Thursday, September 1, 2016

ಊಟದ ಮೇಜಿಗೆ ಜಿಗಿದ ರಂಬುಟಾನ್


              ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ 'ಅಮುಲ್' ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್ನಿಂದ ನೂರು ಲೀಟರ್ವರೆಗೂ ಹಾಲು ಉತ್ಪಾದಿಸುವ ಹೈನುಗಾರರು ಒಂದೇ ಸೂರಿನಡಿ ಬರುವಂತಾಯಿತು. ಈ ವ್ಯವಸ್ಥೆಯು ನಗರ, ಹಳ್ಳಿಗಳಲ್ಲಿ ಜನಸ್ವೀಕೃತಿ ಪಡೆಯಿತು. ಇಂದು ಹಾಲು ಉತ್ಪಾದಕರ ಸಹಕಾರಿ ಸೊಸೈಟಿಗಳು ಬದುಕಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿಯ ವ್ಯವಸ್ಥೆಗಳು ಹಣ್ಣು, ತರಕಾರಿ ಮಾರಾಟಕ್ಕೂ ರೂಪುಗೊಳ್ಳಬೇಕು - ಕಾಸರಗೋಡು ಜಿಲ್ಲೆಯ ಕೃಷಿಕ ಡಾ.ಚಂದ್ರಶೇಖರ ಚೌಟರ ಮನದಿಂಗಿತ.
               ಚೌಟರು ರಂಬುಟಾನ್ ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಮಲೇಶ್ಯಾ ಮೂಲದ 'ರಂಬುಟಾನ್' ಬಹುತೇಕರಿಗೆ ಗೊತ್ತು. ಕನ್ನಾಡಿಗೆ ಮೂರುವರೆ ದಶಕದ ಹಿಂದೆಯೇ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸರು ಪರಿಚಯಿಸಿದ್ದರು. ತಾನು ಬೆಳೆದು, ಅಭಿವೃದ್ಧಿಪಡಿಸಿದ ಬಳಿಕವೇ ಕೃಷಿಕರಿಗೆ ಹಂಚಿದರು.  ಮಾರುಕಟ್ಟೆಯಲ್ಲಿ ಕಿಲೋಗೆ ಇನ್ನೂರು ರೂಪಾಯಿ ಏರುದರವಿದ್ದರೂ ಕೊಳ್ಳುಗರಿದ್ದಾರೆ. ಮ್ಹಾಲ್ಗಳಲ್ಲಿ ಮುನ್ನೂರು ರೂಪಾಯಿ ಮೀರುವುದಿದೆ. ಹಣ್ಣು ತಿನ್ನುವ ಅಭ್ಯಾಸವಿದ್ದವರು ರಂಬುಟಾನ್ ಹಣ್ಣನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
                ಮೂರು ವರುಷದ ಹಿಂದೆ ಚೌಟರು ಕರಾವಳಿಯ ಜಾಕೋಬ್ ಅವರ ರಂಬುಟಾನ್ ತೋಟಕ್ಕೆ ಭೇಟಿ ನೀಡಿದ್ದರು. ಆಗ ಗಿಡದಲ್ಲಿ ಹಣ್ಣುಗಳು ತೊನೆಯುವ ಋತು. ತೋಟದ ಸೌಂದರ್ಯ, ಹಣ್ಣಿನ ರುಚಿ, ನೋಟ ಮತ್ತು ಸ್ವಲ್ಪ ವಿಶೇಷವೇ ಅನ್ನಬಹುದಾದ ಹೊಸ ತಳಿಯು ಚೌಟರನ್ನು ಮೋಡಿ ಮಾಡಿತು. ರಂಬುಟಾನಿನ ತೋಟವೆಬ್ಬಿಸುವ ಕನಸಿಗೆ ಬೀಜಾಂಕುರ. ರಂಬುಟಾನ್ ಕೃಷಿಯ ಪ್ರಾಕ್ಟೀಸಸನ್ನು ಜಾಕೋಬ್ ಕಾಲಕಾಲಕ್ಕೆ ಸೂಚಿಸಿದರು. ಕೃಷಿಯ ಸೂಕ್ಷ್ಮಗಳನ್ನು ತಿಳಿಸಿದರು. ಪ್ರೋತ್ಸಾಹ ನೀಡಿದರು. ಹೀಗಾಗಿ ನನಗೆ ಸಣ್ಣ ಮಟ್ಟಿಗೆ ಹಣ್ಣಿನ ತೋಟವನ್ನು ರೂಪಿಸಲು ಸಾಧ್ಯವಾಯಿತು - ತನ್ನ ಹಣ್ಣಿನ ತೋಟದ ಕಳೆದ ದಿನಗಳನ್ನು ನೆನೆಯುತ್ತಾರೆ ಡಾ.ಚೌಟರು.
              ಕೇರಳದ ಪ್ರಸಿದ್ಧ ನರ್ಸರಿಯೊಂದರಿಂದ ಗಿಡಗಳ ಖರೀದಿ. ಕಣ್ಣು ಕಸಿಯಿಂದ ಅಭಿವೃದ್ಧಿ ಪಡಿಸಿದ ತಳಿ.   ಇದರ ಹಣ್ಣುಗಳು ಉರುಟು. ಉತ್ತಮ ಗಾತ್ರ. ಬೀಜದಿಂದ ಸುಲಭವಾಗಿ ಪಲ್ಪ್ ಬಿಟ್ಟುಕೊಡುವ ಗುಣ. ಕಳೆದ ವರುಷ ಸಣ್ಣ ಪ್ರಮಾಣದಲ್ಲಿ ರಂಬುಟಾನ್ ಮಾರುಕಟ್ಟೆ ಮಾಡಿದ್ದರು. ಈ ಬಾರಿ ಬೆಳೆಯೂ, ಬೆಲೆಯೂ ಉತ್ತಮವಾಗಿದೆ. ಕಿಲೋಗೆ 220-250 ರೂಪಾಯಿ ತನಕ ಮಾರಿಹೋಗುತ್ತಿದೆ.  ನೇರ ಮಾರಾಟದಿಂದ ಇಷ್ಟು ಮೊತ್ತವೂ ಕೃಷಿಕನಿಗೆ ದೊರಕುತ್ತಿರುವುದು ಗಮನಾರ್ಹ. ಚೌಟರೊಂದಿಗೆ ಸಹೋದರರಾದ ಮನೋಹರ ಚೌಟ, ಪ್ರಭಾಕರ ಚೌಟರು ಕೈಜೋಡಿಸುತ್ತಿದ್ದಾರೆ.
              ಹಿರಿಯಡ್ಕದ ನಟರಾಜ್ ಹೆಗ್ಡೆ, ಉಪ್ಪಿನಂಗಡಿಯ ಜಾಕೋಬ್, ಕೇರಳ ಕಲ್ಪೆಟ್ಟಾದ ಅಹಮದ್ - ಇವರೆಲ್ಲಾ ರಂಬುಟಾನ್ ಬೆಳೆದು, ಮಾರುಕಟ್ಟೆಯ ಜಾಲವನ್ನು ಹೊಂದಿದವರು. ಚೌಟರು ಸ್ವತಃ ಅಡಿಕೆ, ತೆಂಗು ಬೆಳೆಗಾರರು. ಇವರೆಲ್ಲರ ಸ್ಫೂರ್ತಿಯಿಂದಾಗಿ ಸ್ವತಃ ಬೆಳೆಯುವ ರಿಸ್ಕ್ ತೆಕ್ಕೊಂಡರು. ಮಾರುಕಟ್ಟೆಯ ಸಮಸ್ಯೆಯಿಲ್ಲ. ದರದಲ್ಲಿ ಏರುಪೇರಾಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲರದು ಒಂದೇ ಬ್ರಾಂಡಿನಡಿಯಲ್ಲಿ ಮಾರುಕಟ್ಟೆ ಮಾಡುವ ಮಾತುಕತೆ ನಡೆಯುತ್ತಿವೆ. ಈಗ ಚೌಟರ ತೋಟದ ರಂಬುಟಾನ್ ಕಲ್ಲಿಕೋಟೆ, ಪಯ್ಯನ್ನೂರು, ಮಂಗಳೂರು, ಮೈಸೂರು, ಬೆಂಗಳೂರು, ಮುಂಬಯಿ, ಪೂನಾ ವರೆಗೂ ಸಂಚಾರ ಮಾಡಿದೆ! ಎನ್ನಲು ಖುಷಿ.
               ರಂಬುಟಾನ್ ಕೃಷಿಯಲ್ಲಿ ಹತ್ತಾರು ತೊಡಕುಗಳು. ಚೌಟರು ಸ್ವಾನುಭವ ಹೇಳುತ್ತಾರೆ, ಗಿಡ ಬೆಳೆದು ಹೂ ಬಿಟ್ಟಾಗ ಗಂಡು ಹೂವಿನ ಕೊರತೆ. ಪರಾಗಸ್ಪರ್ಶ ಚೆನ್ನಾಗಿ ಆಗದಿರುವುದು. ಮಾರುಕಟ್ಟೆಯಲ್ಲಿ ಸಿಗುವ ಪೊಟೇಶನ್ನು ಬಳಸಿದರೆ ಗಿಡ ತಾಳಿಕೊಳ್ಳುವುದಿಲ್ಲ. ಸಾವಯವ ಗೊಬ್ಬರ ಅಗತ್ಯ. ಕಾಲಕಾಲಕ್ಕೆ ಪ್ರೂನಿಂಗ್ ಅತ್ಯಗತ್ಯ. ಅಲ್ಲದೆ ಕೆಲವೊಂದು ಟ್ರೀಟ್ಮೆಂಟ್ಗಳಿಗೆ ಗಿಡಗಳನ್ನು ಒಳಪಡಿಸಬೇಕಾಗುತ್ತದೆ. ಇದೇನೂ ದೊಡ್ಡ ಬ್ರಹ್ಮವಿದ್ಯೆಯಲ್ಲ. ಎಲ್ಲರೂ ಕಲಿತುಕೊಳ್ಳಬಹುದು. ಆಸಕ್ತಿ ಬೇಕಷ್ಟೇ.
              ಚೌಟರ ತೋಟದಲ್ಲಿ ಮೊದಲೇ ರಂಬುಟಾನ್ ಮರಗಳಿದ್ದುವು. ಆಪ್ತರಿಗೆ, ಸ್ನೇಹಿತರಿಗೆ ಹಂಚಿ ಖುಷಿ ಪಟ್ಟದ್ದರು. ಸ್ಥಳೀಯವಾಗಿ ಮಾರುಕಟ್ಟೆ ಯತ್ನ ಮಾಡಿದ್ದರು. ಸಾಕಷ್ಟು ಮಂದಿಗೆ ಹಣ್ಣಿನಿಂದ ಗುಳ ಬೇರ್ಪಡಿಸುವ ವಿಧಾನವನ್ನೂ ಹೇಳಿಕೊಟ್ಟಿದ್ದರು. ಯಾವಾಗ ಉತ್ತಮ ಗುಳ ಹೊಂದಿರುವ, ಬೇಗ ಬೆಳೆಯುವ ಹೊಸ ತಳಿ ಪರಿಚಯವಾಯಿತೋ ಅದಕ್ಕೆ ಹೊಂದಿಕೊಂಡರು. ಚೌಟರು ತೆಂಗಿನ ಮಧ್ಯೆ ರಂಬುಟಾನ್ ಬೆಳೆದಿದ್ದಾರೆ. ಎರಡು ತೆಂಗಿನ ಗಿಡಗಳ ಮಧ್ಯೆ ಒಂದು ರಂಬುಟಾನ್ ಗಿಡದಂತೆ ಹಬ್ಬಿಸಿದ್ದಾರೆ. ಅಡಿಕೆ ಗಿಡಗಳ ಅಂತರವನ್ನು ಬದಲಿಸಿದರೆ ಅಡಿಕೆ ಮಧ್ಯೆಯೂ ರಂಬುಟಾನ್ ಬೆಳೆಯಬಹುದೆನ್ನುವ ವಿಶ್ವಾಸ ಅವರದು.
              ಈ ತಳಿಯದ್ದು ನನ್ನ ತೋಟದಲ್ಲಿ ಮೇ ತಿಂಗಳಲ್ಲಿ ಹಣ್ಣು ಬಿಡಲು ಶುರುವಾಗಿದೆ. ಜುಲೈಯೊಳಗೆ ಮುಗಿದುಹೋಗುತ್ತದೆ. ಬೇರೆಡೆ ಇನ್ನೂ ಹಣ್ಣು ಶುರುವಾಗಿಲ್ಲ. ನಮ್ಮಲ್ಲಿ ಮೇ ತಿಂಗಳಿನಲ್ಲಿ ಹಣ್ಣು ಸಿಕ್ಕಿದೆ. ಆಗ ಹಣ್ಣಿನ ಋತು ಅಲ್ಲ. ಹಾಗಾಗಿ ದರವೂ ಹೆಚ್ಚು ಸಿಕ್ತು. ಆದರೆ ಬೇಗ ಯಾಕಾಯಿತು ಎನ್ನುವುದು ಕುತೂಹಲ. ಕಳೆದ ವರುಷ ಹಣ್ಣು ಕಿತ್ತ ಬಳಿಕ ಪ್ರೂನಿಂಗ್ ಮಾಡಿದ್ದೆ. ಬಹುಶಃ ಅದೇ ಕಾರಣವೋ ಏನೋ. ಸರಿಯಾಗಿ ಹೇಳಲು ಮುಂದಿನ ವರುಷದ ತನಕ ಕಾಯಬೇಕು, ಎನ್ನುತ್ತಾರೆ.
              ಇತರ ದೇಶಗಳಲ್ಲಿ ಹಣ್ಣು ತಿನ್ನವುದು ಆಹಾರದ ಭಾಗ. ಕನ್ನಾಡಿನಲ್ಲೂ ಹಣ್ಣಿಗೆ ಬೇಡಿಕೆಯಿದೆ. ಎಲ್ಲಾ ಋತುಗಳಲ್ಲೂ ಎಲ್ಲಾ ಹಣ್ಣುಗಳು ಲಭ್ಯ. 'ಟೇಬಲ್ ಫ್ರುಟ್' ಆಗಿ ಬಳಸುವುದು ಆಧುನಿಕ ಜೀವನ ಶೈಲಿಯ ಒಂದು ಭಾಗವಾಗಿದೆ. ನಗರ ಯಾಕೆ, ಹಳ್ಳಿಗಳಲ್ಲೂ ಹಣ್ಣುಗಳನ್ನು ತಿನ್ನುವ ಅಭ್ಯಾಸವಿದೆ. ಯಾವುದೇ ನರ್ಸರಿಗೆ ಹೋದರೂ ಹಣ್ಣಿನ ಗಿಡಗಳಿಗೆ ಬೇಡಿಕೆ. ಅದರಲ್ಲೂ ಹೊಸ ತಳಿಯದ್ದಕ್ಕೆ ಹೆಚ್ಚು ಒತ್ತು. ಈಗ ರಂಬುಟಾನಿಗೂ ಟೇಬಲ್ಲಿನಲ್ಲಿ ಜಾಗ!
              ಕೇರಳದ ತಳಿಪರಂಬದ ನರ್ಸರಿಗೆ ಚೌಟರು ಹೋಗಿದ್ದರು. ಒಂದು ರಂಬುಟಾನ್ ಗಿಡಕ್ಕೆ ಐದುಸಾವಿರ ರೂಪಾಯಿ! ಎರಡು ಸಾವಿರ ರೂಪಾಯಿಗೆ ಒಂದು ಮಾವಿನ ಗಿಡ! ಚೆಂಪೆಡಕ್ ಗಿಡಕ್ಕೆ ಆರುನೂರು ರೂಪಾಯಿ. ಡ್ಯೂರಿಯನ್ನಿಗೆ ಒಂದೂವರೆ ಸಾವಿರ. ಪೇರಳೆಗೆ ಇನ್ನೂರೈವತ್ತು ರೂಪಾಯಿ. ಇಷ್ಟು ಬೆಲೆಯಿದ್ದರೂ 'ರೇಟ್ ಹೆಚ್ಚಾಯಿತು' ಎಂದು ತಗಾದೆ ಮಾಡದೆ ತರುವವರ ಸಂಖ್ಯೆ ದೊಡ್ಡದಿದೆ! ತಂದ ಮೇಲೆ ಏನಾಗಿದೆ ಎನ್ನುವುದು ಬೇರೆ ಮಾತು!
               ಸಣ್ಣ ಪ್ರಮಾಣದಲ್ಲಿ ಹಣ್ಣುಗಳನ್ನು ಬೆಳೆಯುವ ಅಭ್ಯಾಸ ಹಬ್ಬುತ್ತಿದೆ. ಐದಾರು ರಂಬುಟಾನ್, ಮ್ಯಾಂಗೋಸ್ಟೀನ್, ಮಾವು, ಹಲಸು.. ಗಿಡಗಳು. ಸ್ವತಃ ಬೆಳೆದು, ತಿಂದು, ಹಂಚಿ ಉಳಿದುದನ್ನು ಹತ್ತಿರದ ಅಂಗಡಿಗಳಿಗೆ ಮಾರುತ್ತಾರೆ. ಅವರಿಗೇನೋ ಕೈಕಾಸು ಬಂತು. ಆದರೆ ಅಪ್ಪಟ ಮಾರುಕಟ್ಟೆಗೆ ಇಂತಹ ಮಾರಾಟದಿಂದ ಸ್ವಲ್ಪ ಮಟ್ಟಿನ ಹೊಡೆತ. ಹಾಗಾಗಿ ನೋಡಿ, ರಂಬುಟಾನ್ ಹಣ್ಣು ಕಿಲೊಗೆ ಐವತ್ತು, ನೂರು.. ಹೀಗೆ ವಿವಿಧ ದರಗಳಲ್ಲಿ ಸಿಗುತ್ತದೆ. ಹೊಸದಾಗಿ ರುಚಿ ಅನಭವಿಸುವವರಿಗೆ, ಹೊಸ ರುಚಿಯದ್ದು ಇನ್ನೊಂದು ಇದೆ ಎಂದು ಗೊತ್ತಾಗುವಲ್ಲಿಯ ತನಕ ಇಂತಹ ಮಾರಾಟ ಆಗುತ್ತಾ ಇರುತ್ತದೆ. ಬೆಳೆದವರಿಗೆ ಅಷ್ಟೊಂದು ಮಾರುಕಟ್ಟೆಯ ಜ್ಞಾನವಿಲ್ಲ, ಅಧ್ಯಯನವಿಲ್ಲ. ಮಾಹಿತಿಯಿಲ್ಲ - ಮಾರುಕಟ್ಟೆಯ ವಿವಿಧ ರೀತಿಗಳನ್ನು ಅಧ್ಯಯನಾತ್ಮಕವಾಗಿ ಚೌಟರು ವಿಶ್ಲೇಷಿಸುತ್ತಾರೆ.
               ಅಡಿಕೆಯ ದರವು ಆತಂಕದ ಸ್ಥಿತಿಯಲ್ಲಿದೆ. ತೆಂಗು ಯಾರಿಗೂ ಬೇಡವಾಗಿದೆ. ಪರ್ಯಾಯ ಬೆಳೆಗಳತ್ತ ಯೋಚನೆ ಬೇಕಾಗಿದೆ. ಎಲ್ಲಾ ಸಭೆಗಳಲ್ಲಿ, ಕೃಷಿಕರ ಮಾತುಕತೆಯಲ್ಲಿ ಆಗಾಗ್ಗೆ ಚರ್ಚಿತವಾಗುವ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ, ತೆಂಗಿಗೆ ಪರ್ಯಯ ಬೆಳೆಯಾಗಿ ರಂಬುಟಾನ್ ಗೆಲ್ಲಬಹುದು, ಎನ್ನುವ ಸಂತೋಷದ ಸುದ್ದಿಯನ್ನು ಹೇಳುವ ಡಾ.ಚಂದ್ರಶೇಖರ ಚೌಟರು, ಅದರ ಇನ್ನೊಂದು ಮುಖವನ್ನೂ ಹೇಳದೆ ಬಿಡಲಿಲ್ಲ.
                ಮಾರುಕಟ್ಟೆ ವ್ಯವಸ್ಥೆಯ ರೂಪೀಕರಣ, ಮಾರುಕಟ್ಟೆ ಜಾಲ, ಸ್ಥಿರ ದರ, ಕೃಷಿ ಕ್ರಮಗಳಲ್ಲೆಲ್ಲಾ ಸವಾಲು ಇದೆ. ಗುಣಮಟ್ಟವನ್ನೂ ಕಾಪಾಡಿಕೊಳ್ಳಬೇಕು. ಹಾಗಾಗಿ ಸುಲಭದಲ್ಲಿ ಗೆಲ್ಲಲು ತ್ರಾಸ. ಸದ್ಯ ಉತ್ತಮ ವಾತಾವರಣವಿದೆ. ಭವಿಷ್ಯದಲ್ಲಿ ಹೇಗಾದೀತು ಎನ್ನುವಂತಿಲ್ಲ.  ಕಾಲವೇ ಉತ್ತರಿಸಬೇಕಷ್ಟೇ. ಇವೆಲ್ಲದರ ಜತೆ ಆಸಕ್ತಿ, ತೊಡಗಿಸುವಿಕೆ ಮತ್ತು ಆಧ್ಯಯನ ಮುಖ್ಯವಾಗುತ್ತದೆ. ಕೃಷಿಯೊಂದು ಗೆದ್ದರೆ ಅದು ಕೃಷಿಯ ಗೆಲುವು. ಸೋತರೆ ನಮ್ಮ ಸೋಲು.
(Udayavani | Nelada_nadi coloum)
    


0 comments:

Post a Comment