Thursday, September 1, 2016

ನೀರಿನ ಕೂಗು ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ!

ಕನ್ನಾಡಿನಲ್ಲೀಗ ಬಿಸಿಲ ಧಗೆ. ಕುಡಿ ನೀರಿಗೂ ತತ್ವಾರ. ಸಚಿವರು ನೀಡಿದ ಅಂಕಿಅಂಶದಂತೆ ಈ ವರುಷ ಸುಮಾರು ಎಂಟು ಸಾವಿರ ಕೊಳವೆ ಬಾವಿಗಳು ಬರಿದಾಗಿವೆ. ನಾಲ್ಕೂವರೆ ಸಾವಿರ ಹಳ್ಳಿಗಳಲ್ಲಿ  ಕುಡಿಯುವ ನೀರಿಗೆ ಸಮಸ್ಯೆಯಿದೆ. ಹನ್ನೊಂದು ಜಿಲ್ಲೆಗಳ ಮುನ್ನೂರು ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅಂತರ್ಜಲ ಬರಿದಾಗಿದೆ. ರೈತರು ಬರದ ಬವಣೆಯಲ್ಲಿದ್ದಾರೆ. ಪರಿಹಾರದ ದಾರಿ ಕಾಣುತ್ತಿಲ್ಲ.
    'ಇನ್ನೊಂದು ಯುದ್ಧ ಆಗುವುದಿದ್ದರೆ ಅದು ನೀರಿಗಾಗಿ,' ಜಲಯೋಧರು ಆಗಾಗ್ಗೆ ಎಚ್ಚರಿಸುತ್ತಿರುವ ಮಾತು. ಇದು ಸತ್ಯವಾಗುವ ಎಲ್ಲಾ ಲಕ್ಷಣಗಳು ಹತ್ತಿರವಾಗುತ್ತಿವೆ. ರಾಜ್ಯಗಳೊಳಗೆ ನೀರಿಗಾಗಿ ಮುನಿಸು. ಪರಸ್ಪರ ಕೆಸರೆರಚಾಟ. ರಾಜಕೀಯ ಲಾಭದ ಲೆಕ್ಕಾಚಾರ. ಅದಕ್ಕೊಂದಿಷ್ಟು ಜಾತಿಯ ಸ್ಪರ್ಶ. ಮತೀಯ ನಂಟು. ಸಮಸ್ಯೆಗೆ ಪರಿಹಾರ ಯಾರಿಗೂ ಬೇಕಾಗಿಲ್ಲ.
    ಅಂತರ್ಜಲ ಬರಿದಾಗುತ್ತಿದೆ - ಎನ್ನುವುದು ಆಡಳಿತ ಯಂತ್ರಕ್ಕೆ  ಗೊತ್ತಿದೆ. ಜನನಾಯಕರಿಗೆ ತಿಳಿದಿದೆ. ಸಂಬಂಧಪಟ್ಟ ಇಲಾಖೆಗಳಿವೆ. ಇವರಿಗೆಲ್ಲಾ ಅಂತರ್ಜಲ, ಜಲಮರುಪೂರಣ, ನೀರಿನ ಅರಿವಿನ ಪಾಠ ಆಗಬೇಕೇನೋ. ಸಮಸ್ಯೆಗೆ ಪರಿಹಾರವನ್ನು ತುರ್ತಾಗಿ ಮಾಡಬೇಕಾದ ಸರಕಾರವು ಅಧಿಕಾರ ಉಳಿಸುವ ಚಿಂತನೆಯಲ್ಲಿ ತೊಡಗಿವೆ. ಮೋಡಬಿತ್ತನೆ, ನದಿ ಜೋಡಣೆ, ನೀರೆತ್ತುವ ಯೋಜನೆ, ನದಿ ತಿರುಗಿಸುವ ಯೋಜನೆ.. ಎಲ್ಲೆಲ್ಲಾ ಕೋಟಿಗಳ ಎಣಿಕೆ ಇದೆಯೋ ಅಲ್ಲೆಲ್ಲಾ ಫೈಲುಗಳನ್ನು ಸಿದ್ಧಪಡಿಸುವುದರಲ್ಲೇ ಅಧಿಕಾರಿ ವರ್ಗ ತಲ್ಲೀನವಾಗಿವೆ. 
ರಾಜ್ಯದ ಹಳ್ಳಿಗಳನ್ನು ಸುತ್ತುತ್ತಿರುವ ಪತ್ರಕರ್ತ ಶಿವಾನಂದ ಕಳವೆ ಹೇಳುತ್ತಾರೆ, ಕೃಷಿಕರೂ ಸೇರಿದಂತೆ ಜಲಸಾಕ್ಷರತೆ ಹೆಚ್ಚಬೇಕಾಗಿದೆ. ಪ್ರತ್ಯೇಕವಾದ ಜಲ ಅಕಾಡೆಮಿ ರೂಪುಗೊಳ್ಳಬೇಕು. ಚಿಕ್ಕ ಸಂರಕ್ಷಣಾ ಯಶೋಗಾಥೆಗಳಿಗೆ ಬೆಳಕೊಡ್ಡುವ ಕೆಲವಾಗಬೇಕು. ಮಳೆ ನೀರನ್ನು ಹಿಡಿದಿಡುವ ಸರಳ ವ್ಯವಸ್ಥೆಗಳನ್ನು ಪರಿಚಯಿಸಬೇಕು. ಜಲ ಸಂರಕ್ಷಣೆಯ ವಿವಿಧ  ರಚನೆಗಳು, ಚಾವಣಿ ನೀರಿನ ಜಲ ಸಂರಕ್ಷಣಾ ಸರಲಕರಣೆಗಳ ಪ್ರದರ್ಶನಾಲಯವನ್ನು ಜಿಲ್ಲೆಗಳು ಒಳಗೊಂಡಿರಬೇಕು. ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಚಾವಣಿ ನೀರು ಸಂಗ್ರಹದ ಮಾದರಿಗಳನ್ನು ಪರಿಚಯಿಸುವಂತಾಗಬೇಕು.
ಭೂಗರ್ಭ ಶಾಸ್ತ್ರಜ್ಞ ಎನ್. ದೇವರಾಜ ರೆಡ್ಡಿಯವರ ಮಾತನ್ನು ಗಮನಿಸಿ - ಮಣ್ಣಿನ ಗುಣಮಟ್ಟ, ಭೂಗರ್ಭದ ರಚನೆ, ಜಲ ಸೆಲೆ ಹರಿಯುವ ಅರಿವಿಲ್ಲದೆ, ಯಾರೋ ಅಂದಾಜು ಮಾಡಿ ಗುರುತಿಸುವ ಜಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯುತ್ತಾರೆ. ಇಂತಹ ಅವೈಜ್ಞಾನಿಕ ಮನಃಸ್ಥಿತಿ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯವನ್ನೂ ಒಳಗೊಂಡು ದೇಶದಲ್ಲಿ ಕೊಳವೆ ಬಾವಿಗಳ ಕಾರ್ಯಕ್ಷಮತೆ ಉತ್ತಮವಾಗಿಲ್ಲ. ನೀರಿನ ಸಮಸ್ಯೆಗೆ ಕೊಳವೆ ಬಾವಿ ಕೊರೆಯುವುದೊಂದೇ ಪರಿಹಾರವಲ್ಲ. ಇದಕ್ಕೆ ಕೆರೆ ಕಟ್ಟೆಗಳಂತಹ ಜಲಸಂರಕ್ಷಣಾ ತಾಣಗಳನ್ನು ಜೋಡಿಸಬೇಕು. ನೀರು ಇಂಗಿಸುವ ಚೆಕ್ ಡ್ಯಾಮ್ಗಳು ನಿರ್ಮಾಣವಾಗಬೇಕು. ಕೊಳವೆ ಬಾವಿಗಳ ಮರುಪೂರಣಗಳಾಗಬೇಕು. ಈ ಯತ್ನಗಳೆಲ್ಲಾ ಸಾಮೂಹಿವಾಗಿ ನಡೆಯಬೇಕು.
ವೈಯಕ್ತಿಕ ನೆಲೆಯಲ್ಲಿ ಜಲ ಸಂರಕ್ಷಣೆಯನ್ನು ಮಾಡಿದ ಕೃಷಿಕರು ನೀರಿನ ಬರಕ್ಕೆ ಹೆದರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಮಣ್ಣು ಮತ್ತು ನೀರಿನ ಅರಿವು ಮೂಡಿಸಿಕೊಂಡ ಕೃಷಿಕರು ಬರನಿರೋಧಕ ಜಾಣ್ಮೆಯನ್ನು ಬಳಸಿಕೊಂಡಿದ್ದಾರೆ. ತಮ್ಮ ಹೊಲವನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ಸಾಗಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ವರುಷಪೂರ್ತಿ ಬಳಕೆ ಮಾಡುವ ಜಲಸಾಕ್ಷರರಿದ್ದಾರೆ. ತಿಪಟೂರಿನ ಬೈಫ್ ಸಂಸ್ಥೆಯಲ್ಲಿ ಮಳೆನೀರ ಕೊಯ್ಲಿನ ದೊಡ್ಡ ಮಾದರಿಯಿದೆ. ಧಾರವಾಡ ಸನಿಹ ಸ್ವಾಮೀಜಿಯೊಬ್ಬರು ಮಳೆನೀರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ನೀರಿನ ಅರಿವನ್ನು ಬಿತ್ತರಿಸುತ್ತಿದ್ದಾರೆ.
ಕಪ್ಪು ಮಣ್ಣಿರುವಲ್ಲಿ 'ಮರುಳು ಮುಚ್ಚಿಗೆ' ಎನ್ನುವ ರೈತ ತಂತ್ರಜ್ಞಾನ ಯಶವಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ಆಳ ಉಳುಮೆ ಮಾಡಿ ಅದರ ಮೇಲೆ ಮರಳು ಹೊದೆಸುತ್ತಾರೆ. ಕೆಂಪು ಮಣ್ಣಿರುವಲ್ಲೂ ಮರಳು ಮುಚ್ಚಿಗೆ ಮಾಡಿ ಉತ್ತಮ ಫಲಿತಾಂಶ ಪಡೆದಿವರಿದ್ದಾರೆ. ಉಸುಕು ಹಾಕಿದ ಭೂಮಿಯಲ್ಲಿ ಎಷ್ಟೇ ರಭಸದ ಮಳೆ ಬಂದರೂ ನೀರು ಹರಿದುಹೋಗುವುದಿಲ್ಲ. ಮಣ್ಣು ನೀರನ್ನು ಹೀರಿಕೊಳ್ಳುತ್ತದೆ. ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳವ ಸಾಮಥ್ರ್ಯ ಪಡೆಯುತ್ತದೆ, ಎನ್ನುವ ಅನುಭವ ರೋಣದ ಸಂಕನಗೌಡರದು. ಬಾಗಲಕೋಟೆ ಜಿಲ್ಲೆಯ ನೂರಾರು ರೈತರ ಹೊಲಗಳಿಗೆ ಈ ವಿಧಾನ ವಿಸ್ತರಿಸಿದೆ.
ಸುಮಾರು ಒಂದೂವರೆ ಶತಮಾನದ ಹಿಂದೆ ಪೂಜ್ಯ ಘನಮಠ ಶಿವಯೋಗಿ ಸ್ವಾಮೀಜಿಯವರು ಬರೆದ 'ಕೃಷಿ ಜ್ಞಾನ ಪ್ರದೀಪಿಕೆ'ಯಲ್ಲಿನ ಬರನಿರೋಧಕ ಜಾಣ್ಮೆಗಳನ್ನು ಹುನಗುಂದದ ಶಂಕ್ರಣ್ಣ ನಾಗರಾಳರು ಹಿರಿಯರ ಮಾರ್ಗದರ್ಶನದಲ್ಲಿ ಅನುಷ್ಠಾನಿಸುತ್ತಿದ್ದಾರೆ. 'ಹೊಲ ತಿದ್ದುವ' ವಿಧಾನದ ಮೂಲಕ ಮಣ್ಣು, ನೀರನ್ನು ಸಂರಕ್ಷಿಸುತ್ತಿದ್ದಾರೆ. ಬರದ ಬವಣೆಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಇವರ ಈ ಕಾಯಕಕ್ಕೆ ವಿಶ್ವವಿದ್ಯಾನಿಲಯವೂ ಮಾನ್ಯತೆ ನೀಡಿದೆ. ಬರ ನಿರೋಧದ ಜಾಣ್ಮೆಯ ಕುರಿತು ಒಂದೆರಡು ಪುಸ್ತಕವೂ ಅಚ್ಚಾಗಿದೆ.
'ಕೃಷಿ ಜ್ಞಾನ ಪ್ರದೀಪಿಕೆ' - ಇದು ರೈತರಿಗೆ ದಾರಿದೀಪ. ಅದರಲ್ಲಿನ ಎರಡು ಮಾದರಿಗಳು ಹೀಗಿದೆ.  ಹೊಲದ ನಾಲ್ಕು ದಿಕ್ಕಿಗೆ ಒಡ್ಡು ಹಾಕಿಸಿಕೊಳ್ಳತಕ್ಕದ್ದು. ಹೀಗೆ ಒಡ್ಡು ಹಾಕಿಸುವುದರಿಂದ ಹೊಲದ ಮಣ್ಣು ಹಾಗೂ ಹೊಲದ ಸಾರ ಕಡಿಮೆಯಾಗದೆ ಹೊಲವನ್ನು ಉತ್ತಮ ಪ್ರಕಾರದ ಹದಕ್ಕೆ ತರುವುದು. ಹಾಗೂ ಬಹಳ ಮಳೆಯಾದರೂ, ಸ್ವಲ್ಪ ಮಳೆಯಾದರೂ ಹೊಲದಲ್ಲಿ ನೀರು ನಿಂತು ತಂಪು ಮಾಡುತ್ತದೆ. ಆ ತಂಪಿನಿಂದ ಅರಗಾಲ, ಬರಗಾಲಗಳಲ್ಲಾದರೂ ತಕ್ಕಷ್ಟು ಬೆಳೆಯಾಗುವುದು.
ಒಂದು ಹೊಲದ ಮಣ್ಣು ಮತ್ತೊಂದು ಹೊಲಕ್ಕೆ ಹೋಗದ ಹಾಗೆ ಹೊಲದ ಬಾಂದಿನ ಹದ್ದು ಹಿಡಿದು ಒಂದು ಮೊಳ ಅಥವಾ ಎರಡು ಮೊಳ ಎತ್ತರವಾಗಿ ನಾಲ್ಕು ಕಡೆಗೂ ಸುತ್ತಲೂ ಒಡ್ಡು ಹಾಕಿಸುವುದು ಅವಶ್ಯಕವಾಗಿದೆ. ಈ ಪ್ರಕಾರವಾಗಿ ಹಾಕಿದ ಒಡ್ಡಿನಿಂದ ಆಗುವ ಪ್ರಯೋಜನವೇನೆಂದರೆ, ತಂತಮ್ಮ ಹೊಲಗಳನ್ನು ನೇಗಿಲಿನಿಂದಾಗಲೀ, ಮಡಿಕೆಯಿಂದಾಗಲೀ ಹೊಡೆದು ಬಿಗಿಯಾದ ಮಣ್ಣನ್ನು ಸಡಿಲು ಮಾಡಿ,  ಕುಂಟೆಯಿಂದ ಹರಗಿ ಮೆತ್ತಗೆ ಮಾಡಿದಲ್ಲಿ ಆ ಭೂಮಿಯ ಮಣ್ಣು ಚೆನ್ನಾಗಿ ಹದಕ್ಕೆ ಬರುವುದು.. ಪಾರಂಪರಿಕ ವಿಧಾನಗಳ ದಾಖಲಾತಿಗಳು ಕೃಷಿ ಜೀವನದ ಸರಳೀಕರಣಕ್ಕೆ, ಮಾರ್ಗದರ್ಶನಕ್ಕೆ ಪೂರಕ ಎನ್ನುವುದನ್ನು ಕೃಷಿ ಜ್ಞಾನ ಪ್ರದೀಪಿಕೆ ತೋರಿದೆ.
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಮದಕಗಳು ಇಡೀ ಊರಿಗೆ ಅಂತರ್ಜಲ ಮರುಪೂರಣ ಮಾಡುತ್ತಿದ್ದ ರಚನೆಗಳು. ಅಜ್ಜಂದಿನ ದೂರದೃಷ್ಟಿಯ ದೃಷ್ಟಾಂತಗಳು. ಮದಕಗಳನ್ನು ದುರಸ್ತಿಪಡಿಸಿದರೆ ಅವು ದೊಡ್ಡ ರೀತಿಯಲ್ಲಿ ಪ್ರಯೋಜನ ಕೊಡಬಲ್ಲುವು. ಅನುಕೂಲಕರ ಜಾಗ ಮತ್ತು ಸಂಪನ್ಮೂಲ ಇರುವ ಕೆಲವು ರೈತರು ತಮ್ಮ ಜಮೀನಿನ ಮೇಲ್ಭಾಗದಲ್ಲಿ ಈ ರೀತಿಯ ಇಂಗುಕೊಳ ರಚಿಸಿಕೊಂಡರೆ ಅದು ಕೆಳಗಿನ ಇಡೀ ಭೂಮಿಗೆ ಜಲವಿಮೆಯಾಗತ್ತದೆ.  ಕೆಳಗಿನ ತೊರೆ-ತೋಡುಗಳಲ್ಲಿ ಹೆಚ್ಚು ಕಾಲ ನೀರಿರುವಂತೆ ಮಾಡುವಲ್ಲಿ ಸಹಾಯಕವಾಗುತ್ತದೆ.
ಈ ರೀತಿಯ ರಚನೆಗಳ ಕುರಿತು 'ದೇಸಿ ಕೃಷಿ ಜ್ಞಾನ' ಸಂಪುಟದಲ್ಲಿ ಶ್ರೀ ಪಡ್ರೆಯವರು ವಿವರಿಸುತ್ತಾರೆ, ಮೇಜರ್ ಸ್ಯಾಂಕಿ ಕ್ರಿ.ಶ. 1865ರಲ್ಲಿ ರಾಜ್ಯದ ಮುಖ್ಯ ಇಂಜಿನಿಯರ್. ಮೈಸೂರಿನಲ್ಲಿ ಮೈಲಿಗೊಂದು ಕೆರೆ ಇದೆ ಎಂದವರು. ಗುಡ್ಡದ ತುತ್ತ ತುದಿಯಿಂದ ಕೆರೆಗಳ ಸರಣಿ, ಒಂದು ಕೆರೆಗೆ ನೀರು ತುಂಬಿದಂತೆ ತಗ್ಗಿನ ಮತ್ತೊಂದು ಕೆರೆಗೆ ನೀರು ಹರಿಯುವ ಕಾಲುವೆ ವ್ಯವಸ್ಥೆಯು ಸ್ಯಾಂಕಿ ವರದಿಯ ಕಾಲದ ಕನ್ನಡಿ. ಈ ನಿರ್ಮಾಣದಲ್ಲಿ ಹೆಚ್ಚಿನವು ಕಣಿವೆ ಕೆರೆಗಳು. ಇತಿಹಾಸ ದಾಖಲೆ ಹಿಡಿದು ಕೆರೆ ದಂಡೆ ಮೇಲೆ ಓಡಾಡಿದರೆ ಪರಂಪರೆಯ ದಾರಿಗುಂಟ ಪಾಠಕ್ಕೆ ನಿಂತ ನಿರ್ಮಾಣ ಕೌಶಲ್ಯಗಳು ಅಪಾರ.
ನಮ್ಮ ದುರದೃಷ್ಟ ನೋಡಿ. ಎತ್ತಿನ ಹೊಳೆ ಯೋಜನೆಗೆ ಸಹಿ ಮಾಡುವವರಿಗೆ ನೀರಿನ ಸಂಕಷ್ಟಗಳ ಸ್ವಾನುಭವವಿಲ್ಲ. ಸಂರಕ್ಷಣಾ ಮಾದರಿಗಳ ಪರಿಚಯವಿಲ್ಲ. ಒಂದು ಸಾಂಸ್ಕೃತಿಕ ಪರಂಪರೆ, ಆ ಪ್ರದೇಶದ ಜನಜೀವನ ನಾಶವಾದರೂ 'ಅದು ತಮಗೆ ಸಂಬಂಧಪಡದಂತೆ ಫೋಸ್ ಕೊಡುವ' ಜನನಾಯಕರು. ಅದನ್ನು ಒಪ್ಪುವ, ಅಪ್ಪುವ ಹಿಂಬಾಲಕರು. ಇದನ್ನು ನೋಡುತ್ತಾ ಸಹಿಸುವ ನಾಗರಿಕರು. ಹಲವು ಕೋಟಿ ರೂಪಾಯಿಗಳ ಯೋಜನೆಗಳಿಂದ ಕಿಸೆ ಭದ್ರಪಡಿಸಿಕೊಳ್ಳುವ ವ್ಯವಸ್ಥೆಗಳು ನಿರಂತರ ನಡೆಯುತ್ತಿವೆ.
ಈಗ ನೋಡಿ ಶರಾವತಿಗೆ ಕನ್ನ..! ಶರಾವತಿ ಜಲಾಶಯದ ನೀರನ್ನು ಎತ್ತಿ ಸಾಗಿಸುವ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. ಸಮಿತಿ ರೂಪುಗೊಂಡಿದೆ. ಕೋಟಿ ರೂಪಾಯಿಗಳ ನಿರೀಕ್ಷೆಗಳ ಧಾವಂತಗಳ ಮುಂದೆ ಕನ್ನಾಡಿನ 'ನೀರಿನ ಕೂಗು' ವಿಧಾನಸೌಧಕ್ಕೆ ಹೇಗೆ ಕೇಳಿಸಿತು? 
(ಉದಯವಾಣಿ-ನೆಲದನಾಡಿ ಅಂಕಣ)
 

0 comments:

Post a Comment