Thursday, September 1, 2016

ಹಲಸಿಗೆ 'ರಾಯಭಾರಿ' ಯೋಗ


             ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ ಶ್ರೀ ಪಡ್ರೆಯವರು ಈಚೆಗೆ 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಪುರಸ್ಕಾರ ಪಡೆದರು. ಕೇರಳದ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಜಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪ್ರಶಸ್ತಿಯನ್ನು ಆಯೋಜಿಸಿದ್ದುವು. ಈ ಸುದ್ದಿಯು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿತು. ಹಿತ್ತಿಲಿನ ಹಲಸಿನ ಪರಿಮಳ ಕಡಲಾಚೆಯೂ ಬೀರಿತು. ಈ ಎಲ್ಲಾ ಖುಷಿಯ ಹಿಂದೆ ಶ್ರೀ ಪಡ್ರೆಯವರ ಮಾಹಿತಿ ಜಾಲಾಡುವಿಕೆಯ ಶ್ರಮ ಅಜ್ಞಾತ.
             'ಅಡಿಕೆ ಪತ್ರಿಕೆ'ಯ ಮೂಲಕ ನಿರಂತರ ಹಲಸಿನ ಕಥನ. ದೇಶ, ವಿದೇಶಗಳ ಮಾಹಿತಿ. ಮೌಲ್ಯವರ್ಧನೆಯ ಗಾಥೆ. ಉದ್ದಿಮೆಗಳ ಪರಿಚಯ. ಹಳ್ಳಿ ಯಶದ ಪ್ರಸ್ತುತಿ. ರುಚಿಗಳ ದಾಖಲಾತಿ. ಹಲಸು ಪ್ರೇಮಿಗಳ-ಉದ್ದಿಮೆದಾರರ ಕಂಪೆನಿಯ ಜತೆ ಸಂಪರ್ಕ. ಪಂಚತಾರಾ ಹೋಟೆಲಿನ ಟೇಬಲ್ ಮೇಲೆ ಇಂದು ಹಲಸಿನ ಪರಿಮಳ ಬೀರಿದೆಯಾದರೆ ಪಡ್ರೆಯವರ ಯೋಜಿತ ಸಂಪರ್ಕಗಳು ಕಾರಣ. ದೂರದ ಹವಾಯಿ ದ್ವೀಪದ ಕೆನ್ ಕನ್ನಾಡಿಗೆ ಬಂದಿರುವುದು ಹಲಸಿನ ಬೆನ್ನೇರಿ! ಆಸ್ಟ್ರೇಲಿಯಾದ ಜ್ಯೂಲಿನ್ ಫ್ಯಾಂಗ್ ಭಾರತದಲ್ಲಿ ಹಲಸು ಹಾಳಾಗುತ್ತಿರುವುದನ್ನು ನೋಡಿ ಮರುಗಿ 'ಅದಕ್ಕೊಂದು ದಾರಿ ತೋರಿಸಬೇಕು' ಎನ್ನುವ ಆಶಯದಿಂದ ಕರಾವಳಿಗೆ ಓಡಿ ಬಂದರು. ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆನ್ ಮೇರಿ ರ್ಯೂ ಈಗ ಮಂಗಳೂರಿಗರಂತೆ ಪರಿಚಿತರು!
            ಕೇರಳದ ವಯನಾಡಿನ 'ಉರವು' ಸಂಸ್ಥೆಯು ಮೊದಲಿಗೆ ಹಲಸು ಮೇಳ ಮಾಡಿತು. ಅದೇ ಜಾಡಿನಲ್ಲಿ ಸಾಗಿದ ಮೇಳದ ವಿನ್ಯಾಸವು ಕನ್ನಾಡಲ್ಲೂ ಪಸರಿಸಿತು. ಎಲ್ಲಿಯವರೆಗೆ ಅಂದರೆ ಕೃಷಿ ವಿಜ್ಞಾನ ಕೇಂದ್ರಗಳಂತಹ ಸರಕಾರಿ ವ್ಯವಸ್ಥೆಯ ಫೈಲಿನೊಳಗೂ ನುಗ್ಗಿತು. ವರುಷಕ್ಕೊಮ್ಮೆ ಕಾಲಾವಧಿಯಾಗಿ ಮೇಳ ನಡೆಸುವ ತಿಂಗಳನ್ನು ಗೊತ್ತು ಮಾಡಿತು. ವಿಶ್ವವಿದ್ಯಾಲಯದ ವರಿಷ್ಠರೂ ಸ್ಪಂದಿಸಿದರು. ಕೃಷಿ ವಿವಿಯ ಆಗಿನ ಕುಲಪತಿ ನಾರಾಯಣ ಗೌಡರ ಉತ್ಸಾಹದಿಂದ ಹಲಸು ಬೆಳೆಗಾರರ ಸಂಘ ರೂಪುಗೊಂಡಿತ್ತು.
            ಹಲಸಿನ ಸುದ್ದಿಗೆ, ಸದ್ದಿಗೆ ಈಗ ಎಂಟು ವರುಷ. ಆರಂಭದಲ್ಲಿದ್ದ 'ನಿಷ್ಪ್ರಯೋಜಕ' ಹಣೆಪಟ್ಟಿ ಕಾಣಿಸುತ್ತಿಲ್ಲ! ಹಲಸಿಗೂ ಮಾನವಿದೆ ಎಂಬ ಅರಿವು ಮೂಡಿದೆ. ಒಂದು ಕಾಲಘಟ್ಟದ ಬಡತನಕ್ಕೆ ಹೆಗಲು ಕೊಟ್ಟ ಹಲಸು ಅಲಕ್ಷ್ಯವಾಗಿತ್ತು. ಯಾವಾಗ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತಿಗೆ ವಿಷಯವಾಯಿತೋ, ಅಂದಿನಿಂದ ನಾಲಗೆ ತುದಿಯ ಮಾತಿಗೆ ವಸ್ತುವಾಯಿತು. ಬಗೆಬಗೆ ರುಚಿಯ ದರ್ಶನವಾಗತೊಡಗಿತು.
            ಎಷ್ಟೋ ಸಲ ದೂರದ ಸುದ್ದಿಗಳು ಸ್ಥಳೀಯವಾಗಿ ಪರಿಣಾಮ ಬೀರುತ್ತದೆ. ಎತ್ತಿ ಹೇಳುವಂತಹ ಅಭಿವೃದ್ಧಿ ಕಾಣದಿದ್ದರೂ, ಒಂದು ರೀತಿಯ ತಂಗಾಳಿ ಸಂಚಲನ ಆಗುತ್ತಲೇ ಇರುತ್ತದೆ. ಊಟದ ಬಟ್ಟಲಿಗೆ, ಸಮಾರಂಭಗಳ ಭೋಜನದ ಎಲೆಗೆ, ತಿಂಡಿ ತಟ್ಟೆಗೆ ಒಂದಾದರೂ ಹಲಸು ಐಟಂ ಅನಿವಾರ್ಯ ಅಂತ ಕಂಡು ಬಂದಿದ್ದರೆ ಅದಕ್ಕೆ ಈ ಆಂದೋಳನಗಳೇ ಕಾರಣ. ಹಲಸು ಮೇಳಗಳಲ್ಲಿ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಹಲಸಿನ ಉತ್ಪನ್ನಗಳನ್ನು ಕಾಣಬಹುದು. ಹಲಸಿನ ರುಚಿ ಗೊತ್ತಿದ್ದ, ಹೊಸ ರುಚಿ ತಯಾರಿಸುವ ಉತ್ಸಾಹವಿದ್ದ ನೂರಾರು ಹೆಣ್ಮಕ್ಕಳಿಗಿಂದು ಹಲಸಿನ ಪರಿಮಳ ಬದುಕು ನೀಡಿದೆ.
           ಅಡಿಕೆ ಪತ್ರಿಕೆಯ ಪ್ರೇರಣೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಉಬರಿನಲ್ಲಿ 'ಹಲಸು ಸ್ನೇಹಿ ಕೂಟ' ರೂಪುಗೊಂಡಿತು. ಬಂಟ್ವಾಳದಲ್ಲಿ 'ಹಲಸು ಪ್ರೇಮಿ ಕೂಟ' ಅಸ್ತಿತ್ವಕ್ಕೆ ಬಂತು. ಕೇರಳದಲ್ಲಿ ಹಲಸಿನ ಉತ್ಪನ್ನಗಳನ್ನು ಜನರಿದ್ದೆಡೆಗೆ ತಲಪಿಸುವ 'ಚಕ್ಕವಂಡಿ' (ಹಲಸಿನ ಬಂಡಿ) ಓಡುತ್ತಿದೆ. ಶಾಲೆಗಳಲ್ಲಿ ವರುಷಕ್ಕೊಮ್ಮೆಯಾದರೂ ಹಲಸಿನ ದಿನವನ್ನು ಆಚರಿಸಲಾಗುತ್ತಿದೆ. ಹಲಸಿನ ಸಂಸ್ಕ್ರರಣೆಯನ್ನು ಕಲಿಸಿಕೊಡುವ ಸಂಪನ್ಮೂಲ ವ್ಯಕ್ತಿಗಳು ತಯಾರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಮಿರಿಯಮ್ ಎಂಬ ಮಹಿಳೆ ಟ್ರಕ್ಕಿನಲ್ಲಿ 'ಲಾ ಜಾಕಾ ಮೊಬೈಲ್' ಎನ್ನುವ ಹೆಸರಿನಲ್ಲಿ ಹಲಸಿನ ಉತ್ಪನ್ನಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಶ್ರೀ ಪಡ್ರೆಯವರ ಹಲಸಿನ ಬಗೆಗಿನ ಮಾಹಿತಿ ಆಂದೋಳನ, ಹಲಸಿನ ಕೆಲಸಗಳು ತನಗೆ ಸ್ಫೂರ್ತಿ ನೀಡಿದೆ ಎನ್ನುತ್ತಾರೆ, ಮಿರಿಯಮ್.
            ಉಬರು ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮರ ಮನೆಯಲ್ಲಿ (2011) ನಡೆದ 'ರುಚಿ ನೋಡಿ ತಳಿ ಆಯ್ಕೆ'ಯೆಂಬ ಮನೆಯಂಗಳದ ಕಲಾಪವು ಐದಾರು ವರುಷಗಳಲ್ಲೇ ಹಲಸಿನ ತೋಟವನ್ನು ಎಬ್ಬಿಸುವ ತನಕ ಜನರನ್ನು ಎಬ್ಬಿಸಿತು. ಉತ್ತಮ ಗುಣಮಟ್ಟದ ಸ್ಥಳೀಯ ಹಣ್ಣುಗಳನ್ನು ಗೊತ್ತು ಮಾಡಿ, ಅವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿತು. ದೂರದೂರಿನ ಹಣ್ಣುಗಳ ರುಚಿಯನ್ನು ಪರಿಚಯಿಸಿತು. ಕಸಿ ಗಿಡಗಳತ್ತ ಜನರ ಒಲವು ಹೆಚ್ಚಾಯಿತು. ಇನ್ನೇನು, ಒಂದೆರಡು ವರುಷದಲ್ಲಿ ಊರಿನ, ಹೊರ ಊರಿನ ತಳಿಗಳು ಫಲ ಕೊಡಬಹುದು.
            ಹಲಸು ಸ್ನೇಹಿ ಕೂಟವು ಈಚೆಗೆ ತನ್ನ ಸದಸ್ಯ ಕುಟುಂಬವನ್ನು ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಸೇರಿಸಿತು. ಹಲಸಿನ ಒಂದೊಂದು ಐಟಂ ತಯಾರಿಸಿ ತರಬೇಕೆನ್ನುವ ಶರ್ತ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಕುಟುಂಬಗಳು ಭಾಗವಹಿಸಿದ್ದರು. ಅಬ್ಬಾ..... ನಲವತ್ತಕ್ಕೂ ಮಿಕ್ಕಿದ ವಿವಿಧ ರುಚಿಯ ಹಲಸಿನ ಐಟಂಗಳು!  ಹಲಸಿನ ಬೀಜದ ಚಟ್ನಿಪುಡಿ, ಬೋಂಡ, ಬರ್ಫಿ, ಪರೋಟ, ಉಪ್ಕರಿ; ಹಲಸಿನ ಹಣ್ಣಿನ ಇಡ್ಲಿ, ಕೇಸರಿಬಾತ್, ತುಪ್ಪ, ತುಕುಡಿ, ಸಕ್ಕರೆ ಬೆರಟಿ, ಹಲಸಿನ ಕಾಯಿಯ ಮತ್ತು ಹಣ್ಣಿನ ಹಲ್ವ...
           ಸದ್ದಿಲ್ಲದ ಕಾರ್ಯಕ್ರಮ. ಐದಾರು ವರುಷದ ಹಲಸಿನ ಕಾರ್ಯಕ್ರಮಗಳ ಫಲಶ್ರುತಿ. ಅಮ್ಮಂದಿರ ಮನಸ್ಸಿನೊಳಗೆ ಹಲಸಿನ ಪರಿಮಳ ಇಳಿದರೆ, ಅದು ಅಡುಗೆ ಮನೆ ಪ್ರವೇಶಿಸುವುದು ಖಚಿತ. ಇವೆಲ್ಲಾ ದೊಡ್ಡ ಮಟ್ಟದಲ್ಲಿ ಮಾಡಿದರೆ ಖಂಡಿತಾ ಮಾರಿಹೋಗುವಂತಹ ರುಚಿ, ಶುಚಿವುಳ್ಳವು. ಮಾರುಕಟ್ಟೆ ಅಲ್ಲದಿದ್ದರೂ ಈ ರುಚಿಗಳು ಊಟದ ಬಟ್ಟಲಿನಲ್ಲಿ ಸಿಗುವಂತಿರಬೇಕು. ಹೊಸ ಹೊಸ ರುಚಿಗಳ ಅನ್ವೇಷಣೆಯ ಮನಃಸ್ಥಿತಿ ಇದೆಯಲ್ಲಾ, ಒಂದು ಆಂದೋಳನ ಕಟ್ಟಿಕೊಟ್ಟ ಫಲಶ್ರುತಿ.
ಹಿತ್ತಿಲಿನ ಹಲಸು ಅಂಗಳಕ್ಕಿಳಿದು, ಜಗಲಿಯೇರಿ, ದೇಶ ಸುತ್ತಾಡಿ, ಕಡಲಾಚೆಗೂ ಹಾರಿ 'ಅಂತಾರಾಷ್ಟ್ರೀಯ ರಾಯಭಾರಿ'ಯೊಬ್ಬರನ್ನು ರೂಪಿಸಿತು ಎಂದರೆ ಒಟ್ಟೂ ಆಂದೋಳನದ ಯಶ.
(ಹೊಸದಿಗಂತ ಅಂಕಣ/ಮಾಂಬಳ/೧೦-೮-೨೦೧೬)

0 comments:

Post a Comment