Thursday, September 1, 2016

ಗೆಣಸು ಕೃಷಿಯ ಚರಿತ್ರೆ ಬದಲಾಗುತ್ತಿದೆ..!





             ಬೆಳಗಾವಿ ಜಿಲ್ಲೆಯ ಖಾನಾಪುರವು ಸಿಹಿ ಗೆಣಸು ಕೃಷಿಗೆ ಖ್ಯಾತಿ. ನಾಲ್ಕು ದಶಕಗಳಿಂದ ಗೆಣಸು ಬದುಕಿನ ಜೀವನಾಡಿ. ತಾಲೂಕಿನ ಸುಮಾರು ಮೂರುವರೆ ಸಾವಿರದಷ್ಟು ಕೃಷಿಕರ ಜೀವನದ ಬಹುಪಾಲನ್ನು ಸಿಹಿಗೆಣಸು ಸಿಹಿಯಾಗಿಸುತ್ತದೆ. ಗೆಣಸು ಮಾತ್ರ ನೆಚ್ಚಿಕೊಳ್ಳದೆ ಇತರ ಕೃಷಿಯನ್ನು ಜತೆಜತೆಗೆ ಹೊಂದಿದ್ದಾರೆ. ಅರ್ಧ ಎಕರೆಯಿಂದ ಹದಿನೈದು ಎಕ್ರೆ ವರೆಗೆ ಬೆಳೆಯುವ ಸಣ್ಣ, ದೊಡ್ಡ ಕೃಷಿಕರಿದ್ದಾರೆ. ವರುಷಕ್ಕೆ ಒಂದೇ ಬೆಳೆ.
             ಸುಮಾರು ಹದಿನಾಲ್ಕುವರೆ ಸಾವಿರ ಎಕ್ರೆಯಲ್ಲಿ ಗೆಣಸು ಕೃಷಿಯಿದೆ. ಎಕ್ರೆಗೆ ಆಜೂಬಾಜು ಐವತ್ತು ಕ್ವಿಂಟಾಲ್ ಇಳುವರಿ. ಅಂದರೆ ಎಪ್ಪತ್ತೆರಡು ಟನ್! ಕ್ವಿಂಟಾಲಿಗೆ ಐನೂರು ರೂಪಾಯಿ ದರದಂತೆ ಲೆಕ್ಕ ಹಾಕಿದರೂ ಒಟ್ಟು ಮೂವತ್ತಾರು ಕೋಟಿ ರೂಪಾಯಿ ವ್ಯವಹಾರ. ಅರ್ಧಕ್ಕರ್ಧ ಖರ್ಚು ಮನ್ನಾ ಆದರೂ ಉಳಿಕೆ ಹದಿನಾರು ಕೋಟಿ ರೂಪಾಯಿಗೆ ತೊಂದರೆಯಿಲ್ಲ.
               ಅಂಕಿಅಂಶದತ್ತ ಕಣ್ಣಾಡಿಸಿದರೆ ರೋಚಕವಾಗಿ ಕಾಣುತ್ತದೆ. ತಾಲೂಕಿನ ಒಂದು ಕೃಷಿಯು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ಕುದುರಿಸುತ್ತದೆ ಎನ್ನುವುದು ಸ್ಥಳಿಯರಿಗೆ ಆಶ್ಚರ್ಯ. ಯಾಕೆ ಹೇಳಿ, ಯಾರೂ ಲೆಕ್ಕ ಇಟ್ಟು ಕೃಷಿ ಮಾಡುವವರಲ್ಲ. ಎಷ್ಟು ಇಳುವರಿ ಸಿಕ್ಕಿತು, ಮಾರುಕಟ್ಟೆಯಲ್ಲಿ ದರ ಹೇಗೆ, ಎಷ್ಟು ಸಿಗಬಹುದು.. ಎನ್ನುವ ಪಕ್ಕಾ ವ್ಯವಹಾರವಷ್ಟೇ. ಇದು ಸಹಜ ಕೂಡಾ.
              ಮಾರುಕಟ್ಟೆ ದರವು ಕ್ವಿಂಟಾಲಿಗೆ ನಾಲ್ಕುನೂರು ರೂಪಾಯಿಂದ ಒಂದು ಸಾವಿರದ ತನಕವೂ ಇದೆ. ಸರಾಸರಿ ಆರುನೂರು ರೂಪಾಯಿ ಸಿಕ್ಕರೆ ಲಾಭ. ಬೆಳಗಾವಿ ಎ.ಪಿ.ಎಂ.ಸಿ.ಯಲ್ಲಿ ಮಾರುಕಟ್ಟೆ. ದಲ್ಲಾಳಿಗಳಿಂದ ಟೆಂಡರ್ ಮೂಲಕ ಖರೀದಿ. ಖಾನಾಪುರಕ್ಕೆ ಬೆಳಗಾವಿ ಮತ್ತು ಗೋವಾ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವಿದೆ. ಹೆದ್ದಾರಿಯ ಬದಿಯಲ್ಲಿ ಕೃಷಿಕರೇ ನೇರ ಮಾರಾಟ ಮಾಡುವುದಿದೆ.
               ಒಂದು ಕಿಲೋಗೆ ಹತ್ತು ರೂಪಾಯಿಯಂತೆ ಮಾರಾಟ. ಕೆಲವೊಮ್ಮೆ ಮಾರುಕಟ್ಟೆಯ ಹಾವೇಣಿಯಾಟದಿಂದ ಟೊಮೆಟೋ, ನೀರುಳ್ಳಿಯಂತೆ ಮೂರು ರೂಪಾಯಿಗೆ ಇಳಿದುದೂ ಇದೆ. ಏರುದರ ಬರುವಲ್ಲಿಯ ತನಕ ಕಾಪಿಡಲು ಶೀತಲೀಕರಣದ ವ್ಯವಸ್ಥೆಯಿಲ್ಲ. ಹಾಗಾಗಿ ಸಿಕ್ಕ ಕ್ರಯಕ್ಕೆ ಮಾರುವ ಪ್ರಮೇಯ ಬರುವುದುಂಟು.
               ಸಿಹಿ ಗೆಣಸಿನ ಕೃಷಿ ಏರಿಯಾ ವಿಸ್ತರಣೆಯಾಗಿ ದಶಕ ಮೀರಿತು. ಮೊದಲೆಲ್ಲಾ ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿದ ರೈತರಿಗೆ ಒಲವು ಮೂಡಿತು. ಬೆಳೆಯುವ ಜಾಗ ವಿಸ್ತರಣೆಯಾಯಿತು. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲ ಎನ್ನುವ ವಾಸ್ತವ ಕೆಲವೊಮ್ಮೆ ಬೆಳೆದವರ ನಿದ್ದೆಗೆಡಿಸಿದುದೂ ಇದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ಗ್ರಾಹಕವರ್ಗವಿದೆ. ಸ್ಥಳೀಯವಾಗಿಯೂ ಅಲ್ಪಸ್ವಲ್ಪ ಬೇಡಿಕೆಯಿದೆ.
               ಮಳೆ ಕಡಿಮೆಯಾದಾಗ ಗೆಣಸಿಗೆ ಕಾಯಿಕೊರಕ ಹುಳುವಿನ ಕಾಟ. ಇದಕ್ಕೆ ಕೀಟನಾಶಕ ಸಿಂಪಡಣೆ. ಇದು ಕಾಯಿಕೊರಕ ಅಂತ ಗೊತ್ತಿಲ್ಲದೆ ಸಹಜವೆಂದು ನಂಬಿದವರೇ ಅಧಿಕ. ಸಕಾಲಕ್ಕೆ ನಿರ್ವಹಣೆ ಮಾಡಿದರೆ ಬೆಳೆಯನ್ನು ಉಳಿಸಿಕೊಳ್ಳಬಹುದು.  ಹಂದಿ, ಮುಳ್ಳುಹಂದಿ, ಹೆಗ್ಗಣಗಳೂ ಬೋನಸ್ ನೀಡುತ್ತವೆ! ರೈತರೇ ಕಾವಲು ಕಾದು ಕಾಡುಪ್ರಾಣಿಗಳನ್ನು ಓಡಿಸುತ್ತಾರೆ. ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲ.
             ಸಿಹಿ ಗೆಣಸಿನ್ನು ತಂದೂರಿ, ಚಿಪ್ಸ್, ಹೊಳಿಗೆಗೆ ಹೂರಣವಾಗಿ ಬಳಸುತ್ತಾರೆ. ಬೇಯಿಸಿದ ಗೆಣಸಿಗೆ ತುಪ್ಪ, ಹಾಲು, ಬೆಲ್ಲ ಸೇರಿಸಿ ಮಾಡುವ 'ಹುಗ್ಗಿ' ಜನಪ್ರಿಯ. ಎಣ್ಣೆಯಲ್ಲಿ ಕರಿದು, ಮಸಾಲ ಸೇರಿಸಿ ಮಾಡುವ ಚಿಪ್ಸ್ ಕುರುಕುರು ತಿಂಡಿ. ಮನೆಮಟ್ಟದ ಬಳಕೆ ಬಿಟ್ಟರೆ ಗೆಣಸು ಆಧಾರಿತ ಉದ್ದಿಮೆ ಇಲ್ಲದಿರುವುದು ವಿಷಾದನೀಯ. ಗೆಣಸಿನಿಂದ ಹಲವು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಸಾಧ್ಯ.
             ಅಕಾಲದಲ್ಲಿ ಗೆಣಸನ್ನು ಮಾರುಕಟ್ಟೆಗೆ ಕಳುಹಿಸಿದರೆ ಬೆಲೆ ಹೆಚ್ಚು ಸಿಗಬಹುದು ಎನ್ನುವ ದೃಷ್ಟಿಯಿಂದ ಕೃಷಿಕರೊಬ್ಬರು ಸಕಾಲಕ್ಕೆ ಗೆಣಸನ್ನು ಅಗೆಯದೆ ಹಾಗೆ ಬಿಟ್ಟುಬಿಟ್ಟಿದ್ದರು. ಒಂದೆರಡು ತಿಂಗಳ ಬಳಿಕ ಏರುದರವಿದ್ದಾಗ ಗೆಣಸನ್ನು ಅಗೆದು ನೋಡುತ್ತಾರೆ, ಅರ್ಧಕ್ಕರ್ಧ ಗೆದ್ದಲು ಸ್ವಾಹಾ ಮಾಡಿತ್ತು. ಅವರ ನಿರೀಕ್ಷೆ ಹುಸಿಯಾಯಿತು. ಪರಿಹಾರದ ದಾರಿ ಕಾಣದೆ ಕಂಗೆಟ್ಟಿದ್ದರು.
             ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗೆಣಸು ಕೃಷಿಕರ ನೆರವಿಗೆ ಬಂದಿದೆ. ಈಚೆಗೆ ಗೆಣಸು ಕೃಷಿಕರ ಅನೌಪಚಾರಿಕ ಸಭೆಯೊಂದನ್ನು ಹಮ್ಮಿಕೊಂಡಿತ್ತು. ಎಲ್ಲರನ್ನೂ ಒಂದೇ ಸೂರಿನಡಿ ತಂದು ಕೃಷಿಯ ಅಭಿವೃದ್ಧಿಗೆ ಪೂರಕವಾದ ಮಾಹಿತಿಯನ್ನು ನೀಡುವುದು ಕಾರ್ಯಹೂರಣ. ಗೆಣಸು ಕೃಷಿಯ ಚರಿತ್ರೆಯಲ್ಲೇ ಮೊದಲ ಸಭೆ! ಉತ್ತಮ ಪ್ರತಿಕ್ರಿಯೆ. ಕೇವಲ ಮಾರುಕಟ್ಟೆ, ದರ ಇಷ್ಟನ್ನೇ ತಲೆತುಂಬಿಕೊಂಡಿದ್ದ ರೈತರಿಗೆ ಬೀಜೋಪಚಾರದಿಂದ ತೊಡಗಿ ಮೌಲ್ಯವರ್ಧನೆಯ ತನಕ ಮಾಹಿತಿ ನೀಡುವ ನೀಲನಕ್ಷೆ ಸಿದ್ಧಪಡಿಸಿತು.
              ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರೆ ಸುಲಭ ಮಾರುಕಟ್ಟೆ ಸಾಧ್ಯ. ಇದರಿಂದಾಗಿ ಆದಾಯವರ್ಧನೆಯೂ ಆದಂತಾಗುತ್ತದೆ. ಕೃಷಿಕರಲ್ಲಿ ಹುಮ್ಮಸ್ಸು ಮೂಡಿಸುವ ಕಾರ್ಯಯೋಜನೆಯು ಸಿದ್ಧವಾಯಿತು. ಉಪ್ಪಿನಕಾಯಿ, ಹಪ್ಪಳ, ಸೆಂಡಿಗೆ, ಗುಲಾಬ್ಜಾಮ್.. ಮೊದಲಾದ ಪದಾರ್ಥಗಳನ್ನು ತಯಾರಿಸಬಹುದು. ಯೋಜನೆಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅರಿವು ಮೂಡಿಸುವತ್ತ ಶೀಘ್ರವೇ ಯತ್ನಿಸಲಾಗುವುದು, ಎಂದು ಯೋಜನೆಯ ಧಾರವಾಡ ವಿಭಾಗದ ನಿರ್ದೇಶಕ ಜಯಶಂಕರ ಶರ್ಮ ಸಂಕಲ್ಪ.
             ಕುರುವಳ್ಳಿ ಕೃಷಿ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ ಇವರು ಹಿಂದಿನ ತಿಂಗಳು ಗೆಡ್ಡೆಗೆಣಸಿನ ಮೇಳ ಆಯೋಜಿಸಿದ್ದರು.  ಯೋಜನೆಯು ಆಯ್ದ ಗೆಣಸು ಬೆಳೆಗಾರರನ್ನು ಮೇಳಕ್ಕೆ ಕಳುಹಿಸಿತು. ಕಳೆದ ವರುಷವಷ್ಟೇ ಗೆಡ್ಡೆ ಮೇಳವನ್ನು ಮಾಡಿ ಯಶಸ್ಸಾದ ಜೋಯಿಡಾ ತಂಡವೂ ಮೇಳಕ್ಕೆ ಆಗಮಿಸಿತ್ತು. ಎಲ್ಲರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡ ಖಾನಾಪುರ ಕೃಷಿಕರು ಖುಷ್. ಅದೇ ಮೇಳಕ್ಕೆ ಕೇರಳದ ತಿರುವನಂತಪರದ ಕೇಂದ್ರೀಯ ಗೆಡ್ಡೆ ಗೆಣಸು ಬೆಳೆಗಳ ಸಂಶೋಧನಾ ಸಂಸ್ಥೆಯು ಹಿರಿಯ ವಿಜ್ಞಾನಿ ಡಾ.ರಾಮನಾಥನ್ ಕೂಡಾ ಆಗಮಿಸಿದ್ದರು.
            ಗೆಣಸು ಕತೆಗೆ ಕಿವಿಯಾದ ರಾಮನಾಥನ್ ಉತ್ಸುಕರಾಗಿ ತಂಡದೊಂದಿಗೆ ಖಾನಪುರಕ್ಕೆ ಭೇಟಿ ನೀಡಿದರು. ಕೃಷಿಕರೊಂದಿಗೆ ಮಾತುಕತೆ ಮಾಡಿದರು. ದೇಶದ ಕೆಲವೇ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯಬಹುದಾದ ಗೆಣಸು - ವೈದ್ಯಕೀಯ, ಆಹಾರ ಮತ್ತು ಕುರುಕುರು ತಿಂಡಿಗಳ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರು ಈ ಬೆಳೆಯನ್ನು ಕ್ರಮಬದ್ಧವಾಗಿ ಬೆಳೆಯುವ ಮೂಲಕ ಅರ್ಥಿಕ ಸಬಲತೆ ಸಾಧಿಸಬಹುದು, ಎಂದು ಧೈರ್ಯ ತುಂಬಿದರು.
              ಗೆಣಸಿಗೆ ಬಾಧಿಸುವ ವಿವಿಧ ರೋಗಗಳ ನಿಯಂತ್ರಣಕ್ಕೆ  ಕೀಟತಜ್ಞ  ನೆಡುಚೆಝಿಯನ್ ಪರಿಹಾರೋಪಾಯಗಳನ್ನು ಸೂಚಿಸಿದರು. ಖಾನಾಪುರಕ್ಕೆ ಮೊದಲ ಬಾರಿಗೆ ವಿಜ್ಞಾನಿಗಳ ತಂಡ ಬಂದು ರೈತರೊಂದಿಗೆ ಸಮಾಲೋಚಿಸಿರುವುದು ಗಮನೀಯ. ರಾಮನಾಥನ್ ಉಪಸ್ಥಿತರಿದ್ದ ಸಭೆಯಲ್ಲಿ ಸ್ಥಳೀಯರು ಐದು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರು. ಗೆಣಸಿನಲ್ಲಿ ಹಲವಾರು ವೈವಿಧ್ಯಗಳಿದ್ದು ಅದನ್ನು ಕೂಡಾ ಬೆಳೆಯುವಂತೆ ಕಿವಿ ಮಾತು ಹೇಳಿದರು. ಪ್ರಾಯೋಗಿಕವಾಗಿ ಖಾನಾಪುರದಲ್ಲಿ ಸ್ಥಳೀಯ ವೈವಿಧ್ಯಗಳಲ್ಲದೆ, ಇತರ ಹೊಸ ತಳಿಗಳು ಆಗಮಿಸಲು ಕ್ಷಣಗಣನೆ ಆರಂಭವಾಗಿದೆ.
             ವಿಜ್ಞಾನಿಗಳ ಸಲಹೆಯಂತೆ  ಕೃಷಿ ಮಾಡಲು ಕೃಷಿಕರು ಮುಂದಾಗಿದ್ದಾರೆ. ಬೀಜ, ಸಸಿಯ ಹಂತದಿಂದಲೇ ವಿವಿಧ ಉಪಚಾರಗಳ ಅಗತ್ಯವಿದ್ದು, ಅದನ್ನು ರೈತರಿಗೆ ಹಂಚಲು ವಿಜ್ಞಾನಿಗಳೂ ಸಿದ್ಧರಾಗಿದ್ದಾರೆ. ಈ ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ರೋಗ ಜಾಸ್ತಿ. ಹಾಗೆಂದು ಮಳೆ ಬಂದರೂ ನಾಶ ಮಾಡಲಾರದಷ್ಟು ರೋಗ ಹಬ್ಬಿದೆ, ವಿಜ್ಞಾನಿಗಳ ಅಂಬೋಣ.
ಈ ಎಲ್ಲಾ ಪ್ರಕ್ರಿಯೆಗಳಿಂದ ರೈತರಿಗೆ ಉಮೇದು ಹೆಚ್ಚಾಗಿದೆ. ಸಂಘಟನೆಯ ಆವಶ್ಯವನ್ನು ಮನಗಂಡಿದ್ದಾರೆ. ಎಲ್ಲವೂ ಸರಿಹೋದರೆ ನಬಾರ್ಡ್  ನೆರವಿನೊಂದಿಗೆ ಗೆಣಸು ಬೆಳೆಗಾರರ ಸೊಸೈಟಿಯೊಂದು  ರೂಪುಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿದೆ. ರೈತರನ್ನು ಮೇಳಕ್ಕೆ ಒತ್ತಾಯವಾಗಿ ಕಳುಹಿಸಲಾಗಿತ್ತು. ಗೆಡ್ಡೆ ಗೆಣಸುಗಳ ಪ್ರಪಂಚ ವಿಶಾಲವಿದೆ ಎಂಬ ಅರಿವಾಯಿತು. ಉತ್ತಮ ಮಾರುಕಟ್ಟೆಯಿದೆ, ಮೌಲ್ಯವರ್ಧನೆ ಮಾಡಲೂ ಸಾಧ್ಯ ಎಂಬ ಮಾಹಿತಿ ರೈತರಲ್ಲಿ ಉತ್ಸಾಹ ಮೂಡಿಸಿತು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿಜ್ಞಾನಿಗಳು ಸ್ಪಂದಿಸಿರುವುದು ಖಾನಾಪುರದಲ್ಲಿ ಸಂಚಲನ ಮೂಡಿಸಿದೆ, ಎನ್ನುತ್ತಾರೆ ಜಯಶಂಕರ್.
           ಗೆಣಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಉದ್ದಿಮೆ ಮತ್ತು ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವ ತಂಪುಮನೆಗಳ ಆವಶ್ಯಕತೆಗಳು ಮೊದಲಾದ್ಯತೆಯಲ್ಲಿ ಆಗಬೇಕಾಗಿದೆ. ನಬಾರ್ಡ್ ನೆರವಿನ ಸೊಸೈಟಿ, ಗೆಣಸು ಬೆಳೆಗಾರರ ಸಂಘ, ಗ್ರಾಮಾಭಿವೃದ್ಧಿ ಯೋಜನೆಯ ಹೆಗಲೆಣೆಗಳು ಖಾನಾಪುರದ ಗೆಣಸು ಕೃಷಿಗೆ, ಕೃಷಿಕರಿಗೆ ವರವಾಗಿ ಪರಿಣಮಿಸಲಿದೆ.

0 comments:

Post a Comment