ರಾಜೇಶರು ತಮ್ಮ ಅಡಿಕೆ ಸುಲಿ ಸಾಧನದ ವೀಡಿಯೋವನ್ನು ವಾಟ್ಸಾಪಿನಲ್ಲಿ ಹರಿಯ ಬಿಟ್ಟಿದ್ದರು. ಏಕಕಾಲಕ್ಕೆ ಎರಡು ಕೈಯಲ್ಲಿ ಸುಲಿಯಬಹುದಾದ ಸಾಧನವು ಅನೇಕರ ಗಮನ ಸೆಳೆದಿತ್ತು. ಗಾತ್ರದಲ್ಲಿ ಚಿಕ್ಕದಾದ ಸಾಧನಗಳು ಈ ಹಿಂದೆ ಬಂದಿದ್ದರೂ ಇಂತಹುದು ಹೊಸತು.
ರೋಗದ ಅಡಿಕೆಯನ್ನು ಸುಲಿಯಲು ಯಾರೂ ಒಪ್ಪುವುದಿಲ್ಲ. ಸಕಾಲಕ್ಕೆ ಸುಲಿತವಾಗದೆ ತೊಂದರೆಯಾಗುತ್ತಿತ್ತು. ಅದಕ್ಕೊಂದು ಪರ್ಯಾಯ ಹಾದಿ ಬೇಕಿತ್ತು. ‘ನನಗಾಗಿ ಮಾಡಿಕೊಂಡೆ.’ ಎನ್ನುತ್ತಾರೆ. ಇವರು ಕಡಬ ಬಳಿಯ ಬರೆಮೇಲಿನವರು.
ಒಂದು ಕಬ್ಬಿಣದ ಚೌಕಟ್ಟಿನ ಮೇಲೆ ಎಡ-ಬಲಗಳಲ್ಲಿ ‘V’ ಆಕಾರದ ಕತ್ತಿಯ ಅಲಗು. ಅದರ ತುದಿಗೆ ಅಡಿಕೆಯನ್ನಿಟ್ಟು ಪೆಡಲ್ ತುಳಿದರೆ ಕತ್ತಿ ತೆರೆದುಕೊಂಡು ಅಡಿಕೆ ಇಬ್ಬಾಗವಾಗುತ್ತದೆ. ಪೆಡಲ್ ಬಿಟ್ಟರೆ ಕತ್ತಿಗಳು ಪರಸ್ಪರ ಒಂದಾಗುತ್ತವೆ. ಸುಲಿದುಕೊಂಡ ಅಡಿಕೆ ಕೆಳಗಿರುವ ಬುಟ್ಟಿ ಸೇರುತ್ತದೆ. ‘V’ ಕತ್ತಿಯ ವಿನ್ಯಾಸವು ಈಗಾಗಲೇ ಪ್ರಚಲಿತವಿರುವ ತೆಂಗು ಸುಲಿತದ ಸಾಧನವನ್ನು ಹೋಲುತ್ತದೆ. ಅಲಗು ಮುಚ್ಚುವ, ತೆರೆಯುವ ಕೆಲಸವು ಸ್ಪ್ರಿಂಗ್ ಆಕ್ಷನ್ನಲ್ಲಿ ಆಗುತ್ತದೆ.
ಆರಾಮವಾಗಿ ಕುಳಿತು ಸುಲಿತವನ್ನು ಮಾಡಬಹುದು. ಎರಡು ಕೈ ಬಳಸಿಕೊಂಡರೂ ತ್ರಾಸವಾಗುವುದಿಲ್ಲ. ಸುಸ್ತಾಗುವುದಿಲ್ಲ. ಸಾಂಪ್ರದಾಯಿಕ ಅಡಿಕೆ ಕತ್ತಿಯಲ್ಲಿ ಅಭ್ಯಾಸಿಗಳು ಯತ್ನಿಸಿದಾಗ ಕೈಗೆ ಏಟಾಗುವುದು ಸಹಜ. ಇದರಲ್ಲಿ ಹಾಗಿಲ್ಲ. ಎಲ್ಲಾ ವಯೋಮಾನದವರು ಸುಲಿತ ಮಾಡುವಷ್ಟು ಸುಲಭ. ಇವರು ರೋಗದ ಅಡಿಕೆ ಮತ್ತು ಸ್ವಲ್ಪ ಕೊಯ್ಲಿನ ಅಡಿಕೆಯನ್ನು ಸುಲಿಯುವುದು ಇದರ ಮೂಲಕವೇ.
“ಗಂಟೆಗೆ ಸುಮಾರು ಎಂಟರಿಂದ ಹತ್ತು ಕಿಲೋ ಸುಲಿಯಬಹುದು. ಸಿಪ್ಪೆ ಗೋಟು ಇದ್ದರೆ ನಿಧಾನವಾಗಬಹುದು. ಸುಮಾರು ಮೂರೂವರೆಯಿಂದ ನಾಲ್ಕು ಸಾವಿರ ರೂಪಾಯಿಯಲ್ಲಿ ಸಾಧನ ತಯಾರಿಸಬಹುದು,” ಎನ್ನುತ್ತಾರೆ ರಾಜೇಶ್. ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳನ್ನೇ ಬಳಸಿದ್ದಾರೆ.
ಏಕಚಕ್ರದ ಕೈಗಾಡಿ : ಸಾಮಾನ್ಯವಾಗಿ ಇಪ್ಪತ್ತೋ ಇಪ್ಪತ್ತೈದು ಕಿಲೋ ಭಾರವನ್ನು ಕೈಯಲ್ಲೇ ಎತ್ತಿ ಇಡಲು, ಆಚೀಚೆ ಸಾಗಿಸಲು ಒಬ್ಬನಿಗೆ ಕಷ್ಟವಾಗದು. ಅದಕ್ಕಿಂತ ಹೆಚ್ಚಿನದನ್ನು ಎತ್ತುವುದು ಶ್ರಮದ ಕೆಲಸ. ಸಕಾಲಕ್ಕೆ ಸಹಾಯಕರು ಅಲಭ್ಯರಾದಾಗ ಹೊರೆ ಕೆಲಸಗಳು ಬಾಕಿಯಾಗುತ್ತದೆ. ಇದಕ್ಕಾಗಿ ರೂಪುಗೊಂಡಿತು, ಏಕ ಚಕ್ರದ ಗಾಡಿ.
ಈ ಗಾಡಿಯು ಐವತ್ತರಿಂದ ಆರುವತ್ತು ಕಿಲೋ ತಾಳಿಕೊಳ್ಳುತ್ತದೆ. ಆಗಲೇ ತಮ್ಮಲ್ಲಿ ಬಳಸುತ್ತಿದ್ದ ಏಕಚಕ್ರದ ಗಾಡಿಯ ವಿನ್ಯಾಸ ಬದಲಿಸಿದರು. ಗಾಡಿಯ ಹ್ಯಾಂಡಲನ್ನು ಮುಂದಕ್ಕೆ ನೂರ ಎಂಭತ್ತು ಡಿಗ್ರಿ ಕೊನದಲ್ಲಿ ಎತ್ತಿದಾಗ ಅದರ ಮುಂದಿನ ಭಾಗದ ಅಟಾಚ್ಮೆಂಟ್ ನೆಲಕ್ಕೆ ಚಾಚಿಕೊಳ್ಳುತ್ತದೆ. ಇದರ ಮೇಲೆ ಚೀಲವನ್ನು ಎತ್ತಿ ಅಥವಾ ಉರುಳಿಸಿದರಾಯಿತು. ಚಕ್ರದ ಹಿಂದೆ ಒಂದು ಫ್ರೇಮ್ ಇದೆ. ಅದನ್ನು ಕಾಲಿನಿಂದ ಒತ್ತಿ ಹಿಡಿದರೆ ಬ್ರೇಕಿನಂತೆ ಕೆಲಸ ಮಾಡುತ್ತದೆ. ಕೈಗಾಡಿಯ ಹ್ಯಾಂಡಲನ್ನು ಸ್ವಲ್ಪ ಹಿಂದೆ ಎಳೆದಾಗ ಅಟಾಚ್ಮೆಂಟಿನಲ್ಲಿದ್ದ ಚೀಲ ಗಾಡಿಯ ಮಧ್ಯ ಸೇರುತ್ತದೆ.
ಮೊದಲು ಅಡಿಕೆ, ಗೊಬ್ಬರ, ತೆಂಗಿನಕಾಯಿ, ಕಟ್ಟಿಗೆಗಳನ್ನು ಎತ್ತಿ ಗಾಡಿಗೆ ಇಡಲು ತ್ರಾಸವಾಗುತ್ತಿತ್ತು. ಈಗ ಸುಲಭವಾಗುತ್ತಿದೆ. ಒಬ್ಬನಿಗೆ ತೋಟದಿಂದ ಅಂಗಳಕ್ಕೆ ಸಾಗಾಟ ಸುಲಲಿತವಾಗುತ್ತದೆ. ರಿಕ್ಷಾ ಚಕ್ರವನ್ನು ಬಳಸಿದ್ದರಿಂದ ತೋಟದೊಳಗಿನ ಏರು ತಗ್ಗಿನಲ್ಲೂ ಕಷ್ಟವಾಗುವುದಿಲ್ಲ. ಎನ್ನುತ್ತಾರೆ. ಇದು ಕೂಡಾ ಸ್ಥಳೀಯ ಕಚ್ಚಾ ವಸ್ತುಗಳಿಂದಲೇ ತಯಾರಿಸಿದ್ದು.
ಕೃಷಿಯಲ್ಲಿ ಶ್ರಮ ಹಗುರ ಮಾಡುವ ಉಪಕರಣ ತಯಾರಿ ರಾಜೇಶರ ದೂರದೃಷ್ಟಿ. ಅವರ ಒಣ ಅಡಿಕೆ ಬಾಚು ಸಹಾಯಿಯು ಕೃಷಿಕರ ಸ್ವೀಕೃತಿ ಪಡೆದಿದೆ. ಈಗಿರುವ ತಮ್ಮ ಚಿಕ್ಕ ವರ್ಕ್ ಶಾಪನ್ನು ಅಭಿವೃದ್ಧಿ ಪಡಿಸುವ ಯೋಚನೆಯಿದೆ. ನಂತರ ಕೃಷಿಕರ ಬೇಡಿಕೆಯನ್ನು ಪೂರೈಸಬಹುದು.
ರಾಜೇಶ್ ಎ.ಕೆ.
81054 00493 (ಸಂಜೆ ಗಂ. 5 - 7)
0 comments:
Post a Comment