Thursday, August 20, 2020

ಹಸಿರು ಧ್ಯಾನದಿಂದ ಹಸಿರಾದ ಗುಡ್ಡ


2019 ಸೆಪ್ಟೆಂಬರ್ 23. ಅಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮರಿಕೆಯ .ಪಿ.ಸದಾಶಿವರು 'ಪಬ್ಲಿಕ್ ಹೀರೋ'!

ಅತ್ತ ಕಡೆಯಿಂದ ವಾಹಿನಿಯ ಉದ್ಘೋಷಕರ ಪ್ರಶ್ನೆ. ಕೃಷಿಯಲ್ಲಿ ಸುಖವಾಗಿದ್ದೀರಾ? ಸದಾಶಿವರು ಏನು ಹೇಳಿರಬಹುದು? – ‘ಯಾವುದೇ ಬ್ಯಾಂಕ್ ಸಾಲವಿಲ್ಲದೆ ಸಾವಯವ ಕೃಷಿ ಮಾಡುತ್ತಾ ಸುಖವಾಗಿದ್ದೇನೆ. ನೆಮ್ಮದಿಯಾಗಿದ್ದೇನೆ.’

ಸದಾಶಿವರು ಸಾವಯವ ಕೃಷಿಕರು. ಅದೂ ಅಪ್ಪಟ ಸಾವಯವ! ಮಾತಿನಂತೆ ಕೃತಿ. ಕೃತಿಯಂತೆ ಅನುಷ್ಠಾನ. ಕೃಷಿ ಬದುಕಿನಲ್ಲಿ ಸದಾ ಎಚ್ಚರ. ಬಹುಶಃ ಎಚ್ಚರದ ಬದುಕು ಇದೆಯಲ್ಲಾ, ಅದುವೇ 'ಸುಖವಾಗಿದ್ದೇನೆ' ಅಂದದ್ದರ ಒಳಗುಟ್ಟು. ಅಂದು ವಾಹಿನಿಯು ಸದಾಶಿವರ ಹದಿನೈಕರೆ ಕಾಡಿನ ಕಥನವನ್ನು ಎರಡ್ಮೂರು ನಿಮಿಷದಲ್ಲಿ ಬಿತ್ತರಿಸಿತ್ತು.

ಕಾಡು ಅವರಿಗೆ ಕೃಷಿಗೆ ಪೂರಕ. ನೀರಾವರಿಯ ಸ್ರೋತ. ಕಾಲು ಶತಮಾನದ ಹಿಂದೆ ಮಾಡಿದ ನಿರ್ಧಾರ  ಈಗ ಫಲಿತವಾಗುತ್ತಿದೆ. ಮಳೆ ಕೈಕೊಟ್ಟು ಸುತ್ತೆಲ್ಲಾ ನೀರಿನ ಕೂಗು ಕೇಳಿಸುತ್ತಿದ್ದರೂ ಸದಾಶಿವರು ಅಧೀರಾಗುವುದಿಲ್ಲ. ಕಾಡು ಬೆಳೆಸಿದ್ದರಿಂದ ಅಂತರ್ಜಲ ವೃದ್ಧಿಯಾದುದನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದಾರೆ. ನೀರಿನ ನೆಮ್ಮದಿಯನ್ನು ಅನುಭವಿಸುತ್ತಿದ್ದಾರೆ.

“ಹದಿನೈದು ಎಕರೆ ಗುಡ್ಡ ಪೂರ್ತಿಯಾಗಿ  ಕಾಡಾಗಿದೆ. ಮಾನವ ಹಸ್ತಕ್ಷೇಪವಿಲ್ಲದೆ ಬೆಳೆದಿದೆ. ಮಳೆ ನೀರು ವ್ಯರ್ಥವಾಗುವುದಿಲ್ಲ. ಪೂರ್ತಿಯಾಗಿ ಇಂಗುತ್ತದೆ. ಇದರಿಂದಾಗಿ ಮೇಲ್ಮಣ್ಣು ರಕ್ಷಣೆಯಾಗಿದೆ. ಅಂತರ್ಜಲ ವೃದ್ಧಿಯಾಗಿದೆ.” ಎಂದು ಫಲಿತವನ್ನು ಕಟ್ಟಿಕೊಡುತ್ತಾರೆ. ಕಳೆದೆರಡು ದಶಕಗಳಿಂದ ಇವರ ಕೊಳವೆಬಾವಿಗಳಿಗೆ ಬಹುತೇಕ ರಜೆ!

ಸದಾಶಿವರಿಗೆ ನಾಲ್ಕು ಕೆರೆಗಳು ನೀರಿನ ಮೂಲ. ಹಿಂದೆಲ್ಲಾ ಫೆಬ್ರವರಿಯಲ್ಲಿ ಬತ್ತುತ್ತಿದ್ದ ಕೆರೆಗಳು ಎಪ್ರಿಲ್ ವರೆಗೂ, ಎಪ್ರಿಲಿಯಲ್ಲಿ ಆರುತ್ತಿದ್ದ ಕೆರೆಯು ಮೇ ಕೊನೆಯ ತನಕವೂ ನೀರುಳಿಸಿಕೊಳ್ಳುತ್ತಿವೆ! ಇದು ಕಾಡು ಎಬ್ಬಿಸಿದ್ದರ ನೇರ ಪರಿಣಾಮ. ಹದಿನೈದೆಕ್ರೆ ಕಾಡು ಎರಡು ಕಡೆ ಹಂಚಿಹೋಗಿದೆ.

ಹಸಿರು ಧ್ಯಾನ : 1993ನೇ ಇಸವಿ. ಮಳೆಯ ಕಣ್ಣುಮುಚ್ಚಾಲೆ. ಕಡು ಬೇಸಿಗೆ. ನೀರಿನ ಮೂಲಗಳಲ್ಲಿ ನೀರು ತಳ ಸೇರಿತ್ತು. ಕುಡಿಯುವ ನೀರಿಗೂ ತತ್ವಾರ. ಅಡಿಕೆಯ ಇಳುವರಿಯಲ್ಲೂ ಖೋತಾ. ಬೇರೆ ಹಾದಿ ಕಾಣದೆ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರಲ್ಲಿ ಎರಡು ವಿಫಲವಾಗಿತ್ತು!

ವರುಷ ನಾಡಿನ ಕೃಷಿ ಮಾಧ್ಯಮ 'ಅಡಿಕೆ ಪತ್ರಿಕೆ'ಯು 'ನೆಲ-ಜಲ ಉಳಿಸುವ ನೂರು ವಿಧಿ' ಲೇಖನ ಮಾಲೆಯನ್ನು ಆರಂಭಿಸಿತ್ತು. ನೀರಿಂಗಿಸಿ ಯಶ ಕಂಡವರ ಗಾಥೆಗಳಿಗೆ ಸದಾಶಿವರು ಉತ್ಸುಕರಾದರು. ತನ್ನ ಹದಿನೈದೆಕ್ರೆ ಗುಡ್ಡವನ್ನು ಕಾಡಾಗಿ ಬದಲಾಯಿಸಲು ಸಂಕಲ್ಪ ಮಾಡಿದರು. ನಿರಂತರ ಹತ್ತು ವರುಷ ಕಾಡಿನ ಗಿಡಗಳ ನಾಟಿ, ಆರೈಕೆಗಳ ಹಸಿರು ಧ್ಯಾನ. 

ಆರಂಭಕ್ಕೆ ಬಿಸಿಲಿನ ಝಳಕ್ಕೆ ಸಸಿಗಳು ತಾಳಿಕೊಳ್ಳಲು ಏದುಸಿರು ಬಿಟ್ಟವು. ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋಗಿ ಮೇಲ್ಮಣ್ಣಿನಲ್ಲಿ ಫಲವತ್ತತೆಯಿದ್ದಿರಲಿಲ್ಲ. ಸಸಿಗಳು ಬೇರಿಳಿಸಲು ತ್ರಾಸಪಟ್ಟು ಜೀವ ಕಳೆದುಕೊಂಡುದೇ ಹೆಚ್ಚು. ಇಷ್ಟೆಲ್ಲಾ ಕಣ್ಣಾರೆ ನೋಡುತ್ತಿದ್ದರೂ ಸದಾಶಿವ ಭವಿಷ್ಯದ ನೋಟವು ಅವರನ್ನು ಅಧೀರನ್ನಾಗಿ ಮಾಡಲಿಲ್ಲ.  ಗುಡ್ಡದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿದರು. ನೀರು ಹರಿದು ಹೋಗುವಲ್ಲಿ ಅಡ್ಡಕ್ಕೆ ಎರಡಡಿ ಆಳ, ಒಂದಡಿ ಆಳದ ಗುಂಡಿಗಳು. ಕೆಲವು ಕಡೆ ಅಲ್ಲಲ್ಲಿನ ಭೂಮಿತಿಯಂತೆ ಇಂಗುಗುಂಡಿಗಳ ವಿನ್ಯಾಸಗಳನ್ನು ಬದಲಾಯಿಸಿಕೊಂಡರು.

ಮೂರು ವರುಷಗಳಲ್ಲಿ ಸುಮಾರು ನೂರೈವತ್ತಕ್ಕೂ ಮಿಕ್ಕಿ ಇಂಗುಗುಂಡಿಗಳು ನಿರ್ಮಾಣವಾದುವು. ಜಾನುವಾರುಗಳಿಂದ ಸಸಿಗಳನ್ನು ರಕ್ಷಿಸಲು ಬೇಲಿಯ ರಕ್ಷಣೆ ಮಾಡಿದರು. ಬೇಲಿಗೆ ತಾಗಿಕೊಂಡು ಅಗುಳಿನ ರಚನೆ. ಅಗುಳಿನೊಳಗೆ ಅಲ್ಲಲ್ಲಿ ತಡೆಗಟ್ಟ. ಹೀಗಾಗಿ ಮಳೆನೀರು ಪೂರ್ತಿ ಇಂಗುವಂತಾಯಿತು.

ಮೂರೇ ವರುಷ. ನೀರಿನ ಪಸೆಯನ್ನು ಮಣ್ಣು ಹಿಡಿದಿಟ್ಟುಕೊಳ್ಳುವ ಧಾರಣ ಶಕ್ತಿಯನ್ನು ಹೆಚ್ಚು ಮಾಡಿಕೊಂಡಿತು. “ಗುಡ್ಡದುದ್ದಕ್ಕೂ ಹಾವಸೆ ಕಂಡುಬಂತು. ಅಲ್ಲಲ್ಲಿ ಹುಲ್ಲುಗಳು ಬೆಳೆದುವು. ಇವುಗಳ ಮಧ್ಯೆ ಹಕ್ಕಿಗಳ ಹಿಕ್ಕೆಯಿಂದ ಪ್ರಸಾರವಾದ ವಿವಿಧ ಬೀಜಗಳು ಹುಟ್ಟಿದುವು. ನೀರಿನ ಹರಿವು ನಿಂತು ಇಂಗಿದಾಗ ಪಾಚಿ ಬೆಳೆಯುತ್ತದೆ. ಪಾಚಿ ಇದ್ದರೆ ಮಾತ್ರ ಬೀಜಗಳು ಮೊಳಕೆಯೊಡೆಯುತ್ತವೆ ಎನ್ನುವ ಸತ್ಯವನ್ನು ಕಾಡು ನನಗೆ ಕಲಿಸಿತುಎನ್ನುತ್ತಾರೆ ಸದಾಶಿವ.

ತರಗಲೆಯ ಹಾಸು : ಯಾವಾಗ ಹಾವಸೆಯು ಮಣ್ಣಿನ ಮೇಲೆ ಬೆಳೆಯಲು ಶುರುವಾಯಿತೋ ಗಿಡಗಳು ನಗಲು ಆರಂಭಿಸಿದುವಂತೆ! ಅರೆ ಜೀವದಲ್ಲಿದ್ದವುಗಳಿಗೆ ಜೀವ ಬಂದುವು. ಬೆಳೆಯುತ್ತಿರುವ ಸಸಿಗಳಿಗೆ ಫಲವತ್ತತೆ ಸಿಕ್ಕಿತು. ಮಣ್ಣಿಗೆ ಚೇತನ ಬಂತು. ಬದಲಾವಣೆಯನ್ನು ಸದಾಶಿವ ಗಮನಿಸುತ್ತಾ ಬಂದರು. ಪ್ರಕೃತಿಯ ಚೋದ್ಯಕ್ಕೆ ಬೆರಗಾದರು.

ಪಕ್ಷಿಗಳ ಹಿಕ್ಕೆಗಳಿಂದ ಆಮದಾದ ಬೀಜಗಳು ಹುಟ್ಟುತ್ತವೆ ಎಂದಾದರೆ ಬೀಜಗಳನ್ನು ಎರಚಿದರೆ ಹುಟ್ಟಲಾರವೇ? ಸ್ಥಳೀಯವಾಗಿ ಸುಲಭವಾಗಿ ಸಿಗುವ ಕಲ್ಮರ, ಕುಂಟಾಲ, ಕಿರಾಲುಬೋಗಿ.. ಹೀಗೆ ಕಾಡು ಮರಗಳ ಬೀಜಗಳನ್ನು ಸಂಗ್ರಹಿಸಿದರು. ಮಳೆಗಾಲದ ಮೊದಲು ಎರಚಿದರು. ವರುಷಕ್ಕೆ ಸುಮಾರು ಹತ್ತು ಕಿಲೋದಷ್ಟು ಬೀಜಗಳನ್ನು ಗುಡ್ಡದಲ್ಲಿ 'ಎರಚು ಬಿತ್ತನೆ' ಮಾಡಿದ್ದಾರೆ! ಆಶ್ಚರ್ಯ.. ಬಹುಪಾಲು ಬೀಜಗಳು ಮೊಳಕೆಯೊಡೆದು ಸಸಿಗಳಾದಾಗ ಸದಾಶಿವರಿಗೆ ಏನನ್ನೋ ಸಾಧಿಸಿದ ಖುಷಿ.

ಹೀಗೆ ಬೆಳೆದ ಗಿಡಗಳು ಬೆಳೆದಿವೆ, ಮರಗಳಾಗಿವೆ. ಅವುಗಳ ತರಗೆಲೆಗಳು ಬುಡಗಳಲ್ಲಿ ಸಂಗ್ರಹವಾಗುತ್ತಿವೆ. ಮಳೆಗಾಲದಲ್ಲದು 'ಮೆತ್ತಗಿನ ಹಾಸುಗೆ'ಯಾಗಿ ಪರಿವರ್ತನೆಯಾಗುತ್ತಿವೆ. ಇಂತಹ ಹಾಸುಗೆಗಳು ಮಳೆನೀರನ್ನು ಭೂಮಿಯೊಳಗಿಳಿಸುವ ಪಾರಂಪರಿಕ ಮೂಲಗಳು. ಇದರಿಂದಾಗಿ ಮೇಲ್ಮಣ್ಣಿನಲ್ಲಿ ತೇವ ಉಳಿದಿವೆ. ಬೀಜಗಳು ಹುಟ್ಟುವ ಪ್ರಮಾಣ ಹೆಚ್ಚಾಗಿವೆ.

ಸಹಜವಾಗಿ ಬೆಳೆಯುವ ಕಾಡಿನಲ್ಲಿ ಇಂತಹ ಹಾಸುಗೆಗಳನ್ನು ನಿಸರ್ಗವೇ ಮಾಡಿಡುತ್ತವೆ. ಯಾವಾಗ ಮಾನವನ ಪ್ರವೇಶ ಆಯಿತೋ ನೀರಿನ ಮೂಲಗಳು ನಾಶವಾದುವು. ಮರದ ಬುಡಗಳಲ್ಲಿ ತರಗೆಲೆಯ ಹಾಸುಗೆ ರೂಪುಗೊಳ್ಳಲು ಏನಿಲ್ಲವೆಂದರೂ ಹತ್ತೋ ಹದಿನೈದೋ ವರುಷ ಬೇಕೇ ಬೇಕು. ಗಿಡಗಳಿಗೆ ಬೇರು ಇಳಿಸಲು ಸಹಕಾರಿ. ಗುಡ್ಡದಲ್ಲೀಗ ಹಲಸು, ಅಂಟುವಾಳ, ಬೈನೆ, ಕಲ್ಮರ, ಕರಿಮರ, ಚಂದಳಿಕೆ, ಪುನರ್ಪುಳಿ,  ಅಂಡಿಪುನಾರ್.... ಹೀಗೆ ನೂರಾರು ಗಿಡಗಳು ತುಂಬಿವೆ. ಎನ್ನುತ್ತಾರೆ.

ಕಾಡಿಗೆ ಒಯ್ಯುವ ಕತ್ತಿ ಇವರಲ್ಲಿಲ್ಲ! : ಕಾಡಿಗೆ ಹೋಗುವಾಗ ಸದಾಶಿವ ಕುಟುಂಬ ಕತ್ತಿ ಒಯ್ಯುವುದಿಲ್ಲ! ಸ್ವಲ್ಪ ಪ್ರಮಾಣದಲ್ಲಿ ತರಗೆಲೆಗಳನ್ನು ಆಯುವುದನ್ನು ಬಿಟ್ಟರೆ ಬೇರೇನೂ ಅಲ್ಲಿಂದ ತರುವುದೂ ಇಲ್ಲ. ಸಹಜ ಕಾಡಾಗಿ ಬೆಳೆದಿದೆ. ಅಲ್ಲಿ ಸಂಚರಿಸುವಾಗಲೂ ಸರಾಗವಾಗಿ ನಡೆಯಲು ಕಷ್ಟವಾಗುವಷ್ಟು ದಟ್ಟವಾಗಿದೆ. ನೆರಳಿನ ಪ್ರಮಾಣ ಗಾಢವಾಗಿರುವುದರಿಂದ ಕೆಲವೊಂದು ಸಸ್ಯಗಳ ಬೆಳವಣಿಗೆಯು ಕುಂಠಿತವಾಗಿರುವುದರನ್ನು ಗಮನಿಸಿದ್ದಾರೆ. 

ಗಿಡಗಳಿಗೆ ಸರಿಯಾಗಿ ಬಿಸಿಲು ಬಿದ್ದರೆ ಮಾತ್ರ ಹುಲುಸಾಗಿ ಬೆಳೆಯುತ್ತವೆ. ಈಗ ನೆರಳಿರುವುದರಿಂದ ಬಿಸಿಲು ನೆಲ ಸೋಕುವುದು ಕಡಿಮೆ. ಮರಗಳು ಬಿಸಿಲನ್ನು ಹುಡುಕಿಕೊಡು ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತವೆ. ಇಂತಹ ಮರಗಳು ಟಿಂಬರಿಗೆ ಸಿದ್ಧವಾಗುವಾಗ ನೂರು ವರುಷ ಬೇಕೇನೋ! ಎನ್ನುತ್ತಾ ಒಂದು ಮರದತ್ತ ಗಮನ ಸೆಳೆದರು. ಇದು ಪಲ್ಲೆ ಬಳ್ಳಿ. ಅಂಕುಡೊಂಕಾಗಿ, ಬಾಗಿ-ಬಳುಕುತ್ತಾ ಎತ್ತರಕ್ಕೆ ಬೆಳೆದಿದೆ. ಇದರ ಬೇರುಗಳು ಸುದೃಢವಾಗಿದ್ದು ನೆಲದ ಮೇಲೆಯೇ ಹರಡಿರುವುದರಿಂದ ಮಣ್ಣಿನ ಸವಕಳಿ ತಪ್ಪಿದೆ.

“ಕಾಡಿನಲ್ಲಿ ಪಕ್ಷಿ ವೈವಿಧ್ಯಗಳ ಸಂಖ್ಯೆ ಅಧಿಕವಾಗಿದೆ. ಭಾಗಕ್ಕೆ ಪರಿಚಿತವಾದ ಹಕ್ಕಿಗಳ ಸಂಸಾರಗಳಿವೆ. ಮಂಗ, ನವಿಲಿನ ಕಾಟ ಜಾಸ್ತಿ! ನಮ್ಮ ಜೀವ ಉಳಿಸಲು ನೀರು ಬೇಕೇ ಬೇಕಲ್ವಾ. ಹಾಗಾಗಿ ಇವುಗಳ ಉಪಟಳವನ್ನು ಸಹಿಸಲೇ ಬೇಕು. ನೀರಿಲ್ಲದೆ ಬದುಕುವ ಕಷ್ಟಕ್ಕಿಂತ ಕಷ್ಟ ದೊಡ್ಡದಲ್ಲ.” ಎನ್ನುತ್ತಾರೆ. ಈಗ ನೀರಿಂಗಿಸುವ ಕೆಲಸವನ್ನು ಕಾಡು ಮಾಡುತ್ತಿದೆ.

ಕರಾವಳಿಗೆ ನೀರಿನ ಬರ ಇಲ್ಲ ಎನ್ನುವುದು ಹಳೆಯ ಮಾತು. ಈಗ ಹಾಗಲ್ಲ. ಸದಾಶಿವ ತಮ್ಮೂರಿನ ಉದಾಹರಣೆಯನ್ನೇ ಹೇಳುತ್ತಾರೆ - ಕಳೆದೆರಡು ವರುಷಗಳಲ್ಲಿ ಇನ್ನೂರಕ್ಕೂ ಮಿಕ್ಕಿ ಕೊಳವೆ ಬಾವಿಗಳನ್ನು ಕೊರೆಯುವ ಕೊರೆಯಂತ್ರದ ಸದ್ದನ್ನು ಕೇಳಿದ್ದೇನೆ. ಏನಿಲ್ಲವೆಂದರೂ ಏಳುನೂರೈವತ್ತು ಅಡಿವರೆಗೂ ಕೊರೆತವಾಗಿದೆ. ಇದು ಒಂದು ಹಳ್ಳಿಯ ಕತೆ. ಇಂತಹ ನೂರಾರು ಅಲ್ಲ, ಸಾವಿರಾರು ಹಳ್ಳಿಗಳ ಕತೆ ಮತ್ತು ವ್ಯಥೆಗಳಲ್ಲಿ ವ್ಯಾತ್ಯಾಸವಿಲ್ಲ. ಮತ್ತೆ ನೀರಿನ ಬರ ಬಾರದೆ ಇದ್ದೀತೇ?  ಸದಾಶಿವರ ಮಾತಿನಲ್ಲಿ ಭವಿಷ್ಯದ ವಿಷಾದ ಚಿತ್ರವು ಕಣ್ಣು ಮಿಟುಕಿಸಿ ಮರೆಯಾಯಿತು!

ಸದಾಶಿವರಂತೆ ಅಲ್ಲಲ್ಲಿ ಕಾಡನ್ನು ಬೆಳೆಸಿದ ಕೃಷಿಕರಿದ್ದಾರೆ. ಒಬ್ಬೊಬ್ಬರಲ್ಲಿ ಒಂದೊಂದು ಅನುಭವ. ಇಂದು ಹಸಿರಿನ ಮಾತುಗಳು ಪೇಲವವಾಗುತ್ತಿರುವ ಕಾಲಘಟ್ಟದಲ್ಲಿ ಹಸಿರನ್ನು ಸದ್ದಿಲ್ಲದೆ ಎಬ್ಬಿಸುತ್ತಿರುವ ಕೃಷಿಕರ ಸಾಧನೆ ದಾಖಲಾಗಬೇಕು.


0 comments:

Post a Comment