Wednesday, April 15, 2015

ಅನ್ನದ ನೆಲದ ಹೊನ್ನಿಗೆ ಮಾನ



                ಹಳ್ಳಿಗಳು ಖಾಲಿಯಾಗುತ್ತಿವೆ. ಯುವಕರ ನಗರ ವಲಸೆ ಹೆಚ್ಚುತ್ತಿದೆ. ನೆಮ್ಮದಿಯ ಬದುಕಿನ ನೆಲೆಯಾಗಿದ್ದ ಕೃಷಿ ಕ್ಷೇತ್ರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಅನ್ನದ ನೆಲದಲ್ಲಿ ಆತಂಕದ ಛಾಯೆಯಿದೆ. ಕೃಷಿ ನೆಮ್ಮದಿಯ ಮಾದರಿಗಳನ್ನು ಹುಡುಕುವ ಸವಾಲು ನಮ್ಮೆದುರಿಗಿದೆ. ಕೃಷಿಯಲ್ಲಿ ಏನೂ ಇಲ್ಲ ಎಂಬುದಕ್ಕಿಂತ ಎಷ್ಟೊಂದು ವಿಶೇಷತೆಗಳಿವೆಯೆಂದು ನೋಡಬೇಕು. ಸಾಧಕರನ್ನು ಗುರುತಿಸಿ ಮಣ್ಣಿನ ಕಾಯಕದತ್ತ ಎಲ್ಲರ ಗಮನ ಸೆಳೆದು ಕೃಷಿಯ ಸಕಾರಾತ್ಮಕ ಕಾರ್ಯಕ್ಕೆ ಪ್ರೋತ್ಸಾಹಿಸಬೇಕಾಗಿದೆ. ಉತ್ತಮ ಮಾದರಿಗಳನ್ನು ಪರಿಚಯಿಸುವ ಮೂಲಕ ಕೃಷಿ ರಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಆಶಯದಿಂದ ಪ್ರಶಸ್ತಿಗಳನ್ನು ರೂಪಿಸಲಾಗಿದೆ - ಪತ್ರಕರ್ತ ಶಿವಾನಂದ ಕಳವೆ ರಾಜ್ಯ ಮಟ್ಟದ 'ಸುಕೃತ ಕೃಷಿ ಪ್ರಶಸ್ತಿ'ಯ ಹಿನ್ನೆಲೆಯನ್ನು ಹೇಳುತ್ತಾರೆ.
                ಹಾವೇರಿ ಜಿಲ್ಲೆಯ ಹಾನಗಲ್ ಮಂತಗಿ ಮುತ್ತಣ ಪೂಜಾರ್ ಅವರಿಗೆ 'ಸುಕೃತ ಕೃಷಿ ಪ್ರಶಸ್ತಿ', ಸಾಗರದ ಹೆಗಡೆ ಫಾರ್ಮಿನ ಲಕ್ಷ್ಮೀನಾರಾಯಣ ಹೆಗಡೆಯವರಿಗೆ 'ಕೃಷಿ ತಂತ್ರಜ್ಞಾನ ಪ್ರಶಸ್ತಿ'ಗಳ ಪ್ರದಾನ ಸಮಾರಂಭ ಹುಬ್ಬಳ್ಳಿಯಲ್ಲಿ ಜರುಗಿತು. ಪದ್ಮವಿಭೂಷಣ ಡಾ. ವೀರೇಂದ್ರ ಹೆಗಡೆಯವರಿಂದ ಪ್ರಶಸ್ತಿ ಪ್ರದಾನ. ಎರಡೂ ಪ್ರಶಸ್ತಿಗಳೊಂದಿಗೆ ತಲಾ ಒಂದು ಲಕ್ಷ ರೂಪಾಯಿಗಳ ನಿಧಿ. ಸಮಾರಂಭದಂದು ಇಬ್ಬರು ಸಾಧಕರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ. ಜತೆಗೆ ಸಾಧಕರ ಪರಿಚಯದ 'ಹೊಲದ ಹೊನ್ನು' ಪುಸ್ತಿಕೆಯ ಬಿಡುಗಡೆ. ಬಹಳ ಅರ್ಥವತ್ತಾದ, ಭಾವಪೂರ್ಣವಾದ ಕಾರ್ಯಕ್ರಮ.
              ಪ್ರಶಸ್ತಿ ಪುರಸ್ಕೃತರನ್ನು ಗೌರವದಿಂದ ನಡೆಸಿಕೊಳ್ಳುವ ಅಪರೂಪದ ಖಾಸಗಿ ಕಾರ್ಯಕ್ರಮ. ಬಳ್ಳಾರಿಯಲ್ಲಿ ಕೇಂದ್ರ ಕಚೇರಿ ಹೊಂದಿದ ಸುಕೋ ಬ್ಯಾಂಕ್ ಸ್ಥಾಪಿಸಿದ ಪ್ರಶಸ್ತಿ ಸಂಚಾಲನಾ ಸಮಿತಿಗೆ ಶಿವಾನಂದ ಕಳವೆ ಸಂಚಾಲಕರು. ಗಟ್ಟಿ ಅನುಭವ ಹೊಂದಿದ ಸದಸ್ಯ ಮಂಡಳಿ. ಯಾವುದೇ ವಶೀಲಿಗಳಿಲ್ಲದೆ, ಸಾಧನೆಯೇ ಮಾನದಂಡವಾಗುಳ್ಳ ಆಯ್ಕೆ ಪ್ರಕ್ರಿಯೆ. ಇದಕ್ಕಾಗಿ 2014ರಲ್ಲಿ ಕಳವೆಯವರು ಕನ್ನಾಡಿನಾದ್ಯಂತ ಓಡಾಡಿದ್ದಾರೆ. ರೈತರನ್ನು ಮಾತನಾಡಿಸಿದ್ದಾರೆ. ಅವರ ಮನೆಯ ಸದಸ್ಯರಂತೆ ಬೆರೆದಿದ್ದಾರೆ. ಕಷ್ಟ-ಸುಖಗಳಿಗೆ ಕಿವಿಯಾಗಿದ್ದಾರೆ. ಮಣ್ಣನ್ನು ಪ್ರೀತಿಸುವ ಅಪ್ಪಟ ಕೃಷಿಕರೊಂದಿಗೆ ಸ್ನೇಹ ಸಂಪಾದಿಸಿದ್ದಾರೆ.
             ಕೃಷಿ ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ನಾಲ್ಕು ನೂರ ಐವತ್ತಕ್ಕೂ ಹೆಚ್ಚು ರೈತ ಸಾಧಕರ ಮಾಹಿತಿಗಳು ಬಂದಿದ್ದುವು. ಎಲ್ಲಾ ರೈತ ಸಾಧಕರನ್ನೂ ಸ್ವತಃ ಅವರ ಹೊಲಕ್ಕೆ ಹೋಗಿ ವೀಕ್ಷಿಸಿದ ಬಳಿಕ ಕರ್ನಾಾಟಕದ ಕೃಷಿ ಸ್ಥಿತಿಗತಿಯ ಒಂದಿಷ್ಟು ಅರಿವು ದೊರಕಿದೆ. ಕೃಷಿ ನೆಮ್ಮದಿಯ ಮಾದರಿಗಳನ್ನು ಹುಡುಕುವ ಸವಾಲು ನಮ್ಮೆದುರಿಗಿತ್ತು, ಎನ್ನುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿಗಳನ್ನು ಸುತ್ತಿದ ಕಳವೆಯವರ ಕಡತದೊಳಗೆ ಅರ್ಹರನ್ನೇ ಆಯ್ಕೆ ಮಾಡುವ ಬದ್ಧತೆಯ ಶಿಸ್ತು ಸುಳಿದಾಡಿತ್ತು.
            ತಾನು ಓಡಾಡಿದ ಎಲ್ಲಾ ಕೃಷಿಕರ ವಿಳಾಸ ಯಾದಿ ಕಳವೆಯವರಲ್ಲಿದೆ. ಅವರನ್ನೆಲ್ಲಾ ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಬಹುತೇಕ ಮಂದಿ ಕೃಷಿಕರು ಭಾಗವಹಿಸಿರುವುದು ಕಾರ್ಯಕ್ರಮಕ್ಕೆ ಕಳೆ ಬಂದಿತ್ತು. ಕೃಷಿ, ಕೃಷಿಕರಿಗೆ ಮಾನ ಸಂದಿರುವುದು ಎಲ್ಲರಿಗೂ ಖುಷಿ ಕೊಟ್ಟ ವಿಚಾರ. ಪ್ರಶಸ್ತಿ ಪುರಸ್ಕೃತರ ಸಾಧನೆಗೆ ಕನ್ನಡಿ ಹಿಡಿದ 'ಹೊಲದ ಹೊನ್ನು' ಪುಸ್ತಿಕೆಯು ಕೃಷಿಕರ ಕೈಯಲ್ಲಿತ್ತು. ನಮ್ಮವಲ್ಲೊಬ್ಬನಿಗೆ ರಾಜ್ಯ ಮಟ್ಟದ ಪುರಸ್ಕಾರ ಲಭ್ಯವಾದ ಖುಷಿಯೂ ಮಿಂಚಿ ಮರೆಯಾಗುತ್ತಿತ್ತು.
           ಮುತ್ತಣ್ಣ ಪೂಜಾರ್ ಮಾತನಾಡುತ್ತಾ 'ಕಾಡಿಗೆ ನಮಸ್ಕಾರ, ಮರಗಳಿಗೆ ನಮಸ್ಕಾರ' ಎನ್ನುವ ತುಣುಕುಗಳನ್ನು ಮಧ್ಯೆ ಮಧ್ಯೆ ಪೋಣಿಸುತ್ತಿದ್ದುದು ಅವರು ಬೆಳೆದು ಬಂದ ದಾರಿಯ ನೆನವರಿಕೆ. ಸಾಧಕರ ಸಾಧನೆಯನ್ನು ಬಿಂಬಿಸುವ ಮಾಧ್ಯಮ ಬೆಳಕಿನಿಂದ ವ್ಯಾಪಕ ಪ್ರಚಾರ. ಕೃಷಿಕರಿಗೆ ಇಷ್ಟೊಂದು ರಾಜ ಮರ್ಯಾಾದೆಯು ಪ್ರಶಸ್ತಿ ಮೂಲಕ ಪ್ರಾಪ್ತವಾಗುತ್ತಿರುವುದು ರಾಜ್ಯಕ್ಕೆ ಮಾದರಿ. ಕೇರಳದ ಪ್ರಸಿದ್ಧ ದೈನಿಕ ಮಲೆಯಾಳ ಮನೋರಮವು ಉತ್ತಮ ಕೃಷಿಕರನ್ನೊಬ್ಬರನ್ನು ಆರಿಸಿ ಅವರಿಗೆ 'ಕರ್ಶಕಶ್ರೀ' ಪ್ರಶಸ್ತಿಯನ್ನು ಹಲವು ವರುಷಗಳಿಂದ ನೀಡುತ್ತಿದೆ. ಅಲ್ಲೂ ಕೂಡಾ ಪ್ರಶಸ್ತಿ ಪಡೆದ ರೈತರನ್ನು ಗೌರವಿಸುವ ಪರಿ ಅನನ್ಯ. ಅತ್ತ 'ಕರ್ಷಕಶ್ರೀ', ಇತ್ತ 'ಸುಕೃತ ಪ್ರಶಸ್ತಿ'.
              ಸರಕಾರವು 'ಕೃಷಿ ಪಂಡಿತ' ಪ್ರಶಸ್ತಿಯನ್ನು ವರ್ಷವೂ ಘೋಷಿಸುತ್ತದೆ. ಈಚೆಗಂತೂ ಇದೊಂದು ಹರಕೆಯಾಗಿದೆ! ಆಟೋಟ ಸ್ಪಧರ್ೆಯಲ್ಲಿ ಬಹುಮಾನ ಕೊಟ್ಟಂತೆ ಕೊಡುವ ಪರಿಪಾಠ. ರಾಜ್ಯ ಮಟ್ಟದ ಪ್ರಶಸ್ತಿಯನ್ನು ತಾಲೂಕಿನ ಕಾರ್ಯಕ್ರಮವೊಂದರಲ್ಲಿ ನೀಡುವ ಪ್ರಕ್ರಿಯೆಗೂ ಚಾಲನೆ ದೊರಕಿತ್ತು. ಒಂದಿಬ್ಬರು ಪ್ರಶಸ್ತಿಯನ್ನು ನಿರಾಕರಿಸಿದ್ದರು ಕೂಡಾ. ಪ್ರಶಸ್ತಿ ಘೋಷಣೆಯಾಗಿ, ಪ್ರದಾನ ಸಮಾರಂಭ ಜರುಗುವ ಹೊತ್ತಿಗೆ ಎಂದೋ ಬರೆದಿಟ್ಟ ಚೆಕ್ ಅವಧಿ ಮುಗಿದಿರುತ್ತದೆ! ಅದನ್ನು ಸರಿಪಡಿಸಲು ನಿತ್ಯ ಅಲೆದಾಟ. 'ಯಾಕಪ್ಪಾ ಪ್ರಶಸ್ತಿ ಬಂತೋ' ಎಂದು ಗೊಣಗಾಡುವ ಮನಃಸ್ಥಿತಿಯನ್ನು ಸೃಷ್ಟಿಸುತ್ತವೆ. 'ಸುಕೃತ ಕೃಷಿ ಪ್ರಶಸ್ತಿ'ಯ ಆಯ್ಕೆ ಪ್ರಕ್ರಿಯೆ, ಸಮಾರಂಭದ ಚೌಕಟ್ಟು, ಸಾಧಕರ ಸಾಧನೆಗೆ ಬೆಳಕನ್ನೊಡ್ಡುವ ವ್ಯವಸ್ಥೆಯನ್ನೊಮ್ಮೆ ಸರಕಾರದ ವರಿಷ್ಠರು ನೋಡಬಾರದೇಕೆ?
                'ಸುಕೃತ ಪ್ರಶಸ್ತಿ'ಯು ಸುಕೋ ಬ್ಯಾಂಕಿನ ಅಧ್ಯಕ್ಷ ಮನೋಹರ ಮಸ್ಕಿಯವರ ಕನಸಿದು. ಹತ್ತು ವರುಷಗಳ ಕಾಲ ನಿರಂತರವಾಗಿ ಈ ಕೊಡುಗೆ ನೀಡಲು ಬ್ಯಾಂಕ್ ನಿರ್ಧರಿಸಿದೆ. ಕೃಷಿ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗುವಂತೆ ರಾಜ್ಯಾದ್ಯಂತ ರೈತ ಕೃಷಿ ಮಾಹಿತಿ ಸಂಪರ್ಕ ಜಾಲ ರೂಪಿಸಲಾಗುತ್ತದೆ ಎನ್ನುವ ಮಸ್ಕಿಯವರ ಆಶಯ ಕನ್ನಾಡಿನ ಎಲ್ಲಾ ಬ್ಯಾಂಕುಗಳಿಗೆ ತಲುಪಬೇಕು.
           ಸರಿ, ಎರಡನೇ ವರುಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಶಿವಾನಂದ ಕಳವೆಯವರು ಕಡತದೊಂದಿಗೆ ಸಾಧಕರ ಸಾಧನೆಯನ್ನು ದಾಖಲಿಸಲು ಈಗಾಗಲೇ ಹೊರಟುಬಿಟ್ಟಿದ್ದಾರೆ.

0 comments:

Post a Comment