Saturday, February 9, 2013

ಹೀಗೂ ಇದ್ದರು ಬ್ಯಾಂಕ್ ವರಿಷ್ಠಾಧಿಕಾರಿ!

               2009. ಮಂಗಳೂರು ಭಾರತೀಯ ಸ್ಟೇಟ್ಬ್ಯಾಂಕಿನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಏಜಿಎಂ) ಆಗಿದ್ದ ಚೈತನ್ಯರ ಪರಿಚಯ. ವೃತ್ತಿ ಕರ್ತವ್ಯಕ್ಕಾಗಿ ಅವರಲ್ಲಿಗೆ ಭೇಟಿ. ಮೊದಲ ಮಾತುಕತೆಯಲ್ಲೇ ದೊಡ್ಡ ಹುದ್ದೆಯ ಏಜಿಎಂ ಎಂದು ಮರೆತುಹೋಗುವಷ್ಟು ಆಪ್ತತೆ ಆವರಿಸಿತು. ರಕ್ತ ಸಂಬಂಧಕ್ಕಿಂತಲೂ ಅಧಿಕವಾದ ಪ್ರೀತಿ, ವಿಶ್ವಾಸ. ಕೃಷಿ, ಗ್ರಾಮೀಣ ಬದುಕು, ನಿರ್ವಿಷ ಆಹಾರದ ಸುತ್ತ ಚಿಂತನೆಗಳ ಮಾತುಕತೆ. 'ಇಂದು ನಮ್ಮನೆಯಲ್ಲೇ ಊಟ' ಎನ್ನುತ್ತ ತಂಪುಕೋಣೆಯ ಬಾಗಿಲೆಳೆದರು.

               ಬ್ಯಾಂಕಿನ ಹಿಂಬದಿಯಲ್ಲೇ ಮನೆ. ಅಂಗಳಕ್ಕೆ ಕಾಲಿಟ್ಟಾಗ ದಂಗಾಗಿದ್ದೆ. ಬೀನ್ಸ್, ಬದನೆ, ಅಲಸಂಡೆ, ಸೊಪ್ಪು ತರಕಾರಿ, ಒಂದೆಲಗ, ಅವರೆ, ಟೊಮೆಟೋ.. ಹೀಗೆ ಜಾಗ ಖಾಲಿಯಿರುವಲ್ಲೆಲ್ಲಾ ತರಕಾರಿಗಳ ಮಾಲೆ.  'ವರುಷದಲ್ಲಿ ಐದು ತಿಂಗಳು ಸಂತೆಯಿಂದ ತರಕಾರಿ ತರುವುದಿಲ್ಲ. ನಾವೇ ಬೆಳೆಯುತ್ತೇವೆ, ಹೊಟ್ಟೆ ಬಿರಿಯುವಷ್ಟು ತಿನ್ನುತ್ತೇವೆ' ಎಂದು ನಕ್ಕರು. 'ಇದು ನಮ್ಮನೆ ತರಕಾರಿಯದ್ದೇ ಅಡುಗೆ' ಎಂದು ಐದಾರು ಐಟಮನ್ನು ಮಡದಿ ಅನಿತಾ ಬಡಿಸಿದ್ದರು.

                 ಬ್ಯಾಂಕ್ ಅಧಿಕಾರಿಯ ಮನೆಯೆಂದ ಮೇಲೆ ಅಲಂಕಾರಿಕ ಗಿಡಗಳು, ಲಾನ್ ಹುಲ್ಲು, ಕ್ರೋಟನ್, ಗುಲಾಬಿ ಗಿಡಗಳು ಇರಬೇಕಲ್ವಾ. ಅವೆಲ್ಲಾ ದುಬಾರಿ ಹಣ ತೆತ್ತು ತಂದುವುಗಳಾಗಿರಬೇಕು. ಪಾಲನೆಗೊಬ್ಬ ಸಹಾಯಕ. ಗಿಡಗಳಿಗೆ ನೀರುಣಿಕೆ, ಬಿಸಿಲಿಗೆ ಒಣಗದಂತೆ ಕಣ್ಗಾವಲು, ಸತ್ತ ಗಿಡದ ಜಾಗಕ್ಕೆ ತಕ್ಷಣ ಮತ್ತೊಂದು ಗಿಡ ನೆಡುವುದು... ಹೀಗೆ ಕೆಲಸಗಳು. ಅಧಿಕಾರಿ ಬದಲಾದಾಗ ಪುನರ್ ನವೀಕರಣ. ಇದು ನಡೆದು ಬಂದ ಪದ್ಧತಿ.

                  ಚೈತನ್ಯ ಎಂ. ತಲ್ಲೂರು ಏಜಿಎಂ ಆಗಿ ಮನೆಗೆ ಕಾಲಿಟ್ಟ ತಕ್ಷಣ ಮನಕ್ಕೆ ಮುದ ನೀಡದ ಗಿಡ, ಹುಲ್ಲುಗಳನ್ನು ಕಿತ್ತರು. ಸಹಾಯಕರೊಂದಿಗೆ ಸೇರಿ  ಅಗತೆ ಮಾಡಿದರು. ತರಕಾರಿ ಬೀಜಗಳನ್ನು ಊರಿದರು. ಸ್ನೇಹಿತರಿಂದ ಅನುಭವ ಪಡೆದರು. ಅಲ್ಲಿಂದಿಲ್ಲಿಂದ ಗಿಡಗಳನ್ನು ತಂದು ನೆಟ್ಟರು. ಹೊಸ ಅಧಿಕಾರಿಯ ಆಸಕ್ತಿಗೆ ಸಹಾಯಕರು ಸ್ಪಂದಿಸಿದರು. ಗೊಬ್ಬರ ತಂದರು. ಏಜಿಯಂ ಮನೆಯ ಮುಂದೆ ಚಿಕ್ಕ ತರಕಾರಿ ತೋಟ ಎದ್ದಾಗ ಕೌತುಕದ ಕಣ್ಣುಗಳಿಂದ ನೋಡುವ ಮಂದಿ ಹೆಚ್ಚಾದರು. 

                ಕೈತುಂಬಾ ಕಾಂಚಾಣ ಪಡೆವ ಬ್ಯಾಂಕ್ ಅಧಿಕಾರಿ ಯಾಕೆ ಕೈ ಕೆಸರು ಮಾಡಿಕೊಳ್ಳಬೇಕು? ಎಡ ಬಲದಲ್ಲಿ ಸಹಾಯಕರು, ಓಡಾಡಲು ಆಧುನಿಕ ತಂಪು ಕಾರು, ಆಜ್ಞೆ ಮಾಡಿದರೆ ಅಡುಗೆ ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ವ್ಯವಸ್ಥೆ ಮಾಡುವ ಸಾಮಥ್ರ್ಯ, ಅಧಿಕಾರ ಇತ್ತು. ಆದರೆ ಬಿಗುಮಾನ ಬದುಕಿನಿಂದ ದೂರವಿರುವುದು ತಲ್ಲೂರರಿಗೆ ಜಾಯಮಾನ. 'ವಿಷ ರಹಿತವಾಗಿ ಆರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎಂಬ ನಿಲುವು. 

               ಮನೆಗೆ ಬಳಸಿಯೂ ಉಳಿಯುವ ತರಕಾರಿಗಳನ್ನು ಬ್ಯಾಂಕಿನ ಸಹೋದ್ಯೋಗಿಗಳಿಗೆ ಹಂಚುತ್ತಿದ್ದರು. ಅತಿಥಿಗಳಿಗೆ ನೀಡುತ್ತಿದ್ದರು. ತರಕಾರಿ ಕತೆಯನ್ನು ಹೇಳುತ್ತಿದ್ದರು. 'ಬ್ಯಾಂಕಿನ ಹೊರಗಡೆ ಕಾಂಕ್ರಿಟ್ ಹಾಕಿಬಿಟ್ಟಿದ್ದಾರೆ. ಇಲ್ಲದಿರುತ್ತಿದ್ದರೆ ತರಕಾರಿ ಬೇಕಾದಷ್ಟು ಸಿಗುತ್ತಿತ್ತು' ಎಂಬ ಸಾತ್ವಿಕ ಅಸಮಾಧಾನವಿತ್ತು. ಪತ್ರಿಕೆಗಳ ಕೃಷಿ ಪುಟಗಳಲ್ಲಿ ಅಪರೂಪದ ತರಕಾರಿ, ಹಣ್ಣುಗಳ ಸುಳಿವು ಸಿಕ್ಕರೆ ಬೆನ್ನಟ್ಟಿ ಪಡೆಯುವ ಆತುರ.

                 ನಿತ್ಯ ಗಿಡಗಳ ಜತೆ ಸ್ನೇಹ, ಆರೈಕೆ, ನೀಗಾ. ಒಂದು ಗಿಡ ಸೊರಗಿದರೂ ಅವರಿಗೆ ನೋವಾಗುತ್ತಿತ್ತು. ಅದರ ಪುನಶ್ಚೇತನಕ್ಕೆ ಕ್ಷಿಪ್ರ ಕ್ರಮ. ಅತಿಥಿಗಳು ಬ್ಯಾಂಕಿಗೆ ಬಂದಾಗ ವೃತ್ತಿ ಮಾತುಕತೆ ಪೂರೈಸಿ, ಮಿಕ್ಕ ಅವಧಿಯಲ್ಲಿ  ತರಕಾರಿ ಬ್ಯಾಂಕಿಂಗಿನದ್ದೇ ಮಾತು. ಗಿಡಗಳನ್ನು ತೋರಿಸಿ, ಒಂದೊಂದರ ಹಿನ್ನೆಲೆಯನ್ನು ಹೇಳುವುದರಲ್ಲಿ ಖುಷಿ, ಸಂಭ್ರಮ. ಅತಿಥಿಗಳು ಹೊರಡುವಾಗ ತರಕಾರಿಗಳ ಪ್ಯಾಕೆಟ್ ಉಡುಗೊರೆ.

                 ತಲ್ಲೂರು ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ಅಧಿಕಾರಿಯಾಗಿದ್ದಾಗ ಸಿಕ್ಕ ಜ್ಞಾನ, ಕೃಷಿಕರೊಂದಿಗೆ ಬೆರೆದ ಅನುಭವಗಳು ಅವರ ಅಂಗಳ ತರಕಾರಿ ಕೃಷಿಯ ಬಂಡವಾಳ. ನಗರದ ಬದುಕಿನ ಧಾವಂತವನ್ನು ಅವರದ್ದೇ ಮಾತಲ್ಲಿ ಕೇಳುವುದು ರೋಚಕ - ಕೊತ್ತಂಬರಿ ಸೊಪ್ಪಿನ ಒಂದು ಕಟ್ಟು, ಶುಂಠಿಯ ತುಂಡು ಬೇಕೆಂದರೂ ದ್ವಿಚಕ್ರವನ್ನು ಚಾಲೂ ಮಾಡಿ ಮಾರುಕಟ್ಟೆ ಹೋಗಲೇಬೇಕು. ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಂ. ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಸಮಸ್ಯೆ. ಯಾರ್ಯಾರದ್ದೋ ಗೊಣಗಾಟ. ಜತೆಗೆ ಮಾಲಿನ್ಯ ಸೇವನೆ. ಅಟ್ಟಿಸಿಕೊಂಡು ಬರುವ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ!

                 ಕೃಷಿ ಆಸಕ್ತಿಯ ವಿಚಾರ ಇಷ್ಟಾದರೆ, ತಲ್ಲೂರರ ಮಾನವೀಯ ಮತ್ತು ದೂರದೃಷ್ಟಿ ಗುರುತರ. ನಗರದ ನೀರಿನ ಬವಣೆ ಬ್ಯಾಂಕಿಗೆ ತಟ್ಟಬಾರದು ಎಂಬ ಉದ್ದೇಶದಿಂದ ಮಳೆಕೊಯ್ಲು ವ್ಯವಸ್ಥೆ ಮಾಡಿದ್ದರು. ತನ್ನ ಸಿಬ್ಬಂದಿಯೋರ್ವರು ಅಕಾಲಿಕವಾಗಿ ಮೃತರಾದಾಗ ಮಮ್ಮಲ ಮರುಗಿದ ಏಜಿಯಂ, ಅವರ ನೆನಪಿಗಾಗಿ ಬ್ಯಾಂಕಿನ ಮುಂಭಾಗದ ಹಸಿರು ಜಾಗಕ್ಕೆ 'ಸುಜಾತ ವನ' ಎಂದು ಹೆಸರಿಟ್ಟು ಗೌರವ ಸಲ್ಲಿಸಿದರು. ಈ ವಿಚಾರವನ್ನು ಆಪ್ತರಲ್ಲಿ ವಿನಾ ಸಿಕ್ಕಸಿಕ್ಕವರಲ್ಲಿ ಹೇಳಿ ಬೆನ್ನುತಟ್ಟಿಸಿಕೊಂಡವರಲ್ಲ.

                 ಬಡವರೆಂದರೆ ಪ್ರೀತಿ. ಬಡತನಕ್ಕೆ ಮರುಕ. ತನ್ನಿಂದಾದ ಸಹಾಯ. ಬ್ಯಾಂಕಿನಿಂದ ಸಿಗಬಹುದಾದ ಪ್ರೋತ್ಸಾಹಗಳಿಗೆ ಕ್ಷಿಪ್ರ ಚಾಲನೆ. ಒಂದು ಉದಾಹರಣೆ ಗಮನಿಸಿ. ರಸ್ತೆಗೆ ತಾಗಿಕೊಂಡೇ ಬ್ಯಾಂಕಿದೆ. ರಸ್ತೆಯನ್ನು ಶುಚಿಗೊಳಿಸುವ ಸರಕಾರಿ ಮಂದಿ ಇದ್ದಾರೆ.  ಅವರು ಶುಚಿಗೊಳಿಸುತ್ತಿದ್ದಾಗ ವಿನಯವಾಗಿ ಮಾತನಾಡಿ, ಬ್ಯಾಂಕಿನ ಮುಂದೆಯೂ ಸ್ವಲ್ಪ ಹೆಚ್ಚೇ ಶುಚಿಗೊಳಿಸುವಂತೆ ವಿನಂತಿಸುತ್ತಿದ್ದರು. ಕ್ಯಾಂಟಿನಿನಿಂದ ಚಹ ಕುಡಿಸುತ್ತಿದ್ದರು. ಜತೆಗೆ ಕಿಸೆಯಿಂದ ಕಾಸೂ ನೀಡುತ್ತಿದ್ದರು.
ಮಾನಸಿಕ ಅಸ್ವ್ವಾಸ್ಥ ಬಾಲಕರ ಶಾಲೆಯೊಂದಕ್ಕೆ ತಲ್ಲೂರು ಭೇಟಿಕೊಡುತ್ತಿದ್ದರು. ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಉಳ್ಳವರಲ್ಲಿ ವಿಚಾರ ತಿಳಿಸಿ, ಸಹಾಯ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳು ರಕ್ಷಾಬಂಧನದ ದಿವಸ ಬ್ಯಾಂಕಿಗೆ ಬಂದು ರಕ್ಷೆ ಕಟ್ಟುವಷ್ಟು ತಲ್ಲೂರು ಅವರ ಮನಸ್ಸನ್ನು ಗೆದ್ದಿದ್ದರು ಎನ್ನುತ್ತಾರೆ ಸಹೋದ್ಯೋಗಿ ಶೋಭಾ ನಾಯಕ್. ಅನಾಥಾಶ್ರಮವೊಂದಕ್ಕೆ ಬ್ಯಾಂಕಿನ ಸಿಬ್ಬಂದಿಗಳಲ್ಲಿ ವಿನಂತಿಸಿ, ಉಪಯೋಗವಿಲ್ಲದ ವಸ್ತ್ರಗಳನ್ನು ಸಂಗ್ರಹಿಸಿ ನೀಡಿದ್ದರು.

                    ತಲ್ಲೂರು ಏಜಿಯಂ ಆಗಿರುವಷ್ಟು ಕಾಲ ಅವರ ಜತೆ ಸಂಪರ್ಕವಿರಿಸಿಕೊಂಡಿದ್ದೆ. ನಾನು ಹೋಗಿರುವಷ್ಟೂ ಸಮಯ ತಂಪುಕೋಣೆಯ ಅವರ ಚೇಂಬರಿನಲ್ಲಿದ್ದುದು ಕಡಿಮೆ. ಗ್ರಾಹಕರೊಂದಿಗೆ ಮಾತನಾಡುತ್ತಾ ಇರುವುದೆಂದರೆ ಖುಷಿ. ಗ್ರಾಹಕರಿಗೆ ಬ್ಯಾಂಕ್ ವ್ಯವಹಾರದಲ್ಲಿ ತೊಂದರೆಯಾಗಬಾರದೆನ್ನುವ ಜಾಗ್ರತೆ. ಹಣಕಟ್ಟುವ ಫಾರ್ಮ್, ಚೆಕ್ಕುಗಳನ್ನು ತುಂಬುವುದು ಅಕ್ಷರ ಸಂಪರ್ಕ ಇಲ್ಲದವರಿಗೆ ತ್ರಾಸ. ಅಂತಹ ಹೊತ್ತಿನಲ್ಲಿ ತಲ್ಲೂರು ಅವರೇ ಫಾರ್ಮನ್ನು ತುಂಬಿದ ಕ್ಷಣಗಳು ನೆನಪಾಗುತ್ತವೆ.
ತನ್ನದು ಉನ್ನತ ಹುದ್ದೆಯಾದರೂ ಸಿಬ್ಬಂದಿಗಳೊಂದಿಗೆ ಆಪ್ತ ನಡವಳಿಕೆ. ಅವರು ಹತ್ತಿರ ಬಂದರೆ ಸಾಕು, ತಮಾಷೆಗಳ ಬುತ್ತಿ. ಇದರಿಂದ ಟೆನ್ಶನ್ ಫ್ರೀ! ಕ್ಷಿಪ್ರವಾಗಿ ಕೆಲಸವಾದಾಗ ಬೆನ್ನುತಟ್ಟುವ, ಆಗದೇ ಇದ್ದಾಗ ಬೆಂಬಲಕ್ಕೆ ನಿಲ್ಲುವ, ಆಕಳಿಕೆಗೆ ಕಟುವಾಗುವ ತಲ್ಲೂರು ಎಲ್ಲರಿಗೂ ಸಲ್ಲುವ ಏಜಿಎಂ.

               ಓಣಂ, ಕ್ರಿಸ್ಮಸ್, ದೀಪಾವಳಿ, ಹೊಸ ವರುಷವನ್ನು ಬ್ಯಾಂಕಿನಲ್ಲಿ ಆಚರಿಸುವುದು ಕಾಲಾವಧಿ ರೂಢಿ. ತಲ್ಲೂರು ಬ್ಯಾಂಕಿಗೆ ಬಂದ ಮೇಲೆ ಈ ಹಬ್ಬಗಳು ನಿಜವಾಗಿಯೂ ಹಬ್ಬಗಳಾದುವು! ಸಂಭ್ರಮ ಪಡೆದುವು. ವೈಭವ ಪಡೆದುವು. ಸಿಬ್ಬಂದಿಗಳು ಮಾತ್ರವಲ್ಲದೆ, ಗ್ರಾಹಕರೂ ಭಾಗವಹಿಸುವಂತಾಯಿತು. ಈ ದಿವಸಗಳಂದು ಭೇಟಿಯಿತ್ತ ಎಲ್ಲರ ಬಾಯಿ ಸಿಹಿಯಾಗುತ್ತಿದ್ದುವು.

              ಬಜ್ಪೆಯಲ್ಲಿ ವಿಮಾನ ದುರಂತವಾದಾಗ ಸಹಕರಿಸಲೆಂದು ತನ್ನ ಬ್ಯಾಂಕಿನ ವಾಹನದೊಂದಿಗೆ  ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟಿದ್ದರು. ಸಾಮಾಜಿಕ ವಿಚಾರಗಳಲ್ಲಿ ಬೈಲಾ ಮುಂದಿಟ್ಟುಕೊಂಡು ಮೀನಮೇಷ ಎಣಿಸುವ ಅಧಿಕಾರಿ ಇವರಾಗಿರಲಿಲ್ಲ. ತನ್ನ ಮೇಜಿಗೆ ಬಂದ ಪೇಪರುಗಳಿಗೆ ಸಹಿ ಹಾಕಿ ಮಗುಮ್ಮಾಗಿ ಕುಳಿತು, ಕಚೇರಿ ಸಮಯವಾದಾಗ ಕಾರಲ್ಲಿ ಭರ್ರನೆ ಹೊರಟು ಹೋಗುವವರಲ್ಲ. ಅವರೆಂದೂ 'ನನ್ನ ಕೆಲಸ ಇಷ್ಟೇ' ಎನ್ನುತ್ತಾ ಸೀಮಿತ ಕೂಪಕ್ಕೆ ಒಡ್ಡಿಕೊಂಡವರಲ್ಲ.

                 ಎರಡು ವರುಷದ ಹಿಂದೆಯಷ್ಟೇ ಬೆಂಗಳೂರಿಗೆ ವರ್ಗಾವಣೆ ಪಡೆದಿದ್ದ ಚೈತನ್ಯ ಜನವರಿ 8ರಂದು ವಿಧಿವಶರಾದರು. ಒಂದು ರಾಷ್ಟ್ರೀಯ ಬ್ಯಾಂಕಿನ ಹಿರಿಯ ಅಧಿಕಾರಿ ಹೀಗೂ ಇರಬಹುದು ಎನ್ನುವುದಕ್ಕೆ ಚೈತನ್ಯರೇ ಮಾದರಿ. ಕೆಲವು ವರುಷಗಳಿಂದ ದೇಹಾರೋಗ್ಯದ ಕ್ಷಮತೆ ಅವರ ಆಸಕ್ತಿಯನ್ನು ಅಲುಗಾಡಿಸುತ್ತಿದ್ದರೂ, ಅದನ್ನು ಇತರರ ಮುಂದೆ ತೋರಿಸಿಕೊಳ್ಳದ ವ್ಯಕ್ತಿತ್ವ.

               ನಮ್ಮ ನಡುವಿನ ಕೆಲವು ಬ್ಯಾಂಕ್ಗಳಿಗೆ ಕಾಲಿಟ್ಟಾಗ ಗ್ರಾಹಕರೊಂದಿಗಿನ ವ್ಯವಹಾರದ ಗೊಂದಲ, ಬಿಗುಮಾನಗಳನ್ನು ಕಂಡಾಗಲೆಲ್ಲಾ ತಲ್ಲೂರು ನೆನಪಾಗುತ್ತಾರೆ. 'ಬ್ಯಾಂಕಿನಲ್ಲಿ ನನ್ನದು ದೊಡ್ಡ ಹುದ್ದೆಯಾಗಿರಬಹುದು, ಆದರೆ ಹೊಟ್ಟೆಪಾಡಲ್ವಾ ಸಾರ್' ಎಂದ ಅವರ ಮುಕ್ತ ಮತ್ತು ಶುದ್ಧ ಮನಸ್ಸಿಗೆ ಕೋಟಿ ನಮನಗಳು. 

ಹಲಸಿನ 'ಕೊಟ್ಟೆ'



              ಹಲಸಿನ ಮರದ ಎಲೆಯಿಂದ ತಯಾರಿಸಿದ 'ಕೊಟ್ಟೆ'ಯಲ್ಲಿ ಮಾಡಿದ ತಿಂಡಿ 'ಕೊಟ್ಟೆ ಕಡುಬು'. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರಚಲಿತ. ಸಮಾರಂಭಗಳಲ್ಲಿ ಕಡುಬಿಗೆ ಎತ್ತರದ ಸ್ಥಾನ. ಕೊಟ್ಟೆಗೆ 'ತೊಟ್ಟೆ, ಮೂಡೆ' ಎಂದೂ, ಕಡುಬಿಗೆ 'ಕೊಟ್ಟಿಗೆ' ಎನ್ನುವುದೂ ಇದೆ.

            ಕೊಟ್ಟೆ ತಯಾರಿಸುವುದು ಜಾಣ್ಮೆ ಕೆಲಸ. ಹಲಸಿನ ನಾಲ್ಕು ಎಲೆಗಳ ತುದಿಗಳನ್ನು ಚಿಕ್ಕ ಕಡ್ಡಿ ಸಹಾಯದಿಂದ ಮೊದಲು ಜೋಡಿಸುತ್ತಾರೆ. ನಂತರ ವೃತ್ತಾಕಾರವಾಗಿ (ಎಲೆಯ ಹಿಂಭಾಗ ಕೊಟ್ಟೆಯ ಒಳಮೈಗೆ ಬರುವಂತೆ) ಎಲೆಗಳನ್ನು ಜೋಡಿಸುತ್ತಾ ಬಂದಾಗ 'ಕೊಟ್ಟೆ' ಸಿದ್ಧ. ರುಬ್ಬಿದ ಅಕ್ಕಿಹಿಟ್ಟನ್ನು ಕೊಟ್ಟೆಯೊಳಗೆ ತುಂಬಿ ಹಬೆಯಲ್ಲಿ ಬೇಯಿಸಿದರೆ 'ಕೊಟ್ಟೆ ಕಡುಬು' ರೆಡಿ. ಬೆಂದ ಬಳಿಕ ಎಲೆಗಳನ್ನು ತೆಗೆಯಬೇಕು. ಕಡುಬಿನ ಮೇಲೆ ಎಣ್ಣೆ ಯಾ ತುಪ್ಪ ಹಾಕಿ, ಚಟ್ನಿಯೊಂದಿಗೆ ಸವಿಯಲು ಕುಳಿತರೆ ಐದಾರು ಕಡುಬು ಹೊಟ್ಟೆಗಿಳಿಯುವುದು ಗ್ಯಾರಂಟಿ.

             ಹಲಸಿನ ಎಲೆಯ ಕೊಟ್ಟೆಯನ್ನು ಹಳ್ಳಿಯಲ್ಲಿ ಮನೆಯಲ್ಲೇ ತಯಾರಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ತಯಾರಿಸುವುದು ಶ್ರಮ ಬೇಡುವ ಕೆಲಸ. ಆಗುಂಬೆಯ ಬಾಲಕೃಷ್ಣ ನಾಯಕರು ಕಳೆದ ಒಂಭತ್ತು ವರುಷದಿಂದ 'ಕೊಟ್ಟೆ' ತಯಾರಿಸುತ್ತಾರೆ. ಹೆಂಡತಿ ರಾಧಿಕಾ ಸಾಥ್. ದಿವಸಕ್ಕೆ ಏನಿಲ್ಲವೆಂದರೂ 250-300 ಖಾಯಂ ಗಿರಾಕಿಗಳು. ನೂರು ಕೊಟ್ಟೆಗೆ 60-80 ರೂಪಾಯಿ.

             ಆಗುಂಬೆ ಸುತ್ತಮುತ್ತಲಿನ ಹೋಟೆಲ್ ಅಲ್ಲದೆ; ಶಿವಮೊಗ್ಗ, ತೀರ್ಥಹಳ್ಳಿಯ ಹೋಟೆಲ್ಗಳಲ್ಲಿ ಸಿಗುವ ಕಡುಬಿಗೆ ಬಳಸಿದ ಕೊಟ್ಟೆ ನಾಯಕರದು. ಬಸ್ ಮೂಲಕ ಕಳುಹಿಸಿಕೊಡುತ್ತಾರೆ. ಚಾಲಕ, ನಿರ್ವಾಹಕರು ಪರಿಚಿತರಾದ್ದರಿಂದ ಶುಲ್ಕದ ಕಿರಿಕಿರಿ ಕಡಿಮೆ! ಮನೆಗೆ ನೆಂಟರು ಬಂದರೆ ಕೊಟ್ಟೆಗಾಗಿ ಓಡಿ ಬರುವ ಗ್ರಾಹಕರಿದ್ದಾರೆ. ಆತ್ಮೀಯರಿಗೆ ಉಚಿತವಾಗಿ ನೀಡುವುದೂ ಇದೆ!

              ಹಲಸಿನ ಎಲೆಯನ್ನು ಆಯುವುದು ಮುಖ್ಯ ಕೆಲಸ. ಸಿದ್ಧವಾದ ಕೊಟ್ಟೆಯನ್ನು ಪ್ಲಾಸ್ಟಿಕ್ಕಿಚೀಲದೊಳಗಿಟ್ಟರೆ ಮಳೆಗಾಲದಲ್ಲಾದರೆ ನಾಲ್ಕೈದು ದಿವಸ ತಾಳಿಕೆ. ಬೇಸಿಗೆಯಲ್ಲಿ ಎರಡೇ ದಿವಸ. 'ಫ್ರೆಶ್ ಎಲೆಯಲ್ಲಿ ತಯಾರಿಸಿದ ಕೊಟ್ಟೆಕಡುಬು ತಿನ್ನಲು ರುಚಿ' ಎನ್ನುತ್ತಾರೆ ರಾಧಿಕಾ ನಾಯಕ್. 'ಆಗುಂಬೆ ಸುತ್ತಮುತ್ತ ವಿಪರೀತ ಮಳೆ ಬೀಳುವ ಕಾರಣ ಎಲೆಯ ಮೇಲೆ ಪಾಚಿ ಅಂಟಿಕೊಂಡಿರುತ್ತದೆ. ಹಾಗಾಗಿ ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲೆಯನ್ನು ಆಯ್ದುಕೊಳ್ಳುತ್ತೇನೆ' ಎನ್ನುತ್ತಾರೆ ನಾಯಕರು.

             ಕೊಟ್ಟೆ ತಯಾರಿಸಲು ಪೊರಕೆಯ ಕಡ್ಡಿಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ನಾಯಕರು ಓಟೆ ಬಿದಿರನ್ನು ಆಯ್ಕೆಮಾಡುತ್ತಾರೆ. ಕಾರಣ, ಎಷ್ಟಾದರೂ ಪೊರಕೆಯಲ್ವಾ..! ಅರ್ಧ ಅಡಿಯಷ್ಟು ಉದ್ದದ ಸಪೂರ ಕಡ್ಡಿಗಳನ್ನು ಮೊದಲೇ ಮಾಡಿಟ್ಟುಕೊಂಡು, ಕೊಟ್ಟೆ ಮಾಡುವಾಗ ಬೇಕಾದಷ್ಟು ಗಾತ್ರಕ್ಕೆ ತುಂಡರಿಸಿಕೊಳ್ಳುತ್ತಾರೆ.

             ವರುಷದಲ್ಲಿ ಒಂಭತ್ತು ತಿಂಗಳು ಕೆಲಸ. ಗಣಪತಿ ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚು. ಎರಡು ಸಾವಿರದ ತನಕ ಆರ್ಡರ್ ಬಂದುಬಿಡುತ್ತದೆ. ಆಗ ಕೈತುಂಬಾ ಕೆಲಸ. ಕೆಲವು ಹಬ್ಬದ ಸಮಯದಲ್ಲೂ ನಿತ್ಯ ತಯಾರಿಸುವ ಕೊಟ್ಟೆಯಲ್ಲದೆ ಹೆಚ್ಚುವರಿಯಾಗಿ ಮಾಡಬೇಕಾಗುತ್ತದೆ.

               'ದನಗಳ ಕೆಲಸ, ನಾಟಿಔಷಧ, ರೈನ್ಕೋಟ್ ತಯಾರಿ, ಮನೆವಾರ್ತೆಗಳ ಮಧ್ಯೆ ಸ್ವಲ್ಪ ಹೊತ್ತು ಕೊಟ್ಟೆ ರೆಡಿ ಮಾಡಲು ಹೊಂದಿಸಿಕೊಳ್ಳುತ್ತೇವೆ. ಹೆಚ್ಚು ಆರ್ಡರ್ ಬಂದರೆ ಕಷ್ಟ. ಮೊದಲೇ ಹೇಳಿದರೆ ಮಾಡಿಟ್ಟುಕೊಳ್ಳಬಹುದು' ಎನ್ನುತ್ತಾರೆ ಬಾಲಕೃಷ್ಣ ನಾಯಕ್. (94831 66247) ಹಪ್ಪಳ, ಉಪ್ಪಿನಕಾಯಿ ಅವರ ಇನ್ನಿತರ ಗೃಹ ಉತ್ಪನ್ನಗಳು.

             ಮಂಗಳೂರಿನಲ್ಲೂ ಕೊಟ್ಟೆ ತಯಾರಿಸುವ ಕೆಲವು ಕುಟುಂಬಗಳಿವೆ. ನಗರದ ಪ್ರತಿಷ್ಠಿತ ಹೋಟೆಲ್ಗಳು ಕೊಟ್ಟೆಯೊಂದಕ್ಕೆ ಎರಡೂವರೆಯಿಂದ ಮೂರು ರೂಪಾಯಿ ನೀಡಿ ಖರೀದಿಸಿ ಕೊಟ್ಟೆ ಕಡುಬು ತಯಾರಿಸುತ್ತಿವೆ.

ವಿರಳವಾಗುತ್ತಿರುವ 'ನುಚ್ಚಕ್ಕಿ ಹಣ್ಣು'



            ಎರಡು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ತನ್ನೂರಿನ ಹಣ್ಣುಗಳನ್ನು ಪರಿಚಯಿಸುವ ಸೈನ್ಬೋರ್ಡನ್ನು ಮಿಂಚಂಚೆಯಲ್ಲಿ ಕಳುಹಿಸಿದ್ದರು. ಕರಾವಳಿಗೆ ಬಂದಿದ್ದಾಗ 'ಸಮೃದ್ಧಿ' ಆಯೋಜಿಸಿದ ಕಾರ್ಯಕ್ರಮದಲ್ಲಿ ಪವರ್ ಪಾಯಿಂಟ್ ಮೂಲಕ ಹವಾಯ್ ಹಣ್ಣುಗಳ ಪರಿಚಯವನ್ನು ಪ್ರಸ್ತುತಪಡಿಸಿದ್ದರು. ಅದರಲ್ಲಿ 'ಮೈಸೂರು ರಾಸ್ಬೆರಿ' ಗಮನ ಸೆಳೆಯಿತು.

              ಕೊಡಗಿನ ಇಂಜಿನಿಯರ್, ಕೃಷಿಕ ಶಿವಕುಮಾರ್ ಕಾಡು ಹಣ್ಣುಗಳ ಆಸಕ್ತಿ ಹೊಂದಿದವರು. ಅವರ ಲಾಪ್ಟಾಪಿನಲ್ಲಿ ಹಣ್ಣುಗಳ ದಾಖಲಾತಿ ನಿರಂತರ. ಅದರಲ್ಲಿದ್ದ 'ಮೈಸೂರು ರಾಸ್ಬೆರಿ' ಕುತೂಹಲ ಮೂಡಿಸಿತು. ಇವರಲ್ಲಿದ್ದ ಹಣ್ಣು ಮತ್ತು ಹವಾಯಿಯ ಹಣ್ಣಿನ ಚಿತ್ರಗಳಲ್ಲಿ ವ್ಯತ್ಯಾಸವಿರಲಿಲ್ಲ.

                ಶಿವಕುಮಾರ್ ಹೇಳುತ್ತಾರೆ - ಕೊಡಗಿನಲ್ಲಿ ರಾಸ್ಬೆರಿಯ ಹೆಸರು 'ನುಚ್ಚಕ್ಕಿ ಹಣ್ಣು'. ಇದೊಂದು ಕಾಡುಹಣ್ಣು. ಇದರಲ್ಲಿ ಕಪ್ಪು-ಕೆಂಪು ಮಿಶ್ರ, ಹಳದಿ ಮತ್ತು ಕೆಂಪು ಬಣ್ಣಗಳಿವೆ. ಹುಳಿ-ಸಿಹಿ ರುಚಿ. ಎಲ್ಲದರ ರುಚಿ ಬಹುತೇಕ ಒಂದೇ ತರಹ. ಬಳ್ಳಿ ಹಬ್ಬಲು ಶುರುವಾದರೆ ಜಾಗವಿಡೀ ಆಕ್ರಮಿಸಿಕೊಳ್ಳುವಷ್ಟು ಕ್ಷಿಪ್ರ ಬೆಳವಣಿಗೆ. ಹಣ್ಣಿಗಾಗಿಯೇ ಬೆಳೆಯುವರಿಲ್ಲ.

                ಮೇ ತಿಂಗಳಿನಿಂದ ಹಣ್ಣು ಬಿಡುವ ಸೀಸನ್. ಮಳೆ ಬರುವ ಮುನ್ನ ರುಚಿ ಜಾಸ್ತಿ. ಗಿಡದಲ್ಲಿ ಮುಳ್ಳುಗಳಿವೆ. ಬಿಳಿ ಹೂಗಳು. ದೊರಗು ಎಲೆ. ಕೆಂಪು ವೆರೈಟಿಯ ಎಲೆಯು ದ್ರಾಕ್ಷಿ ಎಲೆಯನ್ನು ಹೋಲುತ್ತದಂತೆ. ಗೊಂಚಲು ಗೊಂಚಲು ಹಣ್ಣುಗಳು. ಹಣ್ಣಾದಾಗ ಹಣ್ಣಿಗೆ ಆವರಿಸಿದ ಪಕಳೆ ಬಿರಿಯುತ್ತದೆ. ಜಗಿಯುವಾಗ ಚಿಕ್ಕ ಚಿಕ್ಕ ಬೀಜಗಳಿರುವುದು ಅನುಭವಕ್ಕೆ ಬರುತ್ತದೆ. ಗಿಡದಿಂದ ಹಣ್ಣನ್ನು ಕೊಯ್ಯುವುದು ಕಷ್ಟ. ಸ್ವಲ್ಪ ಅದುಮಿದರೆ ಸಾಕು, ಹಣ್ಣು ಅಪ್ಪಚ್ಚಿಯಾಗುವಷ್ಟು ಮೃದು. ಕೊಯಿದು 2-3 ದಿವಸ ತಾಳಿಕೆ.

              'ಇದೇನೂ ಹೊಸ ಹುಡುಕಾಟವಲ್ಲ. ಚಿಕ್ಕದಿರುವಾಗಲೇ ಹಣ್ಣನ್ನು ತಿಂದ ಅನುಭವವಿದೆ. ಮಾರುಕಟ್ಟೆ ಮಾಡಲು ಬೇಕಾದಷ್ಟು ಪ್ರಮಾಣದಲ್ಲಿ ಹಣ್ಣುಗಳ ಅಲಭ್ಯತೆಯಿದೆ. ಸಾಕಷ್ಟು ಹಣ್ಣುಗಳು ಸಿಕ್ಕರೆ ಇದರ ನೋಟಕ್ಕೆ ಮಾರುಹೋದವರು ಕೊಳ್ಳುವುದು ಖಚಿತ. ಹಾಗಾಗಿ ಮಾರಾಟ ಸಾಧ್ಯತೆ ಹೆಚ್ಚು' ಎನ್ನುತ್ತಾರೆ ಶಿವಕುಮರ್.

              ನುಚ್ಚಕ್ಕಿ ಹಣ್ಣನ್ನು ಬೆಳೆಸುವ ಪರಿಪಾಠ ಇನ್ನೂ ಬಂದಿಲ್ಲ. 'ನನ್ನ ತೋಟದಲ್ಲಿ ಇದ್ದುದನ್ನು ತೊಂದರೆಯಾದರೂ ಉಳಿಸುತ್ತಿದ್ದೇನೆ. ಸ್ನೇಹಿತರಿಗೂ ಹೇಳುತ್ತೇನೆ. ಕಾಡು ಹಣ್ಣುಗಳು ನಾಶವಾಗಬಾರದು. ಉಳಿಸಬೇಕು' ಎನ್ನುವುದು ಮಾತ್ರವಲ್ಲ, ಆ ದಿಸೆಯಲ್ಲಿ ಹೆಜ್ಜೆಯಿಟ್ಟವರು ಶಿವಕುಮಾರ್.

               ಮಡಿಕೇರಿಯ ರಿಕ್ಷಾ ನಿಲ್ದಾಣವೊಂದರಲ್ಲಿ ಅಮ್ಮೆ ಹಣ್ಣಿನ ಗಿಡವಿದೆ. ಸೀಸನ್ನಿನಲ್ಲಿ ಸಾಕಷ್ಟು ಹಣ್ಣು ಬಿಡುತ್ತದೆ. ಅದರ ಕೆಳಗಡೆ ರಿಕ್ಷಾ ನಿಲ್ದಾಣ ಇದೆ. ನೂರಾರು ಜನ ಓಡಾಡುವ ಜಾಗ. ಆದರೆ ಈ ಹಣ್ಣನ್ನು ತಿನ್ನಲು ಆಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ! - ತನ್ನೂರಿನ ಕಾಡು ಹಣ್ಣಿನ ಅವಜ್ಞೆಯ ಚಿಕ್ಕ ಉದಾಹರಣೆಯನ್ನು ಹೇಳುತ್ತಾರೆ. ಕೊಡಗು ಮಾತ್ರವಲ್ಲ, ಎಲ್ಲಾ ಊರುಗಳಲ್ಲಿಯೂ ಅವಜ್ಞೆಯ ಚಾಳಿ. 

               ಬದಲಾದ ಕಾಲಮಾನದಲ್ಲಿ ಕಾಡು ಹಣ್ಣುಗಳು ನಾಶವಾಗುತ್ತಿವೆ. ಕಾಡುಗಳು ವಿರಳವಾಗುತ್ತಿವೆ. ಮಕ್ಕಳಿಗೆ ಸೇಬು, ದ್ರಾಕ್ಷಿ.. ಹೊರತಾಗಿ ಕಾಡುಹಣ್ಣುಗಳ ಪರಿಚಯವಿಲ್ಲ. ಈ ಕುರಿತಾದ ತಿಳುವಳಿಕೆ ಕಡಿಮೆಯಾಗುತ್ತಿದೆ. ಬಹುಶಃ ಹಣ್ಣು ತಿಂದವರಿಗೂ ಗಿಡಗಳನ್ನು ಗುರುತು ಹಿಡಿಯಲು ಕಷ್ಟವಾಗುವಷ್ಟು ತಿಳಿವಳಿಕೆಯ ಅಭಾವ. ಪಾರಂಪರಿಕವಾಗಿ ಜನಜೀವನದೊಂದಿಗೆ ಹೊಸೆದುಕೊಂಡಿದ್ದ ಕಾಡುಹಣ್ಣುಗಳನ್ನು ಕಂಪ್ಯೂನಲ್ಲಿ ದಾಖಲಿಸಬೇಕಾದ ಪ್ರಮೇಯ ಬಂದಿದೆ!

               ಶಿವಕುಮಾರ್ ಕಾಡು ಹಣ್ಣುಗಳ ದಾಖಲಾತಿ ಮಾಡುತ್ತಾರೆ. ಫೋಟೋ ಕ್ಲಿಕ್ಕಿಸುತ್ತಾರೆ. ಲ್ಯಾಪ್ಟಾಪಿನಲ್ಲಿ ಕಾಪಿಡುತ್ತಾರೆ. ಅವುಗಳನ್ನು ಅಭಿವೃದ್ಧಿ ಪಡಿಸುವತ್ತ ನಿರಂತರ ಯೋಜನೆ, ಯೋಚನೆ. 'ಕಾಡು ಹಣ್ಣುಗಳು ಕೃಷಿ ತೋಟದಲ್ಲಿವೆ. ಅದು ಕಳೆಯಾಗಿ ಕಂಡಂದರಿಂದ ಅವೆಲ್ಲಾ ನಾಶದಂಚಿಗೆ ತಲುಪಿವೆ' ಎಂದು ವಿಷಾದಿಸುತ್ತಾರೆ.

               ಕೊಡಗಿನಲ್ಲಿ ಹಿರಿಯರೊಬ್ಬರು ನೂರೆಂಟು ಕಾಡು ಹಣ್ಣುಗಳನ್ನು ದಾಖಲಿಸಿದ್ದಾರಂತೆ. ಅವರಿಗೆ ಅವೆಲ್ಲಾ ನಾಲಗೆ ತುದಿಯಲ್ಲಿದ್ದುವು. ಅದನ್ನು ಬರೆದಿಟ್ಟಿದ್ದಾರಂತೆ. ಈಗವರು ಮರಣಿಸಿದ್ದಾರೆ. ಅವರ ಪುತ್ರರು ಈ ದಾಖಲೆಯನ್ನು ಹುಡುಕುತ್ತಿದ್ದಾರೆ - ಎನ್ನುವ ಸುಳಿವು ಶಿವಕುಮಾರರಿಗೆ ಸಿಕ್ಕಿದೆ.

                ನೂರರ ಹತ್ತಿರ ಕಾಡುಹಣ್ಣುಗಳ ಜಾತಕ ಕಂಪ್ಯೂನಲ್ಲಿದೆ. ಈ ಸುಳಿವು ಪತ್ತೆಯಾಗಿಬಿಟ್ಟರೆ ಇವರ ಪಟ್ಟಿ ಇನ್ನೂ ಬೆಳೆಯಬಹುದೇನೋ. ಪ್ರಾದೇಶಿಕವಾಗಿ ಹಣ್ಣುಗಳ ಹೆಸರು, ಬಳಕೆಗಳಲ್ಲಿ ವ್ಯತ್ಯಾಸವಿರುವುದರಿಂದ ಶಿವಕುಮಾರ್ ಪ್ರವಾಸ ಹೋದೆಡೆಯಲ್ಲೆಲ್ಲಾ ಕಂಪ್ಯೂ ಹೊತ್ತೊಯ್ಯುತ್ತಾರೆ. ಚಿತ್ರ ತೋರಿಸುತ್ತಾರೆ. ಮಾಹಿತಿ ಕಲೆ ಹಾಕುತ್ತಾರೆ. ಆ ಊರಿನ ಹಣ್ಣುಗಳು ಪತ್ತೆಯಾದರೂ ಅದು ಕಂಪ್ಯೂ ಸೇರುತ್ತದೆ.

               ಬಹಳ ಅಪರೂಪದ ಹವ್ಯಾಸವಿದು. ಕಡ್ಲೆ ಹಣ್ಣು, ನಾರ್ಗಣೆ, ಮಜ್ಜಿಗೆ ಹಣ್ಣು, ಬೀಗರ್ುಳಿ, ಇಪ್ಪಲಿ, ಕರ್ಮಂಜಿ, ಚಳ್ಳಂಗಾಯಿ, ಗೊಣ್ಣೆಹಣ್ಣು, ಹಾಲೆ, ಗೊಟ್ಟೆಹಣ್ಣು.. ಇಂತಹ ಅಪರೂಪದ ಹಣ್ಣುಗಳ ಕುರಿತು ಮಾತನಾಡುವುದೆಂದರೆ ಶಿವಕುಮಾರರಿಗೆ ಖುಷಿ.
9448005614

ಬರದ ಮಧ್ಯೆ ಅರಳುತ್ತಿರುವ ಗುಲಾಬಿ ಕೃಷಿ


              'ಹತ್ತು ಸೆಂಟ್ಸ್ ಜಾಗದಲ್ಲಿ ವ್ಯವಸ್ಥಿತವಾಗಿ ಗುಲಾಬಿ ಕೃಷಿ ಮಾಡಿದರೆ ಐದು ಮಂದಿಯ ಕುಟುಂಬ ಜೀವಿಸಬಹುದು,' ಹುಬ್ಬಳ್ಳಿಯ ಚವರಗುಡ್ಡ ಗ್ರಾಮದ ಕೃಷ್ಣ ಗೋವನಕೊಪ್ಪ ಅವರ ಗುಲಾಬಿ ಮಾರುಕಟ್ಟೆಯ ಯಶವನ್ನು ಕೇಳಿದಾಗ ಉತ್ಪ್ರೇಕ್ಷೆ ಕಾಣಲಿಲ್ಲ.

             ಇವರ ಗುಲಾಬಿ ಕೃಷಿಗೆ ಎರಡನೇ ವಾರ್ಶಿಕೋತ್ಸವ. ರಾಜಧಾನಿಯಿಂದ ಗಿಡಗಳನ್ನು ಆಯ್ಕೆ ಮಾಡಿ ತಂದಿದ್ದರು. ಗುಲಾಬಿ ಕೃಷಿಯ ಅನುಭವವಿಲ್ಲ, ತರಬೇತಿಗೂ ಹೋಗಿಲ್ಲ. ಹುಬ್ಬಳ್ಳಿ ಭಾಗದಲ್ಲಿ ಹಬ್ಬುತ್ತಿರುವ ಕೃಷಿಯನ್ನು ನೋಡಿ, ಪರಿಚಯದ ಕೃಷಿಕರನ್ನು ಮಾತನಾಡಿ ಸ್ವಲ್ಪ ಅನುಭವವನ್ನು ಪಡೆದು ವಿಶ್ವಾಸ ವೃದ್ಧಿಸಿಕೊಂಡರು.

              ಇವರಲ್ಲಿ ಎರಡು ಸಾವಿರದ ನಾಲ್ಕುನೂರು ಗುಲಾಬಿ ಗಿಡಗಳಿವೆ. ನಾಟಿ ಮಾಡುವಾಗಲೇ ಹಟ್ಟಿಗೊಬ್ಬರ. ಬಳಿಕ ವರುಷಕ್ಕೊಮ್ಮೆ ಕುರಿ, ಕೋಳಿ ಗೊಬ್ಬರ. ರಾಸಾಯನಿಕ ಗೊಬ್ಬರ ಹಾಕಿಲ್ಲ. ಹನಿ ನೀರಾವರಿಯಲ್ಲಿ ವಾರಕ್ಕೊಮ್ಮೆ ನೀರುಣಿಕೆ. ನೆಟ್ಟು ತೊಂಭತ್ತು ದಿವಸದಲ್ಲಿ ಹೂ ರೆಡಿ. 'ಹೂವಿಗೆ ರಸ ಹೀರಲು ಬರುವ ನುಸಿಗೆ ತಿಂಗಳಿಗೊಮ್ಮೆ ವಿಷ ಸಿಂಪಡಣೆ ಅನಿವಾರ್ಯ' ಎನ್ನುತ್ತಾ, ಮನದಟ್ಟು ಮಾಡಲು ವಿಷದ ಕರಂಡಕವನ್ನು ತೋರಿಸುತ್ತಾರೆ!

              ವರುಷದಲ್ಲಿ ಆರು ತಿಂಗಳು ಭರ್ಜರಿ ಹೂ. ಐದು ತಿಂಗಳು ಸಾಮಾನ್ಯ. ಜೂನ್ನಿಂದ ಸೆಪ್ಟೆಂಬರ್ ಹೆಚ್ಚು ಹೂ ಪಡೆವ ತಿಂಗಳು. ದಿವಸಕ್ಕೆ ಎರಡು ಸಾವಿರ ಹೂ ಕಟಾವ್ ಮಾಡಿದ್ದೂ ಇದೆ. ಸನಿಹದ ಹುಬ್ಬಳ್ಳಿ ಮಾರುಕಟ್ಟೆ. ನೂರು ಹೂವಿಗೆ ಮುನ್ನೂರೈವತ್ತು ರೂಪಾಯಿಯಿಂದ ಆರು ನೂರು ರೂಪಾಯಿ ತನಕ ದರ.  ಸೀಸನ್ನಲ್ಲಿ ಇಡೀ ದಿವಸ ಕೈತುಂಬಾ ಕೆಲಸ. ಆದರೆ ಸಾಮಾನ್ಯವಾಗಿ ಎರಡು ಮಂದಿ ಎರಡು ತಾಸು ಗುಲಾಬಿ ಜತೆ ಕಳೆದರೆ ಸಾಕು.

               'ಪ್ರೇಮಿಗಳ ವಾರ್ಶಿಕಾಚರಣೆ - ಪ್ರೇಮಿಗಳ ದಿನ - ದಂದು ಒಂದು ಹೂವಿಗೆ ಹತ್ತು ರೂಪಾಯಿ! ಮಾರುಕಟ್ಟೆಗೆ ಬರುವ ಕೆಂಪು ಹೂಗಳು ಕ್ಷಣದಲ್ಲಿ ಖಾಲಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳು ಹುಬ್ಬಳ್ಳಿ ಸುತ್ತ ಬೀಸು ಹೆಜ್ಜೆಯಿಟ್ಟಾಗ  ಗುಲಾಬಿ ಕೃಷಿಯೂ ವೇಗ ಪಡೆಯಿತು. ಕೃಷ್ಣರಂತಹ ಹಲವಾರು ಮಂದಿ ಗುಲಾಬಿ ಕೃಷಿಯನ್ನು ನೆಚ್ಚಿಕೊಂಡರು. ಸಣ್ಣ ಕೃಷಿಕರಿಗೆ ಯೋಜನೆಯು ಆರ್ಥಿಕ ನೆರವನ್ನೂ ನೀಡಿದೆ, ನೀಡುತ್ತಿದೆ. 

              ಕೃಷ್ಣ ಗೋವನಕೊಪ್ಪರಿಗೆ ಗುಲಾಬಿಯೊಂದಿಗೆ ಸಾವಿರಕ್ಕೂ ಮಿಕ್ಕಿ ಕಾಕಡ ಹೂವಿನ ಕೃಷಿಯಿದೆ. ಇದಕ್ಕೆ ನಿರ್ವಹಣಾ ಖರ್ಚು ಕಡಿಮೆಯಂತೆ. 'ಮಳೆಗಾಲ ಆರಂಭವಾದಾಗ ಹೊಗೆ ಮಂಜು ಬರುತ್ತೆ. ಆಗ ಕೀಟ ಧಾಳಿಯಿಡುತ್ತೆ. ಆಗ ವಿಷ ಸಿಂಪಡಣೆ ಬೇಕೇ ಬೇಕು' ಎನ್ನುತ್ತಾರೆ.

              ಕಾಕಡ ಹೂವಿನ ಮೊಗ್ಗನ್ನಾಯಲು ಸಹಾಯಕರು ಬೇಕು. ಒಂದು ಕಿಲೋ ಕಾಕಡ ಮೊಗ್ಗಿಗೆ ಎಂಭತ್ತು ರೂಪಾಯಿಯಿಂದ ನೂರೈವತ್ತರ ತನಕ ದರ. ಸೀಸನ್ನಿನಲ್ಲಿ ಮುನ್ನೂರು ರೂಪಾಯಿ ಆದುದೂ ಇದೆಯಂತೆ. ಮಾರುಕಟ್ಟೆ ಸನಿಹವಿದ್ದುದರಿಂದ ಹೂವಿಗೆ ಮಾರುಕಟ್ಟೆ ಅವಕಾಶ ಧಾರಾಳ. ಹಾಗಾಗಿ ಕೃಷಿಯಲ್ಲಿ ಪರ್ಯಾಯ ಚಿಂತನೆಗೆ ಅವಕಾಶವಾಗಿದೆ.

             'ಇದು ಸರಕಾರಿ ಉದ್ಯೋಗ ಇದ್ದಾಂಗೆ ಸಾರ್' ಎಂದು ಖುಷಿಯಿಂದ ಹೇಳುತ್ತಾರೆ ಕೃಷ್ಣ. ಪ್ರತೀ ತಿಂಗಳೂ ಬೇಸರವಾಗದಷ್ಟು ಪಗಾರ ಕಿಸೆ ಸೇರುತ್ತಿದೆ. 'ಒಂದು ಗುಲಾಬಿ ಹೂವಿಗೆ ಎಲ್ಲಾ ಖರ್ಚು ಸೇರಿದರೆ ಐವತ್ತು ಪೈಸೆ ವೆಚ್ಚವಾಗಬಹುದು. ಮಿಕ್ಕಿದ್ದು ಲಾಭ' ಎಂಬ ಅಂಕಿಅಂಶ ಅವರ ಬೆರಳತುದಿಯಲ್ಲಿದೆ.

               ಕೃಷ್ಣ ಗೋವನಕೊಪ್ಪ ಅವರು ಗುಲಾಬಿ ಕೃಷಿಯಲ್ಲಿ ವೈಜ್ಞಾನಿಕವಾಗಿ ಮಾಡುತ್ತಿದರೆ ದುಪ್ಪಟ್ಟು ಆದಾಯ ಪಡೆಯಬಹುದಿತ್ತು! ಮಣ್ಣಿನ ಫಲವತ್ತತೆ, ನೀರಿನ ಸಂಪತ್ತು ಓಕೆ. ಆದರೆ ನಿರ್ವಹಣೆಯಲ್ಲಿ ಇನ್ನೂ ಸ್ಪಲ್ಪ ಸುಧಾರಿಸಬೇಕು. ಬಹುಶಃ ಸರಿಯಾದ ತರಬೇತಿ ಸಿಕ್ಕರೆ ಈ ಲೋಪವನ್ನು ನಿವಾರಿಸಬಹುದು.

               'ಸುತ್ತುಮುತ್ತಲಿನ ಕೃಷಿಕರಿಗೆ ಇಲಾಖೆಯ ಮೂಲಕ ಆರ್ಥಿಕ ಸಹಕಾರವನ್ನು ನೀಡುವ ಒತ್ತಡವನ್ನು ಯೋಜನೆ ಮಾಡಿದೆ. ಹಾಗಾಗಿ ಎಲ್ಲೆಲ್ಲೋ ಹರಿದು ಹೋಗುತ್ತಿರುವ ಕಿಂಚಿತ್ ಮೊತ್ತ ಕೃಷಿಕರಿಗೆ ಸಿಕ್ಕಿದೆ' ಎನ್ನುತ್ತಾರೆ ಯೋಜನೆಯ ಧಾರವಾಡ ವಲಯ ನಿರ್ದೇಶಕ ಜಯಶಂಕರ ಶರ್ಮ.

                ಬರದ ನಾಡಿನಲ್ಲಿ ಪರ್ಯಾಯ ಬೆಳೆಗಳತ್ತ ಕೃಷಿಕರು ವಾಲುತ್ತಿದ್ದಾರೆ. ಯಾವುದಕ್ಕೆ ಹೆಚ್ಚು ಮಾರುಕಟ್ಟೆ, ಧಾರಣೆ ಸಿಗುತ್ತದೋ ಅದರತ್ತ ಒಲವು. ನೀರಿನ ಸಂಪನ್ಮೂಲವಿದ್ದಲ್ಲಿ ಕೃಷಿ ಗೆದ್ದಿದೆ. ಕಡಿಮೆಯಿದ್ದಲ್ಲಿ ಉಸಿರಾಡುತ್ತಿದೆ.  

Monday, February 4, 2013

ಅಪರೂಪದ ತರಕಾರಿ ನಿತ್ಯ ಬದನೆ




               'ನೋಡಿ, ಇದೊಂದು ಅಪರೂಪದ ತರಕಾರಿ. ಫಕ್ಕನೆ ನೋಡಿದಾಗ ಲವಂಗ ಹಿರಿದಾದಂತೆ ಕಾಣುವ ಕಾಯಿಗಳು. ಈ ಭಾಗಕ್ಕೆ ಅಪರೂಪ' ಎಂದು ಬಂಟ್ವಾಳ (ದ.ಕ.) ತಾಲೂಕಿನ ಪುಣಚದ ಮಲ್ಯ ಶಂಕರ ನಾರಾಯಣ ಭಟ್ಟರು ಪ್ಯಾಕೆಟೊಂದನ್ನು ನೀಡಿದರು. ಕಾಯಿಗಳ ಉತ್ತಮ ನೋಟ, ವಿನ್ಯಾಸ ಆಕರ್ಷಕ.

               ಶಂಕರ ಭಟ್ಟರು ಹೊಸ ಸುದ್ದಿಯೊಂದನ್ನು ತಂದರೆ ಅದರೆ ಹಿಂದೆ ಅವರ ಶ್ರಮಪೂರ್ವಕವಾದ ಓಡಾಟ ಇದೆ ಎಂದರ್ಥ. ಅವರು ಅಪರೂಪದ್ದಾದ ಮತ್ತು ಹೊಸತಾದ ಸಸ್ಯ, ಹಣ್ಣು, ಕಾಯಿ, ಬಳ್ಳಿಗಳನ್ನು ಹುಡುಕುವುದು ಹವ್ಯಾಸ. ಅದನ್ನು ಬೆಳೆಸಿ ಸ್ನೇಹಿತರಿಗೆ ಹಂಚುವುದೆಂದರೆ ಖುಷಿ.

               ಪುತ್ತೂರಿನ ಖ್ಯಾತ ಉರಗ ತಜ್ಞ ಡಾ.ರವೀಂದ್ರನಾಥ ಐತಾಳರಿಂದ ಪಡೆದ ಬೀಜವನ್ನು ಊರಿದರು. ಗೊಬ್ಬರ ಕೊಟ್ಟು ಆರೈಕೆ ಮಾಡಿದರು. ಮೂರೇ ತಿಂಗಳಲ್ಲಿ ಗೊಂಚಲು ಗೊಂಚಲು ಕಾಯಿಗಳು. ಹೇಗೆ ಬಳಸುವುದೆಂದು ಗೊತ್ತಿಲ್ಲ. ಆದರೂ ಹೇಳಿ ಕೇಳಿದ ವಿಚಾರಗಳನ್ನು ಅಡುಗೆ ಮನೆಯಲ್ಲಿ ಪ್ರಯೋಗ ಮಾಡಿದರು. ಸ್ನೇಹಿತರಿಗೆಲ್ಲಾ ಸುದ್ದಿ ಹೇಳಿದರು. 'ಇನ್ನೇನು, ಒಂದೇ ತಿಂಗಳಲ್ಲಿ ಬೀಜ ರೆಡಿ' ಎಂದು ಬೀಜಸ್ನೇಹಿಗಳಿಗೆ ಸಂದೇಶ ಬಿತ್ತರಿಸಿದರು.

                'ಇದು ಕೇರಳದಿಂದ ಬಂದ ತರಕಾರಿ. ಹೆಸರು ನಿತ್ಯ ಬದನೆ. ಸಸ್ಯಶಾಸ್ತ್ರೀಯ ಹೆಸರು Ipomea muricata. ಚಿಕ್ಕ ಚಿಕ್ಕ ಕೋಡುಗಳುಳ್ಳ ಕಾಯಿಗಳನ್ನು ಆಯುವುದು ತನುಶ್ರಮ ಬೇಡುವ ಕೆಲಸವಾದ್ದರಿಂದ ಬದುಕಿನಿಂದ ದೂರವಾಗಿದೆ ಎಂಬ ಹೊಸ ಸುಳಿವನ್ನು ನೀಡಿದರು, ಹಿರಿಯ ಪತ್ರಕರ್ತ ಶ್ರೀ ಪಡ್ರೆ.

                 ಕಾಯಿಯ ತುದಿಯಲ್ಲಿ ಮುದುಡಿದ ಕಮಲವನ್ನು ಹೋಲುವ ಬೀಜದ ಮಾಸು. ಕೋಡು ಬಲಿತಾಗ ಮಾಸು ಕಪ್ಪಾಗುತ್ತದೆ. ಒಡೆದಾಗ ಅದರೊಳಗೆ ಕಂದು ಬಣ್ಣದ ದೊಡ್ಡ ಗಾತ್ರದ ಬೀಜಗಳು. ಬೀಜಕ್ಕೆ ಕಹಿ ರುಚಿ. ಬೀಜ ಮೊಳಕೆಯೊಡೆದು ಎರಡು ತಿಂಗಳಲ್ಲಿ ಇಳುವರಿ ನೀಡಲು ಶುರು. ಬಳ್ಳಿಯಲ್ಲಿ ಚಿಕ್ಕ ಚಿಕ್ಕ ಮುಳ್ಳುಗಳು. ನೇರಳ ವರ್ಣದ ಹೂ. ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ.

                  'ಬದನೆಯ ಪೋಡಿ, ಪಲ್ಯ, ಹುಳಿ ಮಾಡಿದರೆ ಒಳ್ಳೆಯ ರುಚಿ. ಇದರದ್ದೇ ಆದ ಪ್ರತ್ಯೇಕ ಪರಿಮಳವಿಲ್ಲ. ಆದರೆ ಸಂಬಾರ ಪದಾರ್ಥಗಳೊಂದಿಗೆ ಚೆನ್ನಾಗಿ ಒಗ್ಗುತ್ತದೆ. ಗೇರುಬೀಜವನ್ನು ಸೇರಿಸಿದ ಪಲ್ಯ ಸೂಪರ್,' ಎನ್ನುತ್ತಾರೆ ಶಂಕರ ಭಟ್. ಎಳೆಯ ಕಾಯಿ ಬಳಕೆಗೆ ಯೋಗ್ಯ. ಕಾಯಿಯನ್ನು ಕೊಯ್ಯುವಾಗ ಹಾಲು ಒಸರುವ ಗುಣವಿದೆ.

                  ಶಂಕರ ಭಟ್ಟರು ಈ ಹಿಂದೆ ಸೂಪರ್ ಮಾರ್ಕೆಟಿನಿಂದ ತಂದ ಕಾಡು ಪೀರೆಯ ಜಾತಿಯೊಂದನ್ನು ಅಭಿವೃದ್ಧಿಪಡಿಸಿದ್ದರು. ಈಗ ಈ ಸಾಲಿಗೆ ನಿತ್ಯ ಬದನೆ. ಗೊಬ್ಬರ ಕೊಟ್ಟು ಆರೈಕೆ ಮಾಡುತ್ತಿದ್ದರೆ ವರುಷ ಪೂರ್ತಿ ಕಾಯಿ ಪಡೆಯಬಹುದು ಎನ್ನುತ್ತಾರೆ.

9448953700

ನೂಲಿನ ಎಳೆಯ ಬಿಸಿಯುಸಿರು

                   ಹುಬ್ಬಳ್ಳಿಯ ಯಾವುದೇ ಜವುಳಿ ಅಂಗಡಿಗೆ ಹೋಗಿ, 'ಶಿಗ್ಲಿ ಸಾರಿ ಕೊಡ್ರಿ' ಅನ್ನಿ. ಶಿಗ್ಲಿ ಸೀರೆ ಕೇಳುವುದೆಂದು ಅಭಿಮಾನ. ನಿಮಗೆ ವಿಶೇಷ ಆತಿಥ್ಯ! ಆಯ್ಕೆಗಾಗಿ ರಾಶಿ ರಾಶಿ ಸೀರೆ ಗುಡ್ಡೆ ಹಾಕಿಬಿಡ್ತಾರೆ. ಸೀರೆಯ ಗುಣಮಟ್ಟದ ಬಗ್ಗೆ ಎಲ್ಲರಿಗೂ ಖಾತ್ರಿ. 'ಇಳಕಲ್ ಸೀರೆ'ಯನ್ನು ಹೆಣ್ಮಕ್ಕಳು ಹೇಗೆ ಮೆಚ್ಚಿಕೊಳ್ತಾರೋ, ಅದೇ ರೀತಿ ಶಿಗ್ಲಿ ಸೀರೆಗೂ ಮಣೆ. ಸೀರೆಯನ್ನು ನೋಡಿಯೇ 'ಇದು ಶಿಗ್ಲಿ ಬ್ರಾಂಡ್' ಎಂದು ಗುರುತಿಸುವಷ್ಟು ಅಪ್ಪಟತನ.
'                  ಸಾರ್, ಸುತ್ತುಮುತ್ತೆಲ್ಲಾ ಮಳೆಯಿಲ್ಲದೆ ಬರ ಕಾಡಿದೆ. ಉಣ್ಣಲು ಕಾಳಿಲ್ಲ, ತುತ್ತಿಗೂ ತತ್ವಾರ. ಯುವಕರಿಗೆ ಉದ್ಯೋಗವಿಲ್ಲ. ಎಲ್ಲರೂ ಗುಳೆ ಹೋಗಿದ್ದಾರೆ. ಆದರೆ ನಮ್ಮ ಶಿಗ್ಲಿಯ ಜನರು ಮಾತ್ರ ಸೇಫ್' ಇಂಬ ಖುಷಿ ಹನುಮಂತಪ್ಪ ಈಶ್ವರಪ್ಪ ಕೊಪ್ಪದ್ ಅವರದು. ಯಾಕೆಂದರೆ ಶಿಗ್ಲಿ ಹಳ್ಳಿಯು ನೇಕಾರಿಕೆಯಲ್ಲಿ ಸ್ವಾವಲಂಬಿ. ಪ್ರತೀ ಕೈಗೂ ಉದ್ಯೋಗ. ಬರದ ಹೊಡೆತದಿಂದ ದೂರ. ನಿರುಮ್ಮಳ ಬದುಕು.

                        ಗದಗ ಜಿಲ್ಲೆಯ ಶಿಗ್ಲಿಗೆ ಹುಬ್ಬಳ್ಳಿಯಿಂದ ಐವತ್ತು ಕಿಲೋಮೀಟರ್ ದೂರ. ನೇಕಾರಿಕೆಯು ಪಾರಂಪರಿಕ ವೃತ್ತಿ ಕಸುಬು. ಒಂದು ಕಾಲಘಟ್ಟದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮಗ್ಗಗಳನ್ನು ಹೊಂದಿದ್ದ ನೇಕಾರಿಕಾ ಊರೆಂದರೂ ಉತ್ಪ್ರೇಕ್ಷೆಯಲ್ಲ. ನೇಕಾರಿಕೆ ಜಾತಿ ವೃತ್ತಿಯಾದರೂ ಈಗದು ಉದ್ಯೋಗ! ಎಲ್ಲಾ ಮನೆಗಳಲ್ಲೂ ಹೊಟ್ಟೆಪಾಡಿಗಾಗಿ ಉದ್ಯೋಗ.

                      ಹನುಮಂತಪ್ಪ ಈಶ್ವರಪ್ಪ ಅರುವತ್ತರ ಯುವಕ. ಮಡದಿ ಶೈಲಜಾ. ಮಗಳು ನವೀನಾ. ಮಗ ನವೀನ ಕೊಪ್ಪದ. ನಾಲ್ಕು ದಶಕಕ್ಕೂ ಮೀರಿದ ಅನುಭವ ಹೊಂದಿದ ಕುಟುಂಬ. ಕೈಚಾಲಿತ ಮಗ್ಗದಿಂದ ಸೀರೆ ತಯಾರಿಸಿ ಮಾರಾಟ. ಅದರಿಂದಲೇ ಬದುಕು ರೂಪೀಕರಣ. ಮೊದಲು ಕಾಲಲ್ಲಿ ತುಳಿದು ಯಂತ್ರವನ್ನು ಚಾಲೂ ಮಾಡಬೇಕಿತ್ತು. ಈಗದು ಯಾಂತ್ರೀಕರಣಗೊಂಡು ತನುಶ್ರಮ ಕಡಿಮೆಯಾಗಿದೆ.

                     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಘಟಕದಿಂದ ನೀಡಿದ ಸಾಲದ ಪರಿಣಾಮವಾಗಿ ಸಣ್ಣ ನೇಕಾರಿಕೆ ವೃತ್ತಿಗೆ ಶಿಗ್ಲಿಯಲ್ಲಿ ಬೀಸು ಹೆಜ್ಜೆ. ಹನುಮಂತಪ್ಪ ಸಾಲದ ಫಲಾನುಭವಿ. ಚಿಕ್ಕ ಚಿಕ್ಕ ಗುಂಪಿನ ಮೂಲಕ ಪ್ರಗತಿಬಂಧು ಘಟಕಗಳ ನಿರ್ವಹಣೆ. ಒಂದೊಂದು ಮಗ್ಗ ಹೊಂದಿದವರಿಗೆ ಇನ್ನೊಂದನ್ನು ಹೊಂದುವ ಅವಕಾಶ. ಕಚ್ಚಾವಸ್ತುಗಳ ಖರೀದಿ, ಹೊಸ ಮಗ್ಗಗಳ ಸ್ಥಾಪನೆಗಾಗಿ ಯೋಜನೆಯು ಮನೆಬಾಗಿಲಲ್ಲಿ ಸಾಲದ ಸಹಕಾರವನ್ನು ನೀಡುತ್ತಿದೆ.

                       ಸನಿಹದ ಬೆಟಗೇರಿ ನಗರವು 'ಬಣ್ಣದ ನಗರ'ವೆಂದು ಪ್ರಸಿದ್ಧ. ಸೀರೆಗೆ ಬಳಕೆಯಾಗುವ ಹತ್ತಿಯ ನೂಲುಗಳು ಸಿಗುವ ಸ್ಥಳ. ಸೀರೆ ನೇಯ್ದು ಮರಳಿ ಇವರಿಗೇ ನೀಡಬಹುದು; ಇಲ್ಲವೇ ಹುಬ್ಬಳ್ಳಿ, ಬೆಳಗಾಂವ್ ಮಾರುಕಟ್ಟೆಗೂ ನೀಡಬಹುದು. ಬೆಟಗೇರಿಯಲ್ಲಿ ನಿರಂತರ ಕಚ್ಚಾವಸ್ತುಗಳ ಪೂರೈಕೆಯಿಂದಾಗಿ ನೇಕಾರಿಕೆ ನಿರಂತರ, ಜೀವಂತ.

                          ಯಾರು ರಖಂ ಆಗಿ ಸೀರೆ ಕೊಳ್ಳುತ್ತಾರೋ, ಅವರೇ ವಿನ್ಯಾಸವನ್ನು ಆಯ್ಕೆ ಮಾಡುತ್ತಾರೆ. ಕಾಲಕಾಲಕ್ಕೆ ಬದಲಾಗುವ ವಿನ್ಯಾಸಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ. ಹತ್ತಿ ನೂಲಿನ ದರದಲ್ಲಿ ದಿನೇ ದಿನೇ ಏರುಗತಿ. ಹನುಮಂತಪ್ಪ ಹೇಳುತ್ತಾರೆ, ಒಂದೆರಡು ವರುಷದ ಹಿಂದೆ ಐದು ಕಿಲೋ ಹತ್ತಿ ನೂಲಿಗೆ ಒಂದು ಸಾವಿರದ ಆರುನೂರು ರೂಪಾಯಿ ಇದ್ದರೆ, ಪ್ರಸ್ತುತ ಮೂರು ಸಾವಿರದ ನೂರು ರೂಪಾಯಿ. ಆದರೆ ಸೀರೆಯ ದರ ಮಾತ್ರ ಏರಿಸುವಂತಿಲ್ಲ!

                        ವೇತನ ಕೊಟ್ಟು ಸಹಾಯಕರ ಅವಲಂಬನದಿಂದ ಮಾಡುವ ವೃತ್ತಿ ಇದಲ್ಲ. ಸ್ವದುಡಿಮೆಯೇ ಸಂಪನ್ಮೂಲ. ಮನೆಮಂದಿಯೆಲ್ಲರ ಜಂಟಿ ಕಾಯಕ. 'ಒಂದು ಸೀರೆ ನೇಯಲು ಏನಿಲ್ಲವೆಂದರೂ ಒಂದು ದಿವಸ ಬೇಕು. ಸಿಗುವುದು ಮಾತ್ರ ಕಡಿಮೆ ರೊಕ್ಕ' ಎಂಬ ವಿಷಾದ. ಸಾದಾ ಸೀರೆಗೆ ಸುಮಾರು ಮುನ್ನೂರೈವತ್ತು ರೂಪಾಯಿ. ಅದರಲ್ಲೇ ಅಲ್ಪಸ್ವಲ್ಪ ವಿನ್ಯಾಸದ ಚಿತ್ತಾರದ ಸೀರೆಗೆ ಏಳುನೂರು ರೂಪಾಯಿ. ದರ ಏರಿಸಿದರೆ ಬೇಡಿಕೆ ಕಡಿಮೆಯಾಗಬಹುದೆಂಬ ಭಯ. ಸೀರೆ ಖರೀದಿಸುವವರಿಗೆ ತಯಾರಿ ಕಷ್ಟಗಳು ಬೇಕಿಲ್ಲವಲ್ಲಾ..

                       ಕೃಷಿ ಉತ್ಪನ್ನಗಳ ಧಾರಣೆಯನ್ನು ವ್ಯಾಪಾರಿಗಳು ನಿಗದಿ ಮಾಡುತ್ತಾರೆ. ಮನೆ-ಭೂಮಿಗಳ ಮಾರಾಟ ದರವನ್ನು ಮಧ್ಯವರ್ತಿಗಳು ನಿಶ್ಚಯ ಮಾಡುತ್ತಾರೆ. ಶಿಗ್ಲಿಯಲ್ಲಿ ಸೀರೆಯ ದರವನ್ನು ಉತ್ಪಾದಕರೇ ನಿಗದಿ ಮಾಡುತ್ತಾರೆ! ಪರಸ್ಪರ ಎಲ್ಲರೂ ಮಾತನಾಡಿಕೊಂಡು ಸಮಾನ ದರವನ್ನು ಫಿಕ್ಸ್ ಮಾಡಿ ಮಾರುತ್ತಾರೆ. ಇದೊಂದು ಉತ್ತಮ ಪ್ರಕ್ರಿಯೆ. ನಮ್ಮ ಕೃಷಿ ಉತ್ಪನ್ನಗಳಿಗೂ ಇಂತಹ ವ್ಯವಸ್ಥೆ ಬಂದರೆ ಎಷ್ಟೊಂದು ಒಳಿತಲ್ವಾ.

                       ಕಾಲಕಾಲಕ್ಕೆ ವಿನ್ಯಾಸಗಳು ಬದಲಾಗುತ್ತಲೇ ಇರುತ್ತದೆ. ಒಂದೊಂದು ವಿನ್ಯಾಸಕ್ಕೆ ಒಂದೊಂದು ಕಾಲದಲ್ಲಿ ಡಿಮ್ಯಾಂಡ್. ಯಾವಾಗ ಯಾವುದಕ್ಕೆ ಬೇಡಿಕೆ ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ವಿನ್ಯಾಸವನ್ನು ಮಾರುಕಟ್ಟೆ ನಿಶ್ಚಯ ಮಾಡುತ್ತದೆ. ಅದನ್ನು ಒಪ್ಪಿಕೊಳ್ಳಲೇಬೇಕು. ಅದೇನೂ ತಲೆನೋವಿನ ಕೆಲಸವಲ್ಲ. 'ಉತ್ಪಾದಕನಿಂದ ಗ್ರಾಹಕನ ಕೈಗೆ ಸೀರೆಯೊಂದು ತಲಪುವಾಗ ವ್ಯಾವಹಾರಿಕವಾಗಿ ಆರು ಮಂದಿಯ ಕೈ ದಾಟಿರುತ್ತದೆ. ಮುನ್ನೂರೈವತ್ತು ರೂಪಾಯಿಯ ಸೀರೆ ಗ್ರಾಹಕನಿಗೆ ಸಿಗುವಾಗ ಎಷ್ಟಾಗಬಹುದು ನೀವೇ ಅಂದಾಜಿಸಿ' ಎನ್ನುತ್ತಾರೆ ಹನುಮಂತಪ್ಪ. ಸೀರೆ ಅಂತ ಏನು, ನಮ್ಮೆಲ್ಲಾ ಕೃಷಿ ಉತ್ಪನ್ನಗಳ ಗತಿ ಮತ್ತು ಕತೆ ಇಷ್ಟೇ.

                       ಹತ್ತಿ ಸೀರೆ ತಯಾರಾಗುವ ಊರಲ್ಲೇ ಹತ್ತಿ ನೂಲಿನ ಸೀರೆಯನ್ನು ಉಡುವವರಿಲ್ಲ! ಕೇವಲ ಹೊಟ್ಟೆಪಾಡಿಗಾಗಿ ಸೀರೆ ತಯಾರಿ. 'ನೂರು ರೂಪಾಯಿಗೆ ಮಾರುಕಟ್ಟೆಯಲ್ಲಿ ರಂಗು ರಂಗಿನ ಉತ್ತಮ ಸೀರೆ ಸಿಗುವಾಗ ದುಬಾರಿ ಬೆಲೆ ತೆತ್ತು ಸೀರೆ ಇಷ್ಟಪಡುವುದಿಲ್ಲ. ಇದು ಹತ್ತಿಯಷ್ಟು ಹಗುರ. ಆದರೆ ಹತ್ತಿ ನೂಲಿನ ಸೀರೆ ಭಾರವಲ್ವಾ. ಅಷ್ಟೊಂದು ಭಾರದ ಸೀರೆಯನ್ನು ಉಡುವವರಿಲ್ಲ. ಉಟ್ಟರೆ ಹೆಣ್ಮಕ್ಕಳು ಸ್ಥೂಲವಾಗಿ ಕಾಣುತ್ತಾರೆ' ಮಾತಿನ ಮಧ್ಯೆ ನಗುತ್ತಾ ಶೈಲಜಾ ಹೇಳಿದರು. ಹಾಗೆಂತ ಉಡುವವರೇ ಇಲ್ವಾ, ಇದ್ದಾರೆ - ಮದುವೆ, ಜಾತ್ರೆಗಳಂತಹ ಸಂಭ್ರಮದಲ್ಲಿ ಮಗ್ಗದ ಸೀರೆ ಧರಿಸುವುದು ಪ್ರತಿಷ್ಠೆ. ಈ ಪ್ರತಿಷ್ಠೆ ಬದುಕಿನಲ್ಲೂ ಬರುತ್ತಿದ್ದರೆ..? ಪ್ರತಿಷ್ಠೆಗಳು ಬದುಕಿಗೆ ಪೂರಕವಾಗಿದ್ದರೆ ಚೆಲುವು.

                          ಹಾಗಿದ್ದರೆ ಸೀರೆ ಉಡುವವರು ಯಾರು? 'ಸಾರ್, ಸೀರೆಗೆ ಹೊರ ರಾಜ್ಯಗಳಲ್ಲಿ ಭಾರೀ ಬೇಡಿಕೆ. ನಗರ ಪ್ರದೇಶದ ಹೆಣ್ಮಕ್ಕಳು ತುಂಬಾ ಇಷ್ಟಪಡುತ್ತಾರೆ' ದನಿ ಸೇರಿಸಿದರು ನವೀನಾ. ಹೌದಲ್ವಾ. ಮನೆಬಳಕೆಗೆ ಉಡಲು ನಗರದ ಸಾರಿ. ನಗರದವರಿಗೆ ಉಡಲು ತಂಮನೆ ತಯಾರಿಯ ಸಾರಿ. ತಯಾರಿಸುವವರಿಗೆ ಉಪಯೋಗಿಸಲು ಮಾನಸಿನ ಅಡ್ಡಿ. 'ಮಗ್ಗದ ಸೀರೆಯನ್ನು ಉಟ್ಟರೆ ಪ್ರಾಯದವರು ಉಟ್ಟಂತೆ ಕಾಣುತ್ತದಂತೆ, ಪ್ರಾಯ ಹೆಚ್ಚಾದಂತೆ ತೋರುತ್ತದಂತೆ'! ಹಾಗಾಗಿ ಮೂರು ದಶಕಗಳಿಂದ ಮಗ್ಗದ ಸೀರೆಯನ್ನು ನಿತ್ಯ ಉಡುವ ಪದ್ದತಿ ಶಿಗ್ಲಿಯಲ್ಲಿಲ್ಲ. ಐವತ್ತು ಮೀರಿದ ಹಿರಿಯರಿಗಾದರೂ ಇಷ್ಟವಾಗುತ್ತದಲ್ಲಾ. ಅದೇ ಸಮಾಧಾನ. ಎಲ್ಲವೂ ನಗರಗಳಿಗೆ ರವಾನೆ.
'                      ಕೈಮಗ್ಗದ ಸೀರೆಗೆ ಬೇಡಿಕೆ ಬರಬೇಕಾದರೆ ಟೀವೀಯಲ್ಲಿ ಬರಬೇಕು ಸಾರ್. ಧಾರಾವಾಹಿಗಳಲ್ಲಿ ತಾರೆಯರು ಉಟ್ಟುಕೊಂಡು ನಟನೆ ಮಾಡಬೇಕು. ಆಗ ಹೆಣ್ಮಕ್ಕಳು ಸೀರೆಯನ್ನು ಒಪ್ಪುತ್ತಾರೆ' ಎಂದರು ವಿಷಾದದಿಂದ ಹನುಮಂತಪ್ಪ. ಹೌದಲ್ಲಾ, ವಾಹಿನಿಗಳು ನಮಗೆಲ್ಲಾ ದಾರಿ ತೋರುವ ಗುರು! ಅವಕ್ಕೆ ನಮ್ಮ ಉಡುಗೆ ತೊಡುಗೆಗಳು ಹೇಗಿರಬೇಕು ಎಂದು ನಿರ್ಧರಿಸುವ ಹಿರಿ ಸ್ಥಾನ! ತಾರೆಯರಂತೆ ಉಡುಪು ತೊಡುವ, ವ್ಯಕ್ತಿತ್ವವನ್ನು ಅನುಸರಿಸುವ ನಮ್ಮ ಜೀವನ ಶೈಲಿ, ವರ್ತನೆಗಳು ಬದಲಾದರೆ; ಉಡುವ ಸೀರೆ, ತೊಡುವ ಉಡುಪು, ಪ್ಯಾಂಟ್-ಷರ್ಟ್ ಗಳ ಆಯ್ಕೆ ನಮ್ಮ ಕೈಯಲ್ಲಿರುತ್ತದೆ. ಇಲ್ಲದಿದ್ದರೆ ವಾಹಿನಿಗಳ, ತಾರೆಯರ ಡ್ರೆಸ್ಕೋಡಿಗೆ ಹೊಂದಿಕೊಳ್ಳಬೇಕಾದ ಪ್ರಾರಬ್ಧ! ಇಳಕಲ್ ಸೀರೆ, ಶಿಗ್ಲಿ ಸೀರೆ ಉಟ್ಟು ಧಾರಾವಾಹಿಗಳಲ್ಲೋ, ಸಿನಿಮಾದಲ್ಲೋ ನಟಿಸುವ ತಾರೆಯರು ಬಹುಬೇಗ ಕಾಣಿಸಿಕೊಳ್ಳಲಿ.

                     ಶಿಗ್ಲಿಯಲ್ಲಿ ಪಾರಂಪರಿಕ ಮಗ್ಗಗಳ ಸದ್ದಿನ ನಡುವೆ, ಸುಧಾರಿತ ಯಾಂತ್ರೀಕೃತ ಮಗ್ಗಗಳೂ ಸದ್ದು ಮಾಡುತ್ತಿವೆ. ಆಧುನಿಕ ಆಸಕ್ತಿಗೆ ಅನುಗುಣವಾಗಿ ಹೊಸ ವಿನ್ಯಾಸಗಳನ್ನು ರೂಪಿಸುವ ಮಗ್ಗಗಳತ್ತ ಹೆಣ್ಮಕ್ಕಳು ಆಸಕ್ತರಾಗುತ್ತಿದ್ದಾರೆ. ಆಧುನಿಕ ಮಗ್ಗದ ಯಂತ್ರಗಳು ಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತದೆ. ಇಂತಹ ಮಗ್ಗಗಳಲ್ಲಿ ಸೀರೆಗಳನ್ನು ಮುಂಗಡವಾಗಿ ಕಾದಿರಿಸುವ ವ್ಯವಸ್ಥೆ ಹೆಜ್ಜೆಯೂರುತ್ತಿದೆ. ಹಳ್ಳಿಯ ಸಂಪಾದಿತ ಹಣ ಹಳ್ಳಿಯಲ್ಲೇ ವಿನಿಯೋಗ. ಸ್ಥಳದಲ್ಲೇ ಉದ್ಯೋಗ. ಹಂಗಿಲ್ಲದ ಸ್ವಾವಲಂಬಿ ಬದುಕು.
'                    ಟೀವೀಯ ಧಾರಾವಾಹಿಗಳಲ್ಲಿ ನಟಿಸುವ ತಾರೆಯರು ಶಿಗ್ಲಿ ಸೀರೆಯುಡಬೇಕು' ಎಂಬ ಹನುಮಂತಪ್ಪನವರ ಮಾತಲ್ಲಿ ವಿಷಾದದ ಗುಡ್ಡೆಯೇ ಕಾಣುತ್ತದೆ. ಆರು ದಶಕಗಳ ಬದುಕನ್ನು ಕಂಡ ಅವರ ಕಣ್ಣುಗಳಲ್ಲಿ ತನ್ನೂರಿನ ಸಂಸ್ಕೃತಿಯ ಇಳಿಲೆಕ್ಕ ಕಾಣಲು ಕಷ್ಟವೇನಿಲ್ಲ. ಇದು ಶಿಗ್ಲಿ ಹಳ್ಳಿಯೊಂದರ ಕತೆಯಲ್ಲ, ಎಲ್ಲಾ ಹಳ್ಳಿಯ ಕತೆ.