Thursday, September 1, 2016

ಹಳ್ಳಿ ಸಂತೆಗೆ ಪಟ್ಟಣದಲ್ಲಿ ಮರುಜೀವ!



              ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿಗೆ ಬಂದು ಬಿಡ್ತೀವಿ, ಎಂದು ಬಿ.ಸಿ.ರೋಡಿನ ನರಸಿಂಹ ಮಯ್ಯರಿಗೆ ಫೋನಿಸಿದರು. ಕೊನೆಗೆ ಅಕ್ಕಿ ಖರೀದಿಸಿ ಒಯ್ದರು. ಆ ದಂಪತಿ ಕೆಂಪಕ್ಕಿಗಾಗಿ ಹುಡುಕಿ ಸುಸ್ತಾಗಿದ್ದರು. ಮಯ್ಯರು ಸಾವಯವ ಅಕ್ಕಿಯನ್ನು ಬೆಳೆಯುತ್ತಾರೆ. ಕನ್ನಾಡಿನಲ್ಲೆಡೆ ಸಾವಯವ ಉತ್ಪನ್ನ ಖರೀದಿ ಜಾಲದ ಸಂಪರ್ಕವಿದ್ದವರು.
              ಮಂಗಳೂರಿನ ದಂಪತಿಯ ಕೆಂಪಕ್ಕಿ ಹುಡುಕಾಟದ ಘಟನೆಯನ್ನು ಮಯ್ಯರು ಹೇಳುತ್ತಿದ್ದಂತೆ ರಾಜಧಾನಿಯ ಆ ದಿನ ನೆನಪಾಯಿತು. ಕೃಷಿ ಮೇಳದ ಸಾವಯವ ಅಕ್ಕಿಯ ಮಾರಾಟ ಮಳಿಗೆಗೆ ಐಟಿ ದಂಪತಿಗಳು ಆಗಮಿಸಿದ್ದರು. ಅವರ ಮಗನಿಗೆ ವರುಷದಿಂದ ಭೇದಿ ಸಮಸ್ಯೆ. ಹಲವು ಸಮಯ ವೈದ್ಯರಿಂದ ಚಿಕಿತ್ಸೆಯಾಗಿತ್ತು. ಮಾತ್ರೆ, ಸಿರಪ್ಗಳ ಸೇವನೆಯಿಂದ ಫಲಿತಾಂಶ ಅಷ್ಟಕ್ಕಷ್ಟೇ. ಆ ವೈದ್ಯರೇ 'ಪಾಲಿಶ್ ಮಾಡದ ಅಕ್ಕಿಯ ಅನ್ನವನ್ನು ಸೇವಿಸುವಂತೆ' ಸಲಹೆ ಮಾಡಿದ್ದರು. ಅದನ್ನು ಹುಡುಕಿ ಬಂದಿದ್ದರು.
               ಇಂತಹ ಹುಡುಕಾಟಗಳು ನಗರದಲ್ಲಿ ನಿರಂತರ. ಹಳ್ಳಿಯಲ್ಲೂ ಇಲ್ಲ ಎನ್ನುವಷ್ಟು ಧೈರ್ಯವಿಲ್ಲ. ವಿವಿಧ ರಾಸಾಯನಿಕಗಳು ಆಹಾರಗಳಲ್ಲಿ ಮಿಳಿತಗೊಂಡ ವರದಿಗಳು ರಾಚುತ್ತಲೇ ಇವೆ. ಇದರಿಂದಾಗಿ 'ನಿರ್ವಿಷ ಆಹಾರ'ದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ವರುಷದ ಹಿಂದೆ ಮ್ಯಾಗಿ ಸುದ್ದಿ ಮಾಡಿತು. ಮೈದಾದ ಒಳಸುರಿಗಳನ್ನು ಮಾಧ್ಯಮವು ಬಿಚ್ಚಿಟ್ಟಿತು. ವಿವಿಧ ರಾಸಾಯನಿಕಗಳಲ್ಲಿ ಬಲವಂತವಾಗಿ ಅದ್ದಿದ ಹಣ್ಣುಗಳ ಅಕರಾಳ ಮುಖಗಳು ಬಿತ್ತರವಾದುವು. ಈಚೆಗಂತೂ ಉಪಾಹಾರದ ಪ್ಲೇಟಿನಲ್ಲಿ ಬ್ರೆಡ್ ಕುಣಿಯುತ್ತಿದೆ! ಇವೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವ ಅರಿವಿನಿಂದ ನಿರ್ವಿಷ ಆಹಾರಗಳ ಹುಡುಕಾಟಕ್ಕೆ ತೊಡಗಿದ್ದಾರೆ, ಎನ್ನುತ್ತಾರೆ ಅಡ್ಡೂರು ಕೃಷ್ಣ ರಾವ್. ಇವರು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ.
               ಎರಡು ವರುಷವಾಯಿತು. ಬಳಗದ ತೆಕ್ಕೆಗೆ ಬಂದ ಸುಮಾರು ಆರುನೂರಕ್ಕೂ ಮಿಕ್ಕಿ ಪಟ್ಟಣಿಗರು ಸಾವಯವ ಉತ್ಪನ್ನಗಳಿಗೆ ಬದುಕನ್ನು ಹೊಂದಿಸಿಕೊಂಡಿದ್ದಾರೆ. ರಾಸಾಯನಿಕ ರಹಿತವಾದ ಕೃಷಿ ಎಂದು ಗುರುತಿಸಲ್ಪಟ್ಟ ಹತ್ತಾರು ಕೃಷಿಕರು ತರಕಾರಿ, ಹಣ್ಣು, ಸೊಪ್ಪುತರಕಾರಿ ಬೆಳೆದು ಪೂರೈಸುತ್ತಿದ್ದಾರೆ. ದೂರದೂರಿನಿಂದ ತರಿಸಿದ ಬೇಳೆ ಕಾಳುಗಳು ಕೂಡಾ ಲಭ್ಯ. ಸಾವಯವ ಕೃಷಿಕ-ಗ್ರಾಹಕ ಸರಪಳಿ ಗಟ್ಟಿಯಾಗುತ್ತಿದೆ. ನಿರ್ವಿಷ ಆಹಾರದ ಹುಡುಕಾಟದ ಟೆನ್ಶನ್ ಕಡಿಮೆಯಾಗಿದೆ. ಮಾರಾಟವಾಗುತ್ತಿಲ್ಲ ಎನ್ನುವ ಹಳ್ಳಿ ಉತ್ಪನ್ನಗಳು ಮಾರಿ ಹೋಗುತ್ತಿವೆ. ಸಣ್ಣ ಹೆಜ್ಜೆಯು ಮೂಡಿಸಿದ ದೊಡ್ಡ ಪರಿಣಾಮವಿದು.
            ಇದರ ಮೂಲ ಎಲ್ಲಿ? ಮಂಗಳೂರಿನ ಪಿ.ಎಮ್.ರಾವ್.ರಸ್ತೆಯಲ್ಲಿರುವ 'ಸಾಹಿತ್ಯ ಕೇಂದ್ರ'ದ ಮುಂಭಾಗ - ರಸ್ತೆ ಪಕ್ಕ - ರವಿವಾರ ಬೆಳ್ಳಂಬೆಳಿಗ್ಗೆ ಬಂದುಬಿಡಿ, ಗೊತ್ತಾಗಿಬಿಡುತ್ತದೆ. ತರಕಾರಿ, ಅಕ್ಕಿ, ಹಣ್ಣುಗಳು, ದವಸಧಾನ್ಯಗಳ 'ಹಳ್ಳಿ ಸಾವಯವ ತರಕಾರಿ ಸಂತೆ' ತೆರೆದಿರುತ್ತದೆ. ಇಲ್ಲಿ ಬೆಳೆದವರೇ ವ್ಯಾಪಾರಿಗಳು. ಮಾರುಕಟ್ಟೆ ದರಕ್ಕಿಂತ ಇಮ್ಮಡಿಯಿಲ್ಲ, ಮುಮ್ಮಡಿಯಂತೂ ಇಲ್ಲವೇ ಇಲ್ಲ. ಬೆಳೆದವರಿಂದಲೇ ದರ ನಿಶ್ಚಯ. ಬೆಳಿಗ್ಗೆ ಏಳಕ್ಕೆ ಜನ ಮುಗಿಬೀಳುತ್ತಾರೆ. ಹನ್ನೊಂದು ಗಂಟೆಗೆ ಬಹುತೇಕ ಉತ್ಪನ್ನಗಳೆಲ್ಲಾ ಖಾಲಿ. ಅವರಿಗಿರಲಿ ಎಂದು ಅಡಗಿಸಿಟ್ಟರೂ ಹುಡುಕಿ ಒಯ್ತಾರಂತೆ!
           ಸೀಮಿತ ಗುಂಪಿನಲ್ಲಿ ಆರಂಭವಾದ 'ಹಳ್ಳಿ ಸಂತೆ'ಯ ಪರಿಕಲ್ಪನೆಯು ನಗರದ ಸಾವಯವ ಮನಸ್ಸುಗಳಿಗೆ ಅರ್ಥವಾಗಿದೆ. ದುಡ್ಡು ಕೊಟ್ಟರೆ ಏನನ್ನೂ ತರಬಹುದು, ಆದರೆ ಆರೋಗ್ಯವನ್ನೋ? ಈ ಯೋಚನೆಯ ಮಂದಿಯನ್ನು ಸಂತೆ ಸೆಳೆದಿದೆ. ಅಕ್ಕಿ ಅಂದರೆ ಬಿಳಿಯಕ್ಕಿ, ಟೊಮೆಟೋ  ನುಣುಪಾಗಿರಬೇಕು, ಬದನೆಯನ್ನು ಹುಳ ಕೊರೆದಿರಬಾರದು-ದೊಡ್ಡ ಗಾತ್ರದ್ದಾಗಿರಬೇಕು.. ಮೊದಲಾದ ಮೈಂಡ್ಸೆಟ್ ಬದಲಾಗಿದೆ. ಬೆಳೆದವರೇ ಮಾರುವುದರಿಂದ ಪೂರ್ತಿ ಪ್ರತಿಫಲ ಬೆಳೆದವರಿಗೆ ಸಿಗುತ್ತದೆ. ಬೇರೆಡೆಯಾದರೆ ತೂಕದಲ್ಲಿ ಮೋಸ, ಶೋಷಣೆ ಎಲ್ಲವನ್ನೂ ಸಹಿಸಿ ಸಿಕ್ಕಿದ ಮೊತ್ತವನ್ನು ಕಿಸೆಗೆ ಸೇರಿಸಬೇಕಾಗುತ್ತದೆ, ಎನ್ನುವ ವಾಸ್ತವ ಹೇಳುತ್ತಾರೆ, ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ್. ಒಟ್ಟೂ ಕಾರ್ಯಕ್ರಮದ ಯೋಜನೆಯನ್ನು ಕ್ರಮಬದ್ಧವಾಗಿ ಇವರು ಯೋಚಿಸುತ್ತಾರೆ.
            ಈ ತರಕಾರಿ ಸಂತೆಯಲ್ಲಿ ಎಲ್ಲರೂ ವ್ಯಾಪಾರಿಗಳಾಗುವಂತಿಲ್ಲ. ಸಾವಯವ ಹೌದೋ ಅಲ್ವೋ ಖಾತ್ರಿಯಾಗಬೇಕು. ಬಳಗದ ನುರಿತ ಕೃಷಿ ಅನುಭವಿಗಳು ಸಂಬಂಧಪಟ್ಟ ಕೃಷಿಕರ ತೋಟಕ್ಕೆ ಭೇಟಿ ನೀಡುತ್ತಾರೆ. ತೋಟ ಸುತ್ತಾಡುತ್ತಾರೆ. ಮುಕ್ತವಾಗಿ ಮಾತನಾಡುತ್ತಾರೆ. ನಿರ್ವಿಷ ಕೃಷಿ ಅಂತ ಗೊತ್ತಾದ ನಂತರವೇ ಸಂತೆಯಲ್ಲಿ ಮಾರಾಟಕ್ಕೆ ಅವಕಾಶ. ಇಲ್ಲಿ ವಿಶ್ವಾಸ, ನಂಬುಗೆಯೇ ಬಂಡವಾಳ. ಸರಕಾರಿ ವ್ಯವಸ್ಥೆಯಲ್ಲಿ ಸಾವಯವ ದೃಢೀಕರಣ ಎನ್ನುವುದಿದೆ. ಸಾವಿರಾರು ರೂಪಾಯಿಗಳ ವ್ಯಯ. ಜತೆಗೆ ಅಧಿಕಾರಿಗಳ ಮರ್ಜಿ. ಸರಕಾರಿ ಕಚೇರಿಗಳ ಅಲೆದಾಟ. ಇವೆಲ್ಲಾ ನಮಗೆ ಬೇಕಾಗಿಲ್ಲ. ನಿರ್ವಿಷ ಯಾ ರಾಸಾಯನಿಕ ರಹಿತ ಆದರೆ ಸಾಕು. ದೃಢೀಕರಣ ಸರ್ಟಿಫಿಕೇಟ್ ಇಟ್ಟುಕೊಂಡು ನಾವೇನೂ ರಫ್ತು ವ್ಯವಹಾರ ಮಾಡುತ್ತಿಲ್ಲವಲ್ಲ.., ಎನ್ನುತ್ತಾರೆ ಅಡ್ಡೂರು.
            ಸಾವಯವ ಕೃಷಿಕ ಗ್ರಾಹಕ ಬಳಗವು ಮನೆಮದ್ದು ಶಿಬಿರ, ನಿರ್ವಿಷ ಆಹಾರದ ಅರಿವು, ಸ್ವಾವಲಂಬಿ ಆಹಾರ ವಸ್ತು ತಯಾರಿಕೆ, ಕೈತೋಟ ನಿರ್ವಹಣೆ, ಕೃಷಿಕರ ತೋಟಗಳಿಗೆ ಪ್ರವಾಸ ಏರ್ಪಡಿಸಿದೆ. ಕೃಷಿಯ ಒಲವಿದ್ದವರಿಗೆ ಈ ಕಾರ್ಯಹೂರಣ ಇಷ್ಟವಾಗಿದೆ. ಸಂತೆಯ ರೂಪೀಕರಣದಲ್ಲಿ ಇಂತಹ ಅಜ್ಞಾತ ಕೆಲಸಗಳು ಗುರುತರ. 'ನಮ್ಮ ಊಟಕ್ಕೆ ನಮ್ಮದೇ ತರಕಾರಿ' ಮನಸ್ಸು ಅರಳುತ್ತಿದೆ. ತಾರಸಿ ಕೃಷಿಯ ಒಲವು ಮೂಡುತ್ತಿದೆ. ಪ್ರದೀಪ್ ಸೂರಿ, ಗಣೇಶ ಮಲ್ಯ, ರಾಜೇಶ್.. ಬಳಗವು ಕೈತೋಟದ ಮಾಹಿತಿ ನೀಡುತ್ತಿದೆ. ಈಗ ತರಕಾರಿ ಬೀಜಗಳು ಕಿಟಕಿಯ ಸಂದಿಯಲ್ಲಿ ಉಳಿಯುವುದಿಲ್ಲ!
           'ಸ್ವಾವಲಂಬಿ ಸಂತೆ' ಬಳಗದ ಇನ್ನೊಂದು ಯಶಸ್ವಿ ಯೋಜನೆ. ಸಣ್ಣ ಬಂಡವಾಳದಿಂದ ಹುಟ್ಟಿದ ಮನೆ ಉದ್ದಿಮೆಯ ಉತ್ಪನ್ನಗಳಾದ ವಿವಿಧ ಪಾನೀಯಗಳು, ತಿಂಡಿತಿನಿಸುಗಳು, ಉಡುಪು, ಬ್ಯಾಗ್, ಕರಕುಶಲ.. ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಪ್ರಾಯೋಜಕರ ನೆರವಿನಿಂದ ತಿಂಗಳಿಗೊಮ್ಮೆ ಸಂತೆ. ಈಗಾಗಲೇ ಇಪ್ಪತ್ತಾರು ಸಂತೆಗಳು ಸಂಪನ್ನವಾಗಿವೆ. ಉತ್ಪಾದಕ ಅಮ್ಮಂದಿರಿಗೆ ಧೈರ್ಯ ಬಂದಿದೆ. ಪಿಲಿಕುಳ ಮತ್ತು ಮಂಗಳೂರು ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಮಳಿಗೆ ತೆರೆಯುವ ಹುಮ್ಮಸ್ಸು ಮೂಡಿದೆ. ಇವರಲ್ಲೂ ಸಾವಯವದ ಅರಿವು ಮೂಡುತ್ತಿದೆ.
          ನಾವೂ ತರಕಾರಿ ಬೆಳೆಯಬೇಕಲ್ಲಾ ಏನು ಮಾಡೋಣ? ಹಲವರ ಬೇಡಿಕೆ. ನಗರದಿಂದ ಇಪ್ಪತ್ತೆರಡು ಕಿಲೋಮೀಟರ್ ದೂರದ ಗಂಜಿಮಠದ ಮೊಗರು ಗ್ರಾಮದ ಪಾಕಟ್ಟುವಿನಲ್ಲಿ ಒಂದೆಕ್ರೆಯಲ್ಲಿ ತರಕಾರಿ ಕೃಷಿ. ಬೀಜ, ಗೊಬ್ಬರ, ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ. ವಿವಿಧ ಹುದ್ದೆಯಲ್ಲಿರುವ ಸುಮಾರು ಇಪ್ಪತ್ತೈದು ಮಂದಿ ಆಗಾಗ್ಗೆ ಭೇಟಿ ನೀಡಿ ಆರೈಕೆ. ಬೆಳೆದ ತರಕಾರಿಗಳನ್ನು ಸಮಾನವಾಗಿ ಹಂಚಿಕೊಂಡರು. ತಾವೇ ಬೆಳೆದ ತರಕಾರಿಯನ್ನು ತಿನ್ನಲು ಹೆಮ್ಮೆಪಟ್ಟುಕೊಂಡರು. ಹಳ್ಳಿಯನ್ನು, ಕೃಷಿಯನ್ನು, ಕೃಷಿಕರನ್ನು ಹೀನಾಯವಾಗಿ ಕಾಣುವ ಪ್ರಸ್ತುತ ಕಾಲಘಟ್ಟದಲ್ಲಿ; ಕೃಷಿಯನ್ನು ಪ್ರೀತಿಸಲು ಪ್ರೇರೇಪಿಸುವ ಇಂತಹ ಕಾರ್ಯಹೂರಣಗಳು ಗಮನೀಯ. ಮಂಗಳೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕರಂಬಾರ್, ಕೆಂಜಾರಿನಲ್ಲಿ ಒಂದಷ್ಟು ಮಂದಿ ಸೇರಿಕೊಂಡು ಭತ್ತದ ಬೇಸಾಯ ಮಾಡುವ ಯೋಜನೆಗೆ ಶ್ರೀಕಾರವಾಗಿದೆ.
               ಬಳಗದ ಎಲ್ಲಾ ಕ್ರಿಯಾ ಯೋಜನೆಯ ಹಿಂದೆ ನಿರ್ವಿಷ ಆಹಾರ ಸೇವನೆಯ ದೊಡ್ಡ ಗುರಿಯಿದೆ. ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಸಿದವರೇ ಸಂತೆಯಲ್ಲಿ ಮಾರುವುದು ವಿಶೇಷ. ಬಳಕೆದಾರರು ಇವರೊಂದಿಗೆ ಮುಖಾಮುಖಿ ಮಾತನಾಡಿ ಎಲ್ಲಾ ಮಾಹಿತಿ ಪಡೆಯುತ್ತಿದ್ದಾರೆ. ವಿಷಮುಕ್ತ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಸಂಶಯ ಬಂದರೆ ಕೃಷಿಕರ ತೋಟಕ್ಕೆ ಹೋಗಿ ನೋಡುವ ಮನಃಸ್ಥಿತಿ ಹೊಂದಿದ್ದಾರೆ. ಕೃಷಿಕರೂ ಸ್ಪಂದಿಸುತ್ತಿದ್ದಾರೆ. ಎನ್ನುವ ಹಿಮ್ಮಾಹಿತಿ ನೀಡಿದರು, ಗೃಹಿಣಿ ರಾಜಲಕ್ಷ್ಮೀ.
               ತರಕಾರಿ ಸಂತೆಯನ್ನು ನೋಡುವಾಗ, 'ಕೃಷಿಕರು ತರುತ್ತಾರೆ, ಮಾರಾಟವಾಗುತ್ತದೆ' ಎಂದು ಹಗುರವಾಗಿ ಮಾತನಾಡಿದರೆ ತಪ್ಪಾದೀತು. ಕಾಂಚಾಣವೇ ಸರ್ವಸ್ವ ಎಂದು ತಿಳಿದ ಕಾಲಸ್ಥಿತಿಯಲ್ಲಿ ಆರೋಗ್ಯದತ್ತ ಮನಃಸ್ಥಿತಿಯನ್ನು ಬದಲಾಯಿಸುವುದು ಸಣ್ಣ ಕೆಲಸವಲ್ಲ. ನಗರದ ಮಾಲ್ ಸಂಸ್ಕೃತಿಯಿಂದ ಹೊರಬಂದು ನಿರ್ವಿಷ ಆಹರದ ಮನಸ್ಸನ್ನು ಹೊಂದುವುದು ಕಾಲದ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಸಾವಯವ ಹಳ್ಳಿಸಂತೆ ಪಟ್ಟಣದಲ್ಲಿ ಮರುಜೀವಗೊಂಡಿದೆ.
          'ಸಂತೆಯು ಇಂದು ಪಟ್ಟಣದಲ್ಲಿ, ನಾಳೆ ಹಳ್ಳಿಯಲ್ಲೂ ಆಗಬೇಕಾಗಬಹುದು. ಆದರೆ ಸಾವಯವ ಆಗಬೇಕಾದುದು ಆಹಾರವಲ್ಲ, ಮನಸ್ಸು' ಎಂದು ಅಡ್ಡೂರು ಕಣ್ಣು ಮಿಟುಕಿಸಿದರು.

(Udayavani/Nelada_nadi_coloum)



0 comments:

Post a Comment