Tuesday, August 18, 2020

ಅಕ್ಷರ ಯಾನ.... ರೂಪುಗೊಂಡ ಬಗೆ... ಇದು ಕತೆಯಲ್ಲ, ಜೀವನ


ಪುತ್ತೂರಿನ ಏಳ್ಮುಡಿಯಲ್ಲಿ ಶೋಭಾ ಪುಸ್ತಕ ಭಂಡಾರ. ಬೋಳಂತಕೋಡಿ ಈಶ್ವರ ಭಟ್ಟರ ಸಾರಥ್ಯ. ಸನಿಹದ ಭಟ್ ಬಿಲ್ಡಿಂಗಿನಲ್ಲಿ ನನ್ನ ವೃತ್ತಿ. ಅಪರಾಹ್ಣ ಮೂರು ಗಂಟೆಯ ಬಳಿಕ ಬೋಳಂತಕೋಡಿಯವರಿಂದ ಬುಲಾವ್. ಒಂದೈದು ನಿಮಿಷದ ಮಾತುಕತೆ. ಮತ್ತವರು ಮೌನ. 

ಇಂತಹ ಒಂದೈದು ನಿಮಿಷದ ಮಾತುಕತೆಗಳಲ್ಲಿ ರಾಜೇಶ್ ಪವರ್ ಪ್ರೆಸ್ಸಿನ ಮುದ್ರಣದ ಗುಣಮಟ್ಟ, ಪ್ರೆಸ್ಸಿನ ರಘುನಾಥ ರಾಯರ ಕಾರ್ಯದಕ್ಷತೆ, ಮುದ್ರಣವಾಗುತ್ತಿರುವ ಪುಸ್ತಕಗಳ ವಿವರ, ಬಿಡುಗಡೆ ಸಮಾರಂಭ ಮುನ್ನೋಟಗಳ ಸುದ್ದಿಗಳು ಸುತ್ತುತ್ತಿದ್ದುವು. 

ಸ್ನೇಹಿತ ಪ್ರಕಾಶ್ ಕುಮಾರ್ ಕೊಡೆಂಕಿರಿಯವರು ರಘುನಾಥ ರಾಯರ ವ್ಯಕ್ತಿತ್ವ, ಬದುಕಿನ ಬದ್ಧತೆಯನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುತ್ತಿದ್ದರು. ಸಾರ್ವಜನಿಕವಾಗಿಯೂ 'ಭಟ್ಟರ ಶಿಸ್ತಿನ' ಮುಖಗಳು ಗೌರವ ಪಡೆದಿದ್ದುವು. ಕರ್ನಾಟಕ ಸಂಘದ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ರಾಯರ ಪಾಲ್ಗೊಳ್ಳುವಿಕೆಯನ್ನು ಗಮನಿಸುತ್ತಿದ್ದೆ. ಒಮ್ಮೆ ಪ್ರಕಾಶ್ ಪರಿಚಯಿಸಿದ್ದರು ಕೂಡಾ. ಮಾತುಕತೆಯು 'ನಮಸ್ಕಾರ'ಕ್ಕೆ ಮುಗಿದಿತ್ತು. 

ಯಕ್ಷಭೀಷ್ಮ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ (ದಿ.) ವಿಚಾರಗಳ ಮಾಲೆ 'ಶೇಣಿ ಚಿಂತನ'ದ ಕರಡು ಪ್ರತಿಯನ್ನು ಈಶ್ವರ ಭಟ್ಟರಿಗೆ ನೀಡಿದ್ದೆ. ಅವರು ಮುದ್ರಿಸುವ ಉಮೇದಿನಲ್ಲಿದ್ದರು. ಈ ಹಿಂದೆ ಶೇಣಿಯವರ ಅರ್ಥವೈಭವ 'ಶೇಣಿ ದರ್ಶನ'ವನ್ನು ಪ್ರಕಾಶಿಸಿದ್ದರು. ಶೇಣಿ ಚಿಂತನದ ಕರಡು ಪ್ರತಿಯನ್ನು ನೀಡುವಾಗಲೇ ಬಿಡುಗಡೆ ದಿನಾಂಕವನ್ನು ಸೂಚಿಸಿದ್ದರು ಕೂಡಾ!

ಈ ಖುಷಿಯಲ್ಲಿರುವಾಗ ಬೋಳಂತಕೋಡಿಯವರು ನಿಧನರಾದರು. ಕರ್ನಾಟಕ ಸಂಘದ ಭಾರವಾಹಿತ್ವವೂ ವರ್ಗಾವಣೆಯಾದುವು. 'ಇದರ ಮುದ್ರಣಕ್ಕೆ ಅವಕಾಶವಿದೆಯೇ' ಎಂದು ಪ್ರಕಾಶ್ ಕುಮಾರ್ ಮೂಲಕ ಸಂಘಕ್ಕೆ ಸಂಬಂಧಪಟ್ಟ ಹಿರಿಯರಲ್ಲಿ ವಿನಂತಿಸಲು ಕೋರಿದ್ದೆ. ನಿರೀಕ್ಷೆ ಹುಸಿಯಾಯಿತು. ಸರಿ, ನನ್ನ ಹೆಸರಿನ ಹಿಂದೆಯೂ, ಮುಂದೆಯೂ ವಿಶೇಷಣ ಇಲ್ವಲ್ಲಾ. ಹಣೆಪಟ್ಟಿ ಇಲ್ಲವೇ ಇಲ್ಲ!

ಅಷ್ಟಿಷ್ಟು ಕೂಡಿಟ್ಟ ಹತ್ತು ಸಾವಿರ ರೂಪಾಯಿ ಕೈಯಲ್ಲಿತ್ತು. ಧೈರ್ಯ ಮಾಡಿ ರಾಜೇಶ್ ಪವರ್ ಪ್ರೆಸ್ಸಿನ ಮೆಟ್ಟಿಲೇರಿದೆ. ವಾಸ್ತವ ತಿಳಿಸಿದೆ. ಆರ್ಥಿಕ  ಪರಿಸ್ಥಿತಿಯನ್ನು ವಿವರಿಸಿದೆ. 'ಆಯ್ತು, ಪ್ರಿಂಟ್ ಮಾಡೋಣ, ಅದಕ್ಕೇನಂತೆ' ಎಂದು ಮುಗುಳ್ನಕ್ಕು ಕರಡು ಪ್ರತಿಯನ್ನು ರಘುನಾಥ ರಾಯರು ಸ್ವೀಕರಿಸಿದರು. ಆಗಲೇ ಅವರ ಕುರಿತು ನನ್ನೊಳಗಿದ್ದ (ಒಂದಷ್ಟು ಮಂದಿ ತುಂಬಿಸಿದ್ದ) ಋಣಾತ್ಮಕ ವಿಚಾರಗಳು ಕರಗಿ ನೀರಾದುವು. ಪುಸ್ತಕ ಅಚ್ಚಾಯಿತು. ಬಿಡುಗಡೆಯೂ ಆಯಿತು. ಆಮೇಲೆ ಬೆನ್ನು ತಟ್ಟಲು ಸಾಕಷ್ಟು ಕೈಗಳಿವೆ, ಬಿಡಿ!

          ಮುದ್ರಣಕ್ಕಾಗಿ ಹತ್ತು ಸಾವಿರ ರೂಪಾಯಿ ಮೊದಲು ನೀಡಿದ್ದೆ. ಮೂರು ತಿಂಗಳಿನಲ್ಲಿ ಮಿಕ್ಕುಳಿದ ಮೊತ್ತವನ್ನು ಪಾವತಿಸುತ್ತೇನೆ ಎಂದಿದ್ದೆ. ತಿಂಗಳು ಮೂರು ಕಳೆದರೂ ಪಾವತಿಸಲು ಆಗಲಿಲ್ಲ. ಅದೇ ಹೊತ್ತಿಗೆ - 2003ರಲ್ಲಿ - ನನ್ನ ಒಂದು ಗ್ರಾಮೀಣ ಲೇಖನಕ್ಕೆ 'ಚರಕ ಪ್ರಶಸ್ತಿ' ಪ್ರಾಪ್ತವಾಯಿತು. ಪ್ರಶಸ್ತಿಯೊಂದಿಗೆ ಹತ್ತು ಸಾವಿರ ರೂಪಾಯಿ ಸಿಕ್ಕಿತು. ಮಿಕ್ಕ ಹಣವನ್ನು ಪ್ರಕಾಶ್ಕುಮಾರ್ ಹೊಂದಿಸಿದರು. ಈ ಎಲ್ಲಾ ಮೊತ್ತದೊಂದಿಗೆ ಪ್ರೆಸ್ಸಿನ ಬಿಲ್ ಚುಕ್ತಾ ಆಯಿತು.

          ನಾನು ಬಿಲ್ ಕೇಳಿದ್ದೇನಾ. ಇಷ್ಟು ಅರ್ಜಂಟ್ ಯಾಕೆ. ಈಶ್ವರ ಭಟ್ಟರು ಬದುಕಿರುತ್ತಿದ್ದರೆ ಈ ಪುಸ್ತಕವನ್ನು ನಾನೇ ಮುದ್ರಿಸಬೇಕಿತ್ತಲ್ವಾ. ಎಂದಿದ್ದರು ರಘುನಾಥ ರಾಯರು. ಪುಸ್ತಕದ ಮಾರಾಟ ವ್ಯವಸ್ಥೆಯ ಹೊಣೆಯನ್ನು ಪ್ರಕಾಶ್ ವಹಿಸಿದರು. ಅಲ್ಲಿಯ ವರೆಗೆ ರಾಯರನ್ನು ನೋಡಿದ ಪರಿಚಯವಷ್ಟೇ. ನಿಕಟ ಸಂಪರ್ಕವಿದ್ದಿರಲಿಲ್ಲ. ಒಂದೈದು ನಿಮಿಷ ಮಾತನಾಡುವಷ್ಟು ಸಲುಗೆಯೂ ಇಲ್ಲ. ಆ ಬಳಿಕ ರಘುನಾಥ ರಾಯರು ಮುಖಾಮುಖಿಯಾದಾಗಲೆಲ್ಲ ಮಾತು, ಕತೆ - ಮಾತುಕತೆ. 

ನಾನು ಬೋಳಂತಕೋಡಿ ಈಶ್ವರ ಭಟ್ಟರ ವ್ಯಕ್ತಿತ್ವ, ಅವರ ನಿಲುವುಗಳ ಅಭಿಮಾನಿಯಾಗಿದ್ದೆ. ಅವರು ಉಲ್ಲಸಿತರಾಗಿದ್ದಾಗ ಅರ್ಧ ಗಂಟೆಗೂ ಮಿಕ್ಕಿ ಮಾತಿಗೆ ತೆರೆದುಕೊಳ್ಳುತ್ತಿದ್ದರು. ಜತೆಯಲ್ಲಿ ಕಾಫಿ ಕುಡಿದ ದಿನಮಾನಗಳಿದ್ದುವು. ಅವರ ಮಿತಭಾಷಿತನವು ಭೂಷಣಪ್ರಾಯವಾಗಿತ್ತು.  ರಘುನಾಥ ರಾಯರು ಕೂಡಾ ಬೋಳಂತಕೋಡಿಯವರ ಅಭಿಮಾನಿ. ಬಹುಶಃ ಈಶ್ವರ ಭಟ್ಟರ ಚೇತನವು ನಮ್ಮಿಬ್ಬರನ್ನು ಮಾನಸಿಕವಾಗಿ ಬೆಸೆದಿದ್ದರ ಪರಿಣಾಮಕ್ಕೆ ಸಾಕ್ಷಿಯಾಗಿ 'ಅಕ್ಷರ ಯಾನ' ಕೃತಿ ಮುಂದಿದೆ ಎಂದು ಭಾವಿಸಿದರೆ ಉತ್ಪ್ರೇಕ್ಷೆಯಾಗಲಾರದು. 

          ಎಂಟು ವರುಷದ ಹಿಂದೆ. ಪುಸ್ತಕ ತಯಾರಿಯ ಕಾರ್ಯಕ್ಕೆ ಶ್ರೀಕಾರ. ಸಂದರ್ಶನ ಆರಂಭ. ಹೇಗೆ? ತಂಪು ಕೋಣೆಯಲ್ಲಿ ಅಲ್ಲ. ರಘುನಾಥ ರಾಯರು ಸಂಜೆ ಹೊತ್ತು ಶ್ರೀ ಮಹಾಲಿಂಗೇಶ್ವರನ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗುವುದು ರೂಢಿ. ಎದುರಿನ ಗದ್ದೆಯಲ್ಲಿ ಕಾರನ್ನು ಪಾರ್ಕ್ ಮಾಡಿ, ದೇವರ ದರ್ಶನ, ಸಂ-ದರ್ಶನ. ಬಳಿಕ ಒಂದೊಂದು ದಿವಸ ಒಂದೊಂದು ಹಾದಿಯಲ್ಲಿ ಒಂದು, ಒಂದೂವರೆ ಗಂಟೆ ವಾಕಿಂಗ್ ಮಾಡುತ್ತಿದ್ದೆವು. ಆಗ ರೆಕಾರ್ಡರ್ ಚಾಲೂ ಇರುತ್ತಿತ್ತು. ಅವರ ಬದುಕಿನ ಸೂಕ್ಷ್ಮ ವಿಚಾರಗಳನ್ನೆಲ್ಲಾ ಹೇಳುತ್ತಿದ್ದರು. ನಾನು ಕಿವಿಯಾಗುತ್ತಿದ್ದೆ. ರೆಕಾರ್ಡರ್ ದಾಖಲಿಸುತ್ತಿತ್ತು. ಮತ್ತೆ ಅದನ್ನು ಲಿಪೀಕರಿಸುತ್ತಿದ್ದೆ. ಎಲ್ಲವನ್ನೂ ಬರೆದು ನೀಡಿದೆ. ಯಾಕೋ ಏನೋ ಅದು ಅವರ ಕಡತದೊಳಗೆ ಕುಳಿತುಕೊಂಡಿತು. ಮೂರ್ನಾಲ್ಕು ಬಾರಿ ಪ್ರೆಸ್ಸಿಗೆ ಹೋದಾಗಲೂ ಮುಜುಗರದಿಂದ ನೆನಪಿಸಲು ಸಂಕೋಚವಾಯಿತು.

ದೇಶಕ್ಕಲ್ಲ, ವಿಶ್ವಕ್ಕೆ ಕೊರೋನಾ ವೈರಸ್ ಮಹಾಮಾರಿ (ಕೋವಿಡ್ 19) ಅಂಟಿತು. ಲಾಕ್ಡೌನಿನಲ್ಲಿ – 2020 ಮಾರ್ಚ್ 23 ರಿಂದ - ಎಲ್ಲರೂ ಕಹಿಗುಳಿಗೆ ನುಂಗುವಂತಾಯಿತು. ಒಂದಿವಸ ರಘುನಾಥ ರಾಯರು 'ಪುಸ್ತಕ ಮಾಡೋಣ್ವಾ' ಅಂದರು. ಅಲ್ಲಿಂದ ಹಿಂದೆ ಮಾಡಿದ ಲೇಖನಗಳ 'ಮರು ಲೇಖನ'ಕ್ಕೆ (ರೀರೈಟಿಂಗ್) ಮುಂದಾದೆ. ಕರಡನ್ನು ಆಮೂಲಾಗ್ರವಾಗಿ ಓದಿ ತಿದ್ದಿದರು. ಬಿಟ್ಟು ಹೋದುದನ್ನು ಸೇರಿಸಿದರು. ಹೀಗೆ ಸಿದ್ಧವಾದ ಪಾಕ ನಿಮ್ಮ ಕೈಯಲ್ಲಿದೆ.

ಇಲ್ಲಿರುವುದು ಕತೆಯಲ್ಲ, ಜೀವನ. ಕತೆಯು ಜೀವನವಾಗಬಹುದು. ಆದರೆ ಜೀವನವು ಕತೆಯಾಗುವುದು ವಿರಳ. ಕತೆಯಾದರೂ ಒಂದಲ್ಲ ಒಂದು ಘಟನೆಯು ಸತ್ಯದಿಂದ ದೂರವಾಗಿ ಅಸತ್ಯದೊಳಗೆ ಮುದುಡುವುದಿದೆ. ರಘುನಾಥ ರಾಯರು ಹಾಗಲ್ಲ. ಹೇಳುವಂತಹುದನ್ನು ನೇರವಾಗಿ ಹೇಳಿದ್ದಾರೆ. ಅದು ಅವರಿಗೆ ಬದುಕು ಕಲಿಸಿದ ಪಾಠ.

          ಅಕ್ಷರಗಳು ಒಂದೊಂದೇ ಸೇರಿ ಪದಗಳಾಗಿ, ವಾಕ್ಯಗಳಾಗುತ್ತವೆ. ರಾಯರ ಬದುಕಿನ ಯಾನದ ಚಿಕ್ಕ ಚಿಕ್ಕ ಘಟನೆಗಳಲ್ಲಿ ಕೂಡಾ ಪಾಠವಿದೆ. ಸಮಸ್ಯೆಗಳು ಬಂದಾಗ ಹತ್ತಿಯಂತೆ ಹಗುರವಾಗಿಸಿದ ರೋಚಕಗಳಿವೆ. ಎದೆಯುಬ್ಬಿಸಬೇಕಾದಲ್ಲಿ ಸೋಲದೆ ಟೊಂಕ ಕಟ್ಟಿದ್ದಾರೆ. ಕೆಲವೆಡೆ ಜಾಣ್ಮೆಯನ್ನು ಬಳಸಿದ್ದಾರೆ. ಇನ್ನೂ ಕೆಲವೆಡೆ 'ಎಚ್ಚರ'ಗಳು ಗೆಲ್ಲಿಸಿವೆ. ಬದುಕಿನ ಓಟದಲ್ಲಿ ಗೆಲ್ಲಬೇಕೆಂಬ ಛಲ. ಜತೆಗೆ ಕೆಚ್ಚು. ಹೊಸತರ ತುಡಿತ. ರಘುನಾಥ ರಾಯರು ತಲುಪಬೇಕಾದಲ್ಲಿಗೆ ತಲುಪಿ ಎಪ್ಪತ್ತಾರರ ಮೆಟ್ಟಿಲು ಏರಿ ನಿಂತಿದ್ದಾರೆ.

          ಇಲ್ಲಿರುವುದು ಎಪ್ಪತ್ತಾರರ ಹೆಜ್ಜೆಗಳು. ಈ ಹೆಜ್ಜೆಗಳಲ್ಲಿ 'ನಾನು ಬದುಕುವುದು ನನಗಾಗಿ, ನನ್ನನ್ನು ನಂಬಿದವರಿಗಾಗಿ' ಎನ್ನುವ ಸ್ಪಷ್ಟ ನಿಲುವುಗಳನ್ನು ಗಮನಿಸಿದ್ದೇನೆ. ನಿಲುವುಗಳಲ್ಲಿ ರಾಜಿ ಮಾಡಿಕೊಳ್ಳದೆ ಮುಂದಡಿಯಿರಿಸಿದ್ದಾರೆ. ಕುಟುಂಬಕ್ಕಿಂತ ಹೆಚ್ಚಾಗಿ ವೃತ್ತಿಯನ್ನು ಮಾನಿಸಿದ್ದಾರೆ. ಸು-ಮನಸಿಗ ಸಿಬ್ಬಂದಿಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಅವರು ಆಗಾಗ್ಗೆ ಹೇಳುವುದಿದೆ, 'ಪ್ರೆಸ್ ನನ್ನ ಎರಡನೇ ಹೆಂಡತಿ'.


0 comments:

Post a Comment