Wednesday, September 26, 2012

'ನಿರ್ವಿಷ ತರಕಾರಿ'ಯ ಸುತ್ತ...


           ತೊಂಡೆಕಾಯಿ ಕೃಷಿ ಮಾಡುವ ರೈತರಲ್ಲಿಗೆ ಭೇಟಿ ನೀಡಿದ್ದೆ. ಹುಲುಸಾದ ಗಿಡಗಳು. ಬರೋಬ್ಬರಿ ಫಸಲು. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ. ಆಶಾದಾಯಕ ದರ.
          'ಸಾರ್, ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಣೆ ಆಗಾಗ್ಗೆ ಬೇಕಾಗುತ್ತೆ. ಅದಿಲ್ಲದೆ ಬೆಳೆಯಲು ಅಸಾಧ್ಯವಾಗಿದೆ. ಇವೆಲ್ಲಾ ಮಾರುಕಟ್ಟೆ ದೃಷ್ಟಿಯಿಂದ ಬೆಳೆಯುವಂತಾದ್ದು. ಮನೆ ಬಳಕೆಗಾಗಿ ರಾಸಾಯನಿಕ ಬಳಸದೆ ಬೆಳೆಯುತ್ತಿದ್ದೇವೆ,' ಎಂದರು.
          ಮನೆಬಳಕೆಗೆ ನಿರ್ವಿಷ ತರಕಾರಿ. ಮಾರುಕಟ್ಟೆಗಾಗಿ ಬೆಳೆಯುವುದಕ್ಕೆ ವಿಷ ಸ್ನಾನ. ಇದಕ್ಕೆ 'ಅನಿವಾರ್ಯ'ದ ಸಮರ್ಥನೆ. ಮಾರುಕಟ್ಟೆಯಿಂದ ಒಯ್ಯುವವರು ಮನುಷ್ಯರು ತಾನೆ? ತಾನು ಬದುಕಬೇಕು, ಉಳಿದವರು ಏನಾದರೆ ಏನಂತೆ!
          ಬಹುತೇಕ ಹೊಲಗಳಲ್ಲಿ ಇಂತಹ ದ್ವಂದ್ವಗಳು ನಿರಂತರ. ವರುಷದ ಹಿಂದೆ ರಾಜಧಾನಿಯ ಸನಿಹ ಟೊಮೆಟೋ ಹೊಲಕ್ಕೆ ಹೋದಾಗಲೂ ಇಂತಹುದೇ ಅನುಭವ. ಮಾರುಕಟ್ಟೆಗಾಗಿ ಬೆಳೆದ ತರಕಾರಿಯನ್ನು ತಾನ್ಯಾಕೆ ತಿನ್ನುತ್ತಿಲ್ಲ? ತನ್ನ ಮನೆಯವರು ಯಾಕೆ ಬಳಸುತ್ತಿಲ್ಲ? ಬಂಧುಗಳಿಗೆ ಯಾಕೆ ನೀಡುತ್ತಿಲ್ಲ. ಅವನಿಗೆ ಗೊತ್ತಿದೆ, ಈ ತರಕಾರಿಗಳು ವಿಷದಲ್ಲಿ ಮಿಂದಿವೆ!
          ಪುತ್ತೂರು ಮಾರುಕಟ್ಟೆಗೊಮ್ಮೆ ಎಳೆಯ ಮುಳ್ಳುಸೌತೆ ಬಂದಿತ್ತು. ದುಬಾರಿ ದರ. ಬಾಯಿ ರುಚಿ ಅಧಿಕವಾಗಿ ಖರೀದಿಸಿದೆ. ಮಿತಿಗಿಂತ ಹೆಚ್ಚೇ ಹೊಟ್ಟೆ ಸೇರಿತ್ತು. ಒಂದರ್ಧ ಗಂಟೆ ಕಳೆದಿರಬಹುದಷ್ಟೇ. ನಾಲಗೆಯೆಲ್ಲಾ ದಪ್ಪ ದಪ್ಪ! ರಸಗ್ರಂಥಿಗಳು ಮುಷ್ಕರ ಹೂಡಿದ್ದುವು! ಸರಿಹೋಗಲು ಮೂರ್ನಾಲ್ಕು ದಿವಸಗಳು ಬೇಕಾಯಿತು. ಇನ್ನೊಮ್ಮೆ ಎಳೆ ಜೋಳ ತಿಂದಾಗಲೂ ಇಂತಹುದೇ ಅನುಭವ. ವೈದ್ಯರನ್ನು ಸಂಪರ್ಕಿಸಿ ವಿವರ ತಿಳಿಸಿದಾಗ 'ಇವೆಲ್ಲವೂ ಸಿಂಪಡಣೆಗಳ ಕಾರುಬಾರು' ಎಂದು ನಕ್ಕರು.
          ಹಲವು ಸಿಂಪಡಣೆಗಳಿಂದ ತೋಯ್ದ ತರಕಾರಿಗಳನ್ನು ಗೊತ್ತಿದ್ದೂ ಖರೀದಿಸುತ್ತೇವೆ. ಗೊತ್ತಿಲ್ಲದೆಯೂ ಹೊಟ್ಟೆ ಸೇರುತ್ತದೆ. ವಿಷ ಸಿಂಪಡಣೆಯ ಗಾಢತೆಯ ಅರಿವು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾಗುವಾಗ ಹೊತ್ತು ಮೀರಿರುತ್ತದೆ! 'ಕೀಟನಾಶಕ ಸಿಂಪಡಿಸದೆ ತರಕಾರಿ ಬೆಳೆಯುವುದಾದರೂ ಹೇಗೆ?', 'ರಾಸಾಯನಿಕ ಗೊಬ್ಬರ ಉಣಿಸದೆ ಗಿಡ ಬದುಕುವುದಾದರೂ ಹೇಗೆ' ಎಂಬ ಪ್ರಶ್ನೆಗಳು ಬಹುತೇಕ 'ವೈಭವ' ಪಡೆಯುವುದು ಹೆಚ್ಚು. 'ಇದಕ್ಕೆ ಬದಲಿ ಮಾರ್ಗವೇ ಇಲ್ಲ' ಎಂದು ಗೊಬ್ಬರ, ವಿಷವನ್ನು ಪೂರೈಸುವ ಅಂಗಡಿಗಳೂ ಉಪದೇಶಿಸುತ್ತವೆ.
          ಕೃಷಿಕನಿಗೆ ಪರ್ಯಾಯ ದಾರಿ ಕಾಣದು. ಹೆಚ್ಚು ಇಳುವರಿ ಬಂದರೆ ಅಧಿಕ ಲಾಭ. ಲಾಭ ಬಾರದಿದ್ದರೆ ಕುಟುಂಬದ ನಿರ್ವಹಣೆ ತ್ರಾಸ. ವಿಷ ಕಂಪೆನಿಗಳು ಹೇಳಿದಂತೆ, ಅದನ್ನು ಮಾರುವ ಕಂಪೆನಿಗಳ ನಿರೂಪದಂತೆ ಕೃಷಿ ಮಾಡುತ್ತಾನೆ, ಬೇಕೋ ಬೇಡ್ವೋ ಸಿಂಪಡಣೆ ಮಾಡುತ್ತಾ ಇರುತ್ತಾನೆ. ಆರೋಗ್ಯದ ಕುರಿತು ಮಾತನಾಡಿದರೆ ಇವರ್ಯಾರಲ್ಲೂ ಉತ್ತರವಿರುವುದಿಲ್ಲ.
            ವಿಷದಲ್ಲಿ ಮಿಂದ ತರಕಾರಿಗಳು ನಗರ ಪ್ರವೇಶಿಸುತ್ತವೆ. ಅಡುಗೆ ಮನೆ ಹೊಕ್ಕುತ್ತವೆ. ವಿವಿಧ ರೂಪದಲ್ಲಿ ಉದರಕ್ಕಿಳಿಯುತ್ತವೆ. ಒಂದು ದಿವಸವಾದರೆ ಓಕೆ, ನಿರಂತರ ಈ ಪ್ರಕ್ರಿಯೆ ನಡೆಯುತ್ತಾ ಇದ್ದರೆ? 'ತರಕಾರಿಗೆ ಸಿಂಪಡಣೆ ಮಾಡಿದ್ದರಿಂದ ಏನೂ ತೊಂದ್ರೆಯಿಲ್ಲ. ಆರೋಗ್ಯಕ್ಕೂ ಹಾನಿಯಿಲ್ಲ' ಎನ್ನುವ ಕಂಪೆನಿ ಪ್ರಣೀತ ಮಾತುಗಳು ವಿವಿಧ ರೂಪಗಳಲ್ಲಿ ಬಿತ್ತರವಾಗುತ್ತಲೇ ಇರುತ್ತವೆ.
             'ತರಕಾರಿ ಕೃಷಿ ಮಾಡಲು ಸಿಂಪಡಣೆ ಅನಿವಾರ್ಯ' ಎಂದು ವೇದಿಕೆಯಲ್ಲಿ ಉಚ್ಛಸ್ವರದಲ್ಲಿ ಹೇಳುವ ನಾವು ಎಂದಾದರೂ ವಿಷ ರಹಿತವಾಗಿ ತರಕಾರಿ ಬೆಳೆಯಲು ಪ್ರಯತ್ನಿಸಿದ್ದೇವೆಯಾ? ವಿಷ ರಹಿತವಾಗಿ ಬೆಳೆದ ರೈತನ ತೋಟವನ್ನು ಸಂದರ್ಶನ ಮಾಡಿದುದಿದೆಯೋ? ಕೀಟನಾಶಕಕ್ಕೆ ಪರ್ಯಾಯವಾಗಿ ಏನು ಸಿಂಪಡಿಸಿರಬಹುದು ಎಂಬ ಪ್ರಶ್ನೆಗಳು ಮನದೊಳಗೆ ಎಂದಾದರೂ ಮೂಡಿವೆಯೇ? ಇಲ್ಲವೇ ಇಲ್ಲ. ಬರೇ ಹೇಳಿಕೆಗಳು ಮಾನಸಿಕವಾದ ಸ್ಥಿತಿಗಳನ್ನು ಅಲ್ಲಾಡಿಸಬಹುದಷ್ಟೇ.
                 ಸಿಂಪಡಣೆಯ ಹೊರತಾಗಿ ಪರ್ಯಾಯ ದಾರಿಗಳನ್ನು ತಾವೇ ರೂಪಿಸಿಕೊಂಡು 'ನಿರ್ವಿಷ ತರಕಾರಿ'ಯನ್ನು ಬೆಳೆಯುವ ಕೃಷಿಕರು ಸಾಕಷ್ಟು ಮಂದಿ ಇದ್ದಾರೆ. ಅವರೆಂದೂ ಸದ್ದು ಮಾಡುವುದಿಲ್ಲ. ಮನೆ ಮಟ್ಟಕ್ಕೆ ಮಾತ್ರವಲ್ಲದೆ, ಮಾರುಕಟ್ಟೆ ಮಾಡುವಲ್ಲೂ ಯಶಸ್ವಿಯಾದವರಿದ್ದಾರೆ. ಇಂತಹ ಸಮಾನ ಆಸಕ್ತಿಯ ತರಕಾರಿ ಕೃಷಿಕರನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಬಂಟ್ವಾಳ (ದ.ಕ.) ತಾಲೂಕಿನ ಉಬರು ಕೇಪು 'ಹಲಸು ಸ್ನೇಹಿ ಕೂಟ' ಹೆಜ್ಜೆಯಿಟ್ಟಿದೆ. ಮಾರುಕಟ್ಟೆಯನ್ನು ಅವಲಂಬಿಸದೆ ವರುಷ ಪೂರ್ತಿ ತಾವೆ ತರಕಾರಿ ಬೆಳೆಯುವ ರೈತರಿಗೆ ಆದ್ಯತೆ ನೀಡಿದೆ. ಒಬ್ಬ ಕೃಷಿಕನ 'ಕೆಣಿ' (ಉಪಾಯ) ಇನ್ನೊಬ್ಬನಿಗೆ ಜ್ಞಾನವಾಗುತ್ತದೆ. ಇಂತಹ ಹಲವು ಜ್ಞಾನವನ್ನು ರೈತರಿಗೆ ಹಂಚುವ ಕೆಲಸವನ್ನು ಹಲಸು ಸ್ನೇಹಿ ಕೂಟ ಮಾಡುತ್ತಿದೆ.
              ಅಕ್ಟೋಬರ್ 6ರಂದು ಬಂಟ್ವಾಳ ತಾಲೂಕಿನ ಪುಣಚ ಮಲ್ಯ ಶಂಕರನಾರಾಯಣ ಭಟ್ಟರ ಮನೆಯಂಗಳದಲ್ಲಿ 'ವರುಷ ಪೂರ್ತಿ ತರಕಾರಿ' ಮಾತುಕತೆ ಕಾರ್ಯಕ್ರಮ ನಡೆಯಲಿದೆ. ವ್ಯವಸ್ಥೆಯ ದೃಷ್ಟಿಯಿಂದ ಆಸಕ್ತರು ಫೋನಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
 (9448953700, 94802 00832) 

0 comments:

Post a Comment