ನಾಗೇಂದ್ರ ಸಾಗರ್ ಕೃಷಿಕರು. ಸಾಗರದ ಸನಿಹದ ವರದಾಮೂಲ-ಚಿಪ್ಲಿಯವರು. ಸ್ವ-ಶ್ರಮದ ಬದುಕು. ಅವರ ಸಹಾಯಕ ಉದಯ. ಇವರ ಮಗಳು ನಿಶಾ ಈಗ ಎಸ್.ಎಸ್.ಎಲ್.ಸಿ. ಯಾ ಮೆಟ್ರಿಕ್. ಪ್ರಸ್ತುತ ಕೊರೊನಾದಿಂದಾಗಿ ಶಾಲೆಗಳು ಆರಂಭಗೊಂಡಿಲ್ಲ. ನೇರ ಪಾಠದ ಬದಲಿಗೆ ಆನ್ಲೈನ್ ತರಗತಿಗಳು ಶುರುವಾಗಿವೆ. ಅದು ಸ್ಮಾರ್ಟ್ ಫೋನ್, ಟಿವಿ ಹೊಂದಿದವರಿಗೆ ಅನುಕೂಲ. ನಿಶಾಳಲ್ಲಿ ಇದ್ಯಾವುದೂ ಇಲ್ಲದೆ ಪಾಠದಿಂದ ವಂಚಿತಳಾಗಿದ್ದಳು.
ಮಗುವಿನ ಮನಸ್ಸನ್ನರಿತ ನಾಗೇಂದ್ರರು ರೇಖಾಳಿಗೆ ತನ್ನಲ್ಲಿದ್ದ ಹೆಚ್ಚುವರಿ ಮೊಬೈಲನ್ನು ನೀಡಿದರು. ಅದು 3ಜಿ ಸೆಟ್ ಆಗಿತ್ತು. ಯಾಕೋ ಅದು ಉಪಯೋಗಕ್ಕೆ ಬರಲಿಲ್ಲ. ಈ ವಿಚಾರವನ್ನು ಜಾಲತಾಣದಲ್ಲಿ ಬರೆದರು. ತಕ್ಷಣ ಸ್ಪಂದಿಸಿದ ಸ್ನೇಹಿತರೊಬ್ಬರು ಮೊಬೈಲು ಕಳುಹಿಸಿಕೊಟ್ಟರು. ಇದು ನಿಶಾಳಿಗೆ ಆನ್ಲೈನ್ ತರಗತಿ ಕಲಿಕೆಗೆ ನೆರವಾಯಿತು. ನಿಶಾ ಈಗ ಖುಷ್. ಈ ಖುಷಿಯು ನಾಗೇಂದ್ರರ ಮನದೊಳಗೆ ಹೊಸ ಆಭಿಯಾನದ ಬೀಜವೊಂದನ್ನು ಹುಟ್ಟು ಹಾಕಿತು. ಇವಳಂತೆ ಸ್ಮಾರ್ಟ್ ಫೋನ್ ಹೊಂದಿರದೆ ಆನ್ಲೈನ್ ಪಾಠದಿಂದ ದೂರವಾಗಿರುವ ಮಕ್ಕಳ ಮನಸ್ಸಿನ ಕೊರಗು ಕಾಡಲಾರಂಭಿಸಿತು.
ಬಹುತೇಕರು ಒಂದೋ ಎರಡೋ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೆಂಡತಿಗೊಂದು, ಮಗಳಿಗೊಂದು, ಮಗನಿಗೊಂದು ಮೊಬೈಲ್. ಬೇಕಾದರೆ ಇನ್ನೊಂದೆರಡು ಹೆಚ್ಚುವರಿ. ಐದಾರು ತಿಂಗಳಲ್ಲಿ ಅಪ್ಡೇಟ್ ತಂತ್ರಜ್ಞಾನದ ಹೊಸ ಮೊಬೈಲ್ ಬುಕ್ ಆಗಿರುತ್ತದೆ. ಹಳೆಯದು ಉತ್ತಮ ಸ್ಥಿತಿಯಲ್ಲಿದ್ದರೂ ಬದಿಗೆ ಸರಿಯುತ್ತದೆ. ಹೀಗೆ ಸರಿದ, ಸರಿಯುತ್ತಿರುವ ಮೊಬೈಲುಗಳನ್ನು ಸಂಗ್ರಹಿಸಿ, ಮೊಬೈಲ್ ವಂಚಿತ ವಿದ್ಯಾರ್ಥಿಗಳಿಗೆ ಹಂಚಿದರೆ ಅನುಕೂಲ. ಈ ಯೋಚನೆಯನ್ನು ಫೇಸ್ಬುಕ್ಕಿನಲ್ಲಿ ಹರಿಯಬಿಟ್ಟರು. ಹತ್ತಾರು ಮಂದಿ ಸ್ಪಂದಿಸಿದರು. ಈ ವಿಚಾರಕ್ಕೆ ಮಾಧ್ಯಮ ಬೆಳಕು ಬಿತ್ತು.
ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಎಪ್ಪತೈದಕ್ಕೂ ಮಿಕ್ಕಿ ಸಹೃದಯಿಗಳಿಂದ ಆಶ್ವಾಸನೆಗಳು ಬಂದುವು. ಈಗಾಗಲೇ ಆತ್ಮೀಯರು, ಸ್ನೇಹಿತರಿಂದ ಪಡೆದ 15-20 ಮೊಬೈಲುಗಳು ವಿದ್ಯಾರ್ಥಿಗಳ ಕೈಸೇರಿವೆ. ಆಶ್ವಾಸನೆ ನೀಡಿದವರಿಂದ ಮೊಬೈಲು ಪಡೆಯಬೇಕಷ್ಟೇ. ಕೆಲವರು ಹೊಸತನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೊರಗು ದೂರವಾಗುತ್ತಿದೆ. ಎಂಬ ಖುಷಿಯನ್ನು ಹಂಚಿಕೊಂಡರು ನಾಗೇಂದ್ರ.
ಸಾಗರ ತಾಲೂಕಿನಲ್ಲಿ ಮೂವತ್ತೆಂಟು ಸರಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಅಭಿಯಾನದ ಸವಲತ್ತು ಗ್ರಾಮೀಣರಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ನಗರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅವಶ್ಯ. ಅದರಲ್ಲೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೊದಲಾದ್ಯತೆ. ಕೃಷಿಕರ ಮಕ್ಕಳಲ್ಲೂ ಮೊಬೈಲ್ ಇಲ್ಲದವರೂ ಇದ್ದಾರೆ. ಅವರಿಗೆ ಮೊಬೈಲ್ ಇಲ್ಲ ಎನ್ನಲು ಮುಜುಗರ. ಅಂತಹವರು ಯಾರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಪ್ರತಿ ಮಗುವಿನ ಡಾಟಾ ಇದ್ದೇ ಇರುತ್ತದೆ. ಅವರ ನೆರವಿನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸುವ ಕೆಲಸ ಆಗುತ್ತಿದೆ. - ನಾಗೇಂದ್ರ ಸಾಗರ್.
ದಾನಿಗಳಿಂದ ಮೊಬೈಲು ಪಡೆದ ತಕ್ಷಣ ಅವುಗಳ ಕ್ಷಮತೆಯ ಪರೀಕ್ಷೆ. ಬ್ಯಾಟರಿ ಕೆಟ್ಟರೆ ಹೊಸ ಬ್ಯಾಟರಿ ಅಳವಡಿಕೆ. ಜತೆಗೆ ಚಾರ್ಜರ್ ಇಲ್ಲದಿದ್ದರೆ ಹೊಸತನ್ನು ಒದಗಿಸುವುದು - ಈ ಎಲ್ಲಾ ಕೆಲಸವನ್ನು ನಾಗೇಂದ್ರ ಕುಟುಂಬ (ಮಡದಿ ವಾಣಿ, ಮಗಳು ಶ್ರಾವ್ಯ) ನಿರ್ವಹಿಸುತ್ತಿದೆ. ಕೆಲವು ಹಳ್ಳಿಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ. ಅಂತಹ ಪ್ರದೇಶದ ಮಕ್ಕಳು ನೆಟ್ ವರ್ಕ್ ಇರುವಲ್ಲಿ ಒಂದಾಗಿ ಆನ್ಲೈನ್ ತರಗತಿಗೆ ಹಾಜರಾಗುತ್ತಾರೆ. ಈಗಾಗಲೇ ಶಿಕ್ಷಣ ಇಲಾಖೆಯು 'ವಠಾರ ತರಬೇತಿ' ಪ್ರಕ್ರಿಯೆಯನ್ನು ಅನುಷ್ಠಾನಿಸುತ್ತಿದೆ.
“ಶಾಲೆಗೆ ನಿಯಮಿತವಾಗಿ ಬರುವ ಮತ್ತು ಕಲಿಕಾ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುರುತಿಸಿ ಅಂತಹವರಿಗೆ ಮೊದಲು ಮೊಬೈಲ್ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ. ಮೊಬೈಲ್ ಅಲ್ಲದೆ ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ.. ಗಳನ್ನು ಕೂಡಾ (ಹೊಸದು, ಬಳಸಿದ್ದು) ನೀಡಲು ಮುಂದೆ ಬಂದಿರುವುದು ಉತ್ತೇಜಿತ ಬೆಳವಣಿಗೆ. ವೈಯಕ್ತಿಕ ನೆಲೆಯ ಈ ಅಭಿಯಾನಕ್ಕೆ ಶಿಕ್ಷಣಾಧಿಕಾರಿಗಳು ಕೂಡಾ ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ. ಏನಿಲ್ಲವೆಂದರೂ ಸಾಗರ ತಾಲೂಕಿನಲ್ಲಿ ಒಂದು ಸಾವಿರ ಮೊಬೈಲ್ಗಳ ಅವಶ್ಯಕತೆಯಿದೆ” ಎನ್ನುತ್ತಾರೆ.
ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಚಟುವಟಕೆಗಳನ್ನು ನಡೆಸುತ್ತಿರುವ ತನ್ನ 'ಶ್ರಾವಣ ಚಾವಡಿ' ಸಂಸ್ಥೆಯಡಿ ಈ ಅಭಿಯಾನವನ್ನು ನಾಗೇಂದ್ರ ನಡೆಸುತ್ತಿದ್ದಾರೆ. ಈ ಅಭಿಯಾನದ ಬಗ್ಗೆ ತಿಳಿದ ಸಾಗರದ ಹೊರಗಿನ, ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿ ಪೋಷಕರ ಕಿವಿಗೂ ತಲುಪಿದೆ. 'ನಮಗೂ ಕೊಡಿಸಿ' ಎನ್ನುತ್ತಿದ್ದಾರಂತೆ. ಏನಿದ್ದರೂ ಸಾಗರ ತಾಲೂಕಿಗೆ ಮೊದಲ ಪ್ರಾಶಸ್ತ್ಯ. ಮಿಕ್ಕಡೆಯದ್ದು ಬಳಿಕ. ಕೆಲವರು ನಗದು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ನಾಗೇಂದ್ರರು ಅಂತಹ ಕೊಡುಗೆಯನ್ನು ನಯವಾಗಿ ತಿರಸ್ಕರಿಸಿ, 'ನೀವೇ ಮೊಬೈಲು ಖರೀದಿಸಿ ಕೊಟ್ಟುಬಿಡಿ' ಎಂದು ವಿನಂತಿಸಿದ್ದಾರೆ. ಕಾರಣ, ನಗದು ಅಂದಾಗ ಹಲವಾರು ಊಹಾಪೋಹಗಳು ರಿಂಗಣಿಸುವ ಅಪಾಯದ ಎಚ್ಚರ ಇವರಲ್ಲಿದೆ.
ಇದೊಂದು ಏಕವ್ಯಕ್ತಿ ಅಭಿಯಾನ. ಚಿಣ್ಣರು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಶೈಕ್ಷಣಿಕ ಎಚ್ಚರ. ಒಂದೆರಡು ತಿಂಗಳಿನಲ್ಲಿ ನೂರು ವಿದ್ಯಾರ್ಥಿಗಳನ್ನು ತಲಪಬೇಕೆನ್ನುವ ಗುರಿ. ಈಗಾಗಲೇ ದಾನಿಗಳು ಮುಂದೆ ಬಂದಿರುವುದರಿಂದ ಗುರಿ ತಲುಪಲು ಕಷ್ಟವಿಲ್ಲ. ಕೋರೋನಾ ಸಂಕಟದ ಕಾಲದ ನಾಗೇಂದ್ರರ ಅಭಿಯಾನ ಶ್ಲಾಘನೀಯ.
(ನಾಗೇಂದ್ರ : 81472 99353)
0 comments:
Post a Comment