Tuesday, August 18, 2020

ಪುತ್ತೂರಿಗೇ ವಿಶೇಷ ‘ಕರಿಯಾಲ ಗುಜ್ಜೆ ಹಲಸು’

ಪುತ್ತೂರು ಸಾಮೆತ್ತಡ್ಕ ಕರಿಯಾಲದ ಮುಂಡತ್ತಜೆ ಶಿವರಾಮ ಭಟ್ಟರ ಮನೆ ಸನಿಹವೇ ಒಂದು ಹಲಸಿನ ಮರ ಇದೆ. ಇದಕ್ಕೆ ಅರ್ಧ ಶತಮಾನದ ಹರೆಯ. ಇದರ ಎಳೆಯ ಗುಜ್ಜೆಗೆ ಬಹುಬೇಡಿಕೆ. ರುಚಿ ಗೊತ್ತಿದ್ದವರು ಹುಡುಕಿ ಬರುತ್ತಾರೆ. ಪುತ್ತೂರಿನ ಒಂದೆರಡು ತರಕಾರಿ ಅಂಗಡಿಗಳಲ್ಲಿ ಖಾಯಂ ಆಗಿ ಸಿಗುವಷ್ಟು ಜನಪ್ರಿಯ.

“ಐವತ್ತು ವರುಷ ಕಳೆಯಿತು. ಮಾಸ್ಟರ್ ಅಚ್ಯುತ ರಾವ್ ಅವರಲ್ಲಿಂದ ತಂದ ಹಲಸಿನ ಹಣ್ಣು ತುಂಬಾ ರುಚಿಯಾಗಿತ್ತು. ಅದರ ಬೀಜದಿಂದ ಮೂರು ಸಸಿಗಳು ಬೆಳೆದಿದ್ದುವು. ಎರಡರಲ್ಲಿ ಹಣ್ಣು ರುಚಿಯಾಗಿದ್ದರೆ ಇದರ ಎಳೆ ಗುಜ್ಜೆಯೇ ರುಚಿ. ಹಾಗಾಗಿ ಕಾಯಿ ಹಣ್ಣಾಗುವ ತನಕ ಮರದಲ್ಲಿ ಉಳಿಯುವುದೇ ಇಲ್ಲ! ಇತರ ಎರಡು ಮರಗಳ ಗುಜ್ಜೆಯು ಇದರಷ್ಟು ರುಚಿಯಲ್ಲ,ಮರದ ಚರಿತ್ರೆ ತಿಳಿಸುತ್ತಾರೆ ಶಿವರಾಮ ಭಟ್ (91).

ಈ ಮರದ ವಿಶೇಷ ಅಂದರೆ ಇದು ಬೇರೆಲ್ಲೂ ಎಳೆ ಹಲಸು ಇಲ್ಲದಿರುವಾಗಲೇ ತನ್ನ ಬೆಳೆ ಕೊಡುತ್ತದೆ! ನವೆಂಬರ್ ಆರಂಭಕ್ಕೆ ಮಿಡಿ ಬಿಡಲು ಶುರು. ಮಾರ್ಚ್ ತನಕ ಗುಜ್ಜೆಗಳ ಗೆಜ್ಜೆ.  ಅದೂ ಬುಡದಿಂದಲೇ ಗೊಂಚಲು ಗೊಂಚಲು. ಸೊಳೆಗಳು ಒತ್ತೊತ್ತಾಗಿ ಇರುತ್ತವೆ. ಪೊಳ್ಳು ಇಲ್ಲವೇ ಇಲ್ಲ. ಕಿರಿಕಿರಿ ಮಾಡುವಷ್ಟು ಮೇಣವಿಲ್ಲ. ಸಿಡಿಲು ಬಡಿದು ಎರಡು ಗೆಲ್ಲುಗಳು ನಾಶವಾಗಿವೆ. 

“ಎಲ್ಲಾ ಗುಜ್ಜೆಗಳಂತೆ ಇದಲ್ಲ. ಒಂದೇ ಹಬೆಯಲ್ಲಿ ಬೇಯುತ್ತದೆ. ಎಲ್ಲಾ ಪದಾರ್ಥಕ್ಕೂ ಒಗ್ಗುವ ಗುಣ. ಗಸಿ, ಮಜ್ಜಿಗೆ ಹುಳಿ ರುಚಿ. ಇದರ ಮಧ್ಯದ ಗೂಂಜಿ ಮೆದು. ನಮ್ಮಲ್ಲಿ ಗುಜ್ಜೆಯ ಮಂಚೂರಿ ಮಾಡುವುದೆಂದರೆ ಸಡಗರ. ನೆಂಟರು ಬಂದಾಗಲಂತೂ ಇದರದ್ದೇ ಮಂಚೂರಿ. ಅಷ್ಟಾದರೂ ಹಲಸು ಪ್ರಚಾರವಾಗಲಿ”, ಭಟ್ಟರ ಸೊಸೆ ಉಮಾ ಪ್ರಸನ್ನ ಅಡುಗೆ ಮನೆಯಿಂದ ದನಿ ಸೇರಿಸಿದರು.

ಉಮಾ ಮುಂದುವರಿಸುತ್ತಾರೆ, “ಉಳಿದೆಲ್ಲಾ ಎಳೆ ಹಲಸನ್ನು ಒಂದು ಹಬೆಯಲ್ಲಿ ಬೇಯಿಸಿದ ನಂತರವೇಪೋಡಿ ಮಾಡುತ್ತಾರೆ. ಇದನ್ನು ಬೇಯಿಸಬೇಕಾಗಿಲ್ಲ. ನೇರವಾಗಿ ತುಂಡು ಮಾಡಿ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯುವಷ್ಟರಲ್ಲಿ ಬೆಂದುಬಿಡುತ್ತದೆ. ಗೋಬಿ ಮಂಚೂರಿ ಎಲ್ಲರಿಗೂ ಗೊತ್ತು. ಗುಜ್ಜೆ ಮಂಚೂರಿ ಮಾಡಿ ಬಡಿಸಿದಾಗ ಅದು ಗೋಬಿಯದ್ದೇ ಎಂದು ಗ್ರಹಿಸಿ ಸೇವಿಸುತ್ತಾರೆ. ತಿಂದ ನಂತರ ಗುಜ್ಜೆಯ ಗುಟ್ಟು ಹೇಳುತ್ತೇನೆ.” ಪುತ್ತೂರಿನ ಹೋಟೇಲುಗಳ ಪರಿಚಿತ ಯಜಮಾನರುಗಳಿಗೆ ಮಂಚೂರಿಯನ್ ಮಾಡುವಂತೆ ಪ್ರೇರೇಪಿಸಲು ಪತಿ ಪ್ರಸನ್ನರನ್ನು ಉಮಾ ನಿತ್ಯ ಒತ್ತಾಯಿಸುತ್ತಿದ್ದಾರೆ!

ಒಂದು ಋತುವಿನಲ್ಲಿ ಏನಿಲ್ಲವೆಂದರೂ ಐನೂರಕ್ಕೂ ಮಿಕ್ಕಿ ಕಾಯಿ ಬಿಡುತ್ತದೆ. ಸಿಕ್ಕ ಫಸಲಿನಲ್ಲಿ ಶೇ.75ರಷ್ಟು ಮಾರಾಟ. ಮಿಕ್ಕುಳಿದ ಗುಜ್ಜೆಯು ಬಹುಪಾಲು ಮನೆ ಬಳಕೆ. ಮತ್ತಷ್ಟು ಅಪ್ತರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಉಡುಗೊರೆ. ಒಂದೊಂದು ಗುಜ್ಜೆ ಒಂದರಿಂದ ಒಂದೂವರೆ ಕಿಲೋ ತೂಗುವಷ್ಟು ಗಾತ್ರ. ಕಿಲೋಗೆ ಇಪ್ಪತ್ತರಿಂದ ಇಪ್ಪತ್ತೈದು ರೂಪಾಯಿ ದರ ಸಿಗುತ್ತದೆ.

“ಹಲಸಿನ ಕಾಯಿಯನ್ನು ಗುಜ್ಜೆಯ ಹಂತದಲ್ಲಿಯೆ ಕೊಯ್ದರೆ ಮುಂದಿನ ಸೀಸನ್ನಿನಲ್ಲಿ ಇತರ ತಳಿಗಳಿಗಿಂತ  ಬೇಗ ಮಿಡಿ ಬಿಡುವುದನ್ನು ಗಮನಿಸಿದ್ದೇನೆ. ಅಕ್ಟೋಬರಿನಲ್ಲಿ ಮಿಡಿ ಬಿಟ್ಟದ್ದೂ ಇದೆ. ಅಕಾಲದಲ್ಲಿ ಗುಜ್ಜೆ ಸಿಕ್ಕರೆ ಬೇಡಿಕೆಯೂ ಹೆಚ್ಚು. ಜತೆಗೆ ದರವೂ.ಇದು ಶಿವರಾಮ ಭಟ್ಟರ ಅನುಭವ.

ಹಿಂದೆ ಮುಖ್ಯ ರಸ್ತೆಯ ಏಳ್ಮುಡಿಯಲ್ಲಿ ದಿ. ಅಶೋಕ ನಾಯಕರ ತರಕಾರಿ ಅಂಗಡಿಯಿತ್ತು. ಅವರು ಆಗಾಗ್ಗೆ ಬಂದು ಗುಜ್ಜೆಯನ್ನು ಅವರೇ ಕೊಯ್ದು ಒಯ್ಯುತ್ತಿದ್ದರು. ನಿಶ್ಚಿತವಾದ ಗಿರಾಕಿಗಳಿದ್ದರು. ಅವರಿಂದಲೇ ಹೆಚ್ಚು ಪ್ರಚಾರವಾಯಿತು. ಕೊಂಕಣಸ್ಥರು ಎಳೆ ಹಲಸಿನ ಪೋಡಿಯನ್ನು ಬಹಳವಾಗಿ ಇಷ್ಟಪಡುತ್ತಾರೆ. ಹೀಗೆ ಕರಿಯಾಲದ ಗುಜ್ಜೆ ಬಾಯಿಂದ ಬಾಯಿಗೆ ಪ್ರಚಾರ ಪಡೆಯಿತು. ಈಗ ತರಕಾರಿ ಅಂಗಡಿಯವರು ಕೇಳಿಕೊಂಡು ಬರುತ್ತಾರೆ. ಮದುವೆ ಸಮಾರಂಭಗಳಿದ್ದರೆ ಹುಡುಕಿ ಬರುತ್ತಾರೆ.

ನನಗೂ ವಯಸ್ಸಾಯಿತು. ಮರಕ್ಕೂ ವಯಸ್ಸಾಯಿತು. ಇದರ ಕಸಿ ಗಿಡ ಮಾಡಬೇಕಿದೆಎನ್ನುತ್ತಾ ಶಿವರಾಮ ಭಟ್ಟರು ಬಾಯ್ತುಂಬಾ ನಕ್ಕರು. ಅಪೂರ್ವ ಸಸ್ಯಪ್ರೇಮಿಯಾದ ಇವರು ವಿಶೇಷ ಜಾತಿಯ ಹರಿವೆಯೊಂದನ್ನು ಪ್ರತಿ ವರ್ಷ ಎಚ್ಚರದಿಂದ ಬೆಳೆಸಿ ಕಾಲು ಶತಮಾನ ಸಂರಕ್ಷಿಸಿದ್ದರು . ದಶಕಗಳ ಹಿಂದೆ ಹರಿವೆ ತಳಿಗೆ ಅಡಿಕೆ ಪತ್ರಿಕೆಕರಿಯಾಲ ಹರಿವೆ ಎಂದೇ ಹೆಸರಿಟ್ಟಿತ್ತು. ಈ ತಳಿ ಈಗಲೂ ತುಂಬಾ ಜನಪ್ರಿಯ.

 ಹಾಗೆಯೇ ಪೂರ್ತಿ ಅಕಾಲದಲ್ಲೇ ಉತ್ತಮ ಗುಣಮಟ್ಟದ ಗುಜ್ಜೆ ಕೊಡುವ ಇವರ ಹಲಸಿನ ತಳಿಯ ಕಸಿ ಮಾಡಿ ಊರಿನಲ್ಲಿ ಹಬ್ಬಿಸಬಹುದು. ಈ ತಳಿಗೆ ಕರಿಯಾಲ ಗುಜ್ಜೆತಳಿ ಎಂದೇ ಹೆಸರಿಡುವಂತೆ ಅಡಿಕೆ ಪತ್ರಿಕೆ ಸಲಹೆ ಮಾಡುತ್ತಿದೆ.


 

0 comments:

Post a Comment