Monday, September 17, 2012

ಕೃಷ್ಣ ಬಂದ, ನೋಡಲಾಗಲಿಲ್ಲ..!


           ಅಷ್ಟಮಿ ಮುಗಿದು ಕೃಷ್ಣನಿಗೆ ವಿದಾಯ ಹೇಳಿದೆವು! ನಮ್ಮ ಬದುಕೇ ಹಾಗೆ. ಎಲ್ಲದರಲ್ಲೂ ವಿದಾಯ. ನಿತ್ಯ ವಿದಾಯದ ಬದುಕು. ವಿದಾಯದ ಬಳಿಕ ಸ್ವಾಗತ. ಕೃಷ್ಣನ ಬದುಕಿನಲ್ಲಿ ವಿದಾಯ ಮತ್ತು ಸ್ವಾಗತ ಎರಡಕ್ಕೂ ಸಮಭಾವ, ಸಮಚಿತ್ತ. ಹಾಗಾಗಿ ಆತ ಜಗದ್ವಾಪಿ. ಅವನಿಗೆ ಗೊತ್ತಿತ್ತು - ಯಾವ ಮುಖದಿಂದ ವಿದಾಯ ಉಸುರಿದ್ದೇವೆಯೋ, ಅದೇ ಮುಖ ಸ್ವಾಗತಕ್ಕೂ ಸಜ್ಜಾಗಬೇಕು. ಇದು ಅಷ್ಟಮಿಯ ದಿವಸದ ಕೃಷ್ಣನ ಸಂದೇಶ.
          ಬದುಕಿನ ಕಳೆಯನ್ನು ಕಳೆದು, ಧರ್ಮವನ್ನು ಕೈಗೆತ್ತಿಕೊಂಡ. ಮಾನಸಿಕ ವಿಕಾರಕ್ಕೆ ವಿದಾಯ ಹೇಳಿದ.  ಹೊಸದಾದ ಬೌದ್ಧಿಕ ವಿಚಾರಗಳನ್ನು ಸ್ವಾಗತ ಮಾಡುತ್ತಾ ಬದುಕಿದ. ಬದುಕಿನ ಈ ದಾರಿ ಇದೆಯಲ್ಲಾ, ನಿಜಕ್ಕೂ ವಿಶ್ವಕೋಶ. ನಮ್ಮ ಬದುಕೇ ಅರ್ಥವಾಗಿಲ್ಲ, ಅರ್ಥವಾಗುತ್ತಿಲ್ಲ. ಅರ್ಥಮಾಡಿಕೊಳ್ಳು ಪುರುಸೊತ್ತು ಇಲ್ಲವೇ ಇಲ್ಲ. ಹೀಗಿರುತ್ತಾ ಕೃಷ್ಣನ ಬದುಕು ಹೇಗೆ ಅರ್ಥವಾಗುತ್ತದೆ? ನಮ್ಮೊಳಗೆ ಕೃಷ್ಣನನ್ನು ಕಾಣಬೇಕೆನ್ನುವುದೇ ಅಷ್ಟಮಿಯ ಸಂದೇಶ.
          ಬಾಲ್ಯದಲ್ಲಿ ಮೊಸರು ಕದ್ದ, ಮೆದ್ದ, ಮೆತ್ತಿಕೊಂಡ, ಮೆತ್ತಿಸಿಕೊಂಡ. ಇತರರ ಮುಖಕ್ಕೂ ಮೆತ್ತಿದ. ಬದುಕಿನಲ್ಲಿ ಹಾಲು, ಮೊಸರಿಗೆ ಆದ್ಯತೆಯನ್ನು ನೀಡಿದ. ಪೌಷ್ಠಿಕವಾದ ಆಹಾರ ಸೇವಿಸಬೇಕೆನ್ನುವ ವಿಚಾರವನ್ನು ಹೇಳಿದ. ಗೋಪಾಲಕರು, ಗೋಪಿಕೆಯರು ಅನುಸರಿಸಿದರು.
             ನಾವಾದರೋ.. ಹಾಲು ನೀಡುವ ದನವನ್ನು ಕೈಯಾರೆ ಪರಾಧೀನಗೊಳಿಸಿದೆವು. ಪ್ಯಾಕೆಟ್ ಹಾಲು, ಮೊಸರನ್ನು ಅಪ್ಪ್ಪಿಕೊಂಡೆವು. ನಾವು ತಿಂದೆವು. ಆದರೆ ಮೆತ್ತಿಸಿಕೊಂಡಿಲ್ಲ. ಇತರರಿಗೆ ವಿಚಾರದ ಕೊಳೆಯನ್ನು ಮೆತ್ತಿದೆವು! ಮೆತ್ತುತ್ತಾ ಬಂದೆವು! ಪೌಷ್ಠಿಕ ಆಹಾರ ಎನ್ನುತ್ತಾ ವಿಷವನ್ನು ನಿತ್ಯ ಸೇವಿಸುವುದು ಬೌದ್ಧಿಕ ಸಿರಿವಂತರಾದ ನಮಗೆ ಖುಷಿಯೋ ಖುಷಿ.
            ಕೃಷ್ಣ ವನಿತೆಯರನ್ನು ಪ್ರೀತಿಸಿದ. ಮನಸ್ಸಿನಲ್ಲಿ ಸ್ಥಾನ ಕೊಟ್ಟ. ಮನಸಾ ಪೀಡಿಸಿದ. ವಸ್ತ್ರವನ್ನು ಅಪಹರಿಸಿ ಪರಿಹಾಸ್ಯ ಮಾಡಿದ. ಆಪತ್ತಿನಲ್ಲಿ ವಸ್ತ್ರವನ್ನೂ ನೀಡಿ ಮಾನ ಕಾಪಾಡಿದ. ಪ್ರಾಣಕ್ಕೆ ಆಸರೆಯಾದ. ಆದರೆ ಎಂದೂ ಕಾಮದ ಕಣ್ಣಿಂದ ಕಂಡಿಲ್ಲ. ಕೃಷ್ಣನ ಬಾಲ್ಯದ ತುಂಟತನವನ್ನು ಬೇಕಾದಂತೆ ತಿರುಚಿ ವ್ಯಾಖ್ಯಾನ ಮಾಡಿದೆವು.  'ಆತ ವನಿತಾಪ್ರಿಯ' ಎನ್ನುತ್ತಾ ನಮ್ಮ ಮನದ ಕೊಳೆಯನ್ನು ಆತನ ಮುಖಕ್ಕೆ ಮೆತ್ತುವುದಕ್ಕೆ ಮುಂದಾದೆವು. ಕಾಮದ ಸುಳಿಯೊಳಗೆ ಸಿಲುಕಿ ಬದುಕಿನಿಂದ ಜಾರಿದೆವು. ಮತ್ತೊಮ್ಮೆ ಮೇಲೆದ್ದು ಬಾರದಂತೆ..! ಕೃಷ್ಣನಿಗೆ ಅಂಟಿಸಿಕೊಳ್ಳಲೂ ಗೊತ್ತಿತ್ತು, ಅದರಿಂದ ಬಿಡಿಸಿಕೊಳ್ಳಲೂ ಗೊತ್ತಿತ್ತು, ಇದೇ ಬದುಕಿನ ಸುಭಗತನ.
              ನರಕಾಸುರನನ್ನು ಕೊಂದು ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರ ಬಂಧಮುಕ್ತ ಮಾಡಿದ. ಮಾನ-ಪ್ರಾಣವನ್ನು ಕಾಪಾಡಿದ. ತನ್ನೂರಿಗೆ ಕರೆತಂದ. ಎಲ್ಲರ ಮನದಲ್ಲೂ ನೆಲೆಯಾದ, ಸೆರೆಯಾದ. ಎಲ್ಲೆಲ್ಲಿ, ಏನೇನೋ ಆಗಬಹುದಾದ ಸ್ತ್ರೀಯರ ಬದುಕಿಗೆ ಆಸರೆಯಾದ. ಅವರ ಮಾನವೀಯ ಗುಣವನ್ನು ನಾವು ದುರ್ಗುಣಗಳ ಪಟ್ಟಿಗೆ ಸೇರಿಸಿದೆವು. ಅಂದರೆ ನಮ್ಮ ದುರ್ಗುಣಗಳ ಪ್ರತಿಫಲನ ಎಂದರ್ಥ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ತಾನೆ!
               ಗೋವುಗಳ, ಗೋಪಾಲಕರ ನೆಚ್ಚಿನ ಸ್ನೇಹಿತ ಕೃಷ್ಣ. ಗೋ ಮಂದೆಯ ಬದುಕು ಪ್ರಿಯ. ಕೊಳಲ ದನಿಗೆ ತಲೆಯಾಡಿಸದ, ಕುಣಿಯದ ಪಶುಗಳಿರಲಿಲ್ಲ. ಬಾಯಿ ತೆರೆದಾಗ ಹಾಲುಣಿಸುವ ಎಷ್ಟು ದನಗಳಿದ್ದುವು? ಬದುಕಿಗೆ ಅತೀ ಅಗತ್ಯವಾದ ಹಾಲು, ಮೊಸರು, ಬೆಣ್ಣೆಗಳ ತಯಾರಿಯಲ್ಲಿ ಸ್ವಾವಲಂಬನೆಯನ್ನು ಪ್ರಪಂಚಕ್ಕೆ ತೋರಿಸಿದ. 'ಇದ್ದ ದನವನ್ನು ಮಾರೋಣ. ಹಾಲು ಪಕ್ಕದ ಮನೆಯಿಂದ ತರೋಣ' ಎನ್ನುತ್ತಾ ನಮ್ಮ ಹಟ್ಟಿಯನ್ನು ಖಾಲಿ ಮಾಡಿ, ಗೋಡೌನ್ ಮಾಡಿದ ಸಾರ್ಥಕತೆ ನಮ್ಮದು! ನಂತರ ಪಶ್ಚಾತ್ತಾಪ ಪಟ್ಟೆವು. ಬದುಕಿನಲ್ಲಿ ಪಶು ಸಂಸಾರಕ್ಕೆ ಶೂನ್ಯ ಜಾಗ. ಅದನ್ನು ಉಳಿಸಿ, ಬೆಳೆಸುವುದು ಬಹುಶಃ ಇನ್ನು ಕಾನೂನು ಮಾತ್ರವೋ ಏನೋ?
              ಕೃಷ್ಣ ಗುರುಕುಲಕ್ಕೆ ಅಣ್ಣನೊಂದಿಗೆ ತೆರಳಿದ. ಅರುವತ್ತ ನಾಲ್ಕು ವಿದ್ಯೆಯನ್ನು ಶೀಘ್ರ ಕಲಿತ. ಮರಣಿಸಿದ ಗುರುಪುತ್ರನನ್ನು 'ಗುರುಕಾಣಿಕೆ'ಯಾಗಿ ನೀಡಿ ಜಗತ್ತಿಗೆ ಮಾದರಿಯಾದ. ಕೃಷ್ಣನ ಗುರುಭಕ್ತಿ ಕಣ್ಣ ಮುಂದಿರುವಾಗ, ಕನಿಷ್ಠ 'ಶಿಕ್ಷಕ ದಿನಾಚರಣೆ'ಯಂದಾದರೂ ಗುರುವಿಗೆ ನಮಸ್ಕರಿಸಿದ ಉದಾಹರಣೆ ಇದೆಯೇ? ಇದ್ದರೆ ಗ್ರೇಟ್! ಗುರು ಅಂದರೆ ಹಿರಿದು. ಹಿರಿದುದರ ಮುಂದೆ ಕಿರಿದು ಶರಣಾಗಲೇ ಬೇಕು. ಅದು ಶಿಕ್ಷಣದ ಅಂತಿಮ ಫಲಿತ. ನಮ್ಮ ಶಿಕ್ಷಣ ವ್ಯವಸ್ಥೆಗಳು ತಲೆಬಾಗಲು ಕಲಿಸುತ್ತವೆಯೇ? ತಲೆಬಾಗುವುದು ಅಂದರೆ ದಾಸ್ಯವೆಂದಲ್ಲ. ಅದು ಸಂಸ್ಕಾರ. ಶಿಕ್ಷಣ ಅದಕ್ಕೆ ಉಪಾಧಿ.
                ತನ್ನೂರನ್ನು ಹಾಳುಗೈಯಲು ಬಂದ ಕಪಟ ರಾಕ್ಷಸರನ್ನೆಲ್ಲಾ ತುಳಿದ, ತರಿದ. ವಿಷದ ಹಾಲನ್ನು ನೀಡಲು ಬಂದ ಪೂತನಿಗೆ ಬುದ್ಧಿ ಕಲಿಸಿದ. ಬದುಕಿದ ಹಳ್ಳಿಯನ್ನು ಸಂರಕ್ಷಿಸಿದ. ಗೋಮಂದೆಯನ್ನು ಉಳಿಸಿದ. ಧರ್ಮವನ್ನು ಉಳಿಸಲು ಮಾವ ಕಂಸನನ್ನೇ ಕೊಲ್ಲಬೇಕಾಯಿತು. ನಮ್ಮೊಳಗಿನ ವಿಷವನ್ನು ಕಕ್ಕಿಸಲು ವರುಷ ವರುಷವೂ ಕೃಷ್ಣ ಬರುತ್ತಿದ್ದಾನೆ. 'ನಮ್ಮೊಳಗೆ ವಿಷವಿದೆ' ಅಂತ ನಮಗೆ ಗೊತ್ತಿಲ್ಲ, ಕೃಷ್ಣನಿಗೆ ಗೊತ್ತಿದೆ. ಆತನಿಗೆ ನಾವು ಹೃದಯ ಕೊಡದಿದ್ದರೆ ಆತ ಕಕ್ಕಿಸುವುದಾದರೂ ಹೇಗೆ, ಪಾಪ?
               ಪಾಂಡವರ ಪ್ರತಿನಿಧಿಯಾಗಿ ಸಂಧಾನಕ್ಕೆ ತೆರಳಿದ. ಸಂಗ್ರಾಮ ನಿರ್ಣಯಿಸಿ ಬಂದ. ಮಹಾಭಾರತವೇ ನಡೆದು ಹೋಯಿತು. ಧರ್ಮ ಜಯಿಸಿತು. ಧರ್ಮರಾಯ ಹಸ್ತಿನೆಯಲ್ಲಿ ಪಟ್ಟಾಭಿಷಿಕ್ತನಾದ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ ಎಂದು ತೋರಿಸಿಕೊಟ್ಟ.
               ಕೃಷ್ಣನ ವ್ಯಕ್ತಿತ್ವವನ್ನು ಓದುತ್ತೇವೆ. ಪಾರಾಯಣ ಮಾಡುತ್ತೇವೆ. ಅರ್ಚಿಸುತ್ತೇವೆ. ಎಂದಾದರೂ ಆತನ ಬದುಕಿನೊಂದಿಗೆ ನಮ್ಮ ಬದುಕನ್ನು ಅನುಸಂಧಾನ ಮಾಡಿ ನೋಡಿದ್ದುಂಟೋ? ಆತನಂತೆ ಬದುಕಲು ಸಾಧ್ಯವಿಲ್ಲ. ಆ ಬದುಕು ಅವನಿಗೇ ಮೀಸಲು. ಅದರ ಪೇಟೆಂಟ್ ಅವನಿಗೆ ಮಾತ್ರ. ಇನ್ನೊಬ್ಬ ಅದನ್ನು ಅನುಕರಿಸಿದರೆ ಕಾನೂನು ಬಾಹಿರ!
ಆದರೆ ಅನುಸರಿಸಬಹುದಲ್ಲಾ..! ಸಮಾಜದ ಒಳಿತಾಗಿ 'ಮಾಡಿ ತೋರಿಸಿದ' ಎಷ್ಟು ಉದಾಹರಣೆಗಳು ಬೇಕು? ಅವೆಲ್ಲವನ್ನೂ ಬುದ್ಧಿವಂತರಾದ ನಾವು ಢಾಳಾಗಿ ಕಾಣುತ್ತಾ, ನಮ್ಮ ಬದುಕನ್ನೂ ಢಾಳು ಮಾಡುತ್ತಿದ್ದೇವೆ. ಕೃಷ್ಣ ಬಂದ, ನೋಡಲಾಗಲಿಲ್ಲ. ವರುಷವೂ ಬರುತ್ತಿದ್ದಾನೆ, ನೋಡಲು ಸಿಗುತ್ತಿಲ್ಲ. 
              ಆತನ ಜನ್ಮ ದಿನ ಬಂದಾಗ ರಶೀದಿ ಮುದ್ರಿಸುತ್ತೇವೆ. ಮೋಜು ಮಾಡುತ್ತೇವೆ. ಸಂತೋಷ ಪಡುತ್ತೇವೆ. ಪೂಜೆ ಪುರಸ್ಕಾರಗಳಿದ್ದರೆ ಟಿವಿ ಮುಂದೆ ಠಿಕಾಣಿ ಹೂಡಿ ಉಂಡೆ, ಚಕ್ಕುಲಿ ಮೆಲ್ಲುತ್ತೇವೆ! ಬಳಿಕ ಕೃಷ್ಣನನ್ನು ಬೀಳ್ಕೊಡುತ್ತೇವೆ. ಅಲ್ಲಿಗೆ ಕೃಷ್ಣಾಷ್ಟಮಿ ಗೋವಿಂದ!
              ತಕ್ಷಣ ಗಜಾನನ ಸಿದ್ಧನಾಗುತ್ತಾನೆ. ಆತನ ಸ್ವಾಗತಕ್ಕೆ ಕೃಷ್ಣನಿಗಿಂತ ವೈಭವದಲ್ಲಿ ಸಜ್ಜಾಗುತ್ತೇವೆ. ಗಾತ್ರದಲ್ಲಿ ಚಂದಾ ರಶೀದಿ ಪುಸ್ತಕ ದೊಡ್ಡದಾಗುತ್ತದೆ! ಮನಸ್ಸು ಮೊದಲಿನಂತೆ ಮುದುಡಿರುತ್ತದೆ.

0 comments:

Post a Comment