Friday, August 28, 2020

ತನ್ನ ಏಳ್ಗೆಗೆ ತಾನೇ ಶಿಲ್ಪಿ - 1


(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -  (ಎಸಳು 34) 

ಲೇ : ಪದ್ಯಾಣ ನಾರಾಯಣ ಭಟ್

(ಗಣಪತಿ ಭಟ್ಟರ ಅಣ್ಣ)

            ನನ್ನ ಮೊಬೈಲ್ ಕಳೆದುಹೋಗಿತ್ತು. ಸುಳ್ಯದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದೆ. ಅರ್ಧ ಗಂಟೆ ಹೊತ್ತು ಎಲ್ಲರಂತೆ ಸರದಿಯಲ್ಲಿ ನಿಂತು ಕಾಯುತ್ತಿದ್ದೆ. ನನ್ನ ಸರದಿ ಬಂದಾಗ ದಾಖಲೆಯನ್ನು ಸಲ್ಲಿಸಿದೆ. ಅಷ್ಟರಲ್ಲಿ ಆರಕ್ಷಕರು “ಇದರಲ್ಲಿ ಪದ್ಯಾಣ ನಾರಾಯಣ ಭಟ್ ಎಂಬ ಉಲ್ಲೇಖವಿದೆ. ಹಾಗಾದರೆ ಪದ್ಯಾಣ ಗಣಪತಿ ಭಟ್ಟರು ನಿಮಗೇನಾಗಬೇಕು” ಎಂದರು. “ಅವನು ನನ್ನ ತಮ್ಮ” ಎಂದಾಗ ಆರಕ್ಷಕರು ಎಲ್ಲಿಂದಲೋ ಕುರ್ಚಿ ತಂದು ನನಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು. “ನಾನು ಗಣಪಣ್ಣರ ಪದ್ಯಕ್ಕೆ ವೇಷ ಮಾಡಿದ್ದೇನೆ” ಎಂದು ಮಾತಿಗೆ ತೊಡಗಿದರು. ಕೊನೆಗೆ “ಸರ್, ಮೊಬೈಲ್ ಕಳೆದುಹೋದ ಅರ್ಜಿ ಯಾರಲ್ಲಿ ಕೊಡಲಿ” ಎಂದು ಅವರನ್ನು ವಾಸ್ತವಕ್ಕೆ ಎಳೆಯಬೇಕಾಯಿತು. ಕ್ಷಿಪ್ರವಾಗಿ ಒಂದೈದು ನಿಮಿಷದಲ್ಲಿ ಕೆಲಸ ಮುಗಿಸಿಕೊಟ್ಟರು.

          ಇದು ‘ಪದ್ಯಾಣ ಗಣಪತಿ ಭಟ್ಟ’ ಈ ಹೆಸರಿನ ತಾಕತ್ತು! ಯಕ್ಷಗಾನ ಕ್ಷೇತ್ರವು ಒದಗಿಸಿದ ಮಾನ. ಅಭಿಮಾನಿಗಳು ನೀಡಿದ ಸಂಮಾನ. ಗಣಪತಿ ಭಟ್ ಯಾ ಗಣಪ ನನ್ನ ತಮ್ಮ ಎನ್ನಲು ಹೆಮ್ಮೆಯಾಗುತ್ತದೆ. ಅವನದು ಮನೆತನಕ್ಕೆ ಗೌರವ ತಂದ ಪ್ರತಿಭೆ. ಬಂಟ್ವಾಳ ತಾಲೂಕಿನ ಕರೋಪಾಡಿ ಸನಿಹದ ಪದ್ಯಾಣ ಮನೆತನವು ಸಾಮಾನ್ಯರಿಗೂ ತಿಳಿಯುವಂತೆ ಮಾಡಿದ ಸಾಧಕ ಗಣಪ. ನಾನು ಮೊದಲು ನಾರಾಯಣ ಭಟ್ ಪಿ ಎಂದಷ್ಟೇ ಬರೆಯುತ್ತಿದ್ದೆ. ಈಗ ಹಾಗಲ್ಲ , ಪದ್ಯಾಣ ನಾರಾಯಣ ಭಟ್ ಎಂದು ಹೇಳಿಕೊಳ್ಳಲು, ಬರೆಯಲು ಖುಷಿಯಾಗುತ್ತದೆ.

          ಸುಳ್ಯ ತಾಲೂಕಿನ ಕಲ್ಮಡ್ಕದ ಗೋಳ್ತಾಜೆಯ ನಮ್ಮ ಮನೆಯು  ಕಲಾ ಮಾತೆಯ ಆರಾಧನೆಯ ತಾಣ. ಮನೆಯ ಸಂಸ್ಕೃತಿಯೊಂದಿಗೆ ಪಾರಂಪರಿಕವಾಗಿ ಹರಿದು ಬಂದ ಕಲೆಯ ಸ್ಪರ್ಶ ಹೊಸೆದಿತ್ತು. ಹಾಡು, ಚೆಂಡೆ, ಮದ್ದಳೆ, ಆಟ, ಕೂಟ.. ಹೀಗೆ ಒಂದಲ್ಲ ಒಂದು ನಿತ್ಯ ಚಟುವಟಿಕೆಗಳು. ಈ ನಾದದ ಗುಂಗಿನಲ್ಲೇ ಬಾಲ್ಯವನ್ನು ಕಳೆದಿದ್ದೆವು. ಹತ್ತಿರದ ಬೊಮ್ಮೆಟ್ಟಿ ಗುಡ್ಡಕ್ಕೆ ತಂದೆ, ಮಕ್ಕಳೆಲ್ಲಾ ಸೇರಿ ಸಂಜೆ ಕೇಳಿ ಬಾರಿಸುತ್ತಿದ್ದ ದಿನಗಳಿದ್ದುವು. ಮನೆಯ ಹತ್ತಿರವೇ ಸಾರ್ವಜನಿಕ ದಾರಿಯು ಹಾದುಹೋಗುವುದರಿಂದ ದಾರಿಹೋಕರು ಸ್ವಲ್ಪ ಹೊತ್ತು ನಿಂತು ಮನೆಯಿಂದ ಹೊರಹೊಮ್ಮುವ ನಾದವನ್ನು ಆಲಿಸಿಯೇ ಮುನ್ನಡೆಯುತ್ತಿದ್ದರು.

          ಗಣಪ ಎಳೆ ವಯಸ್ಸಲ್ಲಿ ತುಂಬಾ ಪೋಕ್ರಿ! ತುಂಟಾಟದ ಸ್ವಭಾವ. ಶಾಲಾಕಲಿಕೆಯಲ್ಲಿ ಒಲವು ಕಡಿಮೆ. ಸಹೋದರರ ಒಡನಾಟ ಇಲ್ಲಂದಲ್ಲ, ಇತ್ತು ಅಷ್ಟೇ. ಸ್ನೇಹಿತರ ಸಂಬಂಧ ಹೆಚ್ಚು. ಆತನ ಆಸಕ್ತಿಗೆ ಬೇಕಾದ ಒಳಸುರಿಗಳು ಸ್ನೇಹಿತರಿಂದ ಸಿಗುತ್ತಿತ್ತು. ಶಾಲೆಯ ಕಲಿಕೆ ಅಷ್ಟಕ್ಕಷ್ಟೇ. ಅಧ್ಯಾಪಕರಿಂದ ನಿತ್ಯ ದೂರು. ನಾನಾಗ ಅಳಿಕೆಯಲ್ಲಿ ಓದುತ್ತಿದ್ದೆ. ಮನೆಯ ಸೆಳೆತದಿಂದ ಆಗಾಗ್ಗೆ ಮನೆಗೆ ಬರುತ್ತಿದ್ದೆ. ತಮ್ಮ ಪರಮೇಶ್ವರನಿಗೆ ಶ್ರವಣ ಶಕ್ತಿ ಸ್ವಲ್ಪ ಕಡಿಮೆ. ಜತೆಗೆ ಗಣಪನ ಕಿತಾಪತಿ ಬೇರೆ. ನಮ್ಮ ಮೂವರ ಸ್ಥಿತಿ ನೋಡಿ ಅಮ್ಮ ಕಂಗಾಲಾಗಿದ್ದರು. ಇವರನ್ನೆಲ್ಲಾ ಹೇಗಪ್ಪಾ ಸರಿಮಾಡೋದು ಎನ್ನುವ ಚಿಂತೆ. ಈಗಿನಂತೆ ಶಾಲಾ ವಿದ್ಯಾಭ್ಯಾಸವು ಪೈಪೋಟಿಯದ್ದಾಗಿರಲಿಲ್ಲ. ‘ಮನೆಯಲ್ಲಿ ಮಕ್ಕಳಿದ್ದಾರೆ, ಶಾಲೆಗೆ ಹೋಗಬೇಕು’ - ಎನ್ನುವ ಮನಃಸ್ಥಿತಿಯ ಕಾಲಘಟ್ಟ.

ಪದಯಾನ ಕೃತಿಯ ಸಂಪಾದಕ ನಾ. ಕಾರಂತ ಪೆರಾಜೆಯ ಬ್ಲಾಗಿನಲ್ಲೂ ಓದಬಹುದು - yakshamatu.blogspot.com


0 comments:

Post a Comment