“ಎರಡು ಕೊಳವೆ ಬಾವಿಗಳಿವೆ. ಒಟ್ಟು ಒಂದೂಕಾಲಿಂಚು ನೀರು. ಅಲ್ಲಿಂದಲ್ಲಿಗೆ ನಿಭಾಯಿಸುತ್ತಿದ್ದೆ. ಈಚೆಗಿನ ಬರ ನೆನೆದರೆ ಭಯವಾಗ್ತಿದೆ. ಭವಿಷ್ಯದಲ್ಲಿ ಕೃಷಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದು ನನ್ನನ್ನು ಅಡ್ಡಬೋರು ಕೊರೆಯುವಂತೆ ಪ್ರೇರೇಪಿಸಿತು.”
ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಖಂಡೇರಿ ಗೋವಿಂದ ಭಟ್ಟರ ಮಾತಿದು. ಈಚೆಗಷ್ಟೇ ಒಮ್ಮೆಲೇ ಎರಡು ಅಡ್ಡಬೋರು ಕೊರೆಸಿದ್ದಾರೆ. ಒಂದರಲ್ಲಿ ಮುಕ್ಕಾಲು ಇಂಚು, ಮತ್ತೊಂದರಲ್ಲಿ ಅರ್ಧ ಇಂಚು ನೀರು. ಮುಂದಿನ ವರುಷದಿಂದ ಕೊಳವೆ ಬಾವಿಗಳಿಗೆ ರಜೆ ಎನ್ನುತ್ತಾರೆ.
ಅಡ್ಡಬೋರು ಅಂದರೆ, ಗುಡ್ಡಕ್ಕೆ ಅಡ್ಡವಾಗಿ ಕೊರೆ ಯಂತ್ರದಿಂದ ಕನ್ನ ಕೊರೆಯುವುದು, ಸುರಂಗದ ಹಾಗೆ. ಮೇಲ್ಸ್ತರದ ಜಲಧರ ಪ್ರದೇಶದ (ಮೇಲ್ ಒಸರು) ನೀರು ಪಡೆಯುವ ವಿಧಾನ.
ರಾಜಸ್ಥಾನದ ಗೋವಿಂದ್ ಭಾಯ್ ತಂಡವು ಈ ಭಾಗದಲ್ಲೆಲ್ಲಾ ಅಡ್ಡಬೋರನ್ನು ಹಿಂದೆ ಪರಿಚಯಿಸಿದೆ. ಈ ತಂತ್ರಜ್ಞಾನವನ್ನು ಕರ್ನಾಟಕಕ್ಕೆ, ಕರಾವಳಿಗೆ ತರಲು ಶ್ರಮ ವಹಿಸಿದ್ದು ಅಡಿಕೆ ಪತ್ರಿಕೆ. (ಓದಿ, ಅಪ, ಅಡ್ಡಬೋರಿನ ತರಂಗ / ಎಪ್ರಿಲ್ 2018)
“ನನ್ನ ಮನೆಯಿರುವುದು ಗುಡ್ಡದ ಮೇಲೆ. ಲಂಬವಾಗಿ ನೂರೈವತ್ತು ಅಡಿ ಕೆಳಗಡೆ ಬಾವಿ. ಚಿಕ್ಕ ತೆಂಗಿನ ತೋಟ. ಮೂರು ವರುಷದ ಹಿಂದೆ ಮುನ್ನೂರಡಿಯ ಅಡ್ಡ ಬೋರ್ ಕೊರೆಸಿದ್ದೆ. ಈಗ ಮತ್ತೊಂದು. ನೀರು ಚೆನ್ನಾಗಿದೆ ಎನ್ನುತ್ತಾರೆ,” ಪಡ್ರೆ ಗ್ರಾಮದ ಕನ್ನಟಿಕಾನ ನಾರಾಯಣ ಭಟ್.
ಗುಡ್ಡದಲ್ಲಿ ಕಾಡು ಮರಗಳಿರಬೇಕು. ಮಳೆಗಾಲದಲ್ಲಿ ನೀರು ನಿಂತು ಹೋಗುವ ಇಂಗಿಸುವ ರಚನೆಗಳಿದ್ದರೆ ಒಳ್ಳೆಯದು. ನಾರಾಯಣ ಭಟ್ ಎರಡನೆ ಬೋರ್ ಕೊರೆಯುವ ಜಾಗದ ಮೇಲ್ಬದಿಯಲ್ಲಿ ಸರಣಿ ಹುತ್ತಗಳಿದ್ದುವು. ಇದು ನೀರಿಂಗಲು ಸಹಕಾರಿ ಎನ್ನುವ ನಿರೀಕ್ಷೆ ಇವರದು.
ಗೋವಿಂದ ಭಟ್ಟರಲ್ಲಿ ಎರಡು ನೀರೂಡುವ ಸುರಂಗಗಳಿವೆ. “ಸುರಂಗದ ಮೇಲ್ಬದಿಯಲ್ಲಿ ಗೇರು ತೋಟ. ಅಲ್ಲಿ ಬಿದ್ದ ಮಳೆನೀರು ಹರಿದು ಹೋಗುವುದಿಲ್ಲ. ಪೂರ್ತಿ ಇಂಗುತ್ತದೆ. ಮತ್ತೊಂದು ಬದಿಯ ಕಾಡಿನಲ್ಲೂ ನೀರು ಇಂಗುತ್ತದೆ. ಅಡ್ಡಬೋರ್ ಕೊರೆತದ ಪ್ರದೇಶದಲ್ಲಿ ಮಳೆ ನೀರಿಂಗಿಸುವ ವ್ಯವಸ್ಥೆಗಳು ಬೇಕು. ಕಾಡಿದ್ದರೆ ಅನುಕೂಲ'' ಎನ್ನುತ್ತಾರೆ.
ಸುಳ್ಯ ತಾಲೂಕಿನ ಕೊಡಿಯಾಲ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈಯವರಿಗೆ ಎರಡು ಕೊಳವೆ ಬಾವಿಗಳಿವೆ. ನೀರು ಅಷ್ಟಕ್ಕಷ್ಟೇ. ಮನೆಯ ಪಕ್ಕದ ಗುಡ್ಡಕ್ಕೆ ಅಡ್ಡ ಬೋರು ಹಾಕಿಸಿದರು. ಇನ್ನೂರು ಅಡಿಯಲ್ಲಿ ಭಾಗೀರಥಿ ಪ್ರತ್ಯಕ್ಷ. ಪೈಪ್ ಅಳವಡಿಸಬೇಕಷ್ಟೇ. ಮನೆಯ ಕೆಳಗೇನೇ ತೋಟವಿದೆ. ಗ್ರಾವಿಟಿಯಲ್ಲಿ ಹರಿವ ನೀರಿನಿಂದ ನಾಲ್ಕು ಜೆಟ್ ಹಾರುತ್ತದೆ. ಎನ್ನುತ್ತಾ, ಮಣ್ಣಿನಲ್ಲಿ ಮೇಲ್ ಒಸರು ಸಿಗುವ ಜಾಗದಲ್ಲಿ ಕೊರೆದರೆ ಒಳ್ಳೆಯದು ಎನ್ನುತ್ತಾರೆ.
ಪ್ರದೀಪ್ ತಮ್ಮ ಪಂಚಾಯತಿನ ಕುಡಿನೀರಿನ ಸಮಸ್ಯೆ ನೀಗಿಸಲು ಅಡ್ಡ ಬೋರ್ ಕೊರೆಸಬೇಕೆಂದಿದ್ದಾರೆ. “ಗ್ರಾಮದ ಹತ್ತು ಕಡೆಗಳಲ್ಲಿ ಕೊರೆದರೆ ಕುಡಿಯುವ ನೀರಿಗೆ ತೊಂದರೆಯಾಗದು. ಎಲ್ಲಾ ಬೋರುಗಳ ನೀರನ್ನು ಟ್ಯಾಂಕಿಯಲ್ಲಿ ಸಂಗ್ರಹಿಸಿ, ಮನೆಮನೆಗಳಿಗೆ ಸಂಪರ್ಕ ಪೂರೈಸಬಹುದು. ಕೊಳವೆ ಬಾವಿ ಕೊರೆಯಬೇಕಿಲ್ಲ.'' ಎನ್ನುತ್ತಾರೆ.
ಬಂಟ್ವಾಳ ತಾಲೂಕಿನ ಪುಣಚದ ಉದಯಶಂಕರ ರೈ ಅಡ್ಡಬೋರು ಕೊರೆಸಿ ನಾಲ್ಕು ವರುಷವಾಯಿತು. ಈ ನೀರು ಕುಡಿಯಲು, ಅಡುಗೆಗೆ ಬಳಕೆ. ಮಿನರಲ್ ನೀರಿಗಿಂತ ಶುದ್ಧ. ಜೂನಿನಿಂದ ಫೆಬ್ರವರಿ ತನಕ ನೀರು ಸಲೀಸು. ನಂತರ ಕಡಿಮೆಯಾಗಿ ಪೂರ್ತಿ ನಿಲ್ಲುತ್ತದೆ. “ನಾವು ಒಂಭತ್ತು ತಿಂಗಳು ಈ ನೈಸರ್ಗಿಕ ಮಿನರಲ್ ವಾಟರನ್ನೇ ಕುಡಿಯುತ್ತೇವೆ. ಈಚೆಗೆ ನೀರು ಕಡಿಮೆಯಾಗಿದೆ. ಪೈಪಿನ ತೂತುಗಳೊಳಗೆ ಮರಳು ತುಂಬಿರಬಹುದೆನ್ನುವ ಊಹೆ.”
ನಾರಾಯಣ ಭಟ್ಟರ ಹಳೆ ಅಡ್ಡ ಬೋರಿನಲ್ಲೂ ಒಂದೇ ವರುಷದಲ್ಲಿ ನೀರು ಕಡಿಮೆಯಾಯಿತು. ಕಾರಣ ಅಲ್ಲೂ ಹಬ್ಬಿದ ಬೇರುವ್ಯೂಹ. ಅಡ್ಡಬೋರ್ ಕೊರೆದ ಬಳಿಕ ಒಳತೂರಿಸುವ ತೂತು ಕೊರೆದ ಕೇಸಿಂಗ್ ಪೈಪುಗಳೊಳಕ್ಕೆ ಮರದ ಬೇರುಗಳು ಇಳಿಯುತ್ತವೆ. ಅವು ನೀರಿನ ಹರಿವಿಗೆ ಅಡ್ಡಿ ಮಾಡಿದ್ದುವು.
“ಅಡ್ಡ ಬೋರಿಗೆ ಮರದ ಬೇರುಗಳು ಶತ್ರು. ಪ್ರತಿ ವರುಷವೂ ಅದರೊಳಗೆ ತುದಿ ಚೂಪಾಗಿಸಿದ ಪೈಪನ್ನು ತೂರಿಸಿ 'ತಳ್ಳುವ, ಎಳೆಯುವ' ಕೆಲಸ ಮಾಡಬೇಕು. ಆಗ ಬೇರುಗಳು ತುಂಡಾಗುತ್ತವೆ. ಅಡ್ಡಬೋರು ಕೊರೆದ ಗುಡ್ಡದ ಮೇಲೆ ಕಲ್ಮರ, ರೆಂಜೆ, ಮಾವು, ಉಪ್ಪಳಿಗೆ ಮರಗಳಿವೆ. ಇವುಗಳ ಬೇರುಗಳು ಪೈಪಿನೊಳಗೆ ಇಳಿದುಬಿಡುತ್ತವೆ. ಅಡ್ಡ ಬೋರು ಕೊರೆಸುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರಲ್ಲೂ ಉಪ್ಪಳಿಗೆ ಮರ ಇರಲೇ ಬಾರದು. ಇದು ಬೇರಿಳಿಸುವುದು ಕ್ಷಿಪ್ರ,”ಎನ್ನುತ್ತಾರೆ ನಾರಾಯಣ ಭಟ್ಟರು.