ಹದಿಮೂರು ವರುಷದ ಹಿಂದೆ ದೈವಾಧೀನರಾದ ಯಕ್ಷಗಾನ ಭಾಗವತರೊಬ್ಬರ ಸಂಸ್ಮರಣಾ ಸಮಾರಂಭದಲ್ಲಿ (೧೫-೯-೨೦೧೨) ಭಾಗವಹಿಸಿದ್ದೆ. ಹಳ್ಳಿಯ ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ. ದೇವರ ದರ್ಶನಕ್ಕೆ ಆಗಮಿಸಿದ ಭಕ್ತ ಸಭೆ. ಜತೆಗೆ ಕಲಾಭಿಮಾನಿಗಳೂ, ಭಾಗವತರ ಅಭಿಮಾನಿಗಳು ಕೂಡ.
ಅಚ್ಚುಕಟ್ಟಿನ ಶಿಸ್ತಿನ ವ್ಯವಸ್ಥೆ. ಯಾರನ್ನು ನೆನಪು ಮಾಡಿಕೊಳ್ಳಬೇಕೋ ಅವರ ಸಾಧನೆ, ಕೊಡುಗೆಗಳ ಸುತ್ತ ಸುತ್ತಿದ ನೆನಪುಗಳು ಒಟ್ಟಂದಕ್ಕೆ ಪೂರಕವಾಯಿತು. ಸಮಾಜದ ಮಧ್ಯೆ ಬಾಳಿದ ಕಲಾವಿದನನ್ನು ಆ ಸಮಾಜವೇ ಪ್ರತೀವರುಷ ನೆನಪಿಸುವುದೆಂದರೆ, ಮರಣಿಸಿದ ವ್ಯಕ್ತಿಯ ವೈಯಕ್ತಿಕ ಛಾಪಿನ ಆಳವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಕಾರ್ಯಕ್ರಮ ಮುಗಿಸಿ ಮರಳಲು ವ್ಯಾನಿನಲ್ಲಿ ಕುಳಿತಿದ್ದೆ. ಎಲ್ಲರೂ ಸಮಾರಂಭದ ಕುರಿತು ತಮ್ಮ ವಿವೇಚನೆಗೆ ತೋರಿದಂತೆ ಮಾತನಾಡುತ್ತಿದ್ದರು. ಮರಣಿಸಿದ ಭಾಗವತರನ್ನು ನೆನಪಿಸಿಕೊಳ್ಳುತ್ತಿದ್ದರು. ಅವರ ಭಾಗವತಿಕೆಯಲ್ಲಿ ಜರುಗಿದ ಪ್ರದರ್ಶನವನ್ನು ಮೆಲುಕು ಹಾಕುತ್ತಿದ್ದರು. ವೇದಿಕೆಯಲ್ಲಿನ ಅತಿಥಿಗಳ ಮಾತಿನ ಒಂದೆರಡು ವಾಕ್ಯಗಳನ್ನು ನೆನಪಿಟ್ಟುಕೊಂಡು ಪರಸ್ಪರ ಹಂಚಿಕೊಳ್ಳುತ್ತಿದ್ದರು.
ಇವರ ಮಧ್ಯೆ ಕುಳಿತಿದ್ದ ವಯೋವೃದ್ಧೆಯೋರ್ವರು, 'ಭಾಗವತರನ್ನು ಎಲ್ಲರೂ ಹೊಗಳಿದರು. ಹೊಗಳಬೇಕಾದ್ದೇ. ಅಷ್ಟು ಅರ್ಹತೆ ಅವರಲ್ಲುಂಟು. ಅವರು ನಮ್ಮ ಊರಿಗೆ ಗೌರವ ತಂದಿದ್ದಾರೆ. ಮಾನವನ್ನು ನೀಡಿದ್ದಾರೆ. ಆದರೆ ಅವರು ಬದುಕಿರುವಾಗ ಎಷ್ಟು ಮಂದಿ ಹೊಗಳಿದ್ದೇವೆ' ಎಂದು ಚಾಟಿ ಬೀಸಿದರು. ಹೊಸ ಹೊಳಹನ್ನು ನೀಡಿದ ಆ ಹಿರಿಯ ಮಾತೆಗೆ ಮನಸಾ ವಂದಿಸಿದೆ.
ಹೌದಲ್ಲಾ, ವ್ಯಕ್ತಿ ಬದುಕಿದ್ದಾಗ ಅವರ ಕಲಾವಂತಿಕೆಯ ಪ್ರಖರಕ್ಕೆ ಮುಖಕೊಡಲಾಗದ ಅಸಹಾಯಕತೆಯಲ್ಲಿ ಆತನ ಕುರಿತು ಯಥೇಷ್ಟವಾಗಿ ಕರುಬುತ್ತೇವೆ. ಅವರ ಪ್ರತಿಭೆಯನ್ನು ತನ್ನ ವಿಕಾರ ಚಿತ್ತದ ಪಾತ್ರೆಯಲ್ಲಿಟ್ಟು ಅಳತೆ ಮಾಡುತ್ತೇವೆ. ರಂಗದಲ್ಲಿ ಹಾಡುವಾಗ, ಕುಣಿಯುವಾಗ, ಅರ್ಥ ಹೇಳುವಾಗ ಖುಷಿಪಡುತ್ತೇವೆ. ನಾವೊಬ್ಬರೇ ಖುಷಿ ಪಟ್ಟರೆ ಸಾಲದು. ಖುಷಿ ಪಡಿಸಿದ ಆ ಕಲಾವಿದನೂ ಖುಷಿಯಾಗಬೇಡ್ವೇ. ಇದಕ್ಕಾಗಿ 'ಒಂದು ಒಳ್ಳೆಯ ಮಾತನ್ನು' ಹೇಳಿದರೆ ಆತನಿಗೆ ಎಷ್ಟೊಂದು ಸಂತೋಷವಾಗಿರುತ್ತಿತ್ತು?
ಸಂಮಾನ ಮಾಡುವಾಗ ಹೊಗಳುತ್ತೇವೆ. ಹೊಗಳಿಕೆಯ ಮಹಾಪೂರದಲ್ಲಿ ಅಟ್ಟಕ್ಕೇರಿಸುತ್ತೇವೆ. ಪುರಸ್ಕಾರ ನೀಡುವಾಗ ಗುಣವರ್ಣನೆ ಮಾಡುತ್ತೇವೆ. ಪ್ರಶಸ್ತಿ ಕೊಡುವಾಗ ಗುಣಕ್ಕೆ ಇನ್ನಷ್ಟು ಮಸಾಲೆ ಸೇರಿಸಿ ಎತ್ತರಕ್ಕೇರಿಸುತ್ತೇವೆ. ಯಾವ ವ್ಯಕ್ತಿಯನ್ನು ರಂಗದಲ್ಲಿ ಇಂದ್ರ-ಚಂದ್ರನೆಂದು ಹೊಗಳಿದನೋ, ಆತ ವೇದಿಕೆ ಇಳಿದ ಬಳಿಕದ ಸ್ಥಿತಿ ನೋಡಬೇಕು? ಎಲ್ಲವೂ ಗಂಟಲ ಮೇಲಿನ ಮಾತು.
ಬದುಕಿರುವಾಗ ಒಳ್ಳೆಯ ಮಾತಿನ ಸೊಲ್ಲಿಲ್ಲ. ಬೆನ್ನು ತಟ್ಟುವ ಕ್ರಿಯೆಯಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಕಾಲೆಳೆಯುತ್ತಾ ಜಾತಿ-ಅಂತಸ್ತುಗಳ ಭೂತವನ್ನು ಹೊಕ್ಕಿಸಿ, ತಾನು ಮರೆಯಲ್ಲಿ ನಿಂತು ಸಂತೋಷ ಪಡುತಾರೆ. ದೂರದ ಊರಿನಲ್ಲಿ ಗೌರವ ಪ್ರಾಪ್ತಿಯಾದಾಗ ಹೊಸ ಬಣ್ಣ ಕೊಟ್ಟು ವಿಷಬೀಜವನ್ನು ಬಿತ್ತಿ ಬಿಡುತ್ತಾರೆ. ಆತ ಹಾಕಿದ ವಿಷ ವರ್ತುಲದಲ್ಲಿ 'ತಾನೇ ಸುತ್ತಿಕೊಳ್ಳುತ್ತೇನೆ' ಎಂಬ ವಿವೇಚನೆ ಇದ್ದರೂ ಹಗುರ ಮಾತುಗಳಿಂದ ಕ್ಷಣಕ್ಕೆ ಬೀಗುತ್ತೇವೆ.
ವ್ಯಾನಿನಲ್ಲಿ ಕೇಳಿಸಿಕೊಂಡ ಆ ಮಾತೆಯ ಮಾತುಗಳನ್ನು ನೆನಪಿಸಿಕೊಂಡಾಗ ಜರುಗಿದ ಹಲವಾರು ಕೀರ್ತಿಶೇಷರ 'ಸಂಸ್ಮರಣಾ ಸಮಾರಂಭ'ಗಳ ನೆನಪು ಪದರ ಬಿಚ್ಚಿತು. ಇಲ್ಲದ ಗುಣಕ್ಕೆ ಬಣ್ಣ ಹಚ್ಚಿ ವೈಭವೀಕರಿಸುವ ಪರಿ. ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೋ, ಅದಕ್ಕಿಂತ ಹೊರತಾದ ವಿಚಾರಗಳ ಸುತ್ತಾಟ. 'ಇವರಿಗೆ ನಿಜವಾಗಿಯೂ ಪ್ರಶಸ್ತಿ ಬರಬೇಕಿತ್ತು' ಎನ್ನುವ ಒಣ ಕರೆಗಳು. 'ಇವರನ್ನು ಸಮಾಜ ಮಾನಿಸಲಿಲ್ಲ' ಎಂಬ ಅಪವಾದಗಳು. 'ಇನ್ನಾದರೂ ಸರಕಾರ ಇತ್ತ ಗಮನ ನೀಡಲಿ' ಎಂಬ 'ಘೋರ' ಕರೆ! ಮಾತನಾಡುವವನಿಗೂ ಗೊತ್ತಿದೆ, 'ತಾನು ಯಾರನ್ನು ನೆನಪಿಸುತ್ತಿದ್ದೇನೋ, ಆ ವ್ಯಕ್ತಿ ಪ್ರಸ್ತುತ ಬದುಕಿಲ್ಲ'!
ಬದುಕಿದ್ದಾಗ.. ? ಒಳ್ಳೆಯ ಮಾತು ಬಿಡಿ, ಔಪಚಾರಿಕವಾದ ಮಾತನ್ನು ಆಡಿದ್ದಿದೆಯೇ? ಆತನ ಕಷ್ಟಗಳಿಗೆ ನೆರವಾಗುವುದು ಬೇಡ, ಮಾತಿನ ಸ್ಪಂದನವಾದರೂ ನೀಡಿದ್ದಿದೆಯೇ? ವೇದಿಕೆಗಳಲ್ಲಿ 'ಉತ್ತಮ ಕಲಾವಿದ' ಎಂದು ಹಾಡುವ ನಾವು, ನಮ್ಮ ಉತ್ತಮಿಕೆಯನ್ನು ಎಷ್ಟು ತೋರಿದ್ದೇವೆ? ಆ ಕಲಾವಿದನ ಅಭಿವ್ಯಕ್ತಿಯನ್ನೋ, ಹಾಡನ್ನು ಎಷ್ಟು ನೋಡಿದ್ದೇವೆ, ಆಲಿಸಿದ್ದೇವೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತವಲ್ಲಾ.
ಡಾ. ಶೇಣಿಯವರು ದೈವಾಧೀನರಾದಾಗ ಕರಾವಳಿಯುದ್ದಕ್ಕೂ ಸಂಸ್ಮರಣೆಗಳು ನಡೆದುವು. 'ಅವರು ಎಂತಹ ವಾಚ್ ಕಟ್ಟುತ್ತಿದ್ದರು? ಯಾವ ವಿಧದ ಸೆಂಟ್ ಹಾಕಿಕೊಳ್ಳುತ್ತಿದ್ದರು? ಅವರ ವೀಳ್ಯ ತಟ್ಟೆಯ ಗುಣಾಗಾನ. ಅವರು ಧರಿಸುತ್ತಿದ್ದ ಉಡುಪು, ಕೈಯ ಉಂಗುರ..' ಹೀಗೆ ಶೇ. 90ರಷ್ಟು ವಿಚಾರಗಳು ವೈಭವ ಪಡೆದಿದ್ದುವು. ಅವರ ಕಲಾಗಾರಿಕೆ, ಮಾತಿನ ಲೋಕ, ಪಾತ್ರಗಳ ಮರುಸೃಷ್ಟಿ, ಖಳ ಪಾತ್ರಗಳ ಚಿತ್ರಣ.. ಇವೆಲ್ಲವೂ ಅಲ್ಲೋ ಇಲ್ಲೋ ನುಸುಳುತ್ತಿದ್ದುವು. ಹಾಗೆಂತೆ ಕೆಲವೆಡೆ ಉತ್ತಮವಾಗಿಯೂ ಸಂಸ್ಮರಣೆ ನಡೆದುದನ್ನು ಮರೆಯುವಂತಿಲ್ಲ.
ಸಂಸ್ಮರಣಾ ಕಾರ್ಯಕ್ರಮಗಳು ಹೀಗೇಕಾಗುತ್ತಿವೆ? 'ತಮಗೊಂದು ಕಾರ್ಯಕ್ರಮ ಆಯಿತಲ್ಲಾ' ಎನ್ನುವ ಹಿನ್ನೆಲೆಯ ಆಯೋಜನೆ. ಯಾರನ್ನು ಸ್ಮರಿಸುತ್ತೇವೆಯೋ ಅವರ ಕುರಿತು ಒಂದಕ್ಷರ ಗೊತ್ತಿಲ್ಲದ 'ಸಂಪನ್ಮೂಲ ವ್ಯಕ್ತಿ'(!)ಯಲ್ಲಿ ಸಂಪನ್ಮೂಲದ ಕೊರತೆ. ಇವರನ್ನು ವೇದಿಕೆಯಲ್ಲಿ ಕೂರಿಸಿ ಮಾತು ಹೊರಡಿಸುವ ಸಾಹಸ. 'ಯಾಕಾಗಿ ಸ್ಮರಣೆಯನ್ನು ಮಾಡುತ್ತೇವೆ. ನಮಗೂ ಮರಣಿಸಿದ ವ್ಯಕ್ತಿಗೂ ವೈಯಕ್ತಿಕವಾದ, ಸಾಮಾಜಿಕವಾದ ಸಂಪರ್ಕಗಳಿವೆಯೋ'?
ಕಲಾವಿದ ಬದುಕಿದ್ದಾಗ, ಆತನ ಅಭಿವ್ಯಕ್ತಿಯನ್ನು ಒಮ್ಮೆಯೂ ನೋಡದ-ಕೇಳದ ಮಂದಿ ಬಳಿಕ ಮಾಡುವ ಸಂಸ್ಮರಣೆ ಇದೆಯಲ್ಲಾ, ಅದು ಅರ್ಥಶೂನ್ಯ. 'ಈ ಸಮಾರಂಭ ಮರಣಿಸಿದ ವ್ಯಕ್ತಿಗೆ ನೀಡುವ ಗೌರವ' ಎನ್ನುತ್ತಾ ವಂದನಾರ್ಪಣೆ ಮಾಡುತ್ತೇವೆ. ನಿಜ ಜೀವನದಲ್ಲಿ ಗೌರವ ನೀಡದ ನಾವು, ಮರಣಿಸಿದ ಬಳಿಕ ಗೌರವ ನೀಡುತ್ತೇವೆ!
ಕಲಾವಿದ ಸಮಾಜದ ಕಣ್ಣು. ಅದನ್ನು ಕಾಪಾಡಬೇಕಾದುದು ಸಮಾಜ. ಪ್ರಸ್ತುತ ಕಾಲಮಾನದಲ್ಲಿ ಇವೆಲ್ಲವೂ ಆರ್ಥ ಕಳೆದುಕೊಳ್ಳುತ್ತಿದೆ. ಅದರ ಮೇಲೆ ಅನರ್ಥವನ್ನು ಹೇರುತ್ತೇವೆ. ಗೌರವ, ಮಾನ, ಸಂಮಾನಗಳೆಲ್ಲಾ ಶುಷ್ಕವಾಗುತ್ತಿವೆ. ಹೀಗಿರುತ್ತಾ 'ಬದುಕಿರುವಾಗ ಎಷ್ಟು ಹೊಗಳಿದ್ದೇವೆ' ಎಂಬ ಆ ಮಾತೆಯ ಮಾತಿನಲ್ಲಿ ಎಷ್ಟೊಂದು ಸತ್ಯವಿದೆಯಲ್ವಾ.
0 comments:
Post a Comment