Friday, April 24, 2015

ಬೆಟ್ಟು ಆಡಿಸಿದರೆ ಬೆಟ್ಟವೂ ಕರಗುತ್ತೆ..!

                                                              ಪುರುಷೋತ್ತಮ ಸಂಮಾನ
                                                 ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಗಳಿಕೆಯ ಭಾಗ.
                                                                ರುದ್ರಪ್ಪ-ರುದ್ರಮ್ಮ ದಂಪತಿ
                                                           ವೀರಪ್ಪ-ಚಂದ್ರಮ್ಮ ದಂಪತಿ
           ಬೆಟ್ಟು ಆಡಿಸಿದರೆ ಬೆಟ್ಟವೂ ಕರಗುತ್ತೆ..!
           "ಸಾವಯವ ಎನ್ನುವುದು ಕೃಷಿ ಪದ್ಧತಿಯಲ್ಲ, ಅದೊಂದು ಶುದ್ಧ ಬದುಕು."
 ತೀರ್ಥಹಳ್ಳಿಯ ಕೀರ್ತಿಶೇಷ ಕುರುವಳ್ಳಿ ಪುರುಷೋತ್ತಮ ರಾಯರ ಪ್ರತಿಪಾದನೆಯಿದು. ಅದು ಭಾಷಣವಲ್ಲ, ಅನುಷ್ಠಾನ. ಕೃಷಿಯಲ್ಲಿ ಹೊಸ ಹಾದಿಯ ರೂಪೀಕರಣ. ಮೊದಲಿಗೆ ತನ್ನ ತೋಟದಲ್ಲಿ ಸಾವಯವ ಮನಸ್ಸನ್ನು ಬಿತ್ತಿದರು. ಆ ಹಾದಿಯಲ್ಲಿ ಕ್ರಮಿಸಿ ಸಾವಯವ ಬದುಕನ್ನು ಅಪ್ಪಿಕೊಂಡ ಸಾವಿರಾರು ಹೊಲಗಳಿಂದು ಶುದ್ಧ ಮನಸ್ಸನ್ನು ಕಟ್ಟಿಕೊಡುವ ತಾಣಗಳಾಗಿವೆ.
ರಾಯರ 'ಕೃಷಿ ನಿವಾಸ'ಕ್ಕೆ ಕೃಷಿಕರ ತಂಡವೊಂದು ಆಗಮಿಸಿತ್ತು. ತೋಟ ಸುತ್ತುತ್ತಾ ಇದ್ದಂತೆ ಒಬ್ಬರು ಗಿಡದ ಕೊಂಬೆಯೊಂದನ್ನು ಮುರಿದರಂತೆ. ಗಿಡ ಚಿವುಟುವ ಬದಲು ನನ್ನನ್ನೇ ಚಿವುಟಿ. ನನ್ನನ್ನು ಚಿವುಟುವಾಗ ನೀವು ಯೋಚನೆ ಮಾಡ್ತೀರಿ ಅಲ್ವಾ. ಆದರೆ ಗಿಡವನ್ನು ಚಿವುಟುವಾಗ ಆ ವಿವೇಕ ನಿಮ್ಮಲ್ಲಿ ಯಾಕೆ ಉದಯಿಸುವುದಿಲ್ಲ? ಎಂದರು. ಕೃಷಿ ಕ್ಷೇತ್ರವನ್ನು ರಾಯರು ಕಾಣುವ ದೃಷ್ಟಿಯಿದು.
          ನಿಮ್ಮ ಜಮೀನಿನಲ್ಲಿರುವ ಎಲ್ಲಾ ಗಿಡಗಳನ್ನು ಮುಟ್ಟಿದ್ದೀರಾ? ಜಮೀನಿನ ಎಲ್ಲಾ ಭಾಗವನ್ನು ಬರಿಗಾಲಿನಿಂದ ಮೆಟ್ಟಿದ್ದೀರಾ? ಎಂದಾದರೂ ಬಿಳಿ ಕಾಗದದ ಮೇಲೆ ಗಿಡಕ್ಕೆ ಏನೂ ಮಾಡಿಲ್ಲ ಎನ್ನುವುದನ್ನು ಬರೆದಿದ್ದೀರಾ? ಈ ಮೂರು ಪ್ರಶ್ನೆಗಳನ್ನು ಕೇಳದೆ ರಾಯರ ಭಾಷಣ ಮುಂದೆ ಹೋಗದು. ತಾನು ಅನುಷ್ಠಾನಿಸಿದ್ದರಿಂದ ಇಂತಹ ಖಡಕ್ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಕೇಳುವ ಧೈರ್ಯ ಅವರಲ್ಲಿತ್ತು. ಕೃಷಿಯಲ್ಲಿ ಆಗಬೇಕಾದ್ದು 'ಕ್ರಾಂತಿ' ಅಲ್ಲ, 'ವಿಕಾಸ' ಎಂಬುದನ್ನು ಅನುಭವದಿಂದ ಅರಿತುಕೊಂಡಿದ್ದರು.
            ರಾಯರು ದೂರವಾಗಿ ಹದಿನೇಳು ಸಂವತ್ಸರಗಳು ಸಂದುವು. ಅವರ ಯೋಚನೆಗಳನ್ನು 'ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ'ವು ಅಕ್ಷರಶಃ ಮುನ್ನಡೆಸುತ್ತಿದೆ. ಶುದ್ಧ ಬದುಕಿನ ಚಿಂತನೆಯ ಯುವ ಮನಸ್ಸುಗಳು ಪ್ರತಿಷ್ಠಾನದ ಆಶಯವನ್ನು ಕನ್ನಾಡಿನಾದ್ಯಂತ ಪಸರಿಸುತ್ತಿದೆ. ಇದರ ಚಟುವಟಿಕೆಯ ಒಂದು ಭಾಗವಾಗಿ ಸಾವಯವ ರೈತ ದಂಪತಿಗಳನ್ನು ಆಯ್ಕೆಮಾಡಿ ಅವರಿಗೆ 'ಪುರುಷೋತ್ತಮ ಸಂಮಾನ' ನೀಡಿ ಗೌರವಿಸುತ್ತಿದೆ. ಸಂಮಾನಿತರ ಕುರಿತು 'ಸಾಧಕ ಸಾಧನೆ' ಎನ್ನುವ ಚಿಕ್ಕ ಪುಸ್ತಿಕೆಯನ್ನು ಪ್ರಕಟಿಸುತ್ತಿದೆ. 
            ಈ ಬಾರಿಯ ಸಂಮಾನವು ಮಂಗಳೂರಿನಲ್ಲಿ ಜರುಗಿತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಹೋಬಳಿಯ ವಿಠಲಾಪುರ ರುದ್ರಮ್ಮ-ರುದ್ರಪ್ಪ ಮತ್ತು ಚಂದ್ರಮ್ಮ-ವೀರಪ್ಪ ದಂಪತಿ ಕುಟುಂಬಕ್ಕೆ ಪ್ರಶಸ್ತಿ ನೀಡಲಾಗಿತ್ತು. ಕುಟುಂಬವೊಂದಕ್ಕೆ ಪ್ರಶಸ್ತಿಯನ್ನು ನೀಡುವ ಪ್ರತಿಷ್ಠಾನದ ಉಪಕ್ರಮ ಶ್ಲಾಘ್ಯ ಮತ್ತು ಮಾದರಿ. ಇಡೀ ಕುಟುಂಬವನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಅವರ ಸಾಧನೆಯ ಸಾಕ್ಷ್ಯಚಿತ್ರವನ್ನು ಪ್ರಸಾರಿಸಿ, ಸಂಮಾನಿಸಿದ ಕ್ಷಣ ಪುಳಕ ತರುವಂತಾದ್ದು. 
            ಕುಟುಂಬದ ಯಜಮಾನನ ಹಿಂದೆ ಇತರ ಸದಸ್ಯರ ತನುಶ್ರಮವೂ ಗರಿಷ್ಠ ಪ್ರಮಾಣದಲ್ಲಿ ಮಿಳಿತವಾಗಿರುತ್ತವೆ. ಅವೆಂದೂ ದಾಖಲಾಗುವುದಿಲ್ಲ. ಮನೆಯೆಂಬ ಸೂರಿನಡಿಯಲ್ಲಿ ಹಲವು ಮನಸ್ಸುಗಳು ಕನಸುಗಳನ್ನು ಅರಳಿಸುತ್ತವೆ. ಕನಸುಗಳು ಹಸಿರಿನ ಸುತ್ತ ಸುತ್ತಲು ಗೌರವದ ಶ್ರೀರಕ್ಷೆ ಬೇಕು. ಕೃಷಿಯಲ್ಲೂ ಗೌರವವಿದೆ ಎನ್ನುವ ಭಾವವನ್ನು ಇಂತಹ ಪ್ರಶಸ್ತಿಗಳು ಸಿಂಚನ ಮಾಡುವುದರಿಂದ ಕುಟುಂಬದ ಸದಸ್ಯರಿಗೂ ಮಾನ ಸಿಕ್ಕಿದಂತಾಗುತ್ತದೆ.
             ಪ್ರಶಸ್ತಿ ಪುರಸ್ಕೃತ ರುದ್ರಪ್ಪ-ವೀರಣ್ಣ ಕುಟುಂಬ ಸಾವಯವ ಕೃಷಿಕರೆನ್ನುವುದಕ್ಕಿಂತ ಸಾವಯವ ಮನಸ್ಸುಗಳನ್ನು ಕಟ್ಟಿಕೊಳ್ಳಲು ಬೇಕಾದ ಒಳಸುರಿಗಳನ್ನು ತನ್ನ ಭೂಮಿಯಲ್ಲಿ ಬೆಳೆದವರು ಎನ್ನಬಹುದೇನೋ. ಬರದ ಭೂಮಿಯ ಬಡತನದಲ್ಲಿ ಹುಟ್ಟಿದ ಈ ಸಹೋದರರಿಗೆ ದುಡಿಮೆ ಅನಿವಾರ್ಯವಾಗಿತ್ತು.  'ದುಡಿಯಬೇಕು, ದುಡಿದು ಬದುಕಬೇಕು. ದುಡಿಮೆಯೊಂದೇ ಬಡತನಕ್ಕೆ ಮದ್ದು. ಬೆಟ್ಟು ಆಡಿಸಿದ್ರೆ ಬೆಟ್ಟ ಸವೆಯುತ್ತೆ' ಎಂಬ ನಿರ್ಧಾರ.  ಅದುವೇ ಬದುಕಿನ ಯಶದ ಮಂತ್ರವಾಯಿತು.
ಪಾಲಿಗೆ ಬಂದಿತ್ತು, ಉಬ್ಬುತಗ್ಗು ಭೂಮಿ. ಕೂಲಿ ಕೊಟ್ಟು ಸಮತಟ್ಟು ಮಾಡುವಷ್ಟು ಸದೃಢರಲ್ಲ. ಸಮತಟ್ಟು ಮಾಡದೆ ಕೃಷಿ ಮಾಡುವಂತಿಲ್ಲ. ಇಬ್ಬರೂ ಈ ಕೆಲಸ ಮಾಡಿದರೆ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆಯೇ ಗತಿ! ರುದ್ರಪ್ಪರಿಗೆ ಭೂಮಿಯ ಏರುತಗ್ಗನ್ನು ಸಮತಟ್ಟು ಮಾಡುವ ಕಾಯಕ. ವೀರಣ್ಣರಿಗೆ ಹೊರಗಡೆ ವಿವಿಧ ಕಸುಬು ಮಾಡಿ ಹಣ ಹೊಂದಿಸುವ ಕೆಲಸ. ಸಹೋದರರ ಛಲಕ್ಕೆ ಭೂಮಿಯು ಹತ್ತಿಯಂತೆ ಹಗುರವಾಯಿತು! ಮೂರು ದಶಕದ ಹಿಂದಿನ ಕತೆಯಿದು. ಬಾಳೆ ಕೃಷಿಯಿಂದ ಕೃಷಿಗೆ ಶ್ರೀಕಾರ. ಬಾಳೆ ಬೆಳೆದೋನು ಬದುಕಿದ' ಎಂಬ ಗಾದೆಯನ್ನು ಸತ್ಯ ಮಾಡಿದ ಶ್ರಮಿಕರಿವರು.
          ಕೃಷಿ ಅಂದರೆ ರಾಸಾಯನಿಕ ಗೊಬ್ಬರ ಹಾಕಲೇಬೇಕು - ಎಂಬ ಮಾಹಿತಿಯು ಅರಿವಿನ ರೂಪದಲ್ಲಿ ರುದ್ರಪ್ಪ-ವೀರಣ್ಣರ ತಲೆ ಹೊಕ್ಕರೂ ರಾಸಾಯನಿಕದ ಸಹವಾಸ ದುಬಾರಿ ಎನ್ನುವ ಕಲ್ಪನೆಯಿತ್ತು. ಹಾಗಾಗಿ ಆರಂಭದಿಂದಲೂ ರಾಸಾಯನಿಕ ರಹಿತವಾದ ಕೃಷಿಯತ್ತ ಒಲವು. ನಾಡಿನ  ವಿವಿಧ ಕೃಷಿಕರಲ್ಲಿಗೆ ಭೇಟಿ. ಅಲ್ಲಿನ ಕೃಷಿ ಪದ್ಧತಿಗಳ ಪ್ರತ್ಯಕ್ಷ ವೀಕ್ಷಣೆ. ತಮ್ಮ ಹೊಲಕ್ಕೆ ಸೂಕ್ತವಾಗಬಹುದಾದ ವಿಚಾರಗಳ ಅಧ್ಯಯನ.
            ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ವಿವಿಧ ಮಾದರಿಗಳನ್ನು ಅಭ್ಯಸಿಸಿ ಮೊದಲಿಗೆ ಎರೆಗೊಬ್ಬರ ಘಟಕ ತೆರೆದರು. ಪಶು ಆಹಾರವನ್ನು ಬೆಳೆದರು. ಪ್ರಸ್ತುತ ದೇಸಿ ಗೋ ತಳಿಗಳ ಸಂಸಾರ ವೃದ್ಧಿಸಿದರು. ಗೀರ್, ಹಳ್ಳಿಕಾರ್, ಅಮೃತ್ಮಹಲ್, ಮಲೆನಾಡು ಗಿಡ್ಡ, ಕಾಂಕ್ರೆಜ್.. ಮೊದಲಾದ ಹನ್ನೆರಡು ದೇಸಿ ತಳಿಯ ಜಾನುವಾರು ಸಂಸಾರಗಳಿವೆ. ಅವರ ಹೈನುಗಾರಿಕೆಯ ಒಂದು ಲೆಕ್ಕಾಚಾರ ನೋಡಿ, ಒಂದು ಕಿಲೋ ಹಸುವಿನ ತುಪ್ಪಕ್ಕೆ ನಮ್ಮಲ್ಲಿ ಒಂದೂವರೆ ಸಾವಿರ ರೂಪಾಯಿ ದರ. ಒಂದು ಕಿಲೋ ತುಪ್ಪ ತಯಾರಾಗಲು ಇಪ್ಪತ್ತೈದು ಲೀಟರ್ ಹಾಲು ಬೇಕು. ಅಂದರೆ ಒಂದು ಲೀಟರ್ ಹಾಲಿಗೆ ಅರುವತ್ತು ರೂಪಾಯಿ ಸಿಕ್ಕಂತಾಯಿತು! ಮೊದಲು ಡೇರಿಗೆ ಹಾಲು ಹಾಕುವಾಗ ಲೀಟರಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತಿತ್ತು,
             ವಿಠಲರಾಪುರದಲ್ಲಿ ಅಂತರ್ಜಲ ಮಟ್ಟ ಕಡಿಮೆ. ಐವತ್ತು ಕೊಳವೆ ಬಾವಿಗಳನ್ನು ಕೊರೆಸಿದರೂ ಬಾಗೀರಥಿ ನಾಪತ್ತೆ! ಒಂದೇ ಒಂದರಲ್ಲಿ ಮಾತ್ರ ನೀರಿದೆಯಷ್ಟೇ. ಮೈಕ್ರೋಸ್ಪ್ರಿಂಕ್ಲರ್ ಮೂಲಕ ನೀರುಡಿಕೆ. ಮಳೆ ನೀರನ್ನು ಹಿಡಿದು ಇಂಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹದಿನೈದು ಎಕ್ರೆಯಲ್ಲಿ ಅಡಿಕೆ, ತೆಂಗು, ಕೊಕ್ಕೋ, ಕಾಳುಮೆಣಸು, ಜಾಕಾಯಿ, ಬಾಳೆ, ಕಬ್ಬು, ರಾಗಿ, ಶೇಂಗಾ, ಭತ್ತ, ಹೆಸರು.... ಹಿಗೆ ಹತ್ತು ಹಲವು. ಸಮಗ್ರ ಕೃಷಿ ಪದ್ಧತಿಯ ವ್ಯವಸ್ಥಿತ ಅನುಸರಣೆ ರುದ್ರಪ್ಪ-ವೀರಣ್ಣ ಕುಟುಂಬದ ವಿಶೇಷ. 
             ಬೆಳೆ ಸಾವಯವ ಆದರೆ ಸಾಲದು, ಅಡುಗೆ ಮನೆಯೂ ಸಾವಯವ ಆಗಬೇಕು. ತಾನು ಬೆಳೆದ ಉತ್ಪನ್ನಗಳು ಮೊದಲಿಗೆ ತನ್ನ ಅಡುಗೆ ಮನೆ ಸೇರಬೇಕು, ಖಾದ್ಯಗಳಾಗಿ ಉದರ ಸೇರಬೇಕು ಎನ್ನುವ ಬದ್ಧತೆ. ತಮಗೆ ಬೇಕಾದ ಭತ್ತವನ್ನು ತಾವೇ ಬೆಳೆದುಕೊಳ್ಳುತ್ತಾರೆ. ಮನೆಗೆ ಬೇಕಾದಷ್ಟು ಈರುಳ್ಳಿ, ಸೊಪ್ಪು ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ಕಬ್ಬು ಕೃಷಿ ಮಾಡಿ ಬೆಲ್ಲವನ್ನು ಸ್ವತಃ ತಯಾರಿಸುತ್ತಾರೆ.
           ಕೃಷಿ ಪ್ರಯೋಜನವಿಲ್ಲ, ಲಾಭವಿಲ್ಲ ಎನ್ನುತ್ತಾರಲ್ಲಾ, ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ಸಹೋದರರನ್ನು ಮಾತಿಗೆಳೆದೆ. "ಯಾರ್ರೀ ಹೇಳಿದ್ದು? ಕೃಷಿ ಅಂದ್ರೆ ಜೀವನ. ನಾವು ಬೆವರು ಹರ್ಸಿದಷ್ಟೂ ರೊಕ್ಕ ತುಂಬಿ ಕೊಡುತ್ತೆ. ದುಡಿಯದ ಸೋಮಾರಿಗಳಿಗೆ ಕೃಷಿ ನಾಲಾಯಕ್ಕು. ಭವಿಷ್ಯದ ಜೀವನಕ್ಕೆ ಸಾವಯವ ಕೃಷಿ ಒಂದೇ ದಾರಿ. ವಿಷದಿಂದ ದೂರವಿದ್ದಷ್ಟೂ ಆರೋಗ್ಯ ಭಾಗ್ಯ. ನಾವು ಅಂಗಡಿಯಿಂದ ಸಾಮಾನು ತರೋದೇ ಇಲ್ಲ. ಎಲ್ಲಾ ಬೆಳೀತೀವಿ," ಎಂದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಗಳಿಕೆಯ ಭಾಗ.
               ಕುಟುಂಬದ ಶ್ರಮಕ್ಕೆ ಈಗ ಪ್ರಶಸ್ತಿಯ ಬಾಗಿನ. ಪ್ರಶಸ್ತಿ ಪ್ರದಾನ ಸಮಾರಂಭವೂ ಕೂಡಾ ಅಪ್ಪಟ ಸಾವಯವ! "ಈ ಸಮಾರಂಭದ ಉದ್ಘಾಟನೆಯಲ್ಲಿ ಬಳಸಿದ ಹತ್ತಿಯ ಬತ್ತಿ ಮತ್ತು ಅದಕ್ಕೆ ಸುರಿದ ಎಣ್ಣೆಯೂ ಸಾವಯವ ಕೃಷಿಯಿಂದ ಬೆಳೆದದ್ದು," ಎಂದು ಸಂಘಟಕರೋರ್ವರಾದ ಅರುಣ್ ಕುಮಾರ್ ಘೋಷಿಸಿದಾಗ ನಿಜಕ್ಕೂ ಆನಂದದ ಕ್ಷಣ. ಸಾವಯವ ಅನ್ನುವುದು ಕೃಷಿಯಲ್ಲ, ಅದೊಂದು ಬದುಕು ಅನ್ನುವ ಪುರುಷೋತ್ತಮ ರಾಯರ ಕನಸಿನ ಸಾಕಾರ.
                 ಈಚೆಗೆ ಸುಕೋ ಬ್ಯಾಂಕ್ ಪ್ರಾಯೋಜಿತ 'ಸುಕೃತ ಕೃಷಿ ಪ್ರಶಸ್ತಿ' ಪ್ರದಾನದ ಬೆನ್ನಲ್ಲೇ 'ಪುರುಷೋತ್ತಮ ಸಂಮಾನ್' ಜರುಗಿದೆ. ಎರಡೂ ಪ್ರಶಸ್ತಿಗಳ ಸಂಘಟನೆಯ ಹಿಂದೆ ಅಪ್ಪಟ ಕೃಷಿ ಮನಸ್ಸಿದೆ. ಹಾಗಾಗಿಯೇ ನೋಡಿ, ಕೃಷಿ-ಕೃಷಿಕರನ್ನು ಗೌರವದಿಂದ ಹೇಗೆ ಕಾಣಬಹುದು ಎನ್ನುವುದನ್ನು ಮಾಡಿ ತೋರಿಸಿದ್ದಾರೆ. ಇಂತಹ ಪ್ರಶಸ್ತಿಗಳು ರಾಜ್ಯ ಯಾಕೆ, ರಾಷ್ಟ್ರ ಪ್ರಶಸ್ತಿಗೆ ಸರಿ-ಸಮ.


(ಉದಯವಾಣಿ - ನೆಲದನಾಡಿ - 23-4-2015)


1 comments:

Bhoomi Desai said...

Hey that is a really good post about the agri market, Best NCDEX Tips . I would love to share it with friends.

Post a Comment