(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)
ತನ್ನ ಏಳ್ಗೆಗೆ ತಾನೇ ಶಿಲ್ಪಿ - 2
ಲೇ : ಪದ್ಯಾಣ ನಾರಾಯಣ ಭಟ್
(ಗಣಪತಿ
ಭಟ್ಟರ ಅಣ್ಣ)
ಈ ಸಂದರ್ಭದಲ್ಲಿ ಅಪ್ಪ, ಅಮ್ಮ ಮತ್ತು ನಾನು ಪುಟ್ಟಪರ್ತಿಯ ಪೂಜ್ಯ ಸತ್ಯಸಾಯಿಬಾಬಾ ಅವರ ದರ್ಶನಕ್ಕೆ ಪ್ರವಾಸ ಹೋಗುವುದೆಂದು ನಿಶ್ಚಯವಾಯಿತು. ಚಿಕ್ಕಪ್ಪ ಶಂಕರನಾರಾಯಣ ಭಟ್ಟರು ಸ್ವಾಮಿಯ ಮಹಿಮೆಯನ್ನು ಆಗಾಗ್ಗೆ ಹೇಳುತ್ತಿದ್ದರು. ‘ನಮಗೂ ಒಮ್ಮೆ ಹೋಗಬೇಕು’ ಎನ್ನುವ ತುಡಿತ ಅಮ್ಮನಲ್ಲಿತ್ತು. ಅದು ಈಡೇರುವ ಕ್ಷಣ ಪ್ರಾಪ್ತವಾಯಿತು. ಪುಟ್ಟಪರ್ತಿಗೆ ಹೋಗಿ, ಅಲ್ಲಿ ಸ್ವಾಮಿಯ ದರ್ಶನ ಮಾಡುವಾ, “ಮಕ್ಕಳ ವಿಷಯದಲ್ಲಿ ನಿನಗೆ ಸ್ವಾಸ್ಥ್ಯತೆ ಇಲ್ಲವಲ್ಲಾ. ಅದೆಲ್ಲಾ ನಾನು ನೋಡಿಕೊಳ್ಳುತ್ತೇನೆ. ದೇವರಲ್ಲಿ ನಂಬುಗೆ ಇಡು,” ಎಂದು ತಾಯಿಯಲ್ಲಿ ಸ್ವಾಮೀಜಿ ಹೇಳಿದರು. ಎಲ್ಲರಿಗೂ ಆಶ್ಚರ್ಯ! ನಮ್ಮ ಮನೆಯ ವಿಷಯ ಹೇಗೆ ಇವರಿಗೆ ಗೊತ್ತಾಯಿತು! ಎಲ್ಲವೂ ದೈವೇಚ್ಛೆ. ಕಾಣದ ಶಕ್ತಿಗೆ ಮನಸಾರೆ ವಂದಿಸಿದೆವು. ಊರಿಗೆ ಮರಳಿದೆವು.
ವಾರ ಕಳೆದಿರಬಹುದಷ್ಟೇ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿಯ ಸುದ್ದಿಯೊಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಅಮ್ಮ ಗಮನಿಸಿದ್ದರು. ಒಂದು ದಿವಸ “ನಾನು ಯಕ್ಷಗಾನ ಕಲಿಯಲು ಧರ್ಮಸ್ಥಳಕ್ಕೆ ಹೋಗುತ್ತೇನೆ,” ಎಂದು ಗಣಪ ಹೇಳಿದಾಗ, ಪುಟ್ಟಪರ್ತಿಯ ಸ್ವಾಮಿಯ ನೆನಪಾಗಿ ಅಮ್ಮ ಆನಂದಾಶ್ರು ಸುರಿಸಿದ್ದರು. ಈತ ಶಾಲೆಗೂ ಬೇಡ, ಹೇಳಿದ್ದೂ ಕೇಳುವುದಿಲ್ಲ. ಧರ್ಮಸ್ಥಳಕ್ಕೆ ಹೋಗಲಿ ಎಂದು ಅಪ್ಪ ಒಪ್ಪಿಗೆ ಕೊಟ್ಟರು. ಅಮ್ಮ ಹರಸಿ ಕಳುಹಿಸಿದರು.
ಆ ಮೇಲಿನ ಆತನ ಬದುಕು ಇತಿಹಾಸ. ಮಾಂಬಾಡಿ ನಾರಾಯಣ ಭಾಗವತರ ಗರಡಿಯಲ್ಲಿ ಬೆಳೆದ. ಅವರ ಪ್ರಿಯ ಶಿಷ್ಯನಾಗಿ ರೂಪುಗೊಂಡ. ಆಚಾರ, ವಿಚಾರಗಳು ಬದಲಾಗತೊಡಗಿದುವು. ಮನಸ್ಸಿನಲ್ಲಿ ಯಕ್ಷಗಾನ ಒಂದೇ, ಬೇರೆ ಯಾವ ವಿಷಯಗಳಿರಲಿಲ್ಲ. ಮೊದಲಿನ ಪೋಕ್ರಿತನ ಮಾಯವಾಗಿತ್ತು. ತರಬೇತಿ ಮುಗಿಸಿ ಊರಿಗೆ ಬಂದಾಗ ‘ಬದಲಾದ ಗಣಪ’ನನ್ನು ನಿಬ್ಬೆರಗಾಗಿ ನೋಡಿದ ದಿನಗಳು ನೆನಪಾಗುತ್ತವೆ. ಮನೆಯಲ್ಲಿ ಪ್ರಾಕ್ಟೀಸ್ ಮಾಡುವಾಗ ತಂದೆಯೂ ಸಾಥ್ ಆಗುತ್ತಿದ್ದರು.
ಮುಂದೆ ಪುಟ್ಟಪರ್ತಿ ಸ್ವಾಮಿಯವರ ಸನ್ನಿಧಾನದಲ್ಲಿ ಗಣಪ ಭಾಗವತಿಕೆ ಮಾಡಿದ್ದಾನೆ. ಮೇಳದ ತಿರುಗಾಟಗಳು ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾದುವು. ಆತ ಹೇಗೆ ಕಲಿತ ಎನ್ನುವುದೇ ಬಿಡಿಸಲಾಗದ ಒಗಟು. ಹಿರಿಯರ ಒಡನಾಟ ಪ್ರಾಪ್ತವಾಯಿತು. ತನ್ನ ಘನಸ್ತಿಕೆಯನ್ನು ಉಳಿಸಿಕೊಳ್ಳಲು ಸ್ವಭಾವದಲ್ಲಿ ಸ್ವಯಂ ಬದಲಾವಣೆ ಮಾಡಿಕೊಂಡು ತನ್ನ ಏಳ್ಗೆಗೆ ತಾನೇ ಶಿಲ್ಪಿಯಾದ. ಒಳ್ಳೆಯದಾಗಬೇಕೆನ್ನುವ ಅನಿವಾರ್ಯವು ಆತನನ್ನು ಒಳ್ಳೆಯವನನ್ನಾಗಿ ರೂಪಿಸಿತು.
ಅನೇಕ ಕಲಾವಿದರು ಮನೆಗೆ ಬರಲಾರಂಭಿಸಿದರು. ಉದ್ಧಾಮ ದಿಗ್ಗಜರ ಸಂಪರ್ಕ ಮನೆಯವರಿಗಾಯಿತು. ಮನೆಯ ವಾತಾವರಣವು ಬದಲಾಯಿತು. ಮನೆಮಂದಿಯು ಗಣಪನ ಅಭಿಮಾನಿಗಳಾದೆವು. ಆತನ ಭಾಗವತಿಕೆಗೆ ಖಾಯಂ ಶ್ರೋತೃಗಳಾದೆವು. ಆತ ಪದ್ಯಾಣಕ್ಕೆ ಹೆಸರು ತಂದವ ಎನ್ನುವ ಭಾವನೆ ಎಲ್ಲರಲ್ಲೂ ಮೂಡಿತು.
ಬಹುತೇಕ ಭಾಗವತರನ್ನು ಗಮನಿಸಿ. ಎಲ್ಲರಿಗೂ ಒಂದಲ್ಲ ಒಂದು ವಿಧದ ಸ್ಥಾಪಿತ ಪ್ರೇಕ್ಷಕ ವರ್ಗವಿದೆ. ಗಣಪನಿಗೆ ಹಾಗಲ್ಲ. ಎಲ್ಲಾ ವರ್ಗದ ಅಭಿಮಾನಿಗಳೇ ಪ್ರೇಕ್ಷಕರು.