Wednesday, April 15, 2015

ಆಹಾರ ಸುರಕ್ಷೆಯತ್ತ 'ಎಲೆಯರಿವು' ಸಾಕ್ಷರತೆ


             ನೆರೆಯ ರಾಜ್ಯ ಕೇರಳ. ದೇವರ ನಾಡು. ದೇವರ ಆರಾಧನೆಗೆ ಎಷ್ಟು  ಪ್ರಾಶಸ್ತ್ಯವೋ ಅಷ್ಟೇ ಉದರದ ಆರಾಧನೆಗೂ ಸ್ಥಾನ. ರಾಜ್ಯಾದ್ಯಂತ ಪಾರಂಪರಿಕ ಆಹಾರ ಕ್ರಮಗಳ ಮಾಹಿತಿಯನ್ನು ನೀಡುವ ಚಿಕ್ಕಪುಟ್ಟ ಆಂದೋಳನಗಳು ಸದ್ದಿಲ್ಲದೆ ನಡೆಯುತ್ತಿದೆ. ಮಾಧ್ಯಮಗಳು ಅವುಗಳನ್ನು ಹೆಕ್ಕಿ ಬಿತ್ತರಿಸುತ್ತಿವೆ.
              ತಲಶ್ಶೇರಿ ಸನಿಹದ ಕದಿರೂರು ಹಳ್ಳಿಯಲ್ಲಿ ಮೂಡಿದ 'ಎಲೆಯರಿವು' ಚಳುವಳಿಗೆ ಐದು ವರುಷ. ಸಾವಿರಾರು ಅಡುಗೆ ಮನೆಗಳನ್ನು ನಿರ್ವಿಷಗೊಳಿಸಿದ ಹಿರಿಮೆ. ಪೌಷ್ಠಿಕ ಆಹಾರ ಸೇವನೆಯತ್ತ ಒಲವು ಮೂಡಿಸಿದ ಗರಿಮೆ. ಆರೋಗ್ಯ ಭಾಗ್ಯವಾಗಲು ಇದೊಂದೇ ಹಾದಿ ಎಂಬ ನಿಶ್ಚಲ ಮನಃಸ್ಥಿತಿಯ ನಿರ್ಮಾಣ.  ಪಿ.ಡಬ್ಲ್ಯೂ.ಡಿ. ಇಲಾಖೆಯ ಇಂಜಿನಿಯರ್ ಸಜೀವನ್ ಕಾವುಂಗರ ಬಿತ್ತಿದ ಅರಿವಿನ ಬೀಜವೀಗ ಮರವಾಗಿದೆ.
               ಎಲೆಯರಿವು ಎಂದಾಗ ಎಲೆಯನ್ನು ಮಾತ್ರ ತರಕಾರಿಯಾಗಿ ತಿನ್ನಿ ಎಂದರ್ಥವಲ್ಲ. ಬದುಕಿನಲ್ಲಿ ಮಾತ್ರೆ, ಕಷಾಯಗಳಿಗೆ ವಿದಾಯ ಹೇಳಲು ಹಿಂದಿನ ಆಹಾರ ಕ್ರಮದತ್ತ ಹೊರಳುವುದು ಉದ್ದೇಶ. ಮಾರುಕಟ್ಟೆಯ ಬಹುತೇಕ ತರಕಾರಿಗಳು ವಿಷಯುಕ್ತ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ. ಹಾಗಾಗಿ ತರಕಾರಿಗಾಗಿ ಮಾರುಕಟ್ಟೆಯ ಅವಲಂಬನೆಗೆ ವಿದಾಯ ಹೇಳಿ ಮಾವು, ಹಲಸು, ಪಪ್ಪಾಯ ಮತ್ತು ವಿವಿಧ ಎಲೆಗಳನ್ನು ಬಳಸಬೇಕೆನ್ನುವುದು ಚಳುವಳಿಯ ಉದ್ದೇಶ.  
              ದೇಶದಾದ್ಯಂತ ಪೌಷ್ಠಿಕ ಆಹಾರದ ಕೊರತೆಯತ್ತ ಸರಕಾರವೇ ಬೊಟ್ಟು ಮಾಡಿದೆ. ಅದಕ್ಕಾಗಿ ಸಾವಿರಗಟ್ಟಲೆ ವ್ಯಯಿಸಬೇಕಾದ್ದಿಲ್ಲ. ಮುಖ್ಯವಾಗಿ ವಿಷದ ಸಂಪರ್ಕದಿಂದ ಹೊರಬರಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡುವಂತಾಗಬೇಕು. ಸಜೀವನ್ ಕಾವುಂಗರರ ಆರೋಗ್ಯ, ಪೌಷ್ಠಿಕತೆಯ ದೂರದೃಷ್ಟಿಗೆ ಕೇರಳಾದ್ಯಂತ ಸ್ಪಂದಿಸಿದವರು ನೂರಾರು ಮಂದಿ. ಆಂದೋಳನದಲ್ಲಿ ಹೆಜ್ಜೆಯಿರಿಸಿದವರು ಸಾವಿರಾರು. ಎಲೆಗಳನ್ನು ಸಜೀವನ್ ಗುರುತಿಸಿ, ಸಸ್ಯಶಾಸ್ತ್ರೀಯ ಹೆಸರುಗಳೊಂದಿಗೆ ಮುದ್ರಿಸಿ ಪ್ರದರ್ಶನ ಏರ್ಪಡಿಸುತ್ತಾರೆ.
                ಈಗಾಗಲೇ ಮೂನ್ನೂರೈವತ್ತಕ್ಕೂ ಮಿಕ್ಕಿ ತರಬೇತಿ ಶಿಬಿರಗಳಾಗಿವೆ. ಕಣ್ಣೂರು ಜಿಲ್ಲೆಯಲ್ಲೆ ಆಧಿಕ ಎನ್ನಬಹುದೇನೋ. ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸೆಮಿನಾರ್ಗಳನ್ನು ಏರ್ಪಡಿಸಿದ್ದಾರೆ. ಮಾಹಿತಿಯ ಕರಪತ್ರಗಳನ್ನು ಅಚ್ಚು ಹಾಕಿಸಿದ್ದಾರೆ. ಸಸ್ಯಗಳ ಡೆಮೋ ಏರ್ಪಡಿಸಿದ್ದಾರೆ. ಬೆಳೆಸುವ ರೀತಿಯನ್ನು ತಿಳಿ ಹೇಳುತ್ತಾರೆ. ಆಹಾರದ ಜತೆಗೆ ಔಷಧೀಯ ಗುಣವನ್ನು ಪ್ರಸ್ತುತಿ ಮಾಡುವುದರಿಂದ ಅಮ್ಮಂದಿನ ಒಲವು ಗಟ್ಟಿಯಾಗುತ್ತಿದೆ. ವಿಷಮುಕ್ತ ಆಹಾರದ ಸಾಕ್ಷರತೆ ಜೀವಂತವಾಗಿರುವ ಕೇರಳದಲ್ಲಿ ಸಾವಯವ ಚಳುವಳಿಯ ಬೀಸುಹೆಜ್ಜೆಯಿದೆ. ಸಜೀವನ್ ಯೋಚನೆಗಳಿಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ.
               'ಭಕ್ಷ್ಯ ಸ್ವರಾಜ್' ಆಹಾರ ಸ್ವಾವಲಂಬನೆಗೆ ಒತ್ತು ನೀಡುವ ಸರಕಾರೇತರ ಸಂಸ್ಥೆ. ಕಾಸರಗೋಡು ಮೂಲದ ಸನ್ನಿ ಪೈಕಡ ಇದರ ಸಮನ್ವಯಕಾರರು. ಕೇರಳ ರಾಜ್ಯವು ತರಕಾರಿಯಲ್ಲಿ ಪರಾವಲಂಬಿ. ಇತ್ತ ಕರ್ನಾಾಟಕ, ಅತ್ತ ತಮಿಳುನಾಡಿನತ್ತ ಕೈಚಾಚಬೇಕಾದ ಸ್ಥಿತಿ. ಒಂದು ದಿವಸ ತರಕಾರಿ ತುಂಬಿದ ಲಾರಿ ಬಾರದಿದ್ದರೆ ಅಡುಗೆ ಮನೆಗಳಿಗೆ ಬೀಗ! ಗ್ರಹಿಸದೆ ಬರುವ ಮುಷ್ಕರ, ಹರತಾಳಗಳಿದ್ದರೆ ತರಕಾರಿಯ ಲಭ್ಯತೆ ಅಷ್ಟಕ್ಕಷ್ಟೆ. ಸಿಕ್ಕರೂ ದುಬಾರಿ. ಒತ್ತಡದ ಬದುಕು. ತರಕಾರಿ ಬಾರದಿದ್ದರೂ ಹಿತ್ತಿಲಿನ ಸಂಪನ್ಮೂಲಗಳಿಂದ ಅಡುಗೆ ಮಾಡಬಲ್ಲೆ ಎನ್ನುವ ವಿಶ್ವಾಸ ಅಮ್ಮಂದಿರಲ್ಲಿ ಬರಬೇಕು. ತರಕಾರಿಯಲ್ಲಿ ಸ್ವಾವಲಂಬನೆ ಸಾಧಿಸಬೇಕಾದರೆ ಎಲೆಯರಿವಿನಂತಹ ಚಳುವಳಿ ಅನಿವಾರ್ಯ, ಎನ್ನುತ್ತಾರೆ.
               ಆಹಾರಗಳ ಅಸಮರ್ಪಕ ಸೇವನೆಯಿಂದಾಗಿ ಹೆಣ್ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲೆ ತರಕಾರಿಗಳ ಸೇವನೆಯಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವೆಂದು ಕಂಡುಕೊಂಡ 'ಆಯುಷ್ಮತಿ ಮಿಶನ್', ಸಜೀವನ್ ಕೆಲಸಗಳಿಗೆ ಪ್ರೇರಣೆ ನೀಡುತ್ತಿದೆ. ಕೇರಳ ವಿಶ್ವವಿದ್ಯಾನಿಲಯದ ಸಾರಥ್ಯದ ಮಿಶನ್ನಿನ ಕಾರ್ಯಕ್ರಮದ ಮುಖ್ಯಸ್ಥೆ ಡಾ.ಗೀತಾ ಕುಟ್ಟಿ. ಸಜೀವನ್ ತೋಟದಲ್ಲೇ ವಿವಿಧ ಎಲೆಗಳ ಪ್ರಾತ್ಯಕ್ಷಿಕೆಗಳಿಗೆ ಮಿಶನ್ ನೆರವು ನೀಡಿದೆ. ಬಳಸುವ, ನೋಡುವ ಮತ್ತು ಆಸಕ್ತರಿಗೆ ಗಿಡ, ಬೀಜಗಳನ್ನು ಒದಗಿಸುವ ವ್ಯವಸ್ಥೆ.
              ಆರೋಗ್ಯ ಕಾಳಜಿಯ ಹತ್ತಾರು ಚಳುವಳಿಗಳು ವಿವಿಧ ಸ್ವರೂಪದಲ್ಲಿ ಕೇರಳದಲ್ಲಿ ಜೀವಂತವಾಗಿದೆ. ಸಜೀವನ್ ಯೋಚನೆಗಳಿಗೆ ಇಂತಹ ಚಳುವಳಿಗಳು ಪೂರಕವಾಗಿವೆ. ಸಜೀವನ್ ಹೇಳುತ್ತಾರೆ, ಹೊರ ರಾಜ್ಯಗಳಿಂದ ಬರುವ ತರಕಾರಿಗಳು ವಿಷದಲ್ಲಿ ಮಿಂದು ಬರುವುದೇ ಅಧಿಕ. ವಿಷದ ಗಾಢತೆಯ ಬೊಬ್ಬೆಯಿಂದ ತರಕಾರಿಗಳು ನಿರ್ವಿಷವಾದಾವೇ? ಇದರಿಂದ ಹೊರ ಬರಲು ಗೊಣಗಾಟ ಪರಿಹಾರವಲ್ಲ. ಮನೆಮಟ್ಟದಲ್ಲಿ ನಾವೇನು ಮಾಡಬಹುದು ಎಂಬ ಚಿಂತನೆಗಳು ಎಲೆಯರಿವು ಚಳುವಳಿಯಿಂದ ಮೂಡಿದೆ. ನಮ್ಮೂರಿಗೆ ಬರುವ ಬೇವಿನ ಸೊಪ್ಪು ಹೆಚ್ಚು ಕೀಟನಾಶಕದಲ್ಲಿ ಮಿಂದಿರುತ್ತವೆ. ಬೇವಿನಸೊಪ್ಪನ್ನು ನೇರವಾಗಿ ಅಡುಗೆಗೆ ಬಳಸುವ ಮೊದಲು ಅದನ್ನು ಬದಿಗಿಟ್ಟು ಯೋಚಿಸುವ ಮನಃಸ್ಥಿತಿ ಅಮ್ಮಂದಿರಲ್ಲಿ ನಿರ್ಮಾಣವಾದುದು ಎಲೆಯರಿವು ಚಳುವಳಿಯಿಂದ.
               ಆಯಷ್ಮತಿ ಮಿಶನ್ನಿನ ಡಾ.ಗೀತಾ ಕುಟ್ಟಿಯವರು ಕೇರಳಾದ್ಯಂತ ಓಡಾಡಿದವರು. ಕೇರಳದಲ್ಲಿ ಏನಿಲ್ಲವೆಂದರೂ ಕನಿಷ್ಠ ಹತ್ತರಿಂದ ಇಪ್ಪತ್ತು ಸೆಂಟ್ಸ್ ಜಾಗ ಹೊಂದಿರುವವರು ಅಧಿಕ. ಮನೆಗಳ ಸುತ್ತಮುತ್ತಲಿನ ಜಾಗದಲ್ಲಿ ಮಾವು, ಹಲಸು, ಹಣ್ಣುಗಳ ಒಂದೊಂದು ಗಿಡ, ಮರವಾದರೂ ಇದ್ದೇ ಇರುತ್ತದೆ. ಅದನ್ನು ಉಳಿಸಿಕೊಳ್ಳುತ್ತಿದ್ದಾರೆ. ಆಹಾರ ಸ್ವಾವಲಂಬನೆಗಾಗಿ ವರ್ಷಪೂರ್ತಿ ಅಲ್ಲದಿದ್ದರೂ ಬಹುತೇಕ ತಿಂಗಳುಗಳು ಲಭ್ಯವಾಗುವಂತೆ ತರಕಾರಿಯನ್ನು ಬೆಳೆಯುವ ಅರಿವನ್ನು ಮೂಡಿಸಬೇಕು.
               ಸಜೀವನ್ ಅವರ ಜತೆಯಲ್ಲಿ ಹೆಜ್ಜೆ ಹಾಕುತ್ತಿರುವ ವಿ.ಒ.ಪ್ರಭಾಕರನ್ ಹೇಳಿದ ಒಂದು ಉದಾಹರಣೆ ನೋಡಿ. ಕಾಡು ಕೆಸು ಸಹಜವಾಗಿ ಬೆಳೆಯುವಂತಾದ್ದು. ಅದರ ಗೆಡ್ಡೆಯನ್ನು ಬಳಸುವುದು ಎಲ್ಲರಿಗೂ ಗೊತ್ತಿದೆ. ಅದರ ದಂಡು, ಎಲೆ ಬಳಸಿ ಗೊತ್ತಿಲ್ಲ. ಎಲೆಯರಿವು ಚಳುವಳಿಯಿಂದಾಗಿ ಎಲೆ, ದಂಡನ್ನು ಬೆಳೆಸುವ ಅಭ್ಯಾಸ ರೂಢಿತವಾಗಿದೆ. ಆಹಾರ ಸುರಕ್ಷೆಯು ಇಂತಹ ಸಣ್ಣ ಸಣ್ಣ ಹೆಜ್ಜೆಗಳಿಂದ ಸಾಧ್ಯವಾಗಿದೆ. ಒಂದೆರಡು ಬುಡ ಹಿತ್ತಿಲಿನಲ್ಲಿ ಇದ್ದು ಬಿಟ್ಟರೆ ಯಾವುದೇ ಆರೈಕೆಯಿಲ್ಲದೆ ಬೆಳೆದುಬಿಡುತ್ತದೆ.
                 ತರಕಾರಿಯನ್ನು ಗೊಬ್ಬರ, ನೀರು ಹಾಕಿ ಆರೈಕೆ ಮಾಡಿ ಬೆಳೆಸುವುದು ಒಂದು ವಿಧ. ಯಾವುದೇ ಆರೈಕೆ ಬೇಡದೆ, ಸ್ವಲ್ಪ ನಿಗಾ ಇದ್ದರೆ ಬೆಳೆಯುವ ಎಲೆ ತರಕಾರಿಗಳನ್ನು ಹೆಚ್ಚು ಬೆಳೆಯಲು ಸಜೀವನ್ ಒತ್ತು ಕೊಡುತ್ತಾರೆ. ಎಳವೆಯಿಂದಲೆ ಮಕ್ಕಳಲ್ಲಿ ಆಹಾರದ ಅರಿವನ್ನು ಬಿತ್ತುವ ಸಜೀವನ್ ಯೋಜನೆಗಳು ಯಶವಾಗುತ್ತಿವೆ. ಜತೆಗೆ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಕೈತೋಟ ಮಾಡುವಂತೆ ಪ್ರೇರೇಪಿಸುತ್ತಿದೆ. ವಿದ್ಯಾಥರ್ಿಗಳಿಗೆ ಪಠ್ಯದ ಜತೆಗೆ ಕೃಷಿ ಪಾಠಕ್ಕೂ ಒತ್ತು ಕೊಡುತ್ತಿದೆ.
               ಈಚೆಗಿನ ಒಂದು ಅಂಕಿ ಅಂಶ ನೋಡಿ. ಕಾಸರಗೋಡು ಜಿಲ್ಲೆಯ ಸುಮಾರು ನೂರು ಶಾಲೆಗಳಲ್ಲಿ 2014-15ರ ಶೈಕ್ಷಣಿಕ ವರ್ಷದಲ್ಲಿ 1,416 ಮೆಟ್ರಿಕ್ ಟನ್ ತರಕಾರಿ ಬೆಳೆದಿದ್ದಾರೆ. ಕೃಷಿ ಇಲಾಖೆಯು ಶಾಲೆ ಮತ್ತು ಮನೆಗಳಲ್ಲಿ ತರಕಾರಿ ಬೆಳೆಸಲೋಸುಗ ಎರಡು ಲಕ್ಷ ತರಕಾರಿ ಬೀಜದ ಪ್ಯಾಕೆಟ್ಗಳನ್ನು ವಿತರಿಸಿತ್ತು. ಎಂಟುನೂರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗಿತ್ತು. ಕೃಷಿ ಭವನಗಳೂ ಸ್ಪಂದನ ನೀಡಿದೆ. .. ಅಂಕಿಅಂಶಗಳ ಸತ್ಯಾಸತ್ಯತೆ, ವಾಸ್ತವಗಳು ಕೆಲವೊಮ್ಮೆ ಓದುವುದಕ್ಕೆ ರೋಚಕ!  ಕೇರಳದ ಶಾಲೆಗಳಲ್ಲಿ ಅನುಷ್ಠಾನಕ್ಕೆ ಬಂದಿದೆ. ಎಲ್ಲವನ್ನೂ ವಿದ್ಯಾರ್ಥಿಗಳೇ ಮಾಡಿದ್ದಾರೆ ಎನ್ನುವುದಕ್ಕಿಂತಲೂ ಅಧ್ಯಾಪಕರ ಪ್ರೇರಣೆ, ಇಲಾಖೆಯ ಒತ್ತಡದಿಂದ ಹಸಿರಿನ ಶಿಕ್ಷಣವು ಶಾಲೆಗಳಲ್ಲಿ ದೊರಕಿರುವುದು ಮಕ್ಕಳ ಭಾಗ್ಯ.
              ಪೆರ್ಲ ಸನಿಹದ ಉಕ್ಕಿನಡ್ಕದ ಡಾ.ಜಯಗೋವಿಂದ ಅವರ ಮಾತಿನೊಂದಿಗೆ ಎಲೆಯರಿವಿನ ಗಾಥೆಯನ್ನು ಮುಗಿಸುತ್ತೇನೆ - ವಿಶ್ವಾದ್ಯಂತ ಆಹಾರದಲ್ಲಿ ಸಾವಿರಕ್ಕೂ ಮಿಕ್ಕಿ ಸೊಪ್ಪುಗಳು ಬಳಕೆಯಾಗುತ್ತಿವೆ. ಹೆಚ್ಚಿನ ಸೊಪ್ಪುಗಳಿಂದ ವಿಟಮಿನ್ 'ಎ', ಕಬ್ಬಿಣದಂಶ, ಪೊಟೇಶಿಯಂಗಳು ದೇಹಕ್ಕೆ ಲಭ್ಯ. ನೂರು ಗ್ರಾಮ್ ಪಾಲಕ್ ಸೊಪ್ಪು ಒಂದು ದಿನಕ್ಕೆ ಬೇಕಾದ ವಿಟಮಿನ್ಗಳನ್ನು ನೀಡಬಲ್ಲುದು. ವಾರದಲ್ಲಿ ಮೂರು ಸಲವಾದರೂ ಒಟ್ಟು ಕನಿಷ್ಠ ಮುನ್ನೂರು ಗ್ರಾಮ್ ಸೊಪ್ಪು ಸೇವಿಸಬೇಕು. ಇದು ಶರೀರ ಶುದ್ಧೀಕರಣದ ಕ್ರಿಯೆಗೆ ಸಹಕಾರಿ, ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿದ ಸೊಪ್ಪು ತರಕಾರಿಗಳ ತರಬೇತಿಯಲ್ಲಿ ನೀಡಿದ ಮಾಹಿತಿಯಿದು.
                ತರಕಾರಿಗಳನ್ನು ಬೆಳೆಸಿ, ಕೊಯ್ಯುವುದು ಮಾತ್ರ ಸ್ವಾವಲಂಬನೆಯಲ್ಲ. ತನ್ನಷ್ಟಕ್ಕೆ ಬೆಳಯುವ ಸಸ್ಯಗಳು ಕೂಡಾ ಸೇವನೆಗೆ ಯೋಗ್ಯ. ಈ ಮಾಹಿತಿಯನ್ನು ಬಿತ್ತರಿಸುವ ಸಜೀವನ್ ಕಾವುಂಗರ್ ಕನಸಿನ ಚಳುವಳಿಯು ಹಲವಾರು ಅಡುಗೆ ಮನೆಗಳನ್ನು ನಿರ್ವಿಷಗೊಳಿಸಿವೆ. ಪೌಷ್ಠಿಕತೆ, ಆರೋಗ್ಯ ಕಾಳಜಿ ಮತ್ತು ಆಹಾರ ಭದ್ರತೆಯು ಜನರಲ್ಲಿ ಮೂಡುತ್ತಿದೆ. ಆರೋಗ್ಯ ಭಾಗ್ಯವಾಗಬೇಕೆನ್ನುವ ಚಳುವಳಿಗೆ ಹತ್ತಾರು ಸಂಸ್ಥೆಗಳು ಸಾಥ್ ನೀಡಿರುವುದು ಉತ್ತಮ ಬೆಳವಣಿಗೆ.
ಕನ್ನಾಡಿನಲ್ಲಿ ಹಲವು ಭಾಗ್ಯಗಳು ಹುಟ್ಟಿವೆ, ಹುಟ್ಟುತ್ತಿವೆ. ಆ ಗೊಂಚಲಿಗೆ 'ನಿರ್ವಿಷ ಆಹಾರ ಭಾಗ್ಯ' ಯಾವಾಗ ಸೇರುವುದೋ?

0 comments:

Post a Comment