ಉತ್ತರ ಕರ್ನಾಾಟಕದ ಯಾದಗೋಡು ಹಳ್ಳಿ. ನರ್ಸರಿಯೊಂದರಲ್ಲಿ ಲಾರಿಗೆ ಟ್ರೇಗಳು ಲೋಡ್ ಆಗುತ್ತಿದ್ದುವು. ಮೊಟ್ಟೆಗಳ ಸಾಗಾಟಕ್ಕೆ ಬಳಸುತ್ತಾರಲ್ಲಾ, ಅಂತಹುದು. ಇದೇನು ಇಷ್ಟು ದೊಡ್ಡ ಲಾರಿಯಲ್ಲೂ ಮೊಟ್ಟೆಗಳ ಸಾಗಾಟವೇ, ಎಂದೆ. ಜತೆಯಲ್ಲಿದ್ದ ಜಯಶಂಕರ ಶರ್ಮ ಹೇಳಿದರು, ಮೊಟ್ಟೆಗಳಲ್ಲ, ಅದು ಕಬ್ಬಿನ ಕಣ್ಣುಗಳಿಂದ ಸಿದ್ಧಪಡಿಸಿದ ನರ್ಸರಿ ಸಸಿಗಳು. ಇದನ್ನು ('Sustainable Sugarcane Initiative – SSI '' '- ಎಸ್ಎಸ್ಐ) ವಿಧಾನದಲ್ಲಿ ಅಭಿವೃದ್ಧಿ ಪಡಿಸಿದುದಾಗಿದೆ. ಎಂದರು. .
ನರ್ಸರಿಯ ಮಾಲಕ ಅಲಗೌಡಾ ಶ್ಯಾಮಗೌಡ ಪಾಟೀಲ. ಐದು ವರುಷಗಳಿಂದ ಎಸ್ಎಸ್ಐ ವಿಧಾನದ ಮೂಲಕ ಕಬ್ಬಿನ ಸಸಿಗಳನ್ನು ತಯಾರಿಸುತ್ತಿದ್ದಾರೆ. ಈಗಾಗಲೇ ಹತ್ತು ಲಕ್ಷಕ್ಕೂ ಮಿಕ್ಕಿ ಕಬ್ಬಿನ ಕಣ್ಣನ್ನು ಚಿಗುರಿಸಿ ಸಸಿಗಳನ್ನು ವಿತರಿಸಿದ್ದಾರೆ. ಈ ವಿಧಾನದಲ್ಲಿ ಅಭಿವೃದ್ಧಿಪಡಿಸಿದ ಸಸಿಗಳಿಗೆ ಹನಿ ನೀರಾವರಿಯ ಪದ್ಧತಿಯ ಮೂಲಕ ನೀರುಣಿಸಿದರೂ ತಾಳಿಕೊಳ್ಳುತ್ತವೆ. ಒಂದರ್ಥದಲ್ಲಿ ನೀರಿನ ಬರವನ್ನು ಎದುರಿಸಲು ಕಬ್ಬು ಕೃಷಿಗೊಂದು ಪರ್ಯಯ ಪದ್ಧತಿ.
ಇದೇನೂ ಹೊಸತಲ್ಲ. ಮಹಾರಾಷ್ಟ್ರದಲ್ಲಿ ಎಸ್ಎಸ್ಐ ವಿಧಾನವು ಕೃಷಿಕ ಸ್ವೀಕೃತಿ ಪಡೆದಿದೆ. ಕನ್ನಾಡಿನಲ್ಲೂ ಹಬ್ಬುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತರ ಕನ್ನಡ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಳಗಾಂ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿದೆ. ಸುಮಾರು ಇನ್ನೂರು ಎಕ್ರೆಯಲ್ಲಿ ಕೃಷಿಕರು ಕಬ್ಬನ್ನು ಬೆಳೆದು ಯಶ ಕಂಡಿದ್ದಾರೆ. ಸಾಂಪ್ರದಾಯಿಕ ವಿಧಾನದ ಕೃಷಿಯಿಂದ ಎಸ್ಎಸ್ಐಯಲ್ಲಿ ಇಳುವರಿ ದುಪ್ಪಟ್ಟು.
ಪಾಟೀಲರು ಐದು ವರುಷದ ಹಿಂದೆ ಮಹಾರಾಷ್ಟ್ರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ಈ ವಿಧಾನದಿಂದ ಮಾಡಿದ ಸಸಿಗಳನ್ನು ನೋಡಿದರು. ಮಾಹಿತಿ ಪಡೆದರು. ಪ್ರಾಯೋಗಿಕವಾಗಿ ಬೆಳೆಯಲು ಸಸಿಗಳನ್ನು ತಂದರು. ತೆಂಡೆಗಳು ಜಾಸ್ತಿ ಬಿಟ್ಟವು. ಕೃಷಿ ಮಾಡಲು ವಿಶ್ವಾಸ ಬಂತು. ಸ್ವತಃ ನರ್ಸರಿಯಲ್ಲಿ ಸಸಿಗಳನ್ನು ತಯಾರಿಸಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದ ಉತ್ಸಾಹ ಕುಗ್ಗಿತು. ಟ್ರೇಗಳಲ್ಲಿ ಕಬ್ಬಿನ ಕಣ್ಣನ್ನು ಊರಿದ ಬಳಿಕ ಅದರ ಮೇಲೆ ಪ್ಲಾಸ್ಟಿಕ್ ಹಾಸಿದರೆ ಶಾಖವನ್ನು ಸೃಷ್ಟಿಯಾಗುತ್ತದೆ. ಈ ಮಾಹಿತಿ ಸಿಗದ ಕಾರಣ ಮೊದಲ ಯತ್ನದಲ್ಲಿ ಸೋತೆ, ಎನ್ನುತ್ತಾರೆ.
ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆದ ಕಬ್ಬು ಬೆಳೆಯಲ್ಲಿ ನೀರಿನ ಬಳಕೆ ಅಧಿಕ. ಸಾಲಿನಲ್ಲಿ ನೀರನ್ನು ನಿಲ್ಲಿಸುವ ವಿಧಾನ ಜನಪ್ರಿಯ! ಅಂತರ್ಜಲ ಇಳಿತ, ಸಕಾಲಕ್ಕೆ ಮಳೆ ಬಾರದಿರುವುದು ಮೊದಲಾದ ಕಾರಣಗಳಿಂದ ಕಬ್ಬಿನ ಬೇಸಾಯ ಹೊರೆಯಾಗುತ್ತಿದೆ. ಜತೆಗೆ ಬ್ಯಾಂಕ್ ಸಾಲ, ದಲ್ಲಾಳಿಗಳ ಕರಾಮತ್ತಿನಿಂದ ಕೃಷಿಕ ಹೈರಾಣವಾಗುತ್ತಿರುವುದು ಗೊತ್ತಿರುವ ವಿಚಾರ. ಎಸ್ಎಸ್ಐ ವಿಧಾನ ಕಬ್ಬು ಕೃಷಿಯಿಂದ ನೀರಿನ ಉಳಿತಾಯ ಸಾಧ್ಯ ಎಂದು ಬೆಳೆದವರು ಕಂಡುಕೊಂಡಿದ್ದಾರೆ.
ಸಸಿ ತಯಾರಿ ಹೇಗೆ? ಪಾಟೀಲರ ಅನುಭವ - ನರ್ಸರಿಗಳಲ್ಲಿ ಬಳಕೆ ಮಾಡುವ ಪ್ರೋಟ್ರೇಯಲ್ಲಿ ಅರುವತ್ತು ಸಸಿಗಳನ್ನು ಮಾಡಬಹುದು. ಕಳಿತ ತೆಂಗಿನ ನಾರಿನ ಹುಡಿ(ಕೊಕೊಪಿತ್)ಯನ್ನು ಟ್ರೇಯಲ್ಲಿ ಹರಡಿ. ಮೊದಲೇ ಕಣ್ಣೂ ಸೇರಿದಂತೆ ಕಬ್ಬನ್ನು ಒಂದಿಂಚಿನಂತೆ ತುಂಡರಿಸಿಟ್ಟುಕೊಳ್ಳಿ. ಟ್ರೇಯ ಕಳ್ಳಿಯಲ್ಲಿ ತುಂಡರಿಸಿದುದನ್ನು ಊರಿ. ಬಳಿಕ ಅದರ ಮೇಲೆ ಅರ್ಧ ಸೆಂಟಿಮೀಟರ್ ದಪ್ಪಕ್ಕೆ ಕೊಕೊಪಿತ್ ಹರಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಹಾಸನ್ನು ಮುಚ್ಚಿ. ಹೀಗೆ ಮಾಡಿದಾಗ ಟ್ರೇಯೊಳಗಿನ ಕಬ್ಬಿನ ಕಣ್ಣುಗಳಿಗೆ ವಾತಾವರಣದ ಶಾಖಕ್ಕಿಂತ ಅಧಿಕ ಉಂಟಾಗಿ ಏಳು ದಿವಸದಲ್ಲಿ ಮೊಳಕೆ ಬರುತ್ತದೆ. ಬಿಸಿಲು ಜಾಸ್ತಿ ಇದ್ದರೆ ಪ್ಲಾಸ್ಟಿಕ್ ತೆಗೆದು ನೀರು ಒದ್ದೆಯಾಗುವಷ್ಟು ನೀರು ಸಿಂಪಡಿಸಿ. ಹೀಗೆ ತಯಾರಾದ ಸಸಿಗಳನ್ನು ನಲವತ್ತೈದು ದಿವಸದಲ್ಲಿ ನಾಟಿ ಮಾಡಲೇಬೇಕು.
ಪಾಟೀಲರು ಕೆಲವು ಸೂಕ್ಷ್ಮಗಳನ್ನು ಹೇಳುತ್ತಾರೆ. ಸಸ್ಯಾಭಿವೃದ್ಧಿಗಾಗಿ ಏಳೆಂಟು ತಿಂಗಳು ಬೆಳೆದ ಕಬ್ಬನ್ನು ಬಳಸಿ. ಗಿಡದಿಂದ ರವದಿ ತೆಗೆದಿರಬಾರದು. ತೆಗೆದರೆ ಮೊಳಕೆ ಬರುವ ಸಾಮಥ್ರ್ಯ ಕುಂಠಿತವಾಗುತ್ತದೆ. ಕಬ್ಬನ್ನು ಕಟಾವ್ ಮಾಡಿದ ಎರಡು ದಿವಸದಲ್ಲಿ ಟ್ರೇ ಸೇರಲೇ ಬೇಕು. ಗೆದ್ದಲು ನಿಯಂತ್ರಣಕ್ಕಾಗಿ ಬೀಜ ಊರುವ ಮೊದಲು ರಾಸಾಯನಿಕ ಬೀಜೋಪಚಾರ ಬೇಕು. ತೀರಾ ತಂಪಾದ ವಾತಾವರಣವಿದ್ದರೆ ವಿದ್ಯುತ್ ಬಲ್ಪ್ ಉರಿಸಿ ಶಾಖ ಸೃಷ್ಟಿಮಾಡಬೇಕು. ಉತ್ತಮ ತರಹದ ಸಸಿಗಳು ತಯಾರಾಗಲು ಇಂತಹ ಸೂಕ್ಷ್ಮತೆಯತ್ತ ಎಚ್ಚರ ಬೇಕು. ನಾಟಿ ಮಾಡುವ ಒಂದು ವಾರದ ಮೊದಲು ಸಸಿಗಳಿಗೆ ನೀರುಣಿಕೆ ನಿಲ್ಲಿಸಬೇಕು.
ಸಾಲಿನಿಂದ ಸಾಲಿಗೆ ಐದಡಿ, ಗಿಡದಿಂದ ಗಿಡಕ್ಕೆ ಎರಡಡಿ ಅಂತರ. ನಾಟಿ ಮಾಡುವಾಗ ಮಣ್ಣಿನಲ್ಲಿ ತೇವಾಂಶವಿರಲಿ. ನಾಟಿ ಮಾಡಿದ ಬಳಿಕವೂ ನೀರಾವರಿ ಅಗತ್ಯ. ಕಾಲಕಾಲದ ಅರೈಕೆ. ಒಂದು ಎಕರೆಗೆ ಆರುಸಾವಿರ ಸಸಿಗಳು ಬೇಕು. ಇಪ್ಪತ್ತರಿಂದ ಇಪ್ಪತ್ತೈದು ತೆಂಡೆಗಳು ಒಂದೊಂದು ಗಿಡದ ಸುತ್ತ ಚಿಗುರುತ್ತವೆ. ಹನಿ ನೀರಾವರಿ ವ್ಯವಸ್ಥೆಯನ್ನು ಎಸ್ಎಸ್ಐ ವಿಧಾನದ ಗಿಡಗಳು ತಾಳಿಕೊಳ್ಳುತ್ತವೆ.
ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬನ್ನು ನೇರ ನಾಟಿ ಮಾಡುತ್ತಾರೆ. ಸಾಲಿಂದ ಸಾಲಿಗೆ ಹೆಚ್ಚೆಂದರೆ ಎರಡೂವರೆ ಅಡಿ. ಗಿಡ ಬೆಳೆದಾಗ ಅದರ ಮಧ್ಯ ಓಡಾಡಲೂ ಕಷ್ಟ. ನರ್ಸರಿಯಲ್ಲಿ ಸಸಿ ಮಾಡಿದವುಗಳನ್ನು ನಾಟಿ ಮಾಡಿದರೆ ಸಾಲಿಂದ ಸಾಲಿಗೆ ಅಂತರವಿರುವುದರಿಂದ ಅದರೊಳಗೆ ಅಲ್ಪಕಾಲಿಕ ಬೆಳೆಗಳನ್ನು ಬೆಳೆಯಬಹುದು. ಕಾಲಕಾಲದ ಆರೈಕೆ, ನಿರ್ವಹಣೆಗಳನ್ನು ಸಾಲಿನಲ್ಲಿ ಒಡಾಡಿ ನಿರ್ವಹಿಸಬಹುದು. ಪಾಟೀಲರು ಮೂರೆಕ್ರೆ ಕಬ್ಬಿನ ಮಧ್ಯೆ ಶೇಂಗಾ, ಬದನೆ, ಅವರೆ, ಬೆಂಡೆ ಬೆಳೆದಿದ್ದಾರೆ.
ಸಾಂಪ್ರದಾಯಿಕ ಪದ್ಧತಿಯಲ್ಲಿ ಎಕ್ರೆಗೆ ಸುಮಾರು ಮೂವತ್ತೈದು ಟನ್ ಇಳುವರಿ. ಎಸ್ಎಸ್ಐ ವಿಧಾನದಲ್ಲಿ ಏನಿಲ್ಲವೆಂದರೂ ಐವತ್ತೈದರಿಂದ ಅರುವತ್ತು ಟನ್! ತೆಂಡೆ ಜಾಸ್ತಿ, ಕಬ್ಬಿನ ಗಿಡದ ಗಾತ್ರ ಹೆಚ್ಚು. ತುಂಬಾ ಎತ್ತರ ಬೆಳೆಯುತ್ತದೆ. ರೋಗ ಇಲ್ಲವೇ ಇಲ್ಲ ಎನ್ನಬಹುದು. ಎಲ್ಲಾ ಕಬ್ಬಿನ ಜಲ್ಲೆಗಳು ಒಂದೇ ಆಕಾರದಲ್ಲಿ ಬೆಳೆಯುತ್ತವೆ. ಕಬ್ಬಿನಲ್ಲಿ ರಸವೂ ಹೆಚ್ಚು. ಈ ವಿಧಾನವು ಕೃಷಿಕರಿಗೆ ಅಗತ್ಯ. ಕೃಷಿಯಲ್ಲಿ ಎಷ್ಟೋ ಸಲ ಪಾರಂಪರಿಕ ವಿಧಾನವನ್ನು ನೆಚ್ಚಿಕೊಂಡಿರುತ್ತೇವೆ. ಆಧುನಿಕ ವಿಧಾನಕ್ಕೆ ಬದಲಾಗಲು ಮಾನಸಿಕ ತಡೆಯಿದೆ. ಇದನ್ನು ಬದಲಾಯಿಸಬೇಕು. ನಾನು ಬದಲಾಗಿದ್ದೇನೆ. ಮೊದಮೊದಲು ಈ ವಿಧಾನವನ್ನು ಹೇಳಿದಾಗ ನಕ್ಕರು, ಗೇಲಿ ಮಾಡಿದರು. ಅಂದು ವ್ಯಂಗ್ಯವಾಡಿದವರೇ ಈಗ ಸಸಿಗಳನ್ನು ಒಯ್ಯುತ್ತಾರೆ ಎನ್ನುತ್ತಾರೆ ಶ್ಯಾಮಗೌಡ ಪಾಟೀಲರು.
ಅರಿವು ಮೂಡಿಸಲು ಗ್ರಾಮಾಭಿವೃದ್ಧಿ ಯೋಜನೆಯು ತರಬೇತಿ ನೀಡಿತ್ತು ಪ್ರವಾಸ ಏರ್ಪಡಿಸಿತ್ತು. ಯೋಜನೆಯು ಪಾಟೀಲರಿಗೆ ಸಹಕಾರ ನೀಡಿತು. ಅವರ ನರ್ಸರಿಯಿಂದ ಶೇ.60ರಷ್ಟು ಸಸಿಗಳನ್ನು ಯೋಜನೆಯೇ ವಿಲೆವಾರಿ ಮಾಡುವ ಭರವಸೆ ನೀಡಿತು. ಒಮ್ಮೆಗೆ ಹನ್ನೆರಡು ಸಾವಿರ ಸಸಿಗಳಿಗೆ ಆದೇಶ ಕೊಟ್ಟರೆ ಲಾರಿಯಲ್ಲಿ ಕಳುಹಿಸಿಕೊಡುತ್ತಾರೆ. ಅದೂ ಮುಂಗಡ ನೀಡಿದ ಬಳಿಕವೇ! ಅಕ್ಟೋಬರ್, ನವಂಬರಿನಲ್ಲಿ ನಾಟಿ ಮಾಡಬೇಕಾದುದರಿಂದ ಮೊದಲೇ ಕಾದಿರಿಸುವವರ ಸಂಖ್ಯೆ ಹೆಚ್ಚು. ಈಗ ರಾಜ್ಯದಲ್ಲಿ ಅಲ್ಲಿಲ್ಲಿ ಕೆಲವು ನರ್ಸರಿಗಳಿವೆ. ಗುಣಮಟ್ಟದ ಸಸಿಗಳನ್ನು ಸಿದ್ಧಮಾಡುವುದರಿಂದ ಸಸಿಗಳಿಗೆ ಬೇಡಿಕೆ ಹೆಚ್ಚು
ಆರಂಭದ ಎರಡು ವರುಷ ಗಂಡ, ಹೆಂಡತಿ ದುಡಿದರು. ಈಗ ಸಹಾಯಕರಿದ್ದಾರೆ. ಮೂರು ತಿಂಗಳ ಅಂತರ ಬೇಸಾಯದಿಂದ ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ಗಳಿಸಬಹುದು ಎನ್ನುವುದು ಅವರ ಅನುಭವ. ಕೆಲಸಗಳ ಸುಸೂತ್ರತೆಗಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸಂಘವೊಂದನ್ನು ರೂಪೀಕರಿಸಿದ್ದಾರೆ. ಸಾವಯವ ವಿಧಾನದ ಗೊಬ್ಬರ, ಸಿಂಪಡಣೆಯತ್ತ ಯೋಚನೆ ಹರಿಯುತ್ತಿದೆ. ಸದ್ಯ ರಾಸಾಯನಿಕ ಗೊಬ್ಬರಗಳ ಬಳಕೆ.
ಕನ್ನಾಡು ಬರವನ್ನು ಎದುರಿಸುತ್ತಿದೆ. ಸರಕಾರವು ಬರವನ್ನು ವೈಭವೀಕರಿಸುತ್ತಿದೆ! ವೈಭವೀಕರಿಸದೆ ಅವರಿಗೆ ನಿರ್ವಾಹವಿಲ್ಲ! ಇರಲಿ, ಬರವನ್ನು ಎದುರಿಸುವಂತಹ, ಕಡಿಮೆ ನೀರನ್ನು ಬಳಸಿ ಕೃಷಿ ಮಾಡುವ ವಿಧಾನಗಳಿಗೆ ಒತ್ತು ಕೊಡಬೇಕಾದ ದಿನಮಾನದಲ್ಲಿದ್ದೇವೆ. ಭತ್ತದ ಕೃಷಿಯಲ್ಲಿ ಈಗಾಗಲೇ ಶ್ರೀಪದ್ಧತಿಯು ಕೃಷಿಕ ಸ್ವೀಕೃತಿಯನ್ನು ಪಡೆದಿದೆ. ಈಗ ಕಬ್ಬಿಗೆ ಎಸ್ಎಸ್ಐ ವಿಧಾನದ ಪೋಣಿಕೆ ಯಶವಾಗುತ್ತಿದೆ.
ಮಾದರಿಗಳು ಮುಂದಿದ್ದಾಗ ಅಳವಡಿಕೆ ಸುಲಭ. ಅಂತಹ ಮಾದರಿಗಳನ್ನು ಜನರ ಹತ್ತಿರ ಒಯ್ದು, ಫಲಿತಾಂಶವನ್ನು ಮನದಟ್ಟು ಮಾಡುವುದು ಮತ್ತು ಈಗಾಗಲೇ ಅಳವಡಿಸಿ ಯಶಸ್ಸಾದ ರೈತಾನುಭವಕ್ಕೆ ಕಿವಿಯಾಗಲು ಅವಕಾಶವಾದರೆ ಹೊಸ ಪದ್ಧತಿಗಳ ಅಳವಡಿಕೆ ಸುಲಭ.
(udayavani/nelada nadi/coloum)
0 comments:
Post a Comment