಾಗಿರುತ್ತಿದ್ದ ಫಿಟ್ಟರ್ಗಳು, ರಸ್ತೆಗಂಟಿಕೊಂಡೇ ಹಳ್ಳಿಗಳಿಗೆ ಸಂಪರ್ಕ ನೀಡುವ ಕಚ್ಚಾ ರಸ್ತೆಗಳು.. ಹೀಗೆ ಬದುಕನ್ನು ರೂಪಿಸುವ ಹಲವು ಉಪಾಧಿಗಳನ್ನು ನೋಡಿದ ದೃಶ್ಯಗಳು ಮಾಸಿಲ್ಲ.
ಮೊನ್ನಿನ ಪ್ರಯಾಣದಲ್ಲಿ ಮಾತ್ರ ಇವೆಲ್ಲಾ ಮಾಯ! ಚಿಕ್ಕಪುಟ್ಟ ಪಟ್ಟಣಗಳನ್ನು ಸೀಳಿ ಹೊಗುವ ಹೆದ್ದಾರಿಗಳು ಕೃಷಿ ಭೂಮಿಗಳನ್ನು ತೆಕ್ಕೆಗೆ ಸೇರಿಸಿಕೊಂಡಿವೆ. ರಸ್ತೆ ಬದಿ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿ ನಾಲ್ಕು ಕಾಸು ಸಂಪಾದಿಸಿಕೊಂಡಿದ್ದ ಎಷ್ಟೋ ಮಂದಿ ಬಹುಶಃ ಉದ್ಯೋಗವನ್ನೇ ಬದಲಿಸಿಕೊಂಡಿರಬೇಕು. ತನ್ನ ಅಂಗಳದಲ್ಲಿ ಬೆಳೆದ ತರಕಾರಿಯನ್ನು ರಸ್ತೆಯಂಚಿನಲ್ಲಿಟ್ಟು ಮಾರುತ್ತಿದ್ದ ಅಮ್ಮಂದಿರು ಎಲ್ಲಿಗೆ ಹೋದರೋ? ನೆಲಮಟ್ಟದಿಂದ ಹತ್ತಿಪ್ಪತ್ತು ಅಡಿ ಎತ್ತರಕ್ಕೆ ಏರಿಸಿಕೊಂಡ ರಸ್ತೆಗಳು ಪಟ್ಟಣವನ್ನು ಸೀಳಿದ್ದು ಮಾತ್ರವಲ್ಲ, ಬದುಕನ್ನು ಸೀಳಿರುವುದು ಹೊರ ಪ್ರಪಂಚಕ್ಕೆ ಸುದ್ದಿಯಾಗದು.
ಒಮ್ಮೆ ಹೆದ್ದಾರಿ ಪ್ರವೇಶಿಸಿದರೆ ಆಯಿತು, ಹೊರ ಪ್ರಪಂಚ ಶೂನ್ಯವಾಗುತ್ತದೆ. ಐದಾರು ಕಿಲೋಮೀಟರಿಗೆ ಅಲ್ಲಲ್ಲಿ ಹಳ್ಳಿಯನ್ನು ಸಂಪರ್ಕಿಸಲು ಕಿರು ವ್ಯವಸ್ಥೆಯಿದೆ. ಒಂದೆರಡು ಫರ್ಲಾಂಗ್ ದೂರವನ್ನು ಮೂರ್ನಾಲ್ಕು ಕಿಲೋಮೀಟರ್ ಸುತ್ತುವಂತೆ ಮಾಡಿ, ಬದುಕನ್ನೇ ಸುರುಳಿಸಿದ ಕತೆಯು ಅಭಿವೃದ್ಧಿಯ ವೇಗದ ಸದ್ದಿಗೆ ಕೇಳಿಸದು. 'ಹೆದ್ದಾರಿ ಇರೋದು ಮನುಷ್ಯರಿಗೆ ನಡೆದಾಡಲು ಅಲ್ಲ, ಅದು ವಾಹನಗಳಿಗೆ..,' ಪುಟ್ಟಕ್ಕನ ಹೈವೇ ಸಿನಿಮಾದಲ್ಲಿ ಬರುವ ಮಾತು ನೆನಪಾಯಿತು.
ರಸ್ತೆಯಿಂದ ಕೆಳಮಟ್ಟದಲ್ಲಿರುವ ಶಾಲೆಯ ಮಕ್ಕಳು ರಸ್ತೆಯಲ್ಲಿ ಭರ್ರನೆ ಸಾಗುವ ವಾಹನವನ್ನು ನೋಡಿ ಆನಂದಿಸುವ ಹಲವಾರು ಶಾಲೆಗಳನ್ನು ಗಮನಿಸಿದೆ. ಬಹುಶಃ ಆ ಮಕ್ಕಳನ್ನು ಒಯ್ಯುವ ವಾಹನಗಳು ಹತ್ತಾರು ಕಿಲೋಮೀಟರ್ ಸುತ್ತುಬಳಸಿ ಹೆದ್ದಾರಿ ಪ್ರವೇಶಿಸಬೇಕಷ್ಟೇ.
ಬದುಕಿನಿಂದ, ಜನರಿಂದ, ಪಟ್ಟಣದಿಂದ ದೂರವಾಗಿ ಸಾಗುವ ಹೆದ್ದಾರಿಯ ಕೆಲಸಗಳು ಭರದಿಂದ ನಡೆಯುತ್ತಿದೆ. 'ಸಾರ್, ಎಲ್ಲಾ ಕೆಲಸಗಳು ಪೂರ್ತಿಯಾದರೆ ಪುತ್ತೂರಿನಿಂದ ಬೆಂಗಳೂರು ತಲುಪಲು ಐದು ಗಂಟೆಯೂ ಬೇಡ,' ಶ್ರೀರಾಮ ಪಾತಾಳರು ವಿನೋದಕ್ಕಾಡಿದರು. ಈ ಮಾತಿನ ಹಿಂದೆ ಅವಿತ 'ಜೀವಭಯ' ಕಾರನ್ನು ಸುತ್ತಿ ಮಿಂಚಿ ಮರೆಯಾಯಿತು!
ಹಳ್ಳಿಯ ಸೌಂದರ್ಯ, ಬದುಕು, ವೈವಿಧ್ಯದ ಜನಜೀವನಗಳು 'ಅನಿವಾರ್ಯ'ವಾಗಿ ಹೆದ್ದಾರಿಯ 'ಅಭಿವೃದ್ಧಿ'ಗೆ ತಮ್ಮನ್ನು ಸಮರ್ಪಿಸಿಕೊಂಡಿವೆ. ಇವನ್ನು ಮತ್ತೆಂದೂ ನೋಡಲು ಸಾಧ್ಯವಿಲ್ಲ. ಪುನಃ ಸ್ಥಾಪಿಸುತ್ತೇವೆ ಎಂದರೂ ಸಾಧ್ಯವಾಗದ ಮಾತು. ಒಮ್ಮೆ ವಿಚಲಿತವಾದ ಬದುಕು ಹಳಿಗೆ ಬಾರದು. ಹಳ್ಳಿಗಳಲ್ಲಿ ಹೊಟ್ಟೆಪಾಡಿಗಾಗಿ ಅಂಗಡಿಯನ್ನೋ, ಹೋಟೆಲನ್ನೋ ನಡೆಸುತ್ತಿದ್ದವ ಬೇರೆ ಉದ್ಯೋಗಕ್ಕಾಗಿ ನಗರವನ್ನು ಅವಲಂಬಿಸಬೇಕು. ಆತ ನಗರಕ್ಕೆ ಹೋಗಲು ಹೆದ್ದಾರಿ ಕೈಬೀಸಿ ಕರೆಯುತ್ತಿದೆ.
ವರುಷಗಳು ಉರುಳುತ್ತಿವೆ. ಅಳಿದುಳಿದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ತ್ರಾಸವಾದಾಗ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಪುಡಿಗಾಸಿಗೆ ಭೂಮಿಯನ್ನು ಮಾರಿ ಹಳ್ಳಿಗರು ನಗರ ಸೇರುತ್ತಾರೆ. ಕೆಲವರು ಸೇರಿದ್ದಾರೆ. ನಗರದ ಬದುಕು ಹೈರಾಣವಾದಾಗ ಪುನಃ ಹಳ್ಳಿಗೆ ಬರೋಣವೋ, ಹಳ್ಳಿಯಲ್ಲಿ ಜಾಗವಿಲ್ಲ! ತಾನಿದ್ದ ಭೂಮಿ ಇನ್ನೊಬ್ಬರ ವಶವಾಗಿದೆ. ತನ್ನಲ್ಲಿದ್ದ ಹಣದಲ್ಲಿ ಜಾಗ ಖರೀದಿಸಬಯಸಿದರೆ, ದರ ಮಾತ್ರ ಕೋಟಿಗಳ ಲೆಕ್ಕದಲ್ಲಿ ಹರಿದಾಡುತ್ತಿರುತ್ತದೆ. ಇತ್ತ ನಗರವೂ ಸಲ್ಲ, ಅತ್ತ ಹಳ್ಳಿಯೂ ಸಲ್ಲ. ಬದುಕು ಹೈರಾಣ. ಆಗ ಒತ್ತಡ, ಸಕ್ಕರೆ ಕಾಯಿಲೆ, ವಿವಿಧ ಅಸೌಖ್ಯಗಳು ಅಟ್ಟಿಸಿಕೊಂಡು ಬರುತ್ತವೆ. ದುಡಿದ ಹಣದ ಮುಕ್ಕಾಲು ಪಾಲು ಮೆಡಿಕಲ್ ಶಾಪಿಗೋ, ಆಸ್ಪತ್ರೆಗೋ ವ್ಯಯವಾಗುತ್ತದೆ.
ಬದುಕನ್ನು ಆಪೋಶನಗೈದ 'ಈ ಅಭಿವೃದ್ಧಿಯು ವೇಗದ ಬದುಕು ಅನಿವಾರ್ಯ'! ಎಂದು ಒಪ್ಪಿಕೊಳ್ಳೋಣ. ರಸ್ತೆಯನ್ನಾದರೂ ಪುನಃ ನಿರ್ಮಿಸಬಹುದು. ಕೋಟಿಯಲ್ಲ, ಮಿಲಿಯ ರೂಪಾಯಿ ವ್ಯಯಿಸಿ ಹೆದ್ದಾರಿಯನ್ನು ಇನ್ನೊಮ್ಮೆ ರೂಪಿಸಬಹುದು. ಆದರೆ ಕಳೆದುಹೋದ ಬದುಕನ್ನು ಪಡೆಯುವುದಾದರೂ ಹೇಗೆ? ಸಂದು ಹೋದ ಸಂಸ್ಕೃತಿಯನ್ನು ಮರಳಿ ರೂಪಿಸುವುದಾದರೂ ಹೇಗೆ? ಈ ಚಿಂತನೆ ಶುರುವಾಗುವಾಗ ಅಷ್ಟಪಥದ ಯೋಜನಾ ಆದೇಶಕ್ಕೆ ದೊರೆಗಳ ಸಹಿಯಾಗಿರುತ್ತದೆ. ಇದೇ ಮಣ್ಣುಮಾಂದಿ ಯಂತ್ರವು ಈಗಿರುವ ಚತುಷ್ಪಥವನ್ನು ಪುಡಿಗೈಯಲು ಸಜ್ಜಾಗಿರುತ್ತದೆ!
0 comments:
Post a Comment